ವಿಲನ್ ಆಗ್ಬಿಟ್ರಲ್ಲೋ ರಾಧೇಶ! ಸೀತೇಶ!!: ಅಖಿಲೇಶ್ ಚಿಪ್ಪಳಿ

 

[ಈ ಕತೆಯಲ್ಲಿ ಬರುವ ವ್ಯಕ್ತಿಗಳ ಹೆಸರು ಕ್ರಮವಾಗಿ ರಾಧೇಶ ಮತ್ತು ಸೀತೇಶ. ರಾಧೇಶ ಬಂಡವಾಳಶಾಹಿ ಮತ್ತು ಸೀತೇಶ ಹೋರಾಟಗಾರ. ವಾಸ್ತವಿಕತೆಯಿಂದ ತುಂಬಾ ದೂರ ನಿಂತು ಯೋಚಿಸಿದ ಪರಿಣಾಮವಾಗಿ ಇವರಿಬ್ಬರು ಖಳನಾಯಕರಾಗಿದ್ದಾರೆ. ಹೇಗಾದರೂ ಕಾರ್ಯಸಾಧನೆ ಮಾಡಬೇಕೆಂಬ  ಕಾನೂನುಬಾಹಿರವಾದ ಇವರ ಹಠಕ್ಕೆ ಬಲಿಷ್ಟವಾದ ಹಲಸಿನ ಮರ ಬಲಿಯಾಗಿದೆ. ಪೂರ್ಣಪಾಠವನ್ನು ಮುಂದೆ ಓದಿ]

ಈ ಹಿಂದೆ “ಮಾವು-ಹಲಸಿನ ಮರವುಳಿಸಿದ ಕತೆ” ಎಂಬ ಲೇಖನವನ್ನು ಬರೆಯಲಾಗಿತ್ತು. ಲೇಖನ ಓದಿದ ನಂತರ ಖಾಸಗಿ ಪೆಟ್ರೋಲ್ ಬಂಕ್ ಮಾಲಿಕ ರಾಧೇಶನ ಮನ:ಪರಿವರ್ತನೆಯಾಗಬಹುದು ಎಂದು ಭಾವಿಸಲಾಗಿತ್ತು. ದುಡ್ಡಿನ ಮದ ಅಂತರಂಗದ ಕಣ್ಣನ್ನು ಮುಚ್ಚಿ ಹಾಕಿರುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ವೈಯಕ್ತಿಕವಾಗಿ ವಿಷಯವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಇನ್ನಿಷ್ಟು ಅವಘಡ ಸೃಷ್ಟಿಮಾಡಿಕೊಂಡಿದ್ದಾನೆ ವಿಲನ್ ರಾಧೇಶ. ಸಾರ್ವಜನಿಕರ ಕೋಪ ಎದುರಿಸಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾನೆ.

ದೇಶದಲ್ಲಿ ಸಂವಿಧಾನಬದ್ಧವಾದ ಕಾನೂನಿದೆ. ಕಾನೂನನ್ನು ಅನುಸರಿಸಿ ಇಲ್ಲಿನ ಪ್ರಜೆಗಳು ವ್ಯವಹಾರ ಮಾಡಬೇಕಾಗುತ್ತದೆ. ವ್ಯೆಯಕ್ತಿಕ ಹಿತಾಸಕ್ತಿಗಾಗಿ ಹರಾಜು ಹಾಕಲಾದ ಮರಗಳನ್ನು ಇಲಾಖೆಯವರೇ ಕಾನೂನುಬದ್ಧವಾಗಿ ರದ್ದು ಮಾಡಿದ್ದರು. ಇಷ್ಟವೋ, ಕಷ್ಟವೋ ಅಥವಾ ನಷ್ಟವೋ ಬದುಕಿನಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳುವವ ನಿಜವಾಗಲೂ ದೊಡ್ಡ ಮನುಷ್ಯ. ಆದರೆ ಈ ಮುಂದಿನ ಘಟನೆಯಲ್ಲಿ ಪೆಟ್ರೋಲ್ ಬಂಕ್ ಮಾಲಿಕ ರಾಧೇಶ್ ಮಂದಿಯ ಮಾತು ಕೇಳಿ ನಿಜವಾಗಲೂ ಯಡವಟ್ಟು ಮಾಡಿಕೊಂಡ. ಸಾಗರದ ನೆಲದಲ್ಲಿ ಹಲವು ಹೋರಾಟಗಳು ನಡೆದಿವೆ. ಎಲ್ಲವೂ ಅಲ್ಲದಿದ್ದರೂ ಕೆಲವು ಹೋರಾಟಗಳು ಯಶಸ್ವಿಯಾಗಿವೆ. ಈ ಕತೆಯಲ್ಲಿ ಬರುವ ಇನ್ನೊಬ್ಬ ವ್ಯಕ್ತಿ  ಸೀತೇಶ ಮೂಲಭೂತವಾಗಿ ಹೋರಾಟಗಾರ. ಬಡವರ ಬಗ್ಗೆ ಕಾಳಜಿ ಹೊಂದಿದವ, ರಾಜಕೀಯದಲ್ಲೂ ಹೆಸರು ಮಾಡಿ ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿದ್ದವ, ಹಾಗೂ ಅನೇಕ ಪರಿಸರ ಪರ ಹೋರಾಟಗಳಲ್ಲಿ, ಗಣಿ ವಿರೋಧಿ ಹೋರಾಟದಲ್ಲಿ, ಭ್ರಷ್ಟಾಚಾರ ನಿರ್ಮೂಲನೆ ಇತ್ಯಾದಿ ವಿಷಯಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಸೇವೆ ಸಲ್ಲಿಸಿದವ. ಇಂತಹ ವ್ಯಕ್ತಿ ಸೀತೇಶ ಆರೋಗ್ಯವಂತ ಸಾಲುಮರಗಳನ್ನು ಕಡಿಸುವ ಪಣತೊಟ್ಟು, ಹಗಲೂ-ರಾತ್ರಿ ಶ್ರಮ ಪಡತ್ತಿರುವ ಪರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೀವನದಲ್ಲಿ ಸ್ನೇಹಿತರು ಬೇಕು. ಅದೇ ರಾಧೇಶ ಹಾದಿ ತಪ್ಪಿ ನಡೆದಾಗ, ನಿಜವಾದ ಸ್ನೇಹಿತನಾದ ಸೀತೇಶ ದಾರಿತಪ್ಪಿದ ರಾಧೇಶನನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಿತ್ತು. ಬದಲಾಗಿ ರಾಧೇಶನ ದಾರಿ ಇನ್ನೂ ತಪ್ಪುವ ಹಾಗೆ ಪ್ರಚೋಧಿಸುವ ಸೀತೇಶನ ಪರಿಗೆ ಅಯ್ಯೋ ಎನ್ನದೇ ಗತಿಯಿಲ್ಲ.

 

 

