ಆಟಿಸಂ ಅನ್ನೋ ಸಂಕೀರ್ಣ ಮನೋ ಅವಸ್ಥೆ: ಪ್ರಶಸ್ತಿ

ದೈಹಿಕ ಅಂಗವೈಕಲ್ಯ ಅನ್ನೋದು ಮೇಲುನೋಟಕ್ಕೆ ಕಂಡುಬರುತ್ತೆ. ಆದ್ರೆ ಮಾನಸಿಕ ಅಂಗವೈಕಲ್ಯ ? ಕಣ್ಣೆದ್ರೇ ಇದ್ರೂ ಗೊತ್ತಾಗಲ್ಲ.  ಏ ಅವನ್ಯಾಕೆ ಅಷ್ಟು ದೊಡ್ಡದಾಗಿ , ಎಳೆದೆಳೆದು ಮಾತಾಡ್ತಾನೆ, ದೇಹ ನೋಡಿದ್ರೆ ಅಷ್ಟು ವಯಸ್ಸಾದಂತಿದೆ ಆದ್ರೆ ಬುದ್ದಿ ಮಾತ್ರ ಇನ್ನೂ ಬೆಳೆದಿಲ್ಲವಾ ಅನ್ನುವಂತಹಾ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ.  ಇದ್ದಕ್ಕಿದ್ದಂಗೆ ಜಗಳಕ್ಕೆ ಬಂದು ಬಿಡ್ತಾನೆ ಮಾರಾಯ ಅವ. ಸ್ವಲ್ಪ ಹುಷಾರಾಗಿರು ಅಂತಿದ್ದ ಹೊಸದಾಗಿ ಪೀಜಿಗೆ ಬಂದವನ ಬಗ್ಗೆ ಗೆಳೆಯ. ಹೂಂ. ಅವನು ಆಟಿಸಂ ಇಂದ ಒದ್ದಾಡ್ತಾ ಇದಾನೆ . ನಿನ್ನೆ ಸಿಕ್ಕಾಗ ಅದ್ರ ಬಗ್ಗೆ ಹೇಳ್ತಾ ಇದ್ದ ಅಂದೆ. ಆಟಿಸಂ ಆ ? ಏನದು ಅಂದ ಅವ.  ಆಟಿಸಂ ಅಂದಾಗ ಸುಮಾರು ಜನ್ರ ಬಾಯಲ್ಲಿ ಇದೇ ಪ್ರಶ್ನೆ ಸಿಕ್ತಾ ಹೋಯ್ತು ಆಮೇಲೆ. ಅದೇನು ಅಂತ ಸ್ವಲ್ಪ ಅರಿಯೋಕೆ ಮಾಡಿದ ಪ್ರಯತ್ನಗಳಲ್ಲಿ ದಕ್ಕಿದ ಗುಟುಕುಗಳನ್ನೇ ಈ ಲೇಖನದ ಮೂಲಕ ತಮ್ಮೆದುರಿಗಿಡುತ್ತಿದ್ದೇನೆ.ಈ ಮೂಲಕ ಅಂತಹರೇನಾದ್ರೂ ಎದುರಿಗೆ ಸಿಕ್ಕ ನಿಮ್ಮ ಮನದಲ್ಲಿ ಅಸಹನೆಯ ಬದಲೊಂದಿಷ್ಟು ಕ್ಷಣಗಳ ತಾಳ್ಮೆ, ಕೇಳುವಿಕೆ ಮೂಡಿದರೆ ಈ ಲೇಖನದ ಶ್ರಮ ಸಾರ್ಥಕ.

