ಶಶಿ (ಭಾಗ 2): ಗುರುರಾಜ ಕೊಡ್ಕಣಿ

gururaj-kodkani

ಇಲ್ಲಿಯವರೆಗೆ

ಅಂದು ರಾತ್ರಿಯಿಡಿ ನಾನು ಶಶಿಯ ಬಗ್ಗೆ ಯೋಚಿಸುತ್ತಿದ್ದೆ. ಅವರ ಮನೆಯಲ್ಲಿ ನಡೆದ ಜಗಳ ಶಶಿಯ ಕುರಿತಾಗಿಯೇ ನಡೆದದ್ದು ಎನ್ನುವುದು ನನಗೆ ಬಹುತೇಕ ಖಚಿತವಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಮದುವೆಯ ನಂತರ ನಂಜಮ್ಮನ ಮನೆಯಲ್ಲಿದ್ದಿದ್ದು ಶಶಿ, ಫಕೀರಪ್ಪ ಮತ್ತು ಆಶಾ ಮಾತ್ರ. ಅವರಿಬ್ಬರೂ ಮೂರನೆಯ ಹೆಂಗಸಿನ ಮೇಲೆ ಕೂಗಾಡುತ್ತಿದ್ದರೆಂದರೆ ಅದು ಶಶಿಯೇ ಆಗಿರಬೇಕೆನ್ನುವ ಅಂದಾಜು ನನಗಾಗಿತ್ತು. ಗುದ್ದಿದ್ದು ಸಹ ಶಶಿಯನ್ನೇ ಎಂಬುದು ಊಹಿಸಿಕೊಂಡಾಗ ನಿಜಕ್ಕೂ ನನಗೆ ಕಸಿವಿಸಿಯಾಯಿತು. ಅಂಥಹ ತಪ್ಪು ಅವಳೇನು ಮಾಡಿದ್ದಳೆಂದು ಊಹಿಸಲಾಗದೇ , ತೊಳಲಾಟದಲ್ಲಿಯೇ ನಿದ್ರೆ ಹೋಗಿದ್ದೆ. ಮಾರನೇಯ ಬೆಳಿಗ್ಗೆ  ಊರಿನ ಡ್ಯೂಟಿಯೆಂದು ಗಣೇಶ ಔಷಧಾಲಯಕ್ಕೆ ತೆರಳಿದ್ದೆ. ನನ್ನನ್ನು ನೋಡಿದ ಶಶಿ ಮುಗುಳ್ನಕ್ಕಳಾದರೂ ಹಿಂದಿನ ದಿನ ಆಕೆ ತುಂಬ ಅತ್ತಿರಬಹುದೆನ್ನುವುದಕ್ಕೆ ಸಾಕ್ಷಿಯಾಗಿ ಕೆಂಪಗಾಗಿದ್ದ ಕಣ್ಣುಗಳಿದ್ದವು. ಬೇರೆನೂ ಮಾತನಾಡದೇ, ’ನಿನ್ನೆ ಮನೆಯಲ್ ಎಂತಾಯ್ತು ಶಶಿ. . ?ಎಂತಕೆ ನಂಜಮ್ಮ ನಿಂಗ್ ಹೊಡ್ದದ್ದು. . ’? ಎನ್ನುತ್ತ ನೇರವಾಗಿಯೇ ಕೇಳಿಬಿಟ್ಟೆ. ಬಹುಶ: ಅವಳು ಅಂಥದ್ದೊಂದು ಪ್ರಶ್ನೆಯನ್ನು ನನ್ನಿಂದ ಊಹಿಸಿರಲಿಲ್ಲ. ಕೊಂಚ ಗಲಿಬಿಲಿಗೊಳಗಾದ ಆಕೆ ಒಂದರೆಕ್ಷಣ ನನ್ನನ್ನೇ ಗಾಬರಿಯ  ಕಣ್ಣುಗಳಿಂದ ದಿಟ್ಟಿಸಿದಳು. ಎಂತದೂ ಇಲ್ಲಪ್ಪ’ಎಂದವಳು ಹಸಿಸುಳ್ಳು ಹೇಳುತ್ತಿದ್ದದ್ದು ಸ್ಪಷ್ಟವಾಗಿ ನನಗರ್ಥವಾಗಿತ್ತು. ತಾನು ಹೇಳಿದ್ದು ಸುಳ್ಳು ಎಂಬುದು ನನಗೆ ತಿಳಿದುಹೋಯಿತು ಎಂಬುದು ಅವಳಿಗೆ ಅರ್ಥವಾಯಿತೆನ್ನಿಸುತ್ತದೆ. ’ಇಲ್ಬೇಡಾ ಸತೀಶಾ, ಸಂಜೆ ಆರೂವರೆಗೆ ಪಿಚ್ಚರ್ ಟಾಕೀಸ್ ಹತ್ರ ಸಿಗು, ಮಾತಾಡ್ವಾ’ಎನ್ನುವ ಹೊತ್ತಿಗೆ ಅವಳ ಕಂಠ ಗದ್ಗದ. 

ನಮ್ಮೂರಿನಲ್ಲಿರುವುದೇ ಒಂದು ಸಿನಿಮಾ ಮಂದಿರ. ರಾಜಶೇಖರ ಚಿತ್ರ ಮಂದಿರ. ಅದೇಕೋ ಮೊದಲಿನಿಂದಲೂ ನಮ್ಮೂರಿನ ಜನಕ್ಕೆ ಸಿನಿಮಾ ಬಗ್ಗೆ ದೊಡ್ಡ ಆಸಕ್ತಿಯೇನಿಲ್ಲ. ಎಂಥದ್ದೇ ಸೂಪರ್ ಹಿಟ್ ಸಿನಿಮಾ ಬಂದರೂ ಸಹ ಚಿತ್ರ ಮಂದಿರ ತುಂಬುತ್ತಿರಲಿಲ್ಲ. ಹಾಗಾಗಿ ಥಿಯೇಟರ್ ಭಾರಿ ನಷ್ಟದಲ್ಲಿ ನಡೆಯುತ್ತಿದೆ ಎಂಬ ಸುದ್ದಿಯಿತ್ತು. ಅದರ ಮಾಲೀಕರಾಗಿದ್ದ ಜಗದೀಶ್ ನಾಯಕರು ಅದನ್ನು ಮುಚ್ಚುವ ಬಗ್ಗೆಯೂ ವದಂತಿಗಳಿದ್ದವು. ಅದರ ಪಕ್ಕದಲ್ಲಿಯೇ ಸಣ್ಣದ್ದೊಂದು ಉದ್ಯಾನವನವೂ ಇತ್ತು. ಸಾಮಾನ್ಯವಾಗಿ ನಮ್ಮೂರಿನ ಯಾರಾದರೂ ಥಿಯೇಟರಿನ ಬಳಿ ಸಿಗೋಣ ಎಂದರೆ ಉದ್ಯಾನವನದಲ್ಲಿ ಸಿಗೋಣ ಎಂದೇ ಅರ್ಥ. ಅದು ಯಾವುದೋ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲ್ಪಟ್ಟ ಉದ್ಯಾನವಿರಬಹುದು. ಸುಮಾರು ಅರ್ಧ ಎಕರೆಯಷ್ಟಿದ್ದ ಉದ್ಯಾನವನದ ಗೇಟು ಮುರಿದು ಹೋಗಿ ಅದ್ಯಾವುದೋ ಕಾಲವಾಗಿತ್ತು. ಅಳಿದುಳಿದ ಪಳೆಯುಳಿಕೆಯಂತಿದ್ದ ಮುರಿದ ಗೇಟು ಸಹ ತನ್ನ ಮೂಲಸ್ವರೂಪವೇ ಅರಿಯಲಾಗದಷ್ಟು ತುಕ್ಕು ಹಿಡಿದು ನೇತಾಡುತ್ತಿತ್ತು. ನಿರ್ವಾಹಕರೇ ಇಲ್ಲದ ಉದ್ಯಾನವನದಲ್ಲಿ ಮರಗಿಡಗಳು ಭಯಂಕರವಾಗಿ ಅನಿಯಂತ್ರಿತವಾಗಿ ಬೆಳೆದುಬಿಟ್ಟಿದ್ದವು. ಒಂದು ಕ್ಷಣಕ್ಕೆ ಅದು ಉದ್ಯಾನವನವೆನ್ನಿಸದೇ ಮಲೆನಾಡಿನ ಕಾಡಿನ ಒಂದು ಭಾಗವೇ ಅನ್ನಿಸುತ್ತಿದ್ದದ್ದು ನಿಜ. ಹಗಲು ಹೊತ್ತಿನಲ್ಲಿಯೇ ಹಾವುಗಳು ನಿರ್ಭಯವಾಗಿ ಓಡಾಡುತ್ತಿದ್ದ ಉದ್ಯಾನವನಕ್ಕೆ ಬರುತ್ತಿದ್ದವರು ತೀರ ವಿರಳ. ಸಂಜೆಯ ಹೊತ್ತಿಗೆ ಅಲ್ಲೊಂದು ಮೋಹಿನಿ ಓಡಾಡುತ್ತದೆ ಎಂಬ ಸುದ್ದಿಯ ನಂತರವಂತೂ ಸಂಜೆಯ ಆರುಗಂಟೆಗೆಲ್ಲ ಉದ್ಯಾನವನದ ಎದುರಿನ ಮಣ್ಣು ರಸ್ತೆಯನ್ನೂ ಸಹ ಯಾರೂ ಬಳಸುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಪ್ರೇಮಿಗಳು ಸೇರುತ್ತಿದ್ದ ಅಂಥದ್ದೊಂದು ಸ್ಥಳಕ್ಕೆ ನನ್ನನ್ನು ಕರೆದ ಶಶಿಯ ವರ್ತನೆ ನನಗೆ ಅರ್ಥವಾಗದಂತಾಗಿತ್ತು. 

