ಡಾ. ಅನಸೂಯಾದೇವಿಯವರ ಕೃತಿ “ಪ್ರಕೃತಿ ಮತ್ತು ಪ್ರೀತಿ”: ಹನಿಯೂರು ಚಂದ್ರೇಗೌಡ

 

ಕೃತಿ ವಿವರ:

ಪುಸ್ತಕದ ಹೆಸರು        : ಪ್ರಕೃತಿ ಮತ್ತು ಪ್ರೀತಿ- ವೈಚಾರಿಕ ಲೇಖನಗಳ ಸಂಗ್ರಹ

ಲೇಖಕಿ                    : ಡಾ.ಅನಸೂಯಾ ದೇವಿ

ಬೆಲೆ                        :  ೩೫೦ ರೂ.

ಪ್ರಕಾಶನ ಸಂಸ್ಥೆ         : ದೇಸಿ ಪುಸ್ತಕ, ವಿಜಯನಗರ, ಬೆಂ.-೪೦

ಪ್ರಕಟಣೆ ವರ್ಷ           : ೨೦೧೨ ಡಿಸೆಂಬರ್


 

 ಡಾ. ಅನಸೂಯಾದೇವಿ ಅವರು ಬಿಎಚ್‌ಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ ಆಗಿದ್ದವರು. ಇವರು ಈಗಾಗಲೇ ಉರಿಯಬೇಲಿ, ದೀಪದ ಕೆಳಗೆ, ಮಲ್ಲಿಗೆ ಹೂವು ಎಂಬ ಕಥಾಸಂಕಲನಗಳ ಮೂಲಕ ಕತೆಗಾರ್ತಿಯಾಗಿ; ಪ್ರಕೃತಿಪುರುಷ, ಅಮ್ಮಾ, ನಿನ್ನ ನೆನಪಿಗೆ, ಕೇಶವ ನಮನ, ಅನನ್ಯ ಎಂಬ ಕವನಸಂಕಲನಗಳ ಮೂಲಕ ಕವಯತ್ರಿಯಾಗಿ ಮತ್ತು ಆಕಾಶದ ಹಾಡು, ಕಾಡಬೆಳದಿಂಗಳು ಎಂಬ ಕಾದಂಬರಿಗಳ ಮೂಲಕ ಕಾದಂಬರಿಕಾರ್ತಿಯಾಗಿ ಹಾಗೂ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ರಾಬಿನ್ ಕುಕ್ ರವರ ಫೀವರ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ "ಸಂಕಟವೇ ನಿಲ್ಲು, ಸಾಧನೆಯಾಗು" ಎಂಬ ಕಾದಂಬರಿಯನ್ನು ಪ್ರಕಟಪಡಿಸುವ ಮೂಲಕ ಅನುವಾದಕಿಯಾಗಿಯೂ ಡಾ. ಅನಸೂಯಾದೇವಿ ಕನ್ನಡ ಸಾಹಿತ್ಯಲೋಕಕ್ಕೆ ಚಿರಪರಿಚಿತರು.

