ಅರ್ಥವೆಂಬ ಭ್ರಮೆಯ ಚೌಕಟ್ಟು: ಸಚೇತನ

ಹಿಂದಿನ ವಾರ ಇದೇ ಅಂಕಣದಲ್ಲಿ, ನೀಯೊರಿಯಲಿಸ್ಟಿಕ್ ಸಿನಿಮಾಗಳ ಬಗ್ಗೆ ಚರ್ಚಿಸಿದ್ದೆವು. ನೈಜತೆಗೆ ಅತೀ ಹತ್ತಿರವಾಗಿರುವ ಈಸಿನಿಮಾ ಪ್ರಕಾರಗಳ ಬಗ್ಗೆ ಇರುವ ದೊಡ್ಡ ಆರೋಪವೆಂದರೆ ನೀಯೊರಿಯಲಿಸ್ಟಿಕ್, ರಿಯಲಿಸ್ಟಿಕ್  ಅಥವಾ ಆರ್ಟ್ ಸಿನಿಮ ಎನ್ನುವ ವಿಭಾಗದ ಸಿನಿಮಾಗಳು ಅರ್ಥವಾಗಲಾರವು ಎಂದು. 
ಬರಹದಲ್ಲಿ ರಿಯಲಿಸ್ಟಿಕ್ ಎನ್ನುವದನ್ನ ವೈಭವೀಕರಣ ಇಲ್ಲದ ಎಲ್ಲ ಸಿನಿಮಾಕ್ಕೆ ಪರ್ಯಾಯ ಪದವಾಗಿ  ಬಳಸಲಾಗುವದು. 
 
ಸಿನಿಮಾ ಎನ್ನುವದು ಪಾತ್ರ ಮತ್ತು ಅದರೊಟ್ಟಿಗಿನ ಇತರ ಅನೇಕ ಪಾತ್ರಗಳ ನಡುವಿನ ಕಾರ್ಯ, ಮಾತು, ಘಟನೆ, ಭಾವನೆ ಇವುಗಳ ಸರಮಾಲೆ.  ಸರಪಳಿಯ ಕೊಂಡಿಗಳಂತೆ ಇರುವ ಘಟನೆಗಳು ಒಂದಕ್ಕೊಂದು ಪರಸ್ಪರ ಕೂಡಿಕೊಂಡಿರಬಹುದು ಅಥವಾ ಬೇರೊಂದು ಕೊಂಡಿಯ ಮೂಲಕ ಕೂಡಿಕೊಂಡಿರಬಹುದು. ಸಿನಿಮಾ ಅರ್ಥವಾಗಿಲ್ಲ ಎಂದರೆ ಯಾವುದೋ ಕೊಂಡಿಗಳ ಬಗೆಗಿನ ನಮ್ಮ ವಿಚಾರ ಸರಣಿಯಲ್ಲಿ ನಾವು ಎಡವುತ್ತಿದ್ದೇವೆ ಎಂದು. ಸಿನಿಮಾವೆಂದರೆ ಕೇವಲ ಆದಿ ಮತ್ತು ಅಂತ್ಯಗಳ ಮಧ್ಯೆ ಇರುವ ಕಥೆಯಲ್ಲ. ಬದಲಾಗಿ ಅದು ಪಾತ್ರ, ಪಾತ್ರ ಸಂಬಂಧಿ ಘಟನೆ,ಭಾವನೆ, ಘಟನಾ ಸಂಬಂಧಿ ಪಾತ್ರ, ಪಾತ್ರ ಪಾತ್ರಗಳ ನಡುವಿನ ಸಂಬಂಧ, ಹೊಂದಾಣಿಕೆ, ಸಹಜ-ಅಸಹಜ  ಭಾವನೆ… ಹೀಗಾಗಿ ಸಿನಿಮಾವೊಂದು ಅರ್ಥವಾಗಿಲ್ಲ ಎನ್ನುವ ಸಾರ್ವತ್ರಿಕ ಮಾತು ಯಾವುದೇ ವಿವರಣೆಗೆ ಸಾಧ್ಯವಾಗಲಾರದು. ಸಿನಿಮಾವೊಂದು ಅರ್ಥವಾಗಿಲ್ಲ ಎಂದಾಗ ಅದು ಅರ್ಥವಾಗಿರದ ಪಾತ್ರವಾಗಿರಬಹುದಾಗಿರಬಹುದು, ಸನ್ನಿವೇಶವಾಗಿರಬಹುದು, ಪಾತ್ರಗಳ ಹಿಡಿದಿಟ್ಟಿರುವ ಘಟನಾ ಸರಪಣಿಯಾಗಿರಬಹುದಾಗಿರಬಹುದು, ಪಾತ್ರವೊಂದರ ವರ್ತನೆಯಾಗಿರಬಹುದು, ಚಿಂತನೆಯಾಗಿರಬಹುದು, ಭಾವನೆಯಾಗಿರಬಹುದು. ಇದೇ ಕಾರಣದಿಂದ ಅರ್ಥದ ಸಮಸ್ಯೆ ಹುಟ್ಟಿರುವ ಜಾಗ ಬಹುಮುಖ್ಯ. ಇರಲಿ, ಈಗ ನಾವು ರಿಯಲಿಸ್ಟಿಕ್ ಅಥವಾ ಕಲಾತ್ಮಕ ಸಿನಿಮಾಗಳಿ ನಮಗೆ ಅರ್ಥವಾಗದೇ ಇರುವವು ಎನ್ನುವ ಭಾವನೆ ಹುಟ್ಟಿಸಲು ಕಾರಣವಾದ ವಿಷಯಗಳನ್ನು ನೋಡೋಣ. ಅರ್ಥ ಸಮಸ್ಯೆಗೆ ಕಾರಣಿಭೂತವಾಗಿರುವದು ನಮ್ಮ ಸಾಂಪ್ರದಾಯಿಕ ವಿಚಾರ ಸರಣಿ.  ಬಹಳಷ್ಟು ಸಲ ರಿಯಲಿಸ್ಟಿಕ್ ಸಿನಿಮಾಗಳಲ್ಲಿ ಒಂದು ಸ್ಪಷ್ಟವಾದ, ನಿರ್ದಿಷ್ಟವಾದ ಅಂತ್ಯಗಳಿರುವದಿಲ್ಲ. ಹರಿಯುತ್ತಿರುವ ನದಿಯೊಂದನ್ನ ನೋಡಿದಂತೆ, ದೃಷ್ಟಿ ಹಾಯಿಸಿದಷ್ಟು ದೂರ ಮಾತ್ರ ನದಿಯ ಹರಿವು. ಯಾವುದೋ ತಿರುವಿನಲ್ಲಿ ಇಳಿಜಾರಿನಲ್ಲಿ ನದಿ ಮಾಯವಾದಂತೆ. ಆದರೆ ತಿರುವಿನಾಚೆಗೂ, ಇಳಿಜಾರಿನಾನಚೆಗೂ  ನದಿಯ ಹರಿವಿದೆ.  ರಿಯಲಿಸ್ಟಿಕ್ ಸಿನಿಮಾಗಳು ಸಿನಿಮಾದ ಕಾಲಾವಧಿ ಮುಕ್ತಾಯವಾದ ನಂತರವೂ ಹರಿಯುವ ನದಿಗಳು. ಅವು ಮುಕ್ತಾಯವಾಗುವದಿಲ್ಲ ಅಲ್ಲಿ ತಾರ್ಕಿಕವಾದ ಒಂದು ಅಂತ್ಯವಿಲ್ಲ.  ಆದಿ ಮತ್ತು ಅಂತ್ಯ ಇವೆರಡೂ ನಮ್ಮ ವಿಚಾರ ಸರಣಿಗೆ ಮೆತ್ತಿಸಿಕೊಂಡಿರುವ ಅನಿವಾರ್ಯತೆಗಳು. ಒಂದಾನೊಂದು ಕಾಲದಲ್ಲಿ ಎಂದು ಆರಂಭವಾಗುವ ಕಥೆ ಕೊನೆಗೆ ಹೀಗಾಯಿತು ಎಂದು ಅ೦ತ್ಯವಾಗುವದನ್ನು