ಏಪ್ರಿಲ್ 5ರ ಸಂಜೆ ನಮಗೊಂದು ದೂರವಾಣಿ ಕರೆ ಬಂತು. ಈ ದಿನ ರಾತ್ರಿ ನೀವು ಅಂದು ಉಳಿಸಿದ ಮರವನ್ನು ಕಡಿಯುತ್ತಾರೆ!! ದಯವಿಟ್ಟು ಉಳಿಸುವ ಪ್ರಯತ್ನ ಮಾಡಿ. ಸರಿ ರಹಸ್ಯವಾಗಿ, ಕಳ್ಳತನದಲ್ಲಿ ಮರವನ್ನು ಕಡಿಯುವ ನಿಶ್ಚಯ ಮಾಡಿದರೆ ಉಳಿಸುವ ಬಗೆಯಂತು? ಆದರೂ ಪ್ರಯತ್ನ ಮಾಡಬೇಕಲ್ಲ. ಸಾಗರದ ವಲಯ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಆಯಿತು ನಾನು ನೋಡಿಕೊಳ್ಳುತ್ತೇನೆ ಬಿಡಿ ಎಂಬ ಆಶ್ವಾಸನೆ ನೀಡಿದರು. ನಾವು ನಿರಾಂತಕವಾಗಿ ನಿದ್ದೆ ಹೋದೆವು. ಬೆಳಗಿನ ಜಾವ 4 ಗಂಟೆ, ಸವಿನಿದ್ದೆಯಲ್ಲಿದ್ದವನಿಗೆ ದೂರವಾಣಿ ಕರೆ ಎಚ್ಚರಿಸಿತು. ಅತ್ತಲಿಂದ ಮಾತನಾಡಿದ ಧ್ವನಿ ಹಲಸಿನ ಮರವನ್ನು ಕಡಿದುರುಳಿಸಿದ್ದಾರೆ ಎಂಬ ಅತ್ಯಂತ ಆಘಾತಕಾರಿ ವಿಷಯ ತಿಳಿಸಿತು. ಪರಊರಿನಿಂದ ವಾಹನದಲ್ಲಿ ಜನರನ್ನು ಕರೆಸಿ ಥೇಟ್ ತೆಲುಗು ಸಿನಿಮಾ ಗೊಂಡಾ ಮಾದರಿಯಲ್ಲಿ ಮರವನ್ನು ಕಡಿಯಲಾಗಿತ್ತು. ಒಂದೊಮ್ಮೆ ಏನಾದರೂ ನಾವು ನಾಲ್ಕು ಜನ ತಡೆಯಲು ಹೋಗಿದ್ದರೆ ಏನೂ ಮಾಡಲು ಹೇಸದ ಜನರನ್ನು ಕರೆಸಲಾಗಿತ್ತು ಎಂಬ ಮಾಹಿತಿ ಸಿಕ್ಕಿತು. ಮುಂಜಾನೆ 3 ಗಂಟೆಗೆ ಯಾಂತ್ರಿಕೃತ ಗರಗಸದ ಕರ್ಕಷ ಸದ್ದಿಗೆ ಹಲಸಿನ ಮರ ಬೆದರಿರಬೇಕು, ಬಹುಷ: ಹಲಸಿನ ಮರ ಸಹಾಯ ಯಾಚಿಸಿರಬೇಕು. ಬಾಯಿಯಿಲ್ಲದ ಮರದ ಆರ್ತನಾದ ಹೃದಯವಿಲ್ಲದ ಕಟುಕ ಮನಸ್ಸಿನ ಮತ್ತು ಕಿವಿಯಿರುವ ಮಾನವರಿಗೆ ಕೇಳಲೇ ಇಲ್ಲ. ಎಳೆ ಬಸುರಿಯಂತಿದ್ದ ಮರದಲ್ಲಿ ಹಲಸಿನ ಗುಜ್ಜು ಸಾಲಾಗಿ ಇತ್ತು.  ಮತ್ತೊಂದು ಸುಂದರ ಮುಂಜಾವು ಮೂಡುವ ಮುಂಚೆಯೇ ಹತ್ಯೆ ನಡೆದುಹೋಯಿತು. ಅಲ್ಲೇ ಸುತ್ತ-ಮುತ್ತ ವಾಸಿಸುವವರು ಗರಗಸದ ಸದ್ದು ಕೇಳಿ ಹಿಡಿಶಾಪ ಹಾಕಿದ್ದರು. ಮರ ಬಿದ್ದ ಸದ್ದಿಗೆ ಬೆಚ್ಚಿ ಬಿದ್ದರು. ಸುದ್ದಿ ಕೇಳಿದವನಿಗೆ ನಿದ್ದೆ ಹಾರಿಹೋಯಿತು. ತಕ್ಷಣ ಟೌನ್ ಫಾರೆಸ್ಟರ್‍ಗೆ ಫೋನ್ ಮಾಡಿದರೆ, ನೀವು ಕರೆಮಾಡಿದ ಚಂದಾದಾರರು ಸ್ವಿಚ್‍ಆಫ್ ಮಾಡಿದ್ದಾರೆ ಎಂಬ ಧ್ವನಿ ಬಂತು. ಹೀಗೆ ಶಿವಮೊಗ್ಗದ ಸಿ.ಸಿ.ಎಫ್. ವರೆಗೂ ಯಾವ ಅಧಿಕಾರಿಯೂ ದೂರವಾಣಿಗೆ ಲಭ್ಯವಾಗಲಿಲ್ಲ. 

