ಸ್ನೇಹ ಭಾಂದವ್ಯ (ಭಾಗ 10): ನಾಗರತ್ನಾ ಗೋವಿಂದನ್ನವರ

ರೇಖಾ ಇನ್ನು ಎರಡು ದಿನಕ್ಕೆ ತಿರುಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ಆದ್ದರಿಂದ ಸುಧಾಳನ್ನು ಇನ್ನೊಂದು ಸಲ ನೋಡಬೇಕು ಎಂದುಕೊಂಡಳು. ಸಾಯಂಕಾಲ ರಾಜೇಶ ಸುಧಾಳನ್ನು ಮನೆಗೆ ಕರೆತಂದ. ಆಗ ಕಾವೇರಮ್ಮ ಬರ್ರಿ ಅಳಿಯಂದ್ರೆ ಎಂದಳು. ಸುಧಾ ಒಳಗೆ ಹೋದಳು. ರಾಜೇಶ ಅತ್ತೆ ನಾನು ಹೋಗ್ತಿನಿ ಅಂದ. ಕಾಫಿ ಕುಡಿದು ಹೋಗುವಿರಂತೆ ಎಂದಳು. ಬೇಡಾ ಅತ್ತೆ ಮನೆಯಲ್ಲಿ ಅಮ್ಮ ಕಾಯ್ತಿರ್‍ತಾಳೆ ಹೋಗ್ತಿನಿ ಎಂದು ಹೋಗಿಯೆಬಿಟ್ಟ.

ಮರುದಿನ ರೇಖಾ ಸುಧಾಳ ಮನೆಗೆ ಹೋಗಬೇಕೆಂದು ಕೊಂಡವಳು ಅವಳತ್ತೆಗೆ ನನ್ನ ಕಂಡರೆನೆ ಆಗಲ್ಲಾ ಏನು ಮಾಡೋದು ಎಂದು ಯೋಚಿಸುತ್ತ ರಾಜೇಶನ ಬ್ಯಾಂಕಿಗೆ ಫೋನ ಮಾಡಿದರೆ ಎಂಬ ವಿಚಾರ ಬರುತ್ತಲೆ ಮನೆಯ ಹತ್ತಿರಕ್ಕೆ ಇರುವ ಕ್ವಾಯಿನ್ ಬಾಕ್ಸ್‌ನಿಂದ ಫೋನ್ ಮಾಡಿದಳು. ಅತ್ತ ಹಲೋ ಎಂಬ ರಾಜೇಶನ ಧ್ವನಿ ಕೇಳುತ್ತಲೆ ಹಲೋ ರಾಜೇಶವರೆ ನಾನು ರೇಖಾ ಎಂದಳು. ಹೇಗಿದ್ದಿರಾ ರೇಖಾ ಅವರೆ ಎಂದ. ನಾನು ಚೆನ್ನಾಗಿದ್ದೇನೆ. ಈಗ ಸುಧಾ ಹೇಗಿದ್ದಾಳೆ ಎಂದಳು. ಅವಳು ಚೆನ್ನಾಗಿದ್ದಾಳೆ ಅವಳನ್ನೆ ಭೇಟಿಯಾಗಬೇಕಿತ್ತು ಆದರೆ ನಿಮ್ಮ ತಾಯಿಯವರಿಗೆ ನನ್ನ ಕಂಡರೆ ಆಗೊಲ್ಲಾ ಹೀಗಾಗಿ ಮನೆಗೆ ಬರದೆ ಫೋನ್ ಮಾಡಿದೆ ಎಂದಳು. ಹಾಗೇನು ತಿಳಿಯಬೇಡಿ ರೇಖಾ. ನಮ್ಮ ತಾಯಿಗೆ ತಮ್ಮ ತಪ್ಪಿನ ಅರಿವಿದೆ. ಅದು ಅಲ್ಲದೆ ಸುಧಾ ತವರು ಮನೆಯಲ್ಲಿದ್ದಾಳೆ ಎಂದು ಹೌದಾ ಹಾಗಾದರೆ ನಾನು ಅವಳನ್ನು ಭೇಟಿಯಾಗ್ತಿನಿ ಬಿಡಿ ಎಂದಳು. ರೇಖಾರವರೇ ನಿಮಗೆ ತುಂಬಾ ಥ್ಯಾಂಕ್ಸ್ ನನ್ನ ಹೆಂಡತಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದ್ದಕ್ಕೆ ಅಂದ. ಇದರಲ್ಲಿ ಥ್ಯಾಂಕ್ಸ್ ಏನು ಬಂತು. ಅದು ನನ್ನ ಕರ್ತವ್ಯ ಎಂದಳು. ಅದು ನಿಮ್ಮ ದೊಡ್ಡಗುಣ ಎಂದ. ಮತ್ತೊಮ್ಮೆ ಮಾತಾಡ್ತಿನಿ ಎಂದು ರೇಖಾ ಫೋನ್ ಇಟ್ಟು ಹೋರಬಂದಳು. ಮನೆಗೆ ಬಂದವಳೇ ಅಮ್ಮಾ ನಾನು ಸುಧಾಳ ಮನೆಗೆ ಹೋಗ್ತಿನಿ ಬಾಗಿಲ ಹಾಕ್ಕೊ ಎಂದು ಹೇಳಿ ಹೋದಳು. ರೇಖಾ ಸುಧಾಳ ಮನೆಗೆ ಬಂದು ಸುಧಾ ಎಂದು ಕೂಗಿದಳು. ಇವಳ ಕೂಗು ಕೇಳಿದ ಸುಧಾ ಓಡಿ ಬಂದು ರೇಖಾ ಎಂದು ಅವಳನ್ನು ತಬ್ಬಕೊಂಡಳು. ಏ ಈಗ ನೀನು ಈ ರೀತಿ ಓಡಾಡಬಾರದೂಂತಾ ಗೊತ್ತಿಲ್ವಾ ಎಂದಳು. ಇರಲಿ ಬಾರೆ ನನಗೇನಾಗುತ್ತೆ ಏನಾದರೂ ನೀನಿದ್ದಿಯಲ್ಲ ಎಂದಳು. ಎಲ್ಲೆ ಇರ್‍ತಿನಿ ನಾಡಿದ್ದು ಬೆಳಿಗ್ಗೆ ಶಿವಮೊಗ್ಗಕ್ಕೆ ಹೋಗಬೇಕಲ್ಲ ಎಂದಳು. ಹೌದೇನೆ ಹೋಗಿ ಬಾರೆ ನೀನಾದರೂ ಎಲ್.ಎಲ್.ಬಿ. ಮುಗಿಸು ನನ್ನಿಂದಂತು ಆಗಲಿಲ್ಲ ಎಂದಳು ಸುಧಾ ವಿಷಾದದಿಂದ.

ಆಗ ರೇಖಾ, ಆಂಟಿ ಎಲ್ಲಿ ಕಾಣ್ತಾ ಇಲ್ಲ ಎಂದಳು. ತರಕಾರಿ ತರೋಕೆ ಹೋಗಿದ್ದಾಳೆ ಎಂದಳು ಸುಧಾ. ಈಗ ನೀನು ಸಂಪೂರ್ಣ ಆರೋಗ್ಯವಾಗಿದ್ದಿ ತಾನೆ ಎಂದಳು ರೇಖಾ ಚೆನ್ನಾಗಿದ್ದೆನೆ ಎಂದಳು. ಏನಂತಾನೆ ನಿನ್ನ ಮಗ ಬಂದಳು. ಅದೇನು ಅಷ್ಟು ಖಡಾಖಂಡಿತವಾಗಿ ಮಗಾ ಅಂತಿದ್ದಿಯಾ ಮಗಳು ಆಗಬಹುದಲ್ಲ ಎಂದಳು. ಓ ಅಗತ್ಯವಾಗಿ ಯಾವುದಾದರೂ ಒಳ್ಳೆಯದೇ ಎಂದಳು. ರೇಖಾ ಬರಿ ನನ್ನ ಚಿಂತೆನೆ ಮಾಡ್ತಿಯಾ ಸ್ವಲ್ಪ ನಿನ್ನ ಬಗ್ಗೆನು ಚಿಂತೆನು ಮಾಡೆ ಎಂದಳು ಸುಧಾ ಅರ್ಥಗರ್ಭಿತವಾಗಿ. ನನ್ನ ಚಿಂತೆನಾ ನನ್ನದೇನಿದೆ ಚಿಂತೆ ಮಾಡೊಕೆ ಎಂದಳು. ನೀನು ಆದಷ್ಟು ಬೇಗ ಮದುವೆಯಾಗು ರೇಖಾ. ಓ ನೀನೊಬ್ಬಳು ಅರ್ಧಾ ಆಗಿದ್ದಿ ನೋಡು ನನಗೆ ಈ ಮಾತು ಹೇಳೊಕೆ. ಅಮ್ಮ ಅಂತು ಈ ಮಾತು ಹೇಳಿ ಹೇಳಿ ನನ್ನ ಪ್ರಾಣಾ ತಿಂತಾಳೆ ಎಂದಳು ರೇಖಾ. ಇನ್ನು ಆರು ತಿಂಗಳಿಗೆ ನಿನ್ನದು ಕಲಿಯೊದೆಲ್ಲ ಮುಗಿದುಬಿಡ್ತದಲ್ಲ ಆಗ ಮದುವೆಯಾಗು ಎಂದಳು. ನಿನ್ನ ಕತೆ ನೋಡ್ತಾ ಇದ್ದಿನಲ್ಲಾ ಮದುವೆಯಾದವರು ಸುಖವಾಗಿರುವುದು ಅಷ್ಟರಲ್ಲೆ ಇದೆ ಬಿಡು ಎಂದಳು. ನನ್ನದು ಹೀಗಾಯಿತುಂತ ಎಲ್ಲರದು ಹಾಗೆ ಆಗುತ್ತದಾ. ನೀನು ನನಕ್ಕಿಂತಲೂ ಒಂದು ಒಳ್ಳೆ ಮನೆ ಸೇರತಿಯಾ ಏನು ಭವಿಷ್ಯ ಹೇಳ್ತಾ ಇದ್ದಿಯಾ ಇಲ್ಲಾ ನಿಜಾ ಹೇಳ್ತಾ ಇದ್ದಿನಿ ಎಂದಳು. ಹೊಗಲಿ ಬಿಡು ಸುಧಾ ನೀನಗೆ ನಾನು ಮದುವೆಯಾಗೊದು ಇಷ್ಟಾಂದ್ರೆ ಸರಿ ಬಿಡು ನಿನ್ನಿಷ್ಟಾನೆ ನನ್ನಿಷ್ಟಾ ಎಂದಳು. ಥ್ಯಾಂಕು ರೇಖಾ ಎಂದಳು ಸುಧಾ.

ಆಗ ತರಕಾರಿ ತಗೊಂಡು ಬಂದ ಕಾವೇರಮ್ಮ ಏನಮ್ಮಾ ರೇಖಾ ಯಾವಾಗ ಬಂದೆ ಎಂದಳು. ಈಗಾಗಲೆ ಬಂದು ಒಂದು ಗಂಟೆಯಾಗಿದೆ ಎಂದಳು ರೇಖಾ. ಅವಳಿಗೆ ಬರಿ ಮಾತೆ ಹೇಳಿತಿದಿಯಾ ಇಲ್ಲಾ ಕುಡಿಯೋದಕ್ಕೆ ಏನಾದರೂ ಮಾಡಿಕೊಟ್ಟಿಯೊ ಎಂದು ಸುಧಾಳನ್ನು ಕೇಳಿದಳು. ಆಗ ಸುಧಾಳಿಗೆ ತಾನು ಇಷ್ಟು ಹೊತ್ತಾದರೂ ರೇಖಾಳಿಗೆ ಏನು ಕೊಡದೆ ಇದ್ದುದು ನೆನಪಾಗಿ ಅಮ್ಮಾ ಇನ್ನು ಏನು ಕೊಟ್ಟಿಲ್ಲಮ್ಮ ಎಂದಳು. ಸರಿ ಬಿಡಿ ನೀವಿಬ್ರು ಮಾತಾಡ್ತಾ ಕೂತರೆ ಪ್ರಪಂಚಾನೆ ಮರೀತಿರಾ ಎಂದು ನಗುತ್ತಾ ಒಳಗೆ ಹೋದವಳೆ ಎರಡು ಕಫ್ ಕಾಫಿ ತಂದು ಕೊಟ್ಟಳು ಕಾವೇರಮ್ಮ. ಕಾಫಿ ಕುಡಿದು