ಹಿಮಾಲಯವೆಂಬ ಸ್ವರ್ಗ (ಭಾಗ 9): ವೃಂದಾ ಸಂಗಮ್

vranda-sangamಇಲ್ಲಿಯವರೆಗೆ

ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಾಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಮನುವಿನ ಮೊಮ್ಮಗ ಧ್ರುವ ತನ್ನ ತಾಯಿಯ ಸವತಿ ಸುರುಚಿ ಕೊಡುತ್ತಿದ್ದ ಹಿಂಸೆ ಅನುಭವಿಸುತ್ತಿದ್ದಾಗ ನಾರದರ ಉಪದೇಶದಂತೆ ಮಧುವನದಲ್ಲಿ ತಪಸ್ಸನ್ನು ಆಚರಿಸುತ್ತಾನೆ. ಇಲ್ಲಿ ನಿತ್ಯ ಹರಿಸಾನ್ನಿಧ್ಯವಿದೆ ಎಂದು ನಾರದರು ಧ್ರುವನಿಗೆ ತಿಳಿಸುತ್ತಾರೆ. "ಪುಣ್ಯಂ ಮಧುವನಂ ಯತ್ರ ಸಾನ್ನಿಧ್ಯಂ ನಿತ್ಯದಾ ಹರಿಃ ". ಮುಂದೆ ಮಧು ಎಂಬ ರಾಕ್ಷಸ ಇಲ್ಲಿ ಮಧುರಾ ಪಟ್ಟಣವೆಂಬ ನಗರವನ್ನು ನಿರ್ಮಿಸುತ್ತಾನೆ. ಅವನ ಮಗನಾದ ಲವಣಾಸುರ ಈ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುತ್ತಾನೆ. ಶತ್ರುಜ್ಞ ಇವನನ್ನು ಯುದ್ಧದಲ್ಲಿ ಗೆದ್ದು ಇಲ್ಲಿ ರಾಜ್ಯವಾಳುತ್ತಾನೆ. ಅದೇ ಮಥುರಾ ನಗರ.  ಇಲ್ಲಿ ಕೃಷ್ಣನ ಜನ್ಮಸ್ಥಾನ ಇದೆ. ಒಂದು ಕಾರಾಗೃಹದಂತೆಯೇ ಇದೆ. 
    