ಕಂಡರೆ ಮಾತ್ರ ನಮ್ಮ ವಿಚಾರ ಸರಣಿಗೆ ಸಮಾಧಾನ. ನಮ್ಮ ಕಲ್ಪನೆಗೆ ಬಿಟ್ಟ ಅಂತ್ಯಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ( ಕನ್ನಡದ ಉಳಿದವರು ಕಂಡಂತೆ ಸಿನಿಮಾ ). ಈ ಆದಿ ಮತ್ತು ಅಂತ್ಯದ ನಡುವೆ ಸಂಭವಿಸುವ ಘಟನೆಗಳು ಸಿನಿಮಾ, ನಾಟಕ, ಕಥೆ, ಸಾಹಿತ್ಯ ಎನ್ನುವದು ನಮ್ಮ ತಿಳುವಳಿಕೆ.  ರಿಯಲಿಸ್ಟಿಕ್ ಸಿನಿಮಾಗಳು ನಮಗೆ ಅರ್ಥಾವಾಗದೆ ಇರುವಂತೆ ಭಾಸವಾಗಲು  ಕಾರಣವಾದ ಬಹುಮುಖ್ಯ ಅಂಶಗಳು.ರಿಯಲಿಸ್ಟಿಕ್ ಸಿನಿಮಾಗಳ ಆದಿ ಮತ್ತು ಅಂತ್ಯದ ಬಗ್ಗೆ ಅನಿರ್ಣಯತೆ  ಮತ್ತು ಅನಿಶ್ಚಿತತೆ, ಪಾತ್ರಗಳ ಬದುಕಿನ ಮೌಲ್ಯದ ಅನಿರ್ಣಯತೆ  ಮತ್ತು ಅನಿಶ್ಚಿತತೆ, ಪಾತ್ರದ ಅಸ್ತಿತ್ವವೊಂದರ ಅನಿರ್ಣಯತೆ  ಮತ್ತು ಅನಿಶ್ಚಿತತೆ ಮತ್ತು ಇವುಗಳ ಕಾರಣದಿಂದ ನೋಡುಗ ಅಥವಾ ಓದುಗನಿಗೆ ಉಂಟಾದ ಅರ್ಥಕ್ಕೆ ಸಂಬಂಧಿಸಿದ ಅನಿರ್ಣಯತೆ  ಮತ್ತು ಅನಿಶ್ಚಿತತೆ. 

ಸಿನಿಮಾ ಕುರಿತಂತೆ ಅಥವಾ ಸಾಹಿತ್ಯ ಕುರಿತಂತೆ ಬಹುತೇಕರಿಗೆ ಇರುವ ಸಂದಿಗ್ಧತೆಯೆಂದರೆ  ಘಟನೆಯೊಂದು ಎಲ್ಲಿಂದ ಆರಂಭವಾಗಿ ಎಲ್ಲಿ ಅಂತ್ಯವಾಗುತ್ತದೆ ಎಂದು. ಹೀಗಾಗಿ ವ್ಯಕ್ತಿಯೊಬ್ಬ, ಪಾತ್ರವೊಂದು ಪ್ರವೇಶಿಸುವ ಮೊದಲೇ ಸಾಕಷ್ಟು ಕಥೆ ಯಾ ಘಟನೆ ನಡೆದಿರುತ್ತದೆ ಎನ್ನುವ ವಾಸ್ತವ ( ರಿಯಲಿಸ್ಟಿಕ್ ಸಿನಿಮಾ ) ತತ್ವ  ಗೊಂದಲವನ್ನುಂಟು ಮಾಡುತ್ತದೆ. ನಮ್ಮ ನಿತ್ಯ ಜೀವನದಲ್ಲಿ ಎಲ್ಲಿಂದಲೋ ಆರಂಭಗೊಂಡ ಘಟನೆಗಳೂ ಎಲ್ಲಿಯೋ ಮುಕ್ತಾಯಗೊಳ್ಳಬಹುದು ಅಥವಾ ಮುಕ್ತಾಯಗೊಳ್ಳದೇ ಇರಬಹುದು. ತಲೆಮಾರುಗಳಿಂದ ಹರಿದು ಬಂದ ನಂಬಿಕೆ ದ್ವೇಷವಾಗಬಹುದು ಮತ್ತು ಹಲವಾರು ತಲೆಮಾರುಗಳ ತನಕ ದ್ವೇಷ ಮುಗಿಯದೆ ಪ್ರಹವಿಸಲೂಬಹುದು, ಹೀಗಾಗಿ ಯಾವುದೇ ಘಟನೆಗೆ ತಾರ್ಕಿಕವಾದ ಆರಂಭ ಮತ್ತು ಅಂತ್ಯವಿಲ್ಲ ( ಯಶವಂತ ಚಿತ್ತಾಲರ ಮತ್ತು ದೊಸ್ತೋವಸ್ಕಿ ಅವರ ಕಥೆ ಕಾದಂಬರಿಗಳು )  ಕಥೆ ಓದಿದ ಮೇಲು ಸಿನಿಮಾ ನೋಡಿದ ಮೇಲೂ, ಅವುಗಳ ಹರಿವು ಓದುಗ, ನೋಡುಗನ ತಲೆಯೊಳಗೆ ಹರಿಯುತ್ತಲಿರಬಹುದು. ಇಲ್ಲಿ ಓದುಗ ನೋಡುಗ ಲೇಖಕ ನಿರ್ದೇಶಕ ಎಲ್ಲರೂ ಸೃಷ್ಟಿಕರ್ತರು. 

ಪಾತ್ರಗಳ ಬದುಕಿನ ಮೌಲ್ಯಗಳ ಬಗ್ಗೆಗಿನ ನಿರ್ಣಾಯಕತೆ  ಬಹುತೇಕ ನೋಡುಗರಿಗೆ ಮುಖ್ಯ ಅಂಶ.  ರಿಯಲಿಸ್ಟಿಕ್ ಸಿನಿಮಾಗಳು ಬದುಕಿನ ಮೌಲ್ಯ ಅಪಮೌಲ್ಯಗಳ ಬಗ್ಗೆ ಯಾವುದೇ ಅಭಿಪ್ರಾಯ ನೀಡುವ, ತೀರ್ಮಾನ ಕೊಡುವ ಗೋಜಲಿಗೆ ಹೋಗುವದಿಲ್ಲ. ಹೀಗಾಗಿ ಪಾತ್ರವೊಂದರ ಕ್ರಿಯೆಗೆ ಅದು ಸತ್ಯ ಅಸತ್ಯ ನ್ಯಾಯ ಅನ್ಯಾಯ ಸಿಂಧು ಅಸಿಂಧು ಎಂದು ನಿರ್ಣಯಿಸುವ ಯಾವುದೇ ಆಯಾಮ ಅಥವಾ ಕೋನವನ್ನು ಈ ಸಿನಿಮಾಗಳು ನೀಡುವದಿಲ್ಲ. ತಪ್ಪು ಸರಿಗಳು ಕೇವಲ ದೃಷ್ಟಿಕೋನಗಳಷ್ಟೇ, ದೂರದ ಬೆಟ್ಟದಾಚೆಗೆ ನಿಂತ ಮನುಷ್ಯರು ನಮಗೆ ಕುಬ್ಜರಾಗಿ ಕಾಣಿಸಿದಂತೆ, ಬೆಟ್ಟದಾಚೆಗೆ ನಿಂತವರಿಗೆ ನಾವು ಕುಬ್ಜರು. ಹೀಗಾಗಿ ತಪ್ಪು ಸರಿ, ಒಳ್ಳೆಯವರು ಕೆಟ್ಟವರು ಎನ್ನುವ ಪಂಗಡಕ್ಕೆ ಪಾತ್ರವನ್ನು ಸೇರಿಸಲಾಗದೆ ಹೆಣಗಾಡುವ ಸನ್ನಿವೇಶವನ್ನು ಎದುರಿಸುವದು ಇದೆ. 

