ಪಂಚಮಹಾಸಾಗರದ ಐದು ಕೊಳೆಗುಂಡಿಗಳು: ಅಖಿಲೇಶ್ ಚಿಪ್ಪಳಿ ಅಂಕಣ

(ಭೂಮಂಡಲದ ಶೇ ೭೦ ಭಾಗ ನೀರಿನಿಂದ ಸುತ್ತುವರೆದಿದೆಯಾದ್ದರಿಂದ ಅಷ್ಟೂ ನೀರನ್ನೂ ಸೇರಿಸಿ ಒಂದೇ ಮಹಾಸಾಗರ ಎನ್ನಬಹುದು. ಆದರೂ ದೇಶಗಳು ತಮ್ಮ ಗಡಿಗಳಿಗೆ ಅನುಸಾರವಾಗಿ ೫ ಮಹಾಸಾಗರಗಳನ್ನು ಗುರುತಿಸಿಕೊಂಡಿದ್ದಾರೆ. ೧. ಪೆಸಿಫಿಕ್ ಮಹಾಸಾಗರ ೨. ಅಟ್ಲಾಂಟಿಕ್ ಮಹಾಸಾಗರ ೩. ಹಿಂದೂ ಮಹಾಸಾಗರ ೪. ಅಂಟಾರ್ಟಿಕ್ ಮಹಾಸಾಗರ ಮತ್ತು ಆರ್ಕ್‌ಟಿಕ್ ಮಹಾಸಾಗರ)

ಮೊನ್ನೆ ಸೋಮವಾರ ಅಂದರೆ ದಿನಾಂಕ:೨೧/೦೭/೨೦೧೪ರ ಬೆಳಗ್ಗೆ ತೋಟದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುವಾಗ ಅಪ್ಪಟ ಭೂಮಿಪುತ್ರನ ಜಂಗಮವಾಣಿಯಿಂದ ಕರೆ ಬಂತು ಎಂದು ಮನೆಯಿಂದ ಕೂಗಿದರು. ಈ ಭೂಮಿಪುತ್ರನ ದೂರವಾಣಿ ಕರೆ ಬಂತು ಎಂದರೆ ಈ ಭೂಮಿಯ ಮೇಲಿನ ಮರಕ್ಕೋ ಅಥವಾ ಪ್ರಾಣಿಗೋ ಎನೋ ತೊಂದರೆಯಾಗಿದೆ ಎಂದು ಅರ್ಥ. ತುರ್ತಾಗಿ ಮನೆ ಹತ್ತಿರ ಬರುವಂತೆ ಸೂಚಿಸಿದ್ದರು. ನಮ್ಮ ಮನೆಗೂ ಈ ಭೂಮಿಪುತ್ರರ ಮನೆಗೂ ಸರಿಸುಮಾರು ೨ ಕಿ.ಮಿ. ದೂರವಿದೆ. ಸರಿ ಎಂದು ಕರೆಯನ್ನು ನಿರ್ಲಕ್ಷಿಸದೆ ಹೊರಟಾಯಿತು. ತಮ್ಮ ಮನೆಯ ಸಮೀಪವಿರುವ ಚಿಕ್ಕ ಮತ್ತು ಚೊಕ್ಕದಾದ ಕೆರೆಯ ಹತ್ತಿರ ನಿಂತು ನನಗಾಗಿ ಕಾಯುತ್ತಿದ್ದರು. ವಿಷಯ ಏನೆಂದರೆ, ಆ ಕೆರೆಯಲ್ಲಿ ಜಲಾನಯನ ಇಲಾಖೆಯಿಂದ ಕೊಡಮಾಡಿದ ಮೀನು ಮರಿಗಳನ್ನು ಬಿಟ್ಟಿದ್ದರು. ಈ ತಿಂಗಳಲ್ಲಿ ಅಷ್ಟು-ಇಷ್ಟು ಮಳೆಯಾಗುತ್ತಿದೆ. ಮೀನು ಮರಿಗಳು ದೊಡ್ಡದಾಗಿ ನೀರಿನಿಂದ ಹಾರಿ ಚಿಕ್ಕ ಹೊಳೆ ಸೇರಿ ತೇಲಿ ಹೋಗಿ ಕೆಳಗಿನ ಕೆರೆಯನ್ನೋ ಅಥವಾ ಇನ್ನೆಲ್ಲೋ ಸೇರುತ್ತವೆ. ಮೀನು ಮರಿ ಬಿಟ್ಟ ಮನುಷ್ಯ ಇದಕ್ಕೊಂದು ಉಪಾಯ ಮಾಡಿದ್ದ. ಅದೇನೆಂದರೆ, ನೈಲಾನ್ ಬಲೆಯನ್ನು ಆ ಚಿಕ್ಕ ಕೆರೆಯ ದಡದುದ್ದಕ್ಕೂ ಕಟ್ಟಿ ನಿಲ್ಲಿಸಿದ್ದ. ಮೀನನ್ನೋ, ಕಪ್ಪೆಯನ್ನೋ ತಿನ್ನಲು ಬಂದ ಹಾವೊಂದು ಅದರಲ್ಲಿ ಸಿಕ್ಕಿ ಹಾಕಿಕೊಂಡಿತ್ತು.  