ಎಲ್ಕ್ ಎಂಬ ಸಾರಂಗದ ದುರಂತ ಕತೆ: ಅಖಿಲೇಶ್ ಚಿಪ್ಪಳಿ


ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಯಿ-ಭಾಯಿ ಎಂದು ಪರಸ್ಪರ ಹೊಗಳಿಕೊಳ್ಳುತ್ತಾ ಉಭಯದೇಶಗಳ ಸಂಬಂಧವೃದ್ಧಿಗೆ ಅಡಿಪಾಯ ಹಾಕುತ್ತಿರುವ, ಪರಮಾಣು ಒಪ್ಪಂದಕ್ಕೆ ಕೈಜೋಡಿಸುತ್ತಾ, ಯುರೇನಿಯಂ ಆಮದಿಗೆ ಸಹಿ ಹಾಕುತ್ತಿರುವ ಮೂರು ದಿನ ಮೊದಲು ಅಮೆರಿಕಾದ ನಾರ್ತ್ ಕ್ಯಾರೋಲಿನ ರಾಜ್ಯದ ಗ್ರೇಟ್ ಸ್ಮೋಕಿ ಮೌಂಟೇನ್ ರಾಷ್ಟ್ರೀಯ ಅಭಯಾರಣ್ಯದ ಸಾರಂಗವೊಂದನ್ನು ಅಲ್ಲಿನ ಅಧಿಕಾರಿಗಳೇ ಗುಂಡಿಟ್ಟು ಕೊಂದರು. ಆ ಗುಂಡಿನ ಸದ್ದು ಸುದ್ದಿಯಾಗಲಿಲ್ಲ. ಅಕ್ಟೋಬರ್ ೨೦ ೨೦೧೪ರ ದಿನದಂದು ಹವ್ಯಾಸಿ ಛಾಯಾಚಿತ್ರಗ್ರಾಹಕನಾದ ಜೇಮ್ಸ್ ಯಾರ್ಕ್ ಎಂಬಾತ ಇದೇ ಅಭಯಾರಣ್ಯದಲ್ಲಿ ವನ್ಯಜೀವಿಗಳ ವಿವಿಧ ಭಂಗಿಗಳನ್ನು ಸೆರೆ ಹಿಡಿಯುತ್ತಿದ್ದ. ಜೇಮ್ಸ್ ಚಿತ್ರ ತೆಗೆಯುವುದರಲ್ಲಿ ಮಗ್ನನಾಗಿದ್ದಾಗ ಅಭಯಾರಣ್ಯದ ಸಾರಂಗವೊಂದು ಬಂದು ಇವನ ತಲೆಗೆ ತನ್ನ ಕೋಡಿನಿಂದ ಆಟವಾಡುವ ಭಂಗಿಯಲ್ಲಿ ತಿಕ್ಕುತ್ತಿತ್ತು. ಇದನ್ನು ಇನ್ನೊಬ್ಬ ವಿಡಿಯೋಗ್ರಾಫರ್ ವಿಡಿಯೋ ಮಾಡಿ ಇಂಟರ್‌ನಟ್‌ನಲ್ಲಿ ಪ್ರಸಾರ ಮಾಡಿದ ಕೆಲವೇ ದಿನಗಳಲ್ಲಿ ಈ ವಿಡಿಯೋವನ್ನು ವಿಕ್ಷೀಸಿದವರ ಸಂಖ್ಯೆ ಲಕ್ಷಗಳ ಗಡಿ ದಾಟಿತು. 

