ಮೃದುಲ: ಪಾರ್ಥಸಾರಥಿ ಎನ್.


 ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ ತುಂಬಿದಂತೆ ಪೂರ್ಣ ಎಚ್ಚರಗೊಂಡು ಎದ್ದು ಕುಳಿತಳು. 

ಅಮ್ಮ ಗೀಸರ್ ಆನ್ ಮಾಡಿರುವಳೋ ಇಲ್ಲವೋ ಸ್ನಾನಕ್ಕೆ ತಡವಾಗುತ್ತದೆ ಎನ್ನುತ್ತ ಮಂಚ ಇಳಿಯಲು ಹೋದವಳಿಗೆ ಅರಿವಾಯಿತು ತನ್ನ ಕಾಲುಗಳು ಸಹಕರಿಸುತ್ತಿಲ್ಲ. ತಕ್ಷಣ ಅರಿವು ಮೂಡಿತು, ತನ್ನ ಬಲಗಾಲನ್ನು ಕತ್ತರಿಸಲಾಗಿದೆ, ತಾನೀಗ ಸ್ವತಂತ್ರವಾಗಿ ಮೊದಲಿನಂತೆ ಇಳಿದು ಓಡಲಾರೆ .  ಹುಟ್ಟಿನಿಂದಲೂ ಚಿಗರೆಯಂತೆ ಓಡಿಯಾಡಿಕೊಂಡಿದ್ದವಳಿಗೆ , ಈಗ ಒದಗಿದ ಅಂಗವಿಕಲತೆ ಅವಳನ್ನು ಅಸಾಯಕಳನ್ನಾಗಿ ಮಾಡಿತ್ತು. 

ನಿದ್ದೆಯಲ್ಲಿ ನಗುತ್ತಿದ್ದ ಅವಳ ಮುಖ ಕಳೆಗುಂದಿತು. ಅಸಾಹಯಕತೆ ಅವಳ ಮನವನ್ನು ಪುನಃ ತುಂಬಿತು. 

*****

ಮೃದುಲಾ ಇನ್ನು ಹದಿನೆಂಟು ಇಪ್ಪತರ ಹುಡುಗಿ. ಜೀವನದಲ್ಲಿ ಎಲ್ಲ ಉತ್ಸಾಹವನ್ನು ತುಂಬಿಕೊಂಡಿದ್ದವಳು. ಜೀವನದ ಎಲ್ಲ ಸುಖಗಳು ಅವಳಿಗಾಗಿ ಇತ್ತು. ಅಪ್ಪನಿಗೆ ಅಕ್ಕರೆಯ ಮಗಳಾಗಿದ್ದಳು, ಅಮ್ಮನ ಮುದ್ದುಕೂಸಾಗಿದ್ದಳು, ಅವಳ ಅಣ್ಣನಿಗೆ ಅಕ್ಕರೆಯ ತಂಗಿಯಾಗಿದ್ದವಳು . ಎಲ್ಲವೂ ಸರಿಯಿದ್ದಾಗ ವಿಧಿಯ ಚೆಲ್ಲಾಟ ಅವಳ ಬದುಕಿನ ಕನಸನ್ನೆಲ್ಲ ಹೊಸಕಿ ಹಾಕಿತ್ತು. 

ಅಪ್ಪ ಹೊಸದಾಗಿ ಕೊಡಿಸಿದ್ದ ಸ್ಕೂಟಿ ಓಡಿಸುವದೆಂದರೆ ಅವಳಿಗೆ ಸಲ್ಲದ ಉತ್ಸಾಹ, ಕಾಲೇಜಿಗೆ ಗಾಡಿ ತೆಗೆದುಕೊಂಡು ಹೋಗಲು ಅವಳ ಅಮ್ಮ ಒಪ್ಪುತ್ತಿರಲಿಲ್ಲ, ಹಾಗಾಗಿ ಕಾಲೇಜು ಮುಗಿದ ನಂತರ ಮನೆಗೆ ಬಂದಳೆಂದರೆ ಆಯಿತು ,ತಾನಾಗಿಯೆ ಕೆಲಸಗಳನ್ನು ಹೊಂಚಿಕೊಂಡು, ಸ್ನೇಹಿತೆಯರಿಗೆ ಪೋನ್ ಮಾಡಿ ತನ್ನ ಸ್ಕೂಟಿಯಲ್ಲಿ ಹೊರಡುವಳು. ಅಪ್ಪ ಹಾಗು ಅಮ್ಮ ಹುಷಾರು ಎಂದು ಎಷ್ಟು ಹೇಳಿದಾಗಲು ಅವಳಿಗೆ ಗಮನವಿಲ್ಲ . 

ಇಂಜಿನೀಯರಿಂಗ್ ಮೂರನೆ ವರ್ಷ ಓದುತ್ತಿದ್ದ ಅವಳಿಗೆ ಕಾಲೇಜಿನ ಹಾಗು ತಾನು ಓದಿದ ಹೈಸ್ಕೂಲಿನ ಗೆಳೆತಿಯರ ಗುಂಪು ಜಾಸ್ತಿ. ಅವರೊಡನೆ ಕಾಲ ಕಳೆಯುವದೆಂದರೆ ಗಾಳಿಯಲ್ಲಿ ತೇಲಿದಂತೆ, ಅವಳ ಅಮ್ಮ ಅಪ್ಪನಾದರು ಅವಳನ್ನು ಬೈದು ಅವಳ ಮನಸನ್ನು ನೋಯಿಸಲು ಇಷ್ಟವಿಲ್ಲದೆ, ಕೆಲವೊಮ್ಮೆ ಅವಳು ಸುತ್ತುವುದು ಜಾಸ್ತಿ ಅನ್ನುವಾಗಲು ಸುಮ್ಮನೆ ಇರುತ್ತಿದ್ದರು. ಅಣ್ಣ ಹರೀಶನಂತು ಪದೆ ಪದೆ ಹೇಳುತ್ತಿದ್ದ,
’ ಲೇ ನಿನಗೆ ಸರಿಯಾಗಿ ಗಾಡಿ ಓಡಿಸುವದಕ್ಕೆ ಬರುವದಿಲ್ಲ, ಇನ್ನೂ ಬ್ಯಾಲೆನ್ಸ್ ಪರ್ ಫೆಕ್ಟ್ ಇಲ್ಲ , ಮೈನ್ ರೋಡ್ ಗೆ ಹೋಗಬೇಡ’ ಎಂದು. 

