ಮಲ್ಲಿಗೆಯ ದಂಡೆಯನು ಹಿಂಡಿದರೆ: ವೃಂದಾ ಸಂಗಮ

“ಜ್ಞಾನಪೂರ್ಣಂ ಜ್ಞಾನಂ ಜ್ಯೋತಿ. ನಿರ್ಮಲವಾದ ಮನವೇ ಕರ್ಪೂರದಾರತಿ.“  ಅಕ್ಕನ ಬಳಗದ ಭಜನೆ ಹಾಡು ಕಿವಿಗೊಮ್ಮೆ ಬಿದ್ದಾಗ ಅಲ್ಲೇ ಬಾಜೂಕ, ಮಠದಾಗ ಕೂತಿದ್ದ ಸ್ವಾಮಿಗಳು ಮೈ ಕೊಡವಿದರು. ಪ್ರತಿ ದಿನ ಅಕ್ಕನ ಬಳಗದಾಗ ಸಂಜೀ ಮುಂದ ಎಲ್ಲಾ ಸದಸ್ಯರೂ ಮನೀಗೆ ಹೋಗೋ ಮುಂದ ಬಸವಣ್ಣಗ ಒಂದು ಆರತಿ ಮಾಡತಾರ. ಆವಾಗ ಎಷ್ಟೇ ಭಜನಿ ಹಾಡಿದ್ದರೂ ಸೈತ, ಆರತಿ ಮಾಡುವಾಗ, ಈ ಹಾಡು ಹಾಡೇ ಹಾಡತಾರ. ದಿನಾ ಕೇಳೋ ಹಾಡೇ ಆದರೂ ಇವತ್ತ ಯಾಕೋ ಅವರ ಮನಸಿಗೆ ಚುಳುಕ್ ಅಂತು. ಹಿಂದಿನ ದಿನಗಳ ನೆನಪು ಬಂತು. “ ನಮ್ಮ ಮುಕ್ತಾ ಈ ಹಾಡು ಹಾಡಿಧಂಗ ಬ್ಯಾರೆ ಯಾರೂ ಹಾಡಂಗಿಲ್ಲ ಬಿಡರಿ. ಆಕಿ ಆ ಹಾಡಿನ ಅರ್ಥ ತಿಳಕೊಂಡು ಹಾಡತಾಳೋ ಅಥವಾ ಆ ಹಾಡಿನ ಅರ್ಥ ಬ್ಯಾರೆಯವರಿಗೆ ತಿಳಿಸಿ ತಿಳಿಸಿ ಹೇಳಲಿಕ್ಕೆ ಹಾಡತಾಳೊ”  ಅಂತ ಯಾವಾಗಲೂ ಎಲ್ಲಾರೂ ಹೇಳೋ ಈ ಮಾತು ವಿರಕ್ತ ಮಠದ ಕಂಬ ಕಂಬಗಳಿಗೂ ಕೇಳಸಿದ್ದು ನೆನಪದ.  “ಆ ಮುಕ್ತಾನ ಹಾಡ ಹಂಗ ಬಿಡು, ಅದು ಹೊಟ್ಯಾಗಿಂದ ಬರತದ, ಸೀದಾ ದಾರಿ ಮಾಡಕೊಂಡು ಬಸವಣ್ಣನ್ನ ಮುಟ್ಟತದ. ಅಕಿ ಯಾವದ ಭಜನಿ ಹಾಡಲಿ, ಕೇಳುವರ ಕಿವಿ ಪಾವನ ಆಗತಾವ “. ಅಂತಿದ್ದರು ಜನ. “ ಹುಂ” ಅಂತ ಉಸುರು ಬಿಟ್ಟರು ಸ್ವಾಮಿಗಳು.               

