ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಸಾಧ್ಯತೆಗಳು: ಡಾ.ವಾಣಿ ಕಂಟ್ಲಿ

ಮಕ್ಕಳೆಂದರೆ ಯಾರು ಅಂದುಕೊಂಡ ಕೂಡಲೇ ಮಕ್ಕಳೆಂದರೆ ದೇವರು, ಕುಸುಮಗಳು, ಉತ್ಸಾಹದ ಚಿಲುಮೆಗಳು, ಬದುಕು, ಸಮಾಜ ನೀಡಿರುವ ಹಲವಾರು ಗುಣವಿಷೇಶಣಗಳು ನೆನಪಾಗುತ್ತವೆ. ನಮಗೆಲ್ಲಾ ಮಕ್ಕಳೆ ಸರ್ವಸ್ವ, ಮಕ್ಕಳಿಗಾಗಿ ನಿನ್ನನ್ನು ಸಹಿಸುತ್ತಿದ್ದೇನೆ ಎನ್ನುವ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಸಿಗುತ್ತಾರೆ. ಮಕ್ಕಳಿಗಾಗಿ ಇತರರನ್ನು ಸುಲಿದು, ಕೊಂದು ಬಾಚಿ ತಿಂದವರೂ ಇದ್ದಾರೆ.  ಮಕ್ಕಳಿಗಾಗಿ ಕದ್ದು, ಭ್ರಷ್ಟರಾಗಿ, ವಂಚಕರಾಗಿ ಆಸ್ತಿಮಾಡಿದವರೆಷ್ಟಿಲ್ಲ. ಮಗಳ ಮದುವೆಗೆಂದು, ವರದಕ್ಷಿಣೆಗೆಂದು ಸಾಲಸೋಲಮಾಡಿ, ಮನೆಮಾಡಿ ದಿವಾಳಿಯಾದವರೆಷ್ಟಿಲ್ಲ. ಮಗಳು ಓಡಿಹೋದಳೆಂದು, ಮಗ ಸಾಕಲಿಲ್ಲವೆಂದು ಕೊರಗಿ ಸೊರಗಿದವರೆಷ್ಟಿಲ್ಲ. ಸಮಾಜದಲ್ಲಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಮಾತ್ರ ಅಲ್ಲ, ಮಕ್ಕಳಿಗಾಗಿಯೂ ಹೌದು. ಎಷ್ಟೇ ಆದರೂ ಅವರ ತುಂಡು ಅಲ್ಲವೇ ಅದು. 

