ನಾಟಕಕಾರರಾಗಿ ಕುವೆಂಪು (ಭಾಗ-20) : ಹಿಪ್ಪರಗಿ ಸಿದ್ದರಾಮ್, ಧಾರವಾಡ

 
 
 
 
 
 
 
 
 
ಆತ್ಮೀಯ ಓದುಗಪ್ರಭುಗಳೇ,
 
ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಕಳೆದ ಸಂಚಿಕೆಯಲ್ಲಿ ನಾವು ನೋಡಿದ ಚಿಣ್ಣರಿಗಾಗಿ ರಚಿಸಿದ ‘ಮೋಡಣ್ಣನ ತಮ್ಮ’ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು ದಾಟಿ ವಿಶ್ವಮಾನವರಾಗುವ ಸಂದೇಶದ ಸುಳಿವು/ಹೊಳವು ಮುಂತಾದ ಸಂಗತಿಗಳನ್ನು ಕಳೆದ ಶತಮಾನದ ಆರಂಭಕಾಲದ ತಮ್ಮ ಕೃತಿಯಲ್ಲಿ ಕಾಣಿಸಿರುವುದನ್ನು ನಾವು ಕಾಣಬಹುದು.
ಮುಂದುವರೆದು, ಮಹಾಕವಿಗಳಿಂದ ಚಿಣ್ಣರಿಗಾಗಿಯೇ 1930ರಲ್ಲಿ ರಚಿತಗೊಂಡಿರುವ ಅಪರೂಪದ ಇನ್ನೊಂದು ರಂಗಕೃತಿಯಾದ ‘ನನ್ನ ಗೋಪಾಲ’ದ ಕುರಿತು ಈ ಸಂಚಿಕೆಯಲ್ಲಿ ನೋಡೋಣ. ಈ ಕೃತಿಯು ಒಂಬತ್ತು ನೋಟ(ದೃಶ್ಯ)ಗಳನ್ನು ಒಳಗೊಂಡಿದೆ. ಈ ಕೃತಿಯ ಮೊದಲ ಮುದ್ರಣವು 1930ರಲ್ಲಿ, ಮರುಮುದ್ರಣವು 1937ರಲ್ಲಿ ಶಿವಮೊಗ್ಗದ ಕಾವ್ಯಾಲಯ ಪ್ರಕಾಶನದಿಂದ ಪ್ರಕಟಗೊಂಡಿತ್ತು. ಎರಡನೇಯ ಮುದ್ರಣವು ಉದಯರವಿ ಪ್ರಕಾಶನದವರಿಂದ ಮೊದಲಬಾರಿಗೆ 1958ರಲ್ಲಿ ಪ್ರಕಟಗೊಂಡಿದೆ. ಮುಂದೆ ಅನುಕ್ರಮವಾಗಿ 1971, 1985, 1995, 1998ರಲ್ಲಿ ಪ್ರಕಟಗೊಂಡ ಈ ಕೃತಿಯ ಇತ್ತೀಚಿನ ಪ್ರಕಟಣೆಯು ಉದಯರವಿ ಪ್ರಕಾಶನದಿಂದ ಏಳನೇಯ ಆವೃತ್ತಿಯ ಮುದ್ರಣದೊಂದಿಗೆ 2007ರಲ್ಲಿ ಪ್ರಕಾಶನಗೊಂಡಿದೆ.
 
ನನ್ನ ಗೋಪಾಲ (1930) :
 
ಈ ಕೃತಿಯ ರಚನೆಯ ಕುರಿತು ಡಾ.ಜಿ.ಎಸ್.ಶಿವರುದ್ರಪ್ಪನವರು ‘1930ರಷ್ಟು ಹಿಂದೆಯೇ ಕುವೆಂಪು ಅವರು ಬರೆದ ಅಪರೂಪದ ಮಕ್ಕಳ ನಾಟಕವಿದು. ಆಗ ಅವರಿದ್ದುದು ಒಬ್ಬ ವಿದ್ಯಾರ್ಥಿಯಾಗಿ ಮೈಸೂರಿನ ರಾಮಕೃಷ್ಣಾಶ್ರಮದ ಆದ್ಯಾತ್ಮಿಕ ವಾತಾವರಣದಲ್ಲಿ. ಹೀಗಾಗಿ ಅವರು ದೈವಭಕ್ತಿ ಮತ್ತು ಮುಗ್ದವಾದ ಮನಸ್ಸಿನ ಭಕ್ತಿ ಇವುಗಳನ್ನು ಎತ್ತಿ ಹಿಡಿಯಲು ಈ ನಾಟಕವನ್ನು ಬರೆದಂತೆ ತೋರುತ್ತದೆ’ ಎಂದು (2010) ಅಭಿಪ್ರಾಯಪಟ್ಟಿರುವರು.
 
ಇನ್ನೋರ್ವ ಹಿರಿಯ ಸಾಹಿತಿಗಳಾದ ಪ್ರೊ.ಹಂಪ ನಾಗರಾಜಯ್ಯನವರು ‘ರಾಷ್ಟ್ರಕವಿ ಕುವೆಂಪುರವರು ಈ ನಾಟಕವನ್ನು ಬರೆದು ಅರ್ಧಶತಮಾನಕ್ಕಿಂತಲೂ ಮಿಗಿಲಾಗಿದ್ದರೂ ಅದು ಇಂದಿಗೂ ಅರ್ಥಪೂರ್ಣವಾಗಿದೆ. ಇಲ್ಲಿ ಪ್ರಕೃತಿಯೇ ಕೇಂದ್ರ ಬಿಂದು. ಪ್ರಕೃತಿಯೇ ಪರಮದೈವವೆಂಬ ಸಂದೇಶವೂ ಅಡಕವಾಗಿದೆ. ನಿಸರ್ಗವನ್ನು ಕಾಪಾಡುವುದು ಮಹತ್ವದ್ದೆಂಬ ಧ್ವನಿ ಕೃತಿಯಲ್ಲಿ ಸಾಧ್ಯಂತವಾಗಿ ಹೊಳಲುಗೊಡುತ್ತದೆ. ಮಕ್ಕಳ ಸುಳ್ಳು, ತಟವಟ, ಕಪಟ ಅರಿಯದ ಮುಗ್ದರು. ಅವರು ಪ್ರಕೃತಿಯ ಕುಡಿಗಳು. ತಾಯಿಯ ತ್ಯಾಗ, ಶಿಕ್ಷಣಕ್ಕಿರುವ ಮಹತ್ವ, ಕಾಡಿನ ಪರಿಸರ ಮುಂತಾದವುಗಳು ಕೃತಿಯಲ್ಲಿ ಸಹಜವಾಗಿ ಬಂದು ಹೋಗುವ ಪಾತ್ರಗಳಾಗಿದ್ದರೂ ಕೊನೆಯವರೆಗೂ ಕಾಡುತ್ತವೆ’ ಎಂದು ಈ ಕೃತಿಯ ಸಂದರ್ಭದಲ್ಲಿ ಆಡಿರುವ (2011) ಮಾತುಗಳು ಕೃತಿಯ ಮಹತ್ವವನ್ನು ಸಾರುತ್ತದೆ.
 