ಆಟಿಸಂ ಅಂದ್ರೆ ಏನು ?  
ನಮ್ಮ ನರಮಂಡಲದ ಬೆಳವಳಿಗೆಯಲ್ಲಿ ಉಂಟಾಗೋ ಒಂದು ಬಗೆಯ ಸಂಕೀರ್ಣವಾದ ವೈಫಲ್ಯವೇ ಆಟಿಸಂ.ನೋಡೋಕೆ ನಮ್ಮ ನಿಮ್ಮೆಲ್ಲರ ಹಾಗೇ ಇದ್ದರೂ ಇವರು ಸಂವಹನದಲ್ಲಿ ಮತ್ತು ಸಾಮಾಜದಲ್ಲಿ ಬೆರೆಯೋದ್ರಲ್ಲಿ ಬಹಳವೇ ಕಷ್ಟ ಪಡುತ್ತಿರುತ್ತಾರೆ.  Autism Spectrum Disorder(ASD) ಅನ್ನೋ ಹಲವು ಲಕ್ಷಣಗಳ ಕೂಟದಲ್ಲಿ ಕ್ಲಾಸಿಕಲ್ ಆಟಿಸಂ ಅನ್ನೋದು ತುಂಬಾ ಗಂಭೀರವಾದ ಸಮಸ್ಯೆಯಾದ್ರೆ ಆಸ್ಪರ್ಜರ್ಸ್ ಸಿಂಡ್ರೋಮ್(Asperger's syndrome) ಅನ್ನೋದು ಇದ್ದುದರಲ್ಲೇ ಸ್ವಲ್ಪ ಕಮ್ಮಿ ಸಮಸ್ಯೆಗಳಿರುವ ಲಕ್ಷಣ. ಸ್ವಲ್ಪ ಬಿಡಿಸಿ ಹೇಳಿ ಅರ್ಥ ಆಗ್ತಿಲ್ಲ ಅಂದ್ರಾ ? ಆಟಿಸಂ ಇದ್ದವರಿಗೂ ನಿಮ್ಮನ್ನು ಭೇಟಿಯಾದ ಮೊದಲ ಸಲ ಇದೇ ತರದ ಭಾವ ಕಾಡಿರತ್ತೆ. ಇನ್ನೂ ಅರ್ಥ ಆಗ್ಲಿಲ್ಲ. ಇನ್ನೊಂದಿಷ್ಟು ಸರಳೀಕರಿಸಿ ನೋಡೋಣ ಇದೇ ಉದಾಹರಣೆಯನ್ನು. ನೀವೊಬ್ಬ ವ್ಯಕ್ತಿಯನ್ನು ಭೇಟಿಯಾಗ್ತೀರ ಅಂದಿಟ್ಟುಕೊಳ್ಳಿ. ಅವನ ಮಾತು, ಹಾವಭಾವ, ಧ್ವನಿಯ ಏರಿಳಿತಗಳಿಂದಲೇ ಅವನು ಖುಷಿಯಾಗಿದ್ದಾನಾ ? ಬೇಸರದಿಂದಿದ್ದಾನಾ ? ವಿಪರೀತ ಉತ್ಸಾಹದಿಂದಿದ್ದಾನಾ ಎಂಬುದು ತಿಳಿದುಹೋಗುತ್ತದೆ ನಿಮಗೆ. ಆದ್ರೆ ಈ ಆಸ್ಪರ್ಜರ್ಸ್ ಸಿಂಡ್ರೋಮ್ ಇರುವ ವ್ಯಕ್ತಿಗೆ ಈ ತರಹದ ವ್ಯತ್ಯಾಸಗಳನ್ನು ಅರಿಯೋದು ತುಂಬಾ ಕಷ್ಟವಾಗುತ್ತದೆ. ಬೇರೆಯವರ ಭಾವನೆಗಳು ತಿಳಿಯೋದೇ ಇಲ್ಲ ಅಂತಲ್ಲ ಇವರಿಗೆ. ತಮ್ಮ ಬಗ್ಗೆ ಹೇಳುತ್ತಾ ಹೋಗೋ ಇವರಿಗೆ ಮತ್ತೊಬ್ಬನಲ್ಲಿ ಕೇಳುವ ಆಸಕ್ತಿಯಿದೆಯೋ ಇಲ್ಲವೋ ಎಂಬ ಭಾವ ಮೂಡೋದು ಕೊಂಚ ತಡವಾಗಿ. ಹಂಗಂತ ಈ ASD ಯ ಎಲ್ಲಾ ಒಂದೇ ರೀತಿ ಇದ್ದು ಬಿಡುತ್ತಾರಂತಲ್ಲ. ಒಬ್ಬರಿದ್ದಂತೆ ಇನ್ನೊಬ್ಬರಿಲ್ಲದಿರಬಹುದು. ಯಾರ ಮಾತನ್ನಾದರೂ ವಿಪರೀತ ಮನಸ್ಸಿಗೆ ಹಚ್ಚಿಕೊಳ್ಳುವ ಒಬ್ಬ ಸಿಕ್ಕಾಪಟ್ಟೆ ಖಿನ್ನತೆಯಲ್ಲಿ ಮುಳುಗಿಹೋಗಿ ಅದರಿಂದ ಹೊರಬರಲು ತಿಂಗಳುಗಳು, ವರ್ಷಗಳೇ ತೆಗೆದುಕೊಂಡರೆ ಮತ್ತೊಬ್ಬ ಸಣ್ಣ ತಪ್ಪುಗಳನ್ನೇ ಮನಸ್ಸಿಗೆ ಹಚ್ಚಿಕೊಂಡು ತಲೆ ತಲೆ ಚಚ್ಚಿಕೊಳ್ಳುವುದೋ, ಉಗುರುಗಳ ಕಚ್ಚುವುದೋ ಇಂತಾ ಚಟುವಟಿಕೆಗಳಲ್ಲಿ ಸಾರ್ವಜನಿಕವಾಗಿ ತೊಡಗಬಹುದು.

