ಇಲ್ಲಿ ಎಲ್ಲವೂ ಬದಲಾಗುತ್ತದೆ: ನಟರಾಜು ಎಸ್. ಎಂ.

2006 ರ ಮೇ ತಿಂಗಳ 11ನೇ ದಿನ ಕೋಲ್ಕತ್ತಾದಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಅಂದು ನಾನು ಓದುತ್ತಿದ್ದ ನ್ಯೂಸ್ ಪೇಪರ್ ನ ಮುಖಪುಟದಲ್ಲಿ ನಗುತ್ತಿರುವ ಬುದ್ಧದೇವ್ ಭಟ್ಟಾಚಾರ್ಯರ ಮುಖವನ್ನು ಕಾರ್ಟೂನ್ ಮಾಡಿ ನೂರಾ ಎಪ್ಪತ್ತೈದು ಬಾರಿ ಪ್ರಿಂಟ್ ಮಾಡಿದ್ದರು. 175 ಅಂದು ಸಿಪಿಎಂ ಪಕ್ಷ ಪಡೆದಿದ್ದ ಒಟ್ಟು ಸೀಟುಗಳ ಸಂಖ್ಯೆಯಾಗಿತ್ತು. ಸಿಪಿಎಂನ ವಿರೋಧಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಕೇವಲ 30 ಸೀಟುಗಳನ್ನು ಪಡೆದಿತ್ತು. ಒಟ್ಟು 294 ಸೀಟುಗಳಿರುವ ಬೆಂಗಾಳದ ವಿಧಾನ ಸಭೆಯಲ್ಲಿ ಸಿಪಿಎಂ ಬಹುಮತ ಗಳಿಸಿದ್ದರಿಂದ ಸರ್ಕಾರ ರಚನೆ ಮಾಡಿತ್ತು. ಇದಾದ ಐದು ವರ್ಷಕ್ಕೆ ಸರಿಯಾಗಿ 2011 ರ ಮೇ ತಿಂಗಳ 13 ನೇ ತಾರೀಖು ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದ ಬಳಿ ಹೋಗಿದ್ದೆ. ಯಾವುದೋ ಅಂಗಡಿಯೊಂದರ ಬಳಿ ಜನ ಕಿಕ್ಕಿರಿದು ನಿಂತು ಟಿವಿ ನೋಡುತ್ತಿದ್ದರು. ಅವತ್ತು ಪಶ್ಚಿಮ ಬಂಗಾಳದ 15ನೇ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಅಚ್ಚರಿ ಎಂಬಂತೆ 2006ರ ವಿಧಾನ ಸಭಾ ಚುನಾವಣೆಯಲ್ಲಿ ಮೂರಂಕಿ ಪಡೆದಿದ್ದ ಸಿಪಿಎಂ ಪಕ್ಷ ಕೇವಲ ನಲವತ್ತು ಸೀಟುಗಳನ್ನು ಪಡೆದಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ 184 ಸೀಟುಗಳನ್ನು ಪಡೆದಿದ್ದು. ಕಾಲ ನೋಡಿ ಹೇಗೆ ಉಲ್ಟಾ ಹೊಡೆಯುತ್ತೆ. ಕಾಲ ಉಲ್ಟಾ ಹೊಡೆದ ಕಾರಣ 34 ವರ್ಷಗಳ ಕಾಲ ದೀರ್ಘವಾಗಿ ಆಡಳಿತ ನಡೆಸಿದ ಸಿಪಿಎಂ ಸರ್ಕಾರ ಅವತ್ತು ಕೊನೆಗೊಂಡಿತ್ತು. ಪರಿವರ್ತನೆಯ ಹೆಸರಿನಲ್ಲಿ "ಮಾ, ಮಾಟಿ, ಮಾನುಷ್ (ಅಮ್ಮ, ನೆಲ, ಮನುಷ್ಯ)" ಎಂಬ ಸ್ಲೋಗನ್ ನೊಂದಿಗೆ ಶುರುವಾಗಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಹೋರಾಟ ರಾಜ್ಯದ ಗದ್ದುಗೆ ಗೆಲ್ಲುವಲ್ಲಿ ಸಫಲವಾಗಿತ್ತು. ಇತಿಹಾಸ ಓದಿಕೊಳ್ಳದ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದ ನಾನು ಆ ಸಫಲತೆ ಮಮತಾ ಬ್ಯಾನರ್ಜಿಗೆ ಹೇಗೆ ಒಲಿದಿತು ಎಂಬುದ ಕುರಿತು ಬರೆಯಲಾರೆನೇನೋ. ಆದರೂ ಒಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಚಲಿತ ವಿದ್ಯಮಾನಗಳ ಮೇಲೆ ತಿಂಗಳಿಗೆ ಒಮ್ಮೆಯಾದರೂ ಕಣ್ಣಾಡಿಸೋ ಅಭ್ಯಾಸವಿರುವ ಕಾರಣ ಪಶ್ಚಿಮ ಬಂಗಾಳದ ಆದ ಪರಿವರ್ತನೆಯ ಕುರಿತು ಒಂದೆರಡು ಪುಟಗಳನ್ನು ಖಂಡಿತಾ ಬರೆಯಬಹುದು.