ಅಸ್ತಿತ್ವದ ಕುರಿತಾಗಿ  ಬಹುತೇಕ ಕಲ್ಪನೆ ಬಹಳ ಸಿಮೀತವಾದದ್ದು. ಪಾತ್ರವೊಂದು ಘಟನೆಯಲ್ಲಿ ತೆಗೆದುಕೊಂಡ  ನಿಲುವು ಆ ಪಾತ್ರದ ಮೂಲ ನಿಲುವಾಗದೆ ಇರಬಹುದು. ಸುತ್ತಲಿನ ಘಟನೆಗಳು ಸನ್ನಿವೇಶದ ಪ್ರೇರೇಪಣೆಗೆ ಪಾತ್ರವೊಂದು ಪ್ರಜ್ಞಾಶೂನ್ಯವಾಗಿ ನಿಲುವೊಂದನ್ನ ತಳೆದಿರಬಹುದು. ( ಇದೇಕಾರಣದಿಂದ ನ್ಯಾಯಾಲಯದಲ್ಲಿ ಹಲ್ಲೆಯೊಂದು ಆತ್ಮ ರಕ್ಷಣೆಗೆ ಅಲ್ಲ, ಉದ್ದೇಶಪೂರಿತ ಎಂದು ಸಾಬೀತಾದರೆ ಮಾತ್ರ ಶಿಕ್ಷೆಯಾಗುವದು)  ಘಟನೆಯ ಸಂದರ್ಭದ ಪಾತ್ರವು, ಘಟನೆಯಾದ ನಂತರದ ( ಘಟನೆಯ ಪ್ರಭಾವ ಅಳಿದ ನಂತರದ )  ಸಮಯದ  ಪಾತ್ರವಲ್ಲ ಎನ್ನುವದನ್ನು ಒಪ್ಪಿಕೊಳ್ಳಬೇಕಾದರೆ ಪಾತ್ರವೊಂದರ ಮೂಲಭೂತ ಅಸ್ತಿತ್ವವನ್ನು ಅಳಿಸದೆ, ತಾತ್ಕಾಲಿಕ ಅಸ್ತಿತ್ವವನ್ನು ಅಳಿಸಬೇಕಾದ ಅನಿವಾರ್ಯತೆ ರಿಯಲಿಸ್ಟಿಕ್  ಸಿನಿಮಾದ ಪ್ರೇಕ್ಷಕರಿಗೆ ಅಗತ್ಯ. ನಿಜ ಬದುಕಿನಲ್ಲಿ ಕಂಡು ಬರುವ ಘಟನೆಗಳಂತೆ ಹಲವಷ್ಟು ಪಾತ್ರಗಳಿ ತೆರೆಯ ಮೇಲೆ ಬಂದು ಒಂದಕ್ಕೊಂದು ಸಂಬಂಧವಿಲ್ಲದವುಗಳಂತೆ ಇರಬಹುದು. ಉದಾಹರಣೆಗೆ ಪಕ್ಕದ ಮ್ಯಾನೇಜ್ ಮುಂಜಾನೆ ಪೇಪರ್ ಹಾಕುವ ಹುಡುಗ ನಿಮಗೆ ಸಂಬಂಧವಿಲ್ಲದೇ ಇದ್ದರು  ಅವನ ಪಾತ್ರ ಬೆಳಗಿನ ಕ್ರಿಯೆಯ ಭಾಗ ವಾಗಿರಬಹುದು.ಕಡೆಯದಾಗಿ, ಅರ್ಥಾವಗುವದಿಲ್ಲ ಎನ್ನುವ ಅರ್ಥದ ಕುರಿತಾದ ಅನಿಶ್ಚಿತತೆ. ಅರ್ಥ ಎನ್ನುವದು ವೈಯಕ್ತಿಕವಾದ ಕಾಲ್ಪನಿಕ ಸ್ಥಿತಿ  ಯಾವುದೇ ಘಟನೆಯಾಗಲಿ, ಪಾತ್ರವಾಗಲಿ,ಭಾವನೆಯಾಗಲಿ ಸಂಪೂರ್ಣವಾಗಿ  ಅರ್ಥವಾಗಲು