ವಾದಿರಾಜರು ತಮ್ಮ ತೀರ್ಥ ಪ್ರಬಂಧದಲ್ಲಿ ಮಥುರಾ ನಗರವನ್ನು ಹೀಗೆ ವರ್ಣಿಸುತ್ತಾರೆ. "ಸೇನಾ ಯತ್ರವಿರಕ್ತ ವೈಷ್ಣವಜನಾ ನಾಮಾಯುಧಂ ಶ್ರೀಪತೇ| ಕಾಮಾಧ್ಯೈ ಸಹಿತಃ ಕಲಿಹಿ ಕಿಲ ರಿಪುರ್ಯಾತ್ರನ್ವಹಂ ಹನ್ಯ ತೇ| ಪ್ರಾಕಾರಾದಿ ಚ ಯತ್ರ ತೀರ್ಥನಿಕರಃ ಕರ್ಮಾಪಿ ವರ್ಮ ಪ್ರಭೋ| ದದ್ಯಾತ್ ಸಾ ಮಧುರಾಪುರೀ ಶುಭಕರೀ ಶ್ರೇಯಾಂ ಸಿಹಿ ಭೂಯಾಮ್ ಸಿ ನಃ "ಯಾವ ಮಥುರಾ ಪಟ್ಟಣದಲ್ಲಿ ವಿರಕ್ತರಾದ ವೈಷ್ಣವ ಜನರೇ ಸೈನ್ಯವು. ಶ್ರೀಹರಿಯ ನಾಮೋಚ್ಚ್ಹಾರಣೆಯೇ ಆಯುಧವು -ಶ್ರೀಹರಿಯ ಪೂಜೆಯೆಂಬ   ಕವಚವನ್ನು ಧರಿಸಿ ಹರಿಭಕ್ತನೆಂಬ ಭಟನು ಕಾಮಾದಿ ಷಡ್ರಿಪುಗಳೆಂಬ ಸಹಾಯಕರಿಂದ ಕೂಡಿದ ಕಲಿಯನ್ನು ಕೊಲ್ಲುವನು. ಅಂದರೆ ಮಥುರೆಯ ತೀರ್ಥಗಳಲ್ಲಿ ಸ್ನಾನ ಮಾಡುತ್ತಾ ನಿರಂತರವಾಗಿ ಹರಿಸ್ಮರಣೆ ಮಾಡುತ್ತಾ, ಹರಿಪೂಜೆ ಮಾಡುತ್ತಿರುವ ಭಕ್ತನಿಗೆ ಕಲಿಯ ಭಯ ಇರುವುದಿಲ್ಲ. ಬಸ್ಸಿನಿಂದ ಇಳಿದು ಹಳೆಯದಾದ ನೀರಿನ ಕೊಂಡವನ್ನು ಕಂಡೆವು. ಇಲ್ಲಿ ಕೃಷ್ಣ ಸ್ನಾನ ಮಾಡುತ್ತಿದ್ದನಂತೆ. ಮುನ್ನಡೆಯುತ್ತ ಕೃಷ್ಣ ಜನ್ಮಭೂಮಿ ದೇವಾಲಯಕ್ಕೆ ಹೋದೆವು. ಇಲ್ಲಿಯೂ ಸಹ ಮೂಲ ದೇವಾಲಯವಿದ್ದ ಸ್ಥಳದಲ್ಲಿ ಒಂದು ಮಸೀದಿ ಇದೆ. ಇದೇ ಜಾಮಾ ಮಸೀದಿ. ಔರಂಗಜೇಬನು 1661 ರಲ್ಲಿ (ತಾರೀಖು ಸ್ವಲ್ಪ ಸಮಸ್ಯೆಯಲ್ಲಿದೆ. 1661 ಅಥವಾ 1669 ಎಂದು ಹೇಳುತ್ತಾರೆ) ಅಲ್ಲಿದ್ದ ಕೃಷ್ಣ ಜನ್ಮಭೂಮಿ ದೇವಾಲಯವನ್ನು ಧ್ವಂಸ ಮಾಡಿಸಿದನಂತೆ. ನಂತರ ಅಲ್ಲಿಯ ರಾಜ್ಯ ಪಾಲಿಸುತ್ತಿದ್ದ ಅಬೆ-ಇ-ನಬೀರ್ ಖಾನ್ ಈಗಿರುವ ಕೆಂಪು ಕಲ್ಲಿನ ಮಸೀದಿ ಕಟ್ಟಿಸಿದನಂತೆ. ಈ ಸ್ಥಳದಲ್ಲಿಯೇ ಕೃಷ್ಣನ ಜನ್ಮವಾಗಿದ್ದು ಎಂದು ಹೇಳಲಾಗುತ್ತದೆ. ಈಗಿನ ದೇವಾಲಯ (ಬಿರ್ಲಾ ಮಂದಿರ) ಆ ಮಸೀದಿಯ ಹಿಂದೆಯೇ ಇದೆ. ಇಲ್ಲಿಯೂ ಕಟ್ಟುನಿಟ್ಟಾದ ಭದ್ರತಾ ನಿಗ್ರಹ. ಎಲ್ಲೂ ಫೋಟೋ ತೆಗೆಯುವಂತಿಲ್ಲ. ದೇವಾಲಯದೊಳಗೆ ಹೋಗಿ, ದೇವರ ದರ್ಶನ ಮಾಡಿಕೊಂಡು ದೇವರಿಗೆ ಸಿಹಿ ತಿಂಡಿಯ ನೈವೇದ್ಯ ಮಾಡಿಸಿದೆ. ಆಚೆ ಬಂದು ಹತ್ತಿರವೇ ಇರುವ ಶ್ರೀಕೃಷ್ಣ ಹುಟ್ಟಿದ ಕೋಣೆಯೊಳಗೆ ಹೋಗಿ ನಮಿಸಿ ಬಂದೆವು. ಸಾಮಾನ್ಯವಾಗಿ, ಈಗಲೂ ಮಥುರಾ ಕೃಷ್ಣನ ಬಗ್ಗೆ ಕುತೂಹಲದಲ್ಲಿದೆ. ಹೆಚ್ಚಿನ ಜನರು ನಿಧಿ ಆಸೆಗೆ ಅಥವಾ ಕೃಷ್ಣನಲ್ಲಿತ್ತು ಎಂದು ಹೇಳಲಾಗುವ ಶ್ಯಮಂತಕ ಮಣಿಯಾಸೆಗೆ ಬರುತ್ತಾರೆಂದು ಕೇಳಿದ್ದೇನೆ. ನನಗೇನೂ ಈ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಈ ಹೊಸ ಕಟ್ಟಡಗಳ ಬದಲಾಗಿ, ಕೃಷ್ಣನ ಬಗ್ಗೆ ಇರುವ ಐತಿಹ್ಯದ ಕುರುಹುಗಳನ್ನು ನೋಡಬೇಕಾಗಿತ್ತು. ನನ್ನ ಆಸೆ ಸಾಧ್ಯವಾಗಲಿಲ್ಲ. 

