ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ: ಅಖಿಲೇಶ್ ಚಿಪ್ಪಳಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮದಲ್ಲಿ ಹೊಸ ತಲೆಮಾರು ಸೃಷ್ಟಿಯಾಗುತ್ತಿದೆ. ಆದರೆ ಸಾರವುಳ್ಳ ಮಾಹಿತಿಗಳು ಲಭ್ಯವಾಗುತ್ತಿಲ್ಲ. ನವಂಬರ್ ಮತ್ತು ಡಿಸೆಂಬರ್ ೨೦೧೪ರ ತಿಂಗಳಲ್ಲಿ ಸಾಗರಕ್ಕೆ ಪತ್ರಿಕೋಧ್ಯಮದ ಹಿರಿಯ ದಿಗ್ಗಜರಿಬ್ಬರು ಆಗಮಿಸಿದ್ದರು. ನವಂಬರ್ ೩೦ರಂದು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀ ದಿನೇಶ್ ಅಮಿನ್‌ಮಟ್ಟು ಹಾಗೂ ಡಿಸೆಂಬರ್ ೧೧ರಂದು ಶ್ರೀ ನಾಗೇಶ ಹೆಗಡೆ. ಪ್ರಸ್ತುತ ಪತ್ರಿಕೋಧ್ಯಮದ ವಿಷಯದಲ್ಲಿ ಈರ್ವರ ಅಭಿಪ್ರಾಯವು ಹೆಚ್ಚು-ಕಡಿಮೆ ಹೋಲುತ್ತಿದ್ದವು. ದಿನೇಶ್ ಅಮಿನ್‌ಮಟ್ಟು ಹೇಳಿದ್ದು, ನಮ್ಮ ಕಾಲದಲ್ಲಿ ಪತ್ರಿಕೋಧ್ಯಮಕ್ಕೆ ಬೇಕಾದ ತಯಾರಿ ಇರುತ್ತಿತ್ತು ಆದರೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಈಗಿನ ಪತ್ರಿಕೋಧ್ಯಮದಲ್ಲಿ ಇದು ಸ್ಪಷ್ಟವಾಗಿ ಹಿಂದು-ಮುಂದಾಗಿದೆ. ಹಾಗೆಯೇ ನಾಗೇಶ ಹೆಗಡೆಯವರು ಇಂದಿನ ಪರ್ತಕರ್ತರ ಜವಾಬ್ದಾರಿಯೇನು ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ಕಲ್ಪನೆಯನ್ನು ನೀಡಿದರು. ಉದಾಹರಣೆಯಾಗಿ ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದಂತೆ, ಮಾಧವ ಗಾಡ್ಗಿಳ್ ವರದಿ ಏನು ಹೇಳುತ್ತದೆ. ಕಸ್ತೂರಿ ರಂಗನ್ ವರದಿ ಏನು ಹೇಳುತ್ತದೆ. ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾಪ ಬಂದಾಗ ರಾಜಕಾರಣಿಗಳು ಏಕೆ ಅಷ್ಟೊಂದು ದೊಡ್ಡ ಹುಯ್ಲು ಎಬ್ಬಿಸಿದರು? ಕೇರಳದಲ್ಲಿ ಅಲ್ಲಿನ ಪರ್ತಕರ್ತರು ಇಡೀ ೨ ವರದಿಗಳನ್ನು ಸ್ಥಳೀಯ ಬಾಷೆಗೆ ಭಾಷಾಂತರಿಸಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಕೆಲಸ ಇಲ್ಲಿ ಏಕೆ ಆಗುತ್ತಿಲ್ಲ ಎಂದರು. ಶ್ರೀ ನಾಗೇಶ ಹೆಗಡೆಯವರು ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಎರಡೂ ವರದಿಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಈ ವಾರದಿಂದ ಆರಂಭವಾಗಿದೆ. ಕಂತಿನಲ್ಲಿ ಪ್ರಕಟವಾಗುವ ಈ ಲೇಖನ ಮಾಲೆಯನ್ನು ಆಸಕ್ತ ಪರ್ತಕರ್ತರು ಜನಜಾಗೃತಿಗಾಗಿ ಉಪಯೋಗಿಸಿಕೊಳ್ಳಬಹುದು.

