ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ಸ್ತ್ರಿ ಶೋಷಣೆಯ ವಿರುದ್ಧ ಕಹಳೆ: ನಾಗರೇಖಾ ಗಾಂವಕರ

nagarekha

ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವೈವಸ್ಥೆಯಲ್ಲಿ  ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿತ ಸಾಹಿತ್ಯದಲ್ಲಿಯೂ ಸ್ತ್ರೀ ಪಾತ್ರಗಳು ಉನ್ನತ ಮೌಲ್ಯಗಳ ಪ್ರತಿಬಿಂಬಿಸುವ ಪಾತ್ರಗಳಾಗಿ ತನ್ನ ತ್ಯಾಗದಿಂದ ಇತರರ ಉದ್ದರಿಸುವ ಅಪರೂಪದ ದೇವತಾ ಸ್ವರೂಪದ ಪ್ರತಿಮೆಗಳಾಗಿ ಮೂಡಿಬರುತ್ತಲೇ ಇವೆ. ಪ್ರಾಚೀನ ಪರಂಪರೆಯಲ್ಲಿ  ಹೆಣ್ಣನ್ನು ದೇವತೆಯಾಗಿಸಿ, ಶಕ್ತಿಯ ಪ್ರತೀಕವಾಗಿಸಿ ಚಿತ್ರಿಸಿದ ಹತ್ತು ಹಲವು ಪಾತ್ರಗಳೂ ಇವೆ. ತನ್ನ ಸಹನೆಗೆ, ಹೆಸರಾದ ಹೆಣ್ಣು  ಆತ್ಮಾಭಿಮಾನಕ್ಕೆ ಕುಂದು ಬಂದೆರಗಿದಾಗ ಆಕೆಯ ಪ್ರತಿಭಟನೆಯ ದಾರಿಗಳು ಹಲವು ರೀತಿಗಳಲ್ಲಿ ವ್ಯಕ್ತವಾಗಿವೆ. ಅಂತಹ ಅನೇಕ ಪಾತ್ರಗಳು ಪುರುಷ ವಿರಚಿತ ಸಾಹಿತ್ಯದ ಮೇರು ಪಾತ್ರಗಳು ಎಂಬುದನ್ನು ಅಲ್ಲಗಳಿಯುವಂತಿಲ್ಲ.

ಮರ್ಯಾದಾ ಪುರುಷೋತ್ತಮನಾದ ರಾಮನನ್ನು ಆತನ ಪ್ರಜಾ ಪ್ರೇಮವನ್ನು ಅವನ ಶ್ರೇಷ್ಟತೆಯನ್ನು ಹಾಡಿಹೊಗಳಲು ರಾಮಾಯಣದಲ್ಲಿ ಸೀತಾದೇವಿಗೆ ಆಕೆಯದಲ್ಲದ ತಪ್ಪಿಗೆ ಕಾಡಿನ ವಾಸ. ಮುಂದೆ ಅಗ್ನಿ ಪರೀಕ್ಷೆಯಲ್ಲಿ ಪಾರಾಗಿ ಬಂದ ಆಕೆ ರಾಮನನ್ನು ಸೇವಿಸದೇ ತನ್ನ ತಾಯೊಡಲ ಪ್ರವೇಶಿಸುವ ಮೂಲಕ ಸ್ತ್ರೀತ್ವದ ಸಮೀಕರಣವನ್ನು ಎತ್ತಿ ಹಿಡಿದು ಮಹಿಳಾ ದೌರ್ಜನ್ಯ ಅನ್ಯಾಯದ ವಿರುದ್ಧ  ದನಿಯಾಗಿ ಕಂಡು ಬರುತ್ತಾಳೆ.

