ಮಹಾವಲಸೆ: ಪ್ರಶಸ್ತಿ

 prashasti

ಚಳಿಗಾಲ ಬಂತಂದ್ರೆ ಮನೆಯಿಂದ ಹೊರಗೆ ಹೊರಡೋಕೆ ಮನಸ್ಸಾಗಲ್ಲ. ಹೊರಗಡೆ ಚುಮುಚುಮು ಚಳಿ ಕೊರಿತಾ ಇರುವಾಗ  ಮನೆಯೊಳಗೆ ಬೆಚ್ಚಗೆ ಹೊದ್ದು ಕೂತು ಬಿಸಿ ಬಿಸಿ ಬಜ್ಜಿಯೋ, ಬೋಂಡಾವೋ ತಿನ್ನುತ್ತಾ ಚಹಾ ಹೀರೋ ಸವಿಯಿದ್ಯಲ್ಲಾ ? ಆಹಾ. ಬಾಳೇಕಾಯಿ ಚಿಪ್ಸೋ, ಹಲಸಿನ ಕಾಯಿ ಚಿಪ್ಸೋ ಸಿಕ್ಕಿಬಿಟ್ಟರೆ ಅದೇ ಸ್ವರ್ಗ. ನಮ್ಮಲ್ಲಿನ ಚಳಿಯೆಂದರೆ ಎಷ್ಟಿದ್ದೀತು ? ಅಬ್ಬಬ್ಬಾ ಅಂದರೆ ಹದಿನೈದು ಡಿಗ್ರಿಯವರೆಗೆ ಇಳಿಯಬಹುದೇನೋ ? ಆದರೆ ಆ ಚಳಿ ಹಾಗೇ ಹತ್ತಕ್ಕಿಂತಲೂ ಕಡಿಮೆಯಾಗುತ್ತಾ ಹೋದರೆ ? ರಾತ್ರಿ ಹೋಗಲಿ, ಹಗಲಲ್ಲೂ ಬೆಚ್ಚಗಿರಿಸೋ ಸೂರ್ಯರಶ್ಮಿ ಕಮ್ಮಿಯಾಗುತ್ತಾ ಹೋದರೆ ? ಊಹಿಸಲೂ ಕಷ್ಟವಾಗುತ್ತಲ್ವಾ ? ಭಾರತದ ಡಾರ್ಜಿಲಿಂಗ್ , ಸಿಕ್ಕಿಂ ಮುಂತಾದ ಪ್ರದೇಶಗಳಲ್ಲಿ , ಅಮೇರಿಕಾ, ಸೈಬಿರಿಯಾ, ಕೆನಡಾಗಳಲ್ಲಿ ಈಗ ನಡೆಯುತ್ತಿರುವುದು ಅದೇ ? ಮನುಷ್ಯರೇನೋ ಬಟ್ಟೆಗಳ ಮೇಲೊಂದು ಬಟ್ಟೆ ಹಾಕಿಕೊಂಡು , ಐಸ್ ಶೂಗಳನ್ನು ತೊಟ್ಟು ಓಡಾಡ್ತಾರೆ. ಆದರೆ ಪಶು ಪಕ್ಷಿಗಳ ಕತೆ ? ನಾವು ಬೆಚ್ಚನೆಯ ಬಟ್ಟೆ ತೊಟ್ಟು ಇದ್ದ ಜಾಗದಲ್ಲೇ ನಮ್ಮನ್ನು ಚೆಚ್ಚಗಿಟ್ಟುಕೊಳ್ಳೋಕೆ ನೋಡೋ ತರ ಅವು ಬೆಚ್ಚನೆಯ ಜಾಗಗಳ ಹುಡುಕಿ ವಲಸೆ ಹೋಗುತ್ತವೆ. ಅದೇ ಮಹಾವಲಸೆ.

ಆಕಾಶ ಇಷ್ಟೇ ಯಾಕಿದೆಯೋ ? 
