ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

somashekar-k-t

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ.

ಧರ್ಮ, ಅರ್ಥ, ಕಾಮ, ಮೋಕ್ಷ ಇವನ್ನು ಪುರುಷಾರ್ಥ ಎನ್ನುತ್ತೇವೆ. ಇವುಗಳನ್ನು ಪಾಲಿಸುವುದೇ ಹಿಂದಿನವರ ಜೀವನದ ಉದ್ದೇಶವಾಗಿತ್ತು. ಅರ್ಥ, ಕಾಮ,  ಮೋಕ್ಷಗಳನ್ನು ಧರ್ಮದ ದಾರದಿಂದ ಪೋಣಿಸಲಾಗಿತ್ತು. ದರ್ಮ ಮಾರ್ಗದಿಂದನೇ ಹಣದ ಸಂಪಾದನೆಯೂ ಮತ್ತು ವಿನಿಯೋಗವೂ ಆಗಬೇಕಿತ್ತು. ಕಾಮ ಮತ್ತು ಮೋಕ್ಷ ಹೊಂದುವುದೂ ಧರ್ಮ ಮಾರ್ಗದಲ್ಲೇ ಆಗಬೇಕಿತ್ತು! ಹೀಗೆ ಅವರ ಬದುಕಿನ ಉದ್ದೇಶ ಸ್ಪಷ್ಟವಾಗಿತ್ತು. ಧರ್ಮ ಪುರಾಣಗಳೂ ಇವನ್ನೇ ಸಾರುತ್ತಿವೆ.

ಪುರುಷಾರ್ಥಗಳಲ್ಲಿ ಕೊನೆಯದು ಮೋಕ್ಷ. ಇದನ್ನು ಪಡೆಯಲು ಜನ ಪಡಬಾರದ ಕಷ್ಟ ಪಡುತ್ತಿದ್ದರು. ಭೂಮಿಯ ಬದುಕು ದು:ಖಕರ ಎಂದು ಅದರಿಂದ ಮುಕ್ತರಾಗಲು ಅಂದರೆ ಭವಬಂಧನಗಳಿಂದ ಬಿಡುಗಡೆಯಾಗಲು ಅಂದರೆ ಮತ್ತೆ ಮತ್ತೆ ಭೂಮಿಯಮೇಲೆ ಹುಟ್ಟದಿರುವ ಸ್ಥಿತಿ ತಲುಪಲು, ಕಾಡಿಗೆ ಹೋಗಿ ಗಾಳಿ, ಮಳೆ, ಚಳಿ, ಬಿಸಿಲೆನ್ನದೆ, ಕಾಡು ಪ್ರಾಣಿಗಳ ಬಯವಿಲ್ಲದೆ, ಆಹಾರ, ಬಾಯಾರಿಕೆಗಳ ಹಂಗಿಲ್ಲದೆ, ಕಾಡಿನಲ್ಲಿ, ಬೆಟ್ಟದಲ್ಲಿ, ಹಿಮ ಪ್ರದೇಶಗಳ ಕೊರೆವ ಚಳಿಯಲ್ಲಿ ನಿಂತೋ, ಕುಂತೋ, ಒಂಟಿ ಕಾಲಲ್ಲಿ ನಿಂತೋ ತಪಸ್ಸು ಮಾಡಿ ಮೋಕ್ಷ ಹೊಂದುತ್ತಿದ್ದರೆಂದು ಓದಿದ್ದೇವೆ. ಈಗ ಹಿಮಾಲಯದಲ್ಲಿ ನಾಗಾ ಮುಂತಾದ ಸಾಧುಗಳು ಕಠಿಣ ತಪದಲ್ಲಿ ತೊಡಗಿರುವುದನ್ನು ನೋಡುತ್ತಿದ್ದೇವೆ! ಇಷ್ಟೆಲ್ಲಾ ಕಠಿನ ತಪದಲ್ಲಿ ತೊಡಗುತ್ತಿದ್ದರೆಂದರೆ ಅದು ಎಷ್ಟು‌ ಅಮೂಲ್ಯವಾದುದು ಎಂದು ಅವರು ಭಾವಿಸಿರಬಹುದು! ಇವರನ್ನು ಕಂಡು ಜನಸಾಮಾನ್ಯರು ಭಯಭೀತರಾಗುತ್ತಿದ್ದರು. ಜತೆಗೆ ಅಂತಹ ಕಠಿಣ ಸಾಧನೆ ಮಾಡಲು ನಮ್ಮಿಂದಾಗದು. ಆದ್ದರಿಂದ ತಮಗೆ ಮೋಕ್ಷ ಅಸಾಧ್ಯ ಎಂದು ಭಾವಿಸಿದ್ದರು. ಅವರೆಲ್ಲಾ ಸತ್ಯ, ಧರ್ಮ, ಪ್ರಾಮಾಣಿಕತೆ ವ್ರತವಾಗಿ ಬದುಕಿ ನೆಮ್ಮದಿ ಕಂಡವರು.