ರೇಖಾ ಆಂಟಿ ಇವಳ ಸೀಮಂತ ಯಾವಾಗ ಇಟ್ಕೊಂಡಿದ್ದಿರಾ ಎಂದು ಕೇಳಿದಳು. ಇವತ್ತು ಇವರ ತಂದೆ ಜೋಯಿಷರನ್ನ ಭೇಟಿಯಾಗಿ ಒಳ್ಳೆಯ ಮಹೂರ್ತ ಯಾವಾಗ ಇದೆ ಅಂತ ತಿಳಕೊಂಡು ಬರ್‍ತಾರಂತೆ ಆಮೇಲೆ ನಿರ್ಧಾರ ಮಾಡಬೇಕಮ್ಮ. ಆ ಕಾರ್ಯಕ್ರಮ ಇಟ್ಕೊಂಡಾಗ ತಿಳಿಸ್ತಿವಮ್ಮ ನೀನು ಮತ್ತು ನಿಮ್ಮ ತಾಯಿಯ ಜೊತೆ ಬಂದುಬಿಡು ಎಂದರು. ನನಗೆ ಆಗುತ್ತದೊ ಇಲ್ಲವೊ ಗೊತ್ತಿಲ್ಲಮ್ಮ ಯಾಕಂದ್ರೆ ನಾನು ನಾಳೆ ಮತ್ತೆ ಸಿಟಿಗೆ ಹೋಗಬೇಕು. ಇನ್ನು ಬರೋದು ಪರೀಕ್ಷೆಯೆಲ್ಲ ಮುಗಿದ ಮೇಲೆನೆ. ನಮ್ಮ ತಾಯಿ ಬರ್‍ತಾಳೆ ಎಂದಳು. ನೀನು ಇದ್ದಿದರೆ ಚೆನ್ನಾಗಿರುತ್ತಿತ್ತು. ನಾನು ಒಬ್ಬಳು ಮರಿಸುಧಾ ಬಂದ ಮೇಲೆನೆ ಬರ್‍ತಿನಿ ಅವಳನ್ನು ನೋಡಲು ಎಂದಳು ರೇಖಾ. ಅವಳ ಮಾತಿಗೆ ಸುಧಾ ಮತ್ತು ಕಾವೇರಮ್ಮ ನಗತೊಡಗಿದರು. ಪತ್ರ ಬರಿತಿರಮ್ಮ ರೇಖಾ ಆದೆ ಇವಳಿಗೊಂದಿಷ್ಟು ಸಮಾಧಾನ. ಓ ಅಗತ್ಯವಾಗಿ ಆಂಟಿ ನಾನಿನ್ನು ಹೋರಡುತ್ತೇನೆ ಎಂದಳು. ಸುಧಾ ಅವಳನ್ನು ಬಾಗಿಲವರೆಗು ಬಿಡಲು ಬಂದಳು. ಪತ್ರ ಬರಿಯುತ್ತಿರು ಸುಧಾ, ಪರಿಸ್ಥಿತಿನ ಧೈರ್ಯವಾಗಿ ಎದುರಿಸುವುದನ್ನು ಕಲಿತುಕೊ ಎಂದಳು. ರೇಖಾ. ಅದಕ್ಕೆ ಸುಧಾ ಹೂ ಎನುತ್ತಾ ಅವಳಿಗೆ ಕೈ ಬೀಸಿದಳು. ಅದಕ್ಕೆ ಪ್ರತಿಯಾಗಿ ರೇಖಾ ಕೂಡಾ ಕೈಬೀಸಿದಳು.

ವೆಂಕಟಗಿರಿ ಸಂಜೆ ಫ್ಯಾಕ್ಟರಿಯ ಕೆಲಸ ಮುಗಿಯುತ್ತಲೆ ನೇರವಾಗಿ ಜೋಯಿಷರ ಮನೆಗೆ ಹೋಗುತ್ತಲೆ ಅವನ ಹೆಂಡತಿ ಅನ್ನಪೂರ್ಣಮ್ಮ ಬರ್ರಿ ಕುತ್ಕೊಳ್ಳಿ ಎಂದು ಚಾಪೆ ಹಾಸಿದಳು. ಅವರು ಕುಳಿತುಕೊಳ್ಳುತ್ತಾ ಜೋಯಿಷರು ಇಲ್ಲವೆ ಎಂದರು ವೆಂಕಟಗಿರಿ. ಅವರು ದೇವಸ್ಥಾನಕ್ಕೆ ಹೋಗಿದ್ದಾರೆ ಇನ್ನೆನು ಬರಹೊತ್ತು ನೀವು ಕೂತ್ಕೊಳ್ಳಿ ಎಂದಳು. ವೆಂಕಟಗಿರಿ ಮನೆಯನ್ನೊಮ್ಮೆ ಸುತ್ತಲು ಕಣ್ಣಾಡಿಸಿ ನೋಡಿದರು. ತುಂಬಾ ಹಳೆಯದಾದ ಮನೆ ಎನಿಸಿತು. ನಡುಮನೆಯ ಮದ್ಯದಲ್ಲಿ ಒಂದು ತೂಗುಮಂಚವಿತ್ತು. ಮನೆ ಕಟ್ಟಿಸಿ ತುಂಬಾ ವರ್ಷವಾಯಿತು ಅಂತ ಕಾಣತ್ತೆ ಎಂದರು ವೆಂಕಟಗಿರಿ. ಇದನ್ನು ನಾವು ಕಟ್ಟಿಸಿಲ್ಲ ಇದು ಇವರ ತಂದೆಯ ಕಾಲದಿಂದಲೂ ಇದೆ ಒಟ್ಟಿನಲ್ಲಿ ಪಿತ್ರಾರ್ಜಿತ ಆಸ್ತಿ ಎನ್ನಿ ಎಂದರು ವೆಂಕಟಗಿರಿ ನಗುತ್ತಾ. ಅದೇ ಸಮಯಕ್ಕೆ ಜೋಯಿಷರು ಬಂದರು. ಏನು ಸ್ವಾಮಿ ಇಲ್ಲಿಯವರೆಗೂ ದಯಮಾಡಿಸಿದ್ದೀರಿ ಎಂದರು ಬಂದ ಕಾರಣವನ್ನು ತಿಳಿಯುವ ಸಲುವಾಗಿ. ನನ್ನ ಮಗಳು ಸುಧಾಳ ಸೀಮಂತ ಇಟ್ಕೊಬೇಕೂಂತ ಇದ್ದಿವಿ ಅದಕ್ಕೆ ಒಳ್ಳೆಯ ದಿನ ಯಾವಾಗ ಅಂತ ತಾವು ತಿಳಿಸಿದರೆ ತುಂಬಾ ಉಪಕಾರ ಆಗುತ್ತದೆ ಎಂದರು. ಇದರಲ್ಲಿ ಉಪಕಾರ ಏನು ಬಂತು ನನ್ನ ಕೆಲಸಾನೆ ಅದಲ್ಲವೆ ಎಂದು ನಗುತ್ತಾ ಹೆಂಡತಿಗೆ ಕಾಫಿ ತರಲು ಹೇಳಿದರು. ಅನ್ನಪೂರ್ಣಮ್ಮ ಕಾಫಿ ಮಾಡಲು ಒಳಗೆ ಹೋದರು. ಜೋಯಿಷರು ಪಂಚಾಂಗ ನೋಡಿ ಈ ತಿಂಗಳ ಹದಿನಾರನೆಯ ತಾರೀಖು ಪ್ರಶಸ್ತವಾಗಿದೆ ಎಂದರು. ಇವತ್ತು ಒಂದನೆಯ ತಾರಿಖು ಇನ್ನು ಹದಿನೈದು ದಿನ ಇದೆ. ನೀವು ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಾಲಾವಕಾಶವಿದೆ ಎಂದರು ಜೋಯಿಷರು. ಸರಿ ಹಾಗೆ ಮಾಡುತ್ತೇನೆ. ಆಗ ಅನ್ನಪೂರ್ಣಮ್ಮ ಇಬ್ಬರಿಗೂ ಕಾಫಿ ಕೊಟ್ಟರು. ಕಾಫಿ ಕುಡಿದ ವೆಂಕಟಗಿರಿ ದಕ್ಷಿಣೆಯಿಟ್ಟು ನಾನಿನ್ನು ಹೊರಡುತ್ತೇನೆ ಜೋಯಿಷರೆ ಎಂದು ಎದ್ದು ಬಂದರು.