ಆಟಿಸಂನ ಗುರುತಿಸುವುದು ಹೇಗೆ ? 
ಮಕ್ಕಳ ಮೂರನೇ ವರ್ಷದಿಂದಲೇ ಈ ಆಟಿಸಂನ ಲಕ್ಷಣಗಳು ಕಂಡುಬರುತ್ತೆ ಅನ್ನುತ್ತೆ ಒಂದು ಅಧ್ಯಯನ. ಈ ಆಟಿಸಂ ಇದ್ದವರ ಜೀನುಗಳಿಗೂ ಮತ್ತು ಇದೇ ತರದ ಮಾನಸಿಕ ಸಮಸ್ಯೆಗಳಾದ ಏಕಾಗ್ರತೆಯ ಕೊರತೆಯ ಅತಿಚಟುವಟಿಕೆADHD(attention deficit hyperactivity disorder), ಆಲೋಚನೆ, ಮಾತು ಮತ್ತು ಕ್ರಿಯೆಗಳ ನಡುವಿನ ಕೊಂಡಿ ಕಳಚಿಹೋಗುವ Schizophrenia ಎಂಬ ಮನೋರೋಗಗಳಿಂದ ಪರಿತಪಿಸುತ್ತಿರುವವರ ಜೀನುಗಳಿಗೂ ಹೊಂದಾಣಿಕೆ ಕಂಡುಬರುತ್ತದೆ ಅನ್ನುತ್ತಾರೆ. ಆಟಿಸಂ ಇರುವ ಮಗು ಬೇರೆಯವರ ಜೊತೆ ಬೆರೆಯಲು ಹೋಗದೇ ಸದಾ ಒಂಟಿಯಾಗಿ ಇರುವುದನ್ನ ಗಮನಿಸಬಹುದು. ಶಾಲೆಯಲ್ಲೂ ಹೆಚ್ಚು ಮಾತನಾಡದೇ ಸದಾ ಮೌನಿಯಾಗೇ ಉಳಿಯಲು ಇಷ್ಟಪಡುವಂತೆ ಕಾಣಬಹುದು.ಅಸಲಿಗೆ ಆ ಮಗು ಬೇರೆಯವರ ಜೊತೆ ಬೆರೆಯಲು ಹೋದರೂ ಅದಕ್ಕೆ ಆ ವಿಷಯದಲ್ಲಿ ತುಂಬಾ ಕಷ್ಟವಾಗುತ್ತಿರುತ್ತದೆ. ಹಂಗಂತ ಅವರು ತೀರಾ ದಡ್ಡರು ಅಂತೇನಲ್ಲ. ಆಸ್ಪರ್ಜರ್ಸ್ ಸಿಂಡ್ರೋಮ್ ಇರುವ ಮಗುವಿನ ಬುದ್ದಿಮತ್ತೆ(IQ) ಉಳಿದೆಲ್ಲಾ ಮಕ್ಕಳ ಬುದ್ದಿಮತ್ತೆಗಿಂತ ಅನೇಕ ಪಟ್ಟು ಹೆಚ್ಚಿರಬಹುದು. ಕೆಲವರಿಗೆ ಉದ್ದುದ್ದ ಪದಗಳ ಬಹುಬೇಗ ಕಲಿತುಬಿಡುವ ಅಥವಾ ನೋಡಿದ್ದ ಹಾಗೇ ನೆನಪಿಟ್ಟುಬಿಡುವ ಬುದ್ದಿಶಕ್ತಿ(photographic memory)ಕೂಡಾ ಇರಬಹುದು.ಆದ್ರೆ ಸಾಮಾಜಿಕ ಸಂವಹನಗಳಲ್ಲಿ ಅವರಿಗೆ ತೊಂದರೆಯಾಗುತ್ತಿರುತ್ತದೆ. Girl with the golden tatto ನಲ್ಲಿನ ಹುಡುಗಿ ನೆನಪಾದ್ಲಾ ? ಇದ್ರ ಬಗ್ಗೆ ಬಂದ ಕಾದಂಬರಿಗಳು, ಸಿನಿಮಾಗಳು ಒಂದೆರಡಲ್ಲ ಬಿಡಿ  ಮಗುವಾಗಿದ್ದಾಗಲೇ ಆಸ್ಪರ್ಜರ್ಸ್ ಸಿಂಡ್ರೋಮನ್ನು ಮಗುವಿನ ಕೆಲ ಚಲನವಲನಗಳಿಂದ ಕಂಡುಹಿಡಿಯಬಹುದು ಅನ್ನುತ್ತಾರೆ ವಿಜ್ನಾನಿಗಳು. ಉದಾ: ಅಂಬೆಗಾಲಿಡಲು ಪ್ರಯತ್ನಿಸುವಾಗ ಕೈಕಾಲುಗಳ ಚಲನೆಯಲ್ಲಿ ಸಂವಹನವಿಲ್ಲದಿರುವುದು, ನಡೆದಾಡಲು ಮಾಡುವ ಪ್ರಯತ್ನಗಳು ವಿಚಿತ್ರ ಅಥವಾ ಉಳಿದವುಗಳಿಗಿಂತ ಭಿನ್ನ ಅನಿಸುವುದು ಇತ್ಯಾದಿ. ಆದ್ರೆ ಇದೊಂದು ಮಾನಸಿಕ ಅವಸ್ಥೆಯೇ ಹೊರತು ಖಾಯಿಲೆಯಲ್ಲ. ಇನ್ನೊಂದು ಅರ್ಥದಲ್ಲಿ ಹೇಳಬೇಕು ಅಂದ್ರೆ ನಮಗೆಲ್ಲಾ ಹೇಗೆ ಕೆಮ್ಮು , ನೆಗಡಿ, ಜ್ವರಗಳು ಬರುತ್ವೋ ಇವರಿಗೂ ಅಷ್ಟೇ ಬರುತ್ವೆ. ಸ್ವಲ್ಪವೂ ಹೆಚ್ಚೇನಿಲ್ಲ. ಸ್ವಲ್ಪವೂ ಕಮ್ಮಿಯಿಲ್ಲ. ಉಳಿದವರಿಗೆ ಹೋಲಿಸಿದ್ರೆ ಇವರು ಖಿನ್ನತೆಗೆ ಬೇಗ ಒಳಗಾಗ್ತಾರೆ ಅನ್ನೋದನ್ನ ಬಿಟ್ಟರೆ ಇವರು ಸಾಮಾನ್ಯರಲ್ಲಿ ಶ್ರೀಸಾಮಾನ್ಯರೇ.