ಮರುದಿನ ಬೆಳಿಗ್ಗೆ ನನ್ನ ಡ್ಯೂಟಿ ಸಿರಸಿಯಲ್ಲಿತ್ತು. ನನ್ನೂರಿನಿಂದ ನಲ್ವತ್ತು ಕಿಲೋಮೀಟರುಗಳಷ್ಟು ದೂರದಲ್ಲಿರುವ ಸಿರಸಿಯ ಹಲವಾರು ಔಷಧಾಲಯಗಳಿಗೆ ಭೇಟಿ ಕೊಟ್ಟು ನನ್ನ ಕೆಲಸ ಮುಗಿಸಿ ಊರಿಗೆ ಮರಳುವಷ್ಟರಲ್ಲಿ ಸಮಯ ಐದು ಗಂಟೆ. ಸಿರಸಿಯಿಂದ ಬರುವ ಬಸ್ಸಿಗೆ ನನ್ನೂರಲ್ಲಿ ಎರಡೇ ಸ್ಟಾಪು. ಮೊದಲನೇಯದ್ದು ಗಾಂಧಿ ಚೌಕದ ಬಳಿಯಾದರೆ ಮತ್ತೊಂದು ನೇರ ಮುಖ್ಯ ಬಸ್ ನಿಲ್ದಾಣದಲ್ಲಿಯೇ. ಗಾಂಧಿ ಚೌಕ ನನ್ನ ಮನೆಯಿಂದ ಅರ್ಧ ಫರ್ಲಾಂಗು ದೂರದಲ್ಲಿದೆ. ಬಸ್ಸಿನಿಂದ ಇಳಿದವನೇ ಸ್ಟಾಪಿನ ಪಕ್ಕದ ಮಾರಿಕಾಂಬಾ ಕ್ಯಾಂಡಿಮೆಂಟ್ಸ್ ನಲ್ಲಿ ದೊಡ್ಡದ್ದೊಂದು ಚಾಕ್ಲೇಟು ಖರೀದಿಸಿದೆ. ಅಲ್ಲಿಂದ ಮನೆಗೆ ಐದು ನಿಮಿಷದ ನಡಿಗೆ. ಬಾಗಿಲ ಹೊರಗೆ ಬೂಟು ಬಿಚ್ಚಿಟ್ಟು, ಸಾಕ್ಸು ಎಳೆದು ಬೂಟಿನಲ್ಲಿ ತುರುಕಿ, ಪಕ್ಕಕ್ಕೆ ಸರಿಸಿಟ್ಟೆ. ಕೈಯಲಿದ್ದ ಬ್ಯಾಗು ಮತ್ತು ಕತ್ತಿನಲ್ಲಿ ನೇತಾಡುತ್ತಿದ್ದ ಟೈಯನ್ನು  ಟೇಬಲ್ಲಿನ ಮೇಲೆ ಬಿಸುಟು ಶರ್ಟಿನ ತೋಳನ್ನು ಅರ್ಧ ಮಡಚಿ, ಪ್ಯಾಂಟನ್ನು ಮೊಣಕಾಲಿನವರೆಗೆ ಮಡಚಿಕೊಂಡು ಬಚ್ಚಲ ಮನೆಯತ್ತ ಹೋಗುತ್ತಲೇ, ಅಡುಗೆ ಮನೆಯಲ್ಲಿದ್ದ ಅಮ್ಮನಿಗೆ ’ ಅಮ್ಮಾ ಚಾ ಮಾಡೆ’ಎಂದೆ. ಮುಖಕ್ಕೊಂದಿಷ್ಟು ನೀರು ರಾಚಿಕೊಂಡು , ಬಾಯಿತುಂಬ ನೀರು ತುಂಬಿಕೊಂಡು ಎರಡೆರಡು ಬಾರಿ ಮುಕ್ಕಳಿಸಿ ಒಗೆಯುತ್ತಿದ್ದವನಿಗೆ ’ಬೇಗ ಬಂದ್ಯಲ್ಲೋ ಇವತ್ತು ’ಎಂಬ ಅಮ್ಮನ ಮಾತುಗಳು ಬಚ್ಚಲಿನ ನಲ್ಲಿಯ ಶಬ್ದಕ್ಕೆ ಅಸ್ಪಷ್ಟವಾಗಿ ಕೇಳಿದವು. ’ಹ್ಮಂ’ಎಂದವನೇ ಬಚ್ಚಲುಮನೆಯ ಬಾಗಿಲಲ್ಲಿ ಕಾಲೊರಸೆನ್ನುವಂತೆ ಹಾಸಿಟ್ಟಿದ್ದ ಗೋಣಿಚೀಲಕ್ಕೆ ಅಂಗಾಲನ್ನೊಮ್ಮೆ ಜೋರಾಗಿ ಉಜ್ಜಿದೆ. ಅಲ್ಲೇ  ಗೂಟದ ಮೇಲಿದ್ದ ವಸ್ತ್ರದಿಂದ ಕಾಲುಗಳನ್ನೊರೆಸಿಕೊಂಡು ಪ್ಯಾಂಟು ಮತ್ತು ಅಂಗಿಗಳನ್ನು ಸರಿಪಡಿಸಿಕೊಂಡು ಅಮ್ಮ ಕೊಟ್ಟ ಚಹ ಕುಡಿದೆ. ತಿನ್ನಲು ಹಲಸಿನ ಬಾಳಕವನ್ನೂ ಸಹ ಅಮ್ಮ ಕೊಟ್ಟಿದ್ದಳಾದರೂ ನನ್ನಲ್ಲೇನೋ ವಿಚಿತ್ರ ಉದ್ವಿಗ್ನತೆ. ಬಿಸಿಬಿಸಿ ಚಹವನ್ನು ಗಡಿಬಿಡಿಯಲ್ಲಿ ಕುಡಿದು ಮುಗಿಸಿ, ಚಹದ ಬಿಸಿಗೆ ಉರಿಯುತ್ತಿದ್ದ ನಾಲಿಗೆಗೆ ಗಾಳಿಹಾಕಿಕೊಳ್ಳುವ ಪ್ರಯತ್ನ ಮಾಡುತ್ತಲೇ ತಲೆಯನ್ನೊಮ್ಮೆ ಬಾಚಿಕೊಂಡೆ. ಚಪ್ಪಲಿ ಧರಿಸಿ ಮನೆಯಿಂದ ತರಾತುರಿಯಲ್ಲಿ ಹೊರ ಬೀಳಬೇಕೆನ್ನುವಷ್ಟರಲ್ಲಿ ಪಡಸಾಲೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದ ಅಮ್ಮ, "ಅರೇ. . ! ಈಗಷ್ಟೇ ಬಂದೆ, ಈಗ್ ಮತ್ತೆತ್ಲಾಗ್  ಹೊರ್ಟೆ ’ಎಂದಳು. ’ಹೂಂ, ಒಂಚೂರ್ ಕೆಲ್ಸ ಉಂಟು, ಒಂದ್ ತಾಸಲ್ಲಿ ಬಂದ್ ಬಿಡ್ತೆ’ಎಂದವನೇ ಚಪ್ಪಲಿ ಧರಿಸಿ ಮನೆಯಿಂದ ಹೊರಬಿದ್ದೆ. ಐದು ನಿಮಿಷಕ್ಕೆಲ್ಲ ನಾನು ಪಾರ್ಕು ಸೇರಿಕೊಂಡೆ. ವಾಚು ನೋಡಿಕೊಂಡರೆ ಸಮಯವಿನ್ನೂ ಐದು ಮುಕ್ಕಾಲು. ’ಥತ್, ಅವಳು ಹೇಳಿದ್ದು ಆರೂವರೆ, ಈಗಿನ್ನೂ ಐದೂ ಮುಕ್ಕಾಲು. ವಾಪಸ್ಸು ಹೋಗೋ ಹಾಗೂ ಇಲ್ಲ. ಇಲ್ಲೇ ಕಾಯ್ಬೇಕು’ಎಂದುಕೊಂಡು ಅಲ್ಲೇ ಶಿಥಿಲಾವಸ್ಥೆಯಲ್ಲಿದ್ದ ಕಲ್ಲಿನ ಬೆಂಚೊಂದರ ಮೇಲೆ ಕುಳಿತುಕೊಂಡೆ. ಹದಿನೈದು ನಿಮಿಷವಾಗಿರಬಹುದು. ದೂರದಲ್ಲಿ ಶಶಿ ನಡೆದು ಬರುತ್ತಿದ್ದುದ್ದು ನನಗೆ ಕಾಣಿಸಿತು. ಅವಳನ್ನು ನೋಡುತ್ತಲೇ ನನಗೆ ಮತ್ತದೇ ಉದ್ವಿಗ್ನತೆ. ಅಳುಕುತ್ತಲೇ ಒಮ್ಮೆ ಆಚೀಚೆ ನೋಡಿದ ಶಶಿ ಯಾರೂ ನಮ್ಮನ್ನು ನೋಡುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ನನ್ನತ್ತ ಕೈ ಬೀಸಿದಳು. ಮುಗುಳ್ನಕ್ಕು ನಾನು ಮರಳಿ ಕೈಬೀಸುತ್ತಿರುವಂತೆಯೇ ಹಳೇಯ ಗೇಟನ್ನು ದಾಟಿ ಒಳಬಂದಳು. ’ಆರುವರೆಗೆ ಅಂತೇಳಿ, ಆರಕ್ಕೇ ಬಂದಿದ್ದೀಯಲ್ಲೇ ’ಎಂದರೆ ಮುಖ ನೋಡಿ ನಸುನಕ್ಕಳು. ;’ಆಯ್ತು ಕುತ್ಕೋ ಬಾ’ಎಂದರೆ ಪುನ; ಆಚೀಚೆ ನೋಡಿ ನಾನು ಕುಳಿತಿದ್ದ ಕಲ್ಲುಬೆಂಚಿನ ಮೇಲೆ ನಮ್ಮಿಬ್ಬರ ನಡುವೆ ಒಂದರ್ಧ ಅಡಿಯಷ್ಟು ಅಂತರವಿಟ್ಟುಕೊಂಡು ಕುಳಿತುಕೊಂಡಳು. ಅಂಗಿಯ ಜೇಬಿನಲ್ಲಿದ್ದ ಚಾಕ್ಲೇಟನ್ನು ಅವಳ ಮುಖದೆತ್ತರಕ್ಕೆ ಹಿಡಿದು, ’ತಗೋ ಇದ್ ನಿಂಗೆ ’ಎಂದರೆ ಆಶ್ಚರ್ಯದಿಂದ ನನ್ನನ್ನೇ ದಿಟ್ಟಿಸಿದಳು. ಕೊಂಚ ಹಿಂಜರಿಕೆಯಿಂದಲೇ ಅದನ್ನು ಪಡೆದವಳು, ’ಥ್ಯಾಂಕ್ಸ್’ಎಂದು ಸುಮ್ಮನಾದಳು. ಒಂದೆರಡು ಕ್ಷಣಗಳ ಕಾಲ ಸುಮ್ಮನೇ ಕುಳಿತುಕೊಂಡೆವು. ’ಹೇಳು, ಎಂತದೋ ಹೇಳ್ಬೇಕು ಅಂದೆ’ಎಂದು ನಾನೇ ಮೊದಲು ಪ್ರಶ್ನಿಸಿದೆ. ಮಾತು ಶುರುಮಾಡುವುದು ಹೇಗೆನ್ನುವ ಗೊಂದಲದಲ್ಲಿದ್ದ ಅವಳು ನನ್ನ ಪ್ರಶ್ನೆಯಿಂದ ಗಾಬರಿಯಾದವರಂತೆ ತಲೆಯೆತ್ತಿ ನನ್ನನ್ನೇ ನೋಡತೊಡಗಿದಳು. ’ಸತೀಶಾ, ನಾನು ನಿಂಗೇನೋ ಹೇಳ್ಬೇಕು’ಎಂದು ರಾಗವೆಳೆದಳು. ’ಹೂಂ, ಗೊತ್ತು ಮಾರಾಯ್ತಿ, ಅದನ್ನು ಹೇಳುದಕ್ಕೆ  ನೀನು ನಂಗ್ ಇಲ್ಲಿ ಬರ್ಲಿಕ್ ಹೇಳಿದ್ದು ಅಲ್ವಾ. . ’? ಎಂದೆ. ’ಅದು ನಾನು, ನಾನು ಅದು’ಎನ್ನುತ್ತ ತಡವರಿಸತೊಡಗಿದಳು. ಅವಳೇನು ಹೇಳಲಿದ್ದಾಳೆ ಎಂಬುದನ್ನು  ಊಹಿಸಿಕೊಂಡ ನಾನು ಕೊಂಚ ಉದ್ವೇಗಕ್ಕೊಳಗಾಗಿದ್ದೆ. ’ಥೋ, ಬೇಗ ಹೇಳೇ . . ಎಷ್ಟ್ ರಾಗ ಎಳಿತೆ. . ’ಎನ್ನುವಷ್ಟರಲ್ಲಿ ನನ್ನಲ್ಲೊಂದು ಸಣ್ಣ ಅಸಹನೆ. ’ಅದು ನಾನು ಅದು ನಾನು . . . ಸಾದಿಕ್ ನಾ ಲವ್ ಮಾಡ್ತಿದ್ದೆ’ಎಂದವಳೇ ಒಮ್ಮೆ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡಳು. 

