ಹೊಸ ವರುಷದಿ ಹೊಸ ಮನಸು: ಪದ್ಮಾ ಭಟ್

                  
ಹೊಸ ವರುಷವು ಪ್ರತೀ ವರುಷವೂ ಬರುತ್ತದೆ.. ಕಳೆದು ಹೋದ ಹಳೆಯ ವರುಷದ ನೆನಪಿನಲಿ ನವ ವರುಷವನ್ನು ಸ್ವಾಗತಿಸುತ್ತ, ಹೊಸ ಕನಸುಗಳನು ಬಿಚ್ಚಿಡಲು ಶುರು ಮಾಡಿರುತ್ತೇವೆ.. ಪ್ರತೀ ಸಲದಂತೆ ಈ ಸಲವೂ ಏನಾದರೂ ಹೊಸದಾದ ಪ್ಲ್ಯಾನ್ ಮಾಡಬೇಕು.. ಹೊಸ ಯೋಜನೆಗಳು ಹೊಸ ವರುಷದಿಂದಲೆ ಜಾರಿಗೆ ಬರಲೆಂಬ ಕಟುವಾದ ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟಿರುತ್ತೇವೆ.. ಅದೇ ಹಳೆಯ ಕೆಟ್ಟ ಚಟಗಳನ್ನು ಬಿಡಬೇಕು ಎಂತಲೋ, ಹೊಸದಾದ ಕೆಲಸವನ್ನು ಶುರು ಮಾಡಿಕೊಳ್ಳಬೇಕೆಂತೋ, ಅರ್ಧ ಓದಿದ ಪುಸ್ತಕವನ್ನು ಪೂರ್ತಿ ಒಂದೇ ದಿನದಲ್ಲಿ ಕೂತು ಓದಿ ಮುಗಿಸಬೇಕೆಂದೋ ಯೋಚನೆಗಳು ಒಂದೇ ಎರಡೇ ನೂರಾರು.. ಮತ್ತದೇ ಸುಳ್ಳು ಹೇಳುವ ಕಳ್ಳ ಮನಸ್ಸು.. ಪ್ರತೀ ವರ್ಷವೂ ಏನೇನೋ ಯೋಜನೆ, ಯೋಚನೆ..ಆದರೆ ಎಲ್ಲಾ ಯೋಚನೆಗಳಲ್ಲಿ ಒಂದಾದರೂ ನೆರವೇರಿದೆಯಾ..ಅಥವಾ ಪ್ಲ್ಯಾನ್ ಮಾಡುವುದು ಮಾತ್ರ ನಮ್ಮ ಕೆಲಸವಾ ಎಂದು ಮತ್ತೆ ಮತ್ತೆ ಯೋಚಿಸಲೇಬೇಕು..