 
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಹಿರಿಯರು ಮತ್ತು ವಿದ್ವಾಂಸರಾಗಿದ್ದ ದಿವಂಗತ. ಎ.ಆರ್.ಕೃಷ್ಣಶಾಸ್ತ್ರಿಗಳು ಮೆಚ್ಚಿಕೊಂಡು ಬರೆದಿರುವ 13-03-1930ರ ಪತ್ರದಲ್ಲಿ ‘ಅದು ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನು ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ. ಮಡಿಮಾಡಿದ ಹತ್ತಿಯ ಬಟ್ಟೆಯಂತಹ ಅಂತರ್-ನೈಮಲ್ರ್ಯವನ್ನು ಅನುಭವಿಸುತ್ತಿದೆ ನನ್ನ ಚೇತನ’ ಎಂದು ಮನದುಂಬಿ ಹೇಳಿರುವುದು ಆಗಿನ ಸಂದರ್ಭದಲ್ಲಿಯೇ ಕೃತಿಯ ಕುರಿತ ಪರಿಣಾಮ ಮತ್ತು ಮಹತ್ವವನ್ನು ಅರಿತುಕೊಳ್ಳಬಹುದು. ಹೀಗೆ ರಚನೆಯ ಆರಂಭಿಕ ಕಾಲದಿಂದ ಹಿಡಿದು ಆಯಾ ಕಾಲಘಟ್ಟದಲ್ಲಿ ಎಲ್ಲಾ ರಂಗಾಸಕ್ತರ, ಸಾಹಿತಿಗಳ ಜೊತೆಗೆ ಮಕ್ಕಳ ಲೋಕದ ಎಲ್ಲರನ್ನು ವಿವಿಧ ದೃಷ್ಟಿಕೋನಗಳಲ್ಲಿ ಅರ್ಥೈಸಿಕೊಳ್ಳುತ್ತಾ ವಿವಿಧ ರಂಗಪ್ರದರ್ಶನ ಪ್ರಕಾರಗಳಲ್ಲಿ ಪ್ರಕಟಗೊಳ್ಳುವಂತೆ ಮಾಡಿಕೊಂಡಿರುವ ಈ ಕೃತಿಯು ಸರ್ವಕಾಲಿಕವಾಗಿದೆ.
 
ಮಹಾಕವಿಗಳು ಅವರ ಇನ್ನಿತರ ರಂಗಕೃತಿಗಳಲ್ಲಿ ಬಳಸಿದ ಕಾವ್ಯಾತ್ಮಕ ಹರಹುಗಳ ಸಂಭಾಷಣೆಗಳಿಲ್ಲ. ಈ ಕೃತಿಯಲ್ಲಿ ಸಂಪೂರ್ಣವಾಗಿ ಗದ್ಯಮಾದರಿಯ ಸುಲಭ ಸಂಭಾಷಣೆಗಳು ಹರಡಿಕೊಂಡಿವೆ. ಇದರಿಂದ ಮಕ್ಕಳ ರಂಗಕೃತಿಗಳಲ್ಲಿಯೇ ಈ ಕೃತಿಯು ಮಹಾಕವಿಗಳ ಲೇಖನಿಯ ವಿಶಿಷ್ಟ ರಚನೆಯಾಗಿದೆ ಎಂದು ನಾವು ಅರ್ಥೈಸಿಕೊಳ್ಳಬಹುದು. ಹಾಗೇ ನೋಡಿದರೆ ಈ ಕೃತಿಯು ಮಕ್ಕಳ ನಾಟಕವೆನ್ನುವುದು ಕೇವಲ ಔಪಚಾರಿಕವಾಗಿ ಕಂಡುಬಂದರೂ ದೊಡ್ಡವರಿಗೂ ಭಕ್ತಿಯ ಪ್ರಭಾವದ ಕುರಿತಾಗಿ ವಿವರಿಸುವಂತಹ ಕಥಾನಕದ ಧ್ವನಿಯಿಂದ ಆಪ್ತವಾಗುತ್ತದೆ. ಅದರಂತೆ, ದೊಡ್ಡವರ ಆಲೋಚನಾ ಪರಿಧಿಯೊಳಗೂ ಪ್ರವೇಶ ಪಡೆದುಕೊಳ್ಳುವ ಈ ಕೃತಿಯನ್ನು ಪ್ರಾಜ್ಞರಾದವರು ಗಮನಿಸಬಹುದು.
 
ಆರಂಭದ ನೋಟ(ದೃಶ್ಯ)ವು ಬೆಳಗಿನ ಜಾವದಲ್ಲಿ ಬಡ ವಿಧವೆಯೋರ್ವಳು ಸಣ್ಣಗೋಪಾಲನ ವಿಗ್ರಹದ ದೇವರಗೂಡನ್ನು ಹೊಂದಿರುವ ಸಣ್ಣ ಗುಡಿಸಲಿನ ಮೂಲೆಯೊಂದರಲ್ಲಿ ಚರಕದ ಮುಂದೆ ಕುಳಿತು ನೂಲುತ್ತಿರುವುದರೊಂದಿಗೆ ಆರಂಭಗೊಳ್ಳುತ್ತದೆ. ಆರಾಧ್ಯ ದೈವ ವೇಣುಗೋಪಾಲನ ಮೂರ್ತಿಯನ್ನು ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತಾಳೆ. ತನಗೆ ಭಕ್ತಿಯೊಂದೇ ಬಲ, ಸಿರಿವಂತರಂತೆ ಅರ್ಪಿಸಲು ತನ್ನಲ್ಲಿ ಏನೂ ಇಲ್ಲದ ಗಂಡನನ್ನು ಕಳೆದುಕೊಂಡ ಬಡವಿಧವೆ ತಾನಾಗಿದ್ದು, ಇರುವ ತನ್ನೊಬ್ಬ ಮುದ್ದು ಮಗನಿಗೆ ಯಾವುದೇ ಕಷ್ಟಗಳು ಬರದಂತೆ ರಕ್ಷಿಸು ಅನವರತ ಎನ್ನುತ್ತಾ ಭಕ್ತಿಯಿಂದ ಸುರಿಸುವ ಕಂಬನಿಯ ಮಾಲೆಯನ್ನು ಅರ್ಪಿಸುತ್ತಾಳೆ. ಆಗ ಅಶರೀರವಾಣಿಯೊಂದು ಕೇಳಿಸುವುದು ಹೀಗೆ :
 
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚತಿ!
ತದಹಂ ಭಕ್ತ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ||
 
