ಚೌತಿಯ ಚಂದ್ರ ಎನಗೆ ಅಪವಾದ ತಂದ: ಲಕ್ಷ್ಮೀಶ ಜೆ. ಹೆಗಡೆ

                            
    
ಈ ಘಟನೆ ನಡೆದಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಆಗ ನಾನು ಐದನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದೆ. ಏಪ್ರಿಲ್, ಮೇ ತಿಂಗಳಿನ ಬೇಸಿಗೆ ರಜೆಯಲ್ಲಿ ಮಗ ಕಂಪ್ಯೂಟರ್ ಕಲಿಯಲಿ ಎಂದು ನನ್ನಪ್ಪ ನನ್ನನ್ನು ಒಂದು ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗೆ ಸೇರಿಸಿದರು. ಜೊತೆಗೆ ನನಗಿಂತ ಒಂದು ವರ್ಷ ದೊಡ್ಡವನಾಗಿದ್ದ ನನ್ನೊಬ್ಬ ಮಿತ್ರನೂ ಸೇರಿಕೊಂಡದ್ದರಿಂದ ಇಬ್ಬರೂ ಕಂಪ್ಯೂಟರ್ ಕಲಿಯಲು ಹೊರಟೆವು. (ಅಲ್ಲಿ ನಾವು ಕಂಪ್ಯೂಟರ್ ಕಲಿತಿದ್ದಕ್ಕಿಂತ ಗೇಮ್ಸ್ ಆಡಿದ್ದೇ ಹೆಚ್ಚು. ಅದು ಬೇರೆ ವಿಷಯ ಬಿಡಿ)ದಿನಕ್ಕೆ ಒಂದುವರೆ ಗಂಟೆ ಕ್ಲಾಸ್ ಇರುತ್ತಿತ್ತು. ಸೆಂಟರ್ ನಮ್ಮ ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರವಿದ್ದುದ್ದರಿಂದ ಇಬ್ಬರೂ ಬಸ್ ನಲ್ಲಿ ಹೋಗಿ ಬರುತ್ತಿದ್ದೆವು. ಹೋಗಿ ಬರಲು ತಲಾ ಎರಡೆರಡು ರೂಪಾಯಿಯಂತೆ ನನ್ನಮ್ಮ ನನಗೆ ದಿನಕ್ಕೆ ೪ ರೂಪಾಯಿ ಕೊಡುತ್ತಿದ್ದಳು. 