ಖರೇನ ಅದ. ಮುಕ್ತಾನ ಕೆಲಸಂದ್ರ ಹಾಂಗ. ಅಕ್ಕಮ್ಮ ಮತ್ತ ಮುಕ್ತಕ್ಕ ಇಬ್ಬರಿದ್ರ ಸಾಕ ಬಿಡರಿ. ಇಡೀ ವಿರಕ್ತ ಮಠನ ತುಂಬಿದಂಗ ಇರತದ. ಭಜನಿ ಇರಲಿ, ರಂಗೋಲಿ ಇರಲಿ, ಹೂವಿನ ಮಾಲಿ, ಸಿಂಗಾರ ಎಲ್ಲಾದನೂ ಸೈ. ಬಸವಣ್ಣಗ, ಮಠಕ್ಕ ಎಡಿ ತರೋ ಬುಟ್ಟಿ, ಹೋಳಿಗಿ ಮಾಡಿದ ರೀತಿ, ಅವನ್ನ ಜೋಡಿಸೋ ಪದ್ಧತಿ. ಅವ್ವಾ ಇಷ್ಟು ಚಂದದ ಕೆಲಸಾ ಈ ಕೂಸುಗಳಿಗೆ ಯಾರರೆ ಕಲಿಸಿದ್ದಾರು. ಐದ ಕೈ, ಒಂಬತ್ತ ಕೈ ಅಂತ ಹೆಡಿಗಿ ಕಟ್ಟಿದರ, ಹೆಡಿಗಿ ಬುಟ್ಟಿನ ಸಾಕು, ಊಟಾ ಮಾಡೋದ ಇರಲಿ, ನೋಡಿದರ ಸಾಕು, ಅವರ ಹೊಟ್ಟಿ ತುಂಬುಸತಿತ್ತು. ಅದು ಕಲಾಕಾರ ಮನಸು. ಏನ ಕೆಲಸಾ ಮಾಡಿದರೂ ಜನ ನಿಂತು ನೋಡೋ ಹಂಗ ಮಾಡತಿತ್ತು. ಅದರಾಗೂ ಅಕ್ಕಮ್ಮ ಮತ್ತ ಮುಕ್ತಕ್ಕನ್ನ ಕೆಲಸಾನ ಪ್ರತಿ ದಿನಾನೂ ನೆನಸದ, ಇವತ್ತಿಗೂ ವಿರಕ್ತ ಮಠದಾಗ ಯಾವ ಕೆಲಸಾನೂ ಆಗತಿದ್ದಿದ್ದಿಲ್ಲ.               

“ಸ್ವಾಮಿಗಳು ಇವತ್ಯಾಕೋ ಸುಸ್ತಾಧಂಗದ….” ಅಂತ ಮಠದ ಮುಖ್ಯ ಅಯ್ಯನವರು ಅಂದರು.  ಖರೇನ ಅದ. ಈಗ ಮಠದಾಗ ಈಗ ಲಿಂಗ ಪೂಜಾದ ಹೊತ್ತು. ಎಷ್ಟೋ ವರ್ಷಗಳಿಂದನೂ ತಪ್ಪಸದ ನಡೆಸಿದ ಪೂಜಾ, ಆಮ್ಯಾಲ ಭಜನಿ, ಅದರ ನಂತರ ಬಸವಣ್ನನ ಎರಡು ವಚನನೋ ಅಥವಾ ಯಾವದರೆ ಶಿವಭಕ್ತರ ಕಥೀನೋ ಹೇಳಿ, ಅದಕ್ಕ ಅರ್ಥಾ ವಿವರಿಸಿ, ಲಿಂಗಕ್ಕ ಇಟ್ಟಂತಹಾ ಎಡಿ ಪ್ರಸಾದ ಹಂಚಿ, ಎಲ್ಲಾರೂ ಮನೀಗೆ ಹೋದ ಮ್ಯಾಲ, ಮಠದ ಮಹಾ ದ್ವಾರ ಹಾಕಿದ ಮ್ಯಾಲನೂ ಉಳಿಯೋ ಅಂತಹ ಮಠದ ಅಂತರಂಗದ ಭಕ್ತರು, ದಾನಿಗಳ ಯೋಗಕ್ಷೇಮ ವಿಚಾರಣೆ ಮಾಡಿ, ಅವಶ್ಯ ಇದ್ದರ ನಾಲ್ಕು ಮಾತಾಡಬೇಕು. ಇಲ್ಲಾಂದರ ಹೇಳೋದನ್ನ ಕೇಳಿದ್ರೂ ಸಾಕು. ಹೆಚ್ಚು ಕೇಳಬೇಕು, ಒಂದೋ ಎರಡೋ ಮಾತಾಡಬೇಕು. ಅಂದರ ಮಾತ್ರ ಸ್ವಾಮಿಗಳ ಮಾತಿನ ತೂಕ ಹೆಚ್ಚತದ ಅನ್ನೋದನ್ನ ಯಾವಾಗಲೋ ಅರಿತಿದ್ದರು. ಇದೆಲ್ಲ ಮುಗಿದು, ಸ್ವಾಮಿಗಳು ಮಲಗಲಿಕ್ಕೆ ಹೋಗಬೇಕಂದರ ಸರೋರಾತ್ರಿ ಅಗಿರತದ. ಇದು ಮೂವತ್ತು ವರ್ಷದ ಪದ್ಧತಿ. ಚಳಿಯಿರಲಿ, ಮಳಿಯಿರಲಿ, ಮನಸಿನ ಮಾತಿಗಿಂತ ಮಠದ ನಿಷ್ಢೆ, ಪದ್ಧತಿ ತಪ್ಪಬಾರದು. ಸ್ವಾಮಿಯಾದವರು ಸದಾ ಇದನ್ನ ನೆನಪಿಟ್ಟಿರ ಬೇಕು. ಅದಕ್ಕ, ಅಯ್ಯನೋರಿಗೆ, ಏನಿಲ್ಲ ಏನಿಲ್ಲ ಅನಕೋತನ, ಶಿವ ಶಿವಾ ಅಂತ ಸ್ವಾಮಿಗಳು ಸಂಜಿ ಪೂಜಾಕ್ಕ ಹೊಂಟರು. ಕಾರ್ತಿಕ ಮಾಸ, ವಿಶೇಷ ಪೂಜಾ, ವಿಶೇಷ ಭಜನಿ.               