ತಲೆಯಿಂದ ಹಿಡಿದು ಬಾಲದವರೆಗೂ ಈ ನೈಲಾನ್ ಬಲೆ ಸಿಕ್ಕು-ಸಿಕ್ಕಾಗಿ ಹಾವಿಗೆ ಸುತ್ತಿಕೊಂಡಿತ್ತು. ಯಾವುದೇ ಕಾರಣಕ್ಕೂ ಬಿಡಿಸಿಕೊಂಡು ಹೋಗಲು ಸಾಧ್ಯವಿಲ್ಲ ಹಾಗೆ. ಬಣ್ಣದಲ್ಲಿ ನಾಗರ ಹಾವನ್ನು ಹೋಲುತ್ತಿದ್ದ ಹಾವನ್ನು ಹಾಗೆಯೇ ಸಾಯಲು ಬಿಟ್ಟು ಹೋಗುವಂತಿಲ್ಲ. ಈ ಕಡೆಯ ಜನರು ನಾಗರ ಹಾವನ್ನು ಬಡಿದು ಕೊಲ್ಲುವುದು ಕಡಿಮೆ. ನಾಗರ ಹಾವು ಅಥವಾ ಸರ್ಪ ಎಂದು ಕರೆಯಲಾಗುವ ಈ ಹಾವಿಗೆ ದೈವತ್ವವನ್ನು ಆರೋಪಿಸಿದ್ದಾರೆ, ಹಾಗಾಗಿ ದೈವದ ಹಾವು ಎಂದು ಯಾರೂ ನಾಗರ ಹಾವನ್ನು ಬಡಿದು ಸಾಯಿಸುವುದಿಲ್ಲ. ಇತರೆ ಹಾವುಗಳನ್ನು ಎಗ್ಗಿಲ್ಲದೆ ಹೊಡೆದು ಬಿಸಾಡಿ, ಕೆಲವರಿಂದ ಹೀರೋ ಎನಿಸಿಕೊಳ್ಳುವವರಿಗೇನು ಕಡಿಮೆಯಿಲ್ಲ. ನಾನು ಹೋಗಿ ನೋಡುವ ಹೊತ್ತಿಗೆ ಹಾವಿನ ಸ್ಥಿತಿ ಚಿಂತಾಜನಕವಾಗಿತ್ತು.

ಈ ಭೂಮಿ ಸೃಷ್ಟಿಯಾಗಿ ೪೬೦ ಕೋಟಿ ವರ್ಷಗಳಾಗಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಈ ಭೂಮಿ ಸೃಷ್ಟಿಯಾದ ಮೇಲೆ ಅನೇಕ ವಿಪ್ಲವಗಳು ಸಂಭವಿಸಿವೆ. ಅದೆಷ್ಟೋ ಮಳೆ-ಚಳಿ-ಬಿಸಿಲುಗಳ ಕಾಲವನ್ನು ಈ ಭೂಮಿ ಕಂಡಿದೆ. ಕಾಲ-ಕಾಲಕ್ಕೆ ಅಷ್ಟಿಷ್ಟು ಪ್ರಭೇದಗಳು ಹುಟ್ಟಿವೆ. ಹಲವಷ್ಟು ಪ್ರಬೇಧಗಳು ಅಳಿದಿವೆ. ನೈಸರ್ಗಿಕ ಪ್ರಕೋಪ-ವಿಕೋಪಗಳಿಂದಾಗಿ ಇಡೀ ಭೂಮಿ ತನ್ನ ರಚನೆಯನ್ನು ಬದಲಿಸಿಕೊಂಡಿದೆ. ನೀರಿರುವ ಪ್ರದೇಶ ಮರಳುಗಾಡಾಗಿದೆ. ಸಮುದ್ರಗಳು ಪರ್ವತಗಳಾಗಿ ಸೃಷ್ಟಿಯಾಗಿವೆ. ಒಂದು ಕಾಲದಲ್ಲಿ ನಾವ್ಯಾರೂ ಊಹಿಸದಷ್ಟು ಬಲವಾದ ಹೆಬ್ಬಾವು ಭಾರತದಲ್ಲಿ ನೆಲೆಸಿತ್ತು ಎಂದು ಹೇಳಲಾಗಿದೆ.  ರೆಟಿಕ್ಯುಲೇಟೆಡ್ ಪೈಥಾನ್ ಎಂದು ಕರೆಯಲಾಗುವ ಈ ಜಾತಿಯ ಬಹಳಷ್ಟು ಪ್ರಬೇಧಗಳನ್ನು ನಮ್ಮಲ್ಲಿ ಕಾಣಬಹುದಾಗಿದೆ.
