ತಿಮ್ಮನ ಹುಚ್ಚು!: ಮಂಜು ಹಿಚ್ಕಡ್


ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ ಹೊತ್ತು ಕಳೆದು, ಸೂರ್ಯ ನೆತ್ತಿಯನ್ನೇರಿದ್ದು, ಹೊಟ್ಟೆ ತಾಳ ಹಾಕುತ್ತಿದ್ದುದು ಅರಿಕೆಯಾಗಲಿಲ್ಲ. ಹೀಗೆ ಮಲಗಿದ್ದರೆ ರಾತ್ರಿಯಾಗುವವರೆಗೂ ಮಲಗಿರುತ್ತಿದ್ದನೇನೋ ಆದರೆ ಆ ಊರಿನ ಪಟೇಲ ಸುಬ್ರಾಯ ನಾಯ್ಕರು ಬಿಡಬೇಕಲ್ಲ.

ಸುಬ್ರಾಯ ನಾಯ್ಕರ ಮನೆಯ ಮುಂದಿನ ತೋಟದಲ್ಲಿದ್ದ ನಾಲ್ಕಾರು ತೆಂಗಿನ ಮರಗಳ ಕಾಯಿ ಬೆಳೆದು ನಿಂತಿದ್ದವು. ಒಂದೆರಡು ಮರದ ಕಾಯಿಗಳು ಆಗಲೇ ಬೀಳ ತೊಡಗಿದ್ದವು. ಒಂದೆರಡು ಮರದ ತೆಂಗಿನ ಹೆಡೆಗಳು ಕೂಡ ಒಣಗಿನಿಂತಿದ್ದವು. ಇನ್ನೆರಡು ವಾರದಲ್ಲಿ ಮಕ್ಕಳು, ಮೊಮ್ಮಕ್ಕಳು ಬೇಸಿಗೆ ರಜೆ ಕಳೆಯಲು ಊರಿಗೆ ಬರುವವರಿದ್ದರು. ಅವರು ಬರುವುದರೊಳಗೆ ಬೆಳೆದ ಕಾಯಿಗಳನ್ನು, ಒಣಗಿದ ಹೆಡೆಗಳನ್ನು ತೆಗೆಸಿ ಬಿಡಬೇಕೆಂದು ನಿಶ್ಚಯಿಸಿ ಸುಬ್ರಾಯ ನಾಯ್ಕರು ಮೂರ್ನಾಲ್ಕು ಬಾರಿ ತಿಮ್ಮನಿಗೆ ಹೇಳಿ ಕಳಿಸಿದ್ದರು. ಎರಡು ದಿನದ ಹಿಂದೆ ಅವರ ಮನೆಯವರೆಗೂ ಸ್ವತಃ ಅವರೇ ಹೋಗಿ ತಿಮ್ಮನ ತಾಯಿಯಲ್ಲಿ, "ನಿನ್ನ ಮಗ ಬಂದರೆ, ಮನೆಯ ಹತ್ತಿರ ಕಳಿಸಿಕೊಡು" ಎಂದು ಕೂಡ ಹೇಳಿ ಬಂದಿದ್ದರು. ಒಂದು ವಾರದಿಂದ ತಿಮ್ಮನಿಗಾಗಿ ಪ್ರಯತ್ನಿಸುತ್ತಿದ್ದರೂ ತಿಮ್ಮ ಮಾತ್ರ ಕೈಗೆ ಸಿಗುತ್ತಿರಲಿಲ್ಲ. ಈ ಯಕ್ಷಗಾನದ ಸಮಯದಲ್ಲಿ ತಿಮ್ಮನನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಯಾವಾಗ, ಯಾವ ಊರಿನಲ್ಲಿ, ಏನು ಮಾಡುತ್ತಿರುತ್ತಾನೇ ಎನ್ನುವುದೇ ತಿಳಿಯುವುದಿಲ್ಲ. ಎಲ್ಲಿ ಯಕ್ಷಗಾನವಿರತ್ತದೋ ಆ ಊರಿನಲ್ಲಿ ತಿಮ್ಮನಿರುತ್ತಾನೆ ಎನ್ನುವುದು ಈಗೀಗ ಎಲ್ಲರಿಗೂ ಕಂಡು ತಿಳಿದ ವಿಷಯ. ಈ ವಿಷಯ ಸುಬ್ರಾಯ ನಾಯ್ಕರಿಗೂ ಕೂಡ ತಿಳಿದು ಹೋಗಿತ್ತು. ಹಾಗಾಗಿಯೇ ತಿಮ್ಮನನ್ನು ಹುಡುಕಿ ಅಲ್ಲಿಯವರೆಗೆ ಬಂದಿದ್ದು.