ಅಭಯಾರಣ್ಯಗಳು, ರಕ್ಷಿತಾರಣ್ಯಗಳೂ ಸೇರಿದಂತೆ ಯಾವ ಅರಣ್ಯಪ್ರದೇಶಗಳೂ ವನ್ಯಪ್ರಾಣಿಗಳಿಗೆ ಸುರಕ್ಷಿತವಾಗಿಲ್ಲ. ಪರಿಸರ ಪ್ರವಾಸೋದ್ಯಮವೆಂಬ ಆಧುನಿಕ ಕಲ್ಪನೆಯಿಂದಾಗಿ ಈ ತರಹದ ವ್ಯತಿರಿಕ್ತ ಪರಿಸ್ಥಿತಿಯೇರ್ಪಡುತ್ತದೆ. ಮಾನವನಿಂದ ದೂರವಿದ್ದಷ್ಟೂ ವನ್ಯಜೀವಿಗಳು ಸುರಕ್ಷಿತವಾಗಿರುತ್ತವೆ. ಇಲ್ಲಿ ಮನುಷ್ಯ ವಿವೇಚನೆಯಿಂದ ವರ್ತಿಸಿದರೆ ಈ ತರಹದ ಅವಘಡಗಳನ್ನು ತಪ್ಪಿಸಬಹುದಾಗಿದೆ. ಅಭಯಾರಣ್ಯಗಳಲ್ಲಿ ಪ್ರವಾಸಿಗರಿಗೆ ನಿಗದಿತ ಸಮಯ ಮತ್ತು ಪ್ರದೇಶದಲ್ಲಿ ಪ್ರಾಣಿವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುವುದರಿಂದಾಗಿ ವನ್ಯಪ್ರಾಣಿಗಳು ಮನುಷ್ಯನೊಂದಿಗೆ ಒಂದು ಹಂತದ ಮಟ್ಟಿಗೆ ಹೊಂದಿಕೊಂಡಿರುತ್ತವೆ. ಪ್ರವಾಸಿಗರು ಸುರಕ್ಷಿತ ಅಂತರ ಕಾಯ್ದುಕೊಂಡು ಅಲ್ಲಿನ ನಿಯಮಗಳ ಪ್ರಕಾರ ತಮ್ಮ ಪ್ರವಾಸವನ್ನು ಸೀಮಿತವಾಗಿಟ್ಟುಕೊಳ್ಳಬೇಕಾಗುತ್ತದೆ. ಆದರೆ ಕೆಲವೊಂದು ಬಾರಿ ಮನುಷ್ಯ ಕುತೂಹಲದಿಂದಲೋ ಅಥವಾ ಪ್ರಯೋಗಬುದ್ದಿಯಿಂದಲೋ ಅಲ್ಲಿನ ಜೀವಿಗಳಿಗೆ ತಾನು ತಂದ ಆಹಾರವನ್ನು ನೀಡಲು ತೊಡಗುತ್ತಾನೆ. ಕ್ರಮೇಣ ಆ ಜೀವಿಗಳು ಮನುಷ್ಯನ ಈ ಕೃತ್ಯಗಳಿಗೆ ಒಗ್ಗಿಕೊಳ್ಳುತ್ತವೆ. ಪ್ರಾಣಿಗಳು ಮನುಷ್ಯನಿಗೆ ಒಗ್ಗಿಕೊಳ್ಳುವ ಪ್ರಕ್ರಿಯೆ ಅಪಾಯಕಾರಿಯಾದದು. ಒಂದೋ ಆ ಪ್ರಾಣಿಗೆ ಅಪಾಯವಾಗಬಹುದು ಅಥವಾ ಸಂಪರ್ಕಕ್ಕೆ ಹೋಗುವ ಪ್ರವಾಸಿಗನಿಗೆ ಅಪಾಯವಾಗಬಹುದು. 