ಆಗಲೇ ಹೇಳಿದಂತೆ ಈ ಭೂಮಿಯಲ್ಲಿ ಅನೇಕ ವಿಪ್ಲವಗಳು ಸಂಭವಿಸಿವೆ. ಎಲ್ಲದನ್ನೂ ತಾಳಿಕೊಂಡು ಈ ಬ್ರಹ್ಮಾಂಡದಲ್ಲಿ ಜೀವಜಾಲವನ್ನು ಪೊರೆಯುತ್ತಾ ಬಾಳುತ್ತಿರುವ ಈ ಭೂಮಿಯಲ್ಲಿ ಸರಾಸರಿ ಉಷ್ಣಾಂಶ ಹೆಚ್ಚಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯ ೪೬೦ ಕೋಟಿ ವರ್ಷಗಳಲ್ಲೇ ಕಳೆದ ಜೂನ್ ತಿಂಗಳ ಸರಾಸರಿ ಉಷ್ಣಾಂಶ ೬೧.೨ ಡಿಗ್ರಿ ಆಗಿತ್ತು ಎಂದು ನ್ಯಾಷನಲ್ ಓಷನಿಕ್ & ಅಟ್ಮಾಸ್ಪಿಯರಿಕ್ ಅಡ್ಮಿನಿಷ್ಟ್ರೇಶನ್ (ಎನ್.ಓ.ಎ.ಎ) ಸಂಸ್ಥೆ ವರದಿ ಮಾಡಿದೆ. ಭೂಪ್ರದೇಶ ಮತ್ತು ಸಾಗರದಲ್ಲಿನ ಉಷ್ಣಾಂಶದ ಸರಾಸರಿ ಹೆಚ್ಚಳ ೨೧ನೇ ಶತಮಾನದಲ್ಲೇ ಹೆಚ್ಚಾಗಿದ್ದನ್ನು ಸಂಸ್ಥೆ ಗಮನಿಸಿ ವರದಿ ಮಾಡಿದೆ. ಭೂ ಮತ್ತು ಸಾಗರ ವಿಜ್ಞಾನಿಗಳ ಪ್ರಕಾರ ಮಾನವನ ಅನಿಯಂತ್ರಿತ ಅಭಿವೃದ್ದಿಯೇ ಇದಕ್ಕೆ ಕಾರಣವಾಗಿದೆ. ಅಂಟಾರ್ಟಿಕ ಪ್ರದೇಶವನ್ನೊಂದು ಬಿಟ್ಟು  ಉಳಿದ ಭೂ ಮತ್ತು ಸಾಗರ ಪ್ರದೇಶಗಳ ಉಷ್ಣಾಂಶ ಹೆಚ್ಚಾಗಿದ್ದನ್ನೂ ಸಂಸ್ಥೆ ದಾಖಲಿಸಿದೆ.

ಹವಾಮಾನ ವೈಪರೀತ್ಯದಿಂದ ಸಾಗರದಾಳದಲ್ಲಿ ಏನೇನು ಅವಘಡ ಸಂಭವಿಸಿರಬಹುದು ಎಂಬುದನ್ನು ಸಂಶೋಧಿಸಲು ೨೦೧೦ರಲ್ಲಿ ವಿಜ್ಞಾನಿಗಳ ತಂಡ ೯ ತಿಂಗಳ ಸಾಗರದಾಳದ ಪ್ರವಾಸವನ್ನು ಕೈಗೊಂಡಿತು. ಸಾಗರದಾಳದಲ್ಲಿ ಇರುವ ತ್ಯಾಜ್ಯವನ್ನು ಪರಿಶೀಲಿಸುವುದು ಈ ತಂಡದ ಕಾರ್ಯದ ಒಂದು ಭಾಗವಾಗಿತ್ತು. ಸಾಗರದಾಳದಲ್ಲಿ ನೋಡಿದಾಗ ತಂಡಕ್ಕೆ ಆಘಾತ ಕಾದಿತ್ತು. ಹತ್ತಾರು ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯಗಳು ಸುಂದರ ಕಡಲತಡಿಯನ್ನು ಮುಚ್ಚಿಹಾಕಿ ಅಲ್ಲಿನ ಜೀವಜಾಲವನ್ನು ನಾಶ ಮಾಡಿದ್ದವು. 

