“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

sidduyadav
 
ಪ್ರೀತಿಯ ಒಲವಿನ ಪ್ರಿಯಲತೆಯೇ..,
 
“ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ ಆ ಸಮಯದ ಪಯಣ. ಎಲ್ಲಿಗೆಂದು ನನಗೂ ತಿಳಿದಿರಲಿಲ್ಲ ನಿನಗೂ ತಿಳಿದಿರಲಿಲ್ಲ. ಆದರೂ ಸಾಗುತ್ತಿತ್ತು ಪಯಣ. ಬಾಂಗಳದಲ್ಲಿ ಚುಕ್ಕಿ ಚಂದ್ರಮರು ಬೆಳಕು ಚಲ್ಲುತ್ತಿದ್ದರು. ತಂಗಾಳಿ ಮೈ ಸೋಕಿಸಿ ಸಾಗುತ್ತಲಿತ್ತು. ಚುಮುಚುಮು ಚಳಿ ಮೈ ಕಚ್ಚಲು ಆರಂಭಿಸಿತ್ತು. ಮೆಲ್ಲನೆ ನೀ ತೋಳನ್ನಿಡಿದು ಮೃದು ಪಾದಗಳನ್ನು ಭೂ ಒಡಲ ಮೇಲೆ ಸೋಕಿಸುತ್ತಿದ್ದೆ. ವಸುಂಧರೆಯೇ ಪುಳಕಿತಗೊಳ್ಳುತ್ತಿದ್ದಳು. ಹಾಲ್ಗಡಲ ಮೇಲೆ ಹಂಸ ತೇಲಿ ಬಂದಂತೆ ಹಾಗೊಮ್ಮೆ ಹೀಗೋಮ್ಮೆ ವೀಣೆ ಫಲುಕುವಂತೆ ನಿನ್ನ ಮಧುರ ಸ್ವರದಲಿ ಹೊಮ್ಮುತಿದ್ದ ಒಂದೊಂದೆ ಮಾತುಗಳೂ ಆಕಾಶದಂಗಳದಲಿ ಸಾಗುತಿದ್ದ ಗಂಧರ್ವರನ್ನ ತನ್ನೆಡೆಗೆ ಸೆಳೆಯುವಂತಿತ್ತು. ಸಪ್ತಸ್ವರಗಳೆ ಝೇಂಕರಿಸುತ್ತಿದ್ದವು. ಸಾವಿರ ನದಿಗಳು ತುಂಬಿ ಹರಿದು ಕಡಲ ಸೇರುವಂತೆ ಆ ಧ್ವನಿ ನನ್ನೆದೆಗೆ ತಾಕುವಾಗ ಸಾಗರವೇ ಧುಮ್ಮಿಕ್ಕುತ್ತಿತ್ತು.
 
“ಎನ್ನೆದೆ ಕಣಿವೆಯಲಿ ಸಾಗರ ಧುಮ್ಮಿಕ್ಕಿದೆ
ಅಲ್ಲೆಲ್ಲೊ ಕಡಲು ಕೌತುಕದಿ ಕಾಯುತಿದೆ
ನಲ್ಲೆ ನಿನ್ನ ಮಧುರ ಸ್ವರದ ಅಭ್ಯುಂಜನದಲಿ
ಮಿಂದೆದ್ದ ವಸುಂಧರೆ ಪುಳಕಿತಗೊಂಡಿಹಳು
ಈ ಹೃದಯದ ಮಹಲಿನಲಿ ನಿನ್ನ ನಗುವು
ತೂಗುಯ್ಯಾಲೆಯ ಕಟ್ಟಿ ಜೀಕುತ್ತಿದೆಯಲ್ಲೆ”
 