ರಂಗನತಿಟ್ಟು, ಗುಡವಿ, ಮಂಡಗದ್ದೆ ಮುಂತಾದ ಪಕ್ಷಿಧಾಮಗಳಿಗೆ ನವೆಂಬರ್ ಇಂದ ಫೆಬ್ರವರಿ, ಮಾರ್ಚ್ ತನಕ ಹೋದರೆ ಹಿಂದೆಂದೂ ಕಂಡಿರದಂತಹ ನೂರಾರು ಹೊಸ ಅತಿಥಿಗಳು ಕಾಣಸಿಗುತ್ತಾರೆ. ಅದಕ್ಕಿಂತ ಮುಂಚೆ ಇಲ್ಲ. ಆಮೇಲೂ ಇಲ್ಲ. ಅವು ಎಲ್ಲಿಂದ ಬರ್ತವೆ, ಎಲ್ಲಿ ಮಾಯವಾಗ್ತವೆ ಅಂತೀರಾ ? ಅಲ್ಲೇ ಇರೋದು ವಿಶೇಷ. ಸಾಮಾನ್ಯವಾಗಿ ಕಾಣೋ ಬೆಳ್ಳಕ್ಕಿ, ಕೊಕ್ಕರೆಗಳಲ್ಲದೇ ಚಳಿಗಾಲದಲ್ಲಿ ಕಾಣೋ ವಿಶೇಷ ಪಕ್ಷಿಗಳು ಬರೋದು ಸೈಬೀರಿಯಾ ಮುಂತಾದ ಚಳಿಯಿರೋ ಜಾಗಗಳಿಂದ. ಸೈಬೀರಿಯನ್ ಕೊಕ್ಕರೆ, ನಸುಗೆಂಪು ಫ್ಲೆಮಿಂಗೋಗಳು ಮುಂತಾದ ಪ್ರಬೇಧದ ಪಕ್ಷಿಗಳು ಸಾವಿರಾರು ಮೈಲುಗಳ ಹಾರಾಟ ನಡೆಸಿ ಬೆಚ್ಚಗಿರೋ ಭಾರತದ ಪ್ರದೇಶಗಳಿಗೆ ಬರುತ್ತವೆ. ಚಳಿಗಾಲದಲ್ಲಿ ಭಾರತವೆಲ್ಲಿ ಬೆಚ್ಚಗಿದೆ ಅಂದ್ರಾ ? ತಾಪಮಾನ ಶೂನ್ಯಕ್ಕಿಂತ ಕೆಳಗೆ ಹೋಗೋ ಪ್ರದೇಶಗಳಿಗಿಂತ ಹದಿನಾಲ್ಕರಿಂದ ಇಪ್ಪತ್ತೈದರವರೆಗಿರುವ ಭಾರತದ ಪ್ರದೇಶಗಳು ಬೆಚ್ಚಗಿನ ಜಾಗಗಳೇ ಅವುಗಳಿಗೆ. ಆರ್ಟಿಕ್ ಟರ್ನ್ ಎಂಬೋ ಪಕ್ಷಿಗಳ ಹಾರಾಟಕ್ಕೆ ಆಕಾಶವೇ ಮಿತಿಯೆನ್ನಬಹುದೇನೋ. ಪ್ರತೀ ಚಳಿಗಾಲಕ್ಕೆ ಆರ್ಟಿಕ್ಟಿನಿಂದ ಅಂಟಾರ್ಟಿಕಾದವರೆಗೆ ಏನಿಲ್ಲವೆಂದರೂ ೧೯೦೦೦ ಕಿ.ಮೀ ಹಾರಾಟ ನಡೆಸುತ್ತವೆ ಇವು !

