ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 5): ಪ್ರಸಾದ್ ಕೆ.

ಇಲ್ಲಿಯವರೆಗೆ

ಇತ್ತ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ದಂಪತಿಗಳ ವಿವಾಹಬಂಧನವೆಂಬ ಕನಸಿನ ಸೌಧ ದಿನೇದಿನೇ ಕುಸಿಯತೊಡಗುತ್ತದೆ. ತನ್ನ ವಿಲಕ್ಷಣ ದುರಭ್ಯಾಸಗಳ ಹೊರತಾಗಿ, ಪೌಲ್ ತನ್ನ ಪತ್ನಿಯ ಮೇಲೆಸಗುವ ದೈಹಿಕ ಹಿಂಸೆ ದಿನಕಳೆದಂತೆ ಭೀಕರವಾಗುತ್ತಾ ಹೋಗುತ್ತದೆ. ಪ್ರತೀಬಾರಿಯೂ ಅನಾರೋಗ್ಯವೆಂದು ದಿನಗಟ್ಟಲೆ ರಜೆ ಹಾಕಿ, ಮರಳಿ ಬಂದಾಗ ಕಾರ್ಲಾಳ ಮುಖದ ಮತ್ತು ದೇಹದ ಮೇಲೆ ಅಚ್ಚೊತ್ತಿದ್ದ ಕಲೆಗಳು ಕಾರ್ಲಾಳ ಸಹೋದ್ಯೋಗಿಗಳಿಗೆ ಬೇರೆಯದೇ ಕಥೆಯನ್ನು ಹೇಳುತ್ತವೆ. 1992 ರ ಡಿಸೆಂಬರ್ 27 ರಲ್ಲಂತೂ ಪೌಲ್ ತನ್ನ ಫ್ಲ್ಯಾಷ್ ಲೈಟ್ ಬಳಸಿ ಥಳಿಸಿದ ಪರಿಣಾಮ ಕಾರ್ಲಾಳ ತಲೆ, ಮುಖ ಮತ್ತು ದೇಹದ ಕೆಲಭಾಗಗಳಲ್ಲಿ ತೀವ್ರವಾದ ಗಾಯಗಳಾಗುತ್ತವೆ. ಮತ್ತೊಮ್ಮೆ ವಾರದುದ್ದಕ್ಕೂ ರಜೆಯನ್ನು ಕೇಳಿ, ಮರಳಿ ಉದ್ಯೋಗಕ್ಕೆ 1993 ರ ಜನವರಿ 4 ರಂದು ಬಂದ ಕಾರ್ಲಾಳ ಗಾಯಗಳಿಂದ ಜರ್ಝರಿತವಾದ ಮುಖವನ್ನು ನೋಡಿ ಕಳವಳಗೊಳ್ಳುವ ಕಾರ್ಲಾಳ ಸಹೋದ್ಯೋಗಿಗಳು ಕೂಡಲೇ ಬರುವಂತೆ ಆಕೆಯ ಹೆತ್ತವರಿಗೆ ಸುದ್ದಿಮುಟ್ಟಿಸುತ್ತಾರೆ.  

ವಿಷಯ ತಿಳಿದ ಕೂಡಲೇ ಓಡೋಡಿ ಬರುವ ಕಾರ್ಲಾಳ ಹೆತ್ತವರು ತಮ್ಮ ಮುದ್ದಿನ ಮಗಳ ಮುಖವನ್ನು ನೋಡಿ ಕಂಗಾಲಾಗುತ್ತಾರೆ. ಪೌಲ್ ಬರ್ನಾರ್ಡೊ ತನ್ನ ಪತ್ನಿ ಕಾರ್ಲಾಳ ಮೇಲೆ ಮದೋನ್ಮತ್ತ ಪಶುವಿನಂತೆ ದಾಳಿ ನಡೆಸಿದ್ದ. ಕಾರ್ಲಾಳ ಎರಡೂ ಕಣ್ಣುಗಳ ಸುತ್ತ ಕೆಂಪುಬಣ್ಣದ ದಟ್ಟವಾದ ಅಚ್ಚು ಕನ್ನಡಕದಂತೆ ಮೂಡಿಬಂದಿತ್ತು. ತಲೆಯ ಹಿಂಭಾಗಕ್ಕೆ ಗಟ್ಟಿಯಾದ ಹೊಡೆತ ಬಿದ್ದ ಪರಿಣಾಮ ಮೆದುಳು ತಲೆಬುರುಡೆಯ ಮುಂಭಾಗಕ್ಕೆ ಅಪ್ಪಳಿಸುವುದರ ಪರಿಣಾಮವೂ ಹೀಗಾಗುವ ಸಾಧ್ಯತೆಗಳುಂಟು. ವೈಜ್ಞಾನಿಕ ಭಾಷೆಯಲ್ಲಿ “ರಕೂನ್ ಐಸ್'' ಎಂದು ಇದನ್ನು ಕರೆಯುತ್ತಾರೆ. ಇದೊಂದು ರಸ್ತೆ ಅಪಘಾತದಲ್ಲಿ ಆದ ಗಾಯವಷ್ಟೇ ಎಂದು ತಳ್ಳಿ ಹಾಕಿ ಪೌಲ್ ನನ್ನು ಪಾರುಮಾಡಲು ಯತ್ನಿಸುವ ಕಾರ್ಲಾಳ ವಾದವನ್ನು ಈ ಬಾರಿ ಆಕೆಯ ಹೆತ್ತವರು ಕಿವಿಗೆ ಹಾಕಿಕೊಳ್ಳುವುದಿಲ್ಲ. ನಿಸ್ತೇಜವಾದ ಕಣ್ಣುಗಳು, ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ್ದ ಚಿಹ್ನೆಗಳು, ಒಣಗಿದ ಗಾಯಗಳು… ಎಲ್ಲಕ್ಕಿಂತಲೂ ಭಯಹುಟ್ಟಿಸುವಂತಿದ್ದ ಕಣ್ಣುಗಳ ಸುತ್ತಲೂ ಟ್ಯಾಟೂವಿನಂತೆ ಮೂಡಿಬಂದಿದ್ದ ಕೆಂಪನೆಯ ಆಕಾರವನ್ನು ಕಂಡು ಗಾಬರಿಗೊಂಡ ಕಾರ್ಲಾಳ ಪೋಷಕರು ಆಕೆಯನ್ನು ಸ್ಥಳೀಯ ಸೈಂಟ್ ಕ್ಯಾಥರೀನ್ ಜನರಲ್ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ಚಿಕಿತ್ಸೆಯನ್ನು ಕೊಡಿಸುತ್ತಾರೆ. 

ಕಾರ್ಲಾಳ ಪಕ್ಕೆಲುಬು ಮುರಿದಿತ್ತು. ತಲೆಯ ಒಂದು ಭಾಗ ಊದಿಕೊಂಡಿತ್ತು. ಮುಖ, ಕತ್ತು, ಕೈಗಳ ಭಾಗದಲ್ಲಿ ಥಳಿಸಿದ ಪರಿಣಾಮವಾಗಿ ತರಚಿದ ಗಾಯಗಳಾಗಿದ್ದವು. ಅಡಿಯಿಂದ ಮುಡಿಯವರೆಗೂ ದೇಹದಲ್ಲಿ ಕಾಣಬರುವ ಎಲ್ಲಾ ಗಾಯಗಳನ್ನು ಚಿತ್ರಗಳ ಸಮೇತ ಆಸ್ಪತ್ರೆಯು ದಾಖಲಿಸುತ್ತದೆ. ಆದ ಗಾಯಗಳ ತೀವ್ರತೆಯನ್ನು ಮನಗಂಡ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಪೋಲೀಸರಿಗೂ ವಿಷಯವನ್ನು ತಿಳಿಸಿ ಬರಹೇಳುತ್ತಾರೆ. ತಕ್ಷಣವೇ ದೌಡಾಯಿಸುವ ಎನ್.ಆರ್.ಪಿ ಅಧಿಕಾರಿಗಳು “ತಾನೋರ್ವ ಗಂಡನಿಂದ ದೈಹಿಕ ಮತ್ತು ಮಾನಸಿಕವಾಗಿ ಪೀಡಿಸಲ್ಪಟ್ಟ ಹೆಣ್ಣು'' ಎಂಬ ಹೇಳಿಕೆಯನ್ನು ಕಾರ್ಲಾಳಿಂದ ಅಧಿಕೃತವಾಗಿ ದಾಖಲಿಸುತ್ತಾರೆ. ಇನ್ನು ವಾಪಾಸು ತಾನು ಆ ಮನೆಗೆ ತೆರಳುವುದಿಲ್ಲವೆಂದು ಒಲ್ಲದ ಮನಸ್ಸಿನಿಂದಲೇ ಒಪ್ಪಿ, ಕಾರ್ಲಾ ತನ್ನ ಹೆತ್ತವರು ಮತ್ತು ತಂಗಿ ಲೋರಿಯೊಂದಿಗೆ ತನ್ನ ಹಿಂದಿನ ಮನೆಯಲ್ಲೇ ಉಳಿಯುತ್ತಾಳೆ. ಒಂದೆರಡು ದಿನಗಳಲ್ಲೇ ಕಾರ್ಲಾ ತನ್ನ ಪೋರ್ಟ್ ಡಾಲ್-ಹೌಸಿ ಮನೆಗೆ ತೆರಳಿ ಅಗತ್ಯ ವಸ್ತುಗಳನ್ನು ಕೊನೆಯ ಬಾರಿಗೆ ಪಡೆದುಕೊಂಡು, ತಾಯಿಯ ಸಂಬಂಧಿಯೊಬ್ಬರ ಮನೆಯನ್ನು ಗುಟ್ಟಾಗಿ ಸೇರಿಕೊಳ್ಳುತ್ತಾಳೆ. ಕೂಡಲೇ ಪೌಲ್ ಬರ್ನಾರ್ಡೊ ನನ್ನು ಬಂಧಿಸುವ ಅಧಿಕಾರಿಗಳು, ನಂತರ ಸಂಧಾನ ಮತ್ತು ದಂಪತಿಯರ ಭರವಸೆಗಳನ್ನು ಆಧರಿಸಿ ಕೆಲವು ಕಾನೂನಿನ ಷರತ್ತುಗಳೊಂದಿಗೆ ಆತನನ್ನು ಬಿಡುಗಡೆ ಮಾಡುತ್ತಾರೆ.    