ಆದರೂ, ಬೀದಿಯಲ್ಲಿ ಭಿಕ್ಷೆ ಬೇಡುವ ಮಕ್ಕಳು, ಸಿಗ್ನಲ್ನಲ್ಲಿ ಹೂಮಾರುವ ಮಕ್ಕಳು, ಹೊಟೆಲ್‍ನಲ್ಲಿ ಟೇಬಲ್ ಕ್ಲೀನ್ ಮಾಡುವ ಮಕ್ಕಳು, ಗ್ಯಾರೆಜಿನಲ್ಲಿ ಸ್ಪ್ಯಾನರ್ ತಿರುಗಿಸುವ ಮಕ್ಕಳು, ಉಳ್ಳವರ ಮಕ್ಕಳನ್ನು ನೋಡಿಕೊಳ್ಳಲು ಚಿಕ್ಕ ಮಕ್ಕಳು, ಮೂಗುಮುಚ್ಚುವ ಕಸದಲ್ಲಿ ಚಿಂದಿ ಆಯುವ ಮಕ್ಕಳು, ಬೀದಿಯಲ್ಲಿ ಅರ್ಧ ಹರಿದ ಬಟ್ಟೆತೊಟ್ಟು ಮೂಗು ಸುರಿಸುವ ಮಕ್ಕಳು, ಭವ್ಯ ಕಟ್ಟಡದ ನಿರ್ಮಾಣದ ಧೂಳಿನಲ್ಲಿ ಮಕ್ಕಳು, ರೈಲ್ವೆ ಸ್ಟೇಷನ್‍ನಲ್ಲಿ ಮಕ್ಕಳು, ಪೋಲಿಸ್ ಸ್ಟೇಷನ್ನಲ್ಲಿ ಮಕ್ಕಳು. ಕೊನೆಗೆ ವ್ಯೇಶ್ಯಾವಾಟಿಕೆಯಲ್ಲಿ, ಕೊಲೆ ಸುಲಿಗೆ, ಶೋಷಣೆ, ಅತ್ಯಾಚಾರದ ಸುದ್ದಿಯಲ್ಲಿ ಮಕ್ಕಳು.  ಯಾರಿವರು? ಇವರಿಗೆ ಕುಟುಂಬವಿಲ್ಲವೆ? ಇವರ ಸುರಕ್ಷತೆಗೆ ಯಾರು ಜವಾಬ್ದಾರಿ? ಎಲ್ಲಿದ್ದರು? ಎಲ್ಲಿಂದ ಬಂದರೀ ಮಕ್ಕಳು? ನಿಜ ನಾವೆಲ್ಲಾ ಎಲ್ಲಿಂದ ಬಂದೆವು ಈ ನಗರಪ್ರದೇಶಕ್ಕೆ? ನಮ್ಮ ಅಜ್ಜನೋ, ಅಪ್ಪನೋ ಇಲ್ಲವೇ ನಾವು ನೀವು ಓದಿದ್ದು ಬೆಳೆದಿದ್ದು ಗ್ರಾಮೀಣ ಪ್ರದೇಶದಲ್ಲಿ ಅಲ್ಲವೇ, ಕ್ರಮೇಣ ಅಭಿವೃದ್ದಿ, ಉದ್ಯೋಗಾವಕಾಶ, ಉನ್ನತ ವಿಧ್ಯಾಭ್ಯಾಸ ಹೀಗೆ ಹಲವಾರು ಕಾರಣಗಳಿಂದ ಗ್ರಾಮದಿಂದ ಹೋರದೂಡಲ್ಪಟ್ಟ ನಾವು ನಗರಜೀವಿಗಳಾಗಿದ್ದೆವೆ. ಯಾರೋ ಬೆಳೆದ ಅನ್ನ, ಯಾರೋ ತಯಾರಿಸಿದ ಅಡುಗೆ, ಯಾರೋ ಹೊಲೆದ ಬಟ್ಟೆ, ಯಾರೋ ಕಟ್ಟುವ ಮನೆ. ಎಲ್ಲಾ ಯಾಂತ್ರಿಕ ಸಮಯವಿಲ್ಲದ ಬದುಕು. ಅದೇ ಸುಗ್ರಾಮ ಜೀವನದ ಸವಿನೆನಪು, ಆದರೆ ತಿರುಗಿ ಆಗ್ರಾಮ ಈಗ ಹೇಗಿದೆ ಎಂದು ನೋಡಲು ಸಮಯವಿಲ್ಲದಷ್ಟು ಬ್ಯುಸಿ. 

ಮಕ್ಕಳು ರಾಜ್ಯದ ಆಸ್ತಿ: 

ನಾವೆಲ್ಲಾ ಪ್ರಪಂಚದಾದ್ಯಂತ ಬಹುತೇಕವಾಗಿ ಒಪ್ಪಿಕೊಂಡು ಆಯ್ಕೆ ಮಾಡಿದ ಸರ್ಕಾರದ ಮಾದರಿ ಪ್ರಜಾಪ್ರಭುತ್ವ. ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ, ಪ್ರಜೆಗಳಿಂದ ಆಗುವ ಪ್ರಜಾಪ್ರಭುತ್ವ. ಭಾರತದ ಸಂವಿಧಾನವು ಗಣರಾಜ್ಯದ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಸರ್ವರಿಗೂ ಸಮಾನ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕೊಟ್ಟುಕೊಂಡಿದ್ದೇವೆ. ಅಧಿಕಾರ ವಿಕೇಂಧ್ರಿಕರಣದಿಂದ ಗ್ರಾಮ ಪಂಚಾಯತಿಗೆ ಸರ್ವ ಅಧಿಕಾರಗಳು, ಸ್ಥಾನೀಯ ಸರ್ಕಾರಗಳ ಸ್ವಾಯತ್ತತೆಗೆ ಹಲವಾರು ಯೋಜನೆ ಕಾರ್ಯಕ್ರಮಗಳು ಸರ್ಕಾರ ಬದಲಾಗಲೆಲ್ಲಾ ಸಾಂಗೋಪಸಾಂಗವಾಗಿ ಜಾರಿಗೆ ಬರುತ್ತಲೇ ಹೋಗುತ್ತವೆ.