ನಾವು ಪರಿಯಚಯವಾಗಿ ಕೆಲವೆ ತಿಂಗಳುಗಳು ಸಂಧಿಸಿವೆ ಅಷ್ಟೇ, ಅದೆಷ್ಟು ಆತ್ಮೀಯತೆ, ನಂಬಿಕೆ ನಮ್ಮಿಬ್ಬರ ಮಧ್ಯೆ ಬೆಳೆದು ನಿಂತಿದೆ ನೋಡು. ಯೌವ್ವನದ ಹೊಸ್ತಿಲಿನಲ್ಲಿ ನಿಂತು ಇಷ್ಟೊಂದು ತಾಳ್ಮೆಯ ತಳಹದಿಯ ಮೇಲೆ ನಮ್ಮಿಬ್ಬರ ಪ್ರೇಮ ಸೌಧವನ್ನು ಕಟ್ಟಿದ ಕಸುವು ನಿನ್ನದಲ್ಲೆವೇ ನಲ್ಲೆ. ದೀನ ಪ್ರೇಮಿಸುವ ಹೃದಯಗಳಿಗೆ ವಿರಹವೆಂದರೆ ಅನುಕ್ಷಣವು ನಲ್ಲೆಯದೆ ಆರಾಧನೆಯೇ, ಆದರೆ ನಮ್ಮಿಬ್ಬರ ಪ್ರೀತಿಯಲಿ ಬೇರೆಯದೆ ದಿಕ್ಕು, ಕನಸುಗಳು ಮೈಗೂಡಿವೆ. ನೀಜ ಪ್ರೀತಿಯೆಂದರೆ ನಂಬಿಕೆಯೇ ಹೊರತು ಮತ್ತೇನು ಅಲ್ಲ. ನಾನು ನೀನು ಎನ್ನುವ ಪದಗಳಿರದೆ, ನಾನು ನೀನಾಗಿ ಬದುಕಿಬಿಡುವ ಬದುಕಿನ ಮಿಲನವದು. ನೀನು ಬಂದು ‘ನಿನ್ನ ಪ್ರೀತಿಸುವೆನೆಂದು’ ಹೇಳಿದಾಗ ನನಗೆ ‘ನಾನು ನಿನ್ನ ನಂಬುತ್ತಿದ್ದೇನೆ’ ಎಂದು ನೀನೆ ಹೇಳಿದಂತೆ ಕಿವಿಗಳಿಗೆ ಚುಂಬಿಸುತ್ತಿತ್ತು. ಹೌದಲ್ಲವೆ ಪ್ರೀತಿಸುವೆನೆಂದರೆ ನಾನು ನಿನ್ನ ಸಂಪೂರ್ಣವಾಗಿ ನಂಬುತ್ತೇನೆ ಎಂದಲ್ಲವೇ. ಆಂತಹ ನಂಬಿಕೆ ಪ್ರೀತಿಸುವ ಪ್ರತಿ ಪ್ರೇಮಿಗಳಿಗೆ ಬಂದುಬಿಟ್ಟರೆ ಜಗತ್ತಿನಲ್ಲಿ ಪ್ರೇಮಿಗಳೀಗೆ ಸಾವೆ ಇರುವುದಿಲ್ಲ. ಪ್ರೀತಿಗೆಂದು ಸೋಲೆ ಇರುವುದಿಲ್ಲ. ದೂರದೂರಿನಿಂದ ಓದಲೆಂದು ಬಂದ ನಾವು ಇಂದು ಒಂದೆ ಮನೆಯವರು ಎನ್ನುವಂತೆ ಸದಾ ಜೊತೆಯಲ್ಲೆ ಬದುಕುತಿದ್ದೇವೆ. ಹಾಗೆ ಸಾಗುತ್ತಿತ್ತು ನಮ್ಮ ಪಯಣ. ನನಗೆ ಮಿರ್ಜಾ ಗಾಲಿಬ್ ನ ಗಜ್ಹಲ್ ಸಣ್ಣಗೆ ತೇಲುತ್ತಲಿತ್ತು. ಪಾಪ ಅವನೆಷ್ಟು ದುರಾದೃಷ್ಟನಲ್ಲವೇ ಸಖಿ. ಮಡದಿ, ಮಕ್ಕಳನ್ನು ಕಳೆದುಕೊಂಡು ನೋವಿನ ಗುಡಿಸಲಲಿ ಪ್ರೀತಿಸಿದವಳ ನೆನಪಿನಲ್ಲೆ ಷರಾಬನ್ನೆ ಬದುಕಾಗಿಸಿಕೊಂಡು ಬದುಕಿಬಿಟ್ಟ ಆತ ಭಾಗ್ಯದಾತ. ನನಗೆ ಇಂತವೇ ಯೋಚನೆಗಳು. ನಮ್ಮಿಬ್ಬರ ಮಧ್ಯೆ ಇಂತಹ ಅದೆಷ್ಟೋ ಪ್ರೇಮ ಪತ್ರಗಳು ಸರಿದಾಡಿವೆ. ನಿನ್ನೆದೆಯ ಮೆದುವಿನಲಿ ತೋಯ್ದು ಮುದ್ದೆಯಾದ ನನ್ನ ಬರಹಗಳಿಗೆ ಚುಂಬನದಲ್ಲೆ ಸ್ಪೂರ್ತಿ ತುಂಬುವ ನಿನ್ನ ಮಾಧುರ್ಯಕೆ ಅದೆಷ್ಟು ನಮನಗಳು ಸಾಲದು ನಲ್ಲೆ.
 
