ಬೆಳಕಿನ ಕಡೆಗೆ: ಸುಮನ್ ದೇಸಾಯಿ


ಭಾಳ ವರ್ಷದ್ದ ಮ್ಯಾಲೆ ನಮ್ಮ ಅಮ್ಮನ ತವರೂರಾದ ಹಳ್ಳಿಗೆ ಹೊಗಬೇಕಾದ ಪ್ರಸಂಗ ಬಂತು. ಸಣ್ಣಂದಿರತ ಅಲ್ಲೆ ಆಡಿ ಬೆಳೆದು ದೊಡ್ಡವರಾದ ಸಿಹಿ ನೆನಪುಗಳ ಗಂಟನ ಇತ್ತು. ಊರು ಹೇಂಗೆಂಗ ಹತ್ರ ಬರಲಿಕತ್ತು ಹಂಗಂಗ ಹಳೆನೆನಪುಗಳು ತಾಜಾ ಆಗಲಿಕ್ಕತ್ತುವು. ಊರು ಅಂದಕೂಡಲೆ ಪ್ರೀತಿಯ ಗೆಳತಿ ಸುಧಾ ನೆನಪಾಗಲಿಕತ್ತಳು. 

ಗಂಡ, ಮನಿ ಮಕ್ಕಳು ಸಂಸಾರ ಅಂತ ನಂದೆ ಆದಂಥಾ ಲೋಕದೊಳಗ ಮುಳುಗಿ ಹೋಗಿದ್ದೆ. ಹಿಂಗಾಗಿ ಊರಿನ ಯಾವ ಸುದ್ದಿಗೊಳು ಗೊತ್ತಾಗ್ತನ ಇರಲಿಲ್ಲ. ಆವಾಗೊಮ್ಮೆ ಇವಾಗೊಮ್ಮೆ ಊರಿನ ಸುದ್ದಿ ಕಿವಿಗೆ ಬಿಳತಿದ್ವು. ಈಗೊಂದ ಹದಿನೈದು ವರ್ಷ ಹಿಂದಿನ ಮಾತು, ಅಜ್ಜಿ ಅಂದಿದ್ದ ನೆನಪು.," ವೆಂಕಣ್ಣನ ಮಗಳು ಸುಧಿ ಯಾರೊ ಮಾದರ ಹುಡಗನ್ನ ಜೋಡಿ ಓಡಿ ಹೋಗೆದಂತ ಖೋಡಿ, ಪಾಪ ವೆಂಕಣ್ಣಗ ಊರಾಗ ಭಾಳ ಅವಮಾನ ಆಗೆದಂತ, ಮತ್ತ ಬ್ರಾಹ್ಮಣ ಸಂಘದವರು ಬಾದರಾಯಣದೇವರ ಗುಡಿದು ಯಜಮಾನಕಿನು ಕಸಗೊಂಡಾರಂತ, ಪಾಪ ಭಾಳ ಸಜ್ಜನ ಮನಶ್ಯಾ ಅವಗ ಹಿಂಗ ಆಗಬಾರದಿತ್ತು." ಅಂತ ನಮ್ಮ ಮಾಮಿ ಮುಂದ ಹೇಳೊದ ಕೇಳಿ ಎನೊ ಒಂಥರಾ ಕುತುಹಲಾಗಿತ್ತು, ಸುಧಾನ್ನ ನೋಡಿ ಮಾತಾಡಬೇಕನಿಸಿತ್ತು. ಆದ್ರ ಅದು ಸಾಧ್ಯ ಆಗಲೇ ಇಲ್ಲಾ. ಹಿಂಗಾ ನಾ ನನ್ನ ಅಭ್ಯಾಸಾ ಕಾಲೇಜು ಅನಕೊತ ವ್ಯಸ್ತ ಆಕ್ಕೊತ ಹೋದೆ. ಸುಧಾನ ಈ ಪ್ರಸಂಗ ನೆನಪ ಹಾರಕೊತಹೊತು.