ಆದರೆ, ಗ್ರಾಮೀಣ ಪ್ರದೇಶದಲ್ಲಾಗಲಿ, ನಗರಪ್ರದೇಶದಲ್ಲಾಗಲಿ, ಮಕ್ಕಳ ರಕ್ಷಣೆಯ ಕಾಳಜಿ ಕಂಡುಬರುತ್ತಿಲ್ಲ. ಹೆಚ್ಚುತ್ತಿರುವ ಆರ್ಥಿಕ ಬವಣೆಗಳು ಮಕ್ಕಳ ಶೋಷಣೆಯ ಪರಮಾವಧಿಗೆ ಮುಟ್ಟಿವೆ. ಈ ಸಡಿಲವಾದ ಸರ್ಕಾರದ ನೀತಿಯಿಂದಾಗಿ ಗ್ರಾಮೀಣ ಒಕ್ಕಟ್ಟು ಶಿಥಿಲಗೊಳ್ಳುತ್ತಿದೆ. ಮಕ್ಕಳು ನಾಳೀನ ಪ್ರಜೆಗಳಾಗಿ ಕಡೆಗಣಿಸಲ್ಪಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳು, ಒಳ ರಾಜಕೀಯ ಊರಿನ ಶಾಲಾಭಿವೃದ್ದಿ ಸಮಿತಿಗಳವರೆಗೂ ಮುಟ್ಟಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಿಂತ ಲಾಭವೇ ಮುಖ್ಯವಾಗಿರುವುದು ವಿಪರ್ಯಾಸ. ಇಂತದರಲ್ಲಿ ಮಕ್ಕಳ ಹಕ್ಕುಗಳು ಮೂಲೆಗುಂಪಾಗಿವೆ. 

ಮಕ್ಕಳಿಗೂ ಹಕ್ಕಿದೆಯೇ? 

ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮೊದಲನೇ ವಿಶ್ವಯುದ್ದದಿಂದಲೇ ಪ್ರಾರಂಭವಾಯಿತು. ಅಗ್ಲಾಂಟಿನ್ ಜೆಬ್ ಎಂಬ ಪೊಲೆಂಡಿನ ಮಹಿಳೆ, ನಿಮ್ಮ ರಾಜಕೀಯ ಮತ್ತು ಯುದ್ದ ಮಕ್ಕಳನ್ನು ಮಕ್ಕಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ಹಾನಿಮಾಡಬಾರದು ಎಂದು ಮನವಿಸಲ್ಲಿಸಿದರು. ಅದರ ಫಲವಾಗಿ 1989 ರಲ್ಲಿ ವಿಶ್ವಸಂಸ್ಥೆ ರಚಿತವಾದ, ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ, ಭಾರತವು 1992ರಲ್ಲಿ ಅಂಕಿತವನ್ನು ಹಾಕಿ, ತಮ್ಮ ದೇಶದ ಎಲ್ಲ ಮಕ್ಕಳನ್ನು ಒಡಂಬಡಿಕೆಯಲ್ಲಿ ಒಪ್ಪಿಕೊಂಡ ಹಾಗೆಯೆ ನೋಡಿಕೊಳ್ಳುತ್ತೆನೆಂದು ಹೇಳಿದೆ. 

ಈ ಒಡಬಂಡಿಕೆಯ ಪ್ರಕಾರ, 18 ವರ್ಷದೊಳಗಿನ ಭಾರತದ ಎಲ್ಲಾ ಪ್ರಜೆಗಳು ಮಕ್ಕಳು. ಅಂದರೆ, ಒಟ್ಟು ಜನಸಂಖ್ಯೆಯಲ್ಲಿ 45% ಕ್ಕಿಂತ ಹೆಚ್ಚು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಅವರೆಲ್ಲರೂ ಮಕ್ಕಳು ಮತ್ತು  ಅವರ ಸುರಕ್ಷೆ ಮತ್ತು ಸಂರಕ್ಷಣೆ ಸರ್ಕಾರದ ಜವಾಬ್ದಾರಿ. 