ಈ ಭೂಮಿಯ ಶೇ ೭೦ ಭಾಗ ನೀರು. ಇಡೀ ಭೂಪ್ರದೇಶ ಸಾಗರಗಳಿಂದ ಸುತ್ತುವರೆದಿದೆ. ಹೆಚ್ಚು-ಕಡಿಮೆ ಕಾಲಂಶದ ಭೂವ್ಯಾಪ್ತಿಯಲ್ಲಿ ನೆಲೆಸಿರುವ ಜೀವಿವೈವಿಧ್ಯ ಅಗಣಿತವಾದದು. ಸಾಗರಗಳ ಜೀವಿವೈವಿಧ್ಯವೂ ಗಣನೆಗೆ ನಿಲುಕದಿರುವಂತದು. ಭೂಪ್ರದೇಶದ ಮೇಲೆ ನಡೆಯುವ ಘಟನೆಗಳಿಗೆ ಹಲವು ಬಾರಿ ಸಾಗರ ಅಥವಾ ಸಮುದ್ರ ನೇರ ಕಾರಣವಾಗಿರುತ್ತದೆ. ಚಂಡಮಾರುತಗಳು ಮಳೆಯನ್ನು ಹೊತ್ತು ತರುತ್ತವೆ. ಕಡಲತೀರದಲ್ಲಿ ನಿಂತು ಕಣ್ಣು ಹಾಯಿಸಿದರೆ, ದಿಗಂತದೊಡನೆ ಏಕೀಭವಿಸಿದಂತೆ ಕಾಣುವವರೆಗೂ ನೀಲಿಯಾದ ನೀರು ನಿಡುಸ್ಯುಯುತ್ತಾ, ಭೋರ್ಗರೆಯುತ್ತಾ ತನ್ನೊಳಗಿನ ಎಲ್ಲಾ ನಿರ್ಜೀವ ವಸ್ತುಗಳನ್ನು ದಡಕ್ಕೆ ತಳ್ಳಿ ಹಾಕುತ್ತಾ, ಇನ್ನೇನು ಇಡೀ ಭೂಪ್ರದೇಶವನವನ್ನೇ ಆಕ್ರಮಿಸಿ ಮೆರೆಯುವ ಜೋರಿನೊಂದಿಗೆ ಅಲೆಗಳಿಂದ ತಾಡಿಸುತ್ತಾ, ಕೆಲವರಿಗೆ ಆಶ್ಚರ್ಯ ತರುವ, ಮಕ್ಕಳಿಗೆ ಮುದ ಕೊಡುವ, ಸಂಜೆಯಾದಂತೆ ಭಯ ಹುಟ್ಟಿಸುವಂತೆ ಮೇಲೆ ಹತ್ತಿ ಬರುವ ಸಮುದ್ರ ತೀರವನ್ನು ಮೆಚ್ಚದವರು ಇಲ್ಲವೇ ಇಲ್ಲ. ಒಟ್ಟು ೩೧೫ ಮಿಲಿಯನ್ ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಮಹಾಸಾಗರಗಳ ಕೆಲ ಪ್ರದೇಶಗಳು ಇಂದಿಗೂ ನಿಗೂಢ. ಇಂತಹ ಬೃಹತ್ ಸಾಗರದಲ್ಲಿ ಒಟ್ಟು ೫ ಗೈರ್‌ಗಳನ್ನು ಗುರುತಿಸಲಾಗಿದೆ. ಗೈರ್ ಎಂದರೆ ಸಾಗರದ ಮಧ್ಯದಲ್ಲಿ ನೀರು ತನ್ನ ಸುತ್ತ ತಾನೇ ತಿರುಗುವಂತಹ ಪ್ರಕ್ರಿಯೆ. ಗುರುತ್ವಾಕರ್ಷಣೆ, ಗಾಳಿ ಹಾಗೂ ಸಮುದ್ರದ ಚಲನೆಯಿಂದ ಉಂಟಾಗುವ ಗೈರ್‌ಗಳಿಗೆ ಸಾಗರದ ಮಹಾಸುರಳಿಗಳು ಎನ್ನಬಹುದು. ನಮ್ಮ ಹಳ್ಳಿ ಕಡೆಗಳಲ್ಲಿ ಅಪರೂಪಕ್ಕೊಮ್ಮೆ ಸುಂಟರಗಾಳಿಯೆದ್ದು ತರಗೆಲೆಗಳು ೧೦-೨೦ ಅಡಿ ಎತ್ತರಕ್ಕೆ ಹಾರುವುದನ್ನು ನೋಡಿರಬಹುದು. ಈ ಗೈರ್‌ಗಳು ಹಾಗೆಯೇ, ಆದರೆ ಸುಂಟರಗಾಳಿಯಷ್ಟು ವೇಗವಾಗಿ ತಿರುಗುವುದಿಲ್ಲ ಮತ್ತು ಇದರ ವ್ಯಾಪ್ತಿಯು ಬಲು ವಿಸ್ತಾರ. ಉದಾಹರಣೆಯಾಗಿ ಗ್ರೇಟ್ ಫೆಸಿಫಿಕ್ ಕೊಳೆಗುಂಡಿಯ ವಿಸ್ತಾರ ಸುಮಾರು ೭ ಲಕ್ಷ ಚದರ ಕಿಲೋಮೀಟರ್‌ಗಳೆಂದು ತಜ್ಞರು ಅಂದಾಜು ಮಾಡಿದ್ದಾರೆ. ಅಂದರೆ ಪೆಸಿಫಿಕ್ ಮಹಾಸಾಗರದ ಶೇ ೮ ಭಾಗದಷ್ಟು ಅಂದರೆ ಅಮೆರಿಕದ ಎರಡರಷ್ಟು!! ಕಾಸ್ಮೋಪಾಲಿಟನ್ ಸಿಟಿಗಳ ಪ್ರತಿ ಚದರ ಅಡಿಗಳನ್ನು ಲಾಭದ ದೃಷ್ಟಿಯಿಂದ ಲೆಕ್ಕ ಹಾಕುವ ನಮಗೆ ಇಷ್ಟು ಅಗಾಧ ಗಾತ್ರವೆಂದರೆ ಹೃದಯ ಬಾಯಿಗೆ ಬಂದೀತು!