ಇವರಿಗೆ ಏನಿಷ್ಟ, ಏನಿಷ್ಟವಿಲ್ಲ :

ಅ. ಪುನರಾವರ್ತನೆ: ಪುನರಾವರ್ತಿಸುತ್ತಿರುವ ಘಟನೆಗಳು ಅಂದ್ರೆ ಆಟಿಸಂ ಇದ್ದ ವ್ಯಕ್ತಿಗೆ ಇಷ್ಟವೆಂಬಂತೆ ಭಾಸವಾಗುತ್ತದೆ ಇಲ್ಲಿಯವರೆಗಿನ ಅಧ್ಯಯನಗಳಿಂದ. ತಮ್ಮ ಜೀವನಕ್ರಮದಲ್ಲಿ ಬರುತ್ತಿರೋ ಅದೇ ಘಟನೆಗಳನ್ನ ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಹೋಗೋ ಇವರಿಗೆ ಬದಲಾವಣೆಗಳಂದ್ರೆ ಸ್ವಲ್ಪ ಕಷ್ಟ. ಯಾವುದೇ ಹೊಸ ಕೆಲಸ, ಹವ್ಯಾಸ, ವಾತಾವರಣಕ್ಕೆ ಹೊಂದಿಕೊಳ್ಳೋದು ಕಷ್ಟ ಅನ್ನಲಾಗುತ್ತದೆ. 