ಮುಂಜಾವು 7 ಗಂಟೆಗೆ ಟೌನ್ ಪಾರೆಸ್ಟರ್ ಮೊಬೈಲ್ ಸ್ವಿಚ್ ಆನ್ ಆಗಿತ್ತು. ವಿಷಯ ತಿಳಿಸಿದೆ. ಮರ ಕಡಿದವರಾರು ಎಂದು ಫಾರೆಸ್ಟರ್‍ಗೆ ಗೊತ್ತು. ಮಾಮೂಲಿಯಾಗಿ ಹಲಸಿನ ಮರದ ಕ್ರಿಯಾಕರ್ಮ ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ನಡೆಯಿತು. ಕಟ್ಟಿಗೆಗಳನ್ನು ಕೊಚ್ಚಿ ಹಾಕಿ, ನಾಟಕೆಷ್ಟು ಸಿಗುತ್ತದೆ ಎಂಬ ಲೆಕ್ಕಾಚಾರವಾಯಿತು. ಸುಮಾರು 150 ಅಡಿ ನಾಟ ದೊರೆಯಬಹುದೆಂದು ಅಂದಾಜು ಮಾಡಿದರು. ಇದಕ್ಕೆ ಮಾರುಕಟ್ಟೆಯಲ್ಲಿ ಬೆಲೆ 1 ಲಕ್ಷ ರೂಪಾಯಿಗಳಾಗುತ್ತದೆ ಎಂದು ಲೆಕ್ಕಾಚಾರ ಮಾಡಿ, ನಾಟವನ್ನು ಅರಣ್ಯ ಇಲಾಖೆಯ ಡಿಪೋಗೆ ಸಾಗಿಸಲಾಯಿತು. ಇದೇ ಹೊತ್ತಿನಲ್ಲಿ ಇನ್ನೊಂದು ಆಘಾತಕಾರಿ ಮಾಹಿತಿಯೂ ಬಂತು. ಪಕ್ಕದಲ್ಲಿದ್ದ ಅಪರೂಪದ ಆರೋಗ್ಯವಂತ ಮಾವಿನ ಮರಕ್ಕೂ ಗರಗಸ ಹಚ್ಚಿದ್ದರು, ಅಷ್ಟರಲ್ಲಿ ಸೂರ್ಯ ಉದಯಿಸಿದ್ದ, ಬೆಳಗಾಗಿತ್ತು, ಕಟುಕರು ಬೆಳಕಿಗೆ ಹೆದರಿ ಜಾಗ ಖಾಲಿ ಮಾಡಿದ್ದರು. ಪಾಪ ಮಾವಿನ ಮರಕ್ಕಿರುವ ಅದೃಷ್ಟ-ಆಯುಸ್ಸು ಹಲಸಿಗಿರಲಿಲ್ಲ.