ಬಲುಗಣ್ಯರ ಸಭೆಯಲ್ಲಿ ಮಾತನಾಡಿ ಆಯಾಸವಾದರೆ ಕುಡಿಯಲು ನೀರು ಬೇಕು ಎಂದು ಮಿನರಲ್ ವಾಟರ್ ಎಂದು ಕರೆಯಲಾಗುವ ಪ್ಲಾಸ್ಟಿಕ್ ಬಾಟಲಿಯನ್ನು ಇಡುತ್ತಾರೆ. ಮಕ್ಕಳು ತಿನ್ನುವ ಎಂಟಾಣೆ ಚಾಕೋಲೇಟ್ ಜರಿ ಪ್ಲಾಸ್ಟಿಕ್‌ನದು, ಹಾಲು, ಸೋಪು, ಪುಸ್ತಕ, ತಂಪುಪಾನೀಯ, ಸೋಡಾ, ಹೆಂಡದ ಬಾಟಲಿಗಳು, ಹೀಗೆ ಸರ್ವಮಯವಾದ ಪ್ಲಾಸ್ಟಿಕ್ ವಸ್ತುಗಳು ಎಲ್ಲಿ ಹೋಗಿ ಸೇರುತ್ತವೆಯೆಂದು ಅದನ್ನು ಉಪಯೋಗಿಸುವವರಿಗೆ ಗೊತ್ತಿರುವುದಿಲ್ಲ. ಸಾಗರ ನಗರಸಭೆಯ ಕಸದಲ್ಲಿರುವ ಶೇ ೫೦% ಪ್ಲಾಸ್ಟಿಕ್ ವಸ್ತುಗಳು ವರದಾ ನದಿಯ ಮೂಲಕ ಸಮುದ್ರವನ್ನು ಸೇರುತ್ತವೆ. ಅತಿಚಿಕ್ಕ ತ್ಯಾಜ್ಯದಿಂದ ಹಿಡಿದು ದೊಡ್ಡ-ದೊಡ್ಡ ತ್ಯಾಜ್ಯಗಳು ಸಮುದ್ರವನ್ನು ಸೇರಿ, ಈ ಮಹಾಸುರಳಿಗಳತ್ತ ಸೆಳೆಯಲ್ಪಡುತ್ತವೆ. ಹೀಗೆ ಪ್ರಪಂಚದ ಎಲ್ಲಾ ಘನ ತ್ಯಾಜ್ಯಗಳು ಇದರಲ್ಲಿ ಹೆಚ್ಚು ಅಂಶ ಪ್ಲಾಸ್ಟಿಕ್ ತ್ಯಾಜ್ಯಗಳು ೫ ಮಹಾಸಾಗರಗಳ ೫ ಮಹಾಸುರಳಿಗಳಲ್ಲಿ ಶೇಖರವಾಗುತ್ತಿವೆ. ಅತಿ ತೆಳುವಾದ ಪ್ಲಾಸ್ಟಿಕ್ ಚೀಲಗಳು ಸಮುದ್ರದ ಅಲೆಗಳ ಹೊಡೆತಕ್ಕೆ ಮತ್ತು ಉಪ್ಪುನೀರಿನ ಅಂಶಕ್ಕೆ ಬೇಗ ವಿಘಟನೆಗೊಂಡು ಚಿಕ್ಕ ಚೂರುಗಳಾಗಿ ಮಾರ್ಪಾಡಾಗುತ್ತವೆ. ಇಂತಹ ಚಿಕ್ಕ ಪ್ಲಾಸ್ಟಿಕ್ ಚೂರುಗಳು ಸಮುದ್ರವಾಸಿ ಮೀನುಗಳು, ಆಮೆಗಳು, ಶಾರ್ಕ್, ತಿಮಿಂಗಿಲ ಇತ್ಯಾದಿಗಳ ಉದರಕ್ಕೆ ಸೇರುತ್ತವೆ. ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಸಮುದ್ರ ಮೀನುಗಳ ಹೊಟ್ಟಯಲ್ಲಿ ಪ್ಲಾಸ್ಟಿಕ್ ಅಂಶ ಅಧಿಕವಾಗಿದೆ. ಭೂಮಿ ದುಂಡಗಿದೆಯಾದ್ದರಿಂದ ನಾವು ತಿಂದು ಎಸೆದ ಪ್ಲಾಸ್ಟಿಕ್ ಕೊಟ್ಟೆಯ ಚೂರೇ ನಾವು ತಿನ್ನುವ ಮೀನಿನ ಹೊಟ್ಟೆಯಲ್ಲಿ ಸಿಗಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಕಳೆದ ೫೦ ವರ್ಷಗಳಿಂದ ಉತ್ಪಾದನೆಗೊಂಡ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಹೀಗೆ ಸಮುದ್ರ ಸೇರಿವೆ. ಹಾಗಂತ ಬರೀ ಗೈರ್‌ಗಳಲ್ಲಿ ಮಾತ್ರ ಪ್ಲಾಸ್ಟಿಕ್ ತ್ಯಾಜ್ಯಗಳಿವೆಯೆಂಬುದು ಸರಿಯಲ್ಲ. ಆಳ ಕಡಲ ತಡಿಯಲ್ಲೂ ಕೂಡ ಪ್ಲಾಸ್ಟಿಕ್ ಹಾವಳಿಯಿದೆ. ಬಹುತೇಕ ಕಡಲಿನ ಸಸ್ಯಗಳ ಬೆಳವಣಿಗೆ ಈ ಪ್ಲಾಸ್ಟಿಕ್ ತ್ಯಾಜ್ಯದಿಂದ ಕುಂಠಿತಗೊಂಡಿವೆ. ಈ ಸಸ್ಯಗಳನ್ನು ತಿಂದು ಬದುಕುವ ಜಲಚರಗಳು ಆಹಾರದ ಅಭಾವದಿಂದ ಬಳಲುತ್ತವೆ. ಚಿಕ್ಕ ಜಲಚರಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ, ಮೀನು ಮತ್ತಿತರೆ ದೊಡ್ಡ ಜಲಚರಗಳು ಆಹಾರದ ಅಭಾವ ಎದುರಿಸುತ್ತಿವೆ. 