ಪ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ೫೨೨ ಪುಟಗಳ ವರದಿಯ ಮೊದಲ ಪುಟದಲ್ಲಿ ಕೇರಳ ಜೀವಿವೈವಿಧ್ಯ ಮಂಡಳಿಯವರು ರಚಿಸಿದ ಅತ್ಯಂತ ಸುಂದರವಾದ ವನ್ಯಸಂಪತ್ತಿನ ಚಿತ್ರಗಳಿವೆ. ಪುಟದ ಮೇಲ್ಬಾಗದಲ್ಲಿ ಅಪರೂಪದ, ಅಳಿವಿನಂಚಿನಲ್ಲಿರುವ ಸರಿಸೃಪಗಳ, ಪಕ್ಷಿಗಳ, ಉಭಯವಾಸಿಗಳ, ಮೀನಿನ ಚಿತ್ರ ಮತ್ತು ಜೊತೆಗೆ ಇಕಾಲಜಿಯ ಮಹತ್ವವನ್ನು ಸಾಂಕೇತಿಕವಾಗಿ ಸಾರುವ ಜೇಡದ ಬಲೆಯ ಚಿತ್ರವಿದೆ, ಬಲೆಯ ನಡುವೆ ಬಣ್ಣದ ಜೇಡವಿದೆ. ಪುಟದ ಎಡಭಾಗದಲ್ಲಿ ದೈತ್ಯ ಮರದ ಪೊಟರೆಯಲ್ಲಿ ಮಂಗಟ್ಟೆ ಹಕ್ಕಿ ಗೂಡಿನೊಳಗೆ ಕುಳಿತ ಚಿತ್ರವಿದೆ. ಪುಟದ ಕೆಳಭಾಗದಲ್ಲಿ ಹಸಿರುಹೊತ್ತ ಗುಡ್ಡಗಾಡುಗಳ ಚಿತ್ರ ನಳನಳಿಸುತ್ತದೆ. 

ಪ್ರೋ:ಮಾಧವ ಗಾಡ್ಗಿಳ್ ವರದಿಯ ಮುನ್ನುಡಿಯ ಸಾರಾಂಶ. ಲಾಗಾಯ್ತಿನಿಂದ ಭಾರತದ ಜನತೆಯಲ್ಲಿ ಪರಿಸರದ ಬಗ್ಗೆ ಕಾಳಜಿಯಿತ್ತು. ಬ್ರೀಟೀಷರ ಆಳ್ವಿಕೆಯಲ್ಲಿ ಅತಿಹೆಚ್ಚು ಅರಣ್ಯ ನಾಶವಾಯಿತು. ಆದಾಗ್ಯೂ ಸಹಿತ ಸ್ವಾತಂತ್ರನಂತರದಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚು ಮಹತ್ವ ನೀಡಲಾಯಿತು. ಪಶ್ಚಿಮಘಟ್ಟಗಳ ಪರಿಸರ ವಿಜ್ಞಾನ ತಜ್ಞ ಸಮಿತಿಯ ರಚನೆಯೂ ಕೂಡ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿಲುವುವಾಗಿದೆ. ಭಾರತದ ಪ್ರಸ್ಥಭೂಮಿಯನ್ನು ಸುಸ್ಥಿಯಲ್ಲಿರಲು ಪಶ್ಚಿಮಘಟ್ಟಗಳ ಪಾತ್ರ ಬಲುದೊಡ್ಡದು. ಗೋದಾವರಿ, ಕೃಷ್ಣಾ, ನೇತ್ರಾವತಿ, ಕಾವೇರಿ ಇತ್ಯಾದಿ ನದಿಗಳ ಉಗಮಕ್ಕೆ ಕಾರಣವಾಗಿ ತಾಯಿಯಂತೆ ಪೊರೆಯುತ್ತಿದೆ. ಆಗಿನ ಕಾಲದಲ್ಲೇ ಕವಿ ಕಾಳಿದಾಸ ತನ್ನ ವೈವಿಧ್ಯಮಯ ಕಾವ್ಯಭಾಷೆಯಲ್ಲಿ ಪಶ್ಚಿಮಘಟ್ಟಗಳ ಶ್ರೇಣಿಯನ್ನು ಸುಂದರವಾದ ಸ್ತ್ರಿಗೆ ಹೋಲಿಸಿದ್ದಾನೆ. ಅಗಸ್ತ್ಯ ಪರ್ವತವು ತಲೆಯಾದರೆ, ಅಣ್ಣಾಮಲೈ ಮತ್ತು ನೀಲಗಿರಿ ಪರ್ವತಗಳನ್ನು ಎದೆಗೆ ಹೋಲಿಸಿದ್ದಾನೆ. ಉತ್ತರ ಕನ್ನಡ ಮತ್ತು ಗೋವೆಯನ್ನು ನಿತಂಬಗಳಿಗೆ ಮತ್ತು ಉತ್ತರ ಸಹ್ಯಾದ್ರಿ ಶ್ರೇಣಿಯನ್ನು ಕಾಲುಗಳಿಗೆ ಹೋಲಿಸಿದ್ದಾನೆ. ಒಂದು ಕಾಲದಲ್ಲಿ ಈ ಸ್ತ್ರೀ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿದ್ದಳು. ಇಡೀ ದಕ್ಷಿಣ ಭಾರತಕ್ಕೇ ಬೆನ್ನೆಲುಬಿನಂತಿದ್ದ ಈ ಸುಂದರ ಸ್ತ್ರೀಯ ಹಸಿರಿನ ಸೀರೆಯನ್ನು ನಮ್ಮ ದುರಾಸೆಗಾಗಿ ಹರಿದು ಹಾಕಿದ್ದೇವೆ. ಜೀವಜಲದ ಮೂಲವನ್ನೇ ನಾಶ ಮಾಡಿ ನದಿಗಳನ್ನು ಅನಾಥ ಮಾಡಿದ್ದೇವೆ. 

ಅಭಿವೃದ್ಧಿಗಾಗಿ ಪಶ್ಚಿಮಘಟ್ಟಗಳನ್ನು ಬೇಕಾಬಿಟ್ಟಿ ಹಾಳು ಮಾಡಿಯಾದ ನಂತರದಲ್ಲೂ ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಆಶಾದಾಯಕವಾದ ಕೆಲವು ಅಂಶಗಳನ್ನು ಕಾಣಬಹುದಾಗಿದೆ. ಅತಿ ಎತ್ತರ ಸ್ತರದ ಗುಡ್ಡಗಳನ್ನು ಹೊಂದಿದ ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನಸಂಖ್ಯೆಯ ಹೆಚ್ಚಿನ ಪಾಲು ಸುಶಿಕ್ಷಿತರಾಗಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಗಣನೀಯವಾಗಿ ಶ್ರಮಿಸುತ್ತಿವೆ. ಉದಾಹರಣೆಯಾಗಿ ಕೇರಳದಲ್ಲಿ ಪಂಚಾಯ್ತಿ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗುಣಾತ್ಮಕ ಹೆಜ್ಜೆಗಳನ್ನು ಇರಿಸಲಾಗಿದೆ. ಗೋವಾದಲ್ಲಿ ಸ್ಥಳೀಯ ಯೋಜನೆ ಎಂಬ ಹೆಸರಿನಲ್ಲಿ ಗ್ರಾಮ ಪಂಚಾಯ್ತಿಮಟ್ಟದಲ್ಲಿ ಭೂಮಿಯ ಸುಸ್ಥಿರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದಕ್ಕೆ ರೀಜನಲ್ ಪ್ಲಾನ್-೨೦೨೧ ಎಂದು ಕರೆಯಲಾಗಿದ್ದು, ಈ ಯೋಜನೆಯಲ್ಲಿ ಪಶ್ಚಿಮಘಟ್ಟಗಳ ರಕ್ಷಣೆಗಾಗಿ ಅಂತರ್ಗತ ಕಾಳಜಿಯುಳ್ಳ ನಿಲುವನ್ನು ಕಾಣಬಹುದಾಗಿದೆ. ಇವಿಷ್ಟು ಮುನ್ನುಡಿಯ ಭಾಗಶ: ಸಾರಾಂಶ.