2006ರ ಮಧ್ಯಭಾಗದಲ್ಲಿ ಏಳನೇ ಬಾರಿಗೆ ಅಧಿಕಾರಕ್ಕೆ ಬಂದ ಸಿಪಿಎಂ ಸರ್ಕಾರ ಸಿಂಗೂರು ಎಂಬ ಊರಿನ ಬಳಿ ಒಂದು ದೊಡ್ಡ ತಪ್ಪು ಮಾಡಿತ್ತು. ಅದು ಮಾಡಿದ ತಪ್ಪೇನೆಂದರೆ ಸುಮಾರು 997 ಎಕರೆ ಫಲವತ್ತಾದ ಜಮೀನನ್ನು ಟಾಟಾ ಕಂಪನಿಗೆ ನೀಡಿತ್ತು. ಒಂದು ಲಕ್ಷಕ್ಕಿಂತಲೂ ಕಡಿಮೆ ದರದಲ್ಲಿ ನ್ಯಾನೋ ಕಾರನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಟಾಟಾ ಕಂಪನಿ ಆ ಜಾಗವನ್ನು ಪಡೆದಿತ್ತು. ಕೈಗಾರಿಕೆಗಳು ಹೆಚ್ಚಿಲ್ಲದ ಪಶ್ಚಿಮ ಬಂಗಾಳದಂತಹ ಜಾಗದಲ್ಲಿ ಇಂತಹ ಕಾರ್ಖಾನೆ ಬಂದರೆ ಒಳ್ಳೆಯದು ಎಂದು ಸರ್ಕಾರದ ಲೆಕ್ಕಾಚಾರವಾಗಿದ್ದು ನಿಜವಾದರೂ ಫಲವತ್ತಾದ ಜಮೀನನ್ನು ಕಾರ್ಖಾನೆ ತಯಾರಿಕೆಗೆ ನೀಡಿ ಸರ್ಕಾರದಿಂದ ಪುಡಿಗಾಸು ಪಡೆದು ನಂತರ ಬೀದಿ ಪಾಲಾಗಲು ಕೆಲವು ರೈತರು ತಯಾರಿರಲಿಲ್ಲ. ಆದರೂ ಸಿಪಿಎಂ ಸರ್ಕಾರ ಒಲ್ಲದವರ ಹೊಲಗಳನ್ನೂ ಸಹ ಒತ್ತುವರಿ ಮಾಡಿಕೊಂಡು ಟಾಟಾ ಕಂಪನಿಗೆ ಆ ಹೊಲಗಳನ್ನು ಒತ್ತೆ ಇಡಲು ಹೋದಾಗ ಮಮತಾ ಬ್ಯಾನರ್ಜಿಗೆ ಹೋರಾಟ ಮಾಡಲು ಒಂದು ಸದಾವಕಾಶ ತೆರೆದುಕೊಂಡಿತು. ಒಂದು ಕಾರ್ಖಾನೆಯಿಂದ ಸಾವಿರ ಜನರಿಗೆ ಕೆಲಸ ದೊರೆಯಬಹುದಾದರೂ ಆ ಸಾವಿರ ಜನರು ಸ್ಥಳೀಯರೇ ಆಗಿರುವುದು ಕಷ್ಟ. ಆದ ಕಾರಣ ಫಲವತ್ತಾದ ಜಮೀನನ್ನು ಆಶ್ರಯಿಸಿದ್ದ ಸಾವಿರಾರು ಜನ, ಕಾರ್ಖಾನೆಯಿಂದ ಆಗುವ ಪರಿಸರ ಮಾಲಿನ್ಯವನ್ನು ಮನಗಂಡ ಜನ, ಹೋರಾಟಗಳು ತಮ್ಮ ಕರ್ತವ್ಯ ಎಂಬಂತೆ ಹೋರಾಟಕ್ಕಿಳಿಯುವ ಕೆಲವು ಹೋರಾಟಗಾರರು, ಹಾಗು ಲಾಸ್ಟ್ ಬಟ್ ನಾಟ್ ದ ಲೀಸ್ಟ್ ಬುದ್ದಿಜೀವಿಗಳು ಮಮತಾ ಬ್ಯಾನರ್ಜಿಯ ಹೋರಾಟಕ್ಕೆ ಜತೆಯಾದರು. ಈ ಹೋರಾಟ ನಿತ್ಯ ಪೇಪರ್ ನ ಮುಖಪುಟದ ಸುದ್ದಿಯಾಗುತ್ತಿದ್ದಂತೆ ಬೇಸರಗೊಂಡ ರತನ್ ಜೀ ಟಾಟಾ ಪಶ್ಚಿಮ ಬಂಗಾಳದಲ್ಲಿ ಮಾಡಬೇಕೆಂದಿದ್ದ ಟಾಟಾ ನ್ಯಾನೋ ಕಾರ್ಖಾನೆಯ ಕನಸನ್ನು ಕೈಬಿಟ್ಟಿದ್ದರು. ಸಿಂಗೂರಿನಲ್ಲಿ ಆಗಬೇಕಿದ್ದ ಕಾರ್ಖಾನೆ ಗುಜರಾತಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸ್ಥಾಪನೆಗೊಂಡಿತ್ತು. ಬಂಗಾಳದ ಜನರ ಹೋರಾಟದಿಂದ ಬೇಸತ್ತಿದ್ದ ರತನ್ ಜೀ "ನಾನು ಜೀವನದಲ್ಲಿ ಆಕೆಯನ್ನು (ಮಮತಾ ಬ್ಯಾನರ್ಜಿ) ಎಂದಿಗೂ ಮರೆಯುವುದಿಲ್ಲ" ಎಂಬ ಹೇಳಿಕೆಯನ್ನು ಮಾಧ್ಯಮದಲ್ಲಿ ನೀಡಿದ್ದರು. 

