ಪಂಜು ಕಾವ್ಯಧಾರೆ

ಹಲ್ಕಾ ಸಾಲುಗಳು
ತೆರೆದ ದಾರಿಯ "ಸ್ವಾತಿ" ಮಳೆಯಲ್ಲಿ ಮೊದಲು ಮುತ್ತಿಡುವಾಗ ನೀಲಾಕಾಶದಲಿ ಮಂಕಾಗಿರುವ ನಕ್ಷತ್ರ ನೋಡುವ ಕಣ್ಗಳು…!
ಭುವಿಯ ನೋಡಿ ಹೆಣ್ತನದ ವಸಂತದ ಒಲುಮೆಯ ಮೇಲೆ ಒಂದಾದೆವು…!
ಬಾನಂಗಳದಿ ಒಂಟಿಯಂತಿರುವ ಚಂದ್ರನು
ನಗುತ್ತಿದ್ದಾನೆ
ನಮ್ಮಯ ಒಲುಮೆಯ ಪರಿ ಕಂಡು…!
ಬಾಡಿದ ಹಸಿರೆಲೆಗಳೂ ನಮಗಷ್ಟಲ್ಲದೆ ಅವಕ್ಕೆಲ್ಲ ಈಗ ವಸಂತ ಕಾಲ ಒಂದಕ್ಕಿಂಥ ಒಂದು  ಚಿಗುರೊಡೆಯುವ ತವಕ…!
ಮೋಡದ ಬಸಿರು ಹೆಚ್ಚಾಗಿ ಹನಿಗಳು  ಹುಟ್ಟುತ್ತಿವೆ ನಾ ಮುಂದು ತಾ ಮುಂದೆಂದು 
ಜೋಡಿಯ ಸ್ಪರ್ಶಕ್ಕೆ…!
ಆದಾವ ಹನಿ ಹಣೆಯ ಮೇಲೆ ಬಿತ್ತೊ ನಾ ಕಾಣೆ ನನಗೆ ಮೊದಲ ಮುತ್ತಿನಾಮಂತ್ರಣ ಸಿಕ್ಕಿತು…!
ಮೊದಲು ಮೂಡಿದ ಕಂಬನಿ ಈ ಮಳೆಯಲ್ಲಿ ಮಾಯವಾಗಿದೆ…!
ನಿನ್ನ ಸಾಂಗತ್ಯದಲ್ಲಿ ಮೊದಲ ಹನಿ  ಕೊನೆಯ ಹನಿ ಇಂದು ಇತ್ಯರ್ಥವಾಗಲಿ…! ಇನ್ನಾದರೂ
ನಂಬಿಕೆ ಮಸಣದ ಮೇಲೆ ನೀ ಗೋರಿಯಾಗಿರು ನನ್ನ ಜೀವನದ ತುಂಬ ಹಸಿರಾಗಿರು…!
ಪಿ ಕೆ…? ನವಲಗುಂದ

praveenkumar-honnakudari

 

 

 

 

 


  'ಬಾ ಹೋಗೋಣ ಶಾಲೆಗೆ'
                      
'ಅಕ್ಕ ನೋಡೆ ಶಾಲೆದಿರಿಸಲಿ
ಹೇಗೆ ಒನಪಾಗಿ ಹೊರಟಿಹರು!
ಅವರು ನಮ್ಮಯ ಸ್ಥಿತಿಯನು 
ಕಂಡು ಗೇಲಿ ಮಾಡಿ ನಕ್ಕಾರು'..?

ಸಂತೈಸಲು ತಮ್ಮನಿಗೆಂದಳು,
'ಅವರತ್ತ ನೀ ನೋಡದಿರು.
ನಮ್ಮ ಭಾಗ್ಯವಿರುವುದಿಷ್ಟೇ,
ತರುವ ಬಾ ಕೆರೆಯ ನೀರು.

ಇವರ ಕಂಡು ಮರುಕಗೊಂಡು
ಬಾಲೆಯರು ಇವರ ತಡೆದರು.
'ಶಾಲೆಬಿಟ್ಟು ಎತ್ತ ಹೊರಟಿರಿ'?
ಎಂದು ಅವರನು ಕೇಳಿದರು.