ಡಾ:ಕಸ್ತೂರಿ ರಂಗನ್ ವರದಿ: ಈ ವರದಿಯ ಮುಖಪುಟದಲ್ಲಿ ಉಪಗ್ರಹ ಆಧಾರಿತ ಚಿತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಯಾವುದೇ ಪ್ರಾಣಿ-ಪಕ್ಷಿಗಳ ಚಿತ್ರಣಗಳಿಲ್ಲ. ಇಲ್ಲಿ ಜೀವಿವೈವಿಧ್ಯಗಳು ಕಾಣುವುದಿಲ್ಲ. ಈ ವರದಿಯ ಮುನ್ನುಡಿಯ ಸಾರಾಂಶ: ಹಿಮಾಲಯದ ನಂತರದ ಸ್ಥಾನದಲ್ಲಿ ನಿಲ್ಲುವ ಪಶ್ಚಿಮಘಟ್ಟಗಳ ಶ್ರೇಣಿಗಳು ಭವ್ಯವಾಗಿ, ಜೈವಿಕ ಸಂಪತ್ತಿನ ಅಮೂಲ್ಯ ಸಂಗ್ರಹವಾಗಿದ್ದು, ಇಲ್ಲಿ ಪ್ರಪಂಚದ ಬೇರೆಲ್ಲೂ ಕಾಣದಂತಹ ಸಸ್ಯ ಮತ್ತು ಜೀವಿವೈವಿಧವಿದೆ. ಅತ್ಯಂತ ಸುಂದರವಾದ ಈ ಘಟ್ಟ ಪ್ರದೇಶವೂ ಲಾಗಾಯ್ತಿನಿಂದ ಅತಿ ಹೆಚ್ಚು ಶೋಷಣೆಗೊಳಪಟ್ಟು, ಮಾನವನ ಆಕ್ರಮಣಕ್ಕೆ ಬಲಿಯಾಗಿ ವಿರೂಪಗೊಂಡು, ಪ್ರಪಂಚದ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಪಶ್ಚಿಮಘಟ್ಟಗಳ ಪ್ರಾಮುಖ್ಯತೆಯನ್ನು ಮನಗಂಡ ಕೇಂದ್ರ ಸರ್ಕಾರ ೨೦೧೧ರಲ್ಲಿ ಪಶ್ಚಿಮಘಟ್ಟಗಳ ಪರಿಸರ ವಿಜ್ಞಾನ ತಜ್ಞ ಸಮಿತಿಯನ್ನು ರಚಿಸಿತು. ಆ ವರದಿಗೆ ಆಕ್ಷೇಪಣೆಗಳ ಮಹಾಪೂರವೇ ಹರಿದು ಬಂದಿತು. ರಾಜ್ಯಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳು ಪ್ರೋ:ಮಾಧವ ಗಾಡ್ಗಿಳ್ ವರದಿಯನ್ನು ಒಪ್ಪಲಿಲ್ಲ. ತದನಂತರದಲ್ಲಿ ಎಲ್ಲಾ ತರಹದ ಆಕ್ಷೇಪಣೆಗಳನ್ನು ಪರಿಗಣಿಸಿ ಪಶ್ಚಿಮಘಟ್ಟಗಳ ಸ್ಥಿತಿ-ಗತಿಯನ್ನು ಹೊಸದಾಗಿ ಅಧ್ಯಯನ ಮಾಡಲು ಹೈ ಲೆವೆಲ್ ವರ್ಕಿಂಗ್ ಗ್ರೂಪ್ ಎಂಬ ಸಮಿತಿಯನ್ನು ಪುನ: ರಚಿಸಲಾಯಿತು. ೧,೬೪,೨೮೦ ಚ.ಕಿ.