ನಾಗಾರಾಧನೆ-ತುಳುನಾಡ ವೈಶಿಷ್ಟ್ಯ: ಕಮಲಾ ಬೆಲಗೂರ್

ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ.

ಪುರಾಣದಲ್ಲಿ ಒಂದು ಕತೆಯಿದೆ. ಗರುಡನಿಗೂ ವಾಸುಕಿಗೂ ಬದ್ದ ಧ್ವೇಷ. ಗರುಡನಿಗೆ ಹೆದರಿ ವಾಸುಕಿ ಗುಹೆಯಲ್ಲಿ ಅಡಗಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವನು ವಾಸುಕಿಗೆ ಅಭಯ ಹಸ್ತವನ್ನಿತ್ತು ತನ್ನ ಮಗನಾದ ಸುಬ್ರಮಣ್ಯನು ದುಷ್ಟ ನಿಗ್ರಹಕ್ಕಾಗಿ ಹುಟ್ಟಿ ಬರುವನೆಂದು, ಅವನ ಒಂದಂಶ ವಾಸುಕಿಯೊಂದಿಗೆ ಸೇರಿದಾಗ ವಾಸುಕಿಯೂ ಪೂಜಾರ್ಹನಾಗುವನೆಂದು ವರ ನೀಡುತ್ತಾನೆ. ಅಂದಿನಿಂದಲೇ ನಾಗಪೂಜೆ ನಡೆದುಕೊಂಡು ಬಂದಿದೆಯಂದು ಪ್ರತೀತಿ.

ಹೆಚ್ಚಿನ ಬಾಬತ್ತಾದ  ನಾಗ ಮಂಡಲ ಪೂಜೆ ನಡೆಸುವವರು ಶ್ರೀಮಂತ ಕುಟುಂಬದವರು. ನಾಗರಾಧನೆಯಿಂದ ಧನ ಧಾನ್ಯವೃದ್ಧಿಯಾಗುವುದೆಂದು ಎಲ್ಲರ ನಂಬಿಕೆ. ತುಳುನಾಡಿನ ಬಂಟ ಜನಾಂಗದವರು ಬ್ರಾಹ್ಮಣರ ಮಧ್ಯಸ್ತಿಕೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ನಾಗ ಅವರ ಮನೆ ದೇವರು. ಬ್ರಹ್ಮ, ನಾಗ ಪ್ರಧಾನ ದೇವತೆಯಗಿರುವ ಈ ಆಚರಣೆ ರಾತ್ರಿ ಪೂರ್ತಿ ನಡೆಯುತ್ತದೆ. ಬಣ್ಣಗಳು ಮತ್ತು ನೃತ್ಯಗಳದ್ದೇ ಕಾರುಬಾರು. ದೊಡ್ಡದಾದ ಚಪ್ಪರವನ್ನು ಅಡಿಕೆಗೊನೆ, ಸಿಯಾಳಗಳಿಂದ ಅಲಂಕರಿಸಿರುತ್ತಾರೆ. ವೇದಿಕೆಯ ಮಧ್ಯದಲ್ಲಿ ಪಂಚವರ್ಣಗಳಿಂದ ಕೂಡಿದ ಮಂಡಲದ ರಚನೆಯಾಗಿರುತ್ತದೆ. ಝಗಮಗಿಸುವ ದೀಪಗಳಿಂದ ಅಲಂಕೃತಗೊಂಡು ಇಡೀ ವಾತಾವರಣ ನೋಡುವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ನಾಗನರ್ತನದೊಂದಿಗೆ ಪೂಜೆ ಆರಂಭವಾಗುತ್ತದೆ. ಪೂಜಾರಿಯು ಅರ್ಧನಾರೀಶ್ವರ ವೇಷ ಧರಿಸಿರುತ್ತಾನೆ. ಇವರಿಗೆ ವೈದ್ಯರೆಂದು ಕರೆಯುತ್ತಾರೆ. ಕುಟುಂಬದ ಯಜಮಾನ ಸಕುಟುಂಬ ಪರಿವಾರದೊಂದಿಗೆ ನಾಗನರ್ತನ  ವೀಕ್ಷಿಸುತ್ತಾರೆ. ಬೆಳಗಾಗುವವರೆಗೂ ನರ್ತನ ಮುಂದುವರೆಯುತ್ತದೆ.

ಉಳ್ಳವರು ಪ್ರತಿವರ್ಷ ನಾಗದೇವನನ್ನು ಸಂಪ್ರೀತಗೊಳಿಸಲು ತಮ್ಮ ಕೈಮೀರಿ ಖರ್ಚು ಮಾಡಿ ಸಕಲವನ್ನೂ ಕರುಣಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.  ಭಯ ಮಿಶ್ರಿತ ಭಕ್ತಿ, ಸಂಪ್ರದಾಯಿಕ ವಿಧಿ ವಿಧಾನ ಗಳಿಂದ ಕೂಡಿದ ಈ ಪೂಜಾ ಕಾರ್ಯ ತುಳು ನಾಡ ಶ್ರೀಮಂತ   ಪರಂಪರೆಯನ್ನು ಸಾರುತ್ತದೆ.  ಈಜಿಪ್ಟ್ನನಂತಹ ದೇಶಗಳಲ್ಲಿ ನಾಗಪೂಜೆ ನಡೆಯುತ್ತಿತ್ತು ಎಂಬುದಕ್ಕೆ ಅಲ್ಲಿರುವ ನಾಗಬನಗಳೇ ಸಾಕ್ಷಿಯಾಗಿವೆ. ಇನ್ನು ಶ್ರಾವಣ ಮಾಸದಲ್ಲಿ ಆಚರಿಸುವ ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ. ಹೆಣ್ಣು ಮಕ್ಕಳು ಎಲ್ಲ ಬಗೆಯ ತಿಂಡಿ ಮಾಡಿ ನಾಗನಿಗೆ ಹಾಲೆರೆದು ತಂತಮ್ಮ ಭಕ್ತಿ ಪ್ರದರ್ಶಿಸುತ್ತಾರೆ. "ಕಲ್ಲನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲು ಎಂಬರಯ್ಯ; ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!", "ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡಲಿ ಬಡವನಯ್ಯಾ". ಬಸವಣ್ಣನವರು ತಮ್ಮ ವಚನದಲ್ಲಿ ಮಾನವ ನೀತಿ ಧರ್ಮದ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

ಕೆಲವೊಮ್ಮೆ ಮಾನವ ಅಂಧಶ್ರದ್ದೆ ಯಿಂದ ಕೆಡುಕಾಗುವುದು ನಿಜವಾದರೂ ಇಂತಹ ಸಂಪ್ರದಾಯ ಆಚರಣೆಗಳು ನಮ್ಮ ಕುಟುಂಬ ಸಮಾಜದ ಬಾಂಧವ್ಯವನ್ನು ಗಟ್ಟಿಗೊಳಿಸುವ ಕೊಂಡಿಗಳಾಗಿವೆ. ಬದುಕನ್ನು ಹಸಿರಾಗಿಸಿ ನಳನಳಿಸುವಂತೆ ಮಾಡಿವೆ ಎಂಬುದೂ ಅಷ್ಟೇ ನಿಜ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x