ಅಕ್ಕ ತಮ್ಮ ಮುಖನೋಡಿಕೊಂಡು
ಬೇಸರದಿಂದಲೆ ನುಡಿದರು.
'ಶಾಲೆಗೆ ಎಂದೂ ಹೋಗೇ ಇಲ್ಲ.
ನಾವು ಕೂಲಿಮಾಡೋ ಬಡವರು'.

ಚಿಂತಿಸದಿರಿ ನಿಮ್ಮವರಿಗೆ ತಿಳಿಸಿ 
ಹೇಳುವೆವೆಂದರಾ ಬಾಲೆಯರು.
'ಶಾಲೆಗಾಗಿ ನಾವು ನೀವು;ನಿಮ್ಮ 
ಹಕ್ಕು ಕೊಡೆಸುವೆವು'ಎಂದರು.

ಶಾಲೆಗೆ ಸೇರಿಸುವರೆಂದು ಅರಿತು
ಮಕ್ಕಳು ಬಲು ಸಂತಸಗೊಂಡರು.
ಕೂಲಿ ತೊರೆದು ಶಾಲೆಯ ಸೇರಿ
ತಾವೂ ಓದಲು ಉತ್ಸುಕರಾದರು. 
-ತ್ರಿನೇತ್ರಜ. (ಶಿವಕುಮಾರ. ಹಿರೇಮಠ.)

shivukumar-hiremath

 

 

 

 

 


ಕಲ್ಲಾದವಳಿಗೆ….

ಒಬ್ಬನ  ಮೋಸ
ಇನ್ನೊಬ್ಬನ  ಶಾಪಕ್ಕೆ
ಗುರಿಯಾಗಿಯೂ,
ನೀ
ಮೋಕ್ಷಕ್ಕೂ ಮತ್ತೊಬ್ಬನಿಗಾಗಿಯೇ 
ಕಾದೆಯಲ್ಲವೇ.?  
ಅದಕೆ ತಕರಾರಿದೆ ನಿನ್ನ ಬಗ್ಗೆ…

ಸುಡು ಬಿಸಿಲಿಗೆ 
ಸಡಿಲಾದ  ಜೀವವ 
ತುಸು  ತುಸುವಾಗಿಯೇ 
ಕರಗಿಸಿ ಮಣ್ಣಾಗಿಸಿದ್ದರೆ 
ಅಲ್ಲೊಂದು ಹಸುರಿಗೆ 
ಕಸುವಾಗಿರುತ್ತಿದ್ದೆಯಲ್ಲೇ.. 

ಕೊಂಚ  ಕೊಂಚವೇ  ಅಲುಗಾಡಿ 
ನಿನ್ನಡಿಯ  ಸಂಧಿಯಲ್ಲೊಂದು 
ಚೂರೇ ಚೂರು ಜಾಗವ 
ಝರಿ ಹರಿವಿಗೆ ಬಿಟ್ಟಿದ್ದರೆ,
ನದಿಯುಗಮದ ತಾಣವಾಗಿರುತ್ತಿದ್ದೆಯಲ್ಲೇ.. 

ಹಸಿರಾಗದ,
ನೀರಿಗನುವಾಗದ  ನೀನು
ಮತ್ತದೇ ಮೀಸೆ ,ಅದೇ ಎದೆ, 
ಅದೇ ಜೀವ, ಅದೇ  ಭಾವ, 
ಅದೇ ಪಾದ, 
ಪಾದದ ಅದೇ ಧೂಳಿಗೆ ಕಾದೆಯಲ್ಲವೇ? 

ನನಗದಕೇ
ತಕರಾರಿದೆ ನಿನ್ನ ಬಗ್ಗೆ…

–ಶೋಭಾ ಹಿರೇಕೈ…

shobha-naik

 

 

 

 

 



ರಾಜಕೀಯ ಸಂತೆಯಲ್ಲಿ
 
ಹಕ್ಕುಗಳ ಮಾರಾಟ ಬಲು ಜೋರಾಗಿದೆ .
ಜಿಲೇಬಿ ರುಚಿ ತೋರಿಸಿ ,
ಜಿರಲೆಯಂತೆ ಹೊರಳಾಡಿಸುತ್ತಾ.
ಗ್ರಾಹಕನ ಗತಿಗೆ ಇತಿಮಿತಿಗಳ ಸಂಗವ ಅಂಟಿಸಿ ,
ಮಧ್ಯವರ್ತಿಯ ಮಾಯಾಜಾಲದಲ್ಲಿ
ಹಕ್ಕುಗಳು ವ್ಯಾಪಾರಕ್ಕೆ ಬಿಟ್ಟು ಮಾಯವಾಗುತ್ತಿದೆ.
ಸಂಜೆ ಕಾಣದ ವಹಿವಾಟುವಿನಲ್ಲಿ.!