ಆ.ಮಾತು: ಆಟಿಸಂನ ತೀವ್ರತೆ ಹೆಚ್ಚಾದಂತೆ ಇವರ ಮಾತುಕತೆಯೂ ಕಮ್ಮಿಯಾಗುತ್ತಾ ಬರುತ್ತೆ ಎನ್ನಲಾಗುತ್ತದೆ. ಇವರು ಕೇಳಿದ ಮಾತುಗಳನ್ನು , ಪದಪುಂಜಗಳನ್ನು ಪದೇ ಪದೇ ಪುನರುಚ್ಚರಿಸುತ್ತಾ ಇರುತ್ತಾರೆ. ಉದಾ: ಆಂಡ್ರ್ಯಾಯ್ದ್ ಮೊಬೈಲುಗಳ ಆವೃತ್ತಿಗಳ ಬಗ್ಗೆ ಮಾತನಾಡುತ್ತಾ ಕಿಟ್ ಕ್ಯಾಟ್, ಜೆಲ್ಲಿ ಬೀನ್, ಐಸ್ ಕ್ರೀಂ ಸ್ಯಾಂಡ್ವಿಚ್, ಲಾಲಿ ಪಾಪ್ ಎಲ್ಲಾ ಆಯ್ತು ಇನ್ನು ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಚಿಕನ್ ಕಬಾಬ್ , ಖಾರಾ ಬಾತ್, ಬಿಸಿಬೇಳೆ ಬಾತ್ ಅಂತೆಲ್ಲಾ ಬರಬಹುದು ಅಂದಿರುತ್ತೀರಿ ಅಂದಿಟ್ಟುಕೊಳ್ಳಿ.  ಆಂಡ್ರಾಯ್ಡಿನ ಸುದ್ದಿ ಬಂದಾಗಲೆಲ್ಲಾ ನಿಮ್ಮ ಮಾತನ್ನು ಕೇಳಿದ ಆಟಿಸಂನ ವ್ಯಕ್ತಿ ಖಾರಾ ಬಾತ್, ಚಿಕನ್ ಕಬಾಬ್ ಅಂತ ಸಾಲನ್ನು ಪುನರುಚ್ಚರಿಸಬಹುದು.

ಇ.ಕಲಿಯುವಿಕೆ: ಆಟಿಸಂ ಅಲ್ಲಿರುವವರ ಕಲಿಯುವಿಕೆಯನ್ನು ಹೀಗೇ ಅಂತ ಹೇಳಲಾಗುವುದಿಲ್ಲ. ಕೆಲವೊಂದು ವಿಷಯಗಳನ್ನು ಚುರುಕಾಗಿ ಕಲಿತುಬಿಡೋ ಇವರಿಗೆ ಕೆಲವೊಂದು ತುಂಬಾ ಕ್ಲಿಷ್ಟವೆನಿಸಬಹುದು. ಗಣಿತ, ಸಂಖ್ಯಾಶಾಸ್ತ್ರ, ಲಾಜಿಕ್ಕಿನಂತಹ ವಿಷಯಗಳು ಕಬ್ಬಿಣದ ಕಡಲೆಯನಿಸೋ ಇವರಿಗೆ ಬ್ರೌಸರ್ ಟೆಸ್ಟಿಂಗ್ , ಎಕ್ಸೆಲುಗಳ ಮೇಲೆ ಮಾಡುವ ಕೆಲಸದಂತಹ ವಿಷಯಗಳು ಸುಲಭವೆನಿಸಬಹುದು.

ಈ. ಭಾವತೀವ್ರತೆ:ಯಾವುದೋ ಘಟನೆಯಿಂದ ತಮ್ಮ ಭೂತವನ್ನು ನೆನೆಸಿಕೊಳ್ಳೋ ಇವರು ತಕ್ಷಣವೇ ಅಳುವುದೋ, ತಲೆ ತಲೆ ಚೆಚ್ಚಿಕೊಳ್ಳುವುದೋ, ವಿಪರೀತ ಮಾತಾಡುವುದೋ ಇತ್ಯಾದಿಗಳಲ್ಲಿ ತೊಡಗಬಹುದು. 