ಕೆಲದಿನಗಳ ಹಿಂದೆ ದೆಹಲಿಯ ಮೃಗಾಲಯವೊಂದರಲ್ಲಿ ಒಂದು ಯುವಕನನ್ನು ಸಾಯಿಸಿತು ಎಂದು ಪತ್ರಿಕೆಗಳಲ್ಲಿ ವರದಿ ಬಂತು. ನೂರಾರು ಜನರ ಕಣ್ಣೆದುರೇ ಹುಲಿ ಆ ಯುವಕನನ್ನು ಕಚ್ಚಿಕೊಂಡು ಹೋಯಿತು. ಈ ದೃಶ್ಯವನ್ನು ವಿಡಿಯೋ ಮಾಡಿದ್ದನ್ನು ಫೇಸ್‌ಬುಕ್ ತಾಣದಲ್ಲಿ ಕಾಣಬಹುದು. ಮೃಗಾಲಯದ ಹುಲಿ ಯುವಕನನ್ನು ಕಚ್ಚಿಕೊಂದಿತು ಎಂಬುದಷ್ಟೇ ಸುದ್ಧಿಯಾಗುತ್ತದೆ. ಈ ಘಟನೆಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದಾಗ ಹುಲಿಯ ವರ್ತನೆ ಬೇರೆಯದಾಗಿಯೇ ತೋರುತ್ತದೆ. ಸ್ವಾಭಾವಿಕವಾಗಿ ಕೆಳಗೆ ಬಿದ್ದ ಯುವಕ ಭಯಭೀತನಾಗಿದ್ದಾನೆ. ಆಗ ಹುಲಿ ಇವನ ಸಮೀಪ ಬಂದಿದೆ. ಹುಲಿಯನ್ನು ಎದುರಿಸುವ ಯಾವ ತಂತ್ರಗಳು ಆ ಯುವಕನಿಗೆ ತಿಳಿದಿರಲಿಲ್ಲ. ಆದರೂ ಕೂಡ, ಹುಲಿ ಏಕಾಏಕಿ ದಾಳಿ ಮಾಡಲಿಲ್ಲ. ಹಲವಾರು ವರ್ಷಗಳಿಂದ ಮೃಗಾಲಯದಲ್ಲಿದ್ದ, ಆ ಹುಲಿಯು ತನ್ನ ಸ್ವಾಭಾವಿಕವಾದ ಭೇಟೆಯಾಡುವ ಮೂಲಗುಣ (ಇನ್‌ಸ್ಟಿಂಕ್ಟ್)ವನ್ನೇ ಕಳೆದುಕೊಂಡಿತ್ತು. ಇತ್ತ ನೆರೆದಿದ್ದ ಜನ ವಿವೇಚನೆಯನ್ನು ಕಳೆದುಕೊಂಡಿದ್ದರು. ಹುಲಿಯು ಆ ಯುವಕನನ್ನು ತಿಂದೇ ಬಿಡುತ್ತದೆ ಎಂದು ಜನ ಭಾವಿಸಿದರು, ಹುಲಿಯನ್ನು ಬೆದರಿಸಲು ಕಲ್ಲು ಎಸೆಯಲು ತೊಡಗಿದರು. ಇಷ್ಟು ಹೊತ್ತಾದರೂ ಹುಲಿ ಯುವಕನ ಮೇಲೆ ದಾಳಿ ಮಾಡಿರಲಿಲ್ಲ. ಕನಿಷ್ಟ ಗರ್ಜಿಸಿರಲೂ ಇಲ್ಲ. ಯುವಕನ ಹತ್ತಿರ ಬಂದು ಪಂಜದಿಂದ ಯುವಕನನ್ನು ಸ್ಪರ್ಶಿಸುವ ಪ್ರಯತ್ನದಲ್ಲಿತ್ತು. ಇತ್ತ ಜನಗಳ ಗಲಾಟೆ ಹೆಚ್ಚಾಯಿತು. ಕಲ್ಲು ತೂರಾಟ ಜೋರಾಯಿತು. ಈಗಲೂ ಹುಲಿ ಸಿಟ್ಟಿಗೇಳಲಿಲ್ಲ. ಸ್ವಾಭಾವಿಕವಾಗಿ ಯಾವುದೇ ಪ್ರಾಣಿಗಳಾಗಲಿ, ಹಸಿದಾಗ ಮಾತ್ರ ಆಹಾರಕ್ಕಾಗಿ ತಮಗಿಂತ ದುರ್ಭಲ ಪ್ರಾಣಿಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತವೆ. ಮೃಗಾಲಯದ ಹುಲಿಗೆ ಕಾಲಕಾಲಕ್ಕೆ ಆಹಾರ ನೀಡುವುದರಿಂದ, ಅವುಗಳ ಜೈವಿಕ ಗಡಿಯಾರ ಆ ಆಹಾರ ನೀಡುವ ನಿಗದಿತ ಸಮಯಕ್ಕೆ ಒಗ್ಗಿಕೊಂಡಿರುತ್ತವೆ. ಯಾವಾಗ ಕಲ್ಲು ತೂರಾಟ ಮತ್ತು ಗಲಭೆ ಹೆಚ್ಚಾಯಿತೋ, ಆಗ ಹುಲಿಗೆ ಈ ಬಡಪಾಯಿ ಮನುಜ ಪ್ರಾಣಿಯನ್ನು ಮನುಷ್ಯರಿಂದಲೇ ದೂರ ಮಾಡಿ ರಕ್ಷಿಸಬೇಕು ಎಂದು ಭಾವಿಸಿ, ಯುವಕನ ಕತ್ತಿಗೆ ಬಾಯಿ ಹಾಕಿ ಎಳೆದುಕೊಂಡು ಹೋಯಿತು. ಈ ಪ್ರಕ್ರಿಯೆಯಲ್ಲಿ ಆ ಯುವಕನ ಪ್ರಾಣ ಹೋಯಿತು. ಈ ದಿಕ್ಕಿನಲ್ಲಿ ತಜ್ಞರು ಈ ಘಟನೆಯನ್ನು ವಿಶ್ಲೇಷಿಸಿದ್ದಾರೆ. 

ಹೀಗೆ ಕಾಡುಪ್ರಾಣಿಗಳ ವರ್ತನೆ ಹೀಗೆ ಇರುತ್ತದೆ ಊಹಿಸಲು ಸಾಧ್ಯವಾಗುವುದಿಲ್ಲ. ಮೂರು ಚಿರತೆಗಳ ದಾಳಿಗೊಳಗಾದ ಹರಿಣವೊಂದು ಸೆಣಸಿ, ತಿರುಗಿ ಚಿರತೆಗೆ ಮಾರಣಾಂತಿಕ ಗಾಯ ಮಾಡಿ ಪಾರಾದ ಚಿತ್ರವನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನಲ್‌ನಲ್ಲಿ ಈ ಹಿಂದೆ ಬಿತ್ತರಿಸಿದ್ದರು. ಮುಂಗುಸಿಯೊಂದು ಸಿಂಹಗಳಿಗೆ ಹೆದರಿಸಿ ಪಾರಾದ ಚಿತ್ರವೂ ಯೂಟ್ಯೂಬಿನಲ್ಲಿ ಲಭ್ಯವಿದೆ. ಪ್ರಾಣವುಳಿಸಿಕೊಳ್ಳಲು ಹೋರಾಟ ಅನಿವಾರ್ಯ. ಹದಿನಾರು ಸಿಂಹಗಳನ್ನು ಮಣಿಸಿದ ಆನೆಯ ಸಾಹಸಗಾಥೆಯ ಚಿತ್ರವೂ ಲಭ್ಯವಿದೆ. ದಿನಾಂಕ:೧೯/೧೧/೨೦೧೪ರಂದು ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಒಂದು ನಾಗರ ಹಾವು ಇನ್ನೊಂದು ನಾಗರಹಾವನ್ನು ನುಂಗುತ್ತಿರುವುದನ್ನು ನೋಡಿದ ಸ್ವಾಮಿಯೊಬ್ಬರು, ಭೇಟೆಯಿಂದ ಬಲಿಯನ್ನು ತಪ್ಪಿಸಿ ಕಾಡಿಗೆ ಬಿಟ್ಟರು ಎಂಬ ಸುದ್ಧಿಯಿತ್ತು. ನಿಸರ್ಗದಾಟದಲ್ಲಿ ಇವೆಲ್ಲ ಅತ್ಯಂತ ಸಹಜವಾದ ಘಟನೆಗಳು. ಇಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಬಾರದು. ಹಾಗೆಯೇ ಈ ಸುದ್ಧಿಯನ್ನು ವೈಭವೀಕರಿಸಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಧ್ಯಮಗಳು ಮಾಡಬಾರದು. ಈ ತರಹದ ರೋಚಕ ಸುದ್ಧಿಯನ್ನು ಪ್ರಕಟಿಸುವಾಗ ಸ್ವಾಮಿಯ ಕೃತ್ಯವನ್ನು ಖಂಡಿಸಿ ಬರೆದಿದ್ದರೆ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಜಾಗೃತಿ ಮೂಡಿಸುವಲ್ಲಿ ಸುದ್ಧಿ ಸಫಲವಾಗುತ್ತಿತ್ತು. 