ಇವತ್ತಿನ ಪೂಜಾಕ್ಕ ಪ್ರತಿ ದಿನದಕಿಂತಾ ಇನ್ನೂ ಹೆಚ್ಚಿನ ವಿಶೇಷ ಅದ. ಅಂದರ ಗೌಡರ ಮನಿಯವರು ಊರಿಗೆಲ್ಲ ಪ್ರಸಾದ ಹಂಚುವವರಿದ್ದಾರ.  ಅವರ ಮಗಳು, ಇಲೆಕ್ಷನ್ ದಾಗ ಗೆದ್ದು ಬಂದಿದಷ್ಟ ಅಲ್ಲ, ಇದ ಮದಲನೇ ಸಲ, ಮಂತ್ರಿನೂ ಆಗ್ಯಾಳ. ಇವತ್ತ ನಾಳಿ ಒಳಗ ಮಠದ ಭೆಟ್ಟಿಗೂ ಬರತಾಳಂತ. ಮಠಕ್ಕೂ ಸರ್ಕಾರದಿಂದ ಏನರ ಅನುದಾನ ಸಿಗತದ. ಈಗಾಗಲೇ, ಈ ಸ್ವಾಮಿಗಳ ಕಾಲದಾಗ, ಮಠದ ಮಕ್ಕಳಿಗೇಂತ ಇದ್ದ ಹೈಸ್ಕೂಲು ಬೆಳೆದು, ಈಗ ಮಠದ ವತಿಯಿಂದ ಎರಡು ಇಂಜಿನೀಯರಿಂಗ್ ಕಾಲೇಜು, ಒಂದು ಮೆಡಿಕಲ್ ಕಾಲೇಜು ಆಗೇದ. ಅದರಿಂದ ಮಠಕ್ಕ ಭಾರೀ ಆದಾಯನೂ ಅದ.  ಆದರೂ, ಯಾವುದೇ ಮಠ ಇರಲಿ, ಅದಕ್ಕ ಭಕ್ತರ ಕಾಣಿಕೇನ ಮುಖ್ಯ. ಅದನ್ನ ಯಾವತ್ತಿಗೂ ಮರೀಬಾರದು. ಹಿಂದ ಬರೇ ಒಂದು ಹೈಸ್ಕೂಲ ಮಕ್ಕಳಿಗೆ ಹಾಸ್ಟೆಲ ಶುರು ಮಾಡಿ, ನಡೆಸಿ, ಆ ಹೈಸ್ಕೂಲ ಮಕ್ಕಳಿಗೆ ಮಧ್ಯಾನ ಮತ್ತ ಸಂಜೀ ಎರಡ ಹೊತ್ತು ಊಟಕ್ಕ ಹಾಕಲಿಕ್ಕೆ, ತಾವು ಮನೀ ಮನೀಗೆ ಹೋಗಿ ಆಯಾ ತರತಿದ್ದು ನೆನಪದ. ಜೋಳಿಗಿ ಹಿಡಕೊಂಡು, ಜೊತೀಗೆ ಒಬ್ಬರನ ಹೊರಡಿಸಿಕೊಂಡು ಯಾರ ಮನೀಗೆ ಹೋದರೂ, ಇಲ್ಲಿನ ಸುತ್ತಮುತ್ತಲಿನ ಎಲ್ಲಾ ಹಳ್ಳಿ ಜನಾ ತಮಗ, ಹೊಟ್ಟಿಗಿಲ್ಲದಿದ್ದರೂ ಮಠಕ್ಕ ಆದಾಯ ತಪ್ಪಿಸಿಲ್ಲ. ಇವತ್ತಿಗೂ ಈ ಸಾಮಾನ್ಯ ಜನರ ನಿಷ್ಠೆಯಿಂದನ ಮಠಕ್ಕ ದೊಡ್ಡ ಹೆಸರು. ಮತ್ತ ಈ ಊರಿನ ಗೌಡರೂ ಸೈತ, ಬ್ಯಾರೆಯವರಿಗೆ ಹೋಲಿಸಿದರ, ಯಾವ ಕೆಟ್ಟ ವಿಚಾರಗಳೂ ಇಲ್ಲದಿರೋ ಅಂತಹಾ ಸಜ್ಜನರು. ಆದರ ಕೀರ್ತಿ ಆಶಾ ಯಾರಿಗಿಲ್ಲ. ದೇವ ದೇವೋತ್ತಮರ ಲೀಲೆಗಳೇ ಕೇವಲ ಕೀರ್ತಿ ಪ್ರತಿಷ್ಟೆಗಳ ಆಸೆಗಾಗಿ ಇರುವಾಗ, ಮನುಷ್ಯ ಮಾತ್ರದವರಿಗೆ ಅದು ಇಲ್ಲದೇ ಇಲ್ಲ. ಗೌಡರೂ ಮನುಷ್ಯ ಮಾತ್ರದವರೇ ಅಲ್ಲವೇ.               