ಅರಿತವರ ನಡೆವೇ ಬದುಕಬಲ್ಲದೆ ಪ್ರೀತಿ
ಕಾಮದ ಮಧವೇರಿದೊಡೆ ಅಸುನಿಗುವುದಲ್ಲೆ
ಒಲವಿನ ನದಿಯಲಿ ತೇಲಬೇಕು ಹಾಯಿದೋಣಿ
ನಂಬಿಕೆಯ ಹುಟ್ಟನ್ನಾಕಿ ಸಾಗಬೇಕು ಇಲ್ಲಿ ನಾವು…,
 
ನನ್ನಡೆಗೆ ಪಿಸುಗುಟ್ಟಿದವಳ ಧ್ವನಿಯಲ್ಲಿ ಜಲಪಾತದ ಧುಮುಕಿಗೆ ತೊಯ್ದ ಬಂಡೆಯ ಧನ್ಯತೆ. ಅದೆಷ್ಟು ಮಧುರ ನಲ್ಲೆ ನಿನ್ನ ಧ್ವನಿ ಏನು ಮಾತನಾಡದಿದ್ದರು ನೀ ‘ಮತ್ತೆ’ ಎಂದ ಆ ಸ್ವರ ಕೇಳಿ ನಡೆಯುವ ದಾರಿಯ ಪಕ್ಕದ ಬೇಲಿಯಲಿ ಹೂಗಳು ನಗುತಲೆ ಅರಳುತಿದ್ದವು. ಮರುಕ್ಷಣವೆ ಸುಗಂಧವನ್ನೆ ಚಿಮ್ಮಿ ನಮ್ಮೆಡೆಗೆ ಧುಮುಕುವಾಗ ನನಗಾಶ್ಚರ್ಯ! ಅಷ್ಟು ಸಮಯದಿಂದ ದೂರದಿಂದಲೆ ಸುಮ್ಮನೆ ಸಾಗಿದ ನಾನು ಮಾತುಗಳಿರದೆ ಮೌನದಲ್ಲೆ ಮನ-ಮನಸುಗಳ ನಡುವೆ ಸಂಭಾಷಣೆ ನಡೆದುಬಿಟ್ಟಿತ್ತು.  ಮೂಲೆಯಲಿ ದೂಳು ತುಂಬಿದ್ದ ವೀಣೆಯನ್ನು ಹೊರ ತಂದು ಹೊರೆಸಿಟ್ಟಂತ ಪ್ರೀತಿ ನಿನ್ನದು. ಪುಟ್ಟದೊಂದು ಕಲ್ಲು ತಾಗಿದರು ಜೀವ ಝಲ್ಲೆಂದು ಹೋದಿತು ನನ್ನದು. ಅದೆಷ್ಟು ನಾಜೂಕು ಆ ನಿನ್ನ ನಡಿಗೆಯಲ್ಲಿ, ತೋಳಬಿಗಿತದಲ್ಲಿ ತಲೆಯನ್ನೂರಿ ಸುಮ್ಮನೆ ಸಾಗುತ್ತಿದ್ದೆವು. ಹಾಸ್ಟಲ್ ಬಿಟ್ಟು ಅದೆಷ್ಟು ದೂರ ಬಂದಿದ್ದೆವೋ ತಿಳಿಯದಂತಾಗಿತ್ತು. ನೈಟ್ ಬೀಟ್ ನ ಪೊಲೀಸ್ ತಡದಾಗಲೆ ಈ ಜಗತ್ತಿನ ಕರಾಳ ರಾತ್ರಿಗೆ ನಾನು ಹಿಂತಿರುಗಿದ್ದು. ಒಮ್ಮೆ ಬಯದಲಿ ನೀ ತೋಳು ಬಿಗಿ ಹಿಡಿದು ನಿಂತಾಗಲೆ ಆ ಪೊಲಿಸ್ ನಸು ನಕ್ಕು, ‘ಸಮಯವಾಗಿದೆ ಹಿಂತಿರುಗಿ’ ಎಂದು ಸುಮ್ಮನೆ ಯಾವ ತಕರಾರು ಮಾಡದೆ ಅದೇಷ್ಟು ಸಲಿಸಾಗಿ ನಮ್ಮನ್ನು ಮತ್ತೆ ಹಿಂದಿರುಗಿಸಿದನಲ್ಲವೇ? ಹಿಂತಿರುಗಿ ನೋಡಿದರೆ ದೂರದಲ್ಲೆಲ್ಲೊ ಮಿನುಗು ದೀಪಗಳೂ ಬಾನಂಗಳತ ತಾರೆಗಳಷ್ಟೆ ನಗುವ ಚೆಲ್ಲಿ ನಮ್ಮನ್ನೆ ನೋಡುತ್ತಿದ್ದವು. ಒಂದು ಜಾವದ ಪಯಣಕ್ಕೆ ಆ ಪೊಲಿಸ್ ಅಡ್ಡ ಬರದಿದ್ದರೆ ಸೂರ್ಯೋದಯವನ್ನು ಅದೆಲ್ಲಿ ನೋಡುತ್ತಿದ್ದೆನೊ ನಾನು. ಮತ್ತೊಂದು ಜಾವದ ಪಯಣಕ್ಕೆ ಮನಸು ಸಿದ್ದಗೊಳ್ಳುವಾಗಲೆ ಮನಸು ಬದುಕಿನ ಕಡೆ ಚಿತ್ತವರಿಸಿ ನಿಂತಿತ್ತು. ದೀಪಗಳಿರದ ದಾರಿಯಲ್ಲಿ ಅದೇಷ್ಟೂ ದೂರ ನಡೆಯಲಾದಿತು
 
 
“ಅಲೆಯು ಬಂದು ಅಡದಿ ನಿಂತು
ಕಡಲ ಮಡಿಲಿಗೆ ಹಿಂತಿರುಗಿತು
ಮಾತುಗಳಿಲ್ಲದ ಮೌನದ ನಡುವೆಯೇ
ದಡಕೆ ಪ್ರೀತಿಯ ಪರಿಚಯವಾಗಿತ್ತು”
         
ಬದುಕು ಅದೇಷ್ಟೋ ಪಾಠಗಳನ್ನು ಕಲಿಸಿಬಿಡುತ್ತದೆ ನೋಡು. ನೋವು ನಲಿವುಗಳನ್ನು ಸಮನಾಂತರವಾಗಿ ನೀಡುವ ಏಕೈಕ ಗುರು ಅದು. ನಾನು ಒಮ್ಮೊಮ್ಮೆ ಕವಿತೆಗಳನ್ನು ಬರೆಯುವಾಗ ಬದುಕನ್ನು ವೇಶ್ಯೆ ಎಂದು ಬರೆದಿದ್ದೇನೆ. ನಿಜ ಬದುಕು ಗುರು ಮತ್ತು ವೇಶ್ಯಯ ಸ್ಥಾನವನ್ನು ತಪ್ಪದೆ ಎಲ್ಲರ ಬದುಕಿನಲ್ಲಿ ಬಂದು ಕೊನೆಯವರೆಗು ನಮ್ಮಲ್ಲೆ ಬದುಕಿಬಿಡುವ ನಿಜ ಸ್ನೇಹಿತ. ಇದು ಯಾರೊಬ್ಬರ ಸ್ವತ್ತಲ್ಲ. ಯಾರೊಬ್ಬರ ಬಳಿಯು ಬದುಕಿರಲಾರದು. ದಾರಿ ತಪ್ಪಿದಾಗ ಚಾಟಿ ಬೀಸಿ ಸರಿ ದಾರಿಗೆ ನಡೆಸಿಕೊಂಡು ಬಿಡುತ್ತದೆ. ಹಾಗೆ ಮತ್ತೊಂದು ಕಡೆ ವೇಶ್ಯೆಯ ಮುಖವಾಡವನ್ನು ಧರಿಸಿ ಆಲಂಗಿಸಿ ತಪ್ಪು ದಾರಿಗೆ ಕರೆದೊಯ್ಯುತ್ತದೆ. ಅದು ಆ ಸಮಯದ ಸ್ಕಲನವಾಗಬಾರದು ನಮ್ಮ ಮುಂದಿನ ಬದುಕಿನ ದಿಕ್ಸೂಚಿಯಾಗಬೇಕು. ಆಗಲೆ ಬದುಕಿಗೊಂದು ನೆಮ್ಮದಿಯ ಪಯಣ ಸಿದ್ದಗೊಳ್ಳುತ್ತದೆ. ಇಂತಹ ಬದುಕಿನಲ್ಲಿ ಮುಂಗಾರಿನ ಮೊದಲ ಹನಿಯಂತೆ, ಶ್ರಾವಣದ ಝಡಿ ಮಳೆಯಂತೆ ಬಿಟ್ಟರು ಬಿಡದೆ ಬಂದು ನನ್ನೊಳಗೆ ಮೈದೂರಿದವಳು ನೀನು. ನಿನ್ನಂತ ಹುಡುಗಿಯನ್ನು