ಸಾದಾ ಸೀದಾ ಮಹಾಸುರಳಿಗಳು ಅಂದರೆ ಗೈರ್‌ಗಳು ಸಮುದ್ರಯಾನಿಗಳಿಗೆ ಅಥವಾ ಹಡಗುಗಳಿಗೆ ಅಪಾಯ ತರುವುದಿಲ್ಲ. ಆದರೆ ಇದೀಗ ಕೊಳೆ ಗುಂಡಿಗಳಾಗಿ ಪರಿವರ್ತಿತವಾಗಿರುವ ಈ ಗುಂಡಿಗಳ ಮೇಲ್ಬಾಗದಲ್ಲಿ ದೊಡ್ಡ-ದೊಡ್ಡ ಮರದ ದಿಮ್ಮಿಗಳು ಸುತ್ತುತ್ತಿವೆ. ಅದು ಜಪಾನಿನಲ್ಲಿ ಆದ ಸುನಾಮಿ ಸಂತ್ರಸ್ಥರ ಮನೆಗಳ ಮರದ ದಿಮ್ಮಿಗಳಿರಬಹುದು ಅಥವಾ ಬಾಂಗ್ಲಾ ಇನ್ನಿತರೆ ದೇಶಗಳ ನೈಸರ್ಗಿಕ ವಿಕೋಪದಿಂದಾದ ಫಲಿತಾಂಶವಿರಬಹುದು. ಎಲ್ಲಾ ದೇಶಗಳೂ ಸಮುದ್ರದಲ್ಲಿ ತಮ್ಮ-ತಮ್ಮ ಗಡಿಗಳನ್ನು ಗುರುತಿಸಿಕೊಂಡಿವೆ. ಉದಾಹರಣೆಯಾಗಿ ನಮಗೆ ಇಷ್ಟು ಸಮುದ್ರದ ಭಾಗ ಸೇರಬೇಕು ಎಂದು ಭಾರತ ಹಾಗೂ ಪಾಕಿಸ್ತಾನಗಳು ಗಡಿ ಗುರುತಿಸಿಕೊಂಡು ಅಹೋರಾತ್ರಿ ಆ ಗಡಿಯನ್ನು ಕಾವಲು ಕಾಯುತ್ತವೆ. ಭಾರತದ ಮೀನುಗಾರರು ಏನಾದರು ಗಡಿ ದಾಟಿದರೆ, ಪಾಕಿಸ್ತಾನದ ಬಂಧಿಯಾಗಬೇಕಾಗುತ್ತದೆ. ಈ ತರಹದ ಕಾನೂನುಗಳನ್ನು ಎಲ್ಲಾ ದೇಶಗಳು ಪಾಲಿಸುತ್ತವೆ. ಆದರೆ ಗೈರ್ ಅಂದರೆ ಮಹಾಸಮುದ್ರದ ಮಹಾಸುರಳಿಗಳಿರುವುದು ಯಾವುದೇ ದೇಶಕ್ಕೆ ಸೇರದ ಭಾಗದಲ್ಲಿ. ಆದ್ದರಿಂದ ಇದು ಯಾವ ರಾಷ್ಟ್ರದ ವೈಯಕ್ತಿಕ ಸಮಸ್ಯೆ ಅಲ್ಲ. ಒಟ್ಟಾರೆ ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಎಲ್ಲಾ ದೇಶದ ನೇತಾರರು ಸೇರಿ ಬಗೆಹರಿಸಬೇಕಾದ ಪ್ರಶ್ನೆ. ಹಾಗಿದ್ದಲ್ಲಿ ಈ ಸಮಸ್ಯೆಗೊಂದು ಪರಿಹಾರವಿಲ್ಲವೇ? ೫ ಗೈರ್ ಇನ್ಟ್ಸ್‌ಟ್ಯೂಟ್ ಎಂಬ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಮಹಾಸಾಗರಗಳ ಕೊಳೆಯನ್ನು ತೆಗೆಯಲು ಅಪಾರ ಹಣ ಮತ್ತು ಶ್ರಮ ಬೇಕು. ಸಾವಿರಗಟ್ಟಲೆ ಟನ್ ತ್ಯಾಜ್ಯಗಳನ್ನು ಅಷ್ಟು ದೂರದಿಂದ ಸಾಗಿಸುವ ವೆಚ್ಚವನ್ನು ಭರಿಸುವುದು ಕಷ್ಟ. ಅಷ್ಟೂ ತ್ಯಾಜ್ಯಗಳನ್ನು ತಂದರೆ ಹಾಕುವುದು ಎಲ್ಲಿ ಎಂಬ ಮತ್ತೊಂದು ಪ್ರಶ್ನೆಯಿದೆ. ಹಾಗೆ ಬಿಟ್ಟರೆ ಮುಂದಿನ ದುಷ್ಪರಿಣಾಮವೇನಾಗಬಹುದು ಎಂಬ ಬಗ್ಗೆ ಇನ್ನೂ ಸ್ಪಷ್ಟ ಕಲ್ಪನೆಯಿಲ್ಲ. ಇಲ್ಲೊಂದು ಚರ್ಚೆಯಾಗಬಹುದಾದ ವಿಷಯವೂ ಇದೆ. ಹೆಚ್ಚಿನ ಜನ ಉಪೇಕ್ಷೆಯಿಂದ ನಾನೊಬ್ಬ ಪ್ಲಾಸ್ಟಿಕ್ ತ್ಯಜಿಸಿದರೆ ಅಂತಹ ವ್ಯತ್ಯಾಸವೇನು ಅಗುವುದಿಲ್ಲ. ಸರ್ಕಾರಗಳು ಸಾಮೂಹಿಕವಾಗಿ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಬೇಕು ಎನ್ನುತ್ತಾರೆ. ಆದರೂ ವೈಯಕ್ತಿಕವಾಗಿ ನಮ್ಮ ತಲಾವಾರು ಪ್ಲಾಸ್ಟಿಕ್ ನಿಷೇಧದಿಂದಾಗಿ ಮಹಾಸಾಗರಗಳ, ಸಮುದ್ರಜೀವಿಗಳ ಜೀವಕ್ಕೆ ಕಿಂಚಿತ್ ಸಹಾಯವಾದೀತು.

ಕಳೆದೆರೆಡು ತಿಂಗಳುಗಳ ಹಿಂದೆ ಮಲೇಷ್ಯಾದ ವಿಮಾನ ದುರ್ಘಟನೆಗೀಡಾಗಿ ನಾಪತ್ತೆಯಾಯಿತು. ಅದರಲ್ಲಿದ್ದ ೨೪೯ ಜನರೂ ಹೇಳ ಹೆಸರಿಲ್ಲದಂತೆ ಕಣ್ಮರೆಯಾದರು. ಎಲ್ಲಾ ದೇಶಗಳು ಸೇರಿ ವಿಮಾನದ ಅವಶೇಷಗಳನ್ನಾದರೂ ಹುಡುಕುವ ಪ್ರಯತ್ನದಲ್ಲಿ ತಮ್ಮೆಲ್ಲಾ ತಂತ್ರಜ್ಞಾನವನ್ನು ಧಾರೆಯೆರೆದರೂ ಫಲ ಮಾತ್ರ ಶೂನ್ಯ. ಈಗೊಂದು ವಾದದ ಪ್ರಕಾರ ಅಪಘಾತಕ್ಕೀಡಾದ ವಿಮಾನದ ಅವಶೇಷಗಳು ಇಂತಹ ಮಹಾಸುರುಳಿಯಲ್ಲಿ ಸಿಕ್ಕಿಹಾಕಿಕೊಂಡಿರಬೇಕು. ಅಗಾಧ ತ್ಯಾಜ್ಯದ ನಡುವೆ ವಿಮಾನದ ಅವಶೇಷದ ಪತ್ತೆ ಕಾರ್ಯ ಸಾಧ್ಯವಾಗಿಲ್ಲ ಅಷ್ಟೆ. ಈ ವಾದವನ್ನೂ ತಳ್ಳಿ ಹಾಕುವಂತಿಲ್ಲ. ೧೯೮೮ರಲ್ಲಿ ಸಾಗರ ತಜ್ಞರ ತಂಡವೊಂದು ಈ ತರಹದ ತ್ಯಾಜ್ಯಗಳು ಸಮುದ್ರದಲ್ಲಿ ಒಟ್ಟಾಗಿರುವುದನ್ನು ಗುರುತಿಸಿದ್ದನ್ನು ಎನ್.ಓ.ಎ.ಎ ವರದಿ ಮಾಡಿತ್ತು. ಆಗ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಪರಿಸ್ಥತಿ ವಿಕೋಪಕ್ಕೆ ಹೋಗಿದೆ. ಹಿಂದಿನವರು ಕಟ್ಟಿಸಿದ ಕೆರೆಗಳನ್ನೇ ಹಾಳುಗೆಡವುವ ಮನ:ಸ್ಥಿತಿ ಹೊಂದಿರುವ ನಾವು ಇನ್ನು ಮಹಾಸಾಗರಗಳ ಕೊಳೆಯನ್ನು ಎತ್ತಿ ತರುತ್ತೇವೆಯೇ?