ಸಿಂಗೂರಿನ ಎಪಿಸೋಡ್ ನ ಜೊತೆಜೊತೆಗೆ ನಂದಿಗ್ರಾಮ್ ಎಂಬ ಜಾಗದಲ್ಲಿ ಸಾವಿರಾರು ಎಕರೆ ಜಾಗವನ್ನು ಸ್ಪೆಷಲ್ ಎಕಾಮಿನಲ್ ಝೋನ್ ನ ಸಲುವಾಗಿ ಸಿಪಿಎಂ ಸರ್ಕಾರ ಗೊತ್ತು ಮಾಡುತ್ತಿದ್ದಂತೆ ಅಲ್ಲಿನ ಸ್ಥಳೀಯ ಜನರಿಂದ ಮತ್ತೆ ತಕರಾರು ಶುರುವಾಯಿತು. ಸಿಪಿಎಂ ನ ಭದ್ರ ಮುಷ್ಟಿಯಲ್ಲಿದ್ದ ಆ ಜಾಗಕ್ಕೆ ಇತರರು ನುಸುಳುವುದು ಕಷ್ಟಕರವಾಗಿದ್ದ ದಿನಗಳವು. ಆಗ ಅಲ್ಲಿಯೂ ಒಂದು ಭೂ ಹೋರಾಟ ಸಮಿತಿ ಸ್ಥಾಪನೆಯಾಗಿ ಆ ಜಮೀನನ್ನು ಉಳಿಸಲು ದೊಡ್ಡ ಮಟ್ಟದ ಹೋರಾಟ ಶುರುವಾಯಿತು. ವಿಪರ್ಯಾಸವೆಂದರೆ ಆ ಹೋರಾಟದಲ್ಲಿ ಪೋಲೀಸರ ಗುಂಡಿಗೆ ಹದಿನಾಲ್ಕು ಜನರು ಹತ್ಯೆಯಾದರು. ಮಮತಾ ಬ್ಯಾನರ್ಜಿಗೆ ಹೋರಾಟ ಮಾಡಲು ಮತ್ತೊಂದು ಸ್ಟ್ರಾಂಗ್ ಬೇಸ್ ಸಿಕ್ಕಿತು. ಆ ಹೋರಾಟ ಉತ್ತುಂಗದಲ್ಲಿದ್ದ ಸ್ಥಿತಿಯಲ್ಲಿ ಪಂಚಾಯತ್ ಎಲೆಕ್ಷನ್ ಡಿಕ್ಲೇರ್ ಆಗಿ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂನ ಭದ್ರ ಕೋಟೆ ಛಿದ್ರಗೊಂಡು ತೃಣಮೂಲ್ ಗೆ ಹೆಚ್ಚು ಮೆಜಾರಿಟಿ ಬಂದಿತ್ತು. ಸಿಂಗೂರು, ನಂದಿಗ್ರಾಮ್ ಈ ಸ್ಥಳಗಳಲ್ಲಿ ಹೋರಾಡುವ ವೇಳೆ ಅಸಂಖ್ಯ ಸೆಲೆಬ್ರಿಟಿಗಳು, ಬುದ್ದಿಜೀವಿಗಳು ಮಮತಾ ಜೊತೆ ಸೇರಿ ಹೋಗಿದ್ದರು. ಮಾಧ್ಯಮವೂ ಸಹ ಸಿಪಿಎಂನ ಕೆಂಪು ಬಣ್ಣವನ್ನು ಬಿಟ್ಟು ತೃಣಮೂಲ್ ನ ಹಸಿರು ಬಣ್ಣದ ಕಡೆ ಆಕರ್ಷಿತಗೊಂಡಿತ್ತು. ಒಂದು ಪತ್ರಿಕೆಯ ಓದುಗನಾಗಿ ಮೇಲಾಗಿ ಹೊರಗಿನವನಾಗಿ ಪೇಪರ್ ನಲ್ಲಿ ಮೊದಲಿಗೆ ಸಿಪಿಎಂನ ಪರವಾಗಿ ಬರುತ್ತಿದ್ದ ಲೇಖನಗಳು ಜಾಹೀರಾತುಗಳು ತೃಣಮೂಲ್ ನ ಪರವಾಗಿ ಬರುತ್ತಿರುವುದನ್ನು ಗಮನಿಸುತ್ತಿದ್ದೆ. 