1992 ರ ಎಪ್ರಿಲ್ ತಿಂಗಳಿನಲ್ಲಿ ನಡೆದ ಕ್ರಿಸ್ಟನ್ ಫ್ರೆಂಚ್ ಳ ಕೊಲೆಯ ತರುವಾಯ ತ್ವರಿತಗೊಂಡ ತನಿಖೆಯ ಹಿನ್ನೆಲೆಯಲ್ಲಿ ಶಂಕಿತ ಅಪರಾಧಿಗಳ ಪಟ್ಟಿ ಮತ್ತಷ್ಟು ಪರಿಪೂರ್ಣಗೊಳ್ಳುತ್ತಾ, ಸಂಗ್ರಹಿತ ಮಾಹಿತಿಗಳು ಮತ್ತು ಸಾಕ್ಷ್ಯಾಧಾರಗಳಿಂದ ಮತ್ತಷ್ಟು ನಿಖರವಾಗುತ್ತಾ ಹೋಗುತ್ತದೆ. ಒಂದಿಬ್ಬರು ಮಹಿಳೆಯರಿಂದ `ವ್ಯಕ್ತಿಯೊಬ್ಬ ತಮ್ಮನ್ನು ಸದಾಕಾಲ ಹಿಂಬಾಲಿಸುತ್ತಿದ್ದಾನೆ' ಎಂಬ ದೂರಿನ ಆಧಾರದಲ್ಲಿ ಪೌಲ್ ಬರ್ನಾರ್ಡೊ ನ ಬಾಗಿಲು ತಟ್ಟುವ ಅಧಿಕಾರಿಗಳು ಸಂಕ್ಷಿಪ್ತವಾಗಿ ಮೊದಲ ಹಂತದ ವಿಚಾರಣೆಯನ್ನು ನಡೆಸುತ್ತಾರೆ. ಆದರೆ ಈ ಹಿಂಬಾಲಿಕೆಯ ಪ್ರಕರಣವು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಸೊರಗಿ ತನಿಖೆಯು ಹಳ್ಳಹಿಡಿಯುತ್ತದೆ. ಕಾರ್ಲಾಳ ತಂಗಿ ಟ್ಯಾಮಿಯ ಆಕಸ್ಮಿಕ ಸಾವು ಮತ್ತು ಸ್ಕಾರ್-ಬೋರೋ ನಗರದಲ್ಲಿ ನಡೆದ ಸರಣಿ ಅತ್ಯಾಚಾರದ ಪ್ರಕರಣಗಳಲ್ಲೂ ಹಂತಕನ ಅಂಗಳದವರೆಗೆ ಹೋಗಿ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಬಂದದ್ದು ದುರಂತ. ಆದರೂ ಪೌಲ್ ಬರ್ನಾರ್ಡೊನ ಹೆಸರು ಹಲವು ಬಾರಿ ಬಂದ ಹಿನ್ನೆಲೆಯಲ್ಲಿ, ಕೊನೆಗೂ 1992 ರ ಡಿಸೆಂಬರ್ ತಿಂಗಳಿನಲ್ಲಿ, ಎರಡೂವರೆ ವರ್ಷಗಳ ಹಿಂದೆ ಪೌಲ್ ತನ್ನ ಸ್ವಇಚ್ಛೆಯಿಂದ ಕೊಟ್ಟ ಮಾದರಿಯನ್ನು ಡಿ.ಎನ್.ಎ ಮಾದರಿಯ ಪರೀಕ್ಷೆಗೆಂದು ಎತ್ತಿಕೊಳ್ಳಲಾಗುತ್ತದೆ. 

ದಿನಪತ್ರಿಕೆಗಳ ವರದಿಗಳನ್ನು ಓದುತ್ತಾ, ಮಾಧ್ಯಮಗಳು ಬಿತ್ತರಿಸುವ ವಾರ್ತಾ ಬುಲೆಟಿನ್ ಗಳನ್ನು ನೋಡುತ್ತಾ ಪೋಲೀಸ್ ಇಲಾಖೆಯ ಮೂರ್ಖತನದ ಬಗ್ಗೆ ನಗುತ್ತಿದ್ದ ಪೌಲ್ ಬರ್ನಾರ್ಡೊನ ಮುಂಬರುವ ದಿನಗಳೇನೂ ಅವನು ಅಂದುಕೊಂಡಂತೆ ಆರಾಮದಾಯಕವಾಗಿರಲಿಲ್ಲ. ಸಂದರ್ಭಗಳು ಬದಲಾಗಿದ್ದವು. ಕಾರ್ಲಾ ಹೊಮೋಲ್ಕಾ ಈಗ ಬೇರೆಯಾಗಿದ್ದಳು. ಆಕೆ ಯಾವ ಸಮಯದಲ್ಲೂ ಅತ್ಯಾಚಾರ. ಕೊಲೆ, ಹಿಂಸೆ, ವೀಡಿಯೋ ರಹಸ್ಯಗಳ ಬಗ್ಗೆ ಬಾಯಿಬಿಡಬಹುದಿತ್ತು. ನಗರದ ನಿವಾಸಿಗಳಿಗೆ, ಮಾಧ್ಯಮಗಳಿಗೆ ಮತ್ತು ಪೌಲ್ ಬರ್ನಾರ್ಡೊ ಗೆ ಯಾವ ಸುಳಿವಿಲ್ಲದಿದ್ದರೂ ಪೋಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಚಾಣಾಕ್ಷತನದಿಂದ ಕೊಲೆಗಾರನ ತೀರಾ ಹತ್ತಿರಕ್ಕೆ, ಗೌಪ್ಯವಲಯಗಳ ಮೂಲಗಳ ಪ್ರಕಾರ ಆಗಲೇ ಬಂದಾಗಿತ್ತು.    