ಸೆರೆಂಗೇತಿ ಸರ್ಕಲ್: 
ನಮ್ಮನೆ ಎಮ್ಮೆಗಳು ಮೇಯೋಕೆ ಅಂತ ಹೋಗಿದ್ದು ಬರೋದೇ ಇಲ್ಲ. ಅದನ್ನ ಹುಡುಕೋಕೆ ಅಂತ ಕಿಲೋಮೀಟರುಗಟ್ಟಲೇ ಕಾಡುಮೇಡು ಅಲೆದಿದ್ದಿದೆ ಅಂತ ನಮ್ಮ ಹಳ್ಳಿಗರು ಹೇಳಿದ್ರೆ ಪೇಟೆಯಲ್ಲಿರೋರಿಗೆ ತಮಾಷೆ ಅನಿಸಬಹುದು. ಆದರೆ ಜಾನುವಾರುಗಳು ಚಳಿಗಾಲದಲ್ಲಿ ಆ ತರಹ ಗುಂಪುಗುಂಪಾಗಿ ವಲಸೆ ಹೋಗೋದನ್ನು ಒಂದು ವಿಸ್ಮಯ ಅಂತಲೇ ಪರಿಗಣಿಸಲ್ಪಡುವ ಜಾಗವೊಂದು ಆಫ್ರಿಕಾದಲ್ಲಿದೆ ಅಂದರೆ ನಂಬುತ್ತೀರಾ ? ಅದುವೇ ಸೆರೆಂಗೇತಿ. ತಾಂಜಾನಿಯಾದಲ್ಲಿನ ಗೋರಂಗೋರೋ ಎಂಬ ಸಂರಕ್ಷಿತ ತಾಣದಲ್ಲಿಂದ ಶುರುವಾಗೋ ಜಾನುವಾರುಗಳ ವಲಸೆ ಮಾರ್ಚ್ ಏಪ್ರಿಲ್ ತನಕ ನಡೆಯುತ್ತದೆ. ಹುಲ್ಲುಗಳ ಮೇಯುತ್ತಾ ಮುಂದೆ ಮುಂದೆ ಹೋಗೋ ಇವು ಒಂದು ಸುತ್ತು ಹಾಕಿ ಮಳೆಗಾಲ ಶುರುವಾಗಿ ಮತ್ತೆ ಹೊಸ ಹುಲ್ಲು ಬೆಳೆಯೋ ಹೊತ್ತಿಗೆ ಇಲ್ಲಿಗೇ ಬರುತ್ತವೆ. ಸುಮಾರು ಎರಡೂವರೆ ಲಕ್ಷ ಜಿರಾಫೆ, ೧೭ ಲಕ್ಷ ಕಾಡೆಮ್ಮೆ ಮತ್ತೆ ನಾಲ್ಕೂವರೆ ಲಕ್ಷ ಇತರೆ ಪ್ರಾಣಿಗಳು ಪ್ರತೀ ವರ್ಷ ಈ ರೀತಿ ವಲಸೆ ಹೋಗುತ್ತವೆ ಅಂದರೆ ಈ ವಲಸೆಯ ಅಗಾಧತೆಯನ್ನು ಊಹಿಸಿ ನೋಡಿ !

ಮೆಕ್ಸಿಕೋ ಮೊನಾರ್ಚ್ ವಲಸೆ:
ಮೆಕ್ಸಿಕೋದವರು ಅಮೇರಿಕಾಕ್ಕೆ ವಲಸೆ ಬರ್ತಾರೆ ಅಂತ ಅಮೇರಿಕಾದ ಟ್ರಂಪು ಗೋಡೆ ಕಟ್ಟೋಕೆ ಹೊರಟಿರೋ ಸುದ್ದಿ ಕೇಳಿರ್ತೀರ. ಆದರೆ ಲಕ್ಷಗಟ್ಟಲೇ ಜೀವಗಳು ಅಮೇರಿಕಾದ ಟೆಕ್ಸಾಸ್ ಕಡೆಯಿಂದ ಮೆಕ್ಸಿಕೋಗೆ ವಲಸೆ ಬರುತ್ತವೆ ಅಂದರೆ ನಂಬುತ್ತೀರಾ ? ಆಶ್ಚರ್ಯ ಆಗುತ್ತದಲ್ಲಾ ? ಅಮೇರಿಕಾದ ಚಳಿ ತಡೆಯಲಾಗದೇ ಮೆಕ್ಸಿಕೋದ ಬೆಚ್ಚನೆಯ ಪ್ರದೇಶಗಳನ್ನು ಹುಡುಕಿಕೊಂಡು ಪ್ರತೀ ವರ್ಷ ಅಕ್ಟೋಬರ್ ಸಮಯದಲ್ಲಿ ಲಕ್ಷಾಂತರ ಪಾತರಗಿತ್ತಿಗಳು ಮೆಕ್ಸಿಕೋಗೆ ಹಾರಿಬರುತ್ತವೆ.
ಕೆಲವೊಂದು ಪ್ರಬೇಧಗಳು ೨ರಿಂದ ಮೂರು ಸಾವಿರ ಮೈಲು ಹಾರಾಟ ನಡೆಸುವುದೂ ಉಂಟು ಅನ್ನುತ್ತಾರೆ. ಚಿಟ್ಟೆಗಳ ಆಯುಸ್ಸವಿರೋದೇ ಕೆಲ ದಿವಸ. ಅಂತದ್ದರಲ್ಲಿ ಅವು ಸಾವಿರಾರು ಮೈಲು ಹಾರಾಟ ನಡೆಸುವುದು ಎಂದರೇನು ಅಂದಿರಾ ? ಅಲ್ಲೇ ಇರೋದು ವಿಸ್ಮಯ. ಚಿಟ್ಟೆಗಳು ಪಕ್ಷಿಗಳಂತೆ ನಿರಂತರ ಹಾರಾಟ ನಡೆಸೋಲ್ಲ. ಅವುಗಳದ್ದು ನಿಧಾನದ ಹಾರಾಟ ಮತ್ತು ಹೆಣ್ಣು ಚಿಟ್ಟೆಗಳು ಮೊಟ್ಟೆಗಳನ್ನಿಡುತ್ತಾ ಸಾಗುತ್ತವೆ. ಆ ಲಾರ್ವಾಗಳು ಚಿಟ್ಟೆಗಳಾಗಿ ತಮ್ಮ ಹಾರಾಟ ಮುಂದುವರೆಸುತ್ತೆ. ಮೂರರಿಂದ ನಾಲ್ಕು ತಲೆಮಾರುಗಳು ಹೀಗೆ ಹಾರಾಡಿ ಮೆಕ್ಸಿಕೋ ತಲುಪುತ್ತವೆ ಎನ್ನುತ್ತವೆ ಅಧ್ಯಯನಗಳು. ತಂದೆ ತಾಯಿ ತೋರಿದ ಹಾದಿಯನ್ನೇ ಹಿಡಿಯೋಕೆ ಹಿಂದೆ ಮುಂದೆ ನೋಡುತ್ತೀವಿ ನಾವು . ಅಂತದ್ದರಲ್ಲಿ ತಲೆಮಾರುಗಳೇ ಹಿರಿಯರ ಮಾರ್ಗದರ್ಶನ ಮೀರದಿರೋದೆಂದರೆ ?! ವಿಸ್ಮಯ ಅನಿಸಿದ್ರೂ ಜೀವವುಳಿಸಿಕೊಳ್ಳೋಕೆ ಪಾಲಿಸಲೇಬೇಕಾದ ಸತ್ಯವದು. ಮೆಕ್ಸಿಕೋದಲ್ಲಿ ಮೊನಾರ್ಚ್ ಪಾತರಗಿತ್ತಿಗಳ ಸಂರಕ್ಷಣಾ ತಾಣವನ್ನೇ ನಿರ್ಮಿಸಲಾಗಿದೆ. ಮಿಚೋವಾಕಾನ್ ಮತ್ತು ಮೆಕ್ಸಿಕೋ ಸಿಟಿ ರಾಜ್ಯಗಳ ಗಡಿಯಲ್ಲಿರುವ ಈ ತಾಣವನ್ನು ೨೦೦೮ ರಲ್ಲಿ ಯುನೆಸ್ಕೋ ಸಂರಕ್ಷಿತ ತಾಣವೆಂದು ಘೋಷಿಸಲಾಗಿದೆ.  ೫೦,೦೦೦ ಹೆಕ್ಟೇರ್ ಇರುವ ಈ ತಾಣದಲ್ಲಿ ಅಕ್ಟೋಬರಿನಿಂದ ಮಾರ್ಚ್ ವರೆಗೆ ಮಾತ್ರ ಚಿಟ್ಟೆಗಳ ಹಿಂಡು. ಆಮೇಲೆ ಮೆಕ್ಸಿಕೋದ ಸ್ಥಳೀಯ ಚಿಟ್ಟೆಗಳು ಅಲ್ಲಿಲ್ಲಿ ಕಾಣಸಿಗುತ್ತವೆ. 

