ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ


ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ
ನಿನಗಾಗಿ….                                                                     ನಿನ್ನವನಿಂದ….

ಕಿಟಕಿಯಿಂದ ತೂರಿ ಬರುವ ತಂಗಾಳಿ
ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!!
ಆಗಾಗ ಸಿಗುವ  ಹಗಲಲ್ಲೂ ಕತ್ತಲ
ನೆನಪ ತರುವ
ಅಷ್ಟೇ ಚಕ್ಕನೆ ಮಾಯವಾಗುವ
ಪುಟ್ಟ ಪುಟ್ಟ ಸುರಂಗಗಳು
ನಿನ್ನ ಸಾತ್ವಿಕ ಕೋಪದಂತಿದೆ..!!
ಟೀ-ಕಾಪಿ ಮಾರುವ ಹಾಲುಗಲ್ಲದ
ಪೋರನ ಮುಗ್ದ ನಗೆಯ
ನಿನ್ನ ಮೃದು ಮಾತಿನ ಹಿತ ಸ್ಪರ್ಶದಂತಿದೆ….!
ಅಮ್ಮನ ಎದೆಹಾಲಿಗಾಗಿ ಪೀಡಿಸುತ್ತಿರುವ
ಎಳೆಕಂದಮ್ಮಗಳು
ಸದಾ ನನ್ನ ಪ್ರೀತಿಗಾಗಿ ಹಟಹಿಡಿಯುವ
ನಿನ್ನ ಮಗು ಮನಿಸ್ಸಿನಂತಿದೆ….!!

ವಾವ್ಹ್ ರೈಲು ಪ್ರಯಾಣ ಇಂದು ನಿಜವಾಗಿಯೂ ನಮ್ಮ ಪ್ರೀತಿಯ ಪಯಣದಂತೆಯೇ ರೋಮಾಂಚಕಾರಿಯಾಗಿ ತೋರುತ್ತಿದೆ….ನೀನು ಇದ್ರೆ ತುಂಬಾ  ಚೆನ್ನಾಗಿ ಇರ್‍ತಿತ್ತು ನೋಡು….ಒಬ್ಬನೇ ಪ್ರತಿ ಸಾರಿ ಹೋಗುವಾಗಲೂ ಇವಳನ್ನು ಕರೆಕೊಂಡು  ಬಂದಿದ್ರೆ ತುಂಬಾ ಹರಟೆ ಹೊಡಿಬೋದಿತ್ತು ಎನ್ನಿಸದೇ ಇರಲ್ಲ….!!

ನಿನ್ನೆ ತುಂಬಾನೆ ಖುಷಿಯಾಯ್ತು ಕಣೋ….! ಅಬ್ಬಾ ಎಷ್ಟು ದಿನಗಳಾಗಿದ್ದವು ನಿನ್ನ ಮುಖವನ್ನೇ ನೋಡದೇ….! ದಿನಗಳೇನು ತಿಂಗಳುಗಳೇ ಕಳೆದು ಹೊದವು..!! ಸುಮಾರು ನಾಲ್ಕು ತಿಂಗಳ ನಂತರ  ಸಾಹಿತ್ಯದ ಕಾರ್ಯಕ್ರಮವೊಂದರ ನೆಪವಾಗಿ ನಿನ್ನ ಭೇಟಿಯಾಗುವ ಅವಕಾಶ ಸಿಕ್ಕಿದ್ದು….!! ಅದ್ ಹೇಗೆ ಇರ್‍ತಿವಿ ನಾವು, ಎದೆಯಲ್ಲಿ ಬೆಟ್ಟದಷ್ಟು ಕನಸುಗಳನ್ನು  ಆಸೆಗಳನ್ನು ಹೊತ್ತುಕೊಂಡು ಒಬ್ಬರ  ಮುಖ ಒಬ್ಬರು ನೋಡದೆ ಇಷ್ಟೊಂದು ದಿನ….!! ಮೊದಲಿಂದಲೂ  ಹೀಗೆ ಅಲ್ವಾ ನಾವು…. ನಮ್ಮ ಈ ಐದು ವರ್ಷದ ಒಡನಾಟದಲ್ಲಿ  ಭೇಟಿಯಾದ ಕ್ಷಣಗಳೇ ಕಡಿಮೆ ಅಲ್ವಾ…. ಎಲೋ ಅಪರೂಪಕ್ಕೆ ಒಮ್ಮೊಮ್ಮೆ ಎಂಬತೆ….!! ಆದರೂ ನಮ್ಮ ಮೊದಲ ಭೇಟಿಯಂತೂ ನಂಗೆ ಚೆನ್ನಾಗಿ ನೆನಪಿದೆ ಮೊಗದಲ್ಲಿ ನಾಚಿಕೆ, ಕಣ್ಣಲ್ಲಿ ಆಸೆ,  ಹೃದಯದಲ್ಲಿ ಕನಸುಗಳು, ಮನದ ತುಂಬೆಲ್ಲಾ ಪ್ರೀತಿಯ ಭಾವಗಳು…. ಎಷ್ಟು ಮುದ್ದಾಗಿ ಕಾಣಿಸ್ತಾ ಇದ್ದೆ ಗೊತ್ತಾ ಅವತ್ತು ನೀನು….!! ನಿನ್ನಂದ ಹೊಗಳೋಕೆ ಯಾವ ಪದಗಳನ್ನು ಪೋಣಿಸಬೇಕೋ  ಗೊತ್ತಾಗದಷ್ಟು….!! ನಿನ್ನ ಪಟ-ಪಟ ಮಾತಂತೂ ಎದೆಯಲ್ಲಿ ಗೆಜ್ಜೆ ಸದ್ದು ಮೂಡಿದಂತೆ….!! ಇಂದಿಗೂ ನೀನು ಹಾಗೇ ಇದ್ದೀಯಾ…. ಆ ಆಪ್ತತೆ ನಿನ್ನಲ್ಲಿ ಹುಟ್ಟು ಗುಣವೇ ಎಂಬಂತೆ ಬೆಸೆದು ಹೋಗಿದೆ….!! ಅಂದ ಹಾಗೆ  ನಿನ್ನೆ ನೀ ಟೀ ಮಾಡಿ ಕೊಟ್ಟಾಗ ಮೊಟ್ಟ ಮೊದಲು ನಿನ್ನ ಕೈಯಾರೆ ಮಾಡಿದ ಟೀ ಕುಡಿದ ಮಧುರ ನೆನಪು ಒತ್ತರಿಸಿ ಬಂತು. ಅದು ಬದುಕಿನುದ್ದಕ್ಕೂ ಮರೆಯಲಾರದ್ದು ಕೂಡ….!! ಅದನ್ನು ಬರೀಯ ಟೀ ಅಂತಾ ಕರೆಯೋಕೆ ಮನಸೇ ಆಗಲ್ಲ ನೊಡು, ಹಾಗೆ ಕರೆಯೋದ್ರಿಂದ ಅದರಲ್ಲಿ ನೀನು ತುಂಬಿದ್ದ ಅತಿಯಾದ ಸಿಹಿಗೆ ಮೋಸ ಮಾಡಿದಂತಾಗಬಹುದೇನೋ….!! ಅಂದು ನೀ ಕೊಟ್ಟ ಪಾಯಸದಷ್ಟು ಸಿಹಿಯಾದ ಟೀ ನನ್ನ  ಬದುಕಿನುದ್ದಕ್ಕೂ ಸಿಹಿಯನ್ನೇ ತುಂಬುವ ಮೂನ್ಸೂಚನೆ  ಎಂಬುದು ಅವತ್ತಿಗೆ ಅರ್ಥವೇ ಆಗಿರಲಿಲ್ಲ….!! ನನ್ನ ಏಕಾಂತದ ಊರಿಗೆ ನೀ ಲಗ್ಗೆ ಇಟ್ಟ ಕ್ಷಣದಿಂದ  ಅಲ್ಲೆಲ್ಲಾ ಬರೀಯ ಸಡಗರ ಸಂಭ್ರಮವೇ ಸರಿ…. ಎಳ್ಳಷ್ಟು ವಿಷಾದವಿಲ್ಲದ ಬದುಕು ಕಟ್ಟಿಕೊಟ್ಟಿರುವ ನಿನ್ನ ಪ್ರೀತಿ ಇಂದಿಗೂ ನನಗೆ ವಿಸ್ಮಯವೇ….!! ಒಂದು ಪುಟ್ಟ ಬೊಂಬೆಗೆ ಸಣ್ಣ ಚಾಕ್‌ಲೇಟ್‌ಗೆ ಅರಳುವ ನಿನ್ನ ಮಗುವಿನಂತಹ ಮನಸ್ಸು ಸದಾ ನಂಗೆ ಜೀವ ಕಳೆ ತುಂಬುವ ಚೈತನ್ಯದ ಚಿಲುಮೆ….!!