ಹಾಗಂತ ಇದಕ್ಕೆ ಚಿಕಿತ್ಸೆಯೇ ಇಲ್ಲವೇ ? 
ಖಂಡಿತಾ ಇದೆ. ಕೌನ್ಸಿಲಿಂಗ್, ಔಷಧಿಗಳು, ವೈಜ್ನಾನಿಕ ಥೆರಪಿಗಳು ಹೀಗೆ ಹಲವೆಂಟು ರೀತಿಗಳಿವೆ ಇದರಿಂದ ಹೊರಬರಲು. ಆಟಿಸಂ ಇರೋರಿಗೆ ಭಾವಗಳೇ ಇಲ್ಲ. ಅವರು ಪಕ್ಕಾ ಸ್ವಾರ್ಥಿಗಳು ಹೀಗೆ ಹತ್ತು ಹಲವು ಮೂಡನಂಬಿಕೆಗಳಿವೆಯಂತೆ ಇವರ ಬಗ್ಗೆ. ಈ ತರದ್ದೆಲ್ಲಾ ಕೇಳಿ ನಿಜವಾಗ್ಲೂ ಆಟಿಸಂ ಇರುವವರನ್ನು ನೋಡಿದಾಗ ಇದರಲ್ಲಿ ಎಷ್ಟೆಲ್ಲಾ ಸುಳ್ಳುಗಳಪ್ಪ ಅನಿಸುತ್ತೆ. ತಮ್ಮ ಸಂಕಷ್ಟಗಳಿಂದ ನರಳುತ್ತಿರುವ ಜನರ ಅದೇನೇನೋ ತಪ್ಪುಗ್ರಹಿಕೆಗಳಿಂದ ಇನ್ನೊಂದಿಷ್ಟು ನೋಯಿಸುತ್ತಿದ್ದಾರಲ್ಲ ಜನ ಅನಿಸುತ್ತೆ. ಹಾಗಾಗಿ ಇಂತಹವರು ನಿಮಗೇನಾದ್ರೂ ಸಿಕ್ಕಿದ್ರೆ ಅವರಿಗೆ ಬೇಕಾಗಿರೋದು ನಿಮ್ಮ ಸಹಾನುಭೂತಿಯೋ ಕರುಣೆಯೋ ಅಲ್ಲ. ಒಂದಿಷ್ಟು ಸಮಯ ಮತ್ತೊಂದಿಷ್ಟು ಓಗೊಡುವಿಕೆಯಷ್ಟೆ. ಮುಂದೆ ಬರೋ ಬದಲಾವಣೆಗಳ ಬಗ್ಗೆ ಇವರಿಗೆ ತಿಳಿಸಿದ್ರೆ ಇವರು ಅದಕ್ಕನುಗುಣವಾಗಿ ಹೊಂದಿಕೊಳ್ಳಲು ಬೇರೆಯವರಿಗಿಂತ ಚೆನ್ನಾಗಿ ಪ್ರಯತ್ನಿಸಬಹುದು. ಅದಕ್ಕೆ ಮನೆಯವರ, ಸ್ನೇಹಿತರ ಸೂಕ್ತ ಸಹಕಾರ ಅಗತ್ಯ ಅಷ್ಟೆ.