ಆದ್ರ ಇಷ್ಟ ವರ್ಷದ ಮ್ಯಾಲೆ ಈಗ ಮತ್ತ ಆ ಅಡಿಕ್ಕೊಂಡ ಕೂತ ನೆನಪುಗಳೆಲ್ಲಾ ಪರದೆ ಸರಿಸಿ ಹೋರಗ ಬಂದಿದ್ವು. ಊರು ಬಂದಿತ್ತು. ಮನಿಗೆ ಹೋಗಿ ಕೈಕಾಲು ತೊಳೆದು ಸ್ವಲ್ಪ ಹೊತ್ತು ಆರಾಮ ಕೂಡಬೇಕನ್ನೊದ್ರಾಗ, ವೇಂಕಣ್ಣ ಮಾಮಾ ಬಂದು ಅವರ ಮನಿಗೆ ಊಟಕ್ಕ ಕರದ ಹೋಗಿದ್ದಾ. ವೇಂಕಣ್ಣ ಮಾಮಾ ಅವರದು  ಅದ ಹಳ್ಳಿಯ  ಹಳೆಯಕಾಲದ ದೊಡ್ಡ ಮನಿ. ಸುಧಿ ಇಲ್ಲದ ಮನಿ ಯಾಕೊ ಬ್ಯಾಸರನಿಸ್ತು. ಅಷ್ಟರಾಗ ಸುಧಾನ ಅಮ್ಮ ಲೀಲಾಮಾಮಿ ಒಳಗಿಂದ ಬಂದ್ರು. ಯಾಕೊ ಮಾಮಿ ಭಾಳ ಸೊರಗಿಧಂಗ ಅನಿಸ್ತು. ಮಾಮಿ ಯಾವಾಗಲು ಭಾಳ ಸಮಾಧಾನ ಮತ್ತ ಪ್ರೀತಿ ಅಂತಃಕರಣದ ಮನಷ್ಯಾಳು. ನನ್ನ ಹತ್ರ ಕೂತು ಪ್ರೀತಿಯಿಂದ ಎಲ್ಲಾ ಸುದ್ದಿ ಕೇಳಿದ್ಲು. ನನ್ನ ಬಗ್ಗೆ ಮತ್ತ ಮಕ್ಕಳ ಬಗ್ಗೆ ಕೇಳಿ ಆಕೀಗೆ ಭಾಳ ಖುಶಿ ಆಧಂಗ ಇತ್ತು. ಯಾಕೊ ಮಾಮಿ ಕಣ್ಣಾಗ ಎನೋ ಕಳಕೊಂಡ ನಿರಾಶೆಯ ನೆರಳು ಕಾಣಿಸ್ಲಿಕತ್ತಿತ್ತು. ಅಷ್ಟರಾಗ ಮಾಮಾನ ಪೂಜಾನು ಮುಗ್ದಿತ್ತು, ಎಲ್ಲಾರಗೂ ತಿರ್ಥಾ ಕೊಟ್ಟಾ, ಮಾಮಿ ಒಳಗ ಹೋಗಿ ಎಲ್ಲಾರಗೂ ಊಟಕ್ಕ ಎಲಿ ಹಾಕಿದ್ಲು, ಲೀಲಾಮಾಮಿ ಕೈಯಾಗಿನ ರುಚಿ ರುಚಿ ಅಡಗಿ ಉಂಡು ಭಾಳ ವರ್ಷ ಆಗಿತ್ತು. ಮಸ್ತ ಭಾರಿ ಊಟಾ ಮಾಡಿ, ಪಡಸಾಲ್ಯಾಗ ಕುತು ಎಲಿ ಅಡಕಿ ಹಾಕ್ಕೊಳಿಕತ್ತಾಗ, ಮಾಮಿ ಬಂದು ಹತ್ರ ಕೂತು ಎಲಿ ತಗೊಂಡು ನನಗಂತ ಅಡಕಿಪುಡಿ ಯಾಲಕ್ಕಿ ಹಾಕಿ ವೀಡಾ ಮಾಡ್ಲಿಕತ್ಲು. 

ನಾನು ಕೇಳಲ್ಯೊ ಬ್ಯಾಡೊ ಅಂತ ಅನುಮಾನಿಸಿಕೊತ, ಕೇಳಿದೆ ಮತ್ತ ಸುಧಿ ಹೇಂಗಿದ್ದಾಳ ಮಾಮಿ, ನಿಂಗ ಭೆಟ್ಟಿ ಆಗಿರತಾಳೆನು? ಇದಾ ಊರಾಗ ಇದ್ದಾಳೆನು ಅಂತ ಕೇಳಿದೆ?" ಅದಕ್ಕ ಮಾಮಿ ಅಸಹಾಯಕ ಧ್ವನಿಯೊಳಗ ಎಲ್ಲಾನು ಹೇಳ್ಲಿಕ್ಕೆ ಶುರು ಮಾಡಿದ್ಲು." ಇಲ್ಲೆ ಇದ್ದಾಳವಾ ನಮ್ಮ ಹೊಟ್ಟಿ ಉರಸಲಿಕ್ಕೆ ಇದ ಊರಾಗ ಇದ್ದಾಳ. ಊರ್ ಹೊರಗ ಜನತಾ ಮನಿಯೊಳಗ ಅತ್ತಿ, ಮಾವಾ, ಗಂಡ ಮತ್ತ ನಾಲ್ಕ ಮಕ್ಕಳ ಜೊಡಿ ಇದ್ದಾಳ. 