ಎಂದಾಗ ಗೋಪಾಲನ ತಾಯಿಯು ಬಡವಳಾದ ತನ್ನ ಮೇಲೆ ಕರುಣೆಯ ಮಳೆಯನ್ನು ಸುರಿಸಿದ ವೇಣುಗೋಪಾಲನೆಂಬ ಕರುಣಾಸಾಗರನಿಗೆ ಶರಣು ಎಂದು ಅಡ್ಡಬೀಳುತ್ತಾಳೆ. ನಂತರ ಮೂಲೆಯಲ್ಲಿ ಇನ್ನೂ ನಿದ್ದೆಯಲ್ಲಿರುವ ತನ್ನ ಮಗ ಗೋಪಾಲನಿಗೆ ‘ಎದ್ದೇಳು ಗೋಪಾಲ’ ಎಂದು ಎಬ್ಬಿಸುತ್ತಾ ಶಾಲೆಗೆ ಹೋಗುವ ಹೊತ್ತಾಗಿದೆ ಎಂದು ಹೇಳುತ್ತಾಳೆ. ಆದರೆ ಗೋಪಾಲನು ತಾಯಿ ಹೇಳುವುದಕ್ಕಿಂತ ಮುಂಚಿತವಾಗಿಯೇ ತನ್ನ ಪ್ರಾತಃಕರ್ಮಾಧಿಗಳನ್ನು ಮುಗಿಸಿಕೊಂಡು ಗೋಪಾಲನು ಶುಚಿಯಾದ ಬಟ್ಟೆಗಳನ್ನು ಧರಿಸಿಕೊಂಡು, ಬುಟ್ಟಿಯಲ್ಲಿ ಹೂಗಳನ್ನು ಕೊಯ್ದುಕೊಂಡು ಹೋಗಿರುತ್ತಾನೆ. ಆಗ ತನ್ನ ತಾಯಿಯಿ ಕರೆಯುತ್ತಿರುವುದನ್ನು ಕೇಳಿಸಿಕೊಳ್ಳುತ್ತಾನೆ. ತಾಯಿಗೆ ತಾನು ಹೂ ತರಲು ಹೋದಾಗ ಕಂಡ ಬನದ ಸೊಗಸನ್ನು ವಿವರಿಸುವಾಗ ಮಹಾಕವಿಗಳ ಮಲೆನಾಡಿನ ನಿಸರ್ಗಪ್ರೇಮ ಪ್ರಕಟಗೊಳ್ಳುವುದನ್ನು ಕಂಡು ಬಯಲುಸೀಮೆಯಲ್ಲಿ ಬೆಳೆದ ನನಗೆ ಪ್ರಕೃತಿಯ ಕೋಮಲತೆಯ ಕುರಿತು ಎಷ್ಟೋ ಸಾರಿ ಕುತೂಹಲ-ಅಚ್ಚರಿಗಳುಂಟಾಗಿವೆ ; ಇನ್ನೂ ಆಗುತ್ತಲಿವೆ. ನಂತರ ತಾಯಿಯು ಅಂತಹ ಪ್ರಕೃತಿಯ ಅಚ್ಚರಿಗಳಿಗೆಲ್ಲ ಆ ವೇಣುಗೋಪಾಲನ ಲೀಲೆ ಕಾರಣವೆಂದು ಹೇಳುತ್ತಾ ದೇವರ ವಿಗ್ರಹವನ್ನು ತೋರಿಸುತ್ತಾಳೆ.
 
ನಂತರ ಅವುಗಳನ್ನು ದೇವರ ಮುಂದೆ ಇಟ್ಟು, ಗಂಜಿ ಕುಡಿದು ಶಾಲೆಗೆ ಹೋಗಲು ಹೇಳುತ್ತಾಳೆ. ಆದರೆ ಗೋಪಾಲನಿಗೆ ಶಾಲೆಗೆ ಹೋಗಲು ಯಾವುದೇ ತಕರಾರು ಇಲ್ಲ. ಶಾಲೆಗೆ ಹೋಗಬೇಕಾದರೆ ಆತನು ಕಾಡಿನ ದಾರಿಯಲ್ಲಿ ಸಾಗಿ ಕಾಡಿನ ಆಚೆಗಿರುವ ಶಾಲೆಯನ್ನು ತಲುಪಬೇಕು. ಉಳಿದ ಸಹಪಾಠಿಗಳು ಶ್ರೀಮಂತರ ಮಕ್ಕಳಾಗಿದ್ದರಿಂದ ಅವರ ಜೊತೆಗೆ ಆಳುಗಳಿರುವುದರಿಂದ ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಪಾಪ ಗೋಪಾಲನಿಗೆ ಯಾರೂ ಜೊತೆಗಾರರಿಲ್ಲ ಮತ್ತು ಆಳುಗಳಂತೂ ಇಲ್ಲವೇ ಇಲ್ಲ. ಈ ಸಮಸ್ಯೆಯನ್ನು ಮುಗ್ದ ಬಾಲಕನು ಹೇಳಿಕೊಂಡಾಗ ತಾಯಿಯು ನೊಂದುಕೊಂಡು ತನ್ನ ಬಡತನದ ಕುರಿತು ಮರುಗುತ್ತಾಳೆ. ನಂತರ ಗೋಪಾಲನು ತಾಯಿಯು ತನಗಾಗಿ ಹೊಸ ಪಂಚೆಯೊಂದನ್ನು ಕೊಡುವುದಾಗೀ ಮೊದಲು ಹೇಳಿರುವುದನ್ನು ನೆನಪಿಸಿ ಇಂದು ಕೊಡಬಹುದೆಂದು ಕೇಳುತ್ತಾನೆ. ಯಾಕಂದರೆ ಈಗಿರುವ ಆತನ ಪಂಚೆಯನ್ನು ನೋಡಿ ತನ್ನ ಸಹಪಾಠಿ ಸ್ನೇಹಿತರು ಗೇಲಿ/ಹಾಸ್ಯ ಮಾಡಿ ನಗುವ ವಿಷಯವನ್ನು ಹೇಳುತ್ತಾ ಅವರು ಬಾರಿ ಬೆಲೆಯುಳ್ಳ ಬಟ್ಟೆ ಹಾಕಿಕೊಂಡು ಬರುವ ಸಂಗತಿಯನ್ನು ಹೇಳುತ್ತಾನೆ. ಆಗ ತಾಯಿಯು ಹೇಳುವುದು ಹೀಗಿದೆ :
 
ಕೊಡುತ್ತೇನೆ ಕಂದ. ನಿನಗಾಗಿ ಹಗಲಿರುಳೂ ನೂತು ಅದನ್ನು ಸಂಪಾದಿಸಿದ್ದೇನೆ. ಹೋಗು, ಗಂಜಿಯುಂಡು ಬಾ ! ಕೊಡುತ್ತೇನೆ
 
ಎಂದು ಹೇಳುವಾಗ ಒಂದೆಡೆ ಸರ್ವರಿಗೂ ಕಡ್ಡಾಯ ಶಿಕ್ಷಣವೆಂಬ ಬೀಜಮಂತ್ರವನ್ನು ಆಗಿನ ಕಾಲದಲ್ಲಿಯೇ ಉಚ್ಚರಿಸುವ ಮಹಾಕವಿಗಳ ಕಥಾನಕದಲ್ಲಿ ಬಡವರು ಶಿಕ್ಷಣ ಪಡೆಯಲು ಹೇಗೆ ಹೆಣಗಾಡುತ್ತಾರೆನ್ನುವ ಸಂಗತಿಯು ಕಥಾವಸ್ತುವಿನಲ್ಲಿ ಅಂತರ್ಮುಖಿಯಾಗಿ ಪ್ರವಹಿಸುವುದನ್ನು ಗಮನಿಸಬಹುದು. ತನ್ನ ಮಗನ ಬಯಕೆಯನ್ನು ಈಡೇರಿಸಲಾಗದೇ ಬಡತನದ ಬಿಸಿಯು ಆತನಿಗೆ ತಾಕದಂತೆ ಎಚ್ಚರಿಕೆವಹಿಸಿರುವುದನ್ನು ನೆನೆಯುತ್ತಾಳೆ. ಆದರೆ ಇಂದು ಮಗನ ಜೊತೆಗೆ ಯಾರನ್ನು ಕಳುಹಿಸುವುದು ಎಂಬುದರ ಕುರಿತಾಗಿ ಯೋಚಿಸುತ್ತಾಳೆ. ‘ಕಾಡಿನಲ್ಲಿ ಮುದ್ದು ಕಂದಮ್ಮನಿಗೆ ಹೆದರಿಕೆಯಾಗುತ್ತಿದೆ ವೇಣು ಗೋಪಾಲ’ ಎಂದು ದೇವರನ್ನು ಸ್ಮರಿಸುತ್ತಾಳೆ. ಆಗ ಅಶರೀರ ವಾಣಿಯೊಂದು ಕೇಳಿಸುವುದು ಹೀಗೆ :
 
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಭೀಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||
 
ಈ ಮಾತಿನಿಂದ ಕೊಂಚ ಸಮಾಧಾನಗೊಳ್ಳುವ ತಾಯಿಯು, ಶಾಲೆಗೆ ಗೋಪಾಲನನ್ನು ಕಳುಹಿಸುತ್ತಾ ‘ಕಾಡಿನಲ್ಲಿ ಹೆದರಿಕೆಯಾದರೆ ಗೋಪಾಲನನ್ನು ಕೂಗು, ಬರುತ್ತಾನೆ’ ಎಂದು ಹೇಳುತ್ತಾಳೆ. ‘ಆತನು ಕಾಡಿನಲ್ಲಿ ದನ ಕಾಯುತ್ತಿರುವ ನಿನ್ನಣ್ಣನಾಗಿದ್ದು, ನೀನು ಕರೆದರೆ ಬಂದು ನಿನ್ನನ್ನು ಕಾಡು ದಾಟಿಸುತ್ತಾನೆ’ ಎಂದು ತನಗಿಲ್ಲದ ಹಿರಿಯ ಮಗನ ಕಥೆಯನ್ನು ಹೇಳಿ ನಂಬಿಸಿ ಕಳಿಸುತ್ತಾಳೆ.
 