ತಿಮ್ಮನಿಗೆ ಇರೋದು ಎರಡೇ ಎರಡು ಹವ್ಯಾಸ. ಒಂದು ತೆಂಗಿನ ಮರ ಹತ್ತುವುದು, ಇನ್ನೊಂದು ಯಕ್ಷಗಾನ ನೋಡುವುದು. ಅದನ್ನು ತಿಮ್ಮನ ವಿಷಯದಲ್ಲಿ ಹವ್ಯಾಸ ಅನ್ನುವುದಕ್ಕಿಂತ ಉದ್ಯೋಗ ಎನ್ನುವುದೇ ವಾಸಿ. ಯಾಕಂದರೆ ಅವೆರಡನ್ನು ಬಿಟ್ಟು ತಿಮ್ಮ ಮತ್ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಅದರಲ್ಲೂ ಯಕ್ಷಗಾನ ಅಂದರೆ ಮುಗಿದೇ ಹೋಯ್ತು ಅದನ್ನು ಎಲ್ಲಿಯೂ ಬಿಡುತ್ತಿರಲಿಲ್ಲ. ಮೊದ ಮೊದಲು ಯಕ್ಷಗಾನ ನೋಡಲು ಹೋದವನು ವೇದಿಕೆಯ ಮುಂಬಾಗದಲ್ಲಿ ಕುಳಿತು ಯಕ್ಷಗಾನ ನೋಡುತಿದ್ದ. ಕ್ರಮೇಣ ಕಾಲ ಕಳೆಯುತ್ತಾ ಹೋದಂತೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಕಲಾವಿದರನ್ನು ಪರಿಚಯ ಮಾಡಿಕೊಂಡ. ಹಾಗೆ ಪರಿಚಯವಾದವರಿಂದ ಮುಂದಿನ ಯಕ್ಷಗಾನ ಮತ್ತು ಅಲ್ಲಿ ನಡೆಯುವ ಪ್ರಸಂಗವನ್ನು ತಿಳಿದುಕೊಂಡು ಅಲ್ಲಿಗೂ ಹೋಗುತ್ತಿದ್ದ. ಮುಂದೆ ಕೆಲವು ದಿನಗಳ ನಂತರ ಆತ ವೇದಿಕೆಯ ಮುಂಬಾಗದಲ್ಲಿ ಕುಳಿತು ಕೊಳ್ಳುವುದನ್ನು ಬಿಟ್ಟು ಬಿಟ್ಟು, ವೇದಿಕೆಯ ಮೇಲಿನ ಹಿಮ್ಮೇಳದವರೊಂದಿಗೆ ಹೋಗಿ ಕುಳಿತುಕೊಳ್ಳಲು ಪ್ರಾರಂಬಿಸಿದ. ಒಂದೆರಡು ಬಾರಿ ಸುಮ್ಮನೆ ಹಿಂದೆ ಕುಳಿತ ಅವನಿಗೆ ಭಾಗವತರು ಸುಮ್ಮನೆ ಕುಳ್ಳುವ ಬದಲು ಕೈಗೆ ಪೇನು ಪೆಟ್ಟಿಗೆ ಕೊಟ್ಟು ಕುಳ್ಳಿಸಿದರು. ಈಗೀಗಂತೂ ಅವನಿಗೆ ಅದೇ ಕೆಲಸ. ಯಕ್ಷಗಾನಕ್ಕೆ ಹೋಗುವುದು, ಅಲ್ಲಿ ಹಿಮ್ಮೇಳದವರಂತೆ ಬಿಳಿಯ ಅಂಗಿ, ಬಿಳಿಯ ಪಂಚೆ, ತಲೆಗೆ ಕೇಸರಿಯ ರುಮಾಲು ಸುತ್ತಿ ಪೇನು ಪೆಟ್ಟಿಗೆ ಹಿಡಿದು ಕುಳಿತು ಕೊಳ್ಳುವುದು. ಇದು ಅವನ ಉಚಿತ ಸೇವೆಯೂ ಕೂಡ. ಆ ಕೆಲಸಕ್ಕಾಗಿ ಆತ ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲ.