ಶ್ರಮಿಕನಿಗೆ ಭ್ರಮೆಯಲ್ಲಿ  ಮುಳುಗಿಸಿ
ಕಾನೂನು ಬದ್ಧವಾಗಿ ದರ ನಿಗದಿ.
ಗ್ರಾಹಕನಿಗೆ ಅದರ ಮೇಲಿನ ಸುಂಕ ಉಚಿತ.
ಇದರ ನಡುವೆ ಕುಶಲೋಪರಿಗಳ ಪಾಲುಗಾರಿಕೆ.
ಸಂತೆಯಲ್ಲಿ ಯಾವೊಂದು ಸರಕು
ಕೊಳೆಯಲು ಬಿಡವುದಿಲ್ಲ .!

ದಾಖಲೆಗಳಲ್ಲಿ ಸಂಹನವು ಪ್ರಭುದ್ಧತೆಯನ್ನು ಕಾಯುತ್ತಾ
ಭಾವನಾತ್ಮಕ ಯಾಮಾರಿಸಿ ಮಾತಿನಲ್ಲಿ ಮುಳುಗಿಸಿ
ಮುಸುಕಿನ ಮಬ್ಬಿಗೆ ಅರಿವಿಲ್ಲದೆ ಅಣಗಿಸುತ್ತಾರೆ.

ರಿಯಾಯಿತಿ ಬಯಸಿದವರಿಗೆ
ರೋಗ ಪೀಡಿತ ಬೆಳೆಯನ್ನೆ
 ಬಣ್ಣ ಬಳಿದು ಕೊಡಲಾಗುವುದು. !
ಬಡವನ ಹೆಸರಲ್ಲಿ ಹೇಸಿಗೆ ಇಲ್ಲದೆ
ಟಾಟಾ ಬಿರ್ಲಾಗೆ ಬಿಟ್ಟಿಯಾಗಿ ಬಳುವಳಿ ನೀಡಲು ಸರ್ಕಸ್. 

ಮಾರಾಟವಾಯಿತು ಸಂತೆಯ ಸರಕು,
ಸೈತಾನರ ಸಮ್ಮುಖದಲ್ಲಿ.
ಕೊನೆಗೆ ಸರಕನು ಬೆಳೆದವನಿಗೆ
ಚೀಲದ ತುಂಬಾ ಸಂತೆಯ ಚಿಂತೆ.!
ಚಮತ್ಕಾರಿಗೆ ಚಿಲ್ಲರೆಯ ಕಂತೆ,
ಚುಣಾಯಿತನಿಗೆ ಸಮಪಾಲು
ಚೆಂಬು ಹಿಡಿದವನಿಗೆ ಹೆಂಡ, ಹೆಣ್ಣಿನ ಕೊಡುಗೆ
ಬಂಡವಾಳಿಗೆ ನಿಜವಾದ ಬದಕು,!
ಭವಿಷ್ಯ ಭದ್ರಗೊಳಿಸುವ ಬೇವರ್ಸಿ
ಬಿಗುಮಾನದ ಕುರುಡು ರಾಜನ ಕೈಗೆ
ತಕ್ಕಡಿ ಕೊಟ್ಟು ಅಳತೆ ಮಾಡಿಸುವ ಮಸಲತ್ತು.!
ಆತುರಗಾರರ(ಶ್ರಮಿಕ)ನಿಗೆ ಅನಿವಾರ್ಯವಾಯಿತು
 ಅನಿರ್ಧಷ್ಟಾವಧಿ ದರಣಿಯೇ ಗತಿಯಾಗಿ.!
 