ಈ ಒಡಂಬಡಿಕೆ ಪ್ರಕಾರ, ಮಕ್ಕಳ ಹಕ್ಕುಗಳನ್ನು 4 ಪ್ರಕಾರವಾಗಿ ವಿಂಗಡಿಸಬಹುದು. ಅವರಿಗೆ, ಅರೋಗ್ಯವಂತರಾಗಿ ಹುಟ್ಟಿ ಬೆಳೆದು, ಆರೈಕೆ ಹೊಂದುವ, ಗೌರವದಿಂದ ಜೀವಿಸುವ ಹಕ್ಕು, ಆಟಪಾಠದ ಸರ್ವತೋಮುಖ ಸೌಲಭ್ಯ ಪಡೆದು ಅಭಿವೃದ್ದಿ ಹೊಂದುವ ಹಕ್ಕು, ಅಭಿವೃದ್ದಿ ಹಂತದಲ್ಲಿ ಶೋಷಣೆ ವಿರುದ್ದ ರಕ್ಷಣೆಯ ಹಕ್ಕು ಮತ್ತು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ, ತಮ್ಮ ಅಭಿವೃದ್ದಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅಭಿಪ್ರಾಯ ತಿಳಿಸುವ, ಚರ್ಚೆ ನಡೆಸಿ, ನಿರ್ಧಾರ ತೆಗೆದುಕೊಳ್ಳುವ ಭಾಗವಹಿಸುವ ಹಕ್ಕುಗಳನ್ನು ಕೊಡಮಾಡಲ್ಪಟ್ಟಿದೆ. ಇದಕ್ಕೆ ಬದ್ದವಾಗಿರುವ ಕಾನೂನುಗಳು ಮತ್ತು ಯೋಜನೆಗಳು ಜಾರಿಗೆಯಲ್ಲಿವೆ. 

ಆದರೆ, ಅದನ್ನು ಜಾರಿಗೊಳಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಕ್ಕಳು ಇಂದು ಬೀದಿಪಾಲಾಗಿದ್ದಾರೆ. ಮಕ್ಕಳು ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯಗಳಿಂದಾಗಿ, ಗ್ರಾಮದಿಂದ ನಗರಕ್ಕೆ ಆಕರ್ಷಿತರಾಗಿ ಓಡಿಬರುವುದು ಒಂದು ಕಡೆಯಾದರೆ, ನಗರದಲ್ಲಿ ಎಲ್ಲ ಕುಕೃತ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕಾರ್ಮಿಕ ವಲಸೆ ಇಲ್ಲವೇ ಉತ್ತಮ ಜೀವನದ ಆಮಿಷವೊಡ್ಡಿ ಮಕ್ಕಳ ಕಳ್ಳ ಸಾಗಾಣಿಕೆಯು ಶೋಷಣೆಗೆ ನಾಂದಿಯಾಗಿದೆ. 

ಕೇವಲ ಯೋಜನೆ ಮತ್ತು ಕಾರ್ಯಕ್ರಮಗಳು ಕಾಯ್ದೆ ಕಾನೂನುಗಳು ಜಾರಿಗೆಯಲ್ಲಿದ್ದರೆ ಸಾಲದು, ಅದರ ಪ್ರಾಮಾಣಿಕ ಜಾರಿಗೆಗೊಳಿಸುವುದು ಅಷ್ಟೆ ಮುಖ್ಯವಲ್ಲದೇ, ಸರ್ಕಾರದ ಪ್ರತಿಯೊಂದು ಯೋಜನೆಗಳು ಅರ್ಹ ಫಲಾನುಭವಿಗೆ ತಲುಪುವುದು ಮುಖ್ಯವಾಗಿದೆ. ಎಲ್ಲವನ್ನೂ ರೂಪಿಸಿ ಕೆಲವೇ ಪಟ್ಟಭದ್ರಹಿತಾಸಕ್ತಿಗಳು ಇದರ ದುರುಪಯೋಗ ಪಡೆಯಲು ಕಾರಣ ಜನರಲ್ಲಿ ಈ ಯೋಜನೆ ಕಾರ್ಯಕ್ರಮಗಳ ಬಗ್ಗೆ ಅರಿವು ಇಲ್ಲದಿರುವುದು ಒಂದೆಡೆಯಾದರೆ, ಅದರ ಸರಿಯಾದ ಉಪಯೋಗದ ಬಗ್ಗೆ ಮಾರ್ಗದರ್ಶನವೂ ಅಗತ್ಯವಾಗಿದೆ.  