ಕಡಿ ಮಗಳಂತ ಎಷ್ಟ ಅಚ್ಛಾದಿಂದ ಬೇಳ್ಸಿದ್ವಿ ಸುಧಿನ್ನ, ಅವತ್ತ ಆಕಿದು ಮ್ಯಾಟ್ರಿಕ್ ಪರಿಕ್ಷಾದ ರಿಸಲ್ಟ ಬಂದಾಗ ನಮಗೆಲ್ಲಾ ಎಷ್ಟ ಖುಷಿ ಆಗಿತ್ತು. 93% ರಷ್ಟು ಮಾಡಿದ್ಲು, ನಿಮ್ಮ ಮಾಮಾ ಅಂತು ಊರಿಗೆ ಸಿಹಿಊಟಾ ಹಾಕ್ಸಿದ್ದರು. ಇನ್ನು ನೆನಪದ ನಂಗ ಇವ್ರು ಎಷ್ಟ ಹೌಸಿಲೆ ಸಾಯಿನ್ಸ ಕಾಲೇಜಿಗೆ ಸುಧಾನ ಎಡ್ಮಿಷನ್ ಮಾಡಿಸಿ ಬಂದಿದ್ರು. ಅದ ನಾವ ಮಾಡಿದ್ದ ದೊಡ್ಡ ತಪ್ಪ ಆತ ನೋಡ. ಮದಲನೆ ವರ್ಷ ಯಾವ ಅಡಚಣಿ ಇಲ್ಲದ ಕಳಿತು. ಯಥಾಪ್ರಕಾರ ಸುಧಾ ಛಲೊ ಮಾರ್ಕಸ್ ತಗೊಂಡು ಪಾಸಾದ್ಲು. ಕಾಲೇಜನ್ಯಾಗ ಆಟದಾಗ, ಎಲ್ಲಾ ಸ್ಪರ್ಧೆಗಳೊಳಗ ಮುಂದ ಇರತಿದ್ಲು. ಆದರ ಎರಡನೆ ವರ್ಷದ ಕಡಿ ಕಡಿಕ ಯಾಕೊ ಆಕಿ ಬಗ್ಗೆ ಅಲ್ಲೊಂದ ಇಲ್ಲೊಂದ ಅಪಸ್ವರಾ ಕೇಳಸ್ಲಿಕತ್ವು. ಆದರ ಮಗಳಮ್ಯಾಲಿನ ಹುಚ್ಚು ವಿಶ್ವಾಸಾ ನಮ್ಮ ಕಣ್ಣ ಕುರುಡ ಮಾಡಿದ್ವು. ಪಿಯುಸಿ ಎರಡನೆ ವರ್ಷದ ರಿಸಲ್ಟ ಬಂದಿತ್ತು,  85% ನಂಗ ಮಾಡಿದ್ಲು. ಬಿಎಸ್ಸಿ. ಗೆ ಎಡಮಿಷನ್ ಮಾಡಸ್ಲಿಕ್ಕಂತ ಕಾಲೇಜಿಗೆ ಹೋದಾಗ ಜೋಶಿ ಮಾಸ್ತರು ಇವ್ರನ್ನ ಬಾಜುಕ ಕರಕೊಂಡ ಹೋಗಿ " ಮತ್ತ ಆಚಾರ ನಾ ಹಿಂಗ ಹೇಳ್ತೇನಿ ಅಂತ ತಪ್ಪ ತಿಳ್ಕೊಬ್ಯಾಡ್ರಿ  ಮತ್ತ ನಾ ಒಂದ ವಿಚಾರ ಹೇಳತೇನಿ, ನಿಮ್ಮ ಮಗಳನ್ನ ಧಾರವಾಡಕ್ಕರ ಇಲ್ಲಂದ್ರ ಬ್ಯಾರೆ ಯಾವದರ ಕಾಲೇಜಿಗೆ ಹೆಸರ ಹಚ್ಚರಿ ಇಲ್ಲಾಂದ್ರ ಛೊಲೊ ವರಾ ನೋಡಿ ಮದವಿ ಮಾಡಿಬಿಡ್ರಿ. ಆದ್ರ ಇಲ್ಲೆ ಈ ಊರಾಗ ಕಾಲೇಜಿಗೆ ಮಾತ್ರ ಹಚ್ಚಬ್ಯಾಡ್ರಿ ಅಂತ ಹೇಳಿದ್ದ ಕೇಳಿ, ಸುಧಾನ್ನ ಮನಿಗೆ ಕರಕೊಂಡ ಬಂದು ವಿಚಾರ ಮಾಡಿದಾಗ ಗೊತ್ತಾತು ಆಕಿ ಊರಹೊರಗ ಮಾದರ ಓಣ್ಯಾಗ ಬಿದರಬುಟ್ಟಿ ಮಾಡೊ ಲಕ್ಕಪ್ಪನ ಮಗಾ ಶಿವಪ್ಪನ ಪ್ರೀತಿ ಮಾಡ್ಲಿಕತ್ತಿದ್ಲಂತ. ಶಿವಪ್ಪ ಸಾಯಿನ್ಸ ಕಾಲೇಜಿನ ಹತ್ರ ಇದ್ದ ಕ್ಯಾಂಟೀನ್ ನ್ಯಾಗ ಕೆಲಸಾ ಮಾಡತಿದ್ದಾ, ಇಕಿ ಕ್ಯಾಂಟೀನಿಗೆ ಹೋದಾಗ ನೋಡಿ ನೋಡಿನ ಇವರಿಬ್ಬರ ಪ್ರೀತಿ ಶುರು ಆಗಿದ್ದು. ಸುಧಾ ಹೇಳಿದ್ದ ಈ ಮಾತ ಕೇಳಿ ನಿಮ್ಮ ಮಾಮಾ ದಂಗ ಬಡಧಂಗ ಕುತಬಿಟ್ರು. ಮುಂದ ವಾರ ಹದಿನೈದ ದಿನಾ ಅವರು ತಮ್ಮ ಸುರತ್ಯಾಗ ಇದ್ದಿದ್ದಿಲ್ಲಾ. ತಮ್ಮನ್ನ ತಾವು ಸಂಭಾಳಿಸಿಕೊಂಡ ಮ್ಯಾಲೆ, ಒಂದ ದಿನಾ ಒಂದ ನಾಲ್ಕೈದು ಟಪಾಲ ಕಾರ್ಡ ತಗೊಂಡಬಂದು ತಮ್ಮ ತಂಗಿಗೆ, ತಮ್ಮಗ, ಮತ್ತ ಧಾರವಾಡನ್ಯಾಗ ಇದ್ದ ಹಿರೆ ಮಗಳಿಗೆ ಯಾವರ ವರಾ ಇದ್ರ ಲಗೇಚ ಹೇಳ್ರಿ. ಮಗಳಿಗೆ ಮದವಿ ಮಾಡಬೇಕಂತ ಮಾಡೇನಿ ಅಂತ ಪತ್ರಾ ಬರದ ಹಾಕಿದ್ರು. ಆದ್ರ ಆ ದೈವದ ನಿರ್ಧಾರನ ಬ್ಯಾರೆ ಇತ್ತ ಅನಿಸ್ತದ, 