-ನರಸಿಂಹಮೂರ್ತಿ ಎಂ.ಎಲ್

narasimha-murthy

 

 

 

 

 


ನೀನೆಂದರೆ

ನೀನೆಂದರೆ
ಆರದ ಹಣತೆ
ಜೀವ ಜೀವರಾಗದ ಕವಿತೆ
ಕನಸುಗಳ ಕನವರಿಕೆಯಲಿ 
ಪದ್ಯದ ಭಾವದಲಿ
ಗದ್ಯದ ಸಾಲಿನಲಿ

ನೀನೆಂದರೆ
ಜೀವಾತ್ಮ
ಮನದಾಳದಲಿ ಅದೆಷ್ಟು 
ಕಂಪನಗಳ ರಾಗ 
ಹಾಡು ಕಟ್ಟಿ ಹಾಡುತಿವೆ 
ಹೃದಯ ಕದ್ದವನಿಗೆ ಗೊತ್ತು .

ನೀನೆಂದರೆ
ಕೈಗೆ ನಿಲುಕದ ತಾರೆ 
ಮನದಾಕಾಶದ ಬೆಳದಿಂಗಳ ಧಾರೆ 
ಪ್ರೀತಿಯ ಮೂಡಿಸಿ 
ಭಾವನೆಗಳ ಬೆಳಗಿಸಿ 
ಬಯಕೆಗಳ ಅರಳಿಸಿ
ಎಲ್ಲವೂ ನಿನಗೆ ಅರ್ಪಣೆ 
ಚಂದಿರನ ಜೊತಗೆ ಅಪರಿಮಿತ
ಚುಕ್ಕಿಗಳಿದ್ದರೂ
ಚುಂಬಕ ಶಕ್ತಿ ನೀನು
ಏಣಿ ಹತ್ತಿ ಬರಲೇ
ಒಮ್ಮೆ  ಚುಂಬಿಸಲು

ನೀನೆಂದರೆ
ಹೊಸ ಕುಸುಮ 
ಪರಿಮಳ ಪದೇವುಗಳ ಸಂಗಮ 
ಭ್ರಮರವಾಗಿ ಸೇರಿ
ಬಿಡಲೆ ಬಂಧಿಯಾಗಿ ಬಹುಕಾಲದವರೆಗೆ 
ಸತ್ತು ಹೋಗಲೇ
ಒಂದಾಗಿ

ನೀನೆಂದರೆ 
ಭರವಸೆಯ ಬದುಕು 
ಮತ್ತೆ ಮತ್ತೆ ಬದುಕಲು.

-ಜಹಾನ್ ಆರಾ

jahanara-hussain

 

 

 

 

 


ಮುಂದಿರುವ ಅಸ್ತಿತ್ವದ ಆಯ್ಕೆಗಳು

ಅವನ ಮುಂದೆ ನಿಂತಾಗ 
ಕಿಸಕಿಸ ಹಲ್ಲು ಕಿಸಿದು 
ಮುಖದ ಕೆನ್ನೆಗಳಿಗೆ ತಾಗುವ ಎಳೆಗೂದಲು ಸರಿಸಿ
ಅವರಿವರ ಚಾಡಿ ಹೇಳಿ ಅವನ ಬಾಲವೇ ಹಿಡಿದು
ಜಾರ್ ಅಂತ ಜಾರುವ ಜಾಣೆಯರಿಗೆ
ಇದು ಕಾಲ..

ಕರ್ತವ್ಯವೇ ದೇವರೆಂದು ಪಾಲಿಸುವ
ಮುಗ್ದ ಪ್ರಾಣಿಗಳ ಉಸಿರನ್ನು ತೆಗೆಯುವ ನೀವು
ನನ್ನ  ಅರಹುಗಳನಲ್ಲ……
ನನ್ನ ಅರಿವು ಯಾವಾಗಲೂ  
ಸೂರ್ಯಕಿರಣದಂತೆ ಕುಕ್ಕುತ್ತೆ ಅವರನ್ನ

ಕನಸಿನ ಓಟಕ್ಕೆ ರೆಕ್ಕೆಗಳನ್ನು ಕಟ್ಟಿಕೊಂಡು ಸೂರ್ಯನಿಗೆ ಪ್ರತಿಸ್ಪರ್ಧಿದಿಯಾಗಿ ಸ್ಪರ್ಧಿಸಲೆಂದು
ಸಿಎಲ್ ಹಾಕಿದಾಗಲ್ಲೊಮ್ಮೆ
ಎಲ್ಲರೂ ಕಣ್ಣುರೆಪ್ಪೆಗಳು ಬಡಿದುಕೊಳ್ಳುತ್ತಾರೆ
ಏಕೆಂದರೆ,
ಅಲ್ಲಿ ರೆಕ್ಕೆ ಮುರಿದ ಹಕ್ಕಿಗಳೇ ಹೆಚ್ಚು…