ಮಿ. ಪ್ರದೇಶದ ಪಶ್ಚಿಮಘಟ್ಟಗಳ ೬೦% ಭಾಗದಲ್ಲಿ ಮಾನವ ನಿರ್ಮಿತ ಅಭಿವೃದ್ಧಿಗಳಾಗಿ, ಹಳ್ಳಿ-ಪೇಟೆಗಳು ತಲೆಯೆತ್ತಿವೆ. ಉತ್ತರದಿಂದ ದಕ್ಷಿಣಕ್ಕೆ ೧೫೦೦ ಉದ್ದವಾದ ಈ ಘಟ್ಟಗಳು ಒಟ್ಟು ಆರು ರಾಜ್ಯಗಳಲ್ಲಿ ಹರಡಿಕೊಂಡಿದ್ದು, ಉಳಿದ ೪೦% ಅಂದರೆ ೬೦,೦೦೦ ಚ.ಕಿ.ಮಿ. ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಪರಿಗಣಿಸಬಹುದಾದರೂ, ಇದರಲ್ಲಿ ೩೭% ಪ್ರದೇಶದಲ್ಲಿ ಮಾತ್ರ ದಟ್ಟಾರಣ್ಯವಿದೆ. ಉಳಿದ ಪ್ರದೇಶದಲ್ಲಿ ಚದುರಿದಂತೆ ಜನವಸತಿ ಪ್ರದೇಶಗಳು, ಮಾನವ ನಿರ್ಮಿತ ಏಕಜಾತಿ ನೆಡುತೋಪುಗಳು, ತೋಟಗಾರಿಕಾ ಬೆಳೆಗಳು ಆಕ್ರಮಿಸಿಕೊಂಡಿವೆ.

(ಮುಂದುವರೆಯುವುದು. . .)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು ಪಡೆಯುವುದು, ಇದರಲ್ಲಿ ಶಾಸಕರು ಮತ್ತು ಸಂಸದರ ಅಭಿಪ್ರಾಯವನ್ನು ಗಮನಿಸುವುದು. ಈ ಸಮಿತಿಯು ಒಂದುವರೆ ವರ್ಷಗಳ ಕಾಲ ಕ್ಷೇತ್ರ ಅಧ್ಯಯನ, ಜನಸಾಮಾನ್ಯರ ಅಭಿಪ್ರಾಯ, ಹೂಡಿಕೆದಾರರೊಂದಿಗೆ ಚರ್ಚೆ ನಡೆಸಿ, ಪಶ್ಚಿಮಘಟ್ಟಗಳನ್ನು ಮೂರು ರೀತಿಯ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ, ಮೂರು ಸೂಕ್ಷ್ಮ ಪ್ರದೇಶಗಳ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ಬೇರೆ ಬೇರೆ ರೀತಿಯ ಮಾರ್ಗಸೂಚಿಗಳನ್ನು ಸೂಚಿರುವುದರ ಜೊತೆಗೆ ಪಶ್ಚಿಮಘಟ್ಟ ರಕ್ಷಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತು (ಪ್ರೋ:ಮಾಧವ ಗಾಡ್ಗಿಳ್ ಸಮಿತಿಯ ಮುನ್ನುಡಿಯ ಸಾರಾಂಶವಿಷ್ಟು). […]

1
0
Would love your thoughts, please comment.x
()
x