"ಪ್ರಕೃತಿ ಮತ್ತು ಪ್ರೀತಿ" ಎಂಬ ಕೃತಿಯು, ನಿವೃತ್ತ ಜೀವನ ನಡೆಸುತ್ತಿರುವ  ಡಾ.ಅನಸೂಯಾದೇವಿ ಅವರು ತಮ್ಮ ಜೀವನದ ವಿವಿಧ ಕಾಲಮಾನದಲ್ಲಿ ಬರೆದಿರುವ ವೈಚಾರಿಕ ಮತ್ತು ಆಧ್ಯಾತ್ಮಿಕ ಲೇಖನಗಳ ಸಂಗ್ರಹವುಳ್ಳ ಒಂದು ಮಹತ್ವದ ಕೃತಿಯಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗಬಲ್ಲ ಸರಳಭಾಷೆಯಲ್ಲಿರುವ ಈ ಕೃತಿಯಲ್ಲಿ ವೈಚಾರಿಕಾಂಶಗಳುಳ್ಳ ೬೫ ಬಿಡಿಲೇಖನಗಳು ಹಾಗೂ ಆಧ್ಯಾತ್ಮಿಕ ಚಿಂತನೆ, ಭಕ್ತಿ-ಭಾವ, ವಿಚಾರಗಳುಳ್ಳ ೧೭ ಮಹತ್ವದ ಬಿಡಿಲೇಖನಗಳು ಈ ಕೃತಿಯಲ್ಲಿವೆ.ಈ ಕೃತಿಯಲ್ಲಿ ಸಮ್ಮಿಳಿತಗೊಂಡಿರುವ ಲೇಖನಗಳಲ್ಲಿ ಕೆಲವು ಲೇಖನಗಳು ಈಗಾಗಲೇ ವಿಜಯ ಕರ್ನಾಟಕ ಪತ್ರಿಕೆ ಸೇರಿದಂತೆ ನಾಡಿನ ಇತರೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕಪತ್ರಿಕೆಗಳಲ್ಲಿ ಪ್ರಕಟಗೊಂಡಿರುವಂಥವು ಆಗಿದ್ದು, ಅವೆಲ್ಲವನ್ನೂ ಈ ಕೃತಿಯಲ್ಲಿ ಓದುಗರಿಗೆ ಒಟ್ಟಾಗಿ ನೀಡುವ ಪ್ರಯತ್ನವನ್ನು ಮಾಡಿರುವುದು ಕೃತಿಯ ಒಟ್ಟಂದವನ್ನು ಹೆಚ್ಚಿಸಿದೆ.

ಇಲ್ಲಿರುವಷ್ಟೂ ಲೇಖನಗಳು ಲೇಖಕಿಯ ಕಾಲಕ್ಕೆ ತಕ್ಕಂತೆ ಬದಲಾದ  ಚಿಂತನಾ ಕ್ರಮ, ಗ್ರಹಿಕೆಯ ದೃಷ್ಟಿಕೋನವನ್ನು ಓದುಗರಿಗೆ ತಿಳಿಸಿಕೊಡುತ್ತದೆ; ಅಷ್ಟೆ ಅಲ್ಲದೆ, ಲೇಖಕಿಯ ಬಾಲ್ಯಜೀವನ, ಆಟೋಟ, ಆದ ಅನುಭವ, ಕಂಡುಂಡ ನೋವು-ನಲಿವು, ಯೌವನದಲ್ಲಾದ ಅನುಭವ, ತಮ್ಮ ಶಿಕ್ಷಣದ ಸಂದರ್ಭದಲ್ಲಾದ ಅರಿವು, ಬದಲಾವಣೆಯ ಜೀವನಕ್ರಮವನ್ನು ತಿಳಿಸಿಕೊಡುವಲ್ಲಿ ಸಫಲವಾಗುತ್ತವೆ. ಮಹಿಳಾಪರವಾದ ದನಿ, ಸಾಮಾಜಿಕ ಬದಲಾವಣೆಯ ತಹತಹಿಕೆ, ತಮ್ಮವರೆಂದೆನಿಸಿಕೊಂಡವರ ನಿಜಬಣ್ಣ, ಖ್ಯಾತನಾಮರ ಗೋಸುಂಬೆತನ, ಒಳ್ಳೆಯತನವೆಂಬ ಸೋಗಲಾಡಿ ಬುದ್ಧಿ, ಮಹಿಳೆಗೂ ಕಾವ್ಯದ ಅಭಿವ್ಯಕ್ತಿಗೂ ಇರುವ ನಂಟು, ಜೀವನವೆಂಬುದು ಅರಿವು ಮತ್ತು ಹೊಂದಿಕೆಯೆಂಬ ಸಮಭಾಜಕ ನೆಲೆ ಎಂಬ ವಿಚಾರಗಳು, ಈ ವಿಚಾರದಲ್ಲಿ ಲೇಖಕಿಯ ಮನೋಭಾವ ಎಂಬಿತ್ಯಾದಿ ಅಂಶಗಳು ಈ ಕೃತಿಯಲ್ಲಿ ಮೇಳೈಸಿರುವುದನ್ನು ಕಾಣಬಹುದು.       