ಮಕ್ಕಳು ಸಮಾಜದ ಭಾಗವಾಗಿ ತಮ್ಮ ಎಲ್ಲ ಹಕ್ಕುಗಳನ್ನು ಪಡೆಯಲು ಗ್ರಾಮೀಣ ಮಟ್ಟದಲ್ಲಿಯೇ ಹಲವಾರು ವ್ಯವಸ್ಥೆಗಳು ರೂಪಗೊಂಡು ಕಾರ್ಯನಿರ್ವಹಿಸುತ್ತಿವೆ. ಅದರ ಪರಿಣಾಮಕಾರಿ ಉಪಯೋಗ ಜನರ ಕೈಯಲ್ಲಿಯೇ ಇದೆ. ಮುಖ್ಯವಾಗಿ ಮಕ್ಕಳನ್ನು ಕೇವಲ ಕುಟುಂಬದ ಭಾಗವಾಗಿ ಮಾತ್ರ ನೋಡದೆ, ದೇಶದ ಆಸ್ತಿ, ಮಾನವ ಸಂಪನ್ಮೂಲ, ಉತ್ತಮ ನಾಗರಿಕತ್ವ ಮತ್ತು ನಾಯಕತ್ವದ ತಳಹದಿಯೆಂದು ನೋಡಿದಾಗ ಮಕ್ಕಳ ಹಕ್ಕುಗಳ ಜಾರಿಗೆ ಕಾರ್ಯಸಾಧ್ಯವಾಗುತ್ತದೆ. ಅದಕ್ಕೆ ಬಾಲಮಿತ್ರ ಗ್ರಾಮದ ನಿರ್ಮಾಣ ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. 

ಬಾಲಮಿತ್ರ ಗ್ರಾಮ (child friendly village)

ಬಾಲಮಿತ್ರ ಗ್ರಾಮವೇಕೆ ಬೇಕು? (why child friendly village?)

    ಭಾರತ ದೇಶದ ಶೇಕಡಾವಾರು 70ಕ್ಕಿಂತ ಹೆಚ್ಚು ಜನರು ವಾಸಿಸುವುದು ಗ್ರಾಮೀಣ ಪ್ರದೇಶದಲ್ಲಿ ಆದರೆ, ಅವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ತಲುಪುವುದೇ ಇಲ್ಲ.

    ಭಾರತದ ಈ ನಿರ್ಲಕ್ಷಿತ ಗ್ರಾಮೀಣ ಪ್ರದೇಶದ ಶಾಲೆಗಳಿಂದ ಅನಿವಾರ್ಯವಾಗಿ ಹೊರದಬ್ಬಲ್ಪಡುವ 6 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವ ಮುಂಚೆ, ಹೊಲಮನೆಗಳಲ್ಲಿ, ದನಕಾಯುವುದರಲ್ಲಿ, ಕಾರ್ಖಾನೆಯಲ್ಲಿ, ಹೋಟೆಲ್ ಡಾಬಾಗಳಲ್ಲಿ, ಅಂಗಡಿ ಮುಗ್ಗಟ್ಟು ಮಾರುಕಟ್ಟೆ, ಎಲ್ಲೆಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಾರೆ.

    ದೇಶದಲ್ಲಿ ವಯಸ್ಕರು ನಿರುದ್ಯೋಗಿಗಳಾಗಿರುವಾಗ ಮಕ್ಕಳಿಗೆ ಮಾತ್ರ ತಪ್ಪದೇ ಸಿಗುತ್ತದೆ, ಸಂಬಳವಿಲ್ಲದ 24 ಘಂಟೆ ಕೆಲಸ. 

    ಗ್ರಾಮದ ಮಕ್ಕಳು, ಅದರಲ್ಲೂ ಹುಡುಗಿಯರು ಗ್ರಾಮಪಂಚಾಯತಿ ಸೇರಿ ಗ್ರಾಮದ ವಿಕಾಸದೆಡೆ ನಾಯಕತ್ವಗುಣ ಬೆಳೆಸಿಕೊಳ್ಳಲು ಬಾಲಮಿತ್ರಗ್ರಾಮದ ಅಗತ್ಯವಿದೆ

    ಬಾಲ ಮಿತ್ರ ಗ್ರಾಮದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ದಿಯೊಂದಿಗೆ, ತಮ್ಮ ಹಕ್ಕುಗಳನ್ನು ಅರಿತುಕೊಂಡು ಅದಕ್ಕಾಗಿ ಧ್ವನಿಯೆತ್ತಲು ಮಕ್ಕಳಿಗೆ ಒಂದು ವೇದಿಕೆಯಾಗಿದ್ದು ಬದಲಾವಣೆಯ ರೂವಾರಿಯಾಗುವ ಅವಕಾಶವನ್ನು ಕಲ್ಪಿಸಲಾಗುತ್ತದೆ. 