ಸಾಧ್ಯವಿಲ್ಲ. ಅರ್ಥವೆಂಬುದು ಕೇವಲ ಭರವಸೆ ಅಷ್ಟೇ. ಮಗು ಅಳುತ್ತಿರುವದು ಯಾಕೆ ಎನ್ನುವದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಸಿವಾಗಿದ್ದಕ್ಕೆ ಅಳುತ್ತಿರಬಹುದು, ಊಟ ಮಾಡಿದರೆ ಅಳುವದಿಲ್ಲ  ಎಂಬ ಭರವಸೆ ಹುಸಿಯಾಗುವ ಸಾಧ್ಯತೆಯೂ ಇದೆ. ಆದಿ ಅಂತ್ಯವೇ ಇಲ್ಲದ ರಿಯಲಿಸ್ಟಿಕ್ ಸಿನಿಮಾ ಜಗತ್ತಿನಲ್ಲಿ ನಾವು ಚೌಕಟ್ಟನ್ನು ಹಾಕಲಾರೆವು ಮತ್ತು ಅದಕ್ಕೆ ಅರ್ಥವನ್ನು ಬಲವಂತವಾಗಿ ಲಗತ್ತಿಸಲಾರೆವು. ಅರ್ಥವೆಂಬುದು ಸಾವಕಾಶವಾಗಿ ಸಿಗುವ ಕಲಿಯುವ ಭರವಸೆಯೇ ಹೊರತು ಸಂಪೂರ್ಣವಾಗಿ ಸಿಗುವ ನಂಬಿಕೆಯಲ್ಲ. ಎಲ್ಲವೂ ಅರ್ಥವಾಗಲೇ ಬೇಕಿಲ್ಲ ಮತ್ತು ಅರ್ಥವಾಗುವದೂ ಇಲ್ಲ. ಕೋನಗಳು ಬದಲಾದಂತೆ ಅರ್ಥದ ವ್ಯಾಪ್ತಿ, ವಿಸ್ತಾರ ಬದಲಾಗುತ್ತದೆ 

ಸಾಹಿತ್ಯವನ್ನು ಸಿನಿಮಾವನ್ನು ಅಥವಾ ಕಲೆಯ ಯಾವುದೇ ಪ್ರಕಾರವನ್ನು ಅತೀ ರಿಯಲಿಸ್ಟ್ ಆಗಿ ತೋರಿಸಲಿಕ್ಕಾಗದು. ವಾಸ್ತವತೆಯ ಹತ್ತಿರದ ಪ್ರಪಂಚದಲ್ಲಿ ಭಾವಯಾನ ಸಾಧ್ಯವಾಗಬಹುದು.  

ಸಂಬಂಧಿಸಿದ ನಿಮಾ ಮತ್ತು ಓದು "

ಬೈಸಿಕಲ್ ಥೀವ್ಸ್, ಉಳಿದವರು ಕಂಡಂತೆ, ರಾಶೋಮನ್, ಪಥೇರ್ ಪಾಂಚಾಲಿ,  ಕೆವಿ ತಿರುಮಲೇಶ್ ಅವರ ಬರಹಗಳು, ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿ, ದೊಸ್ತೋಯಸ್ಕಿಯ ' ನೋಟ್ಸ್ ಫ್ರಂ ಅಂಡರ್ ಗ್ರೌಂಡ್ '  ಕಾದಂಬರಿ 

ಇಂತಿ, 
ಸಚೇತನ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x