ನಾವು ಇಲ್ಲೆ ಹೇಂಗೆಂಗ ವರಾ ನೋಡೊ ಗಡಿಬಿಡಿಯೊಳಗ ಇದ್ವ್ಯೊ, ಆಕಿ ಮನಸು ಇದೆಲ್ಲಾದರಿಂದ ತಪ್ಪಿಸಿಕೊಂಡು ಹೋಗೊ ತಯಾರಿ ನಡಸಿತ್ತು. ಒಂದ ದಿನಾ ಬೆಳಗ ಹರಿಯೊದ್ರೊಳಗ ನಮ್ಮನ್ನೆಲ್ಲಾ ಝಾಡಿಸಿ ಒದ್ದು, ಅವನ ಜೋಡಿ ಊರು ಬಿಟ್ಟು ಹೋಗೆಬಿಟ್ಟಿದ್ಲು. ನಿಮ್ಮ ಮಾಮಾ ಅಂತು ಪೂರಾ ಕುಸದಬಿಟ್ಟರು. ಆಮ್ಯಾಲೆ ಆಗಿದ್ದ ಅವಮಾನಗೊಳ ಒಂದ ಎರಡ, ಊರಾಗ ಮಾರಿ ಎತ್ತಿ ಅಡ್ಯಾಡೊ ಹಂಗಿದ್ದಿಲ್ಲಾ. ಬ್ರಾಹ್ಮಣ ಸಮಾಜದಾಗ ಬಹಿಷ್ಕಾರಾ ಹಾಕೊದೊಂದ ಬಾಕಿ ಇತ್ತ ನೋಡ ಅಷ್ಟ ಅವಹೇಳನಾ ಮಾಡಿದ್ರು. ಹತ್ತ ತಲಿಯಿಂದ ಬಂದ ಬಾದರಾಯಣ ದೇವರ ಗುಡಿದು ಯಜಮಾನಕಿನು ಕಸಗೊಂಡ್ರು. ಸುಧಾ ಓಡಿಹೋಗಿದ್ದಕ್ಕಿಂತ ಇವರಿಗೆ ಗುಡಿ ಪೂಜಾ ಮತ್ತ ದೇವರ ಸನ್ನಿಧಿ ತಪ್ಪಿದ್ದಕ್ಕ ತಡಕೊಳ್ಳಾರದ ಸಂಕಟಾಗಿತ್ತು. ವರ್ಷ ದಿಡ ವರ್ಷ ಆದಿಂದ ಸುಧಾ ಅವನ ಜೊಡಿ ಮತ್ತ ಊರಿಗೆ ವಾಪಸ ಆಗಿ ಅವನ ಜೋಡಿ ಇದ ಊರಾಗ ಸಂಸಾರ ಮಾಡಲಿಕ್ಕೆ ಶುರು ಮಾಡಿದ್ಲು. ಆದ್ರ ನಿಮ್ಮ ಮಾಮಾ ಆಕಿ ಸತ್ತಾಳಂತ ತಲಿ ಮ್ಯಾಲೆ ನೀರ್ ಹಾಕ್ಕೊಂಡ ಆಕಿ ಹೆಸರಲೆ ಎಳ್ಳು ನೀರು ಬಿಟ್ಟಬಿಟ್ಟಿದ್ರು. ಆದ್ರ ತಾಯಿ ಜೀವ ನಂದು ಆಕಿನ್ನ ನೋಡಬೇಕನಸ್ತದ ಆದ್ರ ಎನಮಾಡಲಿ, ಮಕ್ಕಳು, ಸೊಸೆಂದ್ರು, ಮೊಮ್ಮಕ್ಕಳ ಸುಖಾ ಕಾಣಬೇಕಂದ್ರ ಎಲ್ಲಾದಕ್ಕು ಪಡಕೊಂಡ ಬಂದಿರಬೇಕನೋಡು. ಎಲ್ಲಾ ನಮ್ಮ ಪ್ರಾರಬ್ಧಕರ್ಮ ನಾವ ಅನುಭೊಗಸಬೇಕು. ಹಿರೇ ಮಗಳಿಗೆ  ಮಕ್ಕಳ ಭಾಗ್ಯಾನ ಇಲ್ಲ, ಇದ್ದೊಬ್ಬ ಮಗಾ ಛಂದಾಗಿ ಕಲಿಲಿಲ್ಲಾ, ಮನ್ಯಾಗಿನ ಆಸ್ತಿ ಕರಗಿಸ್ಕೊತ ಚೈನಿ ಮಾಡತಾನ, ಇನ್ನ ಕಡಿ ಮಗಳು ಶಾಣೆ ಇದ್ದಾಳ ಭಾಳ ಅಷ್ಟ ಕಲಿಲಿ ಎನರೆ ಸಾಧಸಲಿ ಅಂತ ಆಶಾ ಮಾಡಿದ್ವಿ ಅದು ಮಣ್ಣ ಮೂರಪಾಲಾತು. ನಮ್ಮ ನಸಿಬನ ಖೊಟ್ಟಿ ಅದ ನೋಡು ಅಂತಾ ಸುದ್ದಿ ಎಲ್ಲಾ ಹೇಳಿ ಮುಗಿಸಿ ಮಾಮಿ ಕಣ್ಣಾಗ ನೀರ ತಗದದ್ದನ್ನ ನೋಡಿ ಭಾಳ ಸಂಕಟಾತು ಮತ್ತ ಸುಧಿ ಮ್ಯಾಲೆ ಭಾಳ ಸಿಟ್ಟೂನು ಬಂತು. ಊರಿಗೆ ವಾಪಸ ಹೋಗೊದ್ರಾಗ ಒಂದ ಸಲಾ ಸುಧಾನ್ನ ಭೆಟ್ಟಿಯಾಗಿ ಅಕಿ ಮಾಡಿದ ತಪ್ಪನ್ನ ಆಕಿಗೆ ತಿಳಿಸ್ಬೇಕಂತ ಅನಕೊಂಡೆ. 