ಅಪ್ಪ ಅಮ್ಮ ಇಬ್ಬರೂ ಅಪರೂಪಕ್ಕೊಮ್ಮೆ ಕೊಡುತ್ತಿದ್ದ ಪಾಕೆಟ್ ಮನಿಯನ್ನು ಕೂಡಿಡಲು ಮತ್ತು ನನಗೆ ನನ್ನ ಆರನೇ ವಯಸ್ಸಿನಲ್ಲಿಯೇ ಉಪನಯನವಾಗಿದ್ದರಿಂದ ಅಲ್ಲಲ್ಲಿ ವಟು ಆರಾಧನೆ, ಬ್ರಹ್ಮಚಾರಿ ಆರಾಧನೆ ಎಂದು ಯಾರಾದರೂ ಕರೆಯುತ್ತಿದ್ದಾಗ ನಾನು ಹೋಗುತ್ತಿದ್ದರಿಂದ ಸಿಗುವ ದಕ್ಷಿಣೆಯ ಹಣವನ್ನು ಇಡಲು ನನ್ನದೊಂದು ಪರ್ಸ್ ಇತ್ತು. ಆ ಹಣವನ್ನು ನನಗಾಗಿ ಬಿಟ್ಟು ಮತ್ಯಾವುದಕ್ಕೂ ಅಪ್ಪ-ಅಮ್ಮ ಬಳಸುತ್ತಿರಲಿಲ್ಲ. ಅದರಲ್ಲಿ ಇದ್ದಕ್ಕಿದ್ದಂತೆಯೇ ಒಂದು ದಿನ ನೂರೈವತ್ತು ರೂಪಾಯಿ ಕಾಣೆಯಾಗಿತ್ತು. ಯಾವಾಗಲೂ ನನ್ನ ಪರ್ಸ್ ಒಳಗೆ ಇರುವ ಹಣದ ಲೆಕ್ಕ ಇಟ್ಟುಕೊಳ್ಳುತ್ತಿದ್ದ ಅಮ್ಮನ ಕಣ್ಣಿಗೆ ಇದು ಬಿತ್ತು. ಸರಿ, ನನ್ನ ಬಳಿ ಅಮ್ಮ "ನೀನೇನಾದರೂ ನೂರೈವತ್ತು ರೂಪಾಯಿ ಹಣ ತೆಗೆದುಕೊಂಡಿದ್ದೀಯಾ"ಎಂದು ಕೇಳಿದಳು. ದೇವರಾಣೆ, ನನ್ನಾಣೆ ಹಣ ಕಾಣೆಯಾಗಿದ್ದು ಅಮ್ಮ ಹೇಳಿಯೇ ನನಗೆ ಗೊತ್ತಾಯಿತೇ ಹೊರತು, ಎಣಿಸುವ ಅಭ್ಯಾಸವಿಲ್ಲದ ನನಗೆ ಅಲ್ಲಿಯವರೆಗೂ ಅದು ತಿಳಿದಿರಲಿಲ್ಲ ಮತ್ತು ನನ್ನ ಪರ್ಸ್ ನಿಂದ ನನಗೆ ಹಣ ಬೇಕಾಗಿದ್ದರೂ ಅಮ್ಮ ಅಥವಾ ಅಪ್ಪನನ್ನು ಕೇಳಿಯೇ ತೆಗೆದುಕೊಳ್ಳುತ್ತಿದ್ದೆ. ಹಾಗಾಗಿ ಹಣ ಕಾಣೆಯಾಗಿದ್ದು ನನಗೂ ಚಿಂತೆಯನ್ನುಂಟು ಮಾಡಿತು. ಸಂಜೆ ಅಪ್ಪ ಬಂದಾಗ ಅಮ್ಮ ಹಣ ಕಣ್ಮರೆಯಾದ ಬಗ್ಗೆ ತಿಳಿಸಿದರು. ಮೊದಲು ಶಾಂತವಾಗಿ ನನ್ನಲ್ಲಿ ವಿಚಾರಿಸಿದ ಅಪ್ಪ ನಾನು ಹಣ ಕಾಣೆಯಾದ ಬಗ್ಗೆ ನನಗೇನೂ ತಿಳಿಯದು ಎಂದು ಪದೇ ಪದೇ ಹೇಳಿದ್ದರಿಂದ ಕೋಪಗೊಂಡು ಬಯ್ಯಲು ಶುರುಮಾಡಿ "ಏನೋ ಮನೆಯಲ್ಲೇ ನಿನ್ನ ಹಣವನ್ನೇ ಕದಿಯುತ್ತೀಯಾ ಅಲ್ಲದೇ ಏನೂ ಗೊತ್ತಿಲ್ಲದವನಂತೆ ಸುಳ್ಳು ಹೇಳುತ್ತೀಯಾ?ನಿನ್ನ ಹೊರತಾಗಿ ಆ ಹಣವನ್ನು ನಾವ್ಯಾರೂ ಬಳಸುವುದಿಲ್ಲ ಎಂದು ಗೊತ್ತಿಲ್ಲವೇ ನಿನಗೆ" ಎಂದು ಕೂಗಾಡಲು ಶುರುಮಾಡಿದ್ದರು. ನಾನು ಮಾಡದ ತಪ್ಪಿಗಾಗಿ ಬಂದ ಅಪವಾದವನ್ನು ಶಪಿಸುತ್ತ ಅಳಲಾರಂಭಿಸಿದೆ. 