ವನ್ಯಧಾಮವೊಂದರ ಸಾರಂಗವೊಂದು ಮನುಷ್ಯನ ಸಂಪರ್ಕಕ್ಕೆ ಬಂದಿದ್ದರಿಂದ, ಆ ಸಾರಂಗವನ್ನು ಕೊಲ್ಲುವುದು ಏಕೆ ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೆ ಇದನ್ನು ಕೊಂದು ಹಾಕಿದ ವನ್ಯಧಾಮದ ಅಧಿಕಾರಿಗಳ ಸಮಜಾಯಿಷಿಯ ಪ್ರಕಾರ, ಯಾವುದೇ ವನ್ಯಪ್ರಾಣಿ, ವನ್ಯಜೀವಿಯಾಗಿದ್ದರೇ, ಅದೂ ಸುರಕ್ಷಿತ ಮತ್ತು ಮಾನವನೂ ಸುರಕ್ಷಿತ. ಆದರೆ, ಈ ನತದೃಷ್ಟ ಸಾರಂಗದ ವಿಚಾರದಲ್ಲಿ, ಇದು ಪದೇ-ಪದೇ ಮನುಷ್ಯ ಸಂಪರ್ಕಕ್ಕಾಗಿ ಹಾತೊರೆಯುತ್ತಿತ್ತು. ಪ್ರವಾಸಿಗರು ನೀಡುವ ಜಂಕ್‌ಫುಡ್‌ಗಳನ್ನು ಬಹಳವಾಗಿ ಇಷ್ಟಪಟ್ಟು ತಿನ್ನುತ್ತಿತ್ತು. ಇದರ ಈ ಅಭ್ಯಾಸವನ್ನು ತಪ್ಪಿಸುವುದಕ್ಕಾಗಿ ಅಧಿಕಾರಿಗಳು ಹಲವು ಪ್ರಯತ್ನ ಮಾಡಿದರು. ಪಟಾಕಿ, ಹುಸಿಗುಂಡು, ರಬ್ಬರ್ ಗುಂಡುಗಳನ್ನು ಸಾರಂಗವನ್ನು ಬೆದರಿಸಲು ೨೮ ಬಾರಿ ಉಪಯೋಗಿಸಿದರು. ಆದರೆ, ಜಂಕ್‌ಫುಡ್‌ನ ಚಟ ಹತ್ತಿಸಿಕೊಂಡ ಸಾರಂಗ ಅಧಿಕಾರಿಗಳ ಯಾವ ಪ್ರಯತ್ನಕ್ಕೂ ಬಗ್ಗಲಿಲ್ಲ. ಸಾರಂಗವು ಮಾನವನಿಗೆ ಸಹಜವಾಗಿ ಬೆದರುವ ತನ್ನ ಮೂಲಗುಣವನ್ನೇ ಕಳೆದುಕೊಂಡಿತ್ತು. ಇದೇ ಚಾಳಿ ಮುಂದುವರೆದಲ್ಲಿ ಇತರ ಸಾರಂಗಗಳಿಗೂ ಅಭ್ಯಾಸವಾಗುವ ಸಾಧ್ಯತೆ ಇತ್ತು. ಇದರಿಂದ ಹಲವು ತರಹದ ದುಷ್ಪರಿಣಾಮಗಳಾಗುತ್ತವೆ. ಯಾವುದೇ ಅಗೋಚರ ಖಾಯಿಲೆಗಳಿಗೆ ಇಡೀ ಸಾರಂಗ ಸಮುದಾಯ ತುತ್ತಾಗುವ ಸಾಧ್ಯತೆ. ಆಧುನಿಕ ಮನುಷ್ಯರ ಆಹಾರವನ್ನು ತಿಂದು, ಸಾರಂಗದ ಮುಂದಿನ ಸಂತತಿಗಳು ವಿಲಕ್ಷಣವಾಗುವ ಸಾಧ್ಯತೆ ಅಥವಾ ಸಂಖ್ಯಾಸ್ಪೋಟವಾಗುವ ಸಾಧ್ಯತೆ ಇತ್ಯಾದಿಗಳು.