ಏಪ್ರಿಲ್ 6 ಭಾನುವಾರ. ಈ ಘಟನೆಗೆ ಅರಣ್ಯ ಇಲಾಖೆಯನ್ನೇ ಹೊಣೆ ಮಾಡಬೇಕು ಎಂದು ತೀರ್ಮಾನಿಸಿದ ನಮ್ಮ ತಂಡ ಚುನಾವಣ ನೀತಿ ಸಂಹಿತೆಯ ಮಧ್ಯದಲ್ಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯಲು ಅಲೆದಾಡಿತು. ಚುನಾವಣ ಅಧಿಕಾರಿಗಳು ಪ್ರತಿಭಟನೆಗೆ ಅವಕಾಶವಿಲ್ಲ ಎಂಬುದನ್ನು ಒತ್ತಿ-ಒತ್ತಿ ಹೇಳಿದರು. ನಿಮ್ಮ ಪರವಾನಿಗೆಯೇ ಬೇಡ ಎಂದು ವಾಪಾಸು ಬಂದಾಯಿತು. ಪೊಲೀಸರು ಎಷ್ಟು ಜನ ಸೇರುತ್ತೀರಿ ಎಂದು ಕೇಳಿದರು. ಒಂದೈವತ್ತು ಜನ ಸೇರಬಹುದು ಎಂದೆವು. ಪತ್ರಿಕಾ ಮಿತ್ರರಿಗೆ ಫೋನಾಯಿಸಿ, ವಿಷಯ ತಿಳಿಸಿ ಸಹಕಾರ ಕೋರಿದೆವು. ಇಷ್ಟೆಲ್ಲಾ ಮುಗಿಸಿ ಮನೆಗೆ ಹೋಗಿ ಊಟ ಮುಗಿಸಿ ಮಲಗುವಷ್ಟರಲ್ಲಿ, ಇನ್ನೊಬ್ಬ ಮಿತ್ರರಿಂದ ದೂರವಾಣಿ ಕರೆ ಬಂತು. ಹಲಸಿನ ಮರದ ಬುಡವನ್ನು ಜೇಸಿಬಿ ಯಂತ್ರ ಬಳಸಿ ಕೀಳುತ್ತಿದ್ದಾರೆ!. ಕತ್ತಲಾಗುತ್ತಿದ್ದಂತೆ ಕಳ್ಳರು-ಖೂಳರು ಚುರುಕಾಗುತ್ತಾರೆ ಎಂದು ಕೇಳಿದ್ದೆವು. ಈಗ ಕಣ್ಣಾರೆ ಕಾಣುವಂತಾಯಿತು. ಇಲ್ಲಿಯವರೆಗೂ ಅರಣ್ಯ ಇಲಾಖೆಯವರು ಯಾರ ವಿರುದ್ಧವೂ ಮೊಕದ್ದಮೆ ಹೂಡಿರಲಿಲ್ಲ. ಮರಹಂತಕರು ಹಲಸಿನ ಮರದ ಬುಡವನ್ನು ಕಿತ್ತು ಸಾಕ್ಷಿ ನಾಶ ಮಾಡಲು ಹವಣಿಸಿದ್ದರು. ಅದಕ್ಕಾಗಿ ರಾತ್ರಿ ಕಾರ್ಯಾಚರಣೆ ಜಾರಿ ಮಾಡಿದ್ದರು. ನಮ್ಮ ತಂಡ ಮತ್ತೆ ಟೌನ್ ಫಾರೆಸ್ಟರ್‍ಗೆ ಫೋನ್ ಮಾಡಿತು. ಪುಣ್ಯಕ್ಕೆ ದೂರವಾಣಿ ಸ್ವಿಚ್ ಆಫ್ ಆಗಿರಲಿಲ್ಲ. ನೋಡಿ ಹಲಸಿನ ಮರದ ಬುಡವನ್ನು ಜೇಸಿಬಿ ಬಳಸಿ ಕೀಳುತ್ತಿದ್ದಾರೆ, ಇದರಿಂದ ಸಾಕ್ಷಿ ನಾಶವಾಗುತ್ತದೆ ಎಂಬ ದೂರನ್ನು ದೂರವಾಣಿಯ ಮುಖಾಂತರವೇ ದಾಖಲಿಸಿದೆವು. ಟೌನ್ ಫಾರೆಸ್ಟರ್ ಬಂದು ಜೇಸಿಬಿ ಯಂತ್ರವನ್ನು ತೆಗೆದುಕೊಂಡು ಹೋಗಿ ತಮ್ಮ ಇಲಾಖೆಯ ಆವರಣದಲ್ಲಿ ಇಟ್ಟರು ಎಂಬುದು ಮರುದಿನ ಗೊತ್ತಾದ ವಿಷಯ.

ಮರುದಿನ ಅರಣ್ಯ ಇಲಾಖೆಯ ಆವರಣದಲ್ಲಿ ನಮ್ಮ ಶಾಂತಿಯುತ ಪ್ರತಿಭಟನೆ ನಡೆಯಿತು. ಎಲ್ಲಾ ಪತ್ರಿಕಾ ಮಿತ್ರರು ಸಕಾಲಕ್ಕೆ ಆಗಮಿಸಿ ಲಭ್ಯವಿದ್ದ ವಲಯ ಅರಣ್ಯಾಧಿಕಾರಿಗಳನ್ನು ವಿವಿಧ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಅಧಿಕಾರಿಗಳು ಮರ ಕಡಿದ ಆರೋಪದ ಮೇಲೆ ಪೆಟ್ರೋಲ್ ಬಂಕ್ ಮಾಲಿಕನ ಮೇಲೆ ದೂರು ದಾಖಲಿಸಿದ್ದನ್ನು ವಿವರಿಸಿದರು. ಜೇಸಿಬಿ ಯಂತ್ರವನ್ನು ಹಿಡಿದುಕೊಂಡು ಬಂದ ವಿಚಾರವನ್ನು ಹೇಳಿದರು. ಮೊದಲಿಗೆ ನಮ್ಮ ಬೇಡಿಕೆಗಳು ಈಡೇರುವವರೆಗೂ ಉಪವಾಸ ಸತ್ಯಾಗ್ರಹವನ್ನು ಮಾಡಬೇಕೆಂದು ತೀರ್ಮಾನಿಸಿದ್ದೆವು. ಪತ್ರಿಕಾ ಮಿತ್ರರು ಮತ್ತು ಹಿತೈಷಿಗಳ ಮನವಿಯ ಮೇರೆಗೆ ಅರಣ್ಯ ಇಲಾಖೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಗಡುವು ನೀಡಿ ಹಕ್ಕೊತ್ತಾಯ ಪತ್ರ ಸಲ್ಲಿಸಿದೆವು.