ಆ ದಿನ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಕಳ್ಳತನದ ಅಪವಾದ ನನ್ನ ಮೇಲೆ ಬಂದದ್ದಾದರೂ ಏಕೆ ಎಂದು ಆಲೋಚಿಸತೊಡಗಿದೆ. ಕಾಕತಾಳೀಯವೆಂಬಂತೆ ಕೆಲವು ದಿನಗಳ ಹಿಂದಷ್ಟೇ ಗಣೇಶ ಚತುರ್ಥಿಯಂದು ಹಬ್ಬವನ್ನು ಸಡಗರದಿಂದ ಮನೆಯಲ್ಲಿ ಆಚರಿಸಿದ್ದೆವು. ಅಂದು ರಾತ್ರಿ ಅಕಸ್ಮಾತಾಗಿ ನಾನು ಚಂದ್ರನನ್ನು ನೋಡಿಬಿಟ್ಟಿದ್ದೆ. ನನ್ನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ನನಗೆ ಕಾರಣ ಗೊತ್ತಾಯಿತು. ಏಕೆಂದರೆ ಗಣಪತಿಯ ಕಥೆಯನ್ನು ಅಪ್ಪ ನನಗೆ ಹೇಳುತ್ತಿದ್ದಾಗೆಲ್ಲ "ಒಂದು ದಿನ ಚೌತಿ ಹಬ್ಬದಂದು ಗಣೇಶ ಭಕ್ತರ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ತನಗಾಗಿ ಅರ್ಪಿಸಿದ ಚಕ್ಕುಲಿ, ಮೋದಕ, ಲಡ್ದುಗಳನ್ನು ಹೊಟ್ಟೆಬಿರಿಯುವಂತೆ ತಿಂದು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಸವಾರಿ ಹೊರಟ.  ಡೊಳ್ಳು ಹೊಟ್ಟೆಯ ಗಣಪನ ಭಾರವನ್ನು ತಡೆಯದೇ ಇಲಿಯು ಅತ್ತಿಂದಿತ್ತ ಓಲಾಡುತ್ತಾ ಬಹಳ ಕಷ್ಟದಿಂದ ತನ್ನೊಡೆಯನನ್ನು ಹೊತ್ತು ಸಾಗುತ್ತಿತ್ತು. ಒಂದು ಕಡೆ ಆಯ ತಪ್ಪಿದ ಗಣಪತಿ ಇಲಿಯ ಮೇಲಿಂದ ಧೊಪ್ಪನೇ ಬಿದ್ದ. ಬಿದ್ದ ಹೊಡೆತಕ್ಕೆ ಆನೆ ಮುಖದ ಅವನ ಅವನ ಒಂದು ದಂತ ಮುರಿಯಿತು. ಇದನ್ನು ನೋಡಿದ ಚಂದ್ರ ಮೇಲಿನಿಂದಲೇ ಜೋರಾಗಿ ನಗುತ್ತಾ ಗಣಪತಿಯನ್ನು ಅಣಕಿಸಲಾರಂಭಿಸಿದ. ಸಿಟ್ಟಿಗೆದ್ದ ಏಕದಂತ ‘ನನ್ನ ಹಬ್ಬದಂದು ಯಾರಾದರೂ ನಿನ್ನನ್ನು ನೋಡಿದರೆ ಅವರ ಮೇಲೆ ಏನಾದರೂ ಅಪವಾದ ಬರುವಂತಾಗಲಿ’ ಎಂದು ಶಾಪ ಕೊಡುತ್ತಾನೆ. ಹಾಗಾಗಿ ಚೌತಿ ಹಬ್ಬದ ದಿನ ಚಂದ್ರನನ್ನು ಅಪ್ಪಿತಪ್ಪಿಯೂ ನೋಡಬಾರದು"ಎನ್ನುತ್ತಿದ್ದರು. ಹೀಗಿರುವಾಗ ನಾನು ಚೌತಿ ಹಬ್ಬದಂದು ಚಂದ್ರನನ್ನು ನೋಡಿದ್ದರಿಂದಲೇ ಕಳ್ಳತನದ ಅಪವಾದ ನನ್ನ ಮೇಲೆ ಬಂದಿದೆ ಎಂದು ತೀರ್ಮಾನಿಸಿಬಿಟ್ಟೆ. 