ಈ ಹತ್ತಾರು ಸ್ಪರ್ಧೆಯಲ್ಲಿ 
ಸೋಲು ಗೆಲುವಿನ ಪ್ರಶ್ನೆ ? 
ಓಡುವ ಕಾಲುಗಳಲ್ಲಿ ಉಸುರಿಲ್ಲ
ಬಾಹುಗಳಿಗೆ ಬೆಂಬಲದ ಹಂಗಿಲ್ಲ…..
ಅವರಂಗದ ತತ್ರಾಣಿಯಲ್ಲಿದೆ ಜೀವ
ನನಗೊಂದು ಉತ್ರಾಣಿಯ ಮುಳ್ಳು ಹಚ್ಚಲು
ನಿತ್ರಾಣಿಸುತ್ತಿದ್ದಾರೆ…….
ಏಕೆಂದರೆ , 
ಅಲ್ಲಿ ಆ ಮುಳ್ಳು ಹಚ್ಚಿಸಿಕೊಂಡವರೆ ಹೆಚ್ಚು

ಕೆಲವೊಮ್ಮೆ  ಸಂಪ್ರದಾಯವನ್ನು ವಿರೋಧಿಸಿ   ಅವರ ಕೆಂಗಣ್ಣಿಗೆ ಗುರಿಯಾಗಿ
ನನ್ನ ಅಸ್ತಿತ್ವದ ಬುಡಕ್ಕೆ ಕೈ ಹಾಕಿ
ರೆಕ್ಕೆಗಳನ್ನು ಕತ್ತರಿಸುವ ಗೊಡ್ಡು ಬೆದರಿಕೆಗೆ
ಬೆನ್ನುಹೊಡ್ಡಿ ಅಸ್ತ್ರಗಳನ್ನು ಪಾಲಿಸುತ್ತೇನೆ
ಮಂತ್ರಕ್ಕೆ ಬೀಳುವ ಮಾವಿನಕಾಯಿ ಅಲ್ಲ
ಏಕೆಂದರೆ,,
ಇಲ್ಲಿ ಮಂತ್ರಕ್ಕೆ ಬೀಳುವ
ಮಾವಿನಕಾಯಿಗಳ ದಬ್ಬಾಳಿಕೆ ಹೆಚ್ಚು…..!!!

ಮಲ್ಲಮ್ಮ ಯಾಟಗಲ್

mallamma-yatagal

 

 

 

 

 


ಒಲವಿನ ಗೆಳತಿ ….

ಎಲ್ಲಿಹಳು ನನ್ನವಳು 
ಅವಳನ್ನೆ  ಕಾದಿಹೆನು
ನನ್ನ ಮನದಲಿ ಪ್ರೀತಿಯನು ನೀಡಿ 
ಕನಸನ್ನು  ಚೆಲ್ಲಿದವಳು

ಕನಸಿನ ಲೋಕದಲಿ 
ಸೇರಿದವು ಎರಡು ನಯನಗಳು  
 ಕಂಡಿರುವೆ   ಚೆಲುವನು 
ಒಲವಿನ ನಗುವ ಬೀರಿಹಳು

ತಂಪಾದ ಗಾಳಿಯಲಿ 
ನಿದಿರೆಯನು ಮರೆಸಿಹಳು
ಎನ್ನಯ ಕೈಗೆ ಸಿಗದವಳು
ಅವಳು !! ಎಲ್ಲಿಹಳು

ಅಥ೯ ಮಾಡಿಕೋ ಒಲವೇ 
ನನ್ನ ಒಪ್ಪಿಕೋ ಚೆಲುವೇ 
ಈ ಮನವು ಕಾಯುತಿದೆ 
ನಿನ್ನಯ ಪ್ರೀತಿ  ಕೈ ಹಿಡಿದುನಡೆಸು 

ದಿನಗಳವೂ ಉರುಳಿತಿವೆ 
ನಿನ್ನ ಅನುಮತಿಯ ಕಾಯದೆಯೇ 
 ನಿನಗೆ ಈ ಹೃದಯವಿದು 
ಬಂದುಬಿಡು ಚಿನ್ನ ಹೊತ್ತು ಕಳೆಯುವ ಮುನ್ನ 