ಮುಂದಿನ ಎರಡನೇಯ ನೋಟ(ದೃಷ್ಟಿ)ದಲ್ಲಿ ಗೋಪಾಲನು ಸಂಜೆಯ ಸಮಯದಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದಾನೆ. ಕೈಲಿದ್ದ ವಸ್ತುಗಳನ್ನು ಕೆಳಗಿಟ್ಟು ಹೂ-ಹಣ್ಣುಗಳನ್ನು ಆರಿಸಿಕೊಳ್ಳುತ್ತಾನೆ. ಕೆಲವನ್ನು ಆಯ್ದು ತಿನ್ನುತ್ತಾನೆ. ತಿನ್ನುತ್ತಿರುವಾಗ ಹೆದರಿಕೆಯಾದಂತೆನಿಸಿ ಮತ್ತು ತಾಯಿಯು ಹೇಳಿದ ಮಾತುಗಳನ್ನು ಪರೀಕ್ಷಿಸಬೇಕೆಂದು, ತನ್ನಣ್ಣನು ಕಾಡಿನಲ್ಲಿ ದನ ಮೇಯಿಸುವ ಸಂಗತಿಯನ್ನು ನೆನಪಿಸಿಕೊಂಡು ‘ಗೋಪಾಲಣ್ಣಾ ! ಗೋಪಾಲಣ್ಣಾ !’ ಎಂದು ಕರೆಯುತ್ತಾನೆ. ‘ಏನೋ ಗೋಪಾಲ’ ಎಂದು ಓಗೊಡುವ ಬನದ ಗೋಪಾಲನ ಧ್ವನಿಯಷ್ಟೇ ಕೇಳಿಸುತ್ತದೆ. ‘ಹೆದರಿಕೆಯಾಗುತ್ತಿದೆ ಮುಂದೆ ಬಾ’ ಎಂದು ಕರೆದಾಗ, ಬನದ ಗೋಪಾಲನು ‘ನಾನಿಲ್ಲಿಯೇ ಇದ್ದೇನೆ, ಧೈರ್ಯವಾಗಿ ಹೋಗು ಮನೆಗೆ, ನಾನು ಆಮೇಲೆ ಹಿಂದಿನಿಂದ ಬರುತ್ತೇನೆ, ಅಮ್ಮನಿಗೆ ಹೇಳು, ಅಮ್ಮ ನಿನಗಾಗಿ ಕಾದಿದ್ದಾಳೆ ; ಬೇಗ ಹೋಗಪ್ಪ’ ಎಂದು ಸಮಾಧಾನದ ಮಾತುಗಳನ್ನು ಹೇಳಿ ಬಾಲಕನನ್ನು ಕಳುಹಿಸುತ್ತಾನೆ. ಗೋಪಾಲನು ಹೋದ ನಂತರ ಬನದ ಗೋಪಾಲನು ಕಾಡಿನಿಂದ ಈಚೆಗೆ ಬಂದು ಕೊಳಲೂದುತ್ತಾ ತನ್ನ ನಿಜರೂಪದಲ್ಲಿ (ಕೃಷ್ಣನಾಗಿ) ಕಾಣಿಸಿಕೊಂಡು ಹಾಡುತ್ತಾನೆ.
 
ತಿಳಿವಳಿಕೆಗೆ ನಾ ಸಿಲುಕೇ ಮನುಜಾ
ಒಲುಮೆಗೆ ಸೆರೆಯಾಗುವೆನು
 
ಎಂದು ‘ನಿಜವಾದ ಭಕ್ತಿಯೇ ಸಾಧನೆಯ ಸಾರಸರ್ವಸ್ವ’ವೆಂಬುದನ್ನು ಹಾಡುತ್ತಿರುವಂತೆ ತೆರೆ ಬೀಳುವುದು.
 
ಮುಂದಿನ ಮೂರನೇಯ ನೋಟ(ದೃಶ್ಯ)ದಲ್ಲಿ ಶಾಲೆಯಿಂದ ಬರುವ ಮಗನ ನಿರೀಕ್ಷೆಯಲ್ಲಿ ಗುಡಿಸಲಿನ ಮುಂದೆ ತಾಯಿಯು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡು ಕಾಯುತ್ತಿದ್ದಾಳೆ. ಅಷ್ಟರಲ್ಲಿ ಗೋಪಾಲನು ಬರುತ್ತಾನೆ. ಹೆದರಿಕೊಂಡಿದ್ದಕ್ಕೆ ಬರಲು ತಡವಾಯಿತೇನೆಂದು ತಾಯಿಯು ಕೇಳಿದಾಗ, ಗೋಪಾಲನು ‘ನೀನು ಹೇಳಿದಂತೆಯೇ, ಹೆದರಿಕೆಯಾಗಲು ‘ಗೋಪಾಲಣ್ಣಾ’ ಎಂದು ಕೂಗಿದಾಗ, ‘ಓ’ ಎಂದುತ್ತರಿಸಿ ಬೇಗ ಮನೆಗೆ ಹೋಗಲು ಹೇಳಿದನು’ ಎಂದು ತಾಯಿಯ ಮುಂದೆ ನಡೆದ ವೃತ್ತಾಂತವನ್ನೇಲ್ಲಾ ವಿವರಿಸುತ್ತಾನೆ.  ಕಂಬನಿ ತುಂಬಿದ ಕಂಗಳನ್ನು ಒರೆಸಿಕೊಳ್ಳುತ್ತಾ ಮಗನನ್ನು ಮುದ್ದಿಸುತ್ತಾಳೆ. ತನ್ನ ಮಗನ ಮೂಲಕ ತನಗೆ ವೇಣುಗೋಪಾಲನು ಸಾಕ್ಷಾತ್ಕಾರಗೊಂಡಿರುವ ಅಲೌಕಿಕ ಘಟನೆಯು ತಾಯಿಗೆ ತಿಳಿಯುತ್ತದೆ.
 