ಸುಮಾರು ೩೪ ವರ್ಷಗಳ ಕಲ ಕನ್ನಡ ಬೋಧಕಿಯಾಗಿದ್ದ ಅನಸೂಯಾದೇವಿ ಅವರೂ ಪ್ರವೃತ್ತಿಯಲ್ಲಿ ಸಂಗೀತ ಶಿಕ್ಷಕಿ;ಕಲಾವಿದೆಯೂ ಹೌದು. ಹೀಗೆ ತಮ್ಮ ವೃತ್ತಿಜೀವನದಲ್ಲಿ ಕಂಡ ಏಳುಬೀಳುಗಳನ್ನು, ಆತಂಕಗಳನ್ನು, ಪಡೆದ ಸಾರ್ಥಕತೆಯನ್ನು ತುಂಬಾ ಆರ್ದ್ರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ತಾವು ಕಲಿಸಿದ ವಿದ್ಯಾರ್ಥಿಗಳು ಕಂಗೆಟ್ಟಾಗ; ಜೀವನದಲ್ಲಿ ಇವರೇ ದಿಕ್ಕುಗೆಟ್ಟಾಗ ಅನುಭವಿಸಿದ, ಎದುರಿಸಿದ ಸನ್ನಿವೇಶಗಳನ್ನು ಭಾವನಾತ್ಮಕವಾಗಿಯೂ ಸ್ವಾರಸ್ಯಕರವಾಗಿಯೂ ಇಲ್ಲಿ ದಾಖಲಿಸಿದ್ದಾರೆ. ಇವು ಓದುಗರ ಹೃದಯವನ್ನು ಕದಡುವುದಲ್ಲದೆ, ಚಿಂತನೆಗೆ ಹಚ್ಚುತ್ತವೆ.

ಪಿಹೆಚ್‌ಡಿ ಪದವಿಗಾಗಿ ವ್ಯಾಸಕೂಟ-ದಾಸಕೂಟ-ಒಂದು ಅಧ್ಯಯನ ಎಂಬ ವಿಷಯದಲ್ಲಿ ಮಹಾಪ್ರಬಂಧ ತಾವು ಸಿದ್ಧಪಡಿಸಿದ್ದಾರೆ. ಈ ಸಾಹಿತ್ಯದ ಗಾಢಪ್ರಭಾವಕ್ಕೊಳಗಾದ ಲೇಖಕಿ, ಈ ಕೃತಿಯ ಎರಡನೇ ಭಾಗವನ್ನು ಆಧ್ಯಾತ್ಮಿಕ ಲೇಖನಗಳಿಗೇ ಮೀಸಲಾಗಿಸಿದ್ದಾರೆ. ಅಂದರೆ, ಇಲ್ಲಿನ ಸುಮಾರು ೧೭ ಲೇಖನಗಳೂ ದಾಸ ಮತ್ತು ವ್ಯಾಸರ ಚಿಂತನೆಗಳನ್ನುಳ್ಳವಾಗಿದ್ದು, ಆಧ್ಯಾತ್ಮಿಕ, ವೈಚಾರಿಕ, ಚಿಂತನಶೀಲ, ಸಾಮಾಜಿಕ ಔನ್ನತ್ಯ, ಮೂಢಾಚಾರಗಳ ಖಂಡನೆ, ಉತ್ತಮ ಹಾಗೂ ಒಳ್ಳೆಯದೆನಿಸುವುದನ್ನು ಅನುಸರಿಸುವ, ಪಾಲಿಸುವುದನ್ನು ಒತ್ತಿಹೇಳುವಂಥವಾಗಿವೆ. ಯತ್ರ ನಾರ್ಯಸ್ತು ತತ್ರ ದೇವತಃ ಎಂದು ಹೇಳುತ್ತಲೆ ನಾರಿಯರನ್ನು ಅವಮನಿಸುವ, ಆಕೆಯನ್ನು ಕೇವಲ ಭೋಗದವಸ್ತುವಿನಂತೆ ಕಾಣುವ ಪ್ರವೃತ್ತಿಯನ್ನು ಲೇಖಕಿ ಖಂಡಿಸುತ್ತಾ, ತಮ್ಮ ಕುಟುಂಬದಲ್ಲಿ ಸ್ವತಃ ತಮ್ಮ ತಂದೆ ಮನೆಯಲ್ಲಿನ ಹೆಂಗಸರ ಬಗ್ಗೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ಪ್ರಸ್ತಾಪಿಸಿ, ನಯವಾಗಿಯೇ ತಮ್ಮ ಲೇಖನಿಯ ಮೊನಚಿನಿಂದ ತಿವಿಯುತ್ತಾರೆ.

 ಬಾಲ್ಯದಿಂದಲೂ ತಮ್ಮ ಬೆಳವಣಿಗೆಯಲ್ಲಿ ಸಹಕರಿಸಿದ, ತಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾದವರ ಕುರಿತೂ, ತಮ್ಮಿಷ್ಟದ ಕವಿ, ಲೇಖಕ, ಸಾಹಿತಿಗಳ ಬಗೆಗೂ ಇಲ್ಲಿ ಕೆಲವು ಲೇಖನಗಳಿವೆ. ತಮ್ಮ ಬಾಲ್ಯದ ಗೆಳೆಯ-ಗೆಳತಿಯರು, ಒಡಹುಟ್ಟಿದ ಅಣ್ಣ-ತಮ್ಮ, ಅಕ್ಕ-ತಂಗಿಯರು, ಅಲ್ಲದೆ ಸಹಪಾಠಿಗಳು, ಸಾಹಿತ್ಯದ ಬಗೆಗೆ ಒಲವು ಮೂಡಲು ಸಹಕರಿಸಿದ ತಮ್ಮ ಚಿಕ್ಕಪ್ಪ ಅವರಿಗೆ ಕೃತಜ್ಞತೆ ತೊರುವ ಲೇಖನಗಳೂ ಇಲ್ಲಿವೆ. ಇವು ಸಣ್ಣದೊಂದು ಸಹಾಯವನ್ನು ಯಾರೇ ಮಾಡಿದರೂ ಅವರನ್ನು ಒಮ್ಮೆ ನೆನೆಯುವ ಮತ್ತು ಅವರಿಗೊಂದು ಕೃತಜ್ಞತೆ ಹೇಳುವುದು ಮುಖ್ಯ ಎನ್ನುವ ಅಗತ್ಯವನ್ನು ಒತ್ತಿ ಹೇಳುತ್ತವೆ.

ಸದ್ಯ ನಿವೃತ್ತಿಯ ಜೀವನದಲ್ಲಿರುವ ಲೇಖಕಿ, ಸಹಜವಾಗಿಯೇ ತಮ್ಮಂತೆ ಇರುವವರ ಬಗೆಗೆ ಕಾಳಜಿ ತೋರುವ ಪ್ರಯತ್ನವಾಗಿ ನಿವೃತ್ತಜೀವನದಲ್ಲಿರುವವರಿಗೂ ಕೆಲವು ಸಲಹೆ-ಸೂಚನೆಯ ಅಂಶಗಳುಳ್ಳ ಲೇಖನಗಳನ್ನು ಇಲ್ಲಿ ನೀಡಿ, ನಿವೃತ್ತರ ಪಾಲಿಗೆ ಮಾರ್ಗದರ್ಶಕಿಯಾಗಿದ್ದಾರೆ.

ಬದಲಾದ ಕಾಲಮಾನದಲ್ಲಿ ಇಂದು ಕೌಟುಂಬಿಕ ಸ್ಥಿತಿ ಬದಲಾಗಿದ್ದು, ಕೂಡುಕುಟುಂಬಗಳಲ್ಲಿದ್ದ ಭದ್ರತೆಯ ಭಾವ ಅಭದ್ರವಾಗಿದೆ. ಇದರಿಂದ ಇಂದು ಪ್ರತಿ ಕುಟುಂಬಗಳೂ ವಿಭಕ್ತಗೊಂಡು ಹರಿದಹಾಳೆಯ ತುಂಡುಗಳಂತಾಗಿ ಹೋಗಿದೆ. ಗಂಡ,ಹೆಂಡತಿ, ಮಕ್ಕಳು, ಅತ್ತೆ, ಮಾವ, ಅಜ್ಜ, ಅಜ್ಜಿ ಎನ್ನುವ ಪರಿಕಲ್ಪನೆ ಇಂದು ಮಕ್ಕಳಿಗೆ ಲಭ್ಯವಾಗದೆ ಕುಟುಂಬಗಳು ತರಗೆಲೆಯಂತಾಗಿದೆ. ಹೀಗಾಗಿ, ಲೇಖಕಿಯು ಕೂಡುಕುಟುಂಬದ ಅತ್ಯಗತ್ಯವನ್ನು ಸಾರಿಹೇಳುವ ಲೇಕನಗಳನ್ನು ಈ ಕೃತಿಯಲ್ಲಿ ನೀಡಿ, ಆ ಮೂಲಕ ಕೂಡುಕುಟುಂಬ ಪದ್ಧತಿಯ ಪುನರುತ್ಥಾನವನ್ನು ಬಯಸಿದ್ದಾರೆ. ಕೂಡುಕುಟುಂಬದಿಂದಾಗುವ ಅನುಕೂಲಗಳನ್ನು ಕೆಲವು ಸೋದಾಹರಣೆಯೊಂದಿಗೆ ನೀಡುತ್ತಾ, ಕೂಡುಕುಟುಂಬದ ಪರಿಕಲ್ಪನೆಯ ಅರಿವಿಲ್ಲದವರಿಗೆ ಸೂಕ್ತ ಮಾರ್ಗದರ್ಶನ ನೀಡುವಂಥ ರೀತಿಯಲ್ಲಿ ಲೇಖನವಿದೆ.

ಹತಾಶೆ, ನಿರಾಶೆ, ದ್ವೇಷ, ಅಸೂಯೆ, ಮತ್ಸರ, ಸೋಮಾರಿತನ ಎಂಬುದು ಮನುಷ್ಯಕುಲದ ಉದ್ಧಾರಕ್ಕೆ ಇರುವ ಬಹುದೊಡ್ಡ ತಡೆಗೋಡೆಯಾಗಿದ್ದು, ಇವೆಲ್ಲವನ್ನು ಮೆಟ್ಟಿನಿಲ್ಲುವ ಮೂಲಕ ಸುಖ-ನೆಮ್ಮದಿ-ಶಾಂತಿ-ಸಮೃದ್ಧಿಯ ಆವಾಸಸ್ಥಾನವಾಗುಬೇಕು; ಈ ನಾಡು ಶೋಷಿತರ, ಬಡವರ, ನಿರ್ಗತಿಕರ ಪಾಲಿನ ಆಲದಮರವಾಗಬೇಕು ಎಂಬ ಸದಾಶಯವನ್ನು ಇಲ್ಲಿನ ಕೆಲ ಲೇಖನಗಳು ಸಂದೇಶನೀಡುತ್ತವೆ.

 (ಈ ಕೃತಿಯೊಳಗಿನ ಕೆಲ ಲೇಖನಗಳಲ್ಲಿ ಬಂಡಾಯ ಮನೋಭಾವ, ಕೆಟ್ಟದ್ದನ್ನು ಖಂಡಿಸುವ, ಒಳ್ಳೆಯದನ್ನು ಪ್ರಶಂಸಿಸುವ, ದಬ್ಬಾಳಿಕೆ-ದೌರ್ಜನ್ಯದ ವಿರುದ್ಧ ಕೆರಳುವ, ಅನ್ಯಾಯದ ವಿರುದ್ಧ ಸಿಡಿದೇಳುವ ಮನೋಭಾವನೆಗಳನ್ನು ಸಮರ್ಥವಾಗಿ ಬಳಸಿ ಕೊಳ್ಳಲಾಗಿದೆ. ಈ ಕೃತಿಯಲ್ಲಿನ ಲೇಖನಗಳಲ್ಲಿ ಸ್ಪಂದನೆ, ಕೋಪ, ಅಸಹನೆ, ವ್ಯಂಗ್ಯ, ಪ್ರತಿಕ್ರಿಯೆ, ಸೆಡವು, ವಿಕೃತಿಯ ಮನೋಭಾವನೆಗಳು ಯಥೇಚ್ಛವಾಗಿ ಗೋಚರಿಸುತ್ತವೆ.  ಇದು ಲೇಖಕಿಯ ಸೃಜನಶೀಲತೆಗೆ ಸಿಕ್ಕಿದ ಧನಾತ್ಮಕ ಅಂಶದ ಗರಿಯೇ ಹೌದು.)