ಹೌದು. ಆದ್ರೆ  ಸಾಮಾನ್ಯರಂತೆ ಬದುಕೋಕೆ ಆಗುತ್ತಾ ಇವರಿಗೆ ? 
ಹಾಗೇನಿಲ್ಲ. SAP Labs ಅಂತ ಒಂದು ಪ್ರಸಿದ್ದ ಕಂಪೆನಿಯಲ್ಲಿ ಕೆಲಸದಲ್ಲಿ ಆಟಿಸಂ (Autism at work) ಅನ್ನೋ ಒಂದು ಕಾರ್ಯಕ್ರಮವೇ ನಡೆಯುತ್ತಿದೆ. ಆಟಿಸಂನ ವಿದ್ಯಾರ್ಥಿಗಳನ್ನು ಹುಡುಕಿ ಅವರಿಗೆ ತರಬೇತಿ ನೀಡಿ ಅವರ ಸಾಮರ್ಥ್ಯ ಮತ್ತು ಆಸಕ್ತಿಗೆ ಹೊಂದುವ ತಂಡಗಳಲ್ಲಿ ಸೇರಿಕೊಳ್ಳಲಾಗುತ್ತಿದೆ. Why fit in when i am made to stand out ಅನ್ನೋ ಘೋಷವಾಕ್ಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಇವರಲ್ಲಿ ಕೆಲವರನ್ನು ನೋಡಿದರೆ ಇವರು ನಮ್ಮೆಲ್ಲರಿಗಿಂತ ಭಿನ್ನರೆಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಅವರಲ್ಲೊಬ್ಬ ಜಿಕರ್.  ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕಾಗಿ ತಮ್ಮೂರಾದ ಅಲಹಾಬಾದಿನಿಂದ ಏಕಾಂಗಿಯಾಗಿ ಎರಡು ಮೂರು ದಿನಗಳ ಪ್ರಯಾಣ ಮಾಡಿದ ಅವರಿಗೆ ಇಲ್ಲಿ ಕಾಲೂರೋಕೆ ಗೆಳೆಯನ ರೂಮೊಂದಿದೆ ಅನ್ನೋದು ಬಿಟ್ರೆ ಬೇರೇನೂ ಗೊತ್ತಿಲ್ಲ. ಬಂದ ಎರಡು ದಿನದಲ್ಲೇ ಗೆಳೆಯನಿಗೆ ಬೇರೆಲ್ಲೋ ವರ್ಗವಾಗಿ ಅವನ ರೂಮನ್ನು ಖಾಲಿ ಮಾಡಬೇಕಾದ ಅನಿವಾರ್ಯ ! ಎರಡನೇ ದಿನವೇ ಏಕಾಂಗಿಯಾಗಿ ಅಲೆದಾಡಿ ಆಟೋದಲ್ಲಿ ಸಿಕ್ಕ ಒಬ್ಬನ ಪರಿಚಯ ಮಾಡಿಕೊಂಡು ಒಂದು ಪೀಜಿ ಹುಡುಕಿದ ಇವರನ್ನು ಮೊದಲಿಗೆ ಮಾತನಾಡಿಸೋ ಯಾರಿಗೂ ಇವ ನಮಗಿಂತ ಬೇರೆಯಲ್ಲ ಅನಿಸೋಲ್ಲ. ಐದು ವರ್ಷಗಳ ಕಾಲ ಖಿನ್ನತೆಯಿಂದ ಒದ್ದಾಡಿದ್ದೆ ಅಂತ ಆ ದಿನಗಳ ಕತೆ ಹೇಳೋ ಇವರು ನಂತರ ಕಂಪ್ಯೂಟರಿನಲ್ಲಿ, ಪ್ರೋಗ್ರಾಂಮಿಂಗಿನಲ್ಲಿ ಡಿಪ್ಲೊಮಾ ಮಾಡಿ ಇವರ ಈಗಿನ ಟ್ರೈನಿಂಗಿನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಲ್ಲೊಬ್ಬರು ! ಬೇಸರವಾದಾಗ ವಿಪರೀತ ಮಾತಾಡೋ, ಎದುರಿಗಿರುವವನ ಮನಸ್ಸಿಗೆ ಬೇಸರವಾಗ್ತಿರಬಹುದು ಅನ್ನೋ ಆಲೋಚನೆಯಿಲ್ಲದಂತೆ ಅನಿಸಿದ್ದು ಹಾಗೇ ಅಂದುಬಿಡೋ ಇವರೆದುರು ನಿಂತು ಮಾತಾಡೋದು ಸ್ವಲ್ಪ ಕಷ್ಟ ಅನ್ನೋದು ಬಿಟ್ರೆ, ಆ ಸಂದರ್ಭದಲ್ಲಿ ಎಲ್ಲಾ ಸರಿಯಾಗಿಲ್ಲ. ಏನೋ ಇದೆ ಅಂತೆನಿಸೋದು ಬಿಟ್ರೆ ಬೇರೆ ಯಾವ ಕಾರಣಕ್ಕೂ ಗುರುತಿಸಲಾಗಲ್ಲ. 

ಇಂತವರ ಸಹಾಯಕ್ಕೆ ಯಾರಾರಿದ್ದಾರೆ ? 
ಆಟಿಸಂ ಇರುವವರ ಸಹಾಯಕ್ಕೆಂದೇ ಹಲವು ಸಂಘ ಸಂಸ್ಥೆಗಳಿವೆ. 

Autismsociety.org, autismnow.orgmyasdf.org,researchautism.org,nationalautismassociation.org, Enable india ಹೀಗೆ ಹತ್ತು ಹಲವು ಸಂಘಸಂಸ್ಥೆಗಳಿವೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಪ್ರಶಸ್ತಿ , ಬರಹ  ಚೆನ್ನಾಗಿದೆ……ರೀ

prashasti
9 years ago

Thanks Amardeep avre 🙂

2
0
Would love your thoughts, please comment.x
()
x