***************

ಮೆಟ್ರೋ ಟೊರಾಂಟೋ ಸೆಕ್ಷುವಲ್ ಅಸಾಲ್ಟ್ ವಿಭಾಗದ ತನಿಖಾದಳದ ಅಧಿಕಾರಿಗಳು 1993 ರ ಫೆಬ್ರವರಿಯ ಮೊದಲ ಭಾಗದಲ್ಲಿ ಕಾರ್ಲಾ ಹೊಮೋಲ್ಕಾಳ ಬಾಗಿಲು ತಟ್ಟಿದಾಗ ಅವರಿಗೆ ಸಿಕ್ಕಿದ್ದು ಆಕೆಯ ಗಂಡನ ಅಮಾನವೀಯ ದೌರ್ಜನ್ಯದ ಕಥೆ ಮಾತ್ರ. ಮಾತುಕತೆಯುದ್ದಕ್ಕೂ ತನ್ನನ್ನು ಗಂಡನಿಂದ ನಿರಂತರವಾಗಿ ದೌರ್ಜನ್ಯಕ್ಕೊಳಗಾದ ಓರ್ವ “ಪೀಡಿತೆ'' ಎಂದಷ್ಟೇ ಹೇಳಿಕೊಂಡ ಕಾರ್ಲಾ ಯಾವ ಕಾರಣಕ್ಕೂ ನಡೆದ ಅಪರಾಧಗಳ ಬಗ್ಗೆ ಚಕಾರವೆತ್ತಿರಲಿಲ್ಲ. ಆದರೆ ಮುಂದೆ ಬರಲಿರುವ ಆಪತ್ತಿನ ವಾಸನೆ ಅವಳ ಮೂಗಿಗೆ ಆಗಲೇ ಅಡರಿತ್ತು. ಮೆಟ್ರೋ ಟೊರಾಂಟೋ ಸೆಕ್ಷುವಲ್ ಅಸಾಲ್ಟ್ ವಿಭಾಗ, ಗ್ರೀನ್ ರಿಬ್ಬನ್ ತನಿಖಾ ದಳ ಮತ್ತು ಎನ್.ಆರ್.ಪಿ ಗಳು ಅಪರಾಧಗಳ ಜಾಡು ಹಿಡಿಯುತ್ತಾ ತೀರಾ ಹತ್ತಿರ ಬಂದಿರುವುದನ್ನು ಅರಿತುಕೊಳ್ಳಲು ಮಹಾಬುದ್ಧಿವಂತಿಕೆಯೇನೂ ಬೇಕಾಗಿರಲಿಲ್ಲ. ಅಲ್ಲದೆ ಇಂದಲ್ಲಾ ನಾಳೆ ಈ ಗುಟ್ಟು ರಟ್ಟಾಗುವ ಸಂಭವನೀಯತೆಯಂತೂ ಇದ್ದೇ ಇರುವುದರಿಂದ ಬಾಯಿಬಿಡುವುದೇ ಲೇಸು ಎಂದು ಕಾರ್ಲಾ ನಿರ್ಧರಿಸಿಯಾಗಿತ್ತು. 

1993 ರ ಫೆಬ್ರವರಿ 9 ರಂದು ಮೆಟ್ರೋ ಟೊರಾಂಟೋ ಸೆಕ್ಷುವಲ್ ಅಸಾಲ್ಟ್ ವಿಭಾಗ ವಿಚಾರಣೆ ನಡೆಸಿ ವಾಪಾಸಾದ ಅದೇ ರಾತ್ರಿ ತನ್ನ ಸಂಬಂಧಿಗಳ ಮನೆಯಲ್ಲಿದ್ದ ಕಾರ್ಲಾ, ತನ್ನ ತಂಗಿ ಟ್ಯಾಮಿ ಹೊಮೋಲ್ಕಾ, ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಅತ್ಯಾಚಾರ ಮತ್ತು ಕೊಲೆಗಳಲ್ಲಿ ತನ್ನ ಪತಿ ಪೌಲ್ ಬರ್ನಾರ್ಡೊನ ಪಾತ್ರವನ್ನು ಅವರಲ್ಲಿ ಹೇಳಿಕೊಂಡಳು. ವೀಡಿಯೋ ಟೇಪುಗಳ ಸಾಕ್ಷ್ಯಾಧಾರಗಳ ಬಗ್ಗೆಯೂ ಕಾರ್ಲಾ ಅವರಲ್ಲಿ ಹೇಳಿಕೊಳ್ಳುತ್ತಾಳೆ. ನಂಬಲಸಾಧ್ಯವಾದಂಥಾ ಸತ್ಯವನ್ನು ಕೇಳಿ ಕಾರ್ಲಾಳ ಸಂಬಂಧಿಗಳು ಬೆಚ್ಚಿಬಿದ್ದದ್ದಂತೂ ಸುಳ್ಳಲ್ಲ. ಕಾರ್ಲಾ ಮತ್ತು ಪೌಲ್ ನಡೆಸಿದ ಈ ಅಮಾನುಷ ಅಪರಾಧಗಳ ಸರಣಿಗೆ ಏನಿಲ್ಲವೆಂದರೂ ಜೀವಾವಧಿ ಶಿಕ್ಷೆಯಂತೂ ಸಿಗುವುದು ಖಂಡಿತವಾಗಿತ್ತು. 