ಈಗ ಮೊದಲಿನ ಪ್ಯಾರಕ್ಕೆ ಬರೋಣ. ಭೂಮಿಪುತ್ರ ಮತ್ತು ಮೀನು ಬಿಟ್ಟವ ಇಬ್ಬರೂ ಇದ್ದರು. ಹಾವು ಹಿಡಿಯುವವರನ್ನು ಸಂಪರ್ಕಿಸಿದೆವು. ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗಿದ್ದರು.  ಅಲ್ಲೇ ಬೇಲಿ ಸಾಲಿನಲ್ಲಿರುವ ಲಕ್ಕಿ ಗಿಡದ ೨ ಕವೆಗೋಲನ್ನು ಕಡಿದು ಹಾವಿನ ತಲೆಭಾಗವನ್ನು ಅದಕ್ಕೆ ನೋವಾಗದಂತೆ ಒತ್ತಿ ಹಿಡಿದೆವು. ಬಾಲದ ಬದಿಯಲ್ಲೂ ಒಂದು ಕವೆಗೋಲನ್ನು ಒತ್ತಿ ಹಿಡಿದೆವು. ಭೂಮಿಪುತ್ರ ನಿಧಾನವಾಗಿ ಹಾವಿಗೆ ಸುತ್ತಿಕೊಂಡಿದ್ದ ಬಲೆಯನ್ನು ತುಂಡರಿಸುತ್ತಾ ಬಂದರೆ. ಹಾವಿನಲ್ಲಿ ಹೆಚ್ಚು ಚಲನೆ ಕಾಣಿಸಿತು. ಅಂತಿಮವಾಗಿ ಹಾವನ್ನು ಬಲೆಯಿಂದ ಸಂಪೂರ್ಣ ಬಿಡುಗಡೆಗೊಳಿಸಿ ಬಿಟ್ಟೆವು. ನೀರಿನ ವಿರುದ್ಧವಾಗಿ ಹರಿಯುತ್ತಾ ಕೊಳಕುಮಂಡಲ ಹಾವು ಕಣ್ಮರೆಯಾಯಿತು. ತುಂಡು ಮಾಡಿದ ನೈಲಾನ್ ಬಲೆ ಚೂರುಗಳು ನದಿಗುಂಟ ಸಾಗಿ ಎಲ್ಲಿಗೆ ಹೋಗಿ ಸೇರಬಹುದು? ನಿಶ್ಚಿತವಾಗಿ ಹಿಂದೂ ಮಹಾಸಾಗರದ ಕೊಳೆಗುಂಡಿಗೇ ಸೇರಬಹುದು ಎಂಬುದೇ ಈಗಿನ ಆತಂಕ.

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Guruprasad Kurtkoti
9 years ago

ಅಖಿಲೇಶ, ನಿಮ್ಮ ಲೇಖನ ಓದಿದಾಗ ಕರುಳು ಕಿವುಚಿದಂತಾಗುತ್ತದೆ.  ಎಷ್ಟೋ ಸರ್ತಿ ಖಾಲಿ ಸೈಟಿನಲ್ಲಿ ಬೇಜವಾಬ್ದಾರಿಯಾಗಿ ಗುಡ್ಡೆ ಮಾಡಿರುವ ಪ್ಲ್ಯಾಸ್ಟಿಕ್ ನೋಡಿದಾಗಲೆಲ್ಲ ಯೋಚಿಸುತ್ತಿದ್ದೆ 'ಇದಕ್ಕೆಲ್ಲಾ ಹೇಗೆ ಗತಿ ಕಾಣಿಸುತ್ತಾರೆ' ಅಂತ. ಈಗ ಅರ್ಥವಾಯ್ತು :(.. ನೀವು ಬರೆದಿರುವಂತೆ ಸಾಮೂಹಿಕ ಪ್ಲ್ಯಾಸ್ಟಿಕ್ ನಿಷೇಧವೇ ಇದಕ್ಕಿರುವ ಏಕೈಕ ಉಪಾಯ ಅನಿಸುತ್ತದೆ.

ಪಾ.ಮು.ಸುಬ್ರಮಣ್ಯ ಬ.ಹಳ್ಳಿ.
ಪಾ.ಮು.ಸುಬ್ರಮಣ್ಯ ಬ.ಹಳ್ಳಿ.
9 years ago

     ಅಖಿಲೇಶ್ ಅವರೆ  ನಿಮ್ಮ  ಸಾಮಾಜಿಕ ಕಳಕಳಿಯ ಲೇಖನ  ಸಮಾಜದ ಅವಿಭಾಜ್ಯ ಘಟಕವೆನಿಸಿಕೊಂಡಿರುವ ಪ್ರತಿ ವ್ಯಕ್ತಿಗೂ ಜವಾಬ್ದಾರಿಯನ್ನು ನೆನಪಿಸುವಂತಾದ್ದು. ಸಾಮೂಹಿಕ ನಿಷೇದ ಕೇವಲ ಪುಸ್ತಕದಲ್ಲಿನ ಕಾಗದದ ಮೇಲಾಗದೆ ಪ್ರಜೆಯ ಮಸ್ತಕದ ಮನಸ್ಸಿನಲ್ಲಿ ನೆಲೆಯಾಗಬೇಕು. ಐದು ಕೊಳೆಗುಂಡಿಗಳ ಹೊಳಹು ಅದ್ಭುತ. 

2
0
Would love your thoughts, please comment.x
()
x