6
    
ಆಚೆ ಬಂದು ಸ್ವಲ್ಪ ಖರೀದಿಗಳನ್ನು ಮಾಡಿ ಮತ್ತೆ ಬಸ್ ಹತ್ತಿ ಹೊರಟೆವು. ನಮ್ಮ ಮುಂದಿನ ನಿಲುವು ವೃಂದಾವನವಾಗಿತ್ತು – ಶ್ರೀ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಕಳೆದ ಸ್ಥಳ. ಬೃಂದಾವನ – ಕೃಷ್ಣನ ಬಾಲ್ಯದ ದಿನಗಳು, ರಾಧೆಯ ಒಡನಾಟ, ರಾಸಕ್ರೀಡೆ, ಬೆಣ್ಣೆ, ಮೊಸರು   ಜ್ಞಾಪಿಸಿಕೊಡುವ ಸ್ಥಳ. ರಾಧೆಯ ಅಮರ ಪ್ರೇಮ, ರಾಧಾ ಮಾಧವರ ಪವಿತ್ರಪ್ರೇಮ, ರಾಧೆಯ ಭಕ್ತಿ, ಎಲ್ಲವೂ ಇಲ್ಲಿದೆ. ಯಮುನಾ ತೀರ, ಕೃಷ್ಣನ ಕೊಳಲಿನ ಕರೆ, ಎಲ್ಲವೂ ಜ್ಞಾಪಿಸಿಕೊಡುವ ಸ್ಥಳ. ಇಲ್ಲಿ ಒಂದು ದೇವಾಲಯದಲ್ಲಿ ವಸುದೇವ   ದೇವಕಿ, ರಾಧ -ಇವರುಗಳ ಸುಂದರ ವಿಗ್ರಹಗಳಿವೆ. ಈ ಬೃಂದಾವನ ರಾಧೆಯದೇ ಸಾಮ್ರಾಜ್ಯ.  
    
ವೃಂದಾವನದಲ್ಲಿ ನಾವು ಮೊದಲು ಹೋದದ್ದು ಶ್ರೀ ರಂಗನಾಥನ ದೇವಾಲಯಕ್ಕೆ. ಈ ಗುಡಿಯನ್ನು 1851 ರಲ್ಲಿ ಸೇಠ್ ಗೋವಿಂದ್ ದಾಸ್ ಎಂಬಾತ ಕಟ್ಟಿಸಿದ್ದಂತೆ. ಇದರ ವೆಚ್ಚ ಆಗಿನ ಕಾಲದಲ್ಲಿ ಸುಮಾರು ರೂ.4೦ ಲಕ್ಷವಾಗಿತ್ತಂತೆ. ಮುಖ್ಯದ್ವಾರ ರಜಪೂತ ಶೈಲಿಯಲ್ಲಿದ್ದರೂ, ದೇವಾಲಯವು ದಕ್ಷಿಣ ಭಾರತದ ಶೈಲಿಯಲ್ಲಿದೆ. ಇದು ವೃಂದಾವನದಲ್ಲಿ ಅತ್ಯಂತ ದೊಡ್ಡ ದೇವಾಲಯವಂತೆ. ಇಲ್ಲಿಯ ಪ್ರಮುಖ ದೇವರು ಶ್ರೀರಂಗನಾಥ. ವೆಂಕಟೇಶ್ವರ, ರಾಧಾ-ಕೃಷ್ಣ, ಇತ್ಯಾದಿ ಗುಡಿಗಳೂ ಇಲ್ಲಿವೆ. ದಕ್ಷಿಣ ಭಾರತ ಶೈಲಿಯ ಗೋಪುರವಿದ್ದು, ಇಲ್ಲಿಯ 5೦ ಅಡಿ ಎತ್ತರದ ಗರುಡಗಂಬ ಗಂಧದ ಮರದ್ದಾಗಿದ್ದು, 12.5 ಮಣ ಭಾರದ ಚಿನ್ನದ ತಗಡನ್ನು ಹೊದ್ದಿದೆ. ನಂತರ ಗೋಪಾಲ-ಕೃಷ್ಣ ದೇವಾಲಯಕ್ಕೆ ಹೋದೆವು. ಇದು ರಾಧಾ-ಕೃಷ್ಣರ ದೇವಾಲಯ. ಇಲ್ಲಿ ಎಲ್ಲರೂ ನಮ್ಮ ನಮ್ಮ ಕಾಣಿಕೆಗಳನ್ನು ಹಾಕಿದೆವು. ಅನ್ನದಾನ ಹಾಗು ಗೋದಾನಗಳನ್ನು ಮಾಡಿಸುವ ಅವಕಾಶವೂ ಇದೆ. ಆ ಸಮಯದಲ್ಲಿ ದೇವಾಲಯವನ್ನು ನವೀಕರಿಸುತ್ತಿದ್ದರು. 
    