 ದೇಶದ ಸಮಾಜದಲ್ಲಿ ಆಯಾಯ ಕಾಲದಲ್ಲಿ ಘಟಿಸಿದ, ಕೇಳಿದ ಸನ್ನಿವೇಶಗಳಿಗೆ ತತ್‌ಕ್ಷಣದಲ್ಲಿ ಲೇಖಕಿಯು ನೀಡಿದ ಪ್ರತಿಕ್ರಿಯೆ, ಸ್ಪಂದನೆಗಳ ಲೇಖನಗಳ ಗುಚ್ಛವೇ ಈ ಕೃತಿ ಎಂದರೆ ತಪ್ಪೇನಿಲ್ಲ. ಏಕೆಂದರೆ, ಇಲ್ಲಿನ ಎಲ್ಲಾ ಲೇಖನಗಳೂ ಪ್ರೇರಿತ ಲೇಖನಗಳೆ ಹೊರತು ತನ್ನಿಂತಾನೇ ಬರೆಸಿಕೊಂಡವುಗಳಲ್ಲ. ಈ ಮಾತಿಗೆ ಇಂಬುನೀಡುವ ಕೆಲವು ಉದಾಹರಣೆಗಳನ್ನು ನೀಡಬಹುದಾದರೆ, ಇಲ್ಲಿರುವ ಒಂದು ಲೇಖನಕ್ಕೂ ಮತ್ತೊಂದಕ್ಕೂ ಯಾವುದೇ ಚೌಕಟ್ಟು ಮತ್ತು ಸಂಬಂಧವಿಲ್ಲದಿರುವುದನ್ನು ನಾವು ಕಾಣಬಹುದು. ಇದು ಓತಪ್ರೋತವಾಗಿರುವ ಲೇಖನಗಳಿಂದ ಕೂಡಿರುವುದರಿಂದ ಸ್ಪಷ್ಟವಾಗುತ್ತದೆ. ಇದರಿಂದ ಓದಿದ ವಿಚಾರಗಳು ಓದುಗರಿಗೆ ಬಹುಕಾಲ ಕಾಡುವುದಿಲ್ಲ. ಇದು ಕೃತಿಯ ಮೌಲ್ಯವನ್ನು ಕೊಂಚ ಕಡಿಮೆ ಮಾಡಿ, ಕೇವಲ ಇದೊಂದು ದಿನಪತ್ರಿಕೆಯಂತೆ ಕಂಡರೂ ಸಾಕು.