ರಾತ್ರಿ ಪೂರ್ತಿ ಯಕ್ಷಗಾನದಲ್ಲಿ ಪೇನು ಪೆಟ್ಟಿಗೆ ನುಡಿಸಿ, ಆ ಊರಲ್ಲೇ ಎಚ್ಚರವಾಗುವವರೆಗೆ ಮಲಗಿ. ಎದ್ದ ಮೇಲೆ ಆ ಊರಲ್ಲಿ ಯಾರಾದರೂ ಕೇಳಿದರೆ ಅವರ ಮನೆಯ ತೆಂಗಿನ ಮರ ಹತ್ತಿ ಮರದಿಂದ ಕಾಯಿ ತೆಗೆದುಕೊಟ್ಟು, ಸಾದ್ಯವಾದರೆ ಮರ ಹತ್ತಿದವರ ಮನೆಯಲ್ಲೇ ಊಟ ತಿಂಡಿ ಮುಗಿಸಿ, ಅವರು ಕೊಟ್ಟ ಹಣವನ್ನು ಜೇಬಿಗೆ ತುರುಕಿ ಮುಂದಿನ ಊರಿಗೆ ಹೊರಡುತ್ತಿದ್ದ. ಮತ್ತೆ ಆ ಊರಿನಲ್ಲಿ ನಡೆಯಲಿರುವ ಯಕ್ಷಗಾನ ನೋಡಲು. ಹಾಗೆ ಊರಿಂದ ಊರಿಗೆ ಹೋಗುವಾಗ ನಿದ್ದೆ ಆದರೆ ಆಯಿತು, ಇಲ್ಲ ಅಂದರೆ ಇಲ್ಲ. ಒಮ್ಮೊಮ್ಮೆ ನಿದ್ದೆ ಆವರಿಸಿದಾಗ ಎಲ್ಲಿ ಜಾಗ ಸಿಗತ್ತೋ ಅಲ್ಲಿ ಮಲಗಿ ಬಿಡುತ್ತಿದ್ದ. ಅದು ಮರದ ಬುಡವಿರಬಹುದು, ಬಸ್ ನಿಲ್ದಾಣವಿರಬಹುದು ಅಥವಾ ಯಾವುದೋ ಶಾಲೆಯ ಆವರಣವಿರಬಹುದು, ಇಲ್ಲಾ ಯಕ್ಷಗಾನ ಬಯಲಾಟ ನಡೆದ ಸ್ಥಳದ ಸಮೀಪವೇ ನೆರಳಿರುವ ಇನ್ನಾವುದೇ ಸ್ಥಳವಿರಬಹುದು. ಆ ಸಮಯದಲ್ಲಿ ಅವನಿಗೆ ಸ್ಥಳ ಮುಖ್ಯವಲ್ಲ, ನಿದ್ದೆ ಮುಖ್ಯ. ಯಾರಾದರೂ ಮರ ಹತ್ತಲು ಹೇಳುವವರನ್ನು ಬಿಟ್ಟರೆ ಬೇರ್ಯಾರು ತಿಮ್ಮನನ್ನು ನಿದ್ದೆಯಿಂದ ಎಬ್ಬಿಸುವವರು ಇರಲಿಲ್ಲ. ಅದು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ. ಹಾಗೆ ಬಂದವರಲ್ಲಿ ಇಂದು ಬಂದ ಸುಬ್ರಾಯ ನಾಯ್ಕರು ಒಬ್ಬರು ಕೂಡ. ಬಹುಷಃ ಮರ ಹತ್ತುವ ಕೆಲಸವಿಲ್ಲದಿದ್ದರೆ ಅವರು ಕೂಡ ಅಲ್ಲಿಗೆ ಬರುತ್ತಿರಲಿಲ್ಲವೇನೋ?