ಅಕ್ಷಯಕುಮಾರ (ಅಕ್ಷು )

akshay-joshi

 

 

 

 

 


ಹೂವಿನಂಥ ಕನಸು

ನೀರುಂಡ ಮರವಿದುವೆ ಮೊಗ್ಗಿಗೆ ಜೀವವಿತ್ತಂತೆ
ನೋವುಂಡ ಮನಸಿದುವೆ ಕನಸುಗಳನ್ನಿತ್ತಿತು
ಫಲವನೀವ ಮೊದಲೆ ಹೂವು ಉದುರಿದ ಹಾಗೆ
ನನಸನರಿಸಿದ ನಲುಮೆ, ಕುಲುಮೆಗೆ ಸಮಿಧೆಯಾಯ್ತು

ಹಾಲನೀವ ಧೇನುವಿಗೆ ಕೆಚ್ಚಲು ಭಾರವಾದಂತೆ
ಭಾವವಿತ್ತ ಮನಸಿಗೆ ತನ್ನಾಸ್ತಿತ್ವವೇ ಬೇಡವಾಯ್ತು
ಸ್ನೇಹದಿಂ ಪ್ರೀತಿಗೆ ಹೃದಯ ತಲುಪುವ ಮುನ್ನ
ಬೃಹದಾಸೆಯೊಂದು ಬಲವಾಗಿ, ಬಹುಬೇಗ ಮುಳುವಾಯ್ತು

ಅಕ್ಷಿಗೆ ತಂಪನೀವ ವಣ೯ಪುಷ್ಪದ ಬೆರಗಿಗೆ
ಮನಸೋತು ರೋಮದಿಂ-ರೋಮ ನಿಮಿರುತಿತ್ತು
ಹೂವು ಅರಳುವ ವೇಳೆ, ಮೊಗದಲಿ ಮುಗುಳಿನ ಛಾಯೆ
ಕಣ೯ದಲಿ ಪಕ್ಷಿಗಳ ಚಿಲಿಪಿಲಿಯ ಸ್ವರಮಾಯೆ

ನನ್ನೊಡತಿಯ ಸ್ವಾಗತಕೆ ಹೂಗಂಬಳಿಯ ಹಾಸಿದ್ದೆ
ಪನ್ನೀರ ಬೀಸಣಿಗೆಯ ಬೆಂಬಿಡದೆ ಬೀಸಿದ್ದೆ
ಅವಳ ನಡಿಗೆಯ ಸದ್ದದುವೆ, ಎಲ್ಲೆಡೆಯೂ ಪಸರುತಿರೆ
ಬಿಡದೆ ಸುರಿದ ವಷ೯ಧಾರೆಗೆ, ನಿದ್ದೆಯಿಂದ ಎಚ್ಚರವಾಯ್ತು

-ಸುದಶ೯ನ ಜಾಲಿಹಾಳ್

sudarshan

 

 

 

 

 


1. ಹೊಸಕಾಲಕೆ

ಮೃದು ಮಧುರ ಮಧು ಮಾಸಕೆ,
ಸವಿ ಸಾವಿರ ಸ್ಮೃತಿ ಸೇರಲಿ..
ಋತು ರೂಪಕೆ ರುಜು ರಮಿತಕೆ,
ನವ ನರ್ತನ'ನದಿ' ಮೂಡಲಿ..
ಹೊಸ ಕಾಲಕೆ, ಹೊಸಪರ್ವವು ಹಂಸಕಾವ್ಯ ಚೈತ್ರವು..!
ನದಿ ನೀರಿನ ನಿನಾದಕೆ,
ರವಿಕಿರಣದ ರನ್ನವಲ್ಲಿ..
ವರ್ಷಧಾರೆ ವಿಧಿಯ‌ ವರಕೆ,
ಕಮಲ ಕೃತಿಯ ಕಾಂತಿವಲ್ಲಿ..
ಹೊಸಕಾಲಕೆ,
ಹೊಸಗೀತೆಯು ಹೃದಯ‌ ಮೀಟು ವೀಣೆಯು..!
ಮೈಸಿರಿಯ ಮಿರಿ ಮಂಚಕೆ,
ಹಸಿರ ಹರೆಯ ಹೊದಿಕೆಯು..
ಸುರಸುಂದರಿ ಸುರಪಾಣಿಗೆ,
ನಸುಗೆನ್ನೆಗೆ ನಾಚಿಕೆ..
ಹೊಸ ಕಾಲಕೆ,
ಹೊಸ ಧಾಟಿಯು ನವತನವ ನೀಡಿದೆ..!
ಪದ ಪಲ್ಲವ ಪಾದಗಳಿಗೆ,
ಉದುರಿ ಉಡುವ ಉಂಗುರ..
ಬಲಜಂಗ ಬಂಧಿಸಿದ ಕೇಶಕೆ,
ಸಿರಿಸಂಪಿಗೆ ಸಿಂಗಾರ..
ಹೊಸ ಕಾಲಕೆ,
ಹರೆ ವಯಸು 'ಹಾರಬದಲಿ' ಕಲ್ಪನೆ..!
      