ಅವಳು ಸಾದಿಕನ ಹೆಸರು ಹೇಳಿದಳೆನ್ನುವುದು ನನಗೆ ಕೊಂಚ ತಡವಾಗಿ ಅರ್ಥವಾಯಿತು. ಅರ್ಥವಾದಾಗ ನನಗೊಂದು ವಿಚಿತ್ರ ನಿರಾಸೆ. ಕೆಲಕಾಲ ಸುಮ್ಮನೇ ತಲೆ ತಗ್ಗಿಸಿ ದೈನೇಸಿ ಸ್ಥಿತಿಯಲ್ಲಿ ಕುಳಿತಿದ್ದ ಅವಳನ್ನೇ ದಿಟ್ಟಿಸಿದೆ. ’ಸಾದಿಕನಾ. . ? ಬೇರೆ ಯಾರೂ ಸಿಗಲಿಲ್ಲವೇನೆ ನಿಂಗೆ. . ’?ಎಂದು ಕೇಳಿದೆ. ನಾನು ಅದನ್ನು ತಮಾಷೆಯೆಂದುಕೊಂಡೆನಾದರೂ ಅದು ತಮಾಷೆಯಾಗಿರಲಿಲ್ಲವೆನ್ನುವುದು ನನಗೂ ಸಹ ತಿಳಿದಿತ್ತು. "ಎಂತಕೆ ಸತೀಶಾ. . ಅವನು ಮುಸ್ಲಿಂ ಅಂತಾನಾ. . ’? ಎಂದವಳ ದನಿಯಲ್ಲಿ ಚಿಕ್ಕದ್ದೊಂದು ಕೋಪ. ’ಛೇ, ಛೇ ಹಾಗಲ್ಲಪ್ಪ ಅವನು ತುಂಬ ಓದವ್ನೂ ಅಲ್ಲ, ಭಯಂಕರ  ಬಡವಾನೂ ಅಲ್ವೇನೇ. ’?ಎನ್ನುತ್ತ ನನ್ನ ಪ್ರಶ್ನೆಗೆ ಸಮರ್ಥನೆಯೊದಗಿಸಲು ಪ್ರಯತ್ನಿಸಿದೆ. ಅವನ ಜಾತಿಯದ್ದು ಒಂದು ಪ್ರಶ್ನೆಯೇ ಅಲ್ಲವೆನ್ನುವಂತೆ ನಾನು ಮಾತನಾಡಿದ್ದೇನೋ ನಿಜ. ಆದರೆ ಅವನ ಹೆಸರು ಕೇಳಿದಾಕ್ಷಣ ನನ್ನ ಗಮನಕ್ಕೆ ಬಂದ ಮೊದಲ ವಿಷಯವೇ ಅವನ ಧರ್ಮದ ಕುರಿತಾದದ್ದು. ’ಓದು , ಬಡತನ ಎಲ್ಲ ಒಂದು ವಿಷಯವಾ ಸತೀಶಾ, ನಾ ಎಂತ ತುಂಬ ಎಜುಕೇಟೆಡಾ. . ? ನಾನು   ಹತ್ನೇ    ಕ್ಲಾಸು. ಅವನು ಆರನೇ ಕ್ಲಾಸು. ಬಡತನದಲ್ ನಮ್ಗೂ ಅವರಿಗೂ ಭಾಳಾ ವ್ಯತ್ಯಾಸ ಇಲ್ಲ ಬಿಡು’ಎಂದು ನಸುನಕ್ಕಳು ಶಶಿ. ’ಆದ್ರೂ ಶಶಿ, ಕನಿಷ್ಟ ಪಕ್ಷ ನಿಂಗ್ ಸಾಕೂ ಯೋಗ್ಯತೆ ಉಂಟಾ ಅವ್ನಿಗೆ. . ? ನಂಗ್ ಗೊತ್ತಿದ್ದ ಹಾಗೆ ಎರಡೋ  ಎರಡುವರೆ ಸಾವಿರವೋ ಸಂಬಳ ಇರಬೇಕು ಅವ್ನಿಗೆ. ನೋಡುದಕ್ಕೂ ಸಾಧಾರಣ. ಅವನ್ ಮದುವೆಯಾದ್ರೆ ಸುಖವಾಗಿರ್ತೆ ಅನ್ಸತದಾ ನಿಂಗೆ. . ’? ಎಂದೆ. ಅದೇಕೆ ಅಷ್ಟು ಸಂವೇದನಾಹೀನನಂತೆ ನಾನು ಮಾತನಾಡಿದ್ದೇನೋ ತಿಳಿಯದು. ನನ್ನ ಮಾತಿಗೆ ಶಶಿಯ ಮುಖ ಚಿಕ್ಕದಾಯಿತು. ನನಗೆ ನಿಜಕ್ಕೂ ಬೇಸರವಾಯಿತು. ’ಬೇಜಾರ್ ಆಗ್ಬೇಡಾ ಶಶಿ. ಹೇಳಬೇಕು ಅನ್ಸತು ಹೇಳ್ದೆ. ಇಷ್ಟಕ್ಕೂ ನಿನ್ ಜೀವನದ ನಿರ್ಧಾರಗಳನ್ನ ನೀನೇ ತೊಗೋಬೇಕು’ಎಂದೆ. ಒಂದೆರಡು ಕ್ಷಣಗಳ ನಂತರ ಮಾತನಾಡಲಾರಂಭಿಸಿದ ಶಶಿ, ’ಸಾಧಾರಣ. . ?? ಅಯ್ಯೋ ದೇವರೆ ಎಂತಾ ಹೇಳ್ತೇ ಸತೀಶಾ, ನಾ ಎಂತಾ ತ್ರಿಪುರ ಸುಂದರಿಯಾ. . ’?ಎಂದು ನಕ್ಕಳು . ಅವಳ ನಗುವಿನಲ್ಲಿಯೂ ನೋವು ಕಂಡಿತು ನನಗೆ. ತನ್ನ ರೂಪದ ಬಗ್ಗೆ ತಾನೇ ಕುಹಕವಾಡಿಕೊಂಡದ್ದ ಅವಳ ರೀತಿ   ಸ್ವಲ್ಪ ಕಸಿವಿಸಿಯನ್ನುಂಟು ಮಾಡಿತು. ’ಛೇ ನಿನ್ನ ರೂಪಕ್ ಎಂತಾಗಿದೆ. . ಚಂದಾನೇ ಇದ್ದಿಯಪ್ಪ’ಎಂದು ನುಡಿಯುತ್ತ ಸನ್ನಿವೇಶವನ್ನು ಕೊಂಚ ತಿಳಿಯಾಗಿಸಲು ಪ್ರಯತ್ನಿಸಿದೆ. ’ಸುಳ್ ಹೇಳ್ಬೇಡಾ ಸತೀಶಾ, ಊರೆಲ್ಲ ಕಾಗೆ, ಕರಿ ಬೆಕ್ಕು ಅಂತ ಕರ್ದು ಕರ್ದು ಯಾರದ್ರೂ ಸುಳ್ಸುಳ್ಳು ಹೊಗಳಿದರೂ ನಂಗೆ ಸಿಟ್ಟು  ಬರ್ತದೆ ಈಗೀಗ’ಎಂದು ಬಿಟ್ಟಳು ಶಶಿ. ನಾನು ಪೆಕರನಂತೆ ಸುಮ್ಮನಾದೆ. ನಮ್ಮಿಬ್ಬರ ನಡುವೆ ಮತ್ತದೇ ಮೌನ. 