ಇಷ್ಟೆಲ್ಲಾ ಪ್ರೀತಿ ಇಟ್ಟುಕೊಂಡೂ ನಾವು ಹೀಗೆ ದೂರವಾಗಿದ್ದೇ ಬದುಕುವುದು ಹೇಗೆ ಸಾಧ್ಯವಾಗ್ತಾ ಇದೆ ಅಂತ ಯೋಚನೆ ಮಾಡಿದರೆ ಕಾರಣ ಸಿಗದೇ ಇರಲ್ಲ…. ಅವತ್ತು ನಾವು ಮಾಡಿದ ನಿರ್ಧಾರವೇ ಅಂತದ್ದು ಅಲ್ವಾ ಎಲ್ಲರನ್ನೂ ಒಪ್ಪಿಸಿಯೇ, ಎಲ್ಲರ ಹಾರೈಗಳಲ್ಲೇ ನಾವು ಒಂದಾಗಬೇಕು ಎಂಬುದು…. ಆ  ಒಂದು ಕಾರಣಕ್ಕಾಗಿಯೇ ತಾನೆ ನಾವು ಇಷ್ಟು ಸಂಯಮದಿಂದ ಬದುಕುತ್ತಿರುವುದು…,!! ಆ ಒಪ್ಪಿಸುವ  ಕೆಲಸದಲ್ಲಿ ಅರ್ಧದಾರಿ ಸಾಗಿಯಾಗಿದೆ  ಇನ್ನರ್ಧ  ದಾರಿ ನಾವಂದು ಕೊಂಡತೇ ಸಾಗಿ ಗುರಿ ಮುಟ್ಟುವ  ನಂಬಿಕೆಯೂ ನಮ್ಮಲ್ಲಿದೆ…. ಆದರೂ  ಒಮ್ಮೊಮ್ಮೆ ಮನೆಯ ಮೂಲೆಮೂಲೆಯಲ್ಲೂ ನೀ ನಿಂತು ಕಾಡುವಾಗ ಇನ್ನೆಷ್ಟು ದಿನ  ಈ ವನವಾಸ  ಎಂದೆನಿಸದೇ ಇರದು…,!! ನಿನ್ನ ಬಿಟ್ಟಿರುವ ಪ್ರತಿ ಕ್ಷಣವೂ ಘನ ಘೊರವೇ ಸರಿ…. ಆದರೂ ಮುಂದಿನ ಸಂತಸದ ಬದುಕಿಗಾಗಿ ಇದೆಲ್ಲವ ಸಹಿಸಿಲೇಬೇಕಲ್ವಾ….!!

ನಿನ್ನನ್ನು ಪ್ರೀತಿ ಮಾಡಿದ ದಿನದಿಂದ ಈ ಜಗತ್ತು  ತುಂಬಾನೇ ಸ್ಪೀಡು ಅನ್ನಿಸಿಬಿಟ್ಟಿದೆ….! ಯಾಕೆ ಗೊತ್ತಾ..? ನಾವು  ಜೊತೆಗಿರುವಾಗಂತೂ ೧೦೦ ಮೀಟರ್ ರನ್ನಿಂಗ್ ರೇಸನಲ್ಲಿ ತಾನೇ ಮೊದಲು ಬರಬೇಕೆಂಬಂತೆ ಓಡೋ ಗಡಿಯಾರ, ನಿನ್ನ ನೆನಪುಗಳೊಡನೆ ಇದ್ದಾಗಲೂ ಅಷ್ಟೇ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡುವ ಕಾಲ….! ಇವಾಗ ನೋಡು ಎಷ್ಟು ಬೇಗ ಕುಂದಾಪುರ ಬಂದೇ ಬಿಡ್ತು ನಾನಿನ್ನೂ ಇಲ್ಲೇ ಕೂತಿದ್ರೆ ಮುಂದಿನ ಸ್ಟೇಷನ್ನಲ್ಲಿ ಇಳ್‌ಕೊಂಡು  ವಾಪಸ್ ಬರೋಕೆ ಮತ್ತೊಂದು ರೈಲು ಹತ್ತಬೇಕಾಗುತ್ತದೆ..!! ಸರಿ ನಾನಿನ್ನು  ಹೊರಡುತ್ತೇನೆ ಮುಂದಿನ ಪತ್ರ  ಬರೆವ ವರೆಗೂ ನಿನ್ನೆಯ ಭೇಟಿಯ ಸವಿಕ್ಷಣಗಳನ್ನು ಮೆಲಕು ಹಾಕುತ್ತಾ ಇರೋಣ…. ಎನಂತೀಯಾ….??

ಇಂತಿ 

ನಿನ್ನ ನೆನಪುಗಳ 
ಚಾದರ ಹೊದ್ದು
ಒಳಗೊಳಗೇ ಬೆಚ್ಚನೆ
ಕನಸುಗಳ
ಕಸೂತಿ ನಡೆಸಿರುವ
ನಿನ್ನವ….

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಶ್ರೀನಿವಾಸ್ ಪ್ರಭು

ಪ್ರೇಮ ಪತ್ರ ಚೆನ್ನಾಗಿದೆ. ಸ್ವಲ್ಪ ಥ್ರಿಲ್, ಸ್ವಲ್ಪ ಸಸ್ಪೆನ್ಸ್ ಇರಬೇಕಿತ್ತು ಅನ್ನಿಸಿತು.

ಗಂಗಾ ತರಂಗ

ತುಂಬಾ ಚನ್ನಾಗಿದೆ

 

2
0
Would love your thoughts, please comment.x
()
x