2. ಬೆಲೆಕಟ್ಟಲಾದೀತೇ…?

ಹರಿದ ಬಟ್ಟೆಯನು ಹಾಕಿ,
ಹಾದಿಯನು ಸವೆಸಬಹುದು..
ಒಡೆದ ದೋಣಿಯಿಂದ
ನದಿದಾಟಲಾದೀತೇ..?
ಹಳಸಿದ ಅನ್ನ ಉಂಡು,
ಹೊಟ್ಟೆ ಹೊರೆಯಬಹುದು..
ಹಣದ ಬಲದಿಂದ
ಹಸಿವ ಕೊಳ್ಳಲಾದೀತೇ..?
ನಾಲಿಗೆಯ ಲಯದಿಂದ,
ಮಾತಾಡಬಹುದು..
ಹದಿಬದೆಯ ಬೈಗುಳವು
ಇಲ್ಲವಾದೀತೇ..?
ಹಲವು ಮನು ಜೀವಗಳು,
ಜನ್ಮ ತಾಳಬಹುದು..
ಪರಿಪೂರ್ಣ ಮಾನವೀಯತೆ
ಹುಟ್ಟಿ ಬಂದೀತೇ..?
ಹರೆಯದ ಹೃದಯದಲಿ,
ಒಲವು ಉದಯಿಸಬಹುದು..
ಜನನಿಯೆದೆಯ ನಿಸ್ವಾರ್ಥ ಪ್ರೀತಿ
ಹರಿದುಬಂದೀತೇ..?
ಧರಿತ್ರಿಯಲಿ ದಿನ-ರಾತ್ರಿ,
ಎಲ್ಲವನು ಕೊಂಡಿರಬಹುದು..
ಧರೆಯ ಒಡಲಿಗೆ
ಹೋಗದಿರಲಾದೀತೇ..?
ಸರ್ವಸ್ವ ಸುಖಭೋಗ ಮರೆತು,
ಸನ್ಯಾಸಿಯಾಗಿರಬಹುದು..
ಜೀವ ಉಳಿಸಿಕೊಳಲು
ಉಸಿರಾಟ‌ ಬಿಟ್ಟಿರಲಾದೀತೇ..?
ಸಹಸ್ರ ರೋಗಗಳಿಗೆ,
ಔಷಧ ಸಿಗಬಹುದು..
ಅಹಂಕಾರ ಬೀಜಕ್ಕೆ
ಮದ್ದು ಸಿಕ್ಕುವುದೇ..?
ಹಲವು ಕನಸುಗಳ ನೇಯಲು,
ಮಲಗಿ ನಟಿಸಬಹುದು..
ದೇವನಿತ್ತ ನಿದ್ದೆಯನು
ಮರೆತಿರಲಾದೀತೇ..?
ಏನನ್ನೂ ಬೆಲೆತೆತ್ತು,
ಕೊಂಡುಕೊಳ್ಳುವೆನು ನಾನು..
ಜನ್ಮವಿತ್ತ ಗೌತಮೀ(ಇಂದಿರಾ)ದೇವತೆಗೆ, ಆ ದೇವತೆಯ ಮಮತೆಗೆ ಬೆಲೆಕಟ್ಟಲಾದೀತೇ ನನಗೆ..?!!