ಟೈಮ್ ಟೇಬಲ್ ಹಾಕಿಕೊಳ್ಳಲು, ನಮ್ಮದೇ ಜೀವನಕ್ಕೆ ನೀಲನಕ್ಷೆಯನ್ನು ತಯಾರಿಸಿಕೊಳ್ಳಲು ಇಡೀ ದಿನವನ್ನೇ ವೆಚ್ಚ ಮಾಡಿದರೂ ಚಿಂತೆಯಿಲ್ಲ..ಯಾಕಂದರೆ ನಾವು ತೆಗದುಕೊಂಡ ನಿರ್ಧಾರ ನಮ್ಮ ಬದುಕಿನಲಿ ಹೊಸತೊಂದು ಬೆಳಕು ಮೂಡಿಸಬಹುದು, ಹಳೆಯ ಕಹಿಗಳನು ಹೊಡೆದೋಡಿಸಬಹುದು, ಬೇಸರ, ಸಿಟ್ಟು, ಆಕ್ರೋಶವನ್ನೆಲ್ಲ ಒಂದು ಮೂಟೆಯಲ್ಲಿ ಕಟ್ಟಿ ಬದಿಗಿರಿಸಿಕೊಳ್ಳಬಹುದು. ಹೊಸತಾದ ಖುಷಿಯ ಚಿಲುಮೆಯನ್ನು ಎಲ್ಲಾದರೂ ಹುಡುಕಬಹುದೆಂಬ ಪುಟ್ಟ ಭರವಸೆ.. ನಗುವಿನ ತಳಹದಿಗೊಂದು ಭದ್ರವಾದ ಕಟ್ಟೆಯನ್ನು ಕಟ್ಟಿ ಶಾಶ್ವತವಾಗಿ ನಮ್ಮಲ್ಲಿಯೇ ಉಳಿಯುವಂತೆ ಮಾಡಬೇಕು ಎಂಬುದು ಬಹುಜನರ ಕನಸು.. ಖುಷಿಯು ಪೇಟೆಯಲ್ಲಾದರೂ ಸಿಗುವಂತಿದ್ದರೆ ದುಡ್ಡು ಕೊಟ್ಟು ಪಡೆದುಕೊಳ್ಳುತ್ತಿದ್ದವರು ಅನೇಕ.. ಆದರೆ ಎಲ್ಲೋ ಸಂತೆಯ ಮೂಲೆಯಲ್ಲಿ ಮಲಗಿದವನು ಸುಖವಾದ ನಿದ್ರೆ ಮಾಡುತ್ತಾನೆ..ಇನ್ನು ಎ.ಸಿ. ರೂಂ ನಲ್ಲಿ ಮಲಗಿದ ಮಿಲಿಯನ್ನರಿಗೆ ನಿದ್ರೆ ಬರದೇ ಸ್ಲೀಪಿಂಗ್ ಟ್ಯಾಬ್ಲೆಟ್ ತೆಗೆದುಕೊಳ್ಳುವವರೂ ಇದ್ದಾರೆ..ಅದಿರಲಿ ಖುಷಿ ಎಂಬ ಹೊಸದಾದ ಬದುಕನ್ನು ಹೊಸ ವರುಷದಿಂದಲೇ ಕಾಣಬೇಕೆಂಬುದು ಬಹುಜನರ ಆಸೆ..ಹೊಸತನ, ಹೊಸದಾದ ನವಿರಿನ ಭಾವಗಳು, ಕಂಪ ಸೂಸುವ ಮಲ್ಲಿಗೆಯ ಚೆಲುವಿಗೆ ಸಾಟಿಯಾಗುವಷ್ಟು ನಗುವು ಬರಬೇಕೆಂಬ ಬಯಕೆಯು ಕೇವಲ ಬಯಕೆಯಾಗಿಯೇ ಉಳಿಯುತ್ತದೆಯಾ ಅಥವಾ ಎಲ್ಲೋ ಒಂದು ಕಡೆ ಬದುಕಿನ ಸಾರ್ಥಕತೆಗಳಮನ್ನು ಪಡೆಯಲು ಕನವರಿಸುತಿದೆಯಾ..