ಒಟ್ಟಿನಲ್ಲಿ ಬಾಲಮಿತ್ರಗ್ರಾಮವೆಂದರೆ, 

1.    0-3 ವಯಸ್ಸಿನ ಮಕ್ಕಳು ಸುರಕ್ಷಿತವಾಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ, ಸೂಕ್ತ ಲಸಿಕೆ, ಜನನ ನೋಂದಣಿಹೊಂದಿ ಉತ್ತಮ ಆರೋಗ್ಯ, ಸುರಕ್ಷಿತ ಕುಟುಂಬ ವ್ಯವಸ್ಥೆಯನ್ನು ಹೊಂದುವುದು.

2.    3-6 ವಯಸ್ಸಿನ ಮಕ್ಕಳು ಸರಿಯಾದ ಅಂಗನವಾಡಿ ವ್ಯವಸ್ಥೆಹೊಂದಿ ಪೌಷ್ಟಿಕ ಆಹಾರ ಸರಬರಾಜೊಂದಿಗೆ, ಪೂರ್ವ ಪ್ರಾಥಮಿಕ ಶಿಕ್ಷಣದ ಬುನಾದಿಯನ್ನು ಹೊಂದುವುದು. 

3.    6-14 ವಯಸ್ಸಿನ ಎಲ್ಲ ಮಕ್ಕಳು ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣದೊಂದಿಗೆ ಇತರ, ಮನೋರಂಜನ ಆಟಪಾಠದ ಅವಕಾಶಗಳು, ಧನಾತ್ಮಕ ಸ್ಪರ್ಧಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು. 

4.    14-18 ವಯಸ್ಸಿನಲ್ಲಿ ಸೂಕ್ಷ್ಮವಾದ ಮನಸ್ಸಿನ ಕಿಶೋರಾವಸ್ಥೆಯನ್ನು ಉತ್ತಮ ಆರೋಗ್ಯ ಕಾಳಜಿಯಿಂದ ಹಿಡಿದು, ಉತ್ತಮ ಉದ್ಯೋಗಾವಕಾಶ ಸೃಷ್ಟಿಸುವ ಉನ್ನತ ಶಿಕ್ಷಣಕ್ಕೆ ಬುನಾದಿಯಾಗುವುದು. ಯಾವುದೇ ದೈಹಿಕ ಮಾನಸಿಕ ಆಕರ್ಷಣೆಗಳನ್ನು ಅರ್ಥೈಯಿಸಕೊಂಡು ಧನಾತ್ಮಕವಾದ ವಿಚಾರಹೊಂದಲು ಅನುಕೂಲವಾದ ಭೌದ್ದಿಕ ವಿಚಾರ ಚಿಂತನ ಮಂಥನ ಕಾರ್ಯಕ್ರಮಗಳನ್ನು ಗ್ರಾಮೀಣ ವ್ಯವಸ್ಥೆಯಲ್ಲಿ ವೃತ್ತಿಪರ ತರಭೇತಿಗಳನ್ನು ಹೆಚ್ಚಿಸುವುದು. 

5.    0-18 ವಯಸ್ಸಿನ ಬೌದ್ದಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಶೋಷಣೆಗೆ ಒಳಗಾಗದೇ ಇಡೀ ಕುಟುಂಬ, ಸಮಾಜ ಮತ್ತು ಶಿಕ್ಷಕರಿಂದ ಪ್ರೀತಿ, ಮಮತೆ, ಪ್ರೋತ್ಸಾಹ ಮತ್ತು ಸಂರಕ್ಷಣೆ ವಾತಾವರಣ ಹೊಂದುವುದು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಇಲ್ಲವೇ ಯಾವುದೇ ಅಂಗವಿಕಲತೆ ಹೊಂದದೆ ಸಧೃಢರಾಗುವುದು.  