ಅವಳಾದರು
’ಹೋಗೊ ನಿನಗಿಂತ ಚೆನ್ನಾಗಿ ಓಡಿಸುತ್ತೇನೆ ಗೊತ್ತ , ನೀನು ಸುಮ್ಮನೆ ಜಲಸಿಗೆ ಹಾಗಂತಿ, ಸುಮ್ಮನೆ ಹೇಳ್ತಾರೆ ಹುಡುಗಿಯರಿಗೆ ಜಲಸಿ ಅಂತ, ನಿನಗೆ ಅವರಿಗಿಂತ ಜಾಸ್ತಿ’ ಎಂದು ಅವನನ್ನು ರೇಗಿಸಿ ಸುಮ್ಮನಾಗಿಸುತ್ತಿದ್ದಳು 

ಮೃದುಲಾಳ ಅಪ್ಪನ ತಂಗಿ ವೇದ ಅಂತ ಇದ್ದರು ಅವರ ಮಗ ಶ್ರೀನಿಧಿಗೆ  ಮೃದುಲಾ ಅಂದರೆ ಚಿಕ್ಕವಯಸಿನಿಂದಲೂ ಪ್ರಾಣ ಅದು ಹೇಗೋ ಅವರಿಬ್ಬರು ಗಂಡ ಹೆಂಡತಿ ಅಂತಲೇ ಎಲ್ಲರೂ ನಿರ್ಧರಿಸಿದ್ದರು. ಶ್ರೀನಿಧಿ ಹಾಗು ಮೃದುಲ  ಇಬ್ಬರಿಗೂ ಇಷ್ಟವೇ ಇತ್ತು. ಮೃದುಲಾಳ ಡಿಗ್ರಿ  ಮುಗಿಯುವದನ್ನೆ ಶ್ರೀನಿಧಿ ಕಾಯುತ್ತಿದ್ದ, ನಂತರ ಅವಳನ್ನು ತಾನು ಇರುವ ಅಮೇರಿಕಾಗೆ ಕರೆಸಿಕೊಳ್ಳುವುದು ಎಂದು ಅವನ ಲೆಕ್ಕಾಚಾರ.

ಎಲ್ಲರೂ ಅವರವರ ಲೆಕ್ಕಚಾರದಲ್ಲಿದ್ದರೆ ವಿಧಿಯ ಲೆಕ್ಕಚಾರ ಬೇರೆಯೆ ಇತ್ತು . ಅಂದು ಕಾಲೇಜಿನಲ್ಲಿ ಪರೀಕ್ಷೆಯ ಕಡೆಯ  ಪೇಪರ್  ಮುಗಿಸಿ ಮನೆಗೆ ಬಂದ ಮೃದುಲಾ ,  ಅವರ ಅಮ್ಮ  ‘ಊಟ ಮುಗಿಸಿ ಹೋಗೆ’  ಎಂದು ಕೂಗುತ್ತಿದ್ದರು ಕೇಳಿಸಿಕೊಳ್ಳದವಳಂತೆ ತನ್ನ ಗಾಡಿ ಹತ್ತಿ ಪ್ರೆಂಡ್ ಮನೆಗೆ ಎಂದು ಅವಸರದಲ್ಲಿ ಹೊರಟಳು. ಅದು ಅವರೆಲ್ಲರೂ ಕೂಡಿ ಹೊಸದಾಗಿ ರಿಲೀಸ್ ಆದ ಹಿಂದಿ ಸಿನಿಮಾಗೆ ಹೋಗುವದಿತ್ತು. ಸಿನಿಮಾಗೆ ಎಂದು ಆತುರದಲ್ಲಿ ಹೊರಟ ಮೃದುಲಾ ಅಲ್ಲಿಗೆ ತಲುಪುವ ಮೊದಲೆ ಅಪಘಾತಕ್ಕೆ ಒಳಗಾದಳು. 

ಸ್ನೇಹಿತೆಯರೆಲ್ಲ ಕಾಯುತ್ತಿರುತ್ತಾರೆ ಎನ್ನುವ ಆತುರದಲ್ಲಿದ್ದ ಅವಳಿಗೆ ತಾನು ಗಾಡಿ ಡ್ರೈವ್ ಮಾಡುವಾಗ ಬಂದ ಮೊಬೈಲ್ ಕಾಲ್ ಗಮನವನ್ನು ರಸ್ತೆಯಿಂದ ಹೊರಸೆಳೆದಿತ್ತು, ಹಿಂದಿನಿಂದ ಬರುತ್ತಿದ್ದ ಮರಳುತುಂಬಿದ ಲಾರಿಯನ್ನು ಅವಳು ಗಮನಿಸಲಿಲ್ಲ. ಮೊಬೈಲ್ ನೋಡುವ ಅವಸರದಲ್ಲಿ ತನ್ನ ಬ್ಯಾಲೆನ್ಸ್ ಕಳೆದುಕೊಂಡ ಅವಳು ಕೆಳಗೆ ಬಿದ್ದಳು, ಲಾರಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಾರದೆ ಹೋದ ಕಾರಣ ಲಾರಿ ಅವಳ ಗಾಡಿಗೆ ಡಿಕ್ಕಿ ಹೊಡೆದುದ್ದಲ್ಲದೆ ಅವಳ ಬಲಗಾಲಮೇಲೆ ಹರಿದಿತ್ತು, ಗಾಭರಿಯಲ್ಲಿ ಅವಳ ಸ್ಮೃತಿ ತಪ್ಪಿತು. 

ಅವಳಿಗೆ ಎಚ್ಚರವಾಗುವಾಗ ಅಸ್ಪತ್ರೆಯಲ್ಲಿದ್ದರು, ಗಾಭರಿಗೊಂಡ ಅಪ್ಪ ಅಮ್ಮ ಅಣ್ಣ .   ಯಾರಿಗೂ ಅವಳ ಕಾಲನ್ನು ಉಳಿಸಿಕೊಳ್ಳಲಾಗಲಿಲ್ಲ, ಸಂಪೂರ್ಣ ಊನಗೊಂಡಿದ್ದ ಅವಳ ಕಾಲನು ತೆಗೆಯದೇ ವಿಧಿಯಿಲ್ಲ ಎಂದು ಡಾಕ್ಟರ್ ತಿಳಿಸಿದರು. 

ಈಗ  ಅವಳ ಸುತ್ತಲಿನ ಸ್ಥಿತಿ ಬದಲಾಗಿತ್ತು, ಅವಳ ಅಪ್ಪ ಅಮ್ಮ ಅಣ್ಣ ಅವಳನ್ನು ಕರುಣೆಯಿಂದ ನೋಡಿಕೊಳ್ಳುತ್ತಿದ್ದರು. ಆದರೂ ಮುಂದೆ ಹೇಗೋ ಎನ್ನುವ ಯೋಚನೆ ಅವರೆಲ್ಲರ ಮನವನ್ನು ಆಕ್ರಮಿಸಿತು. ಅವಳ ಇಂಜಿನೀಯರಿಂಗ್  ಆ ವರ್ಷದ ಪರೀಕ್ಷೆಗಳೆಲ್ಲ  ಮುಗಿದಿದ್ದರಿಂದ ತೊಂದರೆ ಆಗಿರಲಿಲ್ಲ, ನಾಲ್ಕನೆ ವರ್ಷದ ಪ್ರಾರಂಬದಲ್ಲಿದ್ದರಿಂದ ಕಾಲೇಜಿಗೆ ಹೋಗಿ ವಿಷಯ ತಿಳಿಸಿದ್ದರು. ಸ್ವಲ್ಪ ಕಾಲಾವಕಾಶದಲ್ಲಿ ಕಾಲೇಜಿಗೆ ಬರುವಳೆಂದು 

ಶ್ರೀನಿಧಿಯ ಅಮ್ಮ  ವೇದ ತಾನು ಗಂಡನೊಡನೆ ಬಂದು ಹೋಗಿದ್ದರು, ತಾನು ಸೊಸೆಯನ್ನಾಗಿ ಮಾಡಿಕೊಳ್ಳುವ ಹುಡುಗಿ ಹೀಗಾದುದ್ದನು ಕಾಣುವಾಗ ಅವರಿಗೂ ದುಃಖ , ಅದೇ ದುಃಖದಲ್ಲಿಯೇ ಹೇಳಿದ್ದರು
’ಏನೇ  ನಾನು ಮಗನಿಗೆ ತಂದುಕೊಳ್ಳುವೆ ಎಂದು ಎಷ್ಟೊಂದು ಅಸೆಯಲ್ಲಿದ್ದೆ ಈಗ ಹೀಗೆ ಆಗಿಹೋಯಿತಲ್ಲೆ,  ಈಗೊಳ್ಳೆ ಚಿನ್ನದ ಸೂಜಿಯ ತರವಾಯ್ತಲ್ಲೆ ಇವಳನ್ನು ತಂದುಕೊಳ್ಳುವ ಮಾತು’.

ಮೃದಲಾಳ ಅಪ್ಪ ಹಾಗು ಅಮ್ಮನಿಗೆ ಅರ್ಥವಾಗಿತ್ತು, ವೇದಳ ಮಾತು, ಇನ್ನು ಆ ಸಂಬಂಧ ಮರೆತಂತೆಯೇ ಎಂದು ಕೊಂಡಿದ್ದರು, ಮಗಳ ಮುಂದಿನ ಭವಿಷ್ಯದ ಚಿಂತೆ ಅವರಿಬ್ಬರನ್ನು ಕಾಡಿತ್ತು

 ***** 

ಹೊರಗೆ ಯಾರೋ ಬಾಗಿಲು ಬೆಲ್ ಮಾಡಿದಂತಾಗಿ ಮೃದಲ ಅಮ್ಮ ಹೋಗಿ ಬಾಗಿಲು ತೆರೆದರು, ಗಂಭೀರ ಮುಖಭಾವದ ಹುಡುಗ 
’ಅಮ್ಮ ನಮಸ್ಕಾರ, ನಾನು ಶಶಾಂಕ್ ಎಂದು ಮೃದಲ ಜೊತೆ ಕಾಲೇಜಿನಲ್ಲಿ ಕಲಿಯುತ್ತಿರುವವನು.  ಅವರನ್ನು ಮಾತನಾಡಿಸೋಣವೆಂದು ಬಂದೆ’ 

ಆಕೆ ಸ್ವಲ್ಪ ಮೃದುವಾದರು. ಮಗಳು ಸದಾ ಸುತ್ತುತ್ತಿದ್ದ  ಅಷ್ಟೊಂದು ಗೆಳತಿಯರಲ್ಲಿ ಒಬ್ಬರಾದರು ಒಮ್ಮೆ ಬಂದು ಮಗಳ ಸ್ಥಿತಿ ವಿಚಾರಿಸಿರಲಿಲ್ಲ, ಆಕ್ಸಿಡೆಂಟ್ ಆದ ದಿನವೂ ಅವಳ ಮೊಬೈಲ್ ನಿಂದ ಅಪರಿಚಿರರಾರೊ ಅವಳ ತಂದೆಯ ಮೊಬೈಲ್ ಗೆ ಕಾಲ್ ಮಾಡಿ ಮಗಳ ವಿಷಯ ತಿಳಿಸಿದ್ದರೆ ವಿನಾಃ ಆ ಗೆಳತಿಯರ ಗುರುತೇ ಇರಲಿಲ್ಲ. ಹಾಗಿರುವಾಗ ಮಗಳು ಓದುವ ಕಾಲೇಜಿನಿಂದ ಒಬ್ಬ ಹುಡುಗ ಈ ಸ್ಥಿತಿಯಲ್ಲಿ ಬಂದಿದ್ದಾನೆ ಅನ್ನುವಾಗ ಆಕೆ ಅವನನ್ನು ಒಳಗೆ ಸ್ವಾಗತಿಸಿದರು. ಬೇರೆ ಸಮಯದಲ್ಲಿ ಹೇಗೆ ವರ್ತಿಸುತ್ತಿದ್ದರೋ ಏನೊ ಆದರೆ ಮಗಳ ಈಗಿರುವ ಸ್ಥಿತಿ ಅವರನ್ನು ಮೃದು ಮಾಡಿತ್ತು. 

’ಬಾಪ್ಪ ಒಳಗೆ’ ಎಂದೆ ಕರೆದು, 
’ಅವಳು ಎದ್ದು ಬರುವುದು ಕಷ್ಟ, ನೀನೆ ಒಳಗೆ ಬಾ ’ 
ಎಂದು ಅವಳ ರೂಮಿಗೆ ಕರೆದೋಯ್ದರು. 

ಏನೋ ಯೋಚಿಸುತ್ತ ಮಲಗಿದ್ದ ಮೃದುಲ , ಶಶಾಂಕನನ್ನು ಕಾಣುವಾಗ ಸ್ವಲ್ಪ ಅಚ್ಚರಿಯಿಂದಲೆ ಸ್ವಾಗತಿಸಿದಳು. 
ಅವಳು ಮಲಗಿದ್ದ ಸ್ಥಿತಿ, ಪಕ್ಕದಲ್ಲಿದ್ದ ಕೈಆಸೆರೆಯ ವಾಕರ್, ಎಲ್ಲವನ್ನು ಗಮನಿಸಿ , ಅಲ್ಲೆ ಇದ್ದ ಕುರ್ಚಿಯಲ್ಲಿ ಕುಳಿತ ಶಶಾಂಕ 

’ಈಗ ಹೇಗಿದ್ದೀರ, ಮನೆಗೆ ಬರುವುದು ಎಂದು ತುಂಬಾ ಸರಿ ಅಂದುಕೊಂಡೆ, ಈಗ ಬಂದುಬಿಟ್ಟೆ ’ 

’ಸರಿ ಬಿಡಿ ಈಗಲಾದರು ಬಂದಿರಲ್ಲ, ನೀವು ಬಂದಿದ್ದು ನನಗೆ ಸ್ವಲ್ಪ ಆಶ್ಚರ್ಯವೇ ಆಗಿದೆ’ 
ನಗುತ್ತ ನುಡಿದಳು ಮೃದುಲ. 