ಆದರೆ ಕಾರ್ಲಾ ಹೊಮೋಲ್ಕಾ ಮೂರ್ಖ ಹೆಣ್ಣೇನೂ ಆಗಿರಲಿಲ್ಲ. ಈ ವಿಷಕೂಪದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆದಷ್ಟು ಬೇಗ ದಿಟ್ಟ ಮತ್ತು ಚಾಣಾಕ್ಷ ಹೆಜ್ಜೆಯನ್ನಿಡಬೇಕೆಂಬ ಸತ್ಯ ಅವಳಿಗೆ ಸ್ಪಷ್ಟವಾಗಿ ತಿಳಿದಿತ್ತು. ಕಾಕತಾಳೀಯವೋ ಎಂಬಂತೆ ಅತ್ತ ಎನ್.ಆರ್.ಪಿ ಯ ತನಿಖಾ ದಳವು, ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ಟ್ಯಾಮಿ ಹೊಮೋಲ್ಕಾಳ “ಆಕಸ್ಮಿಕ'' ಸಾವಿನ ಕಡತವನ್ನು ಮತ್ತೊಮ್ಮೆ ಅಧಿಕೃತವಾಗಿ ತೆರೆದಿತ್ತು. 

***************

1993 ರ ಫೆಬ್ರವರಿ 11 ರಂದು ವಕೀಲ ಜಾರ್ಜ್ ವಾಕರ್ ರ ಬಳಿ ತೆರಳಿ ದೀರ್ಘ ಮಾತುಕತೆ ನಡೆಸಿದ ಕಾರ್ಲಾ ಹೊಮೋಲ್ಕಾ ಸ್ಥಳೀಯ ಸೈಂಟ್-ಕ್ಯಾಥರೀನ್ ಕ್ರೌನ್ ಪ್ರಾಸಿಕ್ಯೂಷನ್ (ದ ಕ್ರೌನ್) ವಕೀಲ ರೇ ಲೋನಹನ್ ಜೊತೆ ಮಾತನಾಡಿ ತನಿಖೆಗೆ ಸಂಪೂರ್ಣವಾದ ಸಹಕಾರವನ್ನು ನೀಡುವ “ಪ್ಲೀ ಬಾರ್ಗೈನ್'' ಅರ್ಜಿಯನ್ನು ಸಲ್ಲಿಸುತ್ತಾಳೆ. ತಾನು ನಡೆಸಿದ ಅಪರಾಧಗಳ ಮಟ್ಟವನ್ನು ಅರಿತ ಅಪರಾಧಿಯೊಬ್ಬ `ತನ್ನ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸುವ ಸೌಲಭ್ಯದ ಬದಲಿಗೆ, ಸರ್ಕಾರ/ಇಲಾಖೆಯ ತನಿಖಾದಳದ ಅಧಿಕಾರಿಗಳಿಗೆ ತನಿಖಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರವನ್ನು ಕೊಡುತ್ತೇನೆ' ಎಂದು ಹೇಳುವ ಲಿಖಿತ ಒಪ್ಪಂದವಿದು. ದೀರ್ಘಕಾಲದವರೆಗೆ ಎಳೆದುಕೊಂಡೇ ಹೋಗುವ ಹಲವು ಪ್ರಕರಣಗಳು ಈ ಪ್ಲೀ ಬಾರ್ಗೈನ್ ಗಳಿಂದಾಗಿ ದಡಮುಟ್ಟಿವೆ. 