ಈ ಎರಡು ಹೋರಾಟಗಳು ರೈತರ ಪರವಾದರೆ ಮತ್ತೊಂದು ಹೋರಾಟ ಜನ ಸಾಮಾನ್ಯನೊಬ್ಬನ ಕುರಿತ ಹೋರಾಟವಾಗಿತ್ತು. ರಿಜ್ವಾನ್ ಎಂಬ ಹುಡುಗ ತೋಡಿ ಎಂಬ ಆಗರ್ಭ ಶ್ರೀಮಂತನ ಪ್ರಿಯಾಂಕ ಎಂಬ ಮಗಳನ್ನು ಪ್ರೀತಿಸಿ ಗುಟ್ಟಾಗಿ ಮದುವೆಯನ್ನೂ ಆಗಿಬಿಟ್ಟಿದ್ದ. ಅದೇಗೋ ಆ ವಿಷಯ ಪ್ರಿಯಾಂಕಳ ತಂದೆಗೆ ತಿಳಿದಿತ್ತು. ತದನಂತರ ರಿಜ್ವಾನ್ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ. ಪೋಲಿಸರೇನೋ ಆ ಸಾವನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಲು ಪ್ರಯತ್ನಿಸಿದರು. ಆದರೆ ಆ ಸಾವು ರಾಜಕೀಯ ಬಣ್ಣ ಪಡೆದು ತೋಡಿ ಕುಟುಂಬ ಆ ಯುವ ಪ್ರೇಮಿಯ ಸಾವಿಗೆ ಕಾರಣ ಎಂಬಂತಹ ಸತ್ಯ ಹೊರಬಿದ್ದಿತು. ಆ ಸಾವು ಆತ್ಮಹತ್ಯೆಯಲ್ಲ ಕೊಲೆ ಆ ಕೊಲೆ ಮಾಡಿದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಕ್ಕೆ ಇಳಿದವರು ಅದೇ ತೃಣಮೂಲ್ ಅದೇ ಮಮತಾ ಬ್ಯಾನರ್ಜಿ. ಹೀಗೆ ವಿಧ ವಿಧದ ಹೋರಾಟದ ಫಲವಾಗಿ ಮಮತಾ ಬ್ಯಾನರ್ಜಿಯ ಹೆಸರು ಎಲ್ಲೆಲ್ಲೂ ಹರಿದಾಡಲು ಶುರುಮಾಡಿದ ಪರಿಣಾಮ ತೃಣಮೂಲ್ ಪಕ್ಷ ಜನರನ್ನು ತಲುಪುವತ್ತ ಯಶಸ್ವಿಯಾಯಿತು ಎನ್ನಬಹುದು. ಮೊದಲಿಗೆ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಮೇಲುಗೈ ಸಾಧಿಸುತ್ತಾ ಬಂದ ತೃಣಮೂಲ್ 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 27 ಸೀಟುಗಳಲ್ಲಿ 19 ಸೀಟುಗಳನ್ನು ಗೆದ್ದುಕೊಂಡಿತ್ತು. ಅಚ್ಚರಿ ಎಂದರೆ 2004ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟನ್ನು ತೃಣಮೂಲ್ ಪಡೆದಿತ್ತು. ಆ ಸೀಟ್ ಮಮತಾ ಬ್ಯಾನರ್ಜಿಯವರದಾಗಿತ್ತು. ಈಗ 2014ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ್ ಸ್ಪರ್ಧಿಸಿದ 42 ಸೀಟುಗಳಲ್ಲಿ 34 ಸೀಟುಗಳನ್ನು ಪಡೆದುಕೊಂಡು ಪಶ್ಚಿಮ ಬಂಗಾಳದಲ್ಲಿ ತನ್ನ ಅಧಿಪತ್ಯ ಸ್ಥಾಪಿಸ ಹೊರಟಿದೆ. ಈ ಅಧಿಪತ್ಯ ಎಷ್ಟು ವರ್ಷ ಸಾಧ್ಯ?

