ಹೊಸ ವರುಷದೊಂದಿಗೆ ಬೆಸೆಯಲಿ ಸ್ನೇಹ- ಸಂಬಂಧಗಳು: ವೇದಾವತಿ ಹೆಚ್. ಎಸ್.

vedavati-h-s

ಮನುಷ್ಯನ ಜೀವನ ಎಷ್ಟೊಂದು ವಿಚಿತ್ರ. ಬೇಕು ಬೇಕು ಎನ್ನುತ್ತಾ ಸಾಗುವಾಗ ವಯಸ್ಸಿನ ಅರಿವು ಮರೆತು ಹೋಗುತ್ತದೆ. ಹೊಸ ವರ್ಷದ ಸಂತೋಷ ಒಂದು ಕಡೆ ಇದ್ದರೆ, ಈ ಹಿಂದಿನ ವರುಷಗಳು ಹೇಗೆ ಕಳೆದು ಹೋದವು ಎಂಬುದು ಮೆಲುಕು ಹಾಕುವುದು ಮರೆತಿರುತ್ತಾನೆ. ನಾಗಾಲೋಟದಲ್ಲಿ ಸಾಗುತ್ತಿರುವ ಜೀವನ ಯಾವಾಗಲೂ ನಾಳೆಯದನ್ನೇ ಯೋಚಿಸಿ ಜೀವನದಲ್ಲಿ ತನಗಾಗಿ ಬರುವಂತಹ ಇಂದಿನ ದಿನದ  ಸಂತೋಷವನ್ನು ಕಳೆದು ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ಹಬ್ಬಗಳಲ್ಲಿ ಹೊಸ ವರ್ಷಗಳ ಆಚರಣೆಯನ್ನು ಮಾಡುವ ಸಂಪ್ರದಾಯವಿತ್ತು. ಮನೆಯವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದ ದಿನಗಳವು. ಬರು ಬರುತ್ತಾ ಹಬ್ಬಗಳಿಗಿಂತ ಮೋಜು, ಮಸ್ತಿಗಳಲ್ಲಿ ಜನ ಪಾರ್ಟಿ ಮಾಡಿಕೊಂಡು ತಾವು ಸಂತೋಷ ಪಡಲು ಇಷ್ಟ ಪಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಆದರೂ ಕೆಲವು ಸಂಪ್ರದಾಯ ಕುಟುಂಬ ಈಗಲೂ ಹೊಸ ವರ್ಷ ಎಂದರೆ  “ಯುಗಾದಿ ಹಬ್ಬ” ಎಂದು ಆಚರಣೆ ಮಾಡುವುದು ನೋಡಿದ್ದೇವೆ.    