ಸುಬ್ರಾಯ ನಾಯ್ಕರು ಬಂದು "ಏ ತಿಮ್ಮಾ, ಏಳೋ. ಎಷ್ಟು ಹೊತ್ತು ಅಂತ ಮಲಗರ್ತಿಯಾ ಏಳೋ" ಎಂದು ಕೂಗಿದಾಗ, ನಿದ್ದೆಯ ಗುಂಗಿನಲ್ಲಿದ್ದ ತಿಮ್ಮನಿಗೆ ನಿನ್ನೆಯ ಗದಾಯುದ್ಧ ಪ್ರಸಂಗದಲ್ಲಿ, ಕೌರವ ವೈಸಂಪಾಯನ ಕೆರೆಯಲ್ಲಿ ಮುಳುಗಿದ್ದಾಗ, ಭೀಮ ಕೌರವನನ್ನು ಹೀಯಾಳಿಸುತ್ತಾ "ಎಲವೋ ದುರ್ಯೋಧನ ಏಳೋ" ಎಂದು ಕೂಗಿ ಕರೆದಂತೆನಿಸಿತು. ಒಮ್ಮೆ "ಹೂಂ" ಎಂದು ಮತ್ತೆ ನಿದ್ದೆಗೆ ಜಾರಿದ ತಿಮ್ಮ.

"ಏನೋ ತಿಮ್ಮಾ ಇನ್ನೂ ಮಲಗೇ ಇದ್ದಿಯಾ ಮದ್ಯಾಹ್ನ ಆಯ್ತಲ್ಲೋ, ಏಳೋ" ಎಂದು ಮತ್ತೊಮ್ಮೆ ನಾಯ್ಕರು ಕೂಗಿದಾಗ ತಿಮ್ಮನಿಗೆ ಯಾರೋ ತನ್ನನ್ನು ಕರೆಯುತ್ತಿದ್ದಾರೆ ಎಂದನಿಸಿ, ಎದ್ದು ನೋಡಿದ. ಎದುರಿಗೆ ಸುಬ್ರಾಯ ನಾಯ್ಕರು ನಿಂತಿದ್ದನ್ನು ನೋಡಿ ಗಡಿಬಿಡಿಯಿಂದ ಎದ್ದು "ನಮಸ್ಕಾರ ನಾಯ್ಕರೇ" ಎಂದ.

"ಏನಪ್ಪಾ, ತಿಮ್ಮ ಮಧ್ಯಾಹ್ನ ಆಯ್ತಲ್ಲೋ, ಇನ್ನೂ ಮಲಗೇ ಇದ್ದಿಯಾ, ನಿನಗಾಗಿ ಎಷ್ಟು ಸಾರಿ ಹೇಳಿ ಕಳಿಸಿದೆ ಗೊತ್ತಾ, ನೀನು ನೋಡಿದ್ರೆ ಸಿಗೋದೇ ಇಲ್ಲಾ ಅಂತಿಯಾ"

"ಹೌದಾ ನಾಯ್ಕರೇ? ಏನಾಗ್ಬೇಕಿತ್ತು, ಏನಾದ್ರೂ ಮರ ಹತ್ತೋ ಕೆಲಸ ಇತ್ತೇ?" ಎಂದು ಕೇಳಿದ ತಿಮ್ಮ. ತಿಮ್ಮನಿಗೆ ಗೊತ್ತಿಲ್ಲವೇ ಅವನನ್ನು ಕರೆಯಲು ಬರುವವರೆಲ್ಲ ಆ ಕೆಲಸಕ್ಕೆ ತನ್ನನ್ನು ಕರೆಯುವುದೆಂದು.

"ಹೌದೋ ಮಾರಾಯ, ಐದಾರು ಮರಕ್ಕೆ ಕಾಯಿ ಒಣಗಿ ಹೋಗಿದೆ, ಸ್ವಲ್ಪ ಬಂದು ಕಾಯಿ ಕೊಯ್ದು ಕೊಟ್ಟು ಹೋದರೆ ನಿನ್ನಿಂದ ಉಪಯೋಗವಾಗುತ್ತದೆ" ಎಂದರು ನಾಯ್ಕರು.

"ಆಯ್ತ್ರಾ ನಾಯ್ಕರೆ, ನಡಿರಿ ಹಂಗಾರೆ" ಎಂದು ಸುಬ್ರಾಯ ನಾಯ್ಕರನ್ನು ಹಿಂಬಾಲಿಸಿದ ತಿಮ್ಮ. ಗಂಟೆ ಆಗಲೇ ಹನ್ನೆರಡು ದಾಟಿ ಒಂದರ ಸಮೀಪ ಬಂದಿತ್ತು. ಬೆಳಿಗ್ಗೆಯಿಂದ ಏನು ತಿನ್ನದ ತಿಮ್ಮನಿಗೆ ಹಸಿವೆಯಾದಂತೆ ಅನ್ನಿಸಿತು. ಹೇಗೂ ಇವತ್ತಿನ ಊಟ ಸುಬ್ರಾಯ ನಾಯ್ಕರ ಮನೆಯಲ್ಲೇ ಎಂದನಿಸಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು.