ಮೊದಲು ಮೌನ ಮುರಿದ ಶಶಿ, ’ಬಿಡು ಸತೀಶಾ, ನೀನು ಒಳ್ಳೆಯವ್ನು ನನ್ನ ಮನಸ್ಸಿಗ್ ಬೇಜಾರಾಗಬಾರ್ದು ಅಂತ ಹೊಗಳ್ತೆ’ಎಂದಳು. ನಾನು ಮತ್ತೊಮ್ಮೆ ನಕ್ಕೆ. ’ಮೊದಮೊದಲು ಯಾರಾದ್ರೂ ಕಾಗೆ , ಕರಿಪಿಟ್ಟಿ ಕಾಳಿ ಅಂದಾಗೆಲ್ಲ ಸಿಕ್ಕಾಪಟ್ಟೆ ಬೇಜಾರ್ ಆಗ್ತಿತ್ತು. ಆಮೇಲಾಮೇಲೆ ಅದೊಂಥರಾ ಅಭ್ಯಾಸ ಆಗೋಯ್ತು. ಹೊರಗಿನವರು ಬಿಡು, ಸ್ವಂತ: ಅಪ್ಪ ಅಮ್ಮ ತಂಗಿಯರೇ ಮಶಿಕೆಂಡ, ಮೆಟಕತ್ತಿ ಅಂತೆಲ್ಲ ಕರ್ದಾಗ ಬೇಜಾರ್ ಮಾಡ್ಕೊಂಡ್ರ ಅರ್ಥಾ ಉಂಟಾ’ಎಂದು ಸುಮ್ಮನಾದಳು. ಅವಳ್ಯಾವತ್ತೂ ಹೀಗೆ ನನ್ನೊಟ್ಟಿಗೆ ಮಾತನಾಡಿದವಳಲ್ಲ. ಅಸಲಿಗೆ ನಾವಿಬ್ಬರೂ ಉಭಯಕುಶಲೋಪರಿಯ ಹೊರತುಪಡಿಸಿ ಮಾತನಾಡಿದ್ದು ತೀರ ಕಡಿಮೆ. ನಾನೇ ಆಗಾಗ ಅವಳನ್ನು ಮಾತನಾಡಿಸಲು ಪ್ರಯತ್ನಿಸಿದ್ದರೂ ಆಕೆಯಿಂದ ನನಗೆ ಉತ್ತರವಾಗಿ ಸಿಗುತ್ತಿದ್ದದ್ದು ಒಂದು ಭಾವಹೀನ ನಗೆ ಮಾತ್ರ. ಗೆಳಯ ಗೆಳತಿಯರಿಲ್ಲದ , ಇದ್ದರೂ ತನ್ನದೇ ಬದುಕಿನ ಜಂಜಡಗಳ ನಡುವೆ ಮಾತನಾಡಲಾಗದ ಅಸಹಾಯಕತೆಯನ್ನು ನೀಗಿಸುವ ಸಲುವಾಗಿಯೇ ನನ್ನೊಡನೇ ಮಾತನಾಡಲು ನಿರ್ಧರಿಸಿದ್ದಳೋ ಏನೋ. ’ಯಾಕೋ ದೇವರಿಗೆ ನನ್ನ ಮೇಲ್ ಭಾಳಾ ಸಿಟ್ಟು ಅನಸ್ತದೆ. ಹೀಂಗ್ ಹುಟ್ಸಬಿಟ್ಟ ನೋಡು. ನನ್ನ ನೋಡ್ಲಿಕ್ ಬಂದವ್ರೆಲ್ಲ ನನ್ನ ತಂಗಿಯರನ್ನ ಒಪ್ಕೊಂಡ್ ಹೋದ್ರು, ನನ್ನೇ ಮದುವೆಯಾಗಬೇಕಿದ್ದ ಮಾವನೂ ತಂಗಿಯನ್ನೇ ಮದುವೆ ಮಾಡ್ಕೊಂಡ್ ಹೋದ. ಆಶಾ ಮದುವೆನೂ ಫಿಕ್ಸ್ ಆಯ್ತು ಮೊನ್ನೆ’ಎಂದವಳ ಧ್ವನಿಯಲ್ಲಿ ನೋವಿತ್ತಾ ಗೊತ್ತಾಗಲಿಲ್ಲ. ಆದರೆ ಈ ಸಂಭಾಷಣೆ ನನ್ನಲ್ಲೊಂದು ತಳಮಳವನ್ನುಂಟು ಮಾಡಿತ್ತು. ’ಈಗೀಗ ಅಪ್ಪ ಅಮ್ಮ ನಂಗೆ ಹುಡುಗಾ ನೋಡುದೇ ನಿಲ್ಲಿಸ್ಬಿಟ್ಟಿದ್ದಾರೆ ಸತೀಶಾ, ಗಂಡುಗಳೂ ಬರ್ತಿಲ್ಲ ಅನ್ನು. ಮೂವತ್ತಾಯ್ತು ನಂಗೆ, ಇನ್ನು ನಿನ್ಯಾರ್ ಮದುವೆ ಆಗ್ತಾರೆ ಮಂಗಾ ಅಂತಾಳೆ ಅಮ್ಮ’ ಎಂದ ಶಶಿಯ ಮಾತುಗಳು ನನ್ನನ್ನು ತುಂಬ ಇರಿದವು. ’ಬೇಜಾರು ಮಾಡ್ಕೋಬೇಡ ಶಶಿ’ಎನ್ನುವುದಷ್ಟೇ ನನ್ನಿಂದ ಹೇಳಲು ಸಾಧ್ಯವಾಗಿತ್ತು. ’ಬೇಜಾರ್ ಆಗ್ತದೆ ಸತೀಶಾ, ನಾನೂ ಹೆಣ್ಣಲ್ವಾ, ನಂಗೂ ಆಸೆಗಳಿಲ್ವ. ನೋಡ್ಲಿಕ್ ನಾನು  ಅಸಹ್ಯ ಆದ್ರೆ . . ? ನಾನೂ ಮನುಷ್ಯಳೇ ಅಲ್ವಾ. . ? ನಂಗೆ ಮನಸ್ಸಿಲ್ವಾ. . ’? ಎನ್ನುವಾಗ ಶಶಿಯ ದನಿಯಲ್ಲೊಂದು ಸಣ್ಣ ನಡುಕವಿತ್ತು. ’ಮೊನ್ನೆ ಅಪ್ಪ ಎಂತಾ ಹೇಳ್ದಾ ಗೊತ್ತಾ. . ? ಈ ಹುಡುಗಿಗೇ ರೂಪವಂತೂ ಇಲ್ಲ. ಕಡೆ ಪಕ್ಷ ಮೈಕಟ್ಟು ಆದ್ರೂ ಚಂದ ಇದ್ದಿರೇ  ಯಾರಾದ್ರೂ ಮದುವೆ ಆಗ್ತಿದ್ರು. ಒಳ್ಳೆ ಗೀಜಗದ ಪಕ್ಷಿ ಇದ್ದಾಂಗ್ ಇದ್ದಾಳೆ. ಒಂದ್ ಮೊಲೆನೂ ಸರಿಯಿಲ್ಲ ಇವ್ಳಿಗೆ ಅಂತಾನೆ. ಎಷ್ಟ್ ಹೇಸಿಗೆಯಾಯ್ತ್ ಗೊತ್ತಾ. . ? ಅಪ್ಪ ಅನ್ಸಕೊಂಡವ ಹೇಳೋ ಮಾತಾ ಮಾರಾಯಾ ಅದು’ಎಂದವಳ ದನಿಯಾಗಲೇ ಗದ್ಗದ. ನನಗಿನ್ನೂ ಅಲ್ಲಿ ನಿಲ್ಲುವುದು ಅಸಾಧ್ಯವೆನ್ನುವಂತ ಭಾವ. ಆದರೂ ಕಷ್ಟಪಟ್ಟು ಕಲ್ಲಿನ ಬೆಂಚಿನ ಮೇಲೆ ಗಟ್ಟಿಯಾಗಿ ಬೆನ್ನೊರಗಿಸಿ, ಕೈಕಟ್ಟಿ ಕುಳಿತಿದ್ದೆ. ’ಈಗ ಮೂರ್ನಾಲ್ಕು ತಿಂಗಳ ಹಿಂದೆ ಸಾದಿಕ್, ಮದುವೆಯಾಗ್ತಿಯಾ ಅಂತ ಕೇಳ್ದಾ. ನಾನು ಸಿಟ್ ಬಂದು ಕಪಾಳಕ್ಕೆ ಹೊಡ್ದಬಿಟ್ಟೆ. ಅವನು ಇಡೀ ದಿನಾ  ಮೂಲೆಯಲ್ಲಿ ಕುತ್ಕೊಂಡು ಅಳ್ತಾ ಇದ್ದ. ಆಮೇಲೆ ನಂಗೆ ಪಾಪ ಅನ್ಸತು. ತಪ್ಪಾಯ್ತು ಸಾದಿಕಾ, ಸಿಟ್ಟಲ್ಲಿ ಹೊಡ್ದಬಿಟ್ಟೆ ಆದರೆ ನೀನ್ ಹಂಗ್ ಕೇಳುದು  ತಪ್ಪಲ್ವವೇನೋ ಅಂದೆ. ಯಾಕ್ ತಪ್ಪು. ಎಂತಾ ಕೇಳ್ಬಾರ್ದು ಕೇಳ್ದೆ ನಾನು , ನಿನ್ನ ಕಂಡ್ರ ನಂಗ್ ಭಾಳ್ ಇಷ್ಟ, ಸುಮಾರ್ ದಿವ್ಸದಿಂದ ನಿನ್ನ ಲವ್ ಮಾಡ್ತಾ ಇದ್ದೆ, ಮದುವೆ ಆಗ್ತಿಯೇನೇ ಅಂತ ಕೇಳುದೇ ದೊಡ್ಡ ತಪ್ಪಾ ಅಂದ್ಬಿಟ್ಟ. ಆಮೇಲೆ ಒಂದೆರಡ ದಿನ ನಾವಿಬ್ರೂ ಒಬ್ಬರಿಗೊಬ್ರು ಮಾತಾಡ್ತಾ ಇರ್ಲಿಲ್ಲ’ಎಂದು ಕೊಂಚ ಹೊತ್ತ ಮಾತು ನಿಲ್ಲಿಸಿದಳು ಶಶಿ. ಸಂಜೆಗತ್ತಲು ನಿಧಾನವಾಗಿ ಬೆಳಕನ್ನು ಕಬಳಿಸಲಾರಂಭಿಸಿತ್ತು. ’ಆದರೆ ಅವನ್ಜೊತೆಗೆ ಮಾತಾಡ್ದೇ ಇರುದ್ ನಂಗ್ ಸಾಧ್ಯವೇ ಆಗ್ಲಿಲ್ಲ. ನಾನೂ ಒಪ್ಕೊಂಡೆ. ಅವನಿಗ್ ಎಷ್ಟ್ ಖುಷಿಯಾಯ್ತು ಅಂದ್ರೆ ನಿಂತಲ್ಲೇ ಕುಣಿದಾಡಿಬಿಟ್ಟ ಮಾರಾಯಾ. ಆಶಾ ಮದುವೆ  ನಂತ್ರ ಮದುವೆ  ಮಾಡ್ಕೊಂಬಿಡ್ವಾ ಅಂದ. ಮದುವೆ ಆದ್ ಮೇಲೆ ಇಲ್ಲಿರುದ್ ಬೇಡ, ನಮ್ಮ ಹುಬ್ಬಳ್ಳಿಗೆ ಹೋಗಿಬಿಡ್ವಾ ಅಂದ. ದಿನವಿಡಿ ಅವನಿಗ್ ಸಂಭ್ರಮ. ಸಂಜೆ ಮನೆಗ್ ಹೋಗಬೇಕಾದ್ರೆ  ಅರ್ಧ ಕೇಜಿ ಜಿಲೇಬಿ ಕಟ್ಸಕೊಟ್ಟ. ನನ್ನಿಂದಾನೂ ಸಂತೋಷಪಡುವವರಿದ್ದಾರೆ ಅಂತ ನಂಗೆ ಭಯಂಕರ ಖುಷಿಯಾಯ್ತು’ಎಂದಳು ಶಶಿಯ ಮುಖದಲ್ಲೊಂದು ಸಾರ್ಥಕ ಭಾವ. ’ಮೊನ್ನೆ ನೀನ್ ಮನೆ  ಹತ್ರ ಬಂದಿದ್ದೆಯಂತಲ್ಲ. ಅವತ್ತು ಮನೆಲ್ ಎಲ್ಲಾ ವಿಷಯ ಗೊತ್ತಾಗ್ ಹೋಗಿತ್ತು. ಅವ್ನ ಹೆಸರ ಮುಂದೆ ನನ್ನ ಹೆಸರ್ ಬರೆದಿಟ್ಟಿದ್ದ ಕಾಗದಾ ತಂಗೊಂಡ್ ಆಶಾ ಅಮ್ಮನಿಗೆ ತೋರಿಸಿಬಿಟ್ಲು. ಅಮ್ಮ ನನ್ನನ್ನ ದನಕ್ ಬಡದಂಗ್  ಬಡದ್ಲು, ಆಶಾನೂ ಬಾಯಿಗೆ ಬಂದಾಂಗ್ ಮಾತನಾಡಿದ್ಲು. ಅಪ್ಪ ಅಂತೂ ಸೂಳೆಗಾರಿಕೆ ಮಾಡ್ತಿಯೇನೇ ಭೋಸುಡಿ ಅನ್ನೊ ಮಟ್ಟಕ್ಕೆ ಹೋದ’ಎಂದವಳ ಸಹನೆಯ ಕಟ್ಟೆಯೊಡೆದಿತ್ತು. ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ತನ್ನದೇ ತೊಡೆಯ ಮೇಲೆ ತಲೆಯಿಟ್ಟುಕೊಂಡು ಬಿಕ್ಕತೊಡಗಿದಳು ಶಶಿ. ನನಗೆ ಅಕ್ಷರಶ: ದಿಕ್ಕು ತಪ್ಪಿದ ಭಾವ. ಆಕೆಯನ್ನು ಹೇಗೆ ಸಂತೈಸುವುದೆನ್ನುವುದು ಅರ್ಥವಾಗದೇ ಆಕೆಯ ಭುಜದ ಮೇಲೆ ಕೈಯಿಟ್ಟೆ. ಕೈಯಿಡುವುದಕ್ಕೂ ನನಗೆ ಹಿಂಜರಿಕೆ. ’ಅಳ್ಬೇಡಾ ಮಾರಾಯ್ತಿ  ಪ್ಲೀಸ್’ಎನ್ನುವಷ್ಟರಲ್ಲಿ ಶಶಿ ಸ್ವಲ್ಪ ಸಮಾಧಾನಿಸಿ ಮುಖವೆತ್ತಿ ಕುಳಿತಳು. ತನ್ನ ಕೈಗಳಿಂದ ಕಣ್ಣು ಮೂಗುಗಳನ್ನೊರೆಸಿಕೊಳ್ಳುತ್ತ ಒಂದು ಕ್ಷಣ ಮೌನವಾದಳು. ’ಬಿಟ್ಟಾಕು ಶಶಿ, ಎಲ್ಲರ ಮನೆಲೂ ಎಂತಾರೂ ಒಂದ್ ಸಮಸ್ಯೆ ಇದ್ದಿದ್ದೇ, ನನ್ನಿಂದ ಏನಾದ್ರೂ ಸಹಾಯ ಆಗ್ಬೇಕಿದ್ರ ಹೇಳು, ನಾ ಮಾತಾಡ್ಲಾ ಫಕೀರಪ್ಪನ ಹತ್ರ ಸಾದಿಕ್ ನ ವಿಷ್ಯ’ಎಂದೆ. ’ಆಗುದಾದ್ರ ಮಾತಾಡ್ ಸತೀಶಾ, ನಮ್ ಮದ್ವೆ ಮಾಡ್ಸಿದ್ ಪುಣ್ಯಾ ಆದ್ರೂ ಸಿಗಬೌದು ನಿಂಗೆ. ನಿನ್ನ ಮಾತು ಅಮ್ಮ ಆಗ್ಲಿ , ಅಪ್ಪ ಆಗ್ಲಿ ಕೇಳೇ ಕೇಳ್ತಾರೆ ಪ್ಲೀಸ್’ಎಂದು ನನ್ನ ಕೈ ಹಿಡಿದುಕೊಂಡಳು. ಅಷ್ಟರಲ್ಲಾಗಲೇ ಕತ್ತಲು ಬೆಳಕನ್ನು ನುಂಗಿಬಿಟ್ಟಿತ್ತು. ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದಷ್ಟು ಅಂಧಕಾರ. ’ಸರಿ  ಬಾ ಈಗ, ಈ ಹೊತ್ತಲ್ ಯಾರಾದ್ರೂ ನಮ್ಮನ್ ಇಲ್ಲಿ ನೋಡಿದ್ರ್ ಅದೊಂದ್ ಕಿರಿಕಿರಿ. ಇನ್ನೊಂದೆರಡ ದಿವ್ಸದಲ್ಲಿ ನಿಮ್ಮ ಮನೆಲ್ ಮಾತಾಡ್ತೆ. ಸಾದಿಕ್ ನ ಅಮ್ಮನ ಹತ್ರಾನೂ ಮಾತಾಡಿ ಒಪ್ಪಸ್ತೆ ಬಾ’ಎನ್ನುತ್ತ ಬೆಂಚಿನಿಂದೆದ್ದು ಹೊರಡಲನುವಾದೆ. ಆಕೆಯ ಮುಖದಲ್ಲೊಂದು ಸಂತೃಪ್ತಿಯ ಭಾವ . ಗೇಟು ದಾಟಿ ನಾವಿಬ್ಬರೂ ಪಾರ್ಕಿನಿಂದ ಹೊರಬಂದೆವು. ಆಕೆಯ ತನ್ನ ಮನೆಯ ದಿಕ್ಕಿಗೆ ತೆರಳಿದರೆ ನಾನು ನನ್ನ ಮನೆಯತ್ತ ತೆರಳಿದೆ. 