ಆದರೆ, ಯಾವುದೇ ಒಂದು ಕೃತಿಯಲ್ಲಿ ಕೊಡುವಂತಹ ವಿಚಾರಗಳು, ಲೇಖನಗಳನ್ನು ನಿರ್ದಿಷ್ಟ ಮತ್ತು ಅನುಕ್ರಮದಲ್ಲಿ ನೀಡಿದರೆ ಓದುಗರು ಓದಲು, ಓದಿದ್ದನ್ನು ಮನನ ಮಾಡಿಕೊಳ್ಳುತ್ತಾ ಚಿಂತನೆಯ ಆಳ ಹೆಚ್ಚಲು ಸಹಾಯವಾಗುತ್ತದೆ. ಆದರಿಲ್ಲಿ ಲೇಖಕಿ ಈ ಕೆಲಸವನ್ನು ಮಾಡಿಲ್ಲ.(ಬಹುಶಃ ಲೇಖಕಿಯ ಮಾತಿನಲ್ಲೇ ಹೇಳುವುದಾದರೆ ಈ ಕೆಲಸವನ್ನು ಉದ್ದೇಶಪೂರ್ವಕವಾಗಿಯೇ ಮಾಡಿಲ್ಲ!) ಇದು ಕೃತಿಯ ಓದಿನ ಓಘಕ್ಕೆ ಧಕ್ಕೆ ತರುತ್ತದೆ. ಇಂತಹ ಕೆಲವು ಋಣಾತ್ಮಕ ಅಂಶಗಳನ್ನು ಹೊರತುಪಡಿಸಿ, "ಪ್ರಕೃತಿ ಮತ್ತು ಪ್ರೀತಿ" ಎಂಬ ಈ ಕೃತಿಯನ್ನು ಓದುಗರು ನಸ್ಸಂದೇಹವಾಗಿ ಕೈಗೆತ್ತಿಕೊಳ್ಳಬಹುದು. ಅ ಮೂಲಕ ಏಕಕಾಲದಲ್ಲಿಯೇ ವೈಚಾರಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಸವಿ ಸವಿಯಬಹುದು.

ಅಂತಿಮವಾಗಿ ಸ್ವತಃ ಲೇಖಕಿ ಡಾ.ಅನಸೂಯಾದೇವಿ ಅವರು, ಕೃತಿಯ "ಪೀಠಿಕೆ"ಯಲ್ಲಿ ಬರೆದುಕೊಂಡಂತೆ, "ಈ ಕೃತಿಯಲ್ಲಿರುವ ಬರಹಗಳು  ಪ್ರಕೃತಿಯ ವರ್ಣನೆಯೂ ಅಲ್ಲ; ಪ್ರೀತಿಯ ಬಗೆಗಿನ ಭಾವನತ್ಮಕವೂ ಮತ್ತು ಆದರ್ಶಾತ್ಮಕವಾದ ಅನಿಸಿಕೆಗಳೂ ಅಲ್ಲ….!" ಎಂಬ ಈ ಮಾತು ಕೃತಿಯನ್ನು ಓದಿದವರಿಗೆ ಸರಿಯೆನಿಸದಿರದು!

ಇನ್ನು"ಪ್ರಕೃತಿ ಮತ್ತು ಪ್ರೀತಿ" ಕೃತಿಯನ್ನು ದೇಸಿ ಪುಸ್ತಕ ಸಂಸ್ಥೆ ಪ್ರಕಟಿಸಿದೆ. ಕಲಾವಿದ ಸುಧಾಕರ ದರ್ಬೆ ಅವರ ಅಕರ್ಷಕ ಚಿತ್ರಕಲೆಯು, ಪುಸ್ತಕ ನೋಡಿದೊಡನೆಯೆ ಕೈಗೆತ್ತಿಕೊಳ್ಳುವಂತೆ ಮಾಡಿದೆ. ಲೇಖಕಿ ತಾವು ಓದಿದ ಮಂಗಳೂರು ವಿಶ್ವವಿದ್ಯಾಲಯದ ತಮ್ಮ ಕನ್ನಡ ಉಪನ್ಯಾಸಕರಿಗೆ (೧೯೮೪-೮೬ರ ಅವಧಿ) ಅರ್ಪಣೆ ಮಾಡುವ ಮೂಲಕ ಕಲಿಸಿದ ಗುರುಗಳನ್ನು ಸ್ಮರಿಸಿದ್ದಾರೆ.

  -ಹನಿಯೂರು ಚಂದ್ರೇಗೌಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

 ಪುಸ್ತಕದ ಪರಿಚಯ ಚೆನ್ನಾಗಿ, ವಿಸ್ತಾರವಾಗಿ ಮಾಡಿದ್ದೀರಿ.

Haniyuru cgowda
10 years ago

ಧನ್ಯವಾದಗಳು, ಶೆಟ್ರೆ.

2
0
Would love your thoughts, please comment.x
()
x