ಸುಬ್ರಾಯ ನಾಯ್ಕರ ಮನೆಗೆ ಬಂದು ಒಂದೆರಡು ಮರ ಹತ್ತಿ ಕಾಯಿ ಇಳಿಸುವ ಹೊತ್ತಿಗೆ ಗಂಟೆ ಎರಡು ದಾಟಿ ಹೋಗಿತ್ತು. ಆಗಲೇ ಸುಬ್ರಾಯ ನಾಯ್ಕರ ಹೆಂಡತಿ ಪಾರ್ವತಿ, ಸುಬ್ರಾಯ ನಾಯ್ಕರನ್ನು ಊಟಕ್ಕೆ ಕರೆದು ಹೋಗಿದ್ದರೂ. ಸುಬ್ರಾಯ ನಾಯ್ಕರಿಗೂ ಹಸಿವೆ ಆದಂತೆ ಎನಿಸಿ ಮನೆಯತ್ತ ಹೆಜ್ಜೆ ಹಾಕುತ್ತಾ, "ಏ ತಿಮ್ಮಾ ಬಾರೋ, ಊಟ ಮಾಡಿ ಆಮೇಲೆ ಮತ್ತೆ ಮರ ಹತ್ತುವೆಯಂತೆ, ಹೋಗಿ ಕೈಕಾಲು ತೊಳೆದುಕೊಂಡು ಬಾ" ಎಂದು ತಿಮ್ಮನ್ನನ್ನು ಊಟಕ್ಕೆ ಆಹ್ವಾನಿಸಿದರು.

ತಿಮ್ಮನಿಗೆ ಬೇಕಾಗಿದ್ದೂ ಅದೇ. ಸುಬ್ರಾಯ ನಾಯ್ಕರ ಹೆಂಡತಿ ನಾಯ್ಕರಿಗೆ ಒಳಗೆ ಬಡಿಸಿದರೆ, ತಿಮ್ಮನಿಗೆ ಹೊರಗೆ ಬಾಳೆ ಎಲೆ ಇಟ್ಟು ಬಡಿಸಿದಳು. ತಿಮ್ಮ ಸಾಕು ಸಾಕು ಎನ್ನುತ್ತಲೇ ಮೂರ್ನಾಲ್ಕು ಬಾರಿ ಅನ್ನ ಹಾಕಿಸಿಕೊಂಡು ಉಂಡ. ಹೊಟ್ಟೆ ಈಗ ಸ್ವಲ್ಪ ತಣ್ಣಗೆನಿಸಿತು. ನೀರು ಕುಡಿದು ಉಂಡ ಎಲೆ ಎತ್ತಿ ತೋಟದ ಮೂಲೆಗೆ ಎಸೆದು ಬಂದ. ಕೈ ತೊಳೆದು ಬಂದು ಜಗುಲಿಯ ಮೇಲೆ ಕುಳಿತು ಕಿಸೆಯಿಂದ ಬೀಡಿ ತೆಗೆದು ಬಾಯಿಗೆ ತುರಿಕಿದ. ಅದರ ಮುಂದಿನ ತುದಿಗೆ ಬೆಂಕಿ ಹಚ್ಚಿ, ತುದಿ ಸಂಪೂರ್ಣ ಕೆಂಪಗಾಗಿದೆ ಎಂದ ಮೇಲೆ ಇನ್ನೂ ಉರಿಯುತ್ತಿದ್ದ ಬೆಂಕಿ ಕಡ್ಡಿಯನ್ನು ಹೊರಗೆಸೆದು, ಬೀಡಿ ಎಳೆಯುತ್ತಾ ಕುಳಿತ. ಸುಬ್ರಾಯ ನಾಯ್ಕರು ಆಗಲೇ ಊಟ ಮುಗಿಸಿ ತಾಂಬೂಲ ಹಾಕಿ ಅದರ ಸ್ವಾದವನ್ನು ಸವಿಯುತ್ತಾ ಆರಾಂ ಕುರ್ಚಿಯ ಮೇಲೆ ಕುಳಿತಿದ್ದರು. ಹೊರಗೆ ಜಗುಲಿಯ ಮೇಲೆ ಬೀಡಿ ಎಳೆಯುತ್ತಾ ಕುಳಿತ ತಿಮ್ಮನನ್ನು, "ಏನ್ ತಿಮ್ಮಾ, ಈ ವರ್ಷನಾದ್ರೂ ಮದುವೆ ಪಾಯಸ ಇದಯಾ ಹೇಗೆ?" ಎಂದು ಕೇಳಿದರು.