ನಾನು ಮನೆ ತಲುಪುವ ಹೊತ್ತಿಗೆ ಎಂಟು ಗಂಟೆ. ಅಮ್ಮ ಟಿವಿಯಲ್ಲಿ ಏನೋ ಧಾರಾವಾಹಿ ನೋಡುತ್ತ ಕುಳಿತ್ತಿದ್ದಳು. ಅಮ್ಮನಿಗೆ ಅಪಾರವಾದ ಧಾರಾವಾಹಿ ಹುಚ್ಚು. ’ಎಲ್ಲಿಗ್ ಹೋಗಿದ್ಯಾ ’ ಅಂದ ಅಮ್ಮನಿಗೆ ’ಸದಾನಂದನ ಮನೆಗೆ’ಎಂದು ನುಡಿದೆ. ನನ್ನ ಹೈಸ್ಕೂಲು ದಿನಗಳ ಸಹಪಾಠಿ ಸದಾನಂದ ನನ್ನ ಮನೆಗೆ ಆಗಾಗ ಬರುತ್ತಿರುತ್ತಾನೆ. ನಾಳೆ ಅವನು ಮನೆಗೆ ಬಂದಾಗ ಬಾಯಿಮಾತಿಗೆ ಅಮ್ಮ ’ ನಮ್ಮ ಸತೀಶಾ ಮನೆಗ್ ಬಂದಿದ್ನಾ ಸದಾ’ಎಂದರೇ ಅವನು ಇಲ್ಲ ಎಂದುಬಿಟ್ಟರೆ ಅನಾಹುತವಾದೀತು ಎಂಬ ಕಾರಣಕ್ಕೆ ಪಾರ್ಕಿನಿಂದ ಸದಾನ ಮನೆಗೆ ಹೋಗಿ ಒಂದತ್ತು ನಿಮಿಷ ಅವನೊಟ್ಟಿಗೆ ಮಾತನಾಡಿಯೇ ಬಂದಿದ್ದೆ. ಅಮ್ಮ ಹೆಚ್ಚೆನೂ ವಿಚಾರಿಸಲಿಲ್ಲ. ಅವಳಿಗೆ ಧಾರಾವಾಹಿಯ ನಾಯಕಿಯದ್ದೇ ಚಿಂತೆ. ಅಮ್ಮನನ್ನು ಅವಳ ಪಾಡಿಗೆ ಬಿಟ್ಟು ನನ್ನ ಕೋಣೆಗೆ ಹೋದೆ. ಮನಸಿಗೇಕೋ ಅಶಾಂತಿ. ಸ್ನಾನ ಮಾಡಿದರೆ ಕೊಂಚ ನೆಮ್ಮದಿ ಸಿಗಬಹುದು ಎನ್ನಿಸಿತು. ಅಲ್ಲಿಯೇ ತೂಗುಹಾಕಿದ್ದ ಟವೆಲ್ಲನ್ನು ಎತ್ತಿಕೊಂಡವನೇ ಬಚ್ಚಲಿಗೆ ನಡೆದೆ. ನನ್ನ ಸ್ನಾನ ಮುಗಿಸುವಷ್ಟರಲ್ಲಿ ಅಮ್ಮನ ಧಾರಾವಾಹಿಯೂ ಮುಗಿದಿತ್ತು. ’ಊಟಕ್ ಹಾಕ್ಲೇನೋ ಮಗಾ’ಎನ್ನುವ ಮಾತು ಅಮ್ಮನದು. ಎಂಟೂವರೆಗೆಲ್ಲ ಅಪ್ಪ ಊಟ ಮಾಡಿಬಿಡುತ್ತಾರೆ. ಅವರೊಟ್ಟಿಗೆ ನಾನೂ ಊಟ ಮಾಡುವುದು ರೂಡಿ. ಊಟ ಮಾಡುವ ಸಮಯವೇ ಆಗಿದ್ದರೂ ನನಗಂದು ಹಸಿವಿಲ್ಲ. ಒತ್ತಾಯಪೂರ್ವಕ ಊಟಕ್ಕೆ ಕೂತೆ. ಎರಡು ಚಪಾತಿ, ಚೂರು ಪಲ್ಯ ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿದಂತಾಗಿ , ’ನಂಗೆ ಸಾಕೇ ಅಮ್ಮ’ಎನ್ನುತ್ತ ಎದ್ದುಬಿಟ್ಟೆ. ’ಥೋ, ಈ ಹುಡುಗಂದು ದಿನದಿಂದ ದಿನಕ್ಕೆ ಊಟ ಕಮ್ಮಿ ಆಗ್ತಾ ಇದೆಯಪ್ಪ, ಎಂತಾ ಕತೆಯೋ’ಎಂದು ವಟಗುಟ್ಟಲಾರಂಭಿಸಿದಳು ಅಮ್ಮ. ಅದು ನನಗೆ ಹೊಸದೇನೂ ಅಲ್ಲ. ಕೊಂಚ ಹೊತ್ತು ಟಿವಿ ನೋಡೋಣವೆಂದುಕೊಂಡರೂ ಕಾಡುತ್ತಿದ್ದ ಅನ್ಯಮನಸ್ಕತೆಯಿಂದಾಗಿ ಟಿವಿ ನೋಡುವುದು ಸಾಧ್ಯವಾಗಲಿಲ್ಲ. ’ನಾನು ನಿದ್ದೆ ಮಾಡ್ತೆ ಅಮ್ಮಾ, ನಾಳೆ ಬೇಗ  ಹೊಗ್ಬೇಕು’ಎಂದು ಅಮ್ಮನಿಗೆ ಹೇಳಿ ನನ್ನ ಕೋಣೆಯ ಬಾಗಿಲು ಹಾಕಿಕೊಂಡು  ದೀಪವಾರಿಸಿ ಮಲಗಿಬಿಟ್ಟೆ. 