ವರುಷ. . . ವರುಷ ಉರುಳಿ ಹೋಗುತ್ತಿದೆ. ಬಹಳಷ್ಟು ಮಂದಿ ಸಾಧನೆ ಮೆಟ್ಟಿಲು ಹತ್ತಿ ಸಂಭ್ರಮ ಪಡುತ್ತಿದ್ದರೆ,ಕೆಲವು ಮಂದಿಗೆ ಅವರ ಹಣೆಬರಹದ ಲೆಕ್ಕಚಾರದಲ್ಲೇ ಜೀವನದ ಅದ್ಭುತವಾದ ಕ್ಷಣಗಳನ್ನು ಕಳೆದು ಕೊಳ್ಳುತ್ತಿರುವುದು ಶೋಚನೀಯ. ತಮ್ಮ ಕಷ್ಟಗಳಿಗೆ ಬೇರೆಯವರನ್ನು ತೆಗಳುತ್ತಾ ಜೀವನ ಸಾಗಿಸುತ್ತಿರುತ್ತಾರೆ. ತಮಗೆ ಮಾತ್ರ ಕಷ್ಟಗಳ ಸರಮಾಲೆಗಳಿವೆ, ಬೇರೆಯವರು ಆರಾಮಾಗಿ ಇದ್ದಾರೆ ಎಂಬುದೆ ಅವರ ನಂಬಿಕೆ. ಮನುಷ್ಯ ಹುಟ್ಟಿದ ದಿನದಿಂದ ಜೀವನದ ಅಂತ್ಯದವರೆಗೂ ಒಂದೆಲ್ಲಾ ಒಂದು ತೊಂದರೆಯಲ್ಲಿ ಬದುಕನ್ನು ನೆಡೆಸುತ್ತಿರುತ್ತಾನೆ. “ದೂರದ ಬೆಟ್ಟ ನುಣ್ಣಗೆ”ಎನ್ನುವ ಗಾದೆಯ ರೀತಿ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ರೀತಿಯ ನೋವುಗಳು ಇರುತ್ತದೆ. ಕಷ್ಟ ಬಂದಾಗ. . ಬೇರೆಯವರನ್ನು ಶಪಿಸುವುದು, ದೇವರಿಗೆ  “ನನಗೆ ಮಾತ್ರ ಏಕೆ ಕಷ್ಟ ಕೊಟ್ಟೆ”ಎಂದು ದೇವರನ್ನು ನಿಂದಿಸುವುದು, ತನಗೆ ತಾನೇ ಹಳಿಯುತ್ತಾ ಜೀವನದ ಪ್ರತಿಯೊಂದು ಕ್ಷಣವನ್ನು ನೋವು ಅನುಭವಿಸುದು,ಇವು ತಮಗೆ ತಾವೇ ಮಾಡಿಕೊಳ್ಳುತ್ತಿರುವ ತಪ್ಪುಗಳು.    

ಹೊಸವರ್ಷದ ಸಂಭ್ರಮವನ್ನು ಜನವರಿ ಒಂದರಂದು ಅಥವಾ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪಾಡ್ಯದಲ್ಲಿ ಬರುವ ಯುಗಾದಿ ದಿನದಂದು ಬೇಕಾದರೂ ಆಚರಣೆ ಮಾಡಬಹುದು. ಆದರೆ ಆ ಒಂದು ದಿನ ಮನೆ ಮಂದಿಯಲ್ಲ ಕುಳಿತು ಆಚರಣೆ ಮಾಡಿದರೆ…ಮೊದಲ ದಿನದ ಮೆಲುಕನ್ನು ಇಡೀ ವರ್ಷಗಳ ಕಾಲ ಸಂತೋಷವಾಗಿರುವಂತೆ ಮಾಡುವುದರಲ್ಲಿ ಸಂಶಯವಿಲ್ಲ.    

ನಾವೇಕೆ ಅವರಿಗೆ ಶುಭಾಶಯ ತಿಳಿಸಬೇಕು? ಅವರು ಇದುವರೆಗೂ ನಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿಲ್ಲ ಎಂಬ ಅಹಂಕಾರದಿಂದ ಇದ್ದರೆ ಕಳೆದು ಕೊಳ್ಳುವುದು ಅವರ ಸ್ವಂತ ಬಂಧು ಬಳಗದವರನ್ನೇ. ಸಂಬಂಧಗಳಲ್ಲಿ ತಾವು ಹೆಚ್ಚು ಕಡಿಮೆ ಎಂಬ ಭಾವನೆ ಬಂದರೆ ಎಂದೂ ಒಂದಾಗುವುದಿಲ್ಲ. ಯಾವುದೇ  ಸಮಾರಂಭದಲ್ಲಿ ಸಿಕ್ಕಾಗ ನಾವ್ಯಾಕೆ ಇವರನ್ನು ಮಾತನಾಡಿಸಬೇಕು,ಅವರೇ ಮೊದಲು ಮಾತನಾಡಿಸಲಿ ಎಂಬ ಒಣ ಜಂಭ ಬಂದರೆ ಮುಗಿಯಿತು,ಅಲ್ಲಿ ಸಂಬಂಧಕ್ಕೆ ಅರ್ಥವೇ ಇರುವುದಿಲ್ಲ. ಒಳ್ಳೆಯ ಮಾತುಗಳು ಸಂಬಂಧಗಳನ್ನು ಹತ್ತಿರಕ್ಕೆ ತರುತ್ತದೆ.    

ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದಂತಹ ಆತ್ಮಾಭಿಮಾನವಿರುತ್ತದೆ‌. ಹಿಂದಿನ  ಕಾಲದಲ್ಲಿ ಹಿರಿಯರು ಮಾಡಿದ ಉಪಕಾರವನ್ನು ಮರೆಯುತ್ತಿರಲಿಲ್ಲ. ಅದನ್ನು ಜೀವನ ಪರ್ಯಂತ ಋಣದ ರೂಪದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದರು. ಬರು ಬರುತ್ತಾ ಸ್ವಂತ ಒಡಹುಟ್ಟಿದವರೂ ಲೆಕ್ಕಾಚಾರದಲ್ಲಿ ಮುಳುಗಿ ತಮ್ಮ ಕರುಳಿನ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿರುವುದು ವಿಷಾದನೀಯ.    

ಹಿಂದಿನ ತಲೆಮಾರಿನಲ್ಲಿ ಮನೆ ಯಜಮಾನನಿಗೆ ಎಷ್ಟು ಪ್ರಮುಖ್ಯತೆ ಇರುತ್ತಿತ್ತೋ ಅಷ್ಟೆ ಕುಟುಂಬದ ಹಿರಿಯ ಮಗನಿಗೂ ಇರುತ್ತಿತ್ತು. ಈಗಲೂ ಕೆಲವು ಮನೆಯಲ್ಲಿ ಇಂತಹ ಆಚರಣೆಯನ್ನು ನೋಡಬಹುದು. ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬದ ಆಗುಹೋಗುಗಳ ಚರ್ಚೆ ನೆಡೆಸುತ್ತಿದ್ದರು. ಮನೆಯಲ್ಲಿ ನೆಡೆಯುವ ಸಮಾರಂಭದಲ್ಲಿ ಒಂದೆಡೆ ಸೇರಿ ತಮ್ಮ ಕಷ್ಟಸುಖ ಹಂಚಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಕಷ್ಟಸುಖದಲ್ಲಿ ಭಾಗಿಯಾಗುತ್ತಿದ್ದರು.    

ಈಗಿನ ಕಾಲದಲ್ಲಿ ಬಂಧು ಬಳಗದವರು, ಅವರಿಗೆ ಸರಿಯಾಗಿದ್ದರೆ ಅವರ ರಕ್ತ ಸಂಬಂಧ ಎನ್ನುವ ರೀತಿಯಲ್ಲಿ ನೆಡೆದು ಕೊಳ್ಳತ್ತಾರೆ. ಅವರ ಕೆಲಸವೆಲ್ಲ ಮುಗಿದ ಮೇಲೆ ಕೇವಲವಾಗಿ ನೋಡುವುದು ಬಹಳಷ್ಟು ಮಂದಿಯ ಗುಣ ಎನ್ನಬಹುದು. ಇನ್ನೂ ಕಷ್ಟಗಳಿಗೆ ಸ್ಫಂದಿಸುವುದು ಕೇವಲ ಕೆಲವು ಕುಟುಂಬಗಳಲ್ಲಿ ಮಾತ್ರ. ಕುಟುಂಬದ ಹಿರಿಯರಿಗೆ ಮಾರ್ಯದೆ ಕೊಡುವುದು ಕಡಿಮೆ ಎನ್ನಬಹುದು. ಇರುವಾಗ ನೆಂಟರು,ಕಷ್ಟಕ್ಕೆ ಆಗದಿದ್ದರೆ. . . ಎಷ್ಟು ಮಂದಿ ಇದ್ದರೂ ಏನು ಪ್ರಯೋಜನ. ಹೇಳಿಕೊಳ್ಳಲು ಊರು ತುಂಬಾ ನೆಂಟರು ಎಂಬಂತೆ,ತಪ್ಪುಗಳನ್ನು ಹುಡುಕುವುದು ತುಂಬಾ ಸುಲಭ, ಅದರೆ…ಅವರ ಬೆನ್ನು ಅವರಿಗೆ ಕಾಣಿಸುವುದಿಲ್ಲ. ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲೇ ಜೀವನ ಕಳೆಯುವ ಜನರು ಬಹಳ ಮಂದಿ ಇರುತ್ತಾರೆ. ಅವರ ನೆಮ್ಮದಿ ಹಾಳಾಗುವುದರ ಜೊತೆಗೆ ಬೇರೆಯವರಿಗೂ ನೋವುಂಟು ಮಾಡುತ್ತಾರೆ. ಕೆಲವರಂತೂ ಬೇರೆಯವರ ಕಷ್ಟಗಳಿಗೆ ಸ್ಫಂದಿಸುವುದನ್ನು ಬಿಟ್ಟು ಅಪಹಾಸ್ಯ ಮಾಡುವುದೇ ಜಾಸ್ತಿಯಾಗಿರುತ್ತದೆ.    