ಮೆಕ್ಸಿಕೋದಲ್ಲೀಗ ಮೊನಾರ್ಚ್ ಚಿಟ್ಟೆಗಳು ಮಾತ್ರವೇ ? 
ಮೆಕ್ಸಿಕೋದಲ್ಲಿ ಮೊನಾರ್ಚ್ ಅಷ್ತೇ ಅಲ್ಲದೇ ಹಲವು ಬಣ್ಣ ಬಣ್ಣದ ಚಿಟ್ಟೆಗಳು ಗುಂಪುಗುಂಪಾಗಿ ಕಾಣಸಿಗುತ್ತಿವೆ ಈಗ. ಯಾವ ಪಾರ್ಕ್ , ಹುಲ್ಲುಗಾವಲುಗಳನ್ನು ನೋಡಿದ್ರೂ ಗುಂಪುಗುಂಪಾದ ಚಿಟ್ಟೆಗಳು. ಹಿಂದೆಂದೂ ಕಾಣದಿದ್ದಷ್ಟು ಈಗ ಎಲ್ಲಿಂದ ಬಂದವು ? ಮುಂದಿನ ಬೇಸಿಗೆಯ ಸಮಯಕ್ಕೆ ಇವೆಲ್ಲಾ ಎಲ್ಲಿ ಮಾಯವಾಗುತ್ತೆ ಅನ್ನೋದೊಂದು ನೈಸರ್ಗಿಕ ಅಚ್ಚರಿ. ನಾವು ಬೇಸಿಗೆ ರಜಾಕ್ಕೆ, ಅಕ್ಟೋಬರ್ ರಜಾಕ್ಕೆ ಅಂತ ನೆಂಟರ ಮನೆಗೆ ಹೋಗಿ ಬಂದಂಗೆ ಅವೂ ತಮ್ಮ ಭೂಮಿಯ ಇತರ ಕಡೆಗಳ ನೆಂಟರ ಮನೆಗೆ ಓಡಾಡುತ್ತಿರಬಹುದೇ ? ವಸುಧೈವ ಕುಟುಂಬಕಂ ಎನ್ನೋ ಸುಂದರ ಕಲ್ಪನೆಯಲ್ಲಿ ರಾಜ್ಯ, ದೇಶಗಳ ಗಡಿವ್ಯಾಜ್ಯಗಳರಿಯದೇ ಸ್ವಚ್ಛಂದವಾಗಿ ವಿಹರಿಸೋ ಈ ಜೀವಗಳನ್ನು ಕಂಡರೆ ಖುಷಿಯಾಗುತ್ತೆ. ಮಹಾವಲಸೆಯ ಬಗ್ಗೆ ಹೆಮ್ಮೆಯಾಗುತ್ತೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x