ಮದನ ಮೋಹನ ದೇವಾಲಯವನ್ನು ಮುಲ್ತಾನಿನ (ಮುಲ್ತಾನ್ ಈಗ ಪಾಕಿಸ್ತಾನದಲ್ಲಿದೆ, ಇದರ ಮೂಲ ಹೆಸರು ಮೂಲಸ್ಥಾನ) ಕಪೂರ್ ರಾಮ್ ದಾಸ್ ಎಂಬಾತ ಕ್ರಿ. ಶ. 1580 ಕಟ್ಟಿಸಿದನಂತೆ. ಇಂದು ಇದು ವೃಂದಾವನದ ಅತ್ಯಂತ ಹಳೆಯ ದೇವಾಲಯ. ಚೈತನ್ಯ ಮಹಾಪ್ರಭುವೂ ಇಲ್ಲಿಗೆ ಬಂದಿದ್ದರಂತೆ. ದೇವರ ಮೂಲ ಮೂರ್ತಿಯನ್ನು ಸನಾತನ ಗೋಸ್ವಾಮಿಯು ಒಂದು ಆಲದ ಮರದ ಬುಡದಲ್ಲಿ ಕಂಡರಂತೆ. ಮುಘಲ್ ಅಧಿಪತಿಯಾದ ಔರಂಗಜೇಬನ ಕಾಲದಲ್ಲಿ ಅವನ ಆಕ್ರಮಣಕ್ಕೆ ಹೆದರಿ ಆ ಮೂಲ ಪ್ರತಿಮೆಯನ್ನು ಈಗ ರಾಜಾಸ್ಥಾನದಲ್ಲಿರುವ ಕರೊಲಿಗೆ ಸಾಗಿಸಿದರಂತೆ. ಈ ದೇವಾಲಯದಲ್ಲಿ ಅದರಂತಹ ಇನ್ನೊಂದು ಮೂರ್ತಿ ಇರಿಸಿದರಂತೆ. ಇಂದು ಈ ದೇವಾಲಯದಲ್ಲಿ ಪೂಜಿಸುವುದು ಈ ಪ್ರತಿ ಮೂರ್ತಿಯನ್ನೇ. ಮದನ ಮೋಹನ ದೇವಾಲಯ ನೋಡಿ, ಮುಂದೆ ದೆಹಲಿಗೆ ವಾಪಸು. ನಮಗೇನೋ ದೆಹಲಿಯಲ್ಲಿ, ಕರೋಲ್ ಬಾಗ್ ಅಥವಾ ಪಾಲಿಕಾ ಬಝಾರ್ ಮುಂತಾದಲ್ಲಿ ಕೆಲವೊಂದು ಖರೀದಿಗೆ ಆಸಕ್ತಿಯಿತ್ತು. ಆದರೆ, ಬೆಂಗಳೂರಿನಂತೆಯೇ ಅಲ್ಲಿಯೂ ಟ್ರಾಫಿಕ್ ಜಾಮ್, ರೂಮು ಸೇರಿದಾಗ ರಾತ್ರಿಯಾಗಿತ್ತು. ಸುಖವಾಗಿ ಉಂಡು ಮಲಗಿದ್ದೊಂದೇ. 
     
ಮರುದಿನ ಬೆಳಿಗ್ಗೆ, ದೆಹಲಿಯ ರಸ್ತೆಗಳಲ್ಲಿ ನಮ್ಮ ಪಾದಗಳು. ಇತಿಹಾಸ ಪ್ರಿಯರು 'ಅನೇಕ ಸಾಮ್ರಾಜ್ಯಗಳ ರಾಜಧಾನಿ'ಯಾಗಿದ್ದ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ದೆಹಲಿಗೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ. ಮಹಾಭಾರತ ದಲ್ಲಿ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಒಂದು ಅದ್ಭುತ ಸಂಪದ್ಭಿರಿತ ನಗರ. ಹಿಂದೂ ಗ್ರಂಥಗಳ ಪ್ರಕಾರ ದೆಹಲಿಯನ್ನು ಸಂಸ್ಕೃತದಲ್ಲಿ ಹಸ್ತಿನಾಪುರ ಎಂದು, ಅಂದರೆ "ಆನೆಗಳ-ನಗರ " ಎಂದು ಕರೆಯಲಾಗಿದೆ . 19ನೇ ಶತಮಾನದ ಆರಂಭದವರೆಗೆ ಇಂದ್ರಪ್ರಸ್ಥವೆಂದು ಕರೆಯಲಾಗುತ್ತಿದ್ದ ಹಳ್ಳಿಯೊಂದು ದೆಹಲಿಯಲ್ಲಿ ಅಸ್ತಿತ್ವದಲ್ಲಿತ್ತು. ಬ್ರಿಟಿಷರು ಆ ಹಳೆಯ ಹಳ್ಳಿಯನ್ನು ಒಡೆದು ಹಾಕಿ ನವ ದೆಹಲಿ ಗೆ 19 ನೇ ಶತಮಾನದಲ್ಲಿ ನಾಂದಿ ಹಾಡಿದರು. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಇಂದಿನ ಹಳೆ ಕೋಟೆ ಇರುವ ಕಡೆ ಇಂದ್ರಪ್ರಸ್ಥ ಇತ್ತು ಎಂದು ತಿಳಿಯಲಾಗಿದೆ.
    