ಕೆಲವು ಕುಟುಂಬಗಳಲ್ಲಿ ಮನೆಯ ವಸ್ತುಗಳ ಜೊತೆಗೆ ಜನರನ್ನು ಪಾಲು ಮಾಡಿಕೊಳ್ಳುತ್ತಾರೆ. ಒಡಹುಟ್ಟಿದವರೂ ಎಂಬುದು ಮರೆತು  ಕರುಣೆ ಇಲ್ಲದೆ ಮಾತಿನಲ್ಲಿ ಚುಚ್ಚುವರು ಆನೇಕ ಜನರಿದ್ದಾರೆ. ತಮ್ಮ ಸ್ವಂತದವರನ್ನು ಕೇವಲವಾಗಿ ಕಾಣುವವರು ಇದ್ದಾರೆ. ಇದಕ್ಕೆ ಕಾರಣ ಬೇಕಾದಷ್ಟು ಇರಬಹುದು. ಅತಿಯಾದ ಕಾಳಜಿಯೂ ಜೊತೆಗೆ ತಮಗೆ ಬೇಕಾದ ಸಂದರ್ಭದಲ್ಲಿ ಅವರಿಗೆ ಹೇಳಿದ ರೀತಿಯಲ್ಲಿ ಇರಲು ಆಗದಿದ್ದರೆ ಮನಸ್ತಾಪ ಮೂಡಿಸುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಎಲ್ಲಾ ಸಂದರ್ಭದಲ್ಲಿ ಒಂದೇ ರೀತಿಯಲ್ಲಿ ಮನುಷ್ಯನಿರುವುದು ಕಷ್ಟ. ಅವರಿಗೆ ಅವರದೇ ತೊಂದರೆ ತಾಪತ್ರಯಗಳಿರುತ್ತವೆ. ಅದನ್ನು ಅರ್ಥ ಮಾಡಿ ಕೊಂಡು ನೆಡೆದರೆ ರಕ್ತ ಸಂಬಂಧಗಳು ಗಟ್ಟಿಯಾಗಿ ನಿಲ್ಲಲು ಸಾಧ್ಯ. ತಮ್ಮ ದೃಷ್ಟಿಯಲ್ಲೇ ನೋಡಿದರೆ ಸಾಲದು. ಎಲ್ಲಾ ಸಮಯದಲ್ಲಿ ಇಲ್ಲ ಸಲ್ಲದ ಸಮಸ್ಯೆಗಳನ್ನು ತಲೆಮೇಲೆ ಹಾಕಿ ಕೊಳ್ಳುವುದು ಯಾವ ಮನುಷ್ಯನಿಗೂ ಕಷ್ಟ. ಹಿಂದೆ ಮಾಡಿದ ಉಪಕಾರ ಸ್ಮರಣೆ ಮರೆತು ತಪ್ಪುಗಳನ್ನು ಹುಡುಕುವುದು ಸರಿಯಾದ ಪರಿಹಾರವಲ್ಲ.     