ಹಣವು ಮನ್ಮಥನನ್ನೂ ಮಂಗನನ್ನಾಗಿ ಮಾಡುತ್ತದೆ ಎಂಬ ಮಾತು ಈ ವಿಚಾರದಲ್ಲಿ ಸುಳ್ಳಾಗಲಿಲ್ಲ. ವೈಯಕ್ತಿಕ ಪ್ರತಿಷ್ಟೆಯಾಗಿ ತೆಗೆದುಕೊಂಡ ಬಂಕ್ ಮಾಲಿಕ ಹಲಸಿನ ಮರವನ್ನು ಕಡಿಯಲಿಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿಕೊಂಡ. ಜೊತೆಗೆ ಹೋರಾಟಗಾರ ಹಿರಿಯ ಸ್ನೇಹಿತ ಸೀತೇಶನನ್ನು ಬಳಸಿಕೊಂಡ. ಸಾಮಾನ್ಯವಾಗಿ ಯಾರಲ್ಲಿಯೂ ಇರದ ಕ್ರೌರ್ಯ ಪೆಟ್ರೋಲ್ ಬಂಕ್ ಮಾಲಿಕನಿಗೇಕೆ ಬಂತು ಎಂಬ ಜಿಜ್ಞಾಸೆಗಿಳಿದಾಗ, ಕೆಲವು ವಿಚಾರಗಳು ಹೊರಬಂದವು. ಬಂಕ್ ಮಾಲಿಕ ರಾಧೇಶನೂ ಸೇರಿದಂತೆ ಆ ಮನೆಯ ಸದಸ್ಯರೆಲ್ಲರೂ ಬೇಟೆಪ್ರಿಯರು. ಹಾಗಂತ ನರಭಕ್ಷಕ ಹುಲಿಗಳನ್ನು ಕೊಲ್ಲುತ್ತಿದ್ದ ಕೆನೆತ್ ಆಂಡರ್‍ಸನ್‍ಗಾಗಲಿ ಅಥವಾ ಜಿಮ್ ಕಾರ್ಬೆಟ್‍ಗಾಗಲಿ ಇವರನ್ನು ಹೋಲಿಸುವುದು ಸರಿಯಲ್ಲ. ಇವರದೇನಿದ್ದರೂ, ಬಾಯಿಚಪಲಕ್ಕೆ ಬೇಟೆಯಾಡುವುದು. ಸುಮಾರು 20-30 ವರ್ಷಗಳ ಹಿಂದೆ ಅರಣ್ಯ ಕಾನೂನು ಬಿಗಿಯಾಗಿ ಜಾರಿಯಾಗದಿದ್ದ ಕಾಲದಲ್ಲಿ ಈ ಮನೆಯ ಸದಸ್ಯರು ರಾತ್ರಿ ಬೆÉೀಟೆಯಾಡುತ್ತಿದ್ದರು. ಬೇಟೆಯೆಂದರೆ ಹುಲಿ-ಸಿಂಹಗಳು ಎಂದಲ್ಲ. ಹಕ್ಕಿ-ಪಕ್ಷಿಗಳು, ಹಾರುಬೆಕ್ಕು, ಕಬ್ಬೆಕ್ಕು, ಕಾಡುಹಂದಿ ಇತ್ಯಾದಿಗಳು ಇವರ ಬೇಟೆಗೆ ಬಲಿಯಾಗುವ ವನ್ಯಪ್ರಾಣಿಗಳಾಗಿದ್ದವು. ಕೆರೆಯಲ್ಲಿರುವ ನೀರುಕೋಳಿಗಳನ್ನು ಇವರು ಬಿಟ್ಟವರಲ್ಲ. ತೋಟಾ ಕೋವಿಯನ್ನು ಹೆಗಲಿಗೇರಿಸಿ ಬೇಟೆಗೆ ಹೊರಡುವ ಸಮಯದಲ್ಲಿ ಇವರ ಸಂಗಾತಿಯಾಗಿ ಹೋರಾಟಗಾರ ಸೀತೇಶ ಸದಾ ಇರುತ್ತಿದ್ದ ಎಂಬುದು ಇವರ ಗೆಳೆತನದ ನಂಟನ್ನು ತೋರಿಸುತ್ತದೆ. ಬೇಟೆಗಾರರು ಕ್ರಮೇಣ ಪರಿಸರಪ್ರಿಯರಾಗಿ ಬದಲಾದ ಅನೇಕ ಉದಾಹರಣೆಗಳು ನಮಗೆ ಕಾಣಸಿಗುತ್ತದೆ. ಆದರೆ, ಬಂಕ್ ಮಾಲಿಕ ರಾಧೇಶ ಮತ್ತು ಸೀತೇಶ ಈ ವಿಚಾರದಲ್ಲಿ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಈರ್ವರಿಗೂ ಪರಿಸರ ಕಾಳಜಿಗಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. 