ಎಷ್ಟೋ ಜನ ಮುಖದಲ್ಲಿ ನೆರೆ ಕಂಡು, ಹತ್ತಿರದ ಸಂಬಂಧಿಯ ಸಾವು ಕಂಡು ಇದ್ದಕ್ಕಿದ್ದಂತೆ ವೈರಾಗ್ಯ ಬಂದು ಕಾಡಿಗೆ ತಪಸ್ಸಾಚರಿಸಲು ಹೋದವರಿಗೆ ಕಡಿಮೆಯೇನಿಲ್ಲ! ದಾಸರು ಸಹ ಇದಕ್ಕೆ ಹೊರತಾಗಿಲ್ಲ! ಹೀಗೆ ಇವರು ಕಾಡಿಗೆ ಹೋದರೆ ಇವರನ್ನು ನಂಬಿದವರ ಬದುಕು ಏನಾಗಬೇಕು? ಬಾಳ ಸಂಗಾತಿಯ ಧರ್ಮೇಚ, ಅರ್ಥೇಚ ಕಾಮೇಚ ನಾತಿಚರಾಮಿ ಎಂದು ಸಪ್ತಪದಿ ತುಳಿದು ಬದುಕಿನ ಮಧ್ದಲ್ಲಿಯೇ ಕೈಕೊಟ್ಟು ಹೋದರೆ ಸಂಗಾತಿಗೆ ಕೊಟ್ಟ ಮಾತು ಏನಾಗಬೇಕು? ತಾತ್ಕಾಲಿಕವಾಗಿ ಅವರ ಬದುಕು ಗೋಳಾಗುವುದಿಲ್ಲವೇ? ಇದಕ್ಕೆ ಕಾರಣ ಇವರು ಮನೆಬಿಟ್ಟು ಕಾಡಿಗೆ ಹೋಗಿ ತಪಸ್ಸು ಮಾಡಿದರೇನೇ ಮುಕ್ತಿ ದೊರೆಯುವುದೆಂಬ ಬಲವಾದ ನಂಬಿಕೆ. ಇನ್ನೂ ಕೆಲವರು ಪ್ರಾಣಿ ಬಲಿ, ನರಬಲಿಯಂತಹ ಕೆಟ್ಟ ಘೋರ ಆಚರಣೆಗಳಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ! ಅವನನ್ನು ಮೆಚ್ಚಿಸಬಹುದೆಂಬ  ನಂಬಿಕೆ. ಹಾಗೆ ಕೆಲವು ಕಠಿಣ‌ ವ್ರತಗಳ ಆಚರಿಸಿದರೆ ದೇವರು ಒಲಿಯುವುದು ಎಂಬ ನಂಬಿಕೆ.

ಇದನ್ನೆಲ್ಲಾ ಕಂಡು, ಕೇಳಿ ಅಸಹ್ಯಗೊಂಡ ವಚನಕಾರರು ದೇವರನ್ನು ಒಲಿಸಲು ಸರಳ ಮಾರ್ಗಗಳನ್ನು ತೋರಿಸಿದ್ದಾರೆ. ಜನಸಾಮಾನ್ಯರೂ ಆ ಮಾರ್ಗದ ಮೂಲಕ ದೇವರನ್ನು ಒಲಿಸಬಹುದಾಗಿದೆ. ಇವರ ಮಾರ್ಗ ಅನುಸರಿಸಿ ಅನೇಕರು ನೆಮ್ಮದಿ ಕಂಡುಕೊಳ್ಳಬಹುದಾಗಿದೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹಪಡಬೇಡ, 
ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ, 
ಇದೇ ಅಂತರಂಗದ ಶುದ್ದಿ , ಇದೇ ಬಹಿರಂಗದ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ.