ದ್ರೌಪದಿ ಕೂಡಾ ಅಜ್ಷಾತವಾಸದಲ್ಲಿ  ತನ್ನನ್ನು ಕಾಡುವ ಕೀಚಕನ ಕೈಯಿಂದ ಬಿಡುಗಡೆಯ ಬಯಸಿದಾಗ ಐವರು ಗಂಡಂದಿರ ಆ ಪತಿವ್ರತೆ ಕೂಡಾ “ಇನ್ನು ಹುಟ್ಟದೇ ಇರಲಿ ನಾರಿ ಎನ್ನವೊಲ್” ಎಂದು ಹಲಬುವಂತಾಗುತ್ತದೆ. ಆದರೆ ಜಾಣ್ಮೆ ಮತ್ತು ಬುದ್ಧಿವಂತಿಕೆಗಳ ಸಾಂದ್ರವಾಗಿ ಬಳಸುವ ದ್ರೌಪದಿ ಮುಂದೆ ಜಾಣತನದಿಂದ ಅಣ್ಣನ ಆಜ್ಞೆಯ ಮೀರದ ಭೀಮ ಅದನ್ನು ಮೀರುವಂತೆ ಮನವೊಲಿಸುತ್ತಾಳಾದರೂ ಒಳಗೊಳಗೆ ರಾಜಧರ್ಮದ ನೆಪದಲ್ಲಿ ಪತಿ ಧರ್ಮವನ್ನು ಗಾಳಿಗೆ ತೂರಿದ ಪತಿಗಳ ವಿರುದ್ದವೂ ಸಿಡಿದೇಳುತ್ತಾಳೆ.

ಇದು ಬರೀಯ ಭಾರತೀಯ ಸ್ತ್ರಿ ಪಾತ್ರಗಳಿಗೆ ಮಾತ್ರ ಮೀಸಲಾಗಿಲ್ಲ. ಗ್ರೀಕ್ ದಂತಕಥೆಗಳಲ್ಲಿ ಬರುವ “ಮೆಡಿಯಾ” ಅಂತಹುದೇ ಒಂದು ಸ್ತ್ರೀ ಬಂಡಾಯದ ಕಹಳೆ ಮೊಳಗಿಸಿದ  ಪಾತ್ರ. ಏಸಿಯಾ ಮೂಲದ  ಆಕೆ ಸೂರ್ಯವಂಶಸ್ಥನಾದ ರಾಜ ಹಿಲಿಯೋಸ್‍ನ ಮೊಮ್ಮಗಳು. ಗ್ರೀಸ್ ಯುವಕ   ಜೇಸನ್‍ನ ಪ್ರೇಮದಲ್ಲಿ ಬೀಳುವ ಆಕೆ ಆತನಿಗಾಗಿ ತನ್ನ ತಂದೆ ತಾಯಿ ತಾಯ್ನಾಡನ್ನು ಬಿಟ್ಟು ಅವನೊಂದಿಗೆ ಗ್ರೀಸನ ಕೋರಿಯಂಥಗೆ ಬರುತ್ತಾಳೆ. ಆತನ ಕುಡಿಗಳ ಹೊತ್ತು ಒಬ್ಬ ತಾಯಿಯಾಗಿ ಪತ್ನಿಯಾಗಿ ತನ್ನ ಹೆಣ್ತನದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ  ಆದರ್ಶ ಹೆಣ್ಣು. ಆದರೆ ವಿಧಿಯ ಆಟ. ಪತಿಯಾದ  ಜೇಸನ್  ಆಕೆಯ ನಂಬಿಕೆಗೆ ಪ್ರೀತಿಗೆ ಮೋಸ ಮಾಡುತ್ತಾನೆ. ಚಾಣಾಕ್ಷೆಯಾದ ಆಕೆ ಮಾಂತ್ರಿಕ ಶಕ್ತಿಯನ್ನು ಹೊಂದಿದವಳು. ಈಗ ಜೆಸನ್ ರಾಜ್ಯ ಸಂಪತ್ತಿನ ಆಶೆಗೆ ಕೋರಿಯಂಥನ  ರಾಜ ಕ್ರೆಯೊನ್‍ನ ಮಗಳನ್ನು ಮದುವೆಯಾಗಲು ಉದ್ದೇಶಿಸಿದ್ದಾನೆ. ಮೇಡಿಯಾಳನ್ನು ತುಚ್ಛವಾಗಿ ನಿಕೃಷ್ಟವಾಗಿ ಹೀಯಾಳಿಸುತ್ತಾನೆ. ಜೊತೆಗೆ ಆಕೆಯ ಮಾಂತ್ರಕ ಶಕ್ತಿಗೆ ಬೆದರಿದ  ರಾಜ ಕ್ರೆಯೊನ್ ಕೂಡ ಆಕೆಗೆ ಕೋರಿಯಂಥ ಬಿಡುವಂತೆ ಹೇಳುತ್ತಾನೆ.