ತುಂಬಾ ಪ್ರೀತಿಸಿದರೆ ಸಾಲದು. ತುಂಬಾ ಜೋಪಾನ ಮಾಡಬೇಕು. ಸುಮ್ಮನೆ ಮುದ್ದು ಮಾಡಿದರೆ ಸಾಲದು ಕರ್ಪೂರದ ಗೊಂಬೆಯಂತಿರುವ ನಿನ್ನನ್ನು ನಾನು ನನ್ನನ್ನು ಅದೆಷ್ಟು ಜತನದಿಂದ ಕಾಪಾಡಿಕೊಂಡೆನೋ ಅದರತ್ತುಪಟ್ಟು ಜತನದಿಂದ ಕಾಪಾಡಿಕೊಳ್ಳಬೇಕು. ಇವತ್ತಿನ ಪಾಸ್ಟ್ ಅಂಡ್ ಗೋ ಕಾಲದಲ್ಲು ನಿನ್ನೊಷ್ಟು ಪ್ರೀತಿಸುವ ಹುಡುಗಿ ಮತ್ತೆ ನನಗೆ ಸಿಗಬಲ್ಲಳೆ ಪ್ರಿಯೇ, ನೋಡು ನೋಡು ರಾತ್ರಿ ಕಳೆದು ಬೆಳಗಾಗಿದೆ. ಹೊರಗೆ ಶ್ರಾವಣದ ಝಡಿ ಮಳೆ ಬಿಡದೆ ಸುರಿಯುತಿದೆ. ಸುಮ್ಮನೆ ನಿನ್ನ ನೆನಪುಗಳನ್ನು ದಾಖಲಿಸಲೆಂದೆ ಈ ಪ್ರೇಮ ಪತ್ರಗಳು ನನ್ನೊಳಗೆ ಜನ್ಮ ತಳೆಯುತ್ತವೇನೋ, ಹೇ ಒಲವಿನ ಪ್ರಿಯತಮೆಯೇ ಇಂದು ಸಂಜೆ ಮತ್ತದೆ ಸಮಯಕ್ಕೆ ನಮ್ಮಿಬ್ಬರ ಭೇಟಿ. ಅದೇ ಪಯಣಕ್ಕೆ ಸಿದ್ದವಾಗಿರು. ನವ ಬದುಕನ್ನು ಕಟ್ಟಲು ನಿನ್ನೊಂದಿಗೆ ಮಾತನಾಡುವುದಿದೆ. ದೂರದೂರಕೆ ಸಾಗಬೇಕಿದೆ ಅದರ ಸಿದ್ಧತೆಗೆ ನಾವು ತಯಾರಾಗೋಣ. ನಾಳೆ ನಮ್ಮ ಊರಿಗೆ ಪಯಣ ನಮ್ಮ ಮನೆಯಲ್ಲಿ ನಿನಗೆ ಸ್ವಾಗತಿಸಲು ಎಲ್ಲರು ಸಿದ್ದರಾಗಿದ್ದಾರೆ. ಇನ್ನು ದೀಪಗಳಿರದ ದಾರಿಯಲ್ಲಿ ಅದೇಷ್ಟೂ ದೂರ ನಡೆಯಲಾದಿತು..,
 
-ಸಿದ್ದುಯಾದವ್ ಚಿರಿಬಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x