ಇದು ಬಸವಣ್ಣನವರ ಸರಳ, ಪ್ರಸಿದ್ದ ವಚನಗಳಲ್ಲಿ ಒಂದು. ಈ ಮೇಲಿನ ವಚನದಲ್ಲಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಅಂತರಂಗ ಬಹಿರಂಗ ಶುದ್ದವಾಗಿರಬೇಕು ಹಾಗೂ ಅಂತರಂಗ ಮತ್ತು ಬಹಿರಂಗವನ್ನು ಹೇಗೆ ಶುದ್ಧ ಮಾಡುವುದು ಎನ್ನುವುದನ್ನು ವಿವರಿಸಿದ್ದಾರೆ. 

ಕಳ್ಳತನ ಮಾಡದಿರುವುದು, ಸುಳ್ಳು ಹೇಳದಿರುವುದು, ಕೋಪ ಮಾಡಿಕೊಳ್ಳದಿರುವುದು, ಬೇರೆಯವರನ್ನು ಕಂಡು ಅಸಹ್ಯಪಡದಂತೆ ಇರುವುದು, ತನ್ನನ್ನು ತಾನು ಹೊಗಳಿಕೊಳ್ಳದಂತೆ ಇರುವುದು, ಬೇರೆಯವರನ್ನು ಅವರ ಎದುರೇ ಅವರನ್ನು ಹೀಯಾಳಿಸದಂತೆ ಇರುವುದು ಇವು  ಅಂತರಂಗದ ಮತ್ತು ಬಹಿರಂಗದ ಶುದ್ಧಿಗಳಾಗಿವೆ. ಹೀಗೇ ಅಂತರಂಗ ಬಹಿರಂಗ ಶುದ್ಧವಾಗುವುದೇ ಕೂಡಲ ಸಂಗಮದೇವ ಒಲಿಯುವ ರೀತಿ ಎಂದಿದ್ದಾರೆ.

ಶಾಸ್ತ್ರ, ಪುರಾಣಗಳು ವಿದ್ಯಾವಂತರಿಗೆ, ಜ್ಞಾನಿಗಳಿಗೆ ಮಾತ್ರ ಅರ್ಥವಾಗುತ್ತವೆ. ಆದರೆ ಈ ವಚನಗಳು ಸರಳ, ಸುಲಭ! ಎಲ್ಲರಿಗೂ ಅರ್ಥವಾಗುವಂತಹವು. ಶಾಸ್ತ್ರ ಪುರಾಣಗಳಲ್ಲಿನ ಆಚರಣೆಗಳು ಕಠಿಣ ಅನ್ನಿಸುತ್ತವೆ. ವಚನಕಾರರು ಭಗವಂತನ ಒಲಿಸಿಕೊಳ್ಳಲು ಸರಳ ಮಾರ್ಗ ಹೇಳಿದ್ದಾರೆ. ಅದು ಬೇರೆ ಏನೂ ಅಲ್ಲ. ಬದುಕಿನ ರೀತಿ. ನೀತಿವಂತನಾಗಿ ಬದುಕಿದರೆ ಭಗವಂತ ಒಲಿಯುತ್ತಾನೆ ಎಂದು ಹೇಳಿ ಭಗವಂತನ ಒಲಿಸಲಷ್ಟೇ ಅಲ್ಲದೆ ಉತ್ತಮ ಸಮಾಜದ ಸೃಷ್ಟಿಗೂ ಕಾರಣರಾಗಿದ್ದಾರೆ.

ದೇವರನ್ನು ಹೇಗೆ ಸರಳವಾಗಿ ಒಲಿಸಲು ಸಾಧ್ಯ ಎಂದು ಹೇಳಿದರೋ ಹಾಗೇ ದೇವಾಲಯದ ಕಲ್ಪನೆಯನ್ನೂ ಸರಳವಾಗಿ ಕೊಟ್ಟಿದ್ದಾರೆ.

ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇವಾಲಯವೇಕೆ? ಎಂದು ಅಲ್ಲಮಪ್ರಭುದೇವರು ಪ್ರಶ್ನಿಸುತ್ತಾರೆ. ಹೀಗೆ ದೇಹದೊಳಗೇ ದೇವಾಲಯವಿದೆ ಎಂಬುದು ದೇಹದ ಪಾವಿತ್ರತೆ ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಇಂಥಾ ದೇವಾಲಯವಿರುವ ದೇಹವ ಶುಚಿಯಾಗಿಟ್ಟುಕೊಳ್ಳುವುದು ಅನಿವಾರ್ಯ! ಬರಿ ದೇಹದ ಬಹಿರಂಗ ಶುದ್ಧಿ ಅಷ್ಟೇ ಅಲ್ಲ ಅಂತರಂಗ ಶುದ್ಧಿಯೂ ಮುಖ್ಯ!

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲ ಸಂಗಮ ದೇವಾ ಕೇಳಯ್ಯ
ಸ್ಥಾವರಕ್ಕಳಿವುಮಟು ಜಂಗಮಕ್ಕಳಿವಿಲ್ಲ.

ಇದು ಬಸವಣ್ಣನವರ ಪ್ರಸಿದ್ದ ವಚನಗಳಲ್ಲಿ ಒಂದು. ಇದರಲ್ಲಿ ದೇವಾಲಯದ ಕಲ್ಪನೆ ಸರಳವೂ ಸುಂದರವೂ ಎಲ್ಲರಿಗೂ ಸಾಧ್ಯವಾದುದೂ, ನಿಲುಕುವಂತಹದೂ ಆಗಿದೆ.  ಸಿರಿವಂತರು ಕಟ್ಟಿಸಿರವ ದೇವಾಲಯಕ್ಕಿಂತಾ ಬಡವರ ದೇಹವೆಂಬ ದೇವಾಲಯವೇ ಶ್ರೇಷ್ಠವಾದುದು ಎಂಬ ದ್ವನಿ ಈ ವಚನದಲ್ಲಿದೆ! 

ಶ್ರೀಮಂತರಿಗೆ ಸಿರಿ ಇದೆ ಅವರು ದೇವಾಲಯ ಕಟ್ಟಿಸುತ್ತಾರೆ. ನಾನು ಏನು ಮಾಡಲಿ ಬಡವ ನನ್ನಿಂದ ದೇವಾಲಯ ಕಟ್ಟಿಸಲಾಗದು. ನನ್ನ ಕಾಲುಗಳೇ ಕಂಬ, ದೇಹವೇ ದೇವಾಲಯ, ಶಿರವೇ ಹೊನ್ನ ಕಳಸ – ನನ್ನದು ಇಂತಹ ದೇವಾಲಯ. ಹೀಗೆ ಹೇಳುತ್ತಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳುವಲ್ಲಿ ಆ ಉಳ್ಳವರು ಕಟ್ಟಿಸಿರುವ ದೇವಾಲಯಕ್ಕಿಂತ ನನ್ನ ದೇವಾಲಯವೇ ಶ್ರೇಷ್ಠ ಎಂಬ ಭಾವ ಆ ಅಭಿವ್ಯಕ್ತಿಯಲ್ಲಿ ಕಾಣಬಹುದಾಗಿದೆ!

ದೇಹವನ್ನು ದೇವಾಲಯಕ್ಕೆ ಹೋಲಿಸಿರುವ ಕಲ್ಪನೆ ತುಂಬಾ ಉಚಿತವಾಗಿಯೂ ಅರ್ಥಪೂರ್ಣವಾಗಿಯೂ ಇದೆ. ದೇವಾಲಯಕ್ಕೆ ಕಂಬಗಳು ಆಧಾರವಾದರೆ ದೇಹಕ್ಕೆ ಕಾಲುಗಳು ಆಧಾರ. ಆದ್ದರಿಂದ ಕಂಬಗಳಿಗೆ ಕಾಲುಗಳ ಹೋಲಿಸಿರುವುದು, ಕಂಬಗಳ ಆಧಾರದ ಮೇಲೆ ನಿಂತಿರುವ ದೇವಾಲಯವನ್ನು ಕಾಲುಗಳ ಆಧಾರದ ಮೇಲೆ ನಿಂತಿರುವ ದೇಹಕ್ಕೆ ಹೋಲಿಸಿರುವುದು, ದೇವಾಲಯದ ಎತ್ತರದ ಭಾಗವಾದ ಶಿಖರದ ತುತ್ತ ತುದಿಯಲ್ಲಿರುವ ಕಳಸಕ್ಕೆ ಮಾನವನ ದೇಹದ ತುತ್ತ ತುದಿಯಲ್ಲಿರುವ ಶಿರವನ್ನು ಹೋಲಿಸಿರುವುದು ಉಚಿತವೂ, ಅರ್ಥಪೂರ್ಣವೂ ಆಗಿದೆ. ಇದು ವಚನಕಾರನ ಹೋಲಿಕೆಯ ಸಾಮರ್ಥ್ಯ, ವಚನದ ಸುಂದರತೆಗೆ ಸಾಕ್ಷಿಯಾಗಿದೆ.