ಗೌಡರಿಗೆ, ತಾನು, ತನ್ನ ಮಕ್ಕಳು, ಎಲ್ಲಾದರಾಗೂ ಮುಂದನ ಇರಬೇಕು. ಅವರ ಕಾಣಿಕೆನ ಹೆಚ್ಚು ಅಂತ ಹೊಗಳಬೇಕು. ಅವರು ಮಾಡಿದ ಕೆಲಸನ ಛಂದ ಅಂತ ಹೇಳಬೇಕು. ಇಂತಹಾ ಸಣ್ಣ ಪುಟ್ಟ ಆಸೆಗಳು. ಇದರಿಂದ ಊರಿಗೆ, ಮಠದ ಕೆಲಸಾ ಕಾರ್ಯಕ್ಕ, ಸ್ವಾಮಿಗಳಿಗೆ ತೊಂದರೆ ಆಗಧಂಗ ಸ್ವಾಮಿಗಳು ನೋಡಿಕೊಂಡಿದ್ದರು. ಅದಕ್ಕಂತನ ಎಲ್ಲಾ ಸುಲಲಿತವಾಗಿ ನಡೆದಿತ್ತು. ಇವತ್ತಿನ ದಿನ, ಪ್ರತಿ ದಿನದಕಿಂತನೂ  ಸ್ವಲ್ಪ ವಿಶೇಷ ಪೂಜಾ ಇತ್ತು ಮಠದಾಗ, ಅದನ್ನ ಮುಗಿಸಿ, ನಾಲ್ಕು ಜಾಸ್ತಿ ವಚನಗಳನ್ನ ಹಾಡಿ, ಮಂಗಳಾರತಿ ಮಾಡೋ ಹೊತ್ತಿಗೇನ ರಾತ್ರಿ ಆಗಿತ್ತು. ಆದರೇನು, ಎಲ್ಲಾ ಶಿವ ಭಕ್ತರಿಗೆ ರಾತ್ರಿ ಮಠದಾಗನ ಭಿನ್ನಕ್ಕ ತಯಾರಾಗಿತ್ತು. ಇದು ಇವತ್ತಿನ ಗೌಡರ ಸೇವಾ. ಅವರ ಮಗಳು ಮಂತ್ರಿ ಆಗಿದ್ದ ಖುಷಿಗೆ. ಮಠಕ್ಕ ಬಂದಿರೋ ಭಕ್ತರಿಗೆಲ್ಲ ಪ್ರಸಾದ ಹಂಚಿ, ಎಲ್ಲಾ ಮುಗಿಸಿ ಮಲಗೋ ವ್ಯಾಳ್ಯಾ ಅಂದರ, ಮಠದ ತಲಬಾಗಿಲ ಹಾಕಿದಾಗ ಗಡಿಯಾರ ಹನ್ನೆರಡು ಗಂಟಿ ಬಾರಿಸಿದಾಗನ. ಅಲ್ಲೀತನ ಸ್ವಾಮಿಗಳಿಗಳಿಗೂ ಪುರುಸೊತ್ತಿಲ್ಲ. ನಮ್ಮ ಮಠದ ಭಕ್ತೆ, ಮಠದ ವಿದ್ಯಾರ್ಥಿನಿ, ಮಠದ ಮಗಳು ಇವೊತ್ತ ಮಂತ್ರಿ ಆಗಿದ್ದು, ಮಠಕ್ಕೂ ಕೀರ್ತಿ ತಂದದ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಅಂತ ಮಠದ ಮುಖಾಂತರ ಸ್ವಾಮಿಗಳು ಆಶೀರ್ವಾದ ಮಾಡಿದಾಗ ಗೌಡರ ಮಾರಿ ತುಂಬಿ ಅರಳಿತ್ತು. ಇಂತಾ ಒಂದು ಮಾತು ಗೌಡರನ್ನ ಹೆಚ್ಚು ಹೆಚ್ಚು ಮಠದ ಕೆಲಸಕ್ಕ ಉತ್ಸಾಹ ನೀಡತದ ಅನ್ನೋದು ನೆನಪಿಗೆ ಬಂದು ಸ್ವಾಮಿಗಳ ಮುಖದ ಮ್ಯಾಲ ಮುಗುಳ್ನಗೆ ತೇಲಿತ್ತು. ಗೌಡತಿ ಸಂಜೀ ಮುಂದ ತಲೀ ತುಂಬ ಸೆರಗು ಮುಚಗೊಂಡು,  ಸನಮಾಡಿ, ‘” ಯಪ್ಪಾ ಇದು ನಿಮ್ಮದ ಆಶೀರ್ವಾದ. ಇದರಿಂದನ ನನ್ನ ಮಗಳು ಮಂತ್ರಿ ಆಗ್ಯಾಳ “  ಅಂದಿದ್ರು.               