ಮರದಿನಾ ಮುಂಝಾನೆ ಹತ್ತ ಘಂಟೆ ಸುಮಾರಿಗೆ ಜನತಾಮನಿ ಎಲ್ಲವ ಅಂತ ಕೇಳಿ ತಿಳಕೊಂಡು ಸುಧಾನ್ನ ಭೆಟ್ಟಿ ಆಗಲಿಕ್ಕೆ ಹೊಂಟೆ.ಹೊಳಿ ದಂಡಿ ಅತ್ಲಾಕಡೆ ಕಡಿಕ ಒಂದಿಪ್ಪತ್ತೈದ ಮನಿ ಇದ್ವು. ಹಂಗ ಮನಿಗೊಳ ಸಾಲಿನ್ಯಾಗ ಹುಡಕಿಕೊತ ಹೊಂಟಿದ್ದೆ ಸಹಸಾ ಈ ಹೊತ್ತಿನ್ಯಾಗ ಯಾರು ಇರುದಿಲ್ಲಾ ಎಲ್ಲಾರು ದುಡಕೊಂಡ ತಿನ್ನೊ ಮಂದಿ ಮುಂಝಾನೆನ ಕೆಲಸಕ್ಕ ಹೋಗಿಬಿಟ್ಟಿರತಾರ. ಎಲ್ಲೆ ಸುಧಿನು ಕೆಲಸಕ್ಕ ಹೋಗಿದ್ಲಂದ್ರ ಅಂತ ವಿಚಾರನು ಬಂತು, ಆದರ ಅಂಥಾ ಕಲ್ಪನಾ ಮಾಡ್ಕೊಳಿಕ್ಕೆ ಯಾಕೊ ಮನಸು ಒಪ್ಪಲಿಲ್ಲಾ. ಎಂಥಾ ಹುಚ್ಚತನಾ ಮಾಡಿದ್ಲು ಸುಧಿ, ಕಲತು ಮುಂದ ಬಂದಿದ್ರ ಇಷ್ಟೊತ್ತಿಗೆ ಯಾವದರ ದೊಡ್ಡ ಆಫೀಸರ ನೌಕರಿಯೊಳಗ ಇರಬಹುದಿತ್ತು. ಹೀಂಗ ವಿಚಾರ ಮಾಡಕೊತ ಹೊಂಟಿದ್ದೆ ಅಷ್ಟರಾಗ ಪರಪ್ಪಾ ಹೆಂಡಿ ತುಂಬಲಿಕ್ಕೆ ಬಿದರ ಕೇರಸಿ(ಬುಟ್ಟಿ) ತರಲಿಕ್ಕಂತ ಅಲ್ಲೆ ಬಂದಿದ್ದಾ. ನನ್ನ ನೋಡಿ "ಅವ್ವಾರ ಗೆಳತಿನ್ನ ಭೇಟ್ಟ್ಯಾಗಾಕ ಬಂದಿರೇನ್ರಿ, ಬರ್ರಿ ಮನಿ ತೋರಸ್ತೇನಿ ಅಂತ ಹೇಳಿ ಕರಕೊಂಡಹೋದಾ. ಅಷ್ಟರಾಗ ಪರಪ್ಪನ ಧ್ವನಿ ಕೇಳಿ ಸುಧಿ ಹೊರಗ ಬಂದ್ಲು. ಇಷ್ಟ ವರ್ಷದ ಮ್ಯಾಲೆ ಆಕಿನ್ನ ನೋಡಿ ನಂಗ ಭಾಳ ಖುಷಿ ಆಗಿತ್ತು, ಸುಧಿ ಮದ್ಲ ಹೇಂಗಿದ್ಲೊ ಈಗೂ ಹಂಗ ಇದ್ಲು. ಆಕಿನು ಅಷ್ಟ ಒಂದ ನಿಮಿಷದಾಗ ನನ್ನ ಗುರುತು ಹಿಡದ್ಲು. ಮದಲಿನಂಗ ಖುಷಿಯಿಂದ ನನ್ನ ಕೈ ಹಿಡ್ಕೊಂಡ ಒಳಗಹೋದ್ಲು. ಮನಿ ಮುಂದ ಶಗಣಿಲೇ ಸಾರಿಸಿ ರಂಗೋಲಿ ಹಾಕಿದ್ಲು, ಪುಟ್ಟದಾದ ಎರಡ ಖೊಲಿ ಮನಿ ಅದು, ಸ್ವಚ್ಛ ಥಳಾ ಥಳಾ ಹೋಳಿತಿತ್ತು, ಅಡಗಿ ಮನ್ಯಾಗ ದೇವರ ಮಾಡಾ, ದೇವರ ಮುಂದ ಜೋಡಿ ದೀಪಾ ಹಚ್ಚಿದ್ಲು. ಎಲ್ಲೆ ನೋಡಿದ್ರಲ್ಲೆ ಸ್ವಚ್ಛ, ಮನಿ ನೋಡಿದ್ರ ಮನಸಿಗೆ ಶಾಂತ ಅನಿಸ್ತಿತ್ತು, ಅಲ್ಲೆ ಅಕಿ ಚಹಾ ಮಾಡಕೊತ ನನ್ನ ಬಗ್ಗೆ ಮಕ್ಕಳ ಬಗ್ಗೆ ನಮ್ಮ ಮನಿ ಬಗ್ಗೆ ತಿಳ್ಕೊಂಡ್ಲು. ನಾನು ಕೇಳಿದೆ “ಸುಧಿ ಆರಾಮಿದ್ದಿಯೆನಲೇ” ಅಂತ, ಅದಕ್ಕ ಅಕಿ ಸಂತ್ರುಪ್ತಿಯಿಂದ ಭಾಳ ಆರಾಮ ಇದ್ದೇನಿ ಅಂತ ಹೇಳಿದ್ಲು, ನಾ ಆಶ್ಚರ್ಯದಿಂದ ಆಕಿನ್ನ ನೋಡ್ತಿದ್ದೆ. ಮಾಮಿ ಇಕಿ ಬಗ್ಗೆ ಹೇಳಿದಾಗ ನನ್ನ ಮನಸಿನಾಗ ಯಾವದೊ ಮಾಸಲು ಮಾಸಲು ಚಿತ್ರಾ ಮೂಡಿತ್ತು. ಆದ್ರ ಇಲ್ಲೆ ನೋಡಿದ್ರ ಸ್ವಚ್ಛ ನಿರ್ಮಲ ಚಿತ್ರನಾ ನೋಡಿದೆ. ಮನ್ಯಾಗ ಯಾರು ಕಾಣಸ್ಲಿಲ್ಲಾ, ಎಲ್ಲೆ ಹೋಗ್ಯಾರ ಅಂತ ಕೇಳಿದೆ, ಅದಕ್ಕ ಅಕಿ "ನಮ್ಮನಿಯವರು ಮುಂಝಾನೆನ ನಮ್ಮ ಅತ್ತಿ, ಮಾವಾ, ಮತ್ತ ಮಕ್ಕಳನ್ನ ಕರಕೊಂಡು ಯಲ್ಲಮ್ಮ ಗುಡ್ಡಕ್ಕ ಹೋಗ್ಯಾರ ಈಗ ಬರೊ ಹೊತ್ತಾಗೇದ ಅಂತ ಹೇಳಿದ್ಲು. “ಸುಧಿ ನೀ ತಪ್ಪ ಮಾಡಿದಿ ಅಂತ ಯಾವಾಗು ನಿಂಗ ಅನಿಸ್ಲಿಲ್ಲೆನು” ಅಂತ ಕೇಳಿದೆ. ಅದಕ್ಕ ಆಕಿ ಶಾಂತ ಆಗಿ ಇಲ್ಲಾ ಅಂತ ಗೋಣ ಹಾಕಿದ್ಲು. ಆಕಿ ತಿರಗಿ ನನ್ನ ಒಂದ ಪ್ರಶ್ನೆ ಕೇಳಿದ್ಲು, ನಾ ಆವತ್ತ ಅಪ್ಪ ಹೇಳಿದಂಗ ಬ್ಯಾರೆ ವರನ್ನ ನೋಡಿ ಮದವಿ ಮಾಡಕೊಂಡ ನನ್ನ ಪ್ರೀತಿಗೆ ಕೈ ಕೊಟ್ಟ ಹೊಗಿದ್ರ, ಅದು ಸರಿ ಇರತಿತ್ತೇನು? ವಿಚಾರ ಮಾಡ ಸುಮಿ.. ಆವಾಗ ನಾ ಈ ನಿರ್ಧಾರ ತಗೊಂಡಿದ್ದಿಲ್ಲ ಅಂದ್ರ ಇವತ್ತ ನಾ ಈ ಜೀವನದ ಪರಿಕ್ಷಾ ಒಳ್ಗ ಸೊತ ಹೊಗತಿದ್ದೆ. ನಾ ಕಾಲಿಟ್ಟ ಮನಿ ಮಂದಿಗೆ ನನ್ನ  ಪ್ರೀತಿ ಅಂತಃಕರಣ ಮತ್ತ ಕರ್ತವ್ಯಾ ಇದ್ಯಾವದನ್ನು ಪ್ರಾಮಾಣಿಕತನದಿಂದ ಕೊಡಲಿಕ್ಕಾಗತಿದ್ದಿಲ್ಲಾ.  ಹಂಗೆನಾರಾ ಆಗಿದ್ರ ನಾ ಛೊಲೊ ಹೆಂಡತಿ, ಸೊಸಿ, ತಾಯಿ, ಆಗಲಿಕ್ಕೆ ಸಾಧ್ಯಾನಾ ಇದ್ದಿದ್ದಿಲ್ಲಾ. 