ಅದನ್ನು ಕೇಳಿ ರೋಮಾಂಚನಗೊಂಡು, ಆತನು ಹೇಗಿದ್ದ? ಎಂದು ಕುತೂಹಲದಿಂದ ಕೇಳುತ್ತಾಳೆ. ಆದರೆ ಬಾಲಕನು ‘ಆತನಿಗೆ ಬಹಳಷ್ಟು ಕೆಲಸಗಳಿದ್ದರಿಂದ ಹೊರಗೆ ಬರಲಿಲ್ಲ. ಮರೆಯಲ್ಲಿಯೇ ಮಾತಾಡಿದನು, ಆಮೇಲೆ ಬರುತ್ತೇನೆಂದು ಅಮ್ಮನಿಗೆ ಹೇಳು’ ಎಂದು ತಿಳಿಸಿರುವ ಸಂಗತಿಯನ್ನು ತಾಯಿಯ ಮುಂದೆ ಅರುಹುತ್ತಾನೆ. ಅದನ್ನು ಕೇಳಿದ ತಾಯಿಯು ‘ನಾಳೆ ಆತನಿಗೆ ತಿನ್ನುವುದಕ್ಕೇನಾದರೂ ಕೊಡುತ್ತೇನೆ. ತೆಗೆದುಕೊಂಡು ಹೋಗಿ ಕೊಡು’ ಎಂದು ಹೇಳುತ್ತಿರುವಾಗ ಬಾಲಕನು ತಾನು ಕಾಡಿನಲ್ಲಿ ಆಯ್ದುಕೊಂಡು ಬಂದಿದ್ದ ಹೂ-ಹಣ್ಣುಗಳನ್ನು ಗುಡಿಸಲಿನಲ್ಲಿಯ ವೇಣುಗೋಪಾಲನ ವಿಗ್ರಹದ ಮುಂದೆ ಇಟ್ಟು ನಮಸ್ಕರಿಸುವಾಗ ಚಕಿತಗೊಂಡು ತಾಯಿಗೆ ‘ಅಮ್ಮ, ನನ್ನಣ್ಣ ಬಂದ ! ಬಂದಾ ! ನೋಡಿಲ್ಲಿ ! ಓಡಿಬಂದು ಆ ಗೊಂಬೆ ಒಳಗಡೆ ಸೇರಿಬಿಟ್ಟ!’ ಎಂದು ಹೇಳಿದಾಗ ತಾಯಿಯು ಆ ಮೂರ್ತಿಗೆ ಅಡ್ಡಬೀಳುತ್ತಾಳೆ.
 
ಮುಂದಿನ ನಾಲ್ಕನೇಯ ನೋಟದಲ್ಲಿ ಗೋಪಾಲನು ಶಾಲೆಗೆ ಕಾಡಿನ ಮಾರ್ಗವಾಗಿ ಹೋಗುತ್ತಿದ್ದಾನೆ. ಅಣ್ಣಾ ಎಂದು ಕೂಗಿದ್ದಕ್ಕೆ ಕೋಗಿಲೆಯು ಕೂಗು ಕೇಳಿಸುತ್ತದೆ. ಮತ್ತೊಮ್ಮೆ ಕೂಗಿದಾಗ ಅಳಿಲು ಕೂಗುತ್ತದೆ. ನಂತರ ‘ಏನು ಗೋಪಾಲ?’ ಎಂದು ಕೇಳುವ ಬನದಗೋಪಾಲನ ಧ್ವನಿ ಕೇಳಿಸುತ್ತದೆ. ಅಮ್ಮನು ತಿಂಡಿ ಕಳಿಸಿಕೊಟ್ಟಿರುವುದರಿಂದ ಅದನ್ನು ತೆಗೆದುಕೊಳ್ಳುವ ಸಲುವಾಗಿಯಾದರೂ ಬಾಲಕ ಗೋಪಾಲನು ಬನದ ಗೋಪಾಲನಿಗೆ ಹೊರಗೆ ಬರುವಂತೆ ಕೇಳುತ್ತಾನೆ. ಈಗ ಬಹಳಷ್ಟು ಕೆಲಸವಿರುವುದರಿಂದ ತನಗೆ ಬರುವುದಾಗುವುದಿಲ್ಲವೆಂದು ಹೇಳುವ ಬನದ ಗೋಪಾಲನು ಹಟಮಾಡದೇ ಶಾಲೆಗೆ ಹೋಗುವಂತೆ ಬುದ್ಧಿ ಮಾತು ಹೇಳುತ್ತಾನೆ. ಆದರೂ ಹಟ ಬಿಡದ ಬಾಲಕನ ಆಗ್ರಹದಂತೆ ತಲೆಯಮೇಲೊಂದು ಚಿಕ್ಕ ಕಿರೀಟ, ಅದಕ್ಕೊಂಡು ನವಿಲುಗರಿ, ಕೈಲೊಂದು ಕೊಳಲು, ಕೊರಳಲ್ಲಿ ಹಾರ ಮತ್ತು ಹಣೆಯಲ್ಲಿ ಗಂಧವನ್ನು ಧರಿಸಿದ ಬನದ ಗೋಪಾಲನು ಕಾಣಿಸಿಕೊಂಡಾಗ, ಬಾಲಕನು ಓಡಿಹೋಗಿ ಅವನನ್ನು ಹಿಡಿದುಕೊಂಡು ದಿಟ್ಟಿಸಿ ನೋಡಿ, ‘ನಿನಗೆ ಈ ಹಾರವನ್ನು ಕೊಟ್ಟವರಾರು?’ ಎಂದು ಕೇಳುತ್ತಾನೆ.
 
ಯಾಕಂದರೆ ಅದೇ ರೀತಿಯ ಹಾರವನ್ನು ಮನೆಯಲ್ಲಿ ವೇಣುಗೋಪಾಲನ ವಿಗ್ರಹಕ್ಕೆ ತಾಯಿಯು ಹಾಕಿರುವುದನ್ನು ಗಮನಿಸಿರುತ್ತಾನೆ. ನಂತರ ‘ಈ ನವಿಲುಗರಿ ಎಲ್ಲಿ ಸಿಕ್ಕಿತು?’ ಎಂದು ಕುತೂಹಲದಿಂದ ಕೇಳಿದ್ದಕ್ಕೆ ‘ಬನದಲ್ಲಿ ಬೇಕಾದಷ್ಟು ಸಿಗುತ್ತವೆ ಮತ್ತು ಬನದಲ್ಲಿರುವವರಿಗೆ ಮಾತ್ರ’ ಎಂದು ಹೇಳುತ್ತಾನೆ. ತಾನು ಸಹ ಬನದಲ್ಲಿರುವುದಾಗಿ ಹೇಳುತ್ತಾನೆ. ‘ಬನದಲ್ಲಿದ್ದರೆ ಮನೆಯಲ್ಲಿ ಅಮ್ಮನು ಸುಮ್ಮನೆ ಬಿಡುವುದಿಲ್ಲ’ ಎಂದಾಗ, ಮುಗ್ದ ಬಾಲಕ ಗೋಪಾಲನು ‘ನೀನು ಸಹ ಮನೆಗೆ ಬಾ’ ಎಂದು ಆಹ್ವಾನಿಸುತ್ತಾನೆ. ‘ಮನೆಗೆ ಬಂದರೆ ಇಲ್ಲಿ ದನ ಕಾಯುವವರಾರು? ಕಾಡಿನಲ್ಲಿ ಹೆದರಿಕೆಯಾದಾಗ ನಿನಗೆ ಧೈರ್ಯ ಕೊಡುವವರಾರು?’ ಎಂದು ಹೇಳಿದಾಗ, ಬಾಲಕ ಗೋಪಾಲನು ಅಮ್ಮನು ಕಳಿಸಿದ ತಿಂಡಿ ಅವಲಕ್ಕಿ-ಮೊಸರನ್ನು ಕೊಡುತ್ತಾನೆ. ನಂತರ ಬನದ ಗೋಪಾಲನು ಸಂತುಷ್ಟನಾಗಿ ತಮ್ಮನ ವಿನಂತಿಯಂತೆ ಕೊಳಲೂದುತ್ತಾನೆ. ಆ ಕೊಳಲಿನ ನಾದದಲ್ಲಿ ಮೈಮರೆತು, ಅಲೌಕಿಕ ಅನುಭವವನ್ನು ಪಡೆಯುತ್ತಾನೆ. ಈ ಭಾಗದಲ್ಲಿ ಮಹಾಕವಿಗಳು ಮಕ್ಕಳ ಕಲ್ಪನಾಶಕ್ತಿಯು ಗರಿಗೆದರುವಂತೆ ಚಿತ್ರಿಸಿದ್ದಾರೆ.
 