ಯಾಕೆಂದರೆ, ಬೆಂಗಾಳದಲ್ಲಿ 34 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಸಿಪಿಎಂನ ಇತಿಹಾಸವನ್ನು ತಿರುವಿ ಓದಿದರೆ ಕಾಂಗ್ರೆಸ್ ಅನ್ನು ಬೆಂಗಾಳದಿಂದ ಅದು ಹೇಗೆ ನಿರ್ನಾಮ ಮಾಡಿತು ಎಂಬ ಮಾಹಿತಿ ದೊರೆಯಬಹುದು. ಇತ್ತೀಚಿನ ಮೇಲಿನ ತರಹದ ಘಟನೆಗಳು ಸಿಪಿಎಂ ಅನ್ನು ತೃಣಮೂಲ್ ಹೇಗೆ ವಿನಾಶದ ಅಂಚಿಗೆ ತಳ್ಳಿತು ಎಂಬುದನ್ನು ನಮಗೆ ಮನವರಿಕೆ ಮಾಡಿಕೊಡುತ್ತವೆ. ಅಂದರೆ ಕಾಲಾಂತರದಲ್ಲಿ ಇಲ್ಲಿ ಎಲ್ಲವೂ ಬದಲಾಗುತ್ತದೆ ಬದಲಾಗುತ್ತಿರುತ್ತದೆ. ಇಂಟರೆಸ್ಟಿಂಗ್ ಎಂದರೆ ಆ ಬದಲಾದ ಅಥವಾ ಬದಲಾಗುತ್ತಿರುವ ಕಾಲಗಟ್ಟದಲ್ಲಿ ನಾವು ನಿಂತಿರುತ್ತೇವೆ. ಆ ಬದಲಾವಣೆಗಳಿಗೆ ನಾವು ಸಾಕ್ಷಿಗಳಾಗಿರುತ್ತೇವೆ. ನಮಗಿಂತ ಇಪ್ಪತ್ತು ಮೂವತ್ತು ವರ್ಷ ಹಿರಿಯರಾದವರು ಅವರ ಕಾಲದಲ್ಲಾದ ಬದಲಾವಣೆಗೆ ಅವರು ಸಾಕ್ಷಿಯಾಗಿರುತ್ತಾರೆ. ನಮ್ಮ ಹಿರಿಯರು ನಾವು ಸಾಕ್ಷಿಯಾದ ರಾಜಕೀಯ ಘಟನೆಗಳನ್ನು ಅವಲೋಕಿಸಿದಾಗ ಬದವಲಾವಣೆಗಳಿಗೆ ದೊಡ್ಡ ಮಟ್ಟದ ಹೋರಾಟಗಳ ಅವಶ್ಯಕತೆ ಇದೆ ಎಂಬುದು ಮನವರಿಕೆಯಾಗುತ್ತದೆ. ಆ ಹೋರಾಟ ಮಾಡಲು ಸ್ಟ್ರಾಂಗ್ ಲೀಡರ್ ಶಿಫ್ ನ ಅವಶ್ಯಕತೆ ತುಂಬಾ ಇದೆ. ಯಾಕೆಂದರೆ ನನ್ನ ಪ್ರಕಾರ ವ್ಯಕ್ತಿಗಳಿಂದ ಕಟ್ಟಿದ ಗುಂಪುಗಳಿಗೆ ಏಕ ವ್ಯಕ್ತಿಯೊಬ್ಬನ ನಾಯಕತ್ವವಿಲ್ಲದಿದ್ದರೆ ಆ ನಾಯಕನಲ್ಲಿ ಬದಲಾವಣೆಯ ಹಂಬಲವಿಲ್ಲದಿದ್ದರೆ ಬದಲಾವಣೆಗಳು ಅಸಾಧ್ಯ. ಮಮತಾ ಬ್ಯಾನರ್ಜಿ ಹೇಗೆ "ಮಾ, ಮಾಟಿ, ಮಾನುಸ್" ಎಂಬ ಸ್ಲೋಗನ್ ನೊಂದಿಗೆ ಮುಖ್ಯಮಂತ್ರಿಯಾದರೋ, "ಅಹಿಂದ" ಅಂತ ಸಿದ್ದರಾಮಯ್ಯ ಅನ್ನುತ್ತಲೇ ಮುಖ್ಯಮಂತ್ರಿಯಾಗಿದ್ದಾರೆ. "Yes we can" ಅಂತ ಹೇಗೆ ಒಬಾಮ ಮೊದಲ ಆಫ್ರಿಕನ್ ಅಮೇರಿಕನ್ ಫ್ರೆಸಿಡೆಂಟ್ ಆದರೋ ಹಾಗೆಯೇ ಮೋದಿ "ಅಬ್ ಕೀ ಬಾರ್ ಮೋದಿ ಸರ್ಕಾರ್" ಅಂತ ಜನರಿಂದ ಅನ್ನಿಸಿ ಪ್ರಧಾನ ಮಂತ್ರಿಯಾಗುತ್ತಲಿದ್ದಾರೆ. ಈ ಎಲ್ಲರ ಹೋರಾಟದ ಹಾದಿಯನ್ನು ಅವಲೋಕಿಸಿದರೆ ಅವರು ಅಧಿಕಾರಕ್ಕೆ ಬಂದದ್ದು ಮತ್ತೊಬ್ಬರ ಹಗರಣಗಳನ್ನು ಜನಗಳಿಗೆ ಮನವರಿಕೆ ಮಾಡಿಕೊಡುತ್ತಲೇ ಎಂಬುದು ಸ್ಪಷ್ಟ. ಒಂದು ದೇಶದ, ರಾಜ್ಯದ ಅಭಿವೃದ್ಧಿಗೆ ಹಗರಣಗಳು ಬೇಡವಾದರೂ ಸರ್ಕಾರದ ಬದಲಾವಣೆಗೆ ಬಹುಶಃ ಹಗರಣಗಳು ಬೇಕಾಗುತ್ತವೆ. ಮತ್ತಷ್ಟು ಬೃಹತ್ ಹಗರಣಗಳಾಗುವವರೆಗೂ ಸರ್ಕಾರಗಳು ದಶಕದ ಕಾಲ ಆಡಳಿತ ನಡೆಸುತ್ತವೆ, ಆ ಹಗರಣಗಳನ್ನು ಬಯಲಿಗೆಳೆದು ಹೋರಾಟ ನಡೆಸಿದರೆ ಇಲ್ಲಿ ಎಲ್ಲವೂ ಬದಲಾಗುತ್ತದೆ. 