ಆದರೆ ಕಾರ್ಲಾ ಹೊಮೋಲ್ಕಾ ಈ ಪ್ರಕರಣದಲ್ಲಿ ಪ್ಲೀ ಬಾರ್ಗೈನ್ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಇದೆಂಥಾ ಜಾಣ ನಡೆ ಎಂಬುದನ್ನು ಮುಂದೆ ಕೆನಡಾ ದೇಶವಷ್ಟೇ ಅಲ್ಲದೆ ಪ್ರಪಂಚಕ್ಕೇ ತೋರಿಸುತ್ತಾಳೆ. ಕಾರ್ಲಾ ಹೊಮೋಲ್ಕಾ ಮಾಧ್ಯಮಗಳ ಹಾಟ್-ಟಾಪಿಕ್ ಆಗಲಿರುವ ಈ ಕಾನೂನಿನ ಸಮರವನ್ನು ಶಿಕ್ಷೆಯ ಪ್ರಮಾಣದಲ್ಲಿ ಹೇಳುವುದಾದರೆ, ತನ್ನ ಮೊದಲ ನಡೆಯಲ್ಲೇ ಬಹುತೇಕ ಗೆದ್ದಿದ್ದಳು. ಆದರೆ ಇದರ ಅರಿವು ಕಾರ್ಲಾ ಸೇರಿದಂತೆ ಪೋಲೀಸ್ ಇಲಾಖೆಗೂ, ಪ್ರಾಸಿಕ್ಯೂಷನ್ ಗೂ ಯಾರಿಗೂ ಇರಲಿಲ್ಲ. ಅತ್ತ ಕ್ರಿಸ್ಟನ್ ಫ್ರೆಂಚ್ ಳ ದೇಹದಲ್ಲಿ ಪತ್ತೆಯಾದ ವೀರ್ಯದ ಡಿ.ಎನ್.ಎ ಮಾದರಿಗಳು, ಸ್ಕಾರ್-ಬೋರೋ ಪ್ರಕರಣಗಳ ಶಂಕಿತ ಅತ್ಯಾಚಾರಿಯ ಡಿ.ಎನ್.ಎ ಮಾದರಿಯನ್ನು ಹೋಲುತ್ತಿತ್ತು. ಪೌಲ್ ಬರ್ನಾರ್ಡೊನ ರಾಹುಕಾಲ ಶುರುವಾಗಿತ್ತು. 

ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳ ಸಂಬಂಧದಲ್ಲಿ ದೊರೆತ ಡಿ.ಎನ್.ಎ ಮಾದರಿಯು ಪೌಲ್ ಬರ್ನಾರ್ಡೊ ನ ಡಿ.ಎನ್.ಎ ಮಾದರಿಯೊಂದಿಗೆ ಹೋಲಿಕೆಯಾಗಿದೆ ಎಂಬ ಸುದ್ದಿ ಟೊರಾಂಟೋ ಮೆಟ್ರೋ ಪೋಲೀಸರಿಗೆ ಆಗಲೇ ದೊರಕಿಯಾಗಿತ್ತು. ಪೌಲ್ ತನ್ನ ಮಾದರಿಗಳನ್ನು ಪೋಲೀಸರಿಗೆ ಎರಡೂವರೆ ವರ್ಷಗಳ ಹಿಂದೆ ಕೊಟ್ಟಿದ್ದರೂ, ಕೊನೆಗೂ ಡಿ.ಎನ್.ಎ ಮಾದರಿಯು ಹೋಲಿಕೆಯಾಗಿ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಟ್ಟಿತ್ತು. ಅಂದಿನಿಂದ ಸ್ಥಳೀಯ ಪೋಲೀಸ್ ವಿಭಾಗ ಪೌಲ್ ನ ಮೇಲೆ ತನ್ನ ಹದ್ದಿನ ಕಣ್ಣನ್ನಿಟ್ಟಿತ್ತು. ಪೌಲ್ ಬರ್ನಾರ್ಡೊನ ಚಲನವಲನಗಳನ್ನು ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲೂ ಗಮನಿಸುತ್ತಿದ್ದ ಇಲಾಖೆಯು ಅವನನ್ನು ಸಂಪೂರ್ಣವಾಗಿ ತನ್ನ ಭದ್ರ ಕಣ್ಗಾವಲಿನಲ್ಲಿಟ್ಟಿತ್ತು. ತನ್ನ ಕಾರಿನ ಹೆಟ್-ಲೈಟುಗಳನ್ನಾರಿಸಿ, ಅರ್ಧರಾತ್ರಿಯ ಸಮಯದಲ್ಲಿ ನಿಧಾನವಾಗಿ ಡ್ರೈವ್ ಮಾಡುತ್ತಾ, ಪೌಲ್ ಬರ್ನಾರ್ಡೊ ಕೆಲ ಯುವತಿಯರನ್ನು ಹಿಂಬಾಲಿಸುತ್ತಿರುವುದು ಕಂಡುಬಂತು. 1993 ರ ಫೆಬ್ರವರಿ 17 ರಂದು ಮೆಟ್ರೋ ಟೊರಾಂಟೋ ಸೆಕ್ಷುವಲ್ ಅಸಾಲ್ಟ್ ವಿಭಾಗ ಮತ್ತು ಗ್ರೀನ್ ರಿಬ್ಬನ್ ತನಿಖಾ ದಳದ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪೌಲ್ ಬರ್ನಾರ್ಡೊ ಪೋಲೀಸರ ಅತಿಥಿಯಾಗಿದ್ದ. ಕಳೆದೆರಡು ವರ್ಷಗಳಿಂದ ಪೋಲೀಸರ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ವಿಕೃತಕಾಮಿ, ಕೊಲೆಗಾರ ಕೊನೆಗೂ ಕಾನೂನಿನ ಕೈಕೋಳದಲ್ಲಿ ಬಂಧಿಯಾಗಿದ್ದ. 