ಈ ನಡುವೆ ಅಪ್ಪ ತಮ್ಮ ವಿಚಾರಣೆಯ ವೇಗವನ್ನು ವೃದ್ಧಿಸಿ ನಾನು ಕಂಪ್ಯೂಟರ್ ಕೋಚಿಂಗ್ ಗೆ ಹೋದ ದಿನಗಳನ್ನೂ ಮತ್ತು ಕಾಣೆಯಾದ ನೂರೈವತ್ತು ರೂಪಾಯಿಯನ್ನೂ ತಾಳೆ ಹಾಕಿ ಒಂದು ತೀರ್ಮಾನಕ್ಕೆ ಬಂದಿದ್ದರು. ಅದೇನೆಂದರೆ ಐಸ್ ಕ್ರೀಮ್ ಎಂದರೆ ಬಹಳ ಇಷ್ಟಪಡುತ್ತಿದ್ದ ನಾನು ಒಂದು ತಿಂಗಳಿಡೀ ದಿನಕ್ಕೆ ಐದು ರೂಪಾಯಿಯ ಐಸ್ ಕ್ರೀಮ್ ತಿಂದಿದ್ದರಿಂದ ಮೂವತ್ತು ದಿನಕ್ಕೆ ನೂರೈವತ್ತು ರೂಪಾಯಿ ಕಾಣೆಯಾಗಿದೆ. ಮತ್ತು ನಾನು ಮತ್ತು ನನ್ನ ಮಿತ್ರನನ್ನು ಕೋಚಿಂಗ್ ಸೆಂಟರ್ ಪಕ್ಕದಲ್ಲಿದ್ದ ಹೋಟೆಲ್ ಒಂದರಲ್ಲಿ ಯಾವಾಗಲೋ ನೋಡಿದ ಅಪ್ಪನ ಪರಿಚಯಸ್ಥರೊಬ್ಬರು ನನ್ನ ಬಗ್ಗೆ ಅಪ್ಪನ ಬಳಿ ಪಿಟ್ಟಿಂಗ್ ಇಟ್ಟು ನಿಮ್ಮ ಮಗ ಕೋಚಿಂಗ್ ಗೆ ಹೋದಾಗ ಪಕ್ಕದಲ್ಲಿರುವ ಹೋಟೆಲ್ ಗೂ ಹೋಗುತ್ತಾನೆ ಎಂದಿದ್ದರಂತೆ. "ಏನೋ ದಿನಾ ಹೋಟೆಲ್ ಗೆ ಹೋಗುತ್ತೀಯೇನೋ?" ಎಂದು ಕಣ್ಣು ದೊಡ್ಡದು ಮಾಡಿ ಅಪ್ಪ ಕೇಳಿದಾಗ ನಾನು ಹೌದು ಎಂದೆ.  ಮತ್ತೂ ಕೋಪಗೊಂಡು ಇಲ್ಲಿಯವರೆಗೂ ಏನೇನು ತಿಂದಿದ್ದೀಯೋ ಎಲ್ಲವನ್ನೂ ಹೇಳು" ಎಂದು ಅಬ್ಬರಿಸಿದರು. ನಾನು ಶಾಂತ ಚಿತ್ತನಾಗಿಯೇ "ಅಪ್ಪಾ ನಾವು ಹೋಟೆಲ್ ಗೆ ದಿನವೂ ಹೋಗುತ್ತಿದ್ದೆವು. ಆದರೆ ಏನೂ ತಿನ್ನುತ್ತಿರಲಿಲ್ಲ ಬದಲಿಗೆ ಬೇಸಿಗೆಯಿಂದ ಬಾಯಾರುತ್ತಿದ್ದ ನಾವು ದಿನವೂ ಹೋಗಿ ಹೋಟೆಲ್ ನಲ್ಲಿ ನೀರು ಕುಡಿದುಕೊಂಡು ಬರುತ್ತಿದ್ದೆವು. ಹಣ ಹೇಗೆ ಕಾಣೆಯಾಯಿತೋ ನನಗಂತೂ ಗೊತ್ತಿಲ್ಲ. ನಿಮ್ಮ ಶಕ್ತಿಗನುಗುಣವಾಗಿ ನಾನು ಕೇಳಿದ್ದೆಲ್ಲವನ್ನೂ ನೀವು ಕೊಡಿಸುತ್ತಿರುವಾಗ ನಾನೇಕೆ ನಮ್ಮ ಮನೆಯಲ್ಲಿ ನನ್ನ ಪರ್ಸ್ ನಿಂದಲೇ ಕದಿಯಲಿ"ಎಂದೆ. ಮತ್ತು ಚೌತಿಯಂದು ಚಂದ್ರನನ್ನು ನೋಡಿದ್ದನ್ನೂ ತಿಳಿಸಿದೆ. ಅಪ್ಪ ಇದನ್ನು ನಂಬಿದರೆಂದು ಕಾಣುತ್ತದೆ. ಹಾಗಾಗಿ ಪ್ರಾಯಶ್ಚಿತ್ತವಾಗಿ ದಿನವೂ ನಾನು ಒಂದು ಸಲ ಹೇಳುತ್ತಿದ್ದ ಗಣಪತಿ ಉಪನಿಷತ್ತನ್ನು ಎರಡು ಸಾರಿ ಹೇಳುವಂತೆ ಸೂಚಿಸಿದರು. ೧೦೮ ಗರಿಕೆಯನ್ನು ಕೊಯ್ದು ಅರ್ಪಿಸಲು ಹೇಳಿದರು. ನಾನು ಅಂತೆಯೇ ಮಾಡತೊಡಗಿದೆ. ನಂತರ ನಾವೆಲ್ಲರೂ ಆ ಪ್ರಕರಣವನ್ನು ಮರೆತುಬಿಡುವಷ್ಟರಲ್ಲಿದ್ದೆವು. 