ಎರಡೂ ಅಂಗೈಗಳನ್ನು ತಲೆಯ ಕೆಳಗಿಟ್ಟುಕೊಂಡು ತಿರುಗುತ್ತಿದ್ದ ಫ್ಯಾನನ್ನೇ ನೋಡುತ್ತ ಅಂಗಾತ ಮಲಗಿದ್ದವನ ಕಣ್ಗಳಿಗೆ ನಿದ್ರೆಯ ಸುಳಿವೇ ಇರಲಿಲ್ಲ. ನನಗೆ ಶಶಿಯ ಕತೆಗಿಂತ ನನ್ನ ವರ್ತನೆಯ ಬಗ್ಗೆಯೇ ವಿಚಿತ್ರವೆನ್ನಿಸಿತ್ತು. ಆಕೆ ಸಾದಿಕ್ ನ ಹೆಸರು ಹೇಳಿದಾಗ ನನ್ನಲ್ಲೊಂದು ನಿರಾಸೆಯುಂಟಾಗಿದ್ದು ಏಕೆ ಎನ್ನುವುದು ನನಗೆ ಅರ್ಥವಾಗಿರಲಿಲ್ಲ. ನನಗರಿವಿಲ್ಲದಂತೆಯೇ ನಾನೇನಾದರೂ ಶಶಿಯನ್ನು ಪ್ರೀತಿಸುತ್ತಿದ್ದೇನಾ ಎಂಬ ಅನುಮಾನ ಕಾಡತೊಡಗಿತ್ತು. ಔಷಧಾಲಯಕ್ಕೆ ಹೋದಾಗಲೆಲ್ಲ ಆಕೆಯನ್ನು ತಮಾಷೆ ಮಾಡಿದ್ದು, ಅವಳ ಹೆತ್ತವರು ಅವಳಿಗೆ ಹೊಡೆದಾಗ ಕಾಳಜಿ ತೋರಿಸಿದ್ದು, ಅವಳಿಗೆ ಚಾಕ್ಲೇಟ್ ಕೊಟ್ಟಿದ್ದು ಎಲ್ಲವೂ ಅವಳ ಮೇಲಿನ ಪ್ರೀತಿಯಿಂದಲೇ ಇರಬಹುದಾ ಎಂಬ ವಿಚಾರವೊಂದು ಕೊರೆಯಲಾರಂಭಿಸಿತ್ತು. ಹಾಗೆಂದು ಶಶಿ ಸಾದಿಕ್ ನ ಹೆಸರನ್ನು ಹೇಳಿದ ಒಂದು ಕ್ಷಣ ನನಗೆ ಬೇಸರವಾಗಿದ್ದೇನೋ ನಿಜ, ಆದರೆ ಅದು ಕ್ಷಣಿಕವಷ್ಟೇ. ಮನೆಗೆ ಬಂದ ಮೇಲೆ ನನ್ನನ್ನದು ತುಂಬ ಕಾಡಲಿಲ್ಲ. ಕಿರಿಕಿರಿಯಾಗಿದ್ದರೂ ಅದು ಶಶಿಯ ಕತೆ ಕೇಳಿಯೇ ಹೊರತು ಆಕೆಯ ಪ್ರೇಮಪ್ರಸಂಗಕ್ಕಲ್ಲ. ಶಶಿ ಪಾರ್ಕಿನಲ್ಲಿ ಸಿಗುತ್ತೇನೆಂದಾಗ ಆಕೆ ಪ್ರೀತಿಯಂಥಹ ವಿಷಯವೇ ಹೇಳುತ್ತಾಳೆ ಎಂದು ನಾನು ಕಲ್ಪಿಸಿಕೊಂಡುಬಿಟ್ಟಿದ್ದೆ. ಮಾತಿಗಾರಂಭಿಸುವಾಗ ಏನೋ ಹೇಳಬೇಕು ಎಂದಾಗಲೇ ಆಕೆ ಪ್ರೇಮದ ಕುರಿತಾಗಿಯೇ ಹೇಳುತ್ತಾಳೆ ಎಂದು ಗ್ರಹಿಸಿಬಿಟ್ಟಿದ್ದೆ. ’ಸತೀಶಾ ಐಲವ್ಯೂ’ಎನ್ನುತ್ತಾಳೆ ಎನ್ನುವಷ್ಟರಲ್ಲಿ ಆಕೆ ಸಾದಿಕ್ ನ ಹೆಸರನ್ನು ಹೇಳಿದ್ದು ನಾನು ಊಹಿಸಲಾಗದ ಸಂಗತಿಯಾಗಿತ್ತು. ಒಂದು ವೇಳೆ ಆಕೆ ನನ್ನ ಹೆಸರೇ ಹೇಳಿದ್ದರೂ ನಾನು ಖಂಡಿತವಾಗಿಯೂ ನಿರಾಕರಿಸಿಬಿಡುತ್ತಿದ್ದೆ. ಏಕೆಂದರೆ ನನಗೆ ಆಕೆಯೆಡೆಗಿದ್ದಿದ್ದು ಕರುಣೆಯೇ ಹೊರತು ಪ್ರೇಮವಲ್ಲ. ಬದುಕಿನಲ್ಲಿ ಮೊದಲ ಬಾರಿ ಹುಡುಗಿಯೊಬ್ಬಳು ನನಗೆ ಪ್ರೇಮ ನಿವೇದಿಸುತ್ತಿದ್ದಾಳೆ ಎಂದುಕೊಂಡವನಿಗೆ ಬೇರೊಬ್ಬನ ಹೆಸರು ಕೇಳಿದಾಗ  ಉಂಟಾದ ಕ್ಷಣಿಕ ನಿರಾಸೆ ನನ್ನನ್ನು ಕಾಡಿತ್ತು ಎಂಬುದು ನನಗರ್ಥವಾಗಿತ್ತು. ನನ್ನ ಗೊಂದಲಕ್ಕೆ ಉತ್ತರ ಸಿಕ್ಕಾಗ ನನ್ನಲ್ಲೊಂದು ಸಮಾಧಾನದ ನಿಟ್ಟುಸಿರು. ಏನೇ ಆದರೂ ನಾಳೆ ನಾಡಿದ್ದರಲ್ಲಿ ಶಶಿಯ ಮನೆಯವರ ಬಳಿ ಮಾತನಾಡಿಬಿಡಬೇಕು ಎಂದುಕೊಂಡೆ. ಶಶಿಯ ತಂಗಿ ಗೀತಾ, ಚಿಕನ್ ಅಂಗಡಿಯ ಗೌಸು ಮಹ್ಮದನ ಜೊತೆ ಓಡಾಡುತ್ತಿದ್ದದ್ದು ಗೊತ್ತಿರದ ವಿಷಯವೇನಲ್ಲ. ಗೌಸು ಪ್ರತಿಭಾನುವಾರವೂ ಕೇಜಿಗಟ್ಟಲೇ ಚಿಕನ್ನು ಉಚಿತವಾಗಿಯೇ ನಂಜಮ್ಮನ ಮನೆಗೆ ತಲುಪಿಸುತ್ತಿದ್ದ ಎನ್ನುವ ಕತೆಯಂತೂ ಊರಿನಲ್ಲಿ ಎಲ್ಲರಿಗೂ ಚಿರಪರಿಚಿತ. ಅವನ ಕೆಲಸದಾಳು ಇರ್ಫಾನ್ , ಭಾನುವಾರದಂದು ಕೋಳಿಯ ಮಾಂಸವನ್ನು ಕಪ್ಪು ಪ್ಲಾಸ್ಟಿಕ್ ಕವರಿನಲ್ಲಿ ನಂಜಮ್ಮನ ಮನೆಗೆ ತಲುಪಿಸಿ ಹೋಗಿದ್ದನ್ನು ಸ್ವತ: ನಾನೇ ಒಂದೆರಡು ಬಾರಿ ಕಂಡದ್ದಿದೆ. ಗೌಸು ಮೂರು ಮಕ್ಕಳ ತಂದೆ. ಅವನೊಟ್ಟಿಗೆ ಮಗಳು ಓಡಾಡುವಾಗ ಸುಮ್ಮನಿದ್ದ ಶಶಿಯ ಹೆತ್ತವರು , ಈಗ ಸಾದಿಕ್ ಶಶಿಯನ್ನು ಮದುವೆಯಾಗ್ತೇನೆ ಎಂದಾಗ ಧರ್ಮದ ವಿಷಯ ಎತ್ತಿದ್ದು ನನಗೆ ಬಲು ವಿಚಿತ್ರವಾಗಿ ಕಂಡಿತ್ತು. ಹೇಗಾದರೂ ಸರಿ ನಂಜಮ್ಮನನ್ನು ಒಪ್ಪಿಸಿಯೇ ತೀರಬೇಕು ಎಂದು ನಿಶ್ಚಯಿಸಿದೆ.  ಸಾದಿಕನ ಅಮ್ಮನ ಬಳಿಯೂ ಒಮ್ಮೆ ಮಾತನಾಡುವುದು ಒಳ್ಳೆಯದು. ಸಾದಿಕ್ ಒಳ್ಳೆಯ ಹುಡುಗನೇ . ಅವನು ನಿಜವಾದ ಮುಸ್ಲಿಮನೇ ಅಲ್ಲ ಎನ್ನುವುದು ಅವನ ಧರ್ಮಗುರುಗಳ ದೂರು. ಏಕೆಂದರೆ ಅವನು ನಿಯಮಿತವಾಗಿ ನಮಾಜು  ಮಾಡುವವನಲ್ಲ. ತಿಂಗಳಿಗೊಮ್ಮೆ ಮಸೀದಿಗೆ ಹೋದರೆ ಹೆಚ್ಚು. ರಮ್ಜಾನಿನ ದಿನಗಳಲ್ಲಿ ಅವನ ಸ್ನೇಹಿತರೆಲ್ಲರೂ ಉಪವಾಸವಿಟ್ಟರೆ ಇವನು ಮಾತ್ರ ಹೊತ್ತುಹೊತ್ತಿಗೆ ಹೊಟ್ಟೆತುಂಬ ಊಂಡುಬಿಡುತ್ತಿದ್ದ. ಇಷ್ಟಾದರೆ ಸಮಸ್ಯೆಯಿರಲಿಲ್ಲ. ಮಂಗಳವಾರವಾದರೇ ಸಾಕು ಗ್ರಾಮದೇವಿಯ ದೇಗುಲದ ತೆರಳಿ ದಾಸೋಹದ ಸರತಿಯಲ್ಲಿ ಕುಳಿತುಬಿಡುತ್ತಿದ್ದ. ಮನೆಯಲ್ಲೇನೋ ಸಮಸ್ಯೆಯಾದರೆ ಮಾರುತಿಯ ದೇಗುಲಕ್ಕೆ ತೆರಳಿ ಅಲ್ಲಿನ ಅರ್ಚಕರಿಗೆ ಹತ್ತು ರೂಪಾಯಿ ಕೊಟ್ಟು ಕವಡೆ ಶಾಸ್ತ್ರ ಕೇಳಿಬರುತ್ತಿದ್ದ. ಇಂಥಹ ಮುಸ್ಲಿಮನಲ್ಲದ ಮುಸ್ಲಿಮನಾಗಿದ್ದ ಸಾದಿಕನಿಗೆ ಅವನ ಸಮುದಾಯದಲ್ಲಿದ್ದ  ಬೆಲೆ ಅಷ್ಟಕಷ್ಟೇ. ಅವನ ಕಡೆಯವರಿಂದ ಮದುವೆಗೆ ತುಂಬ ಪ್ರತಿರೋಧ ಬರಲಿಕ್ಕಿಲ್ಲ ಎನ್ನಿಸುವಷ್ಟರಲ್ಲಿ ನನಗೆ ನಿದ್ರೆ ಬಂದಾಗಿತ್ತು. 

(ಮುಂದುವರೆಯುವುದು)



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
kushi keerthi
kushi keerthi
7 years ago

very nice story…waiting to  read the next part…pls publish asap.

thank you

girija
girija
7 years ago

ಅದ್ಭುತ ಕತೆ.ಕತೆಯ ಪಾತ್ರವೇ ನಾವಾಗಿ,ಕತೆಯ ನಡುವೆಯೇ ನಾವಿರುವ೦ತೆ ಬರೆಯುವುದು ಒ೦ದು ಕಲೆ.ಈ ಕತೆ ಹಾಗೆ ಅನ್ನಿಸುತ್ತದೆ.ಅಭಿನ೦ದನೆಗಳು.ಮು೦ದಿನ ಭಾಗಗಳಿಗಾಗಿ ಕಾಯುತ್ತೇನೆ

2
0
Would love your thoughts, please comment.x
()
x