ಇಲ್ಲಿನ ನೆಲಕ್ಕೆ ಎಲ್ಲವನ್ನೂ ನುಂಗಿಕೊಳ್ಳುವ ಶಕ್ತಿಯಿದೆ. ಈ ಸಮಾಜ ಎಂತವರನ್ನೂ ಕ್ಷಮಿಸಬಲ್ಲದು, ತಪ್ಪಿಗಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ಹಲವಾರು ದಾರಿಗಳಿವೆ. ಈ ನಿಟ್ಟಿನಲ್ಲಿ ಯೋಚಿಸುವ ಮನೋಭಾವ ಬಂಕ್ ಮಾಲಿಕನಿಗೆ ಬರಬೇಕು. ಈಗಿನ ವಿದ್ಯಮಾನ ನೋಡಿದರೆ ರಾಧೇಶ ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಬದಲಾಗಿ ಪ್ರತಿಕಾರದ ಕಿಡಿಹೊತ್ತುಕೊಂಡು ತಿರುಗುತ್ತಿದ್ದಾನೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ರಾಧೇಶ ಸರ್ವಶಕ್ತ ಅಂದರೆ ಹಣದಲ್ಲಿ, ಅಧಿಕಾರದಲ್ಲಿ ಹಾಗೂ ಗೊಂಡಾಪಡೆಯಲ್ಲಿ ಹೀಗೆ ಎಲ್ಲವನ್ನು ಬಲ್ಲವ, ಹಾಗಾಗಿ ಪ್ರತಿಭಟನೆಯಿಂದ ಹಿಂದೆ ಸರಿಯಿರಿ ಎಂಬ ಎಚ್ಚರಿಕೆಯನ್ನು ಹೋರಾಟಗಾರ ಸ್ನೇಹಿತ ಸೀತೇಶ ಎಲ್ಲರಿಗೂ ಬಿತ್ತರಿಸುವ ಕಾಯಕದಲ್ಲಿ ತೊಡಗಿದ್ದಾನೆ. ಕೈಲಾಗದವ ಮೈಪರಚಿಕೊಂಡಂತೆ ಎಂಬಂತೆ ಈ ತರಹದ ಮಾತುಗಳು ಜನರನ್ನು ರೊಚ್ಚಿಗೇಳಿಸಬಹುದೇ ಹೊರತು ಮತ್ತೇನು ಸಾಧಿಸಲಾಗುವುದಿಲ್ಲ. ಪೂರ್ಣ ಘಟನೆಯ ಬಗ್ಗೆ ರಾಧೇಶ-ಸೀತೇಶರು ಪಶ್ಚಾತ್ತಾಪಪಟ್ಟರೂ ಸಾಕು ಖಳನಾಯಕನ ಸ್ಥಾನದಿಂದ ನಾಯಕನ ಸ್ಥಾನಕ್ಕೆ ಏರುತ್ತಾರೆ.

ಕೊನೆಯದಾಗಿ, ಉಳಿಸಲಾಗದ ಹಲಸಿನ ಮರದ ಕ್ಷಮೆ ಕೋರುತ್ತಾ. . . ರಾಧೇಶ ಹಾಗೂ ಸೀತೇಶರಿಗೆ ದೇವರು ಸದ್ಬುದ್ದಿಯನ್ನು ಕರುಣಿಸಲಿ ಎಂದು ಆಶಿಸುತ್ತಾ. ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನರ್ಪಿಸುತ್ತಾ. ವೃಕ್ಷ ಸಂತತಿ ವೃದ್ಧಿಸಲಿ, ಈ ತರಹದ ಘಟನೆ ಮತ್ತೆಂದೂ ಮರುಕಳಿಸದಿರಲಿ. ಸರ್ವರಿಗೂ ಒಳ್ಳೆಯದಾಗಲಿ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x