ಕೆಲವೊಂದು ಸ್ಥಳಗಳೇ ಹಾಗೆ. ಪಾಂಡವರ ರಾಜಧಾನಿ ಇಂದ್ರಪ್ರಸ್ಥ,  ಧಿಲು ದೊರೆಯ ದಿಲ್ಲಿಕಾ, ಅನಂಗ ಪಾಲ, ತೋಮರನ ಆಳ್ವಿಕೆಯ ದಿಲ್ಲಿ, ಪೃಥ್ವಿರಾಜ ಚೌಹಾಣನ ದಿಲ್ಲಿ, ಘಜ್ನಿ ಮೊಹಮ್ಮದ, ಘೋರಿ ಮಹಮ್ಮದರ ದಾಳಿಗೆ ಆಕರ್ಷಿತ ದಿಲ್ಲಿ, ಮೊಘಲರ ರಾಜಧಾನಿ ದಿಲ್ಲಿ, ಈಗ ಸ್ವತಂತ್ರ ಭಾರತದ ರಾಜಧಾನಿ ದಿಲ್ಲಿ, ಜನ ಯಾರಿದ್ದರೇನು, ಕಾಲ ಯಾವುದಿದ್ದರೇನು, ರಾಜಧಾನಿ ಮಾತ್ರ ದಿಲ್ಲಿಯೇ, ಮೆರೆಯುವುದಕ್ಕಾಗೇ ಹುಟ್ಟಿಕೊಂಡ ನಗರ ದಿಲ್ಲಿ. ಇಂದಿಗೂ ಪ್ರಜಾ ಪ್ರಭತ್ವದಲ್ಲಿಯೂ ಭಾರತದ ರಾಜಧಾನಿ ದಿಲ್ಲಿ, ಪ್ರತಿಯೊಬ್ಬ ಭಾರತೀಯ, ಅವನು ಅಕ್ಷರಸ್ಥನೋ ಅನಕ್ಷರಸ್ಥನೋ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನಗಳಂದು ಭಾವೈಕ್ಯತೆ, ಭಾರತೀಯತೆ ಮೂಡಿಸುವ ಧ್ವಜಾರೋಹಣ ನೋಡಬಯಸುವ, ಮಾಡಬಯಸುವ ದಿಲ್ಲಿ. ದಿಲ್ಲಿ ಎಂದರೆ ದಿಲ್ಲಿ. ಅದಕ್ಕೆ ಹೋಲಿಕೆಯಿಲ್ಲ. ಭಾರತ ಮಾತೆಯ ಹಣೆಯ ಕುಂಕುಮ, ಭಾರತೀಯರ ಹೃದಯ ದಿಲ್ಲಿ. ಅದರಲ್ಲಿನ ಕೆಂಪು ಕೋಟೆ, ಐತಿಹಾಸಿಕ ಬಾವಿಗಳು, ಸ್ಮಾರಕಗಳು, ಅನೇಕ ಭವ್ಯ ಸಮಾಧಿಗಳು, ಮಸೀದಿಗಳು, ಪ್ರಸಿದ್ಧ ಕುತುಬ್ ಮಿನಾರ….  ಹೀಗೆ ಅನೇಕ ಸ್ಮಾರಕಗಳು ನಿಮ್ಮನ್ನು ಐತಿಹಾಸಿಕ ಯುಗಕ್ಕೆ ಕರೆದೊಯ್ಯುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. 
    
ಇದು ದೆಹಲಿಯ ಮೇಲ್ನೋಟ ಅಥವಾ ಪಕ್ಷಿನೋಟ. ದೆಹಲಿಯ ಸವಿಸ್ತಾರವಾದ ಐತಿಹ್ಯವನ್ನು ತಿಳಿಯಬೇಕಾದರೆ-ಅನೇಕ ಸಾಮ್ರಾಜ್ಯಗಳ ರಾಜಧಾನಿ' ಯಲ್ಲಿ ವಿಹರಿಸಿ ಕಣ್ತುಂಬಿಸಿಕೊಳ್ಳಬೇಕಾದರೆ ನೀವು ಸ್ವತಃ ಭೇಟಿ ನೀಡಬೇಕು. 1920 ರ ದಶಕ ದಲ್ಲಿ ಹಳೇ ದಿಲ್ಲಿ ನಗರದ ದಕ್ಷಿಣಕ್ಕೆ ಹೊಸ ರಾಜಧಾನಿ ನಗರ ನವ ದೆಹಲಿಯನ್ನು ನಿರ್ಮಿಸಲಾಯಿತು. 1947 ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವ ದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ತಾಯಿ ಭಾರತಿಯ ಹಣೆಯ ಕುಂಕುಮದಂತಿರುವ ದಿಲ್ಲಿ, ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿ ಭಾರತೀಯರೆಲ್ಲರೂ ಅಬ್ ದಿಲ್ಲಿ ದೂರ್ ನಹಿ ಎನ್ನುವಂತಿದೆ.
     
ದಿಲ್ಲಿಗೆ ಒಮ್ಮೆ ಭೇಟಿ ನೀಡಿದವರು, 'ಬಸ್ತಿ ಹೈ ಮಸ್ತಾನೊಂ ಕೀ ದಿಲ್ಲಿ, ಗಲಿ ಹೈ ದಿವಾನೊಂ ಕಿ ದಿಲ್ಲಿ, ಯೇ ದಿಲ್ಲಿ ಹೈ ಮೇರೆ ಯಾರ್, ಬಸ್ ಇಷ್ಕ್ ಮೊಹಬ್ಬತ್ ಪ್ಯಾರ್…..ಎಂದು ಗುನುಗುವದಂತೂ ಖಚಿತ. ಹೊಸ ದೆಹಲಿ ಮತ್ತು ಹಳೆ ದೆಹಲಿ ಎಂಬ ಹೆಸರುಗಳಲ್ಲಿರುವ ಈ ಪುರಾತನ ಮತ್ತು ನವೀನತೆಯಿಂದ ಸಮ್ಮಿಲಿತವಾಗಿರುವ ಈ ನಗರವು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ವಿವಿಧ ಅದ್ಭುತಗಳ ವರ್ಗೀಕರಣಗಳನ್ನೊಳಗೊಂಡ ಬಟ್ಟಲು. ದೇಶದ ಎಲ್ಲಾ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಆಗಿರುವ ಹಿನ್ನೆಲೆಯಲ್ಲಿ ದೆಹಲಿ ಆಸಕ್ತರ ಸ್ವರ್ಗವಾಗಿದೆ. 
    