ಆಗ ಪ್ರಕರಣದಲ್ಲಿ ದೊಡ್ಡದೊಂದು ಟ್ವಿಸ್ಟ್ ಕಂಡುಬಂತು. ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದವನೊಬ್ಬ ಚೌತಿ ಹಬ್ಬದ ಹಿಂದಿನ ದಿನ ನೂರೈವತ್ತು ರೂಪಾಯಿ ಸಾಲ ಕೇಳಿದ್ದನಂತೆ. ಹಬ್ಬದ ಸಿದ್ಧತೆಯ ಗಡಿಬಿಡಿಯಲ್ಲಿದ್ದ ಅಮ್ಮ ಅವಳ ಪರ್ಸ್ ಎಂದು ತಿಳಿದು ನನ್ನ ಪರ್ಸ್ ನಿಂದ ನೂರೈವತ್ತು ರೂಪಾಯಿ ತೆಗೆದು ಕೆಲಸದವನಿಗೆ ಕೊಟ್ಟಿದ್ದಳು. ಆತ ಹಬ್ಬ ಕಳೆದು ಹಲವು ದಿನಗಳಾದ ಮೇಲೆ ವಾಪಾಸ್ಸು ತಂದು ಕೊಟ್ಟ. ಅಮ್ಮ ಅದನ್ನು ತನ್ನ ಪರ್ಸ್ ನಲ್ಲಿ ಹಾಕಿಟ್ಟಳು. ಆದರೆ ಹಣ ಎಣಿಸುವಾಗ ಅವಳಿಗೆ ಅಚ್ಚರಿ ಕಾದಿತ್ತು. ಅಲ್ಲಿ ಮೊದಲಿದ್ದಕ್ಕಿಂತ ನೂರೈವತ್ತು ರೂಪಾಯಿ ಜಾಸ್ತಿ ಇತ್ತು. ನನ್ನ ಪರ್ಸ್ ನಲ್ಲಿ ಯಥಾ ಪ್ರಕಾರ ನೂರೈವತ್ತು ರೂಪಾಯಿ ಕಡಿಮೆ ಇತ್ತು. ಅವಳಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಪ್ರಮಾದದಿಂದಾಗಿ ನನ್ನನ್ನು ಕಳ್ಳನ ಸ್ಥಾನದಲ್ಲಿ ನಿಲ್ಲಿಸಿದಳಲ್ಲ ಎಂದು ನನಗೆ ಬೇಜಾರಾಗಿ ಹ್ಯಾಪು ಮೋರೆ ಹಾಕಿಕೊಂಡು ಕುಳಿತೆ. 