-ಗೌತಮೀಪುತ್ರ ಸುರೇಂದ್ರ ಗೌಡ ಗೋಳಿಹೊಳೆ (ಜಿಎಸ್ಜಿ)

surendra-gowda

 

 

 

 

 


ಸತ್ತ ರಾತ್ರಿಗಳ ಕಳೆಬರಹದ ಮೆರವಣಿಗೆ
ನಲ್ಲೆ ನೀ ತೊರೆದ ಮರು ಘಳಿಗೆಯಲ್ಲೆ
ನೆನಪುಗಳ ನೆಪವೊಂದನ್ನೊಡ್ಡಿ
ದಾಳಿ ಮಾಡಿ ಚತುರತೆಯಲೆ
ಮುಗಿಸುತಿವೆ ನನ್ನನ್ನೇ ಇಲ್ಲಿ…,
*****
ನವಿರು ಸಂಜೆಗೆ ಒಂದು ಝಡಿ ಮಳೆ
ಘಮ್ಮನೆ ಹೊಮ್ಮುವ ಮಣ್ಣಿನ ಘಮದ ಹೊಳೆ
ಎಲೆಬಳ್ಳಿಗಳ ಮೇಲೆ ಮಂಜಿನನಿಗಳ ಅಲೆ
ನಿನ್ನ ಕಾಲ್ಗೆಜ್ಜೆಯ ನವಿರು ಭಾವದ ಸೆಲೆ
ಮಧುರ ಪ್ರೇಮಕೆ ಭಾವುಬಂಧನದ ಕಲೆ
ನಿನ್ನ ಒಲುಮೆಯ ಅಮಲಿನಲಿ ನಾ ಸೆರೆ…,
*****
ಹೇ ಗಾಲಿಬ್….,
ಅವಳು ನಾಜೂಕಿನ ಮೃದು ಬೆರಳುಗಳಿಂದ
ಹೂ ಬಿಡಿಸುವುದನ್ನು ಕರಗತ ಮಾಡಿಕೊಂಡವಳು
ಸಿಕ್ಕಡರಿದ ಬಟ್ಟೆಯನ್ನೇ ಜತನದಿಂದ ರಕ್ಷಿಸಿಕೊಂಡಳು
ತಿರಸ್ಕರಿಸುವುದನ್ನು ಚಕಿತದಿಂದ ಮಾಡಿ ಮುಗಿಸಿದಳು
ಹೃದಯ ಗುಡಿಯಲಿ ಅವಳಚ್ಚಿದ ಹಣತೆ
ಸುಡಲು ಆರಂಭಿಸಿದೆ ನನ್ನ ಬದುಕನ್ನೆ ಈಗ
ಷರಾಭಿನ ಮಧು ಬಟ್ಟಲಿನಲಿ
ನೆನಪುಗಳನ್ನು ತುಂಬಿ ಗುಟುಕು ಗುಟುಕಿನಲಿ
ತುಂಬಿಕೊಡುವಳು ಈ ಗೋದೂಳಿಯ ಅಭ್ಯಂಜನಕೆ
ಬಾನಂಗಳದ ಬೀದಿಯ ತಿರುವಿನಲಿ ತಟ್ಟನೆ ಉದ್ಭವಿಪ
ನೆನಪುಗಳ ತನ್ಮಯತಗೆ ಯಾವ ಕಂದಾಯ ಕಟ್ಟಲೀಗ?
ಅವಳೊಂದು ವಿಸ್ಮಯ ನನಗೀಗ
ನನ್ನ ನಾನು ಕಂಡುಕೊಂಡಾಗಲೆ ತನ್ಮಯ ನಾನಾಗ…,
*****
ಬೆಲ್ಲದಚ್ಚು ನನ್ನವಳು
ಕಚ್ಚಲೋದರೆ ಹ್ಹಾ ಹ್ಹಾ
ಓಡುವಳು ತಿರುಗಿ ನೋಡುತ
ಮನ ಕೆಣಕುವ ನಗೆಯನು
ಎನ್ನೆಡೆಗೆ ಎಸೆಯುತಾ..
*****
ಸಿದ್ದುಯಾದವ್ ಚಿರಿಬಿ

sidduyadav

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಬದರಿನಾಥ ಪಲವಳ್ಳಿ
ಬದರಿನಾಥ ಪಲವಳ್ಳಿ
6 years ago

ಪಿ ಕೆಯವರ ಹಲ್ಕಾ ಸಾಲುಗಳು

ಮನದ ಭಾವಗಳ ಅಸಲೀ ಕನ್ನಡಿಯಂತಿದೆ.

1
0
Would love your thoughts, please comment.x
()
x