ಅನ್ಯ ಮಾರ್ಗವಿಲ್ಲದ ಅಸಹಾಯಕಳಾಗಿ ಬಳಲುವ ಅವಳು ಸೇಡಿನ ಜ್ವಾಲೆಯಲ್ಲಿ ಉರಿಯುವ ಕೆಂಡವಾದರೂ ಧೃತಿಗೆಡುವುದಿಲ್ಲ. ಕಠಿಣ ಹೃದಯಿಯಾಗುತ್ತಾಳೆ. ಆದರೆ ಸೇಡನ್ನು ತೋರ್ಪಡಿಸದೇ ಜಾಣ್ಮೆಯಿಂದ ತಾನು ದಡ್ಡಳೆಂದು  ಜೇಸನ್ ಆತನ ಮಗಳನ್ನು ಮದುವೆಯಾಗುವುದೇ ನ್ಯಾಯವೆಂದು ರಾಜನ ಓಲೈಸಿ ನಾಡು ತ್ಯಜಿಸಲು ಒಂದು ದಿನದ ಹೆಚ್ಚಿನ ಕಾಲಾವಕಾಶ ಕೇಳುತ್ತಾಳೆ. ಈ ಮಧ್ಯೆ ಜೇಸನ್‍ನ ಕರೆದು ಮದುಮಗಳಿಗೆ ಹೊಸ ಉಡುಪನ್ನು ಕಾಣಿಕೆಯಾಗಿ ನೀಡಲು ಅನುಮತಿ ಪಡೆಯುತ್ತಾಳೆ. ತನ್ನ ಮಕ್ಕಳ ಕೈಯಿಂದಲೇ ವಿಷಲೇಪಿತ  ಹೊಸ  ಕಿರೀಟ ಮತ್ತು ಉಡುಪೊಂದನ್ನು ನೀಡುತ್ತಾಳೆ. ಉಡುಪು ಧರಿಸಿದ ಯುವರಾಣಿ ಮರುಕ್ಷಣವೇ ಮಡಿಯುತ್ತಾಳೆ. ಅವಳನ್ನು ಆವೇಶದ ಭರದಲ್ಲಿ ಅಪ್ಪಿದ ತಂದೆ ರಾಜ ಕ್ರೆಯೊನ್ ಕೂಡ ವಿಷಪ್ರಾಶನವಾಗಿ ಅಲ್ಲಿಯೇ ಸಾಯುತ್ತಾನೆ ಇಷ್ಟಾದರೂ ಆಕೆಯ ಸೇಡು ತೀರುವುದಿಲ್ಲ.  ಜೇಸನ್‍ಗೆ ಮುಂದಾವ ವಂಶೋದ್ಧಾರಕನೂ ಇರಬಾರದೆಂದು ತನ್ನ ಸ್ವಂತ ಮಕ್ಕಳನ್ನೆ ಕೊಲ್ಲುತ್ತಾಳೆ.  ಆಕೆಯ ಮಾತೃಹೃದಯದ ಹಳಹಳಿಸುತ್ತದೆ. ಆದಾಗ್ಯೂ ಪ್ರತಿಕಾರದ ದಳ್ಳುರಿಗೆ ಅರ್ಧಬೆಂದ ಆಕೆ ಅದರಲ್ಲಿಯೇ ಧಹಿಸಿಕೊಳ್ಳಲು ಬಯಸುತ್ತಾಳೆ. ಆತನ ಪ್ರೀತಿಪಾತ್ರರನ್ನು ಮೋಸದಿಂದ ಕೊಂದು ಆತನನ್ನು ಏಕಾಂಗಿಯನ್ನಾಗಿಸುತ್ತಾಳೆ.

ತನ್ನವರನ್ನೆಲ್ಲಾ ತೊರೆದು ಬಂದ ತನ್ನನ್ನು ಏಕಾಂಗಿಯನ್ನಾಗಿಸಿದ ಆತನ ಮೇಲಿನ ದ್ವೇಷವೇ ಇದಕ್ಕೆಲ್ಲಾ ಕಾರಣ. ಕೊನೆಯಲ್ಲಿ ಆತನ ಮಕ್ಕಳ ದೇಹವನ್ನು ಆತನಿಗೆ ನೀಡದೆ ತನ್ನ ತಾಯ್ನಾಡಿಗೆ ಕೊಂಡೊಯ್ಯುವ ಆಕೆ ತನ್ನನ್ನು ಎಂದಿಗೂ ಒಪ್ಪದ ನಾಡಿನಲ್ಲಿ ತನ್ನ ಮಕ್ಕಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ.