"ನೋಡ್ಬೇಕು ನಾಯ್ಕರೆ, ಎಲ್ಲಾದ್ರೂ ಹೊಂದಿಕೆಯಾದ್ರೆ ಈ ಮಳೆಗಾಲದಲ್ಲಿ ನೋಡ್ಬೇಕು" ಎಂದ ತಿಮ್ಮ.

"ಯಾಕೋ ನಿನಗೆ ಮದುವೆಯಾಗಲು ಮಳೆಗಾಲನೇ ಬೇಕೇನೋ" ಎಂದು ನಗುತ್ತಾ ಕೇಳಿದರು ನಾಯ್ಕರು.

"ಹಂಗಲ್ರಾ ನಾಯ್ಕರೇ, ಉಳಿದ ಟೈಮಲ್ಲಿ ನನಗೆ ಬಿಡುವೆಲ್ಲಿರತ್ತೆ ಹೇಳಿ. ಮಳೆಗಾಲ ಯಾಕಂದ್ರೆ ಆ ಟೈಮಲ್ಲಿ ಯಕ್ಷಗಾನನೂ ಇರಲ್ಲ, ಮರ ಹತ್ತಕ್ಕೂ ಆಗಲ್ಲ. ಅದಕ್ಕೆ ಆ ಟೈಮಲ್ಲೇ ನಾನು ಸ್ವಲ್ಪ ಆರಾಂ ಆಗಿ ಇರೋದಲ್ವೇ" ಎಂದು ತಿಮ್ಮ ಹೇಳಿದಾಗ ಸುಬ್ರಾಯ ನಾಯ್ಕರಿಗೆ ನಗೆ ತಡೆದು ಕೊಳ್ಳಲು ಆಗದೇ "ಆಯ್ತಪ್ಪಾ ನಿಂಗೆ ಯಕ್ಷಗಾನ ಇದ್ರೆ ಮದುವೆನು ಬೇಡ, ಹೆಂಡತಿನು ಬೇಡ." ಎಂದು ಹೇಳಿ ನಕ್ಕರು.

ಅವರ ಮಾತಿನ ನಡುವೆಯೇ ಪಾರ್ವತಿ ಊಟ ಮುಗಿಸಿ, ಚಹಾ ಮಾಡಿ ಇಬ್ಬರಿಗೂ ತಂದಿಟ್ಟಳು. ಚಹಾ ಕುಡಿದು, ಇನ್ನೊಂದು ಬೀಡಿ ಹೊತ್ತಿಸಿ ಎಳೆದು, "ನಾಯ್ಕರೆ ನಂಗೆ ಆಮೇಲೆ ಲೇಟಾಗುತ್ತೆ ಮರ ಹತ್ತತಿನಿ ಆಯ್ತಾ" ಎನ್ನುತ್ತಾ ಅವರ ಉತ್ತರಕ್ಕೂ ಕಾಯದೇ ಮತ್ತೆ ಮರ ಹತ್ತಲು ಅಣಿಯಾದ. ಉಳಿದ ಮರಗಳನ್ನು ಹತ್ತಿ ಕಾಯಿ, ಒಣಗಿದ ಹೆಡೆ ಕೀಳುವುದರೊಳಗೆ ಸಂಜೆಯ ಭಾನು ಕೆಂಪಾಯಿತು. ಬೇಗ ಬೇಗ ಮರದಿಂದ ಕಿತ್ತ ಕಾಯಿಗಳಲ್ಲೆವನ್ನು ಕೊಟ್ಟಿಗೆಯ ಮೇಲಿನ ಅಟ್ಟಕ್ಕೆ ಸಾಗಿಸಿ, ಮತ್ತೆ ಮನೆಯ ಎದುರಿಗೆ ಬಂದು "ನಾಯ್ಕರೇ ನಾನು ಬರ್ತಿನಿ ಆಯ್ತಾ" ಎಂದ.