ಹಾಸಿಗೆ ಮೇಲೆ ಕುಳಿತಿದ್ದರು ಅವಳ ಮುಖದ ಪ್ರಭೆ ಕಡಿಮೆಯಾಗಿಲ್ಲ ಅಂದುಕೊಂಡ ಶಶಾಂಕ ಮನದಲ್ಲೆ . ಮೃದುಲಾಳ ಅಮ್ಮ ಕಾಫಿ ತರುತ್ತೇನೆ ಎಂದು ಅಲ್ಲಿಂದ ಹೊರಗೆ ಹೋದರು.

*****

ಶಶಾಂಕನದು ಸದಾ ಗಂಭೀರ ಸ್ವಭಾವ , ಮಾತಿಗಿಂತ ಮೌನವೇ ಜಾಸ್ತಿ. ಅವನು ಅವಳಿಗಿಂತ ಒಂದು ವರ್ಷ ಸೀನಿಯರ್, ಆದರೆ ಮೂರನೆ ವರ್ಷದಲ್ಲಿ ಎಲ್ಲ ಸಬ್ಜೆಕ್ಟ್ ಫೇಲ್ ಆದ ಪ್ರಯುಕ್ತ, ಒಂದು ವರ್ಷ ಬ್ಯಾಕ್ ಆಗಿ, ಮನೆಯಲ್ಲಿ ಕಳೆದು, ಎಲ್ಲವನ್ನು ಪಾಸ್ ಮಾಡಿ, ಈಗ ಪುನಃ ಕಾಲೇಜಿಗೆ ಬರುತ್ತಿದ್ದ. 

ಅವನ ಹಿಂದಿನ ವರ್ಷಗಳ ಎಲ್ಲ ಮಾರ್ಕ್ ನೋಡುವಾಗ ಅವಳಿಗೆ ಅಚ್ಚರಿ, ಎಸ್ ಎಸ್ ಎಲ್ ಸಿ ಆಗಲಿ ಪೀಯು ಆಗಲಿ  96 % ಮಾರ್ಕ್ಸ್ ತೆಗೆದವನು ಅವನು, ಇಂಜಿಯೀಯರಿಂಗ್ ಎರಡು ವರ್ಷಗಳಲ್ಲಿ ಎಲ್ಲ ವಿಷಯಗಳಲ್ಲಿ 80 ಕ್ಕಿಂತ ಹೆಚ್ಚು ಮಾರ್ಕ್ಸ್ ತೆಗೆದಿದ್ದಾನೆ, ಅಂತಹವನು ತನ್ನ ಆರನೇ ಸೆಮಿಷ್ಟರ್ ನಲ್ಲಿ ಎಲ್ಲ ವಿಷಯಗಳಲ್ಲಿ ಪೇಲ್ ಆಗಿ ಬ್ಯಾಕ್ ಆಗಿದ್ದು ಅವಳಿಗೆ ಅಚ್ಚರಿ 
‘ಇದೆ ಏಕೆ , ಹೇಗೆ ?”  ಎಂದು ಒಮ್ಮೆ ಕೇಳಿದ್ದಳು
’ಶಾಕ್ ಕೊಡಲು, ನಮ್ಮ ಅಪ್ಪ ಅಮ್ಮನಿಗೆ ಶಾಕ್ ಕೊಡಲು’ ಎಂದ.
ಮೃದುಲ ಆಶ್ಚರ್ಯದಿಂದ 
’ಅದೆಂತದು ಅಪ್ಪ ಅಮ್ಮನಿಗೆ ಶಾಕ್ ಕೊಡುವುದು’ ಎಂದು ಕೇಳಿದರೆ ವಿವರಿಸಿದ.
’ನಾನು ಚಿಕ್ಕ ವಯಸಿನಿಂದಲೂ ಗಮನಿಸುತ್ತಿದ್ದೇನೆ,  ನಾನು ಮಾರ್ಕ್ ತೆಗೆಯುವದೊಂದೆ ಅವರಿಬ್ಬರ ಯೋಚನೆ, ಅದು ಬಿಟ್ಟು ಬೇರೆ ಯಾವ ಯೋಚನೆಗಳು ಅವರಿಬ್ಬರಲ್ಲಿ ಮೂಡುತ್ತಿರಲಿಲ್ಲ. ಅದು ಯಾವ ಮಟ್ಟಕ್ಕೆಂದರೆ ನಾನು ಎಸ್ ಎಸ್ ಎಲ್ ಸಿಯಲ್ಲಿ 96 ತೆಗಿದಾಗಲು ಅವರು 98% ತೆಗೆದ ಹುಡುಗನನ್ನು ತೋರಿಸಿ ನೋಡು ಎಂದರು, ಪೀಯುಸಿಯಲ್ಲಿ   95% ತೆಗೆದಾಗಲು ಸಹ ನನಗಿಂತ ಒಂದು ಮಾರ್ಕ್ಸ್ ಹೆಚ್ಚು ತೆಗೆದವನನ್ನು ಹೋಲಿಸಿದರು. ಇಂಜಿನೀಯರಿಂಗ್ ಗೆ ಬಂದಾಗಲು ನನ್ನನ್ನು ಎಲ್ ಕೇಜಿ ಹುಡುಗನಂತೆ ನೋಡಿಕೊಳ್ಳುತ್ತಿದ್ದರು, ನಾನೊಂದು ಮಾರ್ಕ್ ತೆಗೆಯುವ ರೋಬಾಟ್ ಅವರ ಪಾಲಿಗೆ ’  

ನಗುತ್ತ ಮುಂದುವರೆಸಿದ.

’ನಾನು ಒಮ್ಮೆ ಪೇಲ್ ಆದರೆ ಹೇಗಿರುತ್ತೆ, ಬಹುಷಃ ಈ ಮಾರ್ಕ್ಸ್ ನ ಭ್ರಮೆ ಅವರನ್ನು ಬಿಟ್ಟು ಹೋಗಬಹುದೇನೊ ಅಂದುಕೊಂಡೆ, ಮಗ ಅಂದರೆ ಬರಿ ಮಾರ್ಕ್ಸ್ ಅಲ್ಲ , ಮತ್ತೂ  ಏನೋ ಇದೆ ಎಂದು ಅವರಿಗೆ ತೋರಿಸುವ ಎಂದುಕೊಂಡೆ, ಅದಕ್ಕೆ ಆರನೆ ಸೆಮಿಸ್ಟರ್ ಬರೆಯುವಾಗ ಏನನ್ನು ಬರೆಯದೆ ಬರಿ ಪೇಪರ್ ಕೊಟ್ಟು ಹೊರಗೆ ಬರುತ್ತಿದ್ದೆ, ಯಾವಾಗ ಫೇಲ್ ಎಂದು ಬಂದಿತೋ , ಅಪ್ಪ ಅಮ್ಮ ಇಬ್ಬರೂ ಶಾಕ್ ಆಗಿ ಹೋದರು. ತಮ್ಮ ಮಗ ಪೇಲ್ ಆಗುವದನ್ನು ಕಲ್ಪಿಸಿಕೊಳ್ಲಲು ಸಾದ್ಯವಿಲ್ಲದ ಅವರಿಬ್ಬರೂ ಮೌನವಾದರು, ಬಹುಷಃ ನನ್ನನ್ನು ಮಾತನಾಡಿಸುವ ಪರಿಯೂ ಬದಲಾಯಿತು’ 
ಮೃದುಲ ಆಶ್ಚರ್ಯಪಡುತ್ತ, 