ಜೇಸನ್‍ನನ್ನು ಪ್ರೀತಿಸಿ ಆತನಿಗಾಗಿ ತನ್ನವರನ್ನು ಕೊಂದು, ತ್ಯಜಿಸಿ ಬಂದ ಆಕೆ, ಆತನ ಮೇಲಿನ ಸೇಡಿಗಾಗಿ ಕುಡಿಗಳನ್ನೆ ನಾಶಮಾಡುವುದು ಒಂದರ್ಥದಲ್ಲಿ ಆಕೆಯ ದುರಂತ ಬದುಕನ್ನು ಬಿಂಬಿಸುತ್ತದೆ. ತನ್ನನ್ನು ತ್ಯಜಿಸಿ ಅವಮಾನಿಸಿದ ಪುರುಷನ ವಿರುದ್ದ ಆಕೆಯ ಹೋರಾಟ ಸ್ತ್ರೀ ಬಂಡಾಯದ ಕಹಳೆ ಊದುತ್ತದೆ, ಅದು ಕೂಡಾ ಕ್ರೀಸ್ತಪೂರ್ವದಲ್ಲಿಯೇ. ಮೇಡಿಯಾಳ ಯೋಜನೆಗಳು ಪುರುಷ ಸಾಮ್ರಾಜ್ಯದ ವಿರುದ್ಧ ಯುದ್ಧವೆಂದೆ ಹೇಳಬಹುದು. ನಾಟಕದ ಉದ್ದಕ್ಕೂ ಮೆಡಿಯಾ ನಾಯಕಿಯಾಗಿ ಮಿಂಚುತ್ತಾಳೆ. ಸದಾ ಸ್ತ್ರೀಯರ ಶೀಲದ ಕುರಿತು ನಂಬಿಕೆಯ ಕುರಿತು ಮೋಸದ ಕುರಿತು ಮಾತನಾಡುವ ಗಂಡಿನ ದಬ್ಬಾಳಿಕೆಯನ್ನು ಅದನ್ನು ಮೆಟ್ಟಿ ನಾಶಗೈಯುವ ಹೆಣ್ಣಾಗಿ  ಮೇಡಿಯಾ ವಿಜೃಂಬಿಸುತ್ತಾಳೆ. ಕಾಲಾತೀತವಾದ ಹೆಣ್ಣಿನ ವ್ಯಕ್ತಿತ್ವಕ್ಕೆ  ಮಾದರಿಯೂ ಆಗುತ್ತಾಳೆ. ಗ್ರೀಕ ನಾಟಕಕಾರ ಯೂರಿಪಿಡಿಸ್‍ನ “ಮಿಡಿಯಾ” ನಾಟಕದ ಪ್ರಮುಖ ಪಾತ್ರವೂ ಅವಳೇ.