ಹೀಗೆ ವನ್ಯಧಾಮದ ಅಧಿಕಾರಿಗಳು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾ, ಕೆಲವು ಸೂಚನೆಗಳನ್ನು ಪ್ರವಾಸಿಗರಿಗೆ ನೀಡಿದ್ದಾರೆ.

ನಿಮ್ಮ ಆಹಾರವನ್ನು ಯಾವುದೇ ಕಾರಣಕ್ಕೂ ವನ್ಯಜೀವಿಗಳೊಂದಿಗೆ ಹಂಚಿಕೊಳ್ಳಬಾರದು.
ನಿಮ್ಮ ಆಹಾರವನ್ನು ಅರಣ್ಯದಲ್ಲಿ ಬಿಟ್ಟು ಹೋಗುವುದು ಇತ್ಯಾದಿ ಮಾಡಬಾರದು.
ನೀವು ಕೊಂಡೊಯ್ದ ಆಹಾರವನ್ನು ನಿಮ್ಮ ವಾಹನದಲ್ಲಿ ಭದ್ರವಾಗಿ ಇದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ನಿಮ್ಮಿಂದ ಸೃಷ್ಟಿಯಾದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಅರಣ್ಯದಲ್ಲಿ ಖಂಡಿತಾ ಎಸೆಯಕೂಡದು
ಆಹಾರದ ಯಾವುದೇ ಚಿಕ್ಕ ಅಂಶವನ್ನು ಅರಣ್ಯದಲ್ಲಿ ಬಿಟ್ಟುಹೋಗಕೂಡದು.
ಯಾವುದೇ ತೊಂದರೆ ಸಂಭವಿಸಿದಲ್ಲಿ, ಅಲ್ಲಿನ ಅರಣ್ಯಾಧಿಕಾರಿಗಳನ್ನು ತಕ್ಷಣ ಭೇಟಿಮಾಡಿ.
ಈ ಸೂಚನೆಗಳನ್ನು ಪ್ರವಾಸಿಗರು ಮೊದಲೇ ಪಾಲಿಸಿದ್ದರೆ, ಸಾರಂಗಕ್ಕೆ ಈ ಗತಿ ಬರುತ್ತಿರಲಿಲ್ಲ. ಬುದ್ಧಿಯಿರದ ಪ್ರಾಣಿಯೊಂದು ವಿವೇಕವಿಲ್ಲದವರ ಕೃತ್ಯಗಳಿಗೆ ಅನಿವಾರ್ಯವಾಗಿ ಪ್ರಾಣ ತೆರಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಅಖಿಲೇಶ, ನಿಮ್ಮ ಲೇಖನಗಳಲ್ಲಿ ಹೊಸದೇನೊ ತಿಳಿದುಕೊಳ್ಳುವ ಅವಕಾಶವಿರುತ್ತದೆ. ತುಂಬಾ ಚೆನ್ನಾಗಿದೆ!

Akhilesh Chipli
Akhilesh Chipli
9 years ago

ಧನ್ಯವಾದಗಳು ಕುರ್ತಕೋಟಿ.

2
0
Would love your thoughts, please comment.x
()
x