’ಅಲ್ಲ ಅಪ್ಪ ಅಮ್ಮನಿಗೆ ಶಾಕ್ ಕೊಡುತ್ತೇನೆ ಎಂದು ನಿನ್ನ ಒಂದು ವರ್ಷದ ಜೀವನವನ್ನು ವ್ಯರ್ಥ ಮಾಡುವುದೇ " ಎಂದಳು

’ವ್ಯರ್ಥವೇ, ಏನು ನೀನನ್ನುವುದು, ವ್ಯರ್ಥವಾಯಿತು ಎಂದರೇನು, ನಾನು ಒಂದು ವರ್ಷ ಮೊದಲೇ  ಕೆಲಸಕ್ಕೆ ಸೇರಿ ದುಡಿಯುವುದು ನಷ್ಟವಾಯಿತು ಎಂದು ಅರ್ಥವೆ, ಜೀವನಕ್ಕೆ ಬೇರೆ ಯಾವ ಅರ್ಥವೂ ಇಲ್ಲವೇ. ಅಷ್ಟಕ್ಕೂ ನಿಜಕ್ಕೂ ನಮ್ಮ ಅಪ್ಪ ಅಮ್ಮನಿಗೆ ಅಂತಹ ಒಂದು ಟ್ರೀಟ್ ಮೆಂಟ್ ಬೇಕಿತ್ತು ಅವರು ತಮ್ಮ ಭ್ರಮೆಯಿಂದ ಹೊರಬರಬೇಕಿತ್ತು, ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಕಷ್ಟ ಪಡುತ್ತಿದ್ದರು’ 
ಎಂದ .
’ನೀನೊಳ್ಳೆ  ವಯಸಾದವರಂತೆ ಪಿಲಾಸಫಿ ಮಾತನಾಡುತ್ತೀಯಪ್ಪ ನನಗೆ ಅರ್ಥವಾಗುವದಿಲ್ಲ ’ 
ಎಂದುನುಡಿದು ಸುಮ್ಮನಾಗಿದ್ದಳು  ಮೃದುಲಾ.

******

ಈಗ ಅಂತಹ ಶಶಾಂಕ ಬಂದಿರುವುದು ಅವಳಿಗೆ ಸ್ವಲ್ಪ ಶಾಕ್ ಆಗಿತ್ತು, ಬಹುಷಃ ಇವನು ಜೀವನದಲ್ಲಿ ಎಲ್ಲರಿಗೂ ಶಾಕ್ ಕೊಡುತ್ತಲೆ ಇರುತ್ತಾನೇನೊ ಎಂದುಕೊಂಡವಳಿಗೆ ನಗು ಬಂತು
’ಅದೇನು ನಗುತ್ತಿದ್ದೀ, ಈಗ ಹೇಗಿದೆ ಆರೋಗ್ಯ, ಸ್ವಲ್ಪ ನಡೆದಾಡುವಂತಾದರೆ ಕಾಲೇಜಿಗೆ ಬರಬಹುದಲ್ಲವೇ ’
ಆ ಮಾತನ್ನು ಕೇಳುವಾಗ ಅವಳಿಗೆ ಅಳು ತುಂಬಿ ಬಂತು
’ಇನ್ನೆಲ್ಲಿಯ  ಕಾಲೇಜು , ಈ ಅವಸ್ಥೆಯಲ್ಲಿ ಕಾಲೇಜಿಗೆ ಬರುವುದೇ’ ಎಂದಳು. 

ಶಶಾಂಕ ನಗುತ್ತ ಹೇಳಿದ, 
’ಇದೇನು ಈಗ ನಗುತ್ತೀರಿ, ಈಗ ಅಳುತ್ತೀರಿ, ಯಾವುದಾದರು ಒಂದು ಮಾಡಿ ನನಗೆ ಕನ್ ಪ್ಯೂಸ್ ಮಾಡಬೇಡಿ’  

ಕಾಫಿ ಹಿಡಿದು ಒಳಬಂದ ಅವರ ಅಮ್ಮ 
’ನೋಡಪ್ಪ ನೀನಾದರು ಅವಳಿಗೆ ಹೇಳು, ಕಾಲೇಜಿಗೆ ಬರಲ್ಲ ಅಂತಾಳೆ, ಅವಳಿರುವ ಸ್ಥಿತಿಯಲ್ಲಿ ಕಡೆಗೆ ಒಂದು ಕಾಲೇಜಿನ ಓದಾದರು ಮುಗಿಸಬೇಡವೇ" ಎಂದರು

ಶಶಾಂಕ ತೀಕ್ಷ್ಣವಾಗಿ ಮೃದುಲಾಳ ಅಮ್ಮನನ್ನು ನೋಡಿದ.

’ನೋಡಿ ದೊಡ್ಡವರು ನೀವೆ ಹೀಗೆ ಮಾತನಾಡುತ್ತೀರಿ, ಅವಳಿರುವ ಸ್ಥಿತಿ ಅಂದರೇನು, ಈಗ ಅಂತಹುದೇನಾಗಿದೆ ಹೇಳಿ, ಒಂದು ಕಾಲು ಮುರಿದಿದೆ ಅಷ್ಟೆ ಅಲ್ಲವೇ, ಇನ್ನೊಂದು ಕಾಲು  ಸರಿ  ಇದೇ ತಾನೆ , ಎರಡು ಕೈಗಳು ಎಲ್ಲ ಬಾಗಗಳು ಸರಿಯಾಗಿಯೆ ಇದೆಯಲ್ಲ. ಒಂದು ಕಾಲು ಮುರಿದ ಮಾತ್ರಕ್ಕೆ ಜೀವನ ಮುಗಿದು ಹೋಯಿತು ಎಂದೇಕೆ ಭಾವಿಸುವಿರಿ’ 