"ಯಾಕೋ ಪುಟ್ಟ ಬೇಜಾರಾಯಿತಾ. ನೀನು ಕದಿಯುವುದಿಲ್ಲ ಎಂದು ನಮಗೆ ಗೊತ್ತು. ನಾವು ನಿನಗೆ ಅಂಥ ಸಂಸ್ಕಾರವನ್ನು ಕಲಿಸಿಲ್ಲ. ಆದರೂ ನಮಗೆ ಹೇಳದೇ ತೆಗೆದುಕೊಂಡಿದ್ದೀಯೇನೋ ಎಂದು ತಿಳಿಯಲು ನಿನ್ನನ್ನು ಗದರಬೇಕಾಯಿತು. ಸಾರಿ ಕಣೋ, ತಪ್ಪೆಲ್ಲ ನಂದೇ. ನಾನೂ ಸಹ ಅಪ್ಪನ ಮತ್ತು ನನ್ನ ಪರ್ಸ ನಲ್ಲಿ ಹಣ ಎಣಿಸಿ ನೋಡಬೇಕಾಗಿತ್ತು. ಇನ್ನೆಂದೂ ಹೀಗೆ ಮಾಡೊದಿಲ್ಲ ನನ್ನ ಕಂದಾ. ಅಳಬೇಡ, ನೀನು ನನ್ನ ಮುದ್ದು ಬಂಗಾರ ಅಲ್ವಾ. ಇವತ್ತೇ ಪೇಟೆಗೆ ಕರೆದುಕೊಂಡು ಹೋಗಿ ನಿಂಗೆ ಬೇಕಾದ ಐಸ್ ಕ್ರೀಮ್ ಕೊಡಿಸಲು ಅಪ್ಪನಿಗೆ ಹೇಳುತ್ತೇನೆ. ಎಲ್ಲಿ ನಗು ನೋಡೋಣ, ಅಮ್ಮನ್ನ ಕ್ಷಮಿಸಿಬೀಡೊ ಪುಟ್ಟ"ಎಂದು ಕೆನ್ನೆ ಸವರುತ್ತ ಅಮ್ಮ ನನ್ನನ್ನು ಮುದ್ದು ಮಾಡಿದಳು. ನಾನೂ ಅಮ್ಮನ ಪ್ರೀತಿಗೆ ಕರಗಿ ಐಸ್ ಕ್ರೀಮ್ ಸಿಗುವ ಖುಷಿಯಲ್ಲಿ ಕುಣಿಯತೊಡಗಿದೆ. 