ಒಡಹುಟ್ಟಿದವರೂ ಒಡೆದ ಮನಸ್ಸನ್ನು ಹೊಂದಿದ್ದರೆ ಅವರ ಮಕ್ಕಳಿಗೆ ಇನ್ನೆಲ್ಲಿ ಬರಬೇಕು ಪ್ರೀತಿ, ಸ್ನೇಹ, ವಿಶ್ವಾಸ! ಕೆಲವೊಂದು ಕುಟುಂಬದ ಒಡಹುಟ್ಟಿದವರ ಮಕ್ಕಳು ಒಬ್ಬರಿಗೊಬ್ಬರು ಪರಿಚಯವಿಲ್ಲದೆ ಇರುವುದು ಕಾಣುತ್ತೇವೆ. ಇದಕ್ಕೆ ಕಾರಣ ಮಕ್ಕಳನ್ನು ಹೆತ್ತವರು. ಅವರಿಗೇ ಬೇಡವಾದ ಸಂಬಂಧ ಮಕ್ಕಳಿಗೆ ಖಂಡಿತಾ ಅವಶ್ಯಕತೆ ಇರುವುದಿಲ್ಲ. ಮುಂದೆ ಸಂಬಂಧಗಳು ಚಿಕ್ಕದಾಗುತ್ತಾ ಬರುತ್ತದೆ. ಅವರವರಿಗೆ ಬೇಕಾದ ಬಂಧು ಬಳಗದವರನ್ನು ಮಾತ್ರ ಹೊಂದಿರುತ್ತಾರೆ. ಹಿಂದಿನ ತಲೆಮಾರಿನ ಜನರಲ್ಲಿ ಭೇದ ಭಾವ ಇರುತ್ತಿರಲಿಲ್ಲ. ಒಂದು ಕುಟುಂಬದ ಸದಸ್ಯರು ಒಟ್ಟಾಗಿ ಒಗ್ಗೂಡಿ ಬಾಳ್ವೆ ನೆಡೆಸುವುದು ಮಾಮೂಲಿ ಆಗಿತ್ತು. ಇದ್ದುದರಲ್ಲಿ ಹಂಚಿ ತಿನ್ನುವುದು ದೊಡ್ಡವರ ದೊಡ್ಡ ಗುಣವಾಗಿತ್ತು. ಚಿಕ್ಕವರು ದೊಡ್ಡವರನ್ನೇ ಅನುಸರಿಸುತ್ತಿದ್ದರು. ಇಂದಿನ ಜನರಲ್ಲಿ ಒಟ್ಟಾಗಿ ವರ್ಷಕ್ಕೊಮ್ಮೆ ಸೇರುವುದು ಕಷ್ಟವಾಗಿದೆ. ಇದಕ್ಕೆ ಕಾರಣ ಖಂಡಿತಾ ಸಮಯದ ಸಮಸ್ಯೆಯಲ್ಲ. ತಮ್ಮಲ್ಲಿ ಅಡಗಿರುವ ಅಹಂ ಎಂದರೆ ತಪ್ಪಾಗಲಾರದು.    

ತಂತ್ರಜ್ಞಾನ ಬೆಳೆದಷ್ಟು ಎಲ್ಲರೂ ಮೊಬೈಲ್ ನಲ್ಲಿ ಕಷ್ಟ ಸುಖವನ್ನು ಮಾತನಾಡಲು ಪ್ರಾರಂಭ ಮಾಡಿರುವುದರಿಂದ ದೂರದ ಊರಿನಲ್ಲಿ ಇದ್ದವರನ್ನೂ ಹತ್ತಿರ ತರುತ್ತಿದೆ. ಕಷ್ಟಸುಖ ಏನಿದ್ದರೂ ಮೊಬೈಲ್ನಲ್ಲಿ  ಮುಗಿಸಿ ಬಿಡುತ್ತಾರೆ. ಮೂರು ತಿಂಗಳಿಗೊಮ್ಮೆ ಬರುತ್ತಿದ್ದ ನೆಂಟರಿಷ್ಟರು ದಿನ ಮೊಬೈಲ್ ಫೋನ್ನಲ್ಲಿ ಮಾತನಾಡಿ, ಇನ್ನು ಮನೆಗೆ ಹೋಗಿ ಮೋಡುವುದಾದರೂ ಏನೆಂದು ವರ್ಷಗಳ ನಂತರ ಬೇಟಿಯಾಗಲು ಪ್ರಾರಂಭ ಮಾಡಿದ್ದಾರೆ. ಕೆಲವೊಂದು ಮನಷ್ಯನೇ ರೂಪಿಸಿ ಕೊಂಡ ಕಟ್ಟುಪಾಡು.    