ಇಷ್ಟೇ ಅಲ್ಲ! ದೆಹಲಿಯ ಇತಿಹಾಸದಂತೆಯೇ ಅದರ ಸಂಸ್ಕೃತಿ ಕೂಡ ಬಹಳ ವೈವಿಧ್ಯಮಯವಾಗಿದೆ. ದೀಪಾವಳಿಯಿಂದ ಹಿಡಿದು ಮಹಾವೀರ ಜಯಂತಿ, ಹೋಳಿ, ಲೋಹ್ರಿ, ಕೃಷ್ಣ ಜನ್ಮಾಷ್ಟಮಿ, ಗುರು ನಾನಕ್ ಜಯಂತಿ ವರೆಗಿನ ಎಲ್ಲಾ ಪ್ರಮುಖ ಹಿಂದು ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ ಆದರೆ, ಇವುಗಳಿಗಿಂತ ಕುತುಬ್ ಉತ್ಸವ, ಬಸಂತ್ ಪಂಚಮಿ, ವಿಶ್ವ ಪುಸ್ತಕ ಮೇಳ ಮತ್ತು ಅಂತಾರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವಗಳಂತಹ ಅನನ್ಯ ಹಬ್ಬಗಳು ಕೂಡ ತುಂಬಾ ಹೆಸರುವಾಸಿಯಾಗಿವೆ. 
    
ವಾಸ್ತವವಾಗಿ ಮೊಘಲ್ ಪಾಕ ಪದ್ಧತಿಗಳು ರೂಪುಗೊಂಡ ಸ್ಥಳವಾಗಿದ್ದರಿಂದ ದೆಹಲಿಗರ ಆಹಾರ ವೈಖರಿಯಲ್ಲಿ ಮೊಘಲ್ ತಿನಿಸುಗಳ ಪ್ರಭಾವವಿರುವುದನ್ನು ಕಾಣಬಹುದು. ಆದರೂ, ಸಾಮಾನ್ಯ ಭಾರತೀಯ ಅಡುಗೆಗಳೂ ಇಲ್ಲಿ ಜನಪ್ರಿಯವಾಗಿವೆ. ಮೊಘಲರ ಕಡಾಯಿ ಚಿಕನ್, ಬೆಣ್ಣೆ ಚಿಕನ್, ಚಾಟ್ಸ್, ಜಲೇಬಿ, ಕಚೋರಿ ಮತ್ತು ಲಸ್ಸಿಗಳು ದೆಹಲಿಯ ಶಾಸ್ತ್ರೀಯ ಪಾಕ ಪದ್ಧತಿಗಳಲ್ಲಿ ಕೆಲವು ಹೆಸರಿಸಬಹುದಾದ ತಿಂಡಿ ತಿನಿಸುಗಳು. ದೆಹಲಿಯು ಸಂಪೂರ್ಣವಾಗಿ ಪ್ರೇಕ್ಷಣಾ ಸ್ಥಳಗಳಿಂದ ತುಂಬಿದ್ದು, ಪ್ರಾಚೀನ ಯುಗದ ವಾಸ್ತುಶಿಲ್ಪದ ಅದ್ಭುತಗಳನ್ನು ಪ್ರತಿನಿಧಿಸುತ್ತದೆ. ಕುತುಬ್ ಮಿನಾರ್, ಕೆಂಪು ಕೋಟೆ, ಇಂಡಿಯಾ ಗೇಟ್, ಕಮಲ ಮಂದಿರ ಮತ್ತು ಅಕ್ಷರಧಾಮ ದೇವಾಲಯಗಳು ವಾಸ್ತುಶಿಲ್ಪದ ಮೇರುಕೃತಿಗಳೆಂದು ಖ್ಯಾತವಾಗಿವೆ. ಅಲ್ಲದೇ ಇದು ವ್ಯಾಪಾರಿಗಳ ಸ್ವರ್ಗವೆಂದು ಗುರುತಿಸಲ್ಪಟ್ಟಿದ್ದು ಇಲ್ಲಿ ಒಂದೇ ಸೂರಿನಡಿಯಲ್ಲಿ ಕಾನೂನಿನನ್ವಯ ಏನನ್ನಾದರೂ ವ್ಯಾಪಾರ ಮಾಡಬಹುದಾಗಿದೆ. ಭಾರತದ ಎಲ್ಲಾ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರುವ ನಮ್ಮ ಲೋಕಸಭಾ ಸದನ, ರಾಷ್ಟ್ರಪತಿ ಭವನ (ಭಾರತ ರಾಷ್ಟ್ರಾಧ್ಯಕ್ಷರ ನಿವಾಸ), ರಾಜಘಾಟ್ (ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರವಾದ ಸ್ಥಳ) ಇವೇ ಮುಂತಾದ ಆಕರ್ಷಕ ತಾಣಗಳು ಇಲ್ಲಿವೆ.
    