ಹೊಸ ವರುಷಕ್ಕಾಗಿ ಪ್ರತೀ ವರುಷವೂ ಹೊಸತಾದ ಚಿಗುರುಗಳನ್ನು ಬೆಳೆಯಿಸಿಬಿಡುತ್ತೇವೆ..ಆದರೆ ಮುಂದಿನ ವರುಷದ ಹೊಸ ವರುಷ ಬರುವ ವರೆಗೂ ಆ ಚಿಗುರು ಚಿವುಟಿ ಹೋದರೂ ಆಶ್ಚರ್ಯವಿಲ್ಲ..ಮೂರು ನಿಮಿಷಗಳ ಯೋಜನೆಗಳು ಎಷ್ಟು ದಿನ ತಾನೇ ಜೀವಿಸಿಯಾತು? ಅಲ್ವ.. ಮುನ್ನೂರೈವತ್ತೈದು ದಿನಗಳೂ ಹೊಸ ವರುಷವೂ..ಈ ವರುಷ ಮುಗಿದು ಮುಂದಿನ ವರುಷ ಬರುವವರೆಗೂ ಇದು ಹೊಸವರುಷವೇ..ಯಾಕೆಂದರೆ ಇನ್ನೊಂದು ವರುಷ ಬಂದರೆ ತಾನೆ ಇದು ಸರಿದು ಹಳೆಯ ವರುಷವಾಗುವುದು..ಡಿಸೆಂಬರ್ ಮೂವತ್ತೊಂದು ದಿನಗಳವರೆಗೂ ಮರಳಿ ಇನ್ನೆಂದೂ ಬರಲಾರದ ದಿನಗಳು.. ಮತ್ತೆ ಅದೇ ಹೊಸ ತಿಂಗಳು.. ಪ್ರತೀ ದಿನವೂ ಹೊಸತೆಂದು ಯಾಕೆ ನಂಬುವುದಿಲ್ಲವೋ ಗೊತ್ತಿಲ್ಲ..ಕಳೆದು ಹೋದ ಕ್ಷಣಗಳೆಂದೂ ಮರಳಿ ಬರಲಾರವು.. ಹೊಸತಾದ ಭಾವಗಳಿಗೆ ಹಳೆಯ ಚಾಳಿಯೇಕೆ.. ನಿನ್ನೆಯ ದಿನ ಇವತ್ತಿಲ್ಲ..ಭೂತಕಾಲದ ನೆನಪಿನಲಿ, ವರ್ತಮಾನದ ಆಸರೆಯಲಿ, ಭವಿಷ್ಯತ್ ಕಾಲವನ್ನು ನಿರೀಕ್ಷಿಸುತ್ತ ಸಾಗಲೇಬೇಕು.. ಇನ್ನೆಂದೋ ಬರುವ ಹೊಸವರುಷವನ್ನು ಸ್ವಾಗತಿಸುವ ಮುಂಚೆ ಕಳೆಯುವ ಪ್ರತೀ ದಿನವೂ ಹೊಸ ವರುಷದಲ್ಲಿ ನೆನಪಿಸುವಷ್ಟು ಸಾರ್ಥಕತೆಯನ್ನು ಬಯಸಬೇಕು.. ಮತ್ತದೇ ಹೊಸವರುಷದ ನೆಪದಲ್ಲಿ ಪಾರ್ಟಿಯೋ, ಗೀರ್ಟಿಯೋ ಬದಲು ಕ್ಷಣ ಕ್ಷಣದ ಸಮಯವನ್ನೂ ಯೋಚಿಸುವಂತೆ, ಬದುಕುವಂತೆ, ಎಲ್ಲವೂ ಹಸನಾಗುವಂತೆ ಮಾಡಿಕೊಳ್ಳಬೇಕು.. ಎಲ್ಲ ವರುಷಗಳೂ ಎಲ್ಲಾ ಕ್ಷಣಗಳೂ ಬದುಕಿನಾದ್ದಂತ ನೆನಪಿಸುವ ಒಳ್ಳೆಯ ಕ್ಷಣಗಳ ಹಳೆಯ ಕ್ಯಾಲೆಂಡರ್ ನ್ನು ಮನಸ್ಸಿನಾಳದಲ್ಲಿ ಇರಿಸಿಕೊಂಡರೆ ಬದುಕೆಷ್ಟು ಮಧುರ..

ಆದರೂ ಹೊಸವರುಷಕ್ಕೆ ಒಂದಷ್ಟು ಒಳ್ಳೆಯ ಯೋಜನೆಗಳನ್ನು ಹಾಕಿಕೊಳ್ಳಲೇ ಬೇಕು.. ಅವುಗಳೆಷ್ಟು ದಿನಗಳು ಜೊತೆಗೆ ಬರುವುದೋ ಗೊತ್ತಿಲ್ಲ..ಆದರೆ ಒಂದಷ್ಟು ಕನಸುಗಳನ್ನಾದರೂ ಕಾಣೋಣ..ಹೊಸ ವರುಷವು ಕಾಲೂರುತಿದೆ. ಹೊಸ ಭರವಸೆಗಳೇ ಮತ್ತೊಮ್ಮೆ ಬರಲಾರದಾ?? 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x