ಸ್ಥಾವರ ಎಂದರೆ ಚಲಿಸದಿರುವ ವಸ್ತು. ಜಂಗಮ ಎಂದರೆ ಚಲಿಸುವ ವಸ್ತು. ಸ್ಥಾವರಕ್ಕಳಿವುಂಟು ಜಮಗಮಕ್ಕಳಿವಿಲ್ಲ ಎಂದರೆ ಚಲಿಸದಿರುವ ಅಂದರೆ ಇದ್ದಲ್ಲೇ ಇರುವ ವಸ್ತುಗಳು. ಚಲಿಸದಿರುವ ವಸ್ತುಗಳು ನಾಶವಾಗುತ್ತವೆ ವಿನಾ ಚಲಿಸುವ ವಸ್ತುಗಳಲ್ಲ. ಅಂದರೆ ಉಳ್ಳವರು ಕಟ್ಟಿದ ಕಲ್ಲು ಮಣ್ಣಿನ ದೇವಾಲಯ ಸ್ಥಾವರ.  ಅದಕ್ಕೆ ನಾಶವಿದೆ. ದೇಹವೆಂಬ ದೇವಾಲಯ ಜಂಗಮ. ಇದಕ್ಕೆ ನಾಶವಿಲ್ಲ. ಹಾಗಾಗಿ ಉಳ್ಳವರ ದೇವಾಲಯಕ್ಕಿಂತ ದೇಹವೆಂಬ ಚಲಿಸುವ ದೇವಾಲಯವೇ ಶ್ರೇಷ್ಠ. ಒಂದು ಹೊಲಿಗೆ ಯಂತ್ರವನ್ನು ಉಪಯೋಗಿಸದೆ ಹಾಗೇ ಬಹು ವರುಷ ಇಟ್ಟರೆ ಅದಕ್ಕೆ ತುಕ್ಕು ಬಂದು ಪುಡಿ ಪುಡಿಯಾಗಿ ನಾಶವಾಗುತ್ತದೆ. ಅದನ್ನು ನಿತ್ಯ ಉಪಯೋಗಿಸುತ್ತಿದ್ದರೆ ಅದು ಬಹಳ ದಿನ ಬಾಳಿಕೆ ಬರುವುದರೊಂದಿಗೆ ಅದರಿಂದ ದುಡಿಮೆಯೂ ಆಗುತ್ತದೆ. ಕಲ್ಲು ಮಣ್ಣಿನಿಂದ ಕಟ್ಟಿಸಿದ ದೇವಾಲಯ ಸ್ಥಾವರ ಬೇಗ ನಾಶವಾಗುತ್ತದೆ ಹಾಗೇ ದೇಹವೆಂಬ ದೇವಾಲಯ ಜಂಗಮ. ಅದು ಬೇಗ ನಾಶವಾಗದು ಪ್ರಯುಕ್ತ ದೇಹವೆಂಬ ಬಡವರ ದೇವಾಲಯವೇ ಶ್ರೇಷ್ಠ ಎಂಬ ದ್ವನಿ ಈ ವಚನದಲ್ಲಿದೆ. ಸತಿಪತಿಗಳೊಂದಾದ ಭಕ್ತಿ ಹಿತವಹುದು ಶಿವನಿಗೆ. ಸತಿಪತಿಗಳೊಂದಾಗಿ ಆರಾಧಿಸುತ್ತಾ ಹೀಗೆ ಸಂಸಾರ ಸಮೇತ ಭಗವಂತನನು ಆರಾಧಿಸಬಹುದು, ಶಿವೈಕ್ಯರಾಗಬಹುದು ಎಂಬುದನ್ನು ಸಾರಿದರು!

* ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x