ಮುಂದಿನ ಐದನೇಯ ನೋಟದಲ್ಲಿ ಹಳ್ಳಿಯ ಮಠವೊಂದರಲ್ಲಿ ಕೆಲವರು ಮಾತಾಡುತ್ತಾ ಚಾಪೆಗಳ ಮೇಲೆ ಕುಳಿತಿದ್ದಾರೆ. ಹಾಗೆ ಕುಳಿತಿರುವವರೆಲ್ಲಾ ಶ್ರೀಮಂತರ ಮಕ್ಕಳು. ಇವರೊಂದಿಗೆ ಗೋಪಾಲನು ಸಹ ಅಲ್ಲಿಯೇ ವಿದ್ಯಾಭ್ಯಾಸ ಕಲಿಯುತ್ತಿದ್ದಾನೆ. ಗೋಪಾಲನು ಬರುವುದು ತಡವಾಗಿರುವುದಕ್ಕೆ ಅವರೆಲ್ಲರಿಗೂ ಆತನ ತಾಯಿ ಮತ್ತು ಆತನ ಬಡತನದ ವಿಷಯವನ್ನು ಗೇಲಿ ಮಾಡಿಕೊಂಡು ಮಾತಾಡಿಕೊಳ್ಳುವುದು ಅವರಿಗೆ ಅಭ್ಯಾಸವಾಗಿರುತ್ತದೆ. ಗುರುಗಳು ಬಂದ ನಂತರ ಕೆಲ ಸಮಯದ ನಂತರ ಗೋಪಾಲನು ಪ್ರವೇಶಿಸಿ ಗುರುಗಳಿಗೆ ನಮಸ್ಕರಿಸಿ ಚಾಪೆ ಹಾಸಿಕೊಂಡು ಕುಳಿತುಕೊಳ್ಳುತ್ತಾನೆ. ತಡವಾದುದಕ್ಕೆ ಕಾರಣ ಕೇಳಿದಾಗ, ಬನದಲ್ಲಿ ತನ್ನ ಅಣ್ಣನೊಂದಿಗೆ ಸ್ವಲ್ಪ ಹೊತ್ತು ಮಾತಾಡಿಕೊಂಡು ಬಂದಿದ್ದರಿಂದ ಹೊತ್ತಾಯಿತೆಂದು ವಿವರಿಸುತ್ತಾನೆ. ‘ತಂದೆ-ತಾಯಿಗಳೇ ಮಕ್ಕಳಿಗೆ ದೇವರ ಸಮಾನ’ ಎಂಬ ಸಣ್ಣ ಭಾಷಣವನ್ನು ‘ಗುರು’ ಎಂಬ ಪಾತ್ರವು ನಿರ್ವಹಿಸುತ್ತದೆ. ಅಂದಿನ ಪಾಠವನ್ನು ಪ್ರಾರಂಭಿಸುವುದಕ್ಕಿಂದ ಮೊದಲು ಗುರುಗಳು ತಮ್ಮ ಮನೆಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮಕ್ಕೆ ಗುರುದಕ್ಷಿಣೆ ಸ್ವೀಕರಿಸಿ ನಿಮಗೆಲ್ಲರಿಗೂ ಮಂಗಳಕರವಾಗಲೆಂದು ಆಶೀರ್ವದಿಸಬೇಕಾಗಿದೆ’ ಎಂದು ಹೇಳುತ್ತಾರೆ, ಶಿಷ್ಯಂದಿರೆಲ್ಲಾ ಸಂತೋಷದಿಂದ ಗುರುದಕ್ಷಿಣೆಯನ್ನು ತರಲು ಒಪ್ಪುತ್ತಾರೆ.
 
ಆರನೇಯ ನೋಟದಲ್ಲಿ ಗೋಪಾಲನ ತಾಯಿಯು ಗುಡಿಸಲಿನ ಚರಕದ ಮುಂದೆ ಕುಳಿತಿರುವಾಗ ಗೋಪಾಲನು ಶಾಲೆಯಿಂದ ಬರುತ್ತಾನೆ. ತಾಯಿಯು ಕೇಳಿದ್ದಕ್ಕೆ ಎಲ್ಲವನ್ನೂ ಹೇಳುತ್ತಾನೆ. ಆತನಿಗೆ ತಿಂಡಿ ತಿನ್ನಿಸಿರುವುದರಿಂದ ಹಿಡಿದು ಆತನ ಕೊಳಲಿನ ಗಾನಕ್ಕೆ ತನಗಾದ ಅನುಭವವನ್ನು ತಾಯಿ ಎದುರು ಸಂಪೂರ್ಣವಾಗಿ ವಿವರಿಸುತ್ತಾನೆ. ಮನೆಯಲ್ಲಿಯ ವೇಣುಗೋಪಾಲ ವಿಗ್ರಹದಲ್ಲಿರುವ ಹಾರದಂತೆಯೇ ಆತನ ಕೊರಳಲ್ಲಿಯ ಹಾರವು ಇತ್ತೆಂದು ಹೇಳುತ್ತಾನೆ. ಗುರುಗಳಿಗೆ ಸಲ್ಲಿಸಬೇಕಾಗಿರುವ ಗುರುದಕ್ಷಿಣೆಯ ವಿಷಯವನ್ನು ಹೇಳುತ್ತಾನೆ. ಆಗ ಎನ್ನೂ ಕೊಡಲಾಗದ ನಿಸ್ಸಹಾಯಕಳಾದ ತಾಯಿಯು ‘ನಿನ್ನಣ್ಣನಲ್ಲಿಯೇ ಕೇಳು’ ಎಂದು ಎಲ್ಲ ಭಾರವನ್ನು ವೇಣುಗೋಪಾಲನ ಮೇಲೆ ಹಾಕುತ್ತಾಳೆ.
 
ಏಳನೇಯ ನೋಟದಲ್ಲಿ ಬಾಲಕ ಗೋಪಾಲ ಮತ್ತು ಬನದ ಗೋಪಾಲ ಇಬ್ಬರೂ ಮಾತಾಡುತ್ತಾ ಕಾಡಿನಲ್ಲಿ ಕುಳಿತಿದ್ದಾರೆ. ಗುರುದಕ್ಷಿಣೆಯ ವಿಷಯವನ್ನು ಹೇಳುತ್ತಾನೆ. ಆಗ ಬನದಗೋಪಾಲನು ‘ನಾನೇನು ಐಶ್ವರ್ಯವಂತನಲ್ಲ, ದನಕಾಯುವ ಬಡ ಹುಡುಗ. ಸ್ವಲ್ಪ ಮೊಸರನ್ನು ಕೊಡುತ್ತೇನೆ. ತೆಗೆದುಕೊಂಡು ಹೋಗು’ ಎಂದು ಹೇಳುತ್ತಾ ಮಣ್ಣಿನ ಕುಡಿಕೆಯಲ್ಲಿ ತಂದು ಕೊಡುತ್ತಾನೆ.
 