ದೆಹಲಿಯು ಆರ್ದ್ರ ಉಪೋಷ್ಣ ವಲಯದ ಹವಾಮಾನವನ್ನು ಹೊಂದಿದೆ. ಇಲ್ಲಿನ ಬೇಸಿಗೆ ದೀರ್ಘವಾಗಿರುತ್ತಿದ್ದು ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ. ಹಾಗೆಯೇ, ಚಳಿಗಾಲದ ತಿಂಗಳುಗಳಲ್ಲಿ ಅತಿ ಚಳಿ ಇರುತ್ತಿದ್ದು ರಾಜಧಾನಿಯ ಮೇಲೆ ಮಂಜಿನ ಮುಸುಕು ಹಾಸಿರುತ್ತದೆ. ಬೇಸಿಗೆಯು ಏಪ್ರಿಲ್ ನಿಂದ ಜೂನ್ ವರೆಗಿರುತ್ತಿದ್ದು, ಜೂನನಿಂದ ಸುರಿಯಲಾರಂಭಿಸುವ ಮಳೆ ಅಕ್ಟೋಬರ್ ವರೆಗೆ ಮುಂದುವರೆಯುತ್ತದೆ. ನಂತರ ನವೆಂಬರ್ ತಿಂಗಳಿಂದ ಕೊರೆಯುವ ಚಳಿ ಆರಂಭವಾಗುತ್ತದೆ.
    
ಮರುದಿನ ಬೆಳಿಗ್ಗೆ, ನಮ್ಮ ರೂಮು ಖಾಲಿ ಮಾಡಿ ದೆಹಲಿ ಸುತ್ತುವುದಕ್ಕೆ ಹೊರಟೆವು. ಮೊದಲು ಕುತುಬ್ ಮಿನಾರ್ ನೋಡಿದೆವು. ಇದನ್ನು ಕಟ್ಟಿಸಿದವನು ಕುತುಬುದ್ದೀನ್. ಕ್ರಿ.ಶ. 1192 ರಲ್ಲಿ. ಬಹಳ ಸುಂದರವಾದ ಎತ್ತರದ ಗೋಪುರ. ಸುತ್ತಲು ಸುಂದರವಾದ ಹುಲ್ಲುಹಾಸಿನ ಮೈದಾನ. ಈ ಮಿನಾರ್ ಗಳು (ಸ್ತಂಭಗಳು) ನಮ್ಮ ದೇಶದ ಗತ ಇತಿಹಾಸದ ಜೀವಂತ ಸಾಕ್ಷಿಗಳು. ಒಂಬತ್ತು ಶತಮಾನಗಳಿಂದ ಕಾಲದ ಪ್ರವಾಹಕ್ಕೆ ಪಕ್ಕಾಗಿದ್ದರೂ ತಮ್ಮ ಭವ್ಯತೆಯನ್ನು (ದೆಹಲಿ ಒಂದು ಸುಂದರ ನಗರ). ಅ ನಗರದ ಗರ್ಭದಲ್ಲಿ ಭಾರತ ದೇಶದ ಮಹತ್ತರ ಇತಿಹಾಸ ಅಡಗಿದೆ. ಅಲ್ಲಿನ ಉಳಿಸಿಕೊಂಡು ನಿಂತಿವೆ.
      
ರಸ್ತೆಗಳ ಹೆಸರುಗಳೂ ಅಂತೆಯೇ ಇವೆ. ಚಾಣಕ್ಯ, ಚಂದ್ರಗುಪ್ತ, ಅಶೋಕ, ಹುಮಾಯೂನ್ ಮುಂತಾದ ಎಲ್ಲರು ಇಲ್ಲಿ ತಮ್ಮ ಸಾಮ್ರಾಜ್ಯಗಳನ್ನು ಹೊಂದಿದ್ದಾರೆ.) ದೆಹಲಿಯನ್ನು ಗೆದ್ದುಕೊಳ್ಳುವುದು ಹಾಗೂ ತನ್ನ ವಶದಲ್ಲಿಟ್ಟುಕೊಳ್ಳುವುದು ಪರಾಕ್ರಮಿಗಳಿಗೆ ಒಂದು ಪೌರುಷದ ಹಾಗೂ ಕೀರ್ತಿಯ ವಿಷಯ. ಅನಂತರ ಇಂದಿರ ಗಾಂಧಿ ಸ್ಮಾರಕ ನೋಡಿದೆವು. ತಮ್ಮ ಕೊನೆಯ ದಿನಗಳಲ್ಲಿ ವಾಸವಾಗಿದ್ದ ಅವರ ನಿವಾಸ ಅದು. ಅದನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.  ಅವರು ಓದುತ್ತಿದ್ದ ಪುಸ್ತಕಗಳು, ಸೀರೆಗಳು, ಎಲ್ಲವೂ ಹಾಗೆಯೇ ಇವೆ.ಅವರು ಮನೆಯಿಂದ ಆಚೆ ಬಂದಾಗ ಒಂದು ಕಾಲು ಹಾದಿಯನ್ನು ಬಳಸಿ ಸಂದರ್ಶಕರು ನಿಂತು ಕಾಯುತ್ತಿದ್ದ ಜಾಗಕ್ಕೆ ಹೋಗುತ್ತಿದ್ದರು. ಈ ಹಾದಿ ಒಂದು ಸುಂದರ ಉದ್ಯಾನವನಕ್ಕೆ ಕರೆದೊಯ್ಯುತ್ತದೆ. ಈ ಹಾದಿಯಲ್ಲೇ ಅವರ ಹತ್ಯೆ ಆಯಿತು. ಅವರು ಕುಸಿದುಬಿದ್ದ ಅ ಸ್ಥಳ ಹಾಗಯೇ ಇದೆ.

4

5

ಅವರ ಎಷ್ಟೋ ನಿರ್ಧಾರ ಗಳನ್ನು ಒಪ್ಪಲು ಸಾಧ್ಯವಾಗದಿದ್ದರೂ, ಅವುಗಳನ್ನು ತೆಗೆದುಕೊಂಡ ರೀತಿ, ಟೈಮಿಂಗ, ಒಂದು ಹೊಸ ಇತಿಹಾಸ ಸೃಷ್ಟಿಸಿತು. ಅಟಲ್ ಬಿಹಾರಿ ವಾಜಪೇಯಿ ಅವರು, ಬಾಂಗ್ಲಾ ಯುದ್ಧದ ಸಮಯದಲ್ಲಿ ಅವರು ತೆಗೆದುಕೊಂಡ ನಿರ್ಣಯಗಳಿಂದ, ಅವರನ್ನು ದುರ್ಗೆ ಎಂದಿದ್ದರು.  ಇಂದಿರಾಜಿ, ತಮ್ಮ ಮಂತ್ರಿ ಮಂಡಲದಲ್ಲಿರುವ ಏಕೈಕ ಧೈರ್ಯಸ್ಥ ಗಂಡು ಎಂದು ವ್ಯಂಗ್ಯವಾಡುವವರೂ ಇದ್ದರು.  ಆದರೆ ಅವರ ದೇಶಭಕ್ತಿ ತ್ಯಾಗದ ಮನೋಭಾವ ಧೀರೋದಾತ್ತ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ. (ಆದರೆ ಸಾವನ್ನು ಗೆಲ್ಲ ಬಲ್ಲವರು ಯಾರು? ಯಾವುದಾದರೂ ಒಂದು ರೀತಿ ಅದು ನಮ್ಮನ್ನು ಆಕ್ರಮಿಸುತ್ತದೆ. ಎಷ್ಟೇ ಬಲಿಷ್ಟರಾದರೂ ಸಾವಿನ ಮುಂದೆ ಎಲ್ಲರೂ ಕನಿಷ್ಟರೇ ಅಲ್ಲವೇ?)  
      
ಮುಂದೆ ನಮ್ಮ ಸಾರಥಿ ರಾಜೇಂದ್ರ ಸಿಂಗ್ ಊಟಕ್ಕೆ ಕರೆದೊಯ್ದ. ಹೋಟೇಲಿನ ಹಿಂದಿನ ದ್ವಾರದಿಂದ ಹೋಗಿದ್ದೆವು. ಒಂದೇ ಕಡೆ ಎಲ್ಲಾ ಕುಳಿತು ಊಟ ಮಾಡಿದೆವು. ಅರ್ಧ ಊಟವಾದಾಗ ತಿಳಿಯಿತು. ಇದು ವೆಜ್ ಮತ್ತು ನಾನ್ ವೆಜ್ ಹೋಟೇಲ್ ಅಂತ. ಮನಸ್ಸಿಗೆ ತುಂಬಾ ಕಸಿವಿಸಿಯಾಯ್ತು. ನಮ್ಮ ಡ್ರೈವರ್ ವೆಜ್ ಮತ್ತು ನಾನ್ ವೆಜ್ ಗೆ ಪ್ರತ್ಯೇಕ ಅಡುಗೆ ಮನೆ, ಪ್ರತ್ಯೇಕ ಪಾತ್ರೆಗಳು ಹಾಗೂ ಪ್ರತ್ಯೇಕ ಊಟದ ಮನೆಗಳಿವೆ. ಬಂದರೆ ಅದನ್ನು ತೋರಿಸುತ್ತೇನೆ ಎಂದ. ನಾವೇನೂ ನೋಡಲಿಲ್ಲ. ಆದದ್ದು ಆಗಿಹೋಯಿತು. ಕೃಷ್ಣಾರ್ಪಣಮಸ್ತು. ಗೋವಿಂದಾ ಗೋವಿಂದ. ನಮಗೇನೂ ವೈಶ್ವದೇವ, ತೀರ್ಥ ಪ್ರಸಾದದ ನಿರೀಕ್ಷೆಯಿರಲಿಲ್ಲ. ಆದರೂ………….  ಚಲಿಯೇ ಚಲಿಯೇ…
 


  ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x