ಬಹುತೇಕ ಜಗತ್ತಿನ ಸಾಮಾಜಿಕ ಬಲೆಯ ರೂಪುರೇಷೆಗಳು ಹೇಗಿವೆಯೆಂದರೆ ಆಕೆಗೆ ಪುರುಷನೇ ದಿಕ್ಕು, ಆತನ ಹೊರತಾಗಿ ಆಕೆ ಅಪೂರ್ಣ ಕಲೆ. ಆಕೆಯ ಏಕಾಂಗಿ ಆಕಾಂಕ್ಷೆಗಳಿಗೆ ಬಣ್ಣ ಬರುವುದೇ ಪುರುಷನೆಂಬಾತ ಆಕೆಯ ಬದುಕಿಗೆ  ಬಂದ ಮೇಲೆ ಇತ್ಯಾದಿ. ಆಕೆಯ ಮೃದು ದೋರಣೆಯನ್ನು ತನ್ನ ಸ್ವಹಿತಕ್ಕಾಗಿ ಉದಾತ್ತೀಕರಿಸಿ ಆಕೆಯ ನೈಜ ಸಾಮಥ್ರ್ಯಹರಣಗೈಯುವ ಮೂಲಭೂತವಾದಿ ವಿಚಾರದ ಪ್ರತಿಪಾದನೆ ಸಲ್ಲ. ಹೆಣ್ಣು ಸ್ವಭಾವತಃ ಪುರುಷನಿಗೆ ಭಿನ್ನ ವ್ಯಕ್ತಿತ್ವವನ್ನು ಹೊಂದಿದವಳು. ನಿಜಕ್ಕೂ ಆಕೆ ಕರುಣಾಮಯಿ, ಸಹನ ಶೀಲೆ, ಉದಾರಿ, ವಿನಮ್ರೆ, ಇತ್ಯಾದಿ. ಈ ಗುಣಗಳ ಸ್ತ್ರೀಗೆ ಸಮೀಕರಿಸಿ ಇವೆಲ್ಲವೂಗಳನ್ನು ಸಾಮಾಜೀಕರಣದ ತೊಟ್ಟಿಲ ಕಟ್ಟುವಾಗಲೇ ಪ್ರಕೃತಿಯಲ್ಲಿ ಸ್ತ್ರೀಗಿಂತ ಬಲಿಷ್ಟದೇಹಿ ಪುರುಷ ತನ್ನ ಚಾಣಾಕ್ಷತನ ತೋರಿದ್ದು, ಅಂತಹ ವೈವಸ್ಥೆಯನ್ನು ಸ್ವತಃ ಸ್ತ್ರೀ ಸುಲಭವಾಗಿ ಮನಸೋ ಬಯಸಿ ಸ್ವೀಕರಿಸಿ ಆನಂದಿಸುವಂತೆ ಅಲ್ಲಿಯ ಅಸಮಾನತೆಯನ್ನು ತಾನು ಹೆಣ್ಣು  ಎಂಬ ಕಾರಣಕ್ಕೆ ಒಪ್ಪಿಕೊಂಡು ಪುರುಷನ ತಾರತಮ್ಯದ ವಿರುದ್ಧ ಸೆಣಸದಿರುವ ಮನೋಭೂಮಿಕೆಯನ್ನು ‘ನೈತಿಕತೆ’ ಎಂಬ ಸೂಕ್ಷ್ಮ ಹೆಸರಿನೊಂದಿಗೆ ತಳಕುಹಾಕಿ ಆಕೆಯ ಧಿಃಶಕ್ತಿಯ ಕುಂಠಿತಗೊಳಿಸಿ ಮೆಚ್ಚಿಕೊಂಡಿರುವುದು ಒಂದು ವ್ಯೂಹವೇ ಹೊರತು ಬೇರೇನೂ ಅಲ್ಲ. ಆದರೆ ಆಕೆ ಸಹನಶೀಲೆ, ಬದಲಾವಣೆಗೆ ನಿರುಕಿಸುತ್ತಾಳೆ. ತನ್ನದಲ್ಲದ ತಪ್ಪಿಗೆ ತನ್ನ ಮುಳುಗಿಸುವ ಧ್ಯೇಯ ಹೊಂದಿದ ಪುರುಷ ಸತ್ಪಾತ್ರನನ್ನು ಆಕೆ ಬಿಡಲಾರಳು ಎಂಬುದಕ್ಕೆ ಜಗತ್ತಿನ ಮಹಾಕಾವ್ಯಗಳಲ್ಲಿ ದಂತ ಕಥೆಗಳಲ್ಲಿ ಒಡಮೂಡಿದ ಈ ಪಾತ್ರಗಳೇ ಸಾಕ್ಷಿ. ಸ್ತ್ರೀ ಸ್ವಯಂ ಸಬಲೆ, ದಿಟ್ಟೆ, ಸಂದರ್ಭ ಬಂದರೆ ಆಕೆ ಗಂಡಿಗೂ ಮೀರಿದ ಆತ್ಮಬಲ, ಧಿಃಶಕ್ತಿಗೆ ದ್ಯೋತಕವಾಗುತ್ತಾಲೆ. ಆದಾಗ್ಯೂ ಸ್ತ್ರೀ ಪುರುಷ ಬಂಧಗಳು ಅನಿವಾರ್ಯ. ಅದು ಪ್ರಕೃತಿ ನಿಯಮ. ಅದರೆ ಅದು “ಸಮಪಾಲು ಸಮಬಾಳು” ಬಂಧದೊಂದಿಗೆ ಬೆರೆತಿರಲಿ ಎಂಬ ಸದ್ವಿಚಾರ ಇಂದಿನ ಮಹಿಳಾ ಲೋಕದ ಆಪೇಕ್ಷೆ ಅಷ್ಟೇ!.

– ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x