ಮೃದುಲ ತನ್ನ ಅಳು ನಿಲ್ಲಿಸಿ ಅವನತ್ತ ನೋಡಿದಳು. ಅವರಮ್ಮನು ಸಂಕೋಚದಿಂದ ನೋಡುತ್ತಿದ್ದರು

’ತಪ್ಪು ತಿಳಿಯಬೇಡಿ ಅಮ್ಮ,  ಈ ರೀತಿ ಕಾಲು ಇಲ್ಲದೆ ಕೈ ಇಲ್ಲದೆ ತಮ್ಮ ಜೀವನದಲ್ಲಿ ಅಪೂರ್ವವಾದುದ್ದನು ಸಾಧಿಸಿದವರು ಬಹಳ ಜನರಿದ್ದಾರೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಇಂತವರು ಎಲ್ಲ ಅಂಗ ಸರಿ ಇದ್ದವರೂ ನಾಚುವಂತೆ ತಮ್ಮ ಸಾಧನೆ ದಾಖಲಿಸಿದ್ದಾರೆ, ಮೃದುಲ ತನಗೆ ಆಗಿರುವ ಆಕ್ಸಿಡೆಂಟ್ ನ ಶಾಕ್ ನಲ್ಲಿದ್ದಾರೆ ಅಷ್ಟೆ. ಅದರಿಂದ ಹೊರಬರುವದೇನು ದೊಡ್ಡದಲ್ಲ’ ಎಂದ 

ಮೃದುಲಾಳ ತಾಯಿ ಅವನನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು, ವಯಸಿನಲ್ಲಿ ತಮ್ಮ ಮಗಳಷ್ಟೆ ಏನೊ,  ಆದರೆ ಇವನ ಅನುಭವ, ಜೀವನ ದೃಷ್ಟಿ ತುಂಬಾ ಎತ್ತರದಲ್ಲಿದೆ, ಎಂದುಕೊಂಡರು.

ಶಶಾಂಕ ಹೇಳುತ್ತಿದ್ದ
’ಮೃದುಲಾ ನೋಡಿ, ನೀವು ಈಗ ಈ ವಾಕರ್ ಸಹಾಯದಿಂದ ನಡೆಯುತ್ತಿದ್ದೀರಿ ಅಲ್ಲವೇ ಸುಮ್ಮನೆ ಏನು ಕುಳಿತಿಲ್ಲವಲ್ಲ, ಹಾಗಾಗಿ ಕಾಲೇಜಿಗೆ ಬರಬಹುದು. ಅಲ್ಲದೆ ನೋಡಿ ನಿಮಗೊಂದು ವಿಷಯ ತಿಳಿದಿದೆಯೋ ಇಲ್ಲವೋ, ಈ ಪರಿಸ್ಥಿತಿ ಎದುರಿಸುವರಿಗಾಗಿಯೆ  ,ಎಂದು ಕೆಲವೂ ಅನುಕೂಲ ಕಲ್ಪಿಸುವ ಸಂಸ್ಥೆಗಳಿವೆ. ಬೆಂಗಳೂರಿನ ಸಿದ್ದಾಪುರದ ಲಾಲ್ ಬಾಗ ಹತ್ತಿರ , ಜೈಪುರ ಭಗವಾನ್ ಜೈನ್ ಹೆಸರಿನಲ್ಲಿ  ಕೃತಕ ಕಾಲನ್ನು ನಿರ್ಮಿಸಿಕೊಡುವ ಅನುಕೂಲವಿದೆ. ಅಲ್ಲಿ ಪ್ರತಿಯೋಬ್ಬರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಡುತ್ತಾರೆ, ನೀವು ನಂಬಿ, ನಿಮಗೆ ಸ್ವಲ್ಪ ಅಭ್ಯಾಸವಾದರೆ ಆಗ ಈಕೋಲಿನ ಅಥವ ವಾಕರ್ ಅವಶ್ಯಕತೆ ಸಹ ಇರುವದಿಲ್ಲ, ಸಾದಾರಣವಾಗಿಯೆ ನಡೆಯುತ್ತೀರಿ. ಅಭ್ಯಾಸವಾದನಂತರ ಕೃತಕಕಾಲು ಧರಿಸಿರುವುದು ನಿಮಗೆ ಮರೆತೆ ಹೋಗುತ್ತದೆ ಅಷ್ಟು ಸಹಜ.    ನೋಡಿ ಅದಕ್ಕೆ ಸಂಬಂದಿಸಿದ ಎಲ್ಲ ವಿವರಗಳು ಇಲ್ಲಿವೆ ನಿಮಗಾಗಿ ತಂದಿರುವೆ, ನಿಮಗೆ ಬೇಕಿದ್ದರೆ ಇಂಟರ್ ನೆಟ ನಲ್ಲಿ ಅದೇ ರೀತಿಯ ಕೆಲವು ಸೇವಾ ಸಂಸ್ಥೆಗಳಿವೆ , ನಿನಗೆ ಬೇಕಾದ ಎಲ್ಲ ವಿಷಯಗಳು ತಿಳಿಯುತ್ತದೆ’ ಎಂದ

ಮೃದುಲ ಮನಸ್ಸು   ಸಮಾದಾನಕ್ಕೆ ಬರುತ್ತಿತ್ತು.  

ಮೃದುಲ ಅಮ್ಮನಿಗೆ ಅನ್ನಿಸಿತು, ಈ ಹುಡುಗನ ಜೊತೆ ಸ್ವಲ್ಪ ಕಾಲವಿದ್ದರೆ, ಮಗಳ ಮನಸ್ಸು ತಿಳಿಯಾಗುತ್ತದೆ ಎಂದು, ಆಕೆ ಕುಡಿದ ಕಾಫಿಯ ಲೋಟಗಳನ್ನೆತ್ತಿಕೊಂಡು ಹೊರನಡೆದರು. 

’ಮೃದುಲಾ ನೋಡಿ ನಾನು ಬಂದಿದ್ದು ಬೇರೆ ವಿಷಯಕ್ಕೆ ಮುಖ್ಯವಾದುದ್ದನ್ನೆ ಬಿಟ್ಟು ಎಲ್ಲವನ್ನು ಹೇಳುತ್ತಿದ್ದೇನೆ ’ ಎಂದ  ಶಶಾಂಕ.

ಅವಳಿಗೆ ಕುತೂಹಲ ಕೆರಳಿತು 
’ಹೌದೇ ಎಂತಹುದದು , ಮುಖ್ಯವಾದ ವಿಷಯ, ಅಪ್ಪ ಅಮ್ಮನಿಗೆ ಶಾಕ್ ಕೊಡಬೇಕು ಎಂದು ಪುನಃ ಫೇಲ್ ಆದಿರಾ?" ಎಂದಳು ನಗುತ್ತ