ಈ ಐದು ಸೂತ್ರಗಳು ಈಗಾಗಲೇ ಜಾರಿಯಲ್ಲಿರುವ ವ್ಯವಸ್ಥೆ ಮತ್ತು ಕಾನೂನು, ಯೋಜನೆ, ಕಾರ್ಯಕ್ರಮಗಳಲ್ಲೆ ಅಡಗಿದ್ದು ಅದನ್ನು ಸರಿಯಾಗಿ ಜಾರಿಗೆ ಮಾಡುವ ಶಿಕ್ಷಕರ ಮತ್ತು ಸಿಬ್ಬಂದಿಗಳ ಕೊರತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತದೆ. ಈ ಎಲ್ಲಾ ಅನುಕೂಲಗಳನ್ನು ಪಡೆಯಲು ಜನರಿಗೆ ಅರಿವನೊಂದಿಗೆ ಅದಕ್ಕೆ ತಕ್ಕ ಸಿಬ್ಬಂದಿಗಳು ನೇಮಕವಾಗಬೇಕೆಂದು ಹೋರಾಡಲು ಇಂದು ಬಾಲ ಮಿತ್ರ ಗ್ರಾಮದಲ್ಲಿ ಮಕ್ಕಳೆ ಹೋರಾಟ ನಡೆಸಬೇಕಾಗಿರುವುದು ಅಗತ್ಯವಾಗಿದೆ. 

ಹಕ್ಕು ನಾವು ನೀವೆಲ್ಲರೂ ಜನ್ಮದಿಂದಲೇ ಪಡೆದುಕೊಂಡು ಬಂದದ್ದು, ಅದನ್ನು ಯಾರೂ ಯಾರಿಗೂ ಕೊಡುವ ಕೃಪೆ ಮಾಡದೇ, ಮಕ್ಕಳು ಗ್ರಾಮೀಣಪ್ರದೇಶದಲ್ಲಿ ಸುರಕ್ಷಿತವಾಗಿ ಉತ್ತಮ ಬಾಲ್ಯ ಕಳೆಯಲು ತಮ್ಮ ಎಲ್ಲಾ ಹಕ್ಕುಗಳನ್ನು ಅನುಭವಿಸಲು ಅಗತ್ಯ ಸಾಧನ ವ್ಯವಸ್ಥೆ ಪೂರೈಕೆ ಸರ್ಕಾರದ ಕರ್ತವ್ಯ. ಅದು ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಸ್ವರಾಜ್ಯವನ್ನು ಎತ್ತಿಹಿಡಿಯುವ ಬಾಲಮಿತ್ರಗ್ರಾಮವಾಗಿದೆ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Vinod Kumar Bangalore
9 years ago

ಉತ್ತಮ ಮಾಹಿತಿಯುಳ್ಳ ಲೇಖನ. ಒಂದು ದೊಡ್ಡ ಪ್ರಬಂಧವನ್ನು ಎರಡೇ ಸಾಲುಗಳಲ್ಲಿ ಕುಬ್ಜಗೊಳಿಸಿದ್ದೀರಿ . ಇಷ್ಟವಾಯಿತು , ಧನ್ಯವಾದಗಳು 

ವಿನೋದ್ ಕುಮಾರ್ ಬೆಂಗಳೂರು 

Vinod Kumar Bangalore
9 years ago

ಉತ್ತಮ ಮಾಹಿತಿಯುಳ್ಳ ಲೇಖನ.

"ಸಮಾಜದಲ್ಲಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಮಾತ್ರ ಅಲ್ಲ, ಮಕ್ಕಳಿಗಾಗಿಯೂ ಹೌದು. ಎಷ್ಟೇ ಆದರೂ ಅವರ ತುಂಡು ಅಲ್ಲವೇ ಅದು" ಒಂದು ದೊಡ್ಡ ಪ್ರಬಂಧವನ್ನು ಎರಡೇ ಸಾಲುಗಳಲ್ಲಿ ಕುಬ್ಜಗೊಳಿಸಿದ್ದೀರಿ . ಇಷ್ಟವಾಯಿತು. 

ಧನ್ಯವಾದಗಳು 

ವಿನೋದ್ ಕುಮಾರ್ ಬೆಂಗಳೂರು 

2
0
Would love your thoughts, please comment.x
()
x