ನನ್ನ ಪ್ರಕಾರಾ ನಾವು ಮದವಿ ಮಾಡಕೊಂಡ ಗಂಡನ್ನ ಆತನ ಸಂಪೂರ್ಣ ಗುಣಾವಗುಣಗಳ ಜೊತಿಗೆ ಸ್ವೀಕಾರ ಮಾಡಬೇಕು, ಅಷ್ಟ ಅಲ್ಲಾ ಅವರ ಮನ್ಯಾಗಿನ ಮಂದಿನ್ನ, ಅವರ ಸುತ್ತಮುತ್ತಲಿನ ಪರಿಸರನಾ ಮತ್ತ ಆತನ ಹಡದವರು ಮತ್ತ ಬೆನ್ನಿಲೆ ಬಿದ್ದವರನ ಸುಧ್ಧಾ ನಮ್ಮವರು ಅಂತ ತಿಳ್ಕೊಬೇಕು. ಇದೆಲ್ಲಾ ಮನಸ್ಸಿನಾಗ ನಮ್ಮವರಾಗೊರ ಬಗ್ಗೆ ಪ್ರೀತಿ ಇದ್ರ ಮಾತ್ರಾ ಸಾಧ್ಯಾ ಆಗತದ, ಇಂಥಾ ಪರಿಸ್ಥಿತಿಯೊಳಗ ನನ್ನ ಮನಸ್ಸಿನಾಗ ಬ್ಯಾರೆ ಯಾರನೊ ಇಟಗೊಂಡು, ಮತ್ತೊಬ್ಬರ ಹೆಂಡತಿ ಆಗಿ ನಾ ಎಲ್ಲಾರಗು ಸುಖಾ ಸಂತೋಷ ಕೊಡ್ಲಿಕ್ಕೆ ಹೆಂಗ ಸಾಧ್ಯಾ ಇತ್ತು. ನನ್ನ ದೄಷ್ಟಿಯೊಳಗ ನಾ ಪೂರ್ತಿ ಕೀಳಮಟ್ಟಕ್ಕ ಇಳದಹೊಗತಿದ್ದೆ. ಈಗ ನಾನು ನನ್ನ ಜೀವನದೊಳಗ ತೄಪ್ತಿಯಿಂದ ಇದ್ದೇನಿ. ಪ್ರೀತಿ ಮಾಡೊ ಗಂಡಾ, ಅತ್ತಿ ಮಾವಾ ಮದಲ ಕಿರಿ ಕಿರಿ ಮಾಡಿದ್ರು,ಆದರ ಇಗೆನಿಲ್ಲಾ ಭಾಳ ಅಂತಃಕರಣದಿಂದ ನೋಡ್ಕೊತಾರ. ದೇವರ ಪುಣ್ಯಾದಿಂದ ಶಾಣ್ಯಾ ಮಕ್ಕಳ ಹುಟ್ಟ್ಯಾವ. ಅವರು ಹೊರಗಿನ ಬಿಸಲು ಕಾಣಲಾರಧಂಗ ನೊಡ್ಕೊತಾರ. ಸವದತ್ತ್ಯಾಗ ಬಿದರಿನ ಸಾಮಾನಿನ ಅಂಗಡಿ ಹಾಕ್ಯಾರ, ನಾನು ನಮ್ಮ ಅತ್ತಿ ಮಾವಾ ಎಲ್ಲಾರು ಕೂಡೆ ಮನಿಯೊಳಗನಾ ಕುತು ಬಿದರಿನ ಛಂದ ಛಂದ ಶೋ ಪಿಸ್ ಮಾಡಿಕೊಡತೇವಿ. ವ್ಯಾಪಾರನು ಛೋಲೊ ಅದ. ನಮ್ಮ ಜೀವನಾ ಛಂದ ಮಾಡಕೊಳ್ಳೊದು ನಮ್ಮ ಕೈಯಾಗನ ಇರ್ತದ. ಜೀವನಾ ನಿಶ್ಚಿಂತಿಯಿಂದ ನಡದದ. ಇನ್ನ ಅಪ್ಪಾ ಅಮ್ಮಾ ತೋರಿಸಿದ ವರ ಎನರೆ ನಾ ಮಾಡಿಕೊಂಡಿದ್ರ ನಾ ಎನ್ ಅವರ ಕಣ್ಣ ಮುಂದ ಇರಲಿಕ್ಕೆ ಸಾಧ್ಯರ ಇತ್ತೇನು? ಇಬ್ಬರಿಗೂ ನನ್ನಿಂದ ದೂರಾಗೊ ನೋವನ್ನ ಅನುಭೋಗಸೊದು ಅನಿವಾರ್ಯನ ಇತ್ತು. ಒಂದ ವ್ಯಾಳೆ ನಾ ಅವರ ಪ್ರಕಾರನ ಮದವಿ ಮಾಡಕೊಂಡಿದ್ರು ಅವರಿಬ್ಬರು ಎನ ಸುಖದಿಂದ ಇರತಿದ್ದಿಲ್ಲಾ. ಯಾಕಂದ್ರ ನಾ ಹೋದ ಮನ್ಯಾಗ ಛೋಲೊ ಜೀವನಾ ಮಾಡಲಿಕ್ಕೆ ನಂಗ ಆಗತಿದ್ದೇ ಇಲ್ಲಾ. ಅಪ್ಪ ಅಮ್ಮಗ ತಡಕೊಳ್ಳಾರದ ನೋವು ಕೊಟ್ಟೇನಿ, ನಂಗ ಗೊತ್ತದ, ಜೀವನಿಡಿ ಅದರ ಝಳಾ ನಂಗ ಬಡಿತನಾ ಇರತದ. ಆದ್ರ ನನಗ ಗೊತ್ತದ ಅಪ್ಪಗ ನನ್ನ ಮ್ಯಾಲೆ ಎಷ್ಟ ಪ್ರೀತಿ ಅದ ಅಂತ. ಒಂದಿಲ್ಲ ಒಂದಿನಾ ಅವರು ಮತ್ತ ನನ್ನ ತಮ್ಮ ಹತ್ರ ಕರಿತಾರ ಅಂತ ವಿಶ್ವಾಸ ಅದ. ಅದಕ್ಕ ನಾ ಇನ್ನು ಇದ ಊರಾಗ ಇದ್ದೇನಿ. ದೂರಿಂದನರ ಯಾಕಾಗ್ಲಿ ಅಪ್ಪ ಅಮ್ಮನ ನೋಡ್ಲಿಕ್ಕರ ಸಿಗತದ ಅಂತ. ನಾ ಈಗ ಇದ್ದ ಜೀವನದಾಗ ತೄಪ್ತಿಯಿಂದ ಇದ್ದೇನಿ." ಇಷ್ಟೆಲ್ಲಾ ಹೇಳೊಮುಂದ ಸುಧಿ ಮಾರಿಯೊಳಗಿನ ಆತ್ಮವಿಶ್ವಾಸ ನೋಡಿ ಭಾಳ ಖುಷಿ ಆತು. 