’ಇಲ್ಲ ಹಾಗೇನು, ಇಲ್ಲ ಆ ರೀತಿ ಆದರೆ ನನಗೆ ಶಾಕ್ ಆಗುತ್ತೆ ಅಷ್ಟೆ,  ಬೇರೆ ವಿಷಯ, ಇದು ಏಳನೇ ಸೆಮಿಷ್ಟರ್ ಅಲ್ಲವೇ ಬೇರೆ ಬೇರೆ ಕಂಪನಿಗಳು ನಮ್ಮ ಕಾಲೇಜಿಗೆ ಕ್ಯಾಂಪಸ್ ಸೆಲೆಕ್ಷನ್ ಎಂದು ಬರುತ್ತಿವೆ, ಮುಂದಿನ ತಿಂಗಳು  ಸೆಪ್ಟಂಬರ್ ಐದರಂದು ಇನ್ಫೋಸಿಸ್ ಕಂಪನಿ ನಮ್ಮ ಕಾಲೇಜಿಗೆ ಕ್ಯಾಂಪಸ್ ಸೆಲೆಕ್ಷನ್ ಗೆ ಬರುತ್ತಿದೆ. ಯಾರು ಯಾರು ಅದಕ್ಕೆ  ಎಲಿಜಿಬಲ್ ಎಂದು ಒಂದು ಲಿಷ್ಟ್ ಹಾಕಿದ್ದಾರೆ ಕಾಲೇಜಿನ ನೋಟಿಸ್ ಭೋರ್ಡ್ ನಲ್ಲಿ , ಮೈಲ್ ಸಹ ಮಾಡಿದ್ದಾರೆ ನೀವು ನೋಡಿಲ್ಲ ಅನ್ನಿಸುತ್ತೆ. ಅದರಲ್ಲಿ ನಿಮ್ಮ ಹೆಸರು ಸಹ ಇದೆ. ಈಗ ಅದಕ್ಕೆ ಸಿದ್ದರಾಗಿ’ ಎಂದ ನಗುತ್ತ 

ಮೃದುಲಾ ಮನಸ್ಸು ಉದ್ವೇಗಗೊಂಡಿತ್ತು, ತಾನು ಕ್ಯಾಂಪಸ್ ಸೆಲೆಕ್ಷನಲ್ಲಿ ಒಂದು ಉತ್ತಮ ಕೆಲಸ ಹೊಂಚಿಕೊಳ್ಳಬೇಕು ಅನ್ನುವುದು ಅವಳ ಬಹುದಿನದ ಕನಸು. ಅದರಲ್ಲೂ ಇನ್ ಪೋಸಿಸ್ ನಂತಹ ದೈತ್ಯ ಕಂಪನಿ ತನ್ನ ಕಾಲೇಜಿಗೆ ಬರುತ್ತಿದೆ ತಾನು ಸೆಲೆಕ್ಟ್ ಆಗಬೇಕು. ಇದ್ದಕಿದ್ದಂತೆ ಅವಳ ಮನಸ್ಸು ಮುದುರಿತು, ಮುಖ ಸಪ್ಪಗಾಯಿತು. 
‘ಏಕೆ ಏನಾಯಿತು, ಏಕೆ ಸಪ್ಪಗಾದಿರಿ ?”  ಶಶಾಂಕ ಕೇಳಿದ , ಉತ್ಕಟತೆಯಿಂದ
‘ ಏನಿಲ್ಲ ಶಶಾಂಕ , ಇನ್ ಪೋಸಿಸ್ ನಂತಹ ಕಂಪನಿಯಲ್ಲಿ ನನಗೆ ಕೆಲಸ ಮಾಡಬೇಕೆಂಬ ಆಸೆಯೋನೊ ಇತ್ತು, ಆದರೆ ನಾನು ಈಗಿರುವ ಪರಿಸ್ಥಿತಿಯಲ್ಲಿ  ಅಲ್ಲಿ ಕೆಲಸ ಸಿಗುವುದು ಕನಸು ಬಿಡಿ, ಕಾಲು ಇಲ್ಲದ ಈ ಕುಂಟಿಯನ್ನು ಅವರೇಕೆ ಸೇರಿಸಿಕೊಳ್ಳುವರು’ 

ಶಶಾಂಕನಿಗೆ ತುಸು ಕೋಪವೇ ಬಂದಿತ್ತು 

‘ನೋಡಿ ಹೀಗೆಲ್ಲ ಏಕೆ ಯೋಚಿಸುವಿರಿ, ಅದಕ್ಕೆ ಬೇಕಾದ ಎಲ್ಲ  ಅರ್ಹತೆಯೂ ನಿಮಗಿದೆ ಅಲ್ಲವೆ ? ಬೇಕಾದ ಮಾರ್ಕ್ಸ್ ಇತ್ಯಾದಿ. ಅಲ್ಲಿ  ಕೆಲಸ ಮಾಡಲು ಮುಖ್ಯವಾಗಿ ಬೇಕಿರುವುದು ಬುದ್ಧಿ ಶಕ್ತಿ, ಹಾಗು ಕೈಗಳು ಹೊರತಾಗಿ ನಿಮ್ಮ ಕಾಲಿನ ಸಮಸ್ಯೆ ಅಲ್ಲಿ ಮುಖ್ಯವಾಗುವುದೇ ಇಲ್ಲ. ಅಷ್ಟಕ್ಕೂ ಅವರು ನಿಮಗೆ ಕೆಲಸ ಕೊಡುವದಿಲ್ಲ ಎಂದು ನೀವಾಗೆ ಹೇಗೆ ನಿರ್ದಾರ ಮಾಡುವಿರಿ, ಅಂತಹ ನಿರ್ಧಾರ ಮಾಡಬೇಕಿರುವುದು  ಇನ್ ಫೋಸಿಸ್ ಕಂಪನಿಯೇ ಹೊರತು ನೀವಲ್ಲ ಅಲ್ಲವೇ . ಇಂತಹ ಕಲ್ಪನೆ, ಸ್ವಅನುಕಂಪದ ಕಾರಣದಿಂದಲೇ , ಆತ್ಮಶಕ್ತಿಯ ಕೊರತೆಯಿಂದಲೇ ನಮ್ಮ ಜೀವನದಲ್ಲಿ ನಾವು ಸೋಲುವುದು. ಇಂತಹ ಚಿಂತೆ ಬಿಡಿ, ಕಾಂಪಸ್ ಗೆ ನೀವು ಸಿದ್ಧರಾಗಿ,  ಮುಂದಿನದು ಯೋಚಿಸಲು ಹೋಗಬೇಡಿ’ 

ಮೃದುಲ ಈಗ ಸ್ವಲ್ಪ ಮಾನಸಿಕವಾಗಿ ಸ್ಥಿರವಾದಳು. ಅವಳಲ್ಲಿ ಎಂತಹುದೋ ಒಂದು ಶಕ್ತಿ ತುಂಬಿಕೊಂಡಂತೆ ಆಯಿತು. 

ಶಶಾಂಕ ಅವಳಿಗೆ ಸ್ವಲ್ಪ ಸಮಾದಾನ ಹೇಳಿ ಎದ್ದು ಹೊರಟ.
‘ನಾನಿನ್ನು ಬರುತ್ತೇನೆ ‘ ಎಂದು ಹೇಳಿ, 
ಆಗ ಮೃದುಲ 
‘ಇರೀ ನಾನು ಸಹ ಬಾಗಿಲವರೆಗೂ ಬರುತ್ತೇನೆ ‘ 
ಎನ್ನುತ್ತ ನಿಧಾನವಾಗಿ ಎಡಗಾಲನ್ನು ಮಂಚದಿಂದ ಕೆಳಗಿಳಿಸಿ, ನೆಲದಮೇಲೆ ಊರುತ್ತ, ಪಕ್ಕದಲ್ಲಿದ್ದ ಊರುಗೋಲನ್ನು ತೆಗೆದು ಬಲಕಂಕುಳ ಕೆಳಗಿಟ್ಟುಕೊಂಡಳು. ತನ್ನ ಬಾರವನ್ನು ಎಡಗಾಲು ಹಾಗು ಬಲಕೈ ಮೇಲೆ ಬಿಡುತ್ತ ನಿಧಾನವಾಗಿ ಎದ್ದು ನಿಂತಳು. ಶಶಾಂಕ ಅವಳ ಸಹಾಯಕ್ಕೆ ಧಾವಿಸದೆ ಸಾವದಾನದಿಂದ ನೋಡುತ್ತ ನಿಂತಿದ್ದ. 