ಒಟ್ಟಿನಲ್ಲಿ ಪ್ರಕರಣ ಸುಖಾಂತ್ಯ ಕಂಡಿತು. ಚಂದ್ರನನ್ನು ಚೌತಿಯ ದಿನ ನೋಡಿದ್ದರಿಂದ ಆ ಅಪವಾದ ಬಂದಿತೋ ಅಥವಾ ಅಪ್ಪ-ಅಮ್ಮನ ಪ್ರಮಾದದಿಂದ ನಾನು ಅಪರಾಧಿಯಾದೆನೋ ನನಗಂತೂ ಗೊತ್ತಿಲ್ಲ. ಒಂದು ವೇಳೆ ಚಂದ್ರನನ್ನು ನೋಡಿದ್ದರಿಂದಲೇ ಅಪವಾದ ಬಂದರೆ ಆ ವಿನಾಯಕನಲ್ಲಿ ನನ್ನದೊಂದು ಪ್ರಾರ್ಥನೆ ಇದೆ. ಇನ್ನು ಮುಂದಾದರೂ ಚಂದ್ರನನ್ನು ಶಾಪವಿಮೋಚನೆಗೊಳಿಸಬೇಕು. ಹಾಗೆ ಮಾಡಲು ಸಾಧ್ಯವಾಗದ್ದಿದ್ದರೆ ಮಕ್ಕಳಿಗಾದರೂ ಆತನ ಶಾಪದಿಂದ ವಿನಾಯಿತಿ ನೀಡಬೇಕು. ಇಂದಿನ ಆಧುನಿಕ ಯುಗದಲ್ಲಿ ಇದನ್ನು ಅನೇಕರು ನಂಬುವುದಿಲ್ಲ ಎಂದು ಗೊತ್ತು. ಆದರೂ ಗಣೇಶನ ಕಥೆಯನ್ನು ಹೇಳುವಾಗೆಲ್ಲ ಚೌತಿ ಚಂದ್ರನನ್ನು ಮಿಸ್ ಮಾಡಲು ಸಾಧ್ಯವಿಲ್ಲ. 

ಕೊನೆಯ ಮಾತು: ಯಾವುದಕ್ಕೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ ಮಾರಾಯರೇ. ಕಲಿಯುಗದಲ್ಲಿ ಅನ್ಯಾಯ-ಅನಾಚಾರಗಳು ಜಾಸ್ತಿಯಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಗಣೇಶ ತನ್ನ ಶಾಪದ ಶಕ್ತಿಯನ್ನು ವೃದ್ಧಿಸುತ್ತಿದ್ದಾನೋ ಏನೋ ಯಾರಿಗೆ ಗೊತ್ತು. ಆದ್ದರಿಂದ ಗಣೇಶ ಚತುರ್ಥಿಯಂದು ರಾತ್ರಿ ಊರೂರು ಸುತ್ತಿ, ಉತ್ಸವದ ನೆಪದಲ್ಲಿ ಮೈಕ್ ಹಾಕಿ ಎಲ್ಲರಿಗೂ ಡಿಸ್ಟರ್ಬ್ ಮಾಡದೇ ಮನೆಯೊಳಗೇ ಇದ್ದು ಗಣೇಶನನ್ನು ಪೂಜಿಸೋಣ. ಆ ದಿನವಾದರೂ ಸ್ವಲ್ಪ ಒಳ್ಳೆಯ ಚಿಂತನೆ ಮಾಡೋಣ.  ವಿಘ್ನವಿನಾಶಕ ಗಣೇಶ ಲೋಕಕ್ಕೆ ಒಳಿತನ್ನು ಉಂಟುಮಾಡಲಿ. 

-ಲಕ್ಷ್ಮೀಶ ಜೆ. ಹೆಗಡೆ

*****
    

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Shrinivas Prabhu
9 years ago

ಕತೆ ಚೆನ್ನಾಗಿದೆ. ಚೌತಿಯ ಚಂದ್ರನ ನೋಡಿ ಅಪವಾದವೋ ಅಪವಾದವೇ ಚಂದ್ರನ ಮೇಲೋ ಅಥವಾ ಕಾಕತಾಳೀಯವೋ. ಚೆನ್ನಾಗಿ ನೀರೂಪಣೆಗೊಂಡಿದೆ. ಮುಂದೆಯೂ ಒಳ್ಳೆಯ ಕತೆಗಳು ಮೂಡಿ ಬರಲಿ.

1
0
Would love your thoughts, please comment.x
()
x