ಮುಂದಿನ ಎಂಟನೇಯ ನೋಟದಲ್ಲಿ ಹಳ್ಳಿಯ ಮಠದಲ್ಲಿ ಹುಡುಗರೆಲ್ಲರೂ ಬೆಲೆಬಾಳು ವಸ್ತ್ರ, ಕನಕಾದಿಗಳನ್ನು ಗುರುದಕ್ಷಿಣೆಯಾಗಿ ನೀಡಲು ನಿಂತಿದ್ದಾರೆ. ಆದರೆ ಬಾಲಕ ಗೋಪಾಲನು ತನ್ನ ಮೊಸರಿನ ಕುಡಿಕೆಯನ್ನು ಹಿಡಿದುಕೊಂಡು ದೂರದಲ್ಲಿ ನಿಂತಿದ್ದಾನೆ. ಎಲ್ಲರೂ ತಾವು ತಂದಿರುವುದರ ಕುರಿತು ಮಾತಾಡಿಕೊಳ್ಳುತ್ತಿದ್ದಾರೆ. ಗುರುಗಳು ಬಂದ ನಂತರ ಒಬ್ಬೊಬ್ಬರಾಗಿ ಗುರುದಕ್ಷಿಣೆಯನ್ನು ಕೊಟ್ಟು ಗುರುಗಳಿಂದ ಆಶೀವಾದ ಪಡೆಯುತ್ತಾರೆ. ದೂರದಲ್ಲಿ ನಿಂತಿರುವ ಗೋಪಾಲನಿಗೆ ಹತ್ತಿರ ಬರುವಂತೆ ಹೇಳಿ, ತಂದಿರುವ ಗುರುದಕ್ಷಿಣೆಯನ್ನು ಕೊಡಲು ಹೇಳುತ್ತಾರೆ. ಆತನು ಮೊಸರಿನ ಕುಡಿಕೆಯನ್ನು ತಂದಿರುವುದನ್ನು ಕಂಡು ಉಳಿದ ಹುಡುಗರು ನಗುತ್ತಾರೆ. ಆಗ ಗುರುಗಳು ‘ಪ್ರೇಮದಿಂದ, ಭಕ್ತಿಯಿಂದ ಏನು ಕೊಟ್ಟರೂ ಅದು ಮಹತ್ವದ್ದೇ.
 
ನನಗೆ ಬೇಕಿರುವುದು ಕೊಡುವವನ ಹೃದಯದಲ್ಲಿರುವ ಭಕ್ತಿ’ ಎಂದು ಹೇಳುತ್ತಾ, ಬಾಲಕ ಗೋಪಾಲನ ಕೈಯಲ್ಲಿಯ ಮೊಸರಿನ ಕುಡಿಕೆಯನ್ನು ತೆಗೆದುಕೊಂಡು ಆಶೀರ್ವದಿಸಿ, ಮೊಸರನ್ನು ಒಂದು ದೊಡ್ಡ ಪಾತ್ರೆಗೆ ಹೊಯ್ದು ಕುಡಿಕೆಯನ್ನು ಕೆಳಗಿಡುತ್ತಾರೆ. ಕುಡಿಕೆಯನ್ನು ನೊಡಿದ ಇನ್ನೋರ್ವ ಶಿಷ್ಯ ರಾಮಚಂದ್ರನು ಕುಡಿಕೆಯಲ್ಲಿ ಮತ್ತೂ ಮೊಸರಿರುವುದನ್ನು ನೋಡಿ ಗುರುಗಳಿಗೆ ಹೇಳುತ್ತಾನೆ. ಮತ್ತೆ ಮತ್ತೆ ಹೊಯ್ದರೂ ಕುಡಿಕೆಯಲ್ಲಿಯ ಮೊಸರು ಖಾಲಿಯಾಗದೇ ಹಾಗೆ ಇರುತ್ತದೆ. ಅದನ್ನು ಕಂಡು ಬೆರಗಾಗಿ ಗುರುಗಳು ಗೋಪಾಲನನ್ನು ಮುದ್ದಿಸುತ್ತಾರೆ. ಕಾಡಿನಲ್ಲಿರುವ ತನ್ನಣ್ಣನು ಕೊಟ್ಟಿರುವ ಕುಡಿಕೆಯೆಂದು ಗೋಪಾಲನು ಹೇಳಿದಾಗ, ಗುರುಗಳು ಅವನನ್ನು ತೋರಿಸು ಎಂದು ಕೇಳಿಕೊಳ್ಳುತ್ತಾರೆ. ಉಳಿದ ಸಹಪಾಠಿಗಳು ಅವನಣ್ಣ ಬೇರೆ ಯಾರೂ ಅಲ್ಲ ; ಅವನಮ್ಮ ಪೂಜಿಸುವ ವೇಣುಗೋಪಾಲನೇ ಇರಬೇಕು ಬನ್ನಿ, ನಾವು ಹೋಗಿ ನೋಡಿ ಬರೋಣ, ನಮಗೂ ಆ ಪುಣ್ಯ ಲಭಿಸಿದರೆ ಸಾಕು ! ಎಂದು ಮಾತಾಡಿಕೊಳ್ಳುತ್ತಾರೆ.
 
ಕೊನೆಯ (ಒಂಬತ್ತನೇಯ) ನೋಟದಲ್ಲಿ ಗೋಪಾಲನ ಕೈಹಿಡಿದು ಗುರುಗಳು ಕಾಡಿಗೆ ಬಂದಿದ್ದಾರೆ. ದಿನಾಲೂ ಇಬಬ್ರು ಕುಳಿತುಕೊಳ್ಳುವ, ಆಟವಾಡುವ ಸ್ಥಳದಲ್ಲಿ ಬಂದು ಬಾಲಕ ಗೋಪಾಲನು ‘ಅಣ್ಣಾ, ಅಣ್ಣಾ, ಗೋಪಾಲಣ್ಣಾ.’ ಎಂದು ಕೂಗುತ್ತಾನೆ. ಆದರೆ ಉತ್ತರವಿಲ್ಲ. ಇದರಿಂದ ದುಃಖಿತನಾದ ಗೋಪಾಲನು ‘ನಾನು ಸುಳ್ಳು ಹೇಳುವೆನೆಂದು ಗುರುಗಳು ತಿಳಿದುಕೊಳ್ಳುತ್ತಾರೆ’ ಎಂದು ಗೋಳಾಡುವನು. ಆಗ ‘ಏನು ಗೋಪಾಲ?’ ಎಂದು ಕೇಳಿಸಿಕೊಳ್ಳುವ ಬನದ ಗೋಪಾಲನ ಧ್ವನಿ ಕೇಳಿ, ‘ಅಣ್ಣಾ, ಗುರುಗಳು ನಿನ್ನನ್ನು ನೋಡಬೇಕಂತೆ, ಇಲ್ಲಿ ಬಾಣ್ಣ’ ಎಂದು ಕರೆಯುತ್ತಾನೆ. ಅದಕ್ಕೆ ಉತ್ತರ ಕೊಡುವ ಗೋಪಾಲನು ‘ತಮ್ಮಾ, ಗೋಪಾಲ, ನಿನ್ನ ತಾಯಿಯ ಭಕ್ತಿ, ನಿನ್ನೊಲ್ಮೆ ಇವುಗಳಿಗೆ ಮೆಚ್ಚಿ ನಿನಗೆ ಕಾಣಿಸಿಕೊಂಡು ನಿನ್ನೊಡನೆ ಆಟವಾಡುತ್ತೇನೆ. ನಿಮ್ಮ ಗುರುಗಳಿಗೆ ಹೇಳು ; ನನ್ನನ್ನು ನೋಡುವ ಕಾಲ ಅವರಿಗಿನ್ನೂ ಬಂದಿಲ್ಲ. ಅವರಿನ್ನೂ ಬಹುಕಾಲ ಕಾಯಬೇಕು’ ಇದನ್ನು ಕೇಳಿಸಿಕೊಂಡ ಗೋಪಾಲನು ಕಂಬನಿ ತುಂಬಿ ಗುರುಗಳೆಡೆಗೆ ನೋಡಿದಾಗ, ಅವನನ್ನು ಗುರುಗಳು ಮುದ್ದಾಡುತ್ತಾರೆ. ಅವನಲ್ಲಿಯೇ ವೇಣುಗೋಪಾಲನನ್ನು ಕಾಣುತ್ತಾರೆ. ಅದೇ ವೇಳೆಗೆ ಅಲ್ಲಿಗೆ ಓಡಿಬರುವ ಇತರ ಶಿಷ್ಯಗಣಂಗಳಿಗೆ ಪರಮಾತ್ಮನನ್ನು ಪ್ರಾರ್ಥಿಸೋಣವೆಂದು ಹೇಳುತ್ತಾರೆ. ಪ್ರಾರ್ಥನೆಯ ಗೀತೆಯೊಂದಿಗೆ ತೆರೆ ಬೀಳುವುದರೊಂದಿಗೆ ರಂಗಸ್ಥಳದಲ್ಲಿ ಕತ್ತಲಾವರಿಸುವುದು.
 