ವರುಷಕ್ಕೆ ಒಮ್ಮೆಯಾದರು ಬಂಧು ಬಳಗ, ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಂಡರೆ ಬಾಂಧವ್ಯ ಇನ್ನೂ ಜಾಸ್ತಿಯಾಗಿರುತ್ತದೆ. ಬಿಡುವಿಲ್ಲ ಎನ್ನುವ ಮಾತಿಗಿಂತ ಒಳ್ಳೆಯ ದಿನಗಳಲ್ಲಿ ಬಿಡುವು ಮಾಡಿಕೊಂಡು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರೆ ತಮಗಾಗಿ ಮತ್ತೊಬ್ಬರು ಬಿಡುವನ್ನು ಮಾಡಿ ಕೊಂಡು ಬರುವುದು ಖಂಡಿತಾ.    

ಹೊಸವರ್ಷದಲ್ಲಿ ನಿಮ್ಮ ಸ್ನೇಹಿತರು, ಬಂಧು ಬಾಂಧವರಿಗೆ ಶುಭಾಶಯ ತಿಳಿಸಲು ಮರೆಯದಿರಿ. ಹೊಸವರ್ಷದ ಮೊದಲನೆಯ ದಿನವೇ ಒಳ್ಳೆಯ ವಿಷಯಗಳ ಬಗ್ಗೆ ಸಂಕಲ್ಪ ಮಾಡಿಕೊಳ್ಳಿ. ಎಲ್ಲರೂ ನಮ್ಮವರೇ ಕೆಲವೊಂದು ಸಂಬಂಧಗಳು ಋಣ ಇದ್ದರೆ ಮಾತ್ರ ದೊರೆಯುವುದು. ಹಾಗೇಯೇ ಪ್ರತಿಯೊಬ್ಬ ಮನುಷ್ಯನ ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ ಎಂಬುದನ್ನು ಅರ್ಥ ಮಾಡಿ ಕೊಂಡರೆ ಸಂಬಂಧದ ಕೊಂಡಿಗಳನ್ನು ಇನ್ನೂ ಮುಂದುವರಿಸಿಕೊಂಡು ಹೋಗಲು ಸಾಧ್ಯ. ಸಂಬಂಧ ಎಂಬುದು ಸ್ನೇಹ ಸಂಬಂಧವೇ ಆಗಲಿ ರಕ್ತ ಸಂಬಂಧವೇ ಆಗಲಿ ಕೊನೆಯ ಘಳಿಗೆಯವರೆಗೂ ಕಾಪಾಡಿಕೊಂಡು ಹೋಗುವುದು ನಮ್ಮ ಕೈಯಲ್ಲಿ ಇರುತ್ತದೆ.    

ಹೊಸವರ್ಷ ಎಲ್ಲರಿಗೂ ಹರುಷ ತರಲಿ. ಜೀವನದಲ್ಲಿ ಸಂತೋಷ, ಸಮೃದ್ಧಿ,ಸಕಲ ವೈಭವಗಳು ನಿಮ್ಮದಾಗಲಿ.

-ವೇದಾವತಿ ಹೆಚ್. ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ನ್ಯಾಮತ್
ನ್ಯಾಮತ್
6 years ago

.ಕನ್ನಡ ಕಾವ್ಯ ಲೋಕ ಚಿರಾಯುವಾಗಲಿ . ಬರವಣಿಗೆಯ ಶೈಲಿ ಮನಮುಟ್ಟುವಂತಿದೆ

1
0
Would love your thoughts, please comment.x
()
x