ಅವರು ಮನೆಗೆ ಬಂದಾಗ ರಾತ್ರಿ ತುಂಬಾ ಹೊತ್ತಾಗಿದ್ದರಿಂದ ಸುಧಾ ಮತ್ತು ಚಂದ್ರು ಊಟ ಮಾಡಿ ಮಲಗಿದ್ದರು. ಕಾವೇರಮ್ಮ ಗಂಡನ ದಾರಿ ಕಾಯುತ್ತಿದ್ದವರು ಗಂಡ ಬರುತ್ತಲೆ ಏನೂಂದ್ರೆ ಇಷ್ಟೊತ್ತಾ ಮನೆಗೆ ಬರೋದು ಎಂದಳು. ಹೇಳ್ತಿನಿ ಎಂದವರೆ ಕೈಕಾಲು ತೊಳೆದು ಬಂದರು. ಆಗ ಕಾವೇರಮ್ಮ ಅವರಿಗೆ ಬಾಳೆ ಎಲೆ ಹಾಕಿ ಊಟಕ್ಕೆ ಬಡಿಸಿದರು. ಊಟ ಮಾಡುತ್ತ ವೆಂಕಟಗಿರಿ ತಾವು ಜೋಯಿಷರು ಮನೆಗೆ ಹೋಗಿ ಬಂದುದರ ಬಗ್ಗೆ ಹೇಳಿದರು. ಆಗ ಕಾವೇರಮ್ಮನವರ ಮುಖ ಅರಳಿತು. ಹಾಗಾದ್ರೆ ನಾವು ಬಟ್ಟೆ-ಬರೆ ಎಲ್ಲಾ ತಗೊಬೇಕು ಅದಕ್ಕೆಲ್ಲ ದುಡ್ಡು ಹೇಗೆ ಹೊಂದಿಸೊದು ಎಂದಳು. ಅದೆಲ್ಲಾ ಹೇಗೊ ಆಗೊತ್ತೆ ಮೊದಲು ನೆಂಟರಿಷ್ಟರಿಗೆಲ್ಲಾ ತಿಳಿಸಬೇಕು ಎಂದರು. ಅವರು ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಳ್ಳುತ್ತಾ ಕುಳಿತ್ತಿದ್ದರು. ಅನಂತರ ಕಾವೇರಮ್ಮ ಊಟ ಮಾಡಿ ಗಂಡನ ಜೊತೆ ಸ್ವಲ್ಪ ಹರಟುತ್ತಿದ್ದು ಅನಂತರ ನಿದ್ದೆ ಹೋದರು. ಮರುದಿನ ಸಾಯಂಕಾಲ ಅದೇ ತಾನೆ ಫ್ಯಾಕ್ಟರಿಯಿಂದ ಬಂದು ಕಾಫಿ ಕುಡಿಯುತ್ತಿದ್ದರು ವೆಂಕಟಗಿರಿ. ಅದೇ ಹೊತ್ತಿಗೆ ರಮಾನಂದರು ಬಂದರು. ಬರಬೇಕು ರಾಯರೇ ಅಪರೂಪ ಆದ್ರಿ ಎಂದರು ವೆಂಕಟಗಿರಿ. ಏನಿಲ್ಲ ನಿನ್ನೆ ನೀವು ಜೋಯಿಷರನ್ನು ನೋಡಲು ಹೋಗಿದ್ದಿರಂತೆ ಇಂದು ಬೆಳಿಗ್ಗೆ ನನಗೆ ಜೋಯಿಷರು ಸಿಕ್ಕಿದ್ದರು. ಎಲ್ಲಾ ಹೇಳಿದರು. ಅಷ್ಟೊತ್ತಿಗೆ ಕಾವೇರಮ್ಮ ರಮಾನಂದರಿಗೆ ಕಾಫಿ ಕೊಟ್ಟರು. ಅವರು ಕಾಫಿ ಕುಡಿಯುತ್ತಿದ್ದವರು ಸುಧಾಳ ಸೀಮಂತ ಕಾರ್ಯವನ್ನು ನೀವೀಗ ಮಾಡಿದರು ನಾವು ನಮ್ಮ ಸಂಪ್ರದಾಯದಂತೆ ಮತ್ತೊಮ್ಮೆ ಮಾಡಬೇಕಾಗುತ್ತದೆ ಒಂದೇ ಊರಲ್ಲಿ ಇರೋವಾಗ ಎರಡೆರಡು ಸಲ ಸೀಮಂತ ಮಾಡೋದಕ್ಕಿಂತ ಇಬ್ಬರು ಸೇರಿ ಒಟ್ಟಿಗೆ ಒಂದೇ ಸಲ ಭರ್ಜರಿಯಾಗಿ ಮಾಡೋಣ ಇದರಿಂದ ಖರ್ಚು