"ಎಲ್ಲಿಗೋ ಮಾರಾಯಾ, ನಿಲ್ಲೋ ಬರ್ತಿನಿ." ಎಂದು ಹೇಳುತ್ತಾ ನಾಯ್ಕರು ಕೊಟ್ಟಿಗೆಗೆ ಹೋಗಿ ಕೈಯಲ್ಲಿ ಏಳೆಂಟು ತೆಂಗಿನ ಕಾಯಿ ಹಿಡಿದು ಹೊರಗೆ ಬಂದರು. ನಾಯ್ಕರ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ನೋಡಿದ ತಿಮ್ಮ,  "ನಾಯ್ಕರೇ ನನಗೆ ಕಾಯಿ ಬೇಡ, ನಾನು ಈಗ ಹನುಮಟ್ಟಾಗೆ ಯಕ್ಷಗಾನಕ್ಕೆ ಹೋಗ್ಬೇಕು. ಈ ಕಾಯಿ ತೆಗೆದುಕೊಂಡು ಅಲ್ಲಿಗೆ ಹೋಗಿ ಏನು ಮಾಡಲಿ, ಕೊಡೋದಿದ್ರೆ ರೊಕ್ಕನೇ ಕೊಡಿ" ಎಂದ ತಿಮ್ಮ.

"ಹೋ ಹೌದೆ, ಆಯ್ತ ಹಂಗಾರೆ ಬಂದೆ ನಿಲ್ಲು" ಎಂದು ಹೇಳಿ ತಾವು ತಂದ ತೆಂಗಿನ ಕಾಯಿಗಳನ್ನು ಅಲ್ಲಿಯೇ ಜಗುಲಿಯ ಮೇಲಿಟ್ಟು, ಒಳಗೆ ಹೋಗಿ ಅಂಗಿಯ ಕಿಸೆಯಿಂದ ಹತ್ತರ ಎಂಟ ಹತ್ತು ನೋಟುಗಳನ್ನು ತಂದು ತಿಮ್ಮನ ಕೈಗಿತ್ತರು.

ಅದಕ್ಕಾಗಿಯೇ ಇಷ್ಟೊತ್ತು ನಿಂತ ತಿಮ್ಮ, ರೊಕ್ಕ ಕೈಗೆ ಬರುತ್ತಿದ್ದಂತೆಯೇ, "ನಾಯ್ಕರೇ ಬರ್ತಿನಿ ಆಗಾ" ಎಂದು ನಾಯ್ಕರ ಉತ್ತರಕ್ಕೂ ಕಾಯದೇ ಹನುಮಟ್ಟಾದತ್ತ ಹೊರಟ. ಅಲ್ಲಿ ಅಂದು ನಡೆಯಲಿರುವ "ಬಸ್ಮಾಸುರ ಮೋಹಿನಿ" ಎನ್ನುವ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಕುಳಿತು ಪೇನು ಪೆಟ್ಟಿಗೆ (ಹಾರ್ಮೋನಿಯಂ) ನುಡಿಸಲು. 

–ಮಂಜು ಹಿಚ್ಕಡ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
shridhar
shridhar
9 years ago

kathe chennagide.timmanantaha halavu jana e bhagadalli siguttare.

 

Manjunath
9 years ago
Reply to  shridhar

Dhanyavadagalu…

Krupal
Krupal
9 years ago

ಸಾರ್, ತು೦ಬಾ ಚೆನ್ನಾಗಿದೆ. ಮಲ್ಲಿಕ್ ಇನ್ದ ಈ ಬಗ್ಗೆ ಗೊತ್ತಾಯಿತು.ಕಥೆ ಬರೆದಾಗಲೆಲ್ಲ ನಮಗು ಪತ್ರ ಹಾಕಿ.
–Krupal

Manjunath
9 years ago
Reply to  Krupal

ಧನ್ಯವಾದಗಳು ಕ್ರಪಾಲ್ ಸರ್. ಖಂಡಿತ ಕಳಿಸುತ್ತೇನೆ.

Akhilesh Chipli
Akhilesh Chipli
9 years ago

ಕತೆ ಚೆನ್ನಾಗಿದೆ.
ಧನ್ಯವಾದಗಳು ಮಂಜುರವರೆ.

Manjunath
9 years ago

ಧನ್ಯವಾದಗಳು ಸರ್. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.

6
0
Would love your thoughts, please comment.x
()
x