ಕಾರ್ಲಾ ಹೊಮೋಲ್ಕಾ ಈ ನಡುವೆ ತೆರೆಮರೆಯಲ್ಲಿ ಮಹಾ ಆಟವನ್ನೇ ಆಡಿದ್ದಳು. ಪೌಲ್ ನನ್ನು ಪೋಲೀಸ್ ಅಧಿಕಾರಿಗಳು ಬಂಧಿಸಿದರ ಹೊರತಾಗಿಯೂ ಪೋರ್ಟ್ ಡಾಲ್-ಹೌಸಿಯ ಮನೆಯ ಶೋಧಕ್ಕೆ ತಂದಿದ್ದ ಸರ್ಚ್ ವಾರಂಟ್ ಸೀಮಿತ ಅಧಿಕಾರವನ್ನು ಮತ್ತು ಷರತ್ತನ್ನು ಹೊಂದಿತ್ತು. ಸ್ವಾರಸ್ಯಕರ ವಿಷಯವೆಂದರೆ ನಡೆದ ಅತ್ಯಾಚಾರ ಮತ್ತು ದೈಹಿಕ ಹಿಂಸೆಗಳನ್ನು ದೃಢಪಡಿಸುವ ಸಂಬಂಧವಾಗಿ ಕಾರ್ಲಾಳ ಹೇಳಿಕೆಗಳನ್ನು ಹೊರತುಪಡಿಸಿದರೆ, ವೀಡಿಯೋ ಟೇಪ್ ಗಳಷ್ಟೇ ಪ್ರತ್ಯಕ್ಷ ಸಾಕ್ಷಿಗಳಾಗಿದ್ದವು. ಈ ರಹಸ್ಯ ವೀಡಿಯೋ ಟೇಪ್ ಗಳ ಬಗ್ಗೆ ಕಾರ್ಲಾ ಪೋಲೀಸರಲ್ಲಿ ಇನ್ನೂ ಬಾಯಿಬಿಟ್ಟಿರಲಿಲ್ಲ. ಅಸಲಿಗೆ ಅತ್ಯಾಚಾರ ಮತ್ತು ಕೊಲೆ ಸಂಬಂಧಿ ಪ್ರಕರಣಗಳ ಬಗ್ಗೆ ಕಾರ್ಲಾಳ ವಿಚಾರಣೆ ಅಧಿಕೃತವಾಗಿ ಇನ್ನೂ ಶುರುವಾಗಿರಲಿಲ್ಲ. ಪೌಲ್ ಬರ್ನಾರ್ಡೊ ತಾನಾಗಿಯೇ ವೀಡಿಯೋ ಟೇಪ್ ಗಳ ಬಗ್ಗೆ ಮಾತನಾಡಿ ವಿನಾಕಾರಣ ಜೈಲಿಗೆ ಹೋಗುವಷ್ಟರ ಮಟ್ಟಿನ ಮೂರ್ಖನಾಗಿರಲಿಲ್ಲ. ಹೀಗಾಗಿ ಇಂಥದ್ದೊಂದು ಪ್ರಬಲ ಸಾಕ್ಷ್ಯವಾಗಿ ಬಳಸಬಹುದಾದ ವೀಡಿಯೋ ಟೇಪ್ ಗಳ ಸಂಗ್ರಹವಿದೆ ಎಂಬ ವಿಷಯವೇ ಪೋಲೀಸ್ ಅಧಿಕಾರಿಗಳಿಗೆ ತಿಳಿದಿರಲಿಲ್ಲ. ಒಟ್ಟಾರೆಯಾಗಿ ಹಲವು ಅಡೆತಡೆಗಳೊಂದಿಗೆ ಕುಂಟುತ್ತಾ ಎಪ್ಪತ್ತೊಂದು ದಿನಗಳ ಅವಧಿಯಲ್ಲಿ ವಾರಂಟ್ ಸಮೇತ ನಡೆದ ಶೋಧದಲ್ಲಿ ಹಲವು ವಸ್ತುಗಳು ಜಪ್ತಿಯಾದರೂ, ಒಂದೇ ಒಂದು ವೀಡಿಯೋ ಟೇಪ್ ಅಷ್ಟೇ ಅಧಿಕಾರಿಗಳ ಕೈಸೇರಿತು.  

1993 ರ ಮೇ 5 ರಂದು ಕಾರ್ಲಾ ಹೊಮೋಲ್ಕಾಳ ವಕೀಲ ಜಾರ್ಜ್ ವಾಕರ್, “ಸರ್ಕಾರವು ಪ್ಲೀ ಬಾರ್ಗೈನ್ ಅಂಗೀಕಾರಕ್ಕೆ ಒಂದು ವಾರದ ಕಾಲಾವಧಿಯನ್ನು ಕಾರ್ಲಾ ಹೊಮೋಲ್ಕಾ ಗೆ ಕೊಟ್ಟಿದೆಯೆಂದೂ ಮತ್ತು ತನಿಖೆಗೆ ಸಂಪೂರ್ಣ ಸಹಕಾರವನ್ನು ಕೊಡುವ ಲಿಖಿತ ಒಪ್ಪಂದದ ಬದಲಿಗೆ ಜೈಲು ಶಿಕ್ಷೆಯನ್ನು ಹನ್ನೆರಡು ವರ್ಷಗಳಿಗೆ ಇಳಿಸಲಾಗುತ್ತದೆಯೆಂದೂ' ದಾಖಲಾಗಿದ್ದ ಪ್ರತಿಯನ್ನು ಕಾರ್ಲಾಳಿಗೆ ಕೊಡುತ್ತಾನೆ. ಕಾರ್ಲಾ ತಾನು ಸಲ್ಲಿಸಿದ ಅರ್ಜಿಗೆ ತಕ್ಕಂತೆ ಪ್ಲೀ ಬಾರ್ಗೈನ್ ಗೆ ಒಪ್ಪಿಕೊಂಡರೆ, ಆಕೆ ತನಿಖೆಗೆ ಸಂಪೂರ್ಣವಾದ ಸಹಕಾರವನ್ನು ನೀಡಬೇಕಾಗುತ್ತದೆ. ಈ ಸ್ವಇಚ್ಛೆಯ ಸಹಕಾರದ ಬದಲಿಗೆ ಶಿಕ್ಷೆಯನ್ನು ಒಪ್ಪಂದದ ಪ್ರಕಾರ ಹನ್ನೆರಡು ವರ್ಷಗಳಿಗೆ ಇಳಿಸಲಾಗುತ್ತದೆ. ಒಂದು ಪಕ್ಷ ಕಾರ್ಲಾ ಪ್ಲೀ ಬಾರ್ಗೈನ್ ಅರ್ಜಿಯನ್ನು ತಿರಸ್ಕರಿಸಿದರೆ ತನಿಖೆಯು (ಕಾರ್ಲಾಳ ಸಹಾಯವಿರದೆ/ಸಹಾಯದ ಜೊತೆ) ತನ್ನ ವೇಗದಲ್ಲೇ ಮುಂದುವರಿದು, ವಿಚಾರಣೆಯ ಹಂತಕ್ಕೆ ಬಂದು, ಆಕೆ ತಪ್ಪಿತಸ್ಥಳೆಂದು ಸಾಬೀತಾದರೆ ನ್ಯಾಯಾಲಯವು ವಿಧಿಸಿದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.  

ಪ್ರಕರಣವು ಸಾಕ್ಷ್ಯಾಧಾರಗಳ ಸಮೇತ ಸಂಪೂರ್ಣವಾಗಿ ಕಾರ್ಲಾಳ ವಿರುದ್ಧವಿದ್ದುದು ಕಾರ್ಲಾ ಮತ್ತು ಆಕೆಯ ವಕೀಲ ವಾಕರ್ ಗಷ್ಟೇ ಗೊತ್ತಿತ್ತು. ತಪ್ಪಿತಸ್ಥಳೆಂದು ಸಾಬೀತಾಗಿ ಜೀವನವಿಡೀ ಜೈಲಿನ ಕತ್ತಲ ಕೋಣೆಗಳಲ್ಲಿ ಕೊಳೆಯುವ ಬದಲು, ತನಿಖೆಗೆ ಪೂರ್ಣ ಸಹಕಾರವನ್ನು ನೀಡಿ ಹನ್ನೆರಡು ವರ್ಷಗಳ ಬಳಿಕ ಸ್ವತಂತ್ರಳಾಗುವುದು ನಿಜಕ್ಕೂ ಜಾಣತನದ ನಡೆಯಾಗಿತ್ತು. ವಾಕರ್ ಜೊತೆಗಿನ ದೀರ್ಘ ಮಾತುಕತೆಗಳ ನಂತರ ಆಗಲಿರುವ ಲಾಭ-ನಷ್ಟಗಳನ್ನು ಅಂದಾಜಿಸಿ ಪ್ಲೀ ಬಾರ್ಗೈನ್ ಗೆ ಕಾರ್ಲಾ ಹೊಮೋಲ್ಕಾ ತನ್ನ ಅಂಗೀಕಾರವನ್ನು ನೀಡುತ್ತಾಳೆ. 1993 ರ ಮೇ 14 ರಂದು ಈ ಒಪ್ಪಂದವು ಎಲ್ಲಾ ರೀತಿಯಲ್ಲೂ ಅಧಿಕೃತವಾಗಿ ಪರಿಪೂರ್ಣವಾಗುತ್ತದೆ. 

ತನಿಖಾದಳದ ಅಧಿಕಾರಿಗಳು ತಮ್ಮ ನೋಟ್ಸ್ ಮತ್ತು ಟೇಪ್ ರೆಕಾರ್ಡರ್ ಜೊತೆಗೆ ಕುಳಿತುಕೊಂಡು, ನಡೆದ ಕರಾಳ ಕಥೆಯನ್ನು ಕಾರ್ಲಾ ಹೊಮೋಲ್ಕಾಳ ಬಾಯಿಯಿಂದಲೇ ಕೇಳಿಸಿಕೊಳ್ಳಲು ಅಣಿಯಾಗುತ್ತಾರೆ.              

***************

(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x