ಈಗಾಗಲೇ ಚಲನಚಿತ್ರವಾಗಿ (ನಿ: ರಂಗಕಹಳೆಯ ಸಿ.ಲಕ್ಷ್ಮಣ್) ರಾಷ್ಟ್ರ/ರಾಜ್ಯಮಟ್ಟದ (2010-11 ನೇ ಸಾಲಿನ) ಮಕ್ಕಳಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿರುವ ಈ ಕೃತಿಯು ಭಕ್ತಿಯ ಉದಾತ್ತ ಭಾವನೆಯನ್ನು ಮನಸ್ಸಿಗೆ ನಾಟುವಂತೆ ಸರಳವಾಗಿ ಚಿತ್ರಿಸಲಾಗಿದೆ. ಯಶಸ್ವಿ ಪ್ರಯೋಗವೆಂದು ಈಗಾಗಲೇ ಸುಪ್ರಸಿದ್ಧವಾಗಿರುವ ‘ನನ್ನ ಗೋಪಾಲ’ ಕೃತಿಯಲ್ಲಿ ಗೋಪಾಲನ ಮುಗ್ದ ಭಕ್ತಿ ಮತ್ತು ತಾಯಿಯ ವಾತ್ಸಲ್ಯ ಮಕ್ಕಳ ಮನಮುಟ್ಟುವಂತಿದೆ. ಇಲ್ಲಿ ತಾಯಿಯದು ನಿರಾತಂಕ ಮನ, ತನ್ನ ಮಗು ಕಂಡ ಬನದ ಗೋಪಾಲನನನ್ನು ಕಾಣುವ ಆತುರ/ಆಶೆಗಳು ಆಕೆಗಿಲ್ಲ. ಮಗನಲ್ಲಿಯೇ ವೇಣುಗೋಪಾಲನನ್ನು ಕಾಣುವ ವಾತ್ಸಲ್ಯಮಯಿ. ಆದರೆ ಕೃಷ್ಣನನ್ನು ಕಾಣಬೇಕೆಂದು ಕಾಡಿಗೆ ಬರುವ ಗುರುಗಳು ಮತ್ತು ಶಿಷ್ಯಂದಿರನ್ನು ಗಮನಿಸಿದಾಗ ತಾಯಿಯ ನಿಲುವು ಉನ್ನತಮಟ್ಟದ್ದೇನಿಸುತ್ತದೆ. ಎಲ್ಲಾ ಹಂತದ ಬಾಲಕರು ಸಹ ಈ ಕೃತಿಯನ್ನು ಓದಿ ಅರ್ಥೈಸಿಕೊಳ್ಳುವಂತಹ ಸರಳ ರಂಗಭಾಷೆಯು ಎಲ್ಲಿಯೂ ಮಕ್ಕಳ ಹಿಡಿತಕ್ಕೆ ಮೀರಿ ಹೋಗುವ ಹಾಗೆ ಇರದೇ, ಸರಳವಾಗಿದೆ. ಹೀಗಿರುವುದರಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳಿಂದ ಮಾಡಿಸಿದ ಅನೇಕ ಪ್ರಯೋಗಗಳು ಈಗಾಗಲೇ ಹಲವಾರು ಕಡೆಗಳಲ್ಲಿ ಯಶಸ್ವಿಯಾಗಿವೆ. ಇಂತಹ ಚಿರಕಾಲ ನೆನಪಲ್ಲಿ ಉಳಿಯುವಂತಹ ಕೃತಿಯನ್ನು ನೀಡಿದ ಮಹಾಚೇತನಕ್ಕೆ ಸಾವಿರದ ನುಡಿ ನಮನಗಳನ್ನು ಸಲ್ಲಿಸಲು ಹೃದಯತುಂಬಿ ಬರುತ್ತದೆ. 
*****
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಸಿದ್ದರಾಮ್, ಕುವೆಂಪುರವರ ಮಕ್ಕಳ ನಾಟಕಗಳ ಕುರಿತಾದ ಹಲವಾರು ಭಾಷಣ-ಲೇಖನ-ಸೆಮಿನಾರು-ಸವಿನೆನಪಿನ ಕಾರ್ಯಕ್ರಮಗಳು ಹೀಗೆ ಹಲವೆಡೆ ಭಾಗವಹಿಸಿ ಕೇಳಿದ್ದೆ/ಓದಿದ್ದೆ. ಆದರೆ ನಿಮ್ಮ ಲೇಖನ ಅವೆಲ್ಲವನ್ನೂ ಹೊರತುಪಡಿಸಿ ವಿಭಿನ್ನ ದೃಷ್ಟಿಕೋನದಲ್ಲಿ ಅರ್ಥೈಸಿದ್ದೀರಿ, ಯೋಚಿಸುವಂತೆ ಮಾಡಿದ್ದೀರಿ….ಇದರಿಂದಲಾದರೂ ಕುವೆಂಪುರವರ ಕೃತಿಗಳನ್ನು ಈ ಹಿಂದೆ ಶೆಲ್ಪಿನಲ್ಲಿ ಜೋಡಿಸಿಟ್ಟಿರುವುದರ ದೂಳು ಜಾಡಿಸಿ ಮರು-ಓದುವಂತೆ ಮಾಡಿದ ನಿಮಗೆ ಕೃತಜ್ಞನಾಗಿದ್ದೇನೆ. ಶುಭದಿನ !

sharada.m
sharada.m
10 years ago

 ಚೆನ್ನಾಗಿದೆ.

Gangadhar Bennur
Gangadhar Bennur
8 years ago
Reply to  sharada.m

ಕುವೆಂಪುರವರನ್ನು ನೆನಪಿಸಿಕೊಂಡಂತೆ, ಜಡಭರತರ (ಜಿ ಬಿ ಜೋಷಿ ) ಬಗ್ಗೆ ಅಥವಾ ದ ರಾ ಬೇಂದ್ರೆಯವರ ಬಗ್ಗೆ ಕೂಡ ತಾವು ಬೆಳಕನ್ನು ಚೆಲ್ಲಬೇಕೆಂಬುದು ನನ್ನ ಆಸೆ ….ಉತ್ತರ ಕರ್ನಾಟಕದವರಿಗೆ ಇದು ಬಹಳ ಸುಲಭವೆಂಬುದು ನನ್ನ ಕೈಂಕರ್ಯ …. 

Hipparagi Siddaram
Hipparagi Siddaram
5 years ago

ಪ್ರಯತ್ನಿಸುವೆನು ಸರ್

4
0
Would love your thoughts, please comment.x
()
x