ಕಡಿಮೆಯಾಗುತ್ತದೆ ಅಂದರು. ಆಗ ವೆಂಕಟಗಿರಿಗೆ ಅದೆ ಸರಿಯನಿಸಿತು. ಸರಿ ಹಾಗೆ ಮಾಡೋಣ ರಾಯರೇ ಎಂದರು ವೆಂಕಟಗಿರಿ. ನಾನು ನಾಳೆ ರಾಜೇಶನ ಕಳಸ್ತಿನಿ ಅವನು ಮುಂದೆ ನಿಂತು ನೋಡ್ಕೊತಾನೆ ಎಂದು ರಮಾನಂದರು ಹೊರಡುವ ಮುನ್ನ ಸುಧಾಳನ್ನು ಮಾತಾಡಿಸಿ ಹೋದರು. ವೆಂಕಟಗಿರಿ ಹಾಗೂ ಕಾವೇರಮ್ಮನಿಗೆ ದುಡ್ಡು ಹೇಗೆ ಹೊಂದಿಸುವುದು ಎಂದು ಚಿಂತೆಯಾಗಿತ್ತು ಈಗ ಆ ಸಮಸ್ಯೆ ಇಲ್ಲ ಅನಿಸಿತು. ಮರುದಿನ ರಾಜೇಶ ಬಂದು ತಮ್ಮ ಕಡೆಯಿಂದ ಎಂದು ಅರ್ಧದಷ್ಟು ಖರ್ಚನ್ನು ಅತ್ತೆಗೆ ಕೊಟ್ಟು ಅಗತ್ಯ ವಸ್ತುಗಳ ಪಟ್ಟಿ ಮಾಡಿಕೊಂಡ. ಅದನ್ನು ತರಲೆಂದು ಮಾರ್ಕೆಟಿಗೆ ಹೋದ. ಪದ್ಮಮ್ಮ ಹಳೆಯದನ್ನೆಲ್ಲ ಮರೆತು ಸೊಸೆಯ ಸೀಮಂತ ವಿಜೃಂಭಣೆಯಿಂದ ಮಾಡಬೇಕೆಂದು ಸೊಸೆಗೊಂದು ಕಾಂಚಿವರಂ ರೇಷ್ಮೆ ಸೀರೆಯೊಂದನ್ನು ಕೊಂಡು ತಂದಿದ್ದಳು. ರಮಾನಂದರು ಹೆಂಡತಿಗೆ ಒಳ್ಳೆಯ ಬುದ್ಧಿ ಬಂದಿದೆ ಎಂದುಕೊಂಡು ಖುಷಿಪಟ್ಟರು. ಅವರು ತಮ್ಮ ನೆಂಟರಿಷ್ಟರಿಗೆಲ್ಲ ಬರಲು ಹೇಳಿ ಬಂದಿದ್ದರು. ರಾಜೇಶ ಅಗತ್ಯ ವಸ್ತುಗಳನ್ನೆಲ್ಲ ತಂದುಕೊಟ್ಟು ಅಡುಗೆಯವರನ್ನು ಗೊತ್ತು ಮಾಡಲು ಹೋದ. ಅದಾದ ಮೇಲೆ ತನ್ನ ಬ್ಯಾಂಕಿನ ಸಿಬ್ಬಂದಿಯವರನ್ನೆಲ್ಲ ಬರಲು ಹೇಳಿದ.

ಅಂದುಕೊಂಡಂತೆ ಆ ದಿನ ಬಂದೆಬಿಟ್ಟಿತು. ಸುಧಾ ಗುಲಾಬಿ ರೇಷ್ಮೆ ಸೀರೆ ಉಟ್ಟು ಮಲ್ಲಿಗೆ ಹೂವನ್ನು ಮುಡಿದು ಅಪ್ಸರೆಯಂತೆ ಕಂಗೊಳಿಸುತ್ತಿದಳು. ರಾಜೇಶನೆ ಮುಂದೆ ನಿಂತು ಎಲ್ಲ ಕೆಲಸವನ್ನು ವಹಿಸಿಕೊಂಡಿದ್ದ. ಬೀಗರಿಬ್ಬರ ಕಡೆಯಿಂದಲು ಬಹಳಷ್ಟು ನೆಂಟರು ಬಂದಿದ್ದರು. ಪದ್ಮಮ್ಮಳಂತು ಸೊಸೆಯ ಸೀಮಂತ ಕಾರ್ಯದಲ್ಲಿ ಹುಡುಗಿಯಂತೆ ಒಡಾಡುತ್ತಿದ್ದಳು. ಕಾವೇರಮ್ಮನಿಗೂ ಅಷ್ಟೆ ತಮ್ಮ ಮಗಳ ಸೀಮಂತ ಇಷ್ಟೊಂದು ವೈಭವದಿಂದ ನಡೆಯುತ್ತದೆ ಎಂದು ಅನಿಸಿರಲಿಲ್ಲ. ಇಂದು ಸುಧಾ ಸಂತೋಷವಾಗಿದ್ದಾಳೆ ಅವಳಿಗೆ ತನ್ನ ಮದುವೆ ಸಮಯದಲ್ಲಿಯೂ ಕೂಡಾ ಇಷ್ಟೊಂದು ಸಂತೋಷವಾಗಿರಲಿಲ್ಲ ಎಂದುಕೊಂಡರು. ಆದರೆ ಸುಧಾಳಿಗೆ ಇಂತಹ ಸಂತೋಷ ವಾತಾವರಣದಲ್ಲಿ ರೇಖಾ ಇಲ್ಲದಿರುವುದು ದೊಡ್ಡ ಕೊರತೆ ಎನಿಸಿತು. ಆದರೆ ರೇಖಾಳ ತಾಯಿ ರಾಧಮ್ಮ ಸುಧಾಳಿಗೆ ನೂರು ವರ್ಷ ಚೆನ್ನಾಗಿ ಬಾಳಮ್ಮ ಎಂದು ಹರಿಸಿದ್ದರು. ನೆಂಟರಿಷ್ಟರು ಮರುದಿನ ತಮ್ಮ ಊರಿಗೆ ಹೊರಟು ಹೋದರು. ಉಡುಗೋರೆಗಳು ಸಾಕಷ್ಟು ಬಂದಿದ್ದವು. ಚಂದ್ರು ಎಲ್ಲ ಉಡುಗೋರೆಗಳನ್ನು ಬಿಚ್ಚಿ ನೋಡುತ್ತಿದ್ದ. ಕೆಲವೊಂದರಲ್ಲಿ ಸೀರೆಗಳಿದ್ದರೆ, ಇನ್ನು ಕೆಲವೊಂದರಲ್ಲಿ ಪಾತ್ರೆಗಳು ಇದ್ದವು. ಅಕ್ಕಾ ಇಲ್ಲಿ ನೋಡು ಬಾ ಅಕ್ಕಾ ಎಷ್ಟು ಚೆನ್ನಾಗಿವೆ ಸೀರೆಗಳು ಎಂದ. ಇರಲಿ ಬಿಡೊ ಎಂದಳು. ಆಗ ಒಂದು ಪ್ಯಾಕೆಟನ್ನು ಬಿಚ್ಚಿದ ಅದರಲ್ಲಿ ಮಾತ್ರ ತಾಯಿಯ ಮಗುವಿನ ಒಂದು ಕಲಾಕೃತಿಯಿತ್ತು. ಅದನ್ನು ನೋಡಿದ ಸುಧಾ ಎದ್ದು ಬಂದು ನೋಡಿದಳು.  ಅದು ಅವಳಿಗೆ ತುಂಬಾ ಇಷ್ಟಾ ಆಯಿತು ಆ ಪ್ಯಾಕೇಟ್ ಯಾರು ಕೊಟ್ಟಿದ್ದು ಎಂದು ಹೆಸರು ನೋಡಿದಳು. ಅದು ರೇಖಾಳ ತಾಯಿ ರಾಧಮ್ಮ ಕೊಟ್ಟಿದ್ದರು. ಅದರಲ್ಲಿ ಒಂದು ಪತ್ರವಿತ್ತು. ತೆಗೆದು ಓದಿದಳು. ಅದು ರೇಖಾ ಬರೆದ ಪತ್ರವಾಗಿತ್ತು.

ಆತ್ಮೀಯ ಗೆಳತಿ ಸುಧಾ,
ರೇಖಾ ಮಾಡುವ ಶುಭಾಶಯಗಳು. ನಾನು ನಿನ್ನ ಸಮಾರಂಭಕ್ಕೆ ಬರದೆ ಇರೋದು ಬೇಸರವಾಗಬಹುದು ನನ್ನನ್ನು ಕ್ಷಮಿಸು. ಆದರೆ ನಾನು ನೀಡುವ ಚಿಕ್ಕ ಕಾಣಿಕೆ ನಿನಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ. ನಿನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳು. ನಿನ್ನ ಬಾಳು ಸದಾ ಹಸಿರಾಗಿರಲಿ ನಿನ್ನ ಮನೆ ಆದಷ್ಟು ಬೇಗ ನಂದಗೋಕುಲವಾಗಲಿ ಎಂದು ಹಾರೈಸುವ,

ಇಂತಿ ನಿನ್ನ ಗೆಳತಿ

ರೇಖಾ

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x