ಬರುವ ಹೊಸ ಸರ್ಕಾರಗಳು ಹಗರಣ ಮುಕ್ತ ಸರ್ಕಾರಗಳಾಗಿರಲಿ ಎಂಬ ಆಶಯದಿಂದ..

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
B.H.A Ravi
B.H.A Ravi
9 years ago

ಲೇಖನ ವಾಸ್ತವ ನೆಲೆಗಟ್ಟಿನಿಂದ ಕೂಡಿದೆ. ಅಭಿನಂದನೆಗಳು…

B C Girish
B C Girish
9 years ago

BahaLa chennagi vishleshaNe maadiddira..BadalavaNe anivaarya aadare hagaraNa moolaka badalavaNe bayasuvudu viparyasa..

Adigaru heluva…. iruvudellava bittu iradudaredege tudivude jeevana.. Change should happen with a positive, progressive and rational basis.. not on negative energies….

We should be happy that irrespective of the basis… somehow change is happening.

 

Gaviswamy
9 years ago

Good one boss

ವಿನೋದ್ ಕುಮಾರ್ ವಿ.ಕೆ.

ನಿಜಕ್ಕೂ ಒಳ್ಳೆಯ ವಿಶ್ಲೇಷಣೆ .. ಬದಲಾವಣೆ ಜಗದ ನಿಯಮ.. ನಾವು ಒಪ್ಪಿ ಸ್ವೀಕರಿಸಬೇಕಷ್ಟೆ…!!

Aravinda
9 years ago

ಬಹಳ ಚನ್ನಾಗಿದೆ…

5
0
Would love your thoughts, please comment.x
()
x