ಅಷ್ಟರಾಗ ಹೊರಗ ಸಪ್ಪಳಾತು, ಇಬ್ಬರು ಹೊರಗ ಬಂದ್ವಿ. ಸುಧಿ ಅತ್ತಿ ಮಾವಾ ಎಲ್ಲಾರು ಗುಡ್ಡದಿಂದ ಬಂದಿದ್ರು. ನನ್ನ ಸುಧಿಯ ಸುಸಂಸ್ಕೄತತೆಯ ನೆರಳು ಮನಿಮಂದಿಯೊಳಗೆಲ್ಲಾ ಎದ್ದು ಕಾಣಸ್ತಿತ್ತು. ಸುಧಾ ನನ್ನ ಅವರಿಗೆಲ್ಲಾ ಪರಿಚಯ ಮಾಡಸಿದ್ಲು. ಮಕ್ಕಳಿಗೆ  ಒಯ್ದಿದ್ದ ಚಾಕಲೇಟ್ಸ ಕೊಟ್ಟೆ. ಇಸ್ಕೊಂಡ ಥ್ಯಾಂಕ್ಸ ಹೇಳಿದ ಅವರನ್ನ ನೋಡಿ ಆಶ್ಚರ್ಯ ಆತು. ಆಕಿ ಅತ್ತಿ ಮಾವಾ, ಗಂಡಾ ಎಲ್ಲಾ ಭಾಳ ಛೊಲೊ ಮಾತಾಡಿಸಿದ್ರು. ಸುಧಿ ಗಂಡಾ ಅಡ್ಡಿಯಿಲ್ಲಾ ಕಪ್ಪ ಇದ್ರು ಲಕ್ಷಣ ಇದ್ದಾ. ಖರೆ ಬರಬೇಕಾದ್ರ ಸುಧಿಯ ಬಗ್ಗೆ ಎನೊ ಒಂಥರಾ ಮರುಕಾ ಅನುಕಂಪ ಇಟಗೊಂಡ ಬಂದಿದ್ದೆ. ಆದ್ರ ಆಕಿನ್ನ ಮತ್ತ ಆಕಿ ಜೀವನಾ ನೋಡಿ ಅವೆಲ್ಲಾ ಹೋಗಿ ಸುಧಾನ ಬಗ್ಗೆ ಹೆಮ್ಮೆ ಭಾವನೆ ಉಕ್ಕಿ ಬಂತು. ಆಕಿ ಕೊಟ್ಟ ಕುಂಕಮಾ ಖಣಾ ತಗೊಂಡು ಊರಿಗೆ ಹೋಗೊದ್ರಾಗ ಮತ್ತ ಒಂದ ಸಲಾ ಬಂದಹೋಗತೇನಿ ಅಂತ ಹೇಳಿ ವಾಪಸ ಮನಿಕಡೆ ಹೊಂಟಬಂದೆ. ಬರಬೇಕಾದ್ರ ಮನಸ್ಸು ಎಷ್ಟ ಭಾರ ಮತ್ತ ಕಸಿವಿಸಿಯಿಂದ ಇತ್ತೊ, ವಾಪಸ ಹೋಗಬೇಕಾದ್ರ ಅಷ್ಟ ಹವರಗ ಶಾಂತ ಆಗಿತ್ತು. ಆಕಿ ಮಾಡಿದ್ದ ತಪ್ಪು ಆಕಿಗೆ ತಿಳಿಸಿಕೊಡಬೇಕಂತ ಹೋದಾಕಿಗೆ, ಆಕಿ ಮ್ಯಾಲೆ ಅಭಿಮಾನ ಪಡೊಹಂಗ ಮಾಡಿಕಳಿಸಿದ್ಲು ನನ್ನ. ಎಲ್ಲೊ ಒಂದ ಕಡೆ ಸುಧಿ ಜೀವನದಾಗ ಯಶಸ್ಸಿನ ಹಾದಿ ಒಳಗ ಇದ್ದಾಳ ಅನಿಸ್ತು. ಅಲ್ಲೆ ಇದ್ದ ಬಾದರಾಯಣ ದೇವರಗುಡಿಗೆ ಹೋಗಿ ಆಕಿಗೆ ಅಖಂಡ ಗೆಲವು ಸಿಗಲಿ ಅಂತಾ ಬೇಡ್ಕೊಂಡು, ಮನಿಕಡೆ ಹೊಂಟೆ……..

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವನಸುಮ
9 years ago

ತುಂಬಾ ಚೆನ್ನಾಗಿದೆ.ಹಿಡಿಸಿತು.

1
0
Would love your thoughts, please comment.x
()
x