ಶಶಾಂಕ ಹೊರಗೆ ಬಂದು , ಹಾಲಿನ ಸೋಫದಲ್ಲಿ ಕುಳಿತಿದ್ದ ಮೃದುಲಾಳ ಅಮ್ಮನನ್ನು ಕಂಡು, 
‘ಸರಿ ಹೋಗಿ ಬರುತ್ತೇನಮ್ಮ’ ಎಂದ
ಆಕೆ.
‘ಸರಿನಪ್ಪ ನನಗೆ ಅವಳದೇ ಒಂದು ಯೋಚನೆ ಆಗಿಹೋಗಿದೆ, ಮುಂದೆ ಅವಳ ಜೀವನ ಹೇಗೆ  ಎನ್ನುವ  ಆತಂಕ ಕಾಡುತ್ತದೆ’ 
ಅವನು ಕ್ಷಣಕಾಲ ನಿಂತ
‘ ಇಲ್ಲಮ್ಮ ಯಾವ ಆತಂಕವೂ ಬೇಡ, ನಾವು ಕಷ್ಟದಲ್ಲಿರುವಾಗ ನಮ್ಮ ಸೀಮಿತ ಯೋಚನೆಗಳಿಗೆ ಅದೇ ಅಂತ್ಯ ಮುಂದೆ ಇಲ್ಲ ಅನ್ನಿಸಿಬಿಡುತ್ತೆ, ಆದರೆ ಜೀವನ ಎಂದು ನಿಲ್ಲುವದಿಲ್ಲ, ಮುಂದೆ ಹೋಗುತ್ತಲೇ ಇರುತ್ತದೆ, ಇಂದಿನ ಕಷ್ಟಗಳೆಲ್ಲ ಎಂದೋ ಒಂದು ದಿನ ಬರಿ ನೆನಪಾಗಿ ಉಳಿಯುತ್ತದೆ. ಈ ಕಷ್ಟಗಳೆಲ್ಲ ಹೀಗೆ ಇರಲ್ಲ,  ಅವಳ ಜೀವನವೂ ಹೀಗೆ ಇರಲ್ಲ ಬದಲಾಗುತ್ತೆ ನೀವು ಯೋಚಿಸಬೇಡಿ’ ಎನ್ನುತ್ತ ಬಾಗಿಲ ಕಡೆ ನಡೆದ. 

ತೀರ ವಯಸ್ಕನಲ್ಲದ ಹುಡುಗನ ಬಾಯಲ್ಲಿ ಬರುವ ಅನುಭವದ ನುಡಿಗಳನ್ನು ಕೇಳುತ್ತ ಮೃದುಲಾಳ ಅಮ್ಮ ಬೆರಗಾಗಿದ್ದಂತೆ , ಅವಳಿಗೆ ಮತ್ತೊಂದು ಆಶ್ಚರ್ಯ , ಚಮತ್ಕಾರ ಕಾಣಿಸಿತು, 
‘ಯಾರು ಎಷ್ಟೆ ಬಲವಂತ ಮಾಡಿದಾಗಲು, ಮೃದುಲ ಆಸರೆಯ ಊರುಗೋಲನ್ನು ಹಿಡಿದು ನಡೆಯಲು ಒಪ್ಪುತಿರಲಿಲ್ಲ, ತೀರ ಅವಳಪ್ಪನ ಬಲವಂತಕ್ಕೆ ಅವರ ಆಸರೆಯಲ್ಲಿ ಒಂದೆರಡು ಹೆಜ್ಜೆ ಹಾಕಿದ್ದಳು, ಅಂತಹವಳು ಈಗ , ತಾನಾಗಿಯೆ, ತನ್ನ ಊರುಗೋಲಿನ ಸಹಾಯದಿಂದ ಒಬ್ಬಳೆ ರೂಮಿನಿಂದ ಈಚೆ ಬರುತ್ತಿದ್ದಳು. ಆಕೆ ನೋಡುತ್ತಿರುವಂತೆ ಶಶಾಂಕನನ್ನು ಕಳುಹಿಸಲು ಮೃದುಲಾ, ಬಾಗಿಲಿನವರೆಗೂ ಹೋಗಿ, ಅವನು ಹೊರಗೆ ತನ್ನ ಗಾಡಿ  ಸ್ಟಾರ್ಟ್ ಮಾಡುತ್ತಿರುವಾಗ ಕೈಬೀಸುತ್ತ ನಿಂತಿದ್ದಳು . 

ಅವಳು ನಿಂತಿದ್ದ ಬಂಗಿ ಅವಳ ಅಮ್ಮನಲ್ಲಿ ಎಂತಹುದೋ ಒಂದು ಸಮಾಧಾನ ಮೂಡಿಸಿತ್ತು.  ಅವಳು ಯೋಚಿಸಿದಳು, ಜೀವನದಲ್ಲಿ ಸೋತು ನಿಂತಿರುವ ನಮ್ಮೊಳಗೆ ಯಾವುದೋ ಒಂದು ಆಸೆ, ಪ್ರೀತಿ, ವಿಶ್ವಾಸದ ಸಣ್ಣದೊಂದು ಬೀಜ ಬಿದ್ದುಬಿಟ್ಟರೆ ಸಾಕು ಅದು ನಮ್ಮನ್ನು ಎದ್ದು ನಿಲ್ಲಲ್ಲು ಶಕ್ತಿ ಕೊಡುತ್ತೆ. ಮನಸು ದೇಹದಲ್ಲಿ ಚೈತನ್ಯ ತುಂಬಿಬಿಡುತ್ತದೆ . ಶಶಾಂಕ ಅಂತಹ ಆಸೆಯ ಬೀಜವಾಗಿದ್ದ ಆ ತಾಯಿಯ ಮನಸಿಗೆ. 

ಶುಭಂ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Rajendra B. Shetty
9 years ago

ಬಹಳ ಸಕಾರಾತ್ಮಕ ಲೇಖನ. 

krishnaveni.kidoor
krishnaveni.kidoor
9 years ago

Nice one.

krishnaveni.kidoor
krishnaveni.kidoor
9 years ago

nice

3
0
Would love your thoughts, please comment.x
()
x