ಇವತ್ತು ಮಲಗಿದರೂ ಯಾಕೋ ಸ್ವಾಮಿಗಳಿಗೆ ದೇಹ ದಣಿದಿದ್ದಕ್ಕೋ ಅಥವಾ ಮಠದಾಗ ನಡೆದ ಸಂಭ್ರಮದ ಕಾರ್ಯಕ್ರಮಕ್ಕೋ ನಿದ್ದೆನ ಬರದ ಬರೇ ಹಿಂದಿನ ನೆನಪು. ತಮಗ, ಮಠದ ಸ್ವಾಮಿಯಾಗೋ ದೀಕ್ಷಾ ನೀಡಿ, ಲಿಂಗಾ ಕಟ್ಟಿದಾಗ 23 ವರ್ಷ ವಯಸ್ಸು. ಅವರಿಗೆ  ಅಪ್ಪ ಇರಲಿಲ್ಲ. ಬಿ. ಎ. ಮುಗಿಸಿದ್ದರು. ಅವ್ವ ಕೂಲಿ ಮಾಡತಿದ್ದಳು. ಅಕೀ, ತಮ್ಮ ಮ್ಯಾಲ ಏನೇನು ಆಶಾ ಇಟಗೊಂಡಿದ್ದಳೊ ಗೊತ್ತಿಲ್ಲ. ತಾವು ಮಾತ್ರ ಒಂದ ನಿಟ್ಟಿನಿಂದ ಓದುತಿದ್ದರು. ಕುದುರಿಗೆ ಕಣ್ಣ ಪಟ್ಟಿ ಕಟ್ಟಿದಂಗ. ಇದೇ ಮಠದ ಹೈಸ್ಕೂಲಿನಲ್ಲಿಯೇ ಓದಿದ್ದರಿಂದ, ಮಠದಾಗ ಇದ್ದಾಗ ಕೆಲವೊಂದು ಚರ್ಚಾ ಸ್ಪರ್ಧಾದಾಗ, ಭಾಷಣದಾಗ ಬಹುಮಾನ ಪಡೆದಿದ್ದು ಅಲ್ಲದ, ಇದು ಮುಂದುವರಿದು, ಕಾಲೇಜದಾಗೂ ಒಂದೆರಡು ಬಹುಮಾನ ಬಂದಿದ್ದಕ್ಕ, ಒಳ್ಳೇ ಭಾಷಣಕಾರರು ಅಂತ ಹೆಸರು ಕೊಟ್ಟು, ಇವರನ್ನ ಒಂದ ನಾಲ್ಕ ಸಲ ಶಿವಶರಣರ ಬಗ್ಗೆ ಭಾಷಣಾ ಮಾಡಲಿಕ್ಕೆ ಈ ಮಠಕ್ಕ ಕರೆದಿದ್ದರು. ಕಾಲೇಜಿನಲ್ಲಿ ಓದೋವಾಗ. ಅಂತಾ ವಿಶೇಷ ಭಕ್ತಿ ಅಂತಲ್ಲದಿದ್ದರೂ, ಭಾಷಣಾ ಛಂದಾಗೇ ಮಾಡಿದ್ದರು. ಅಷ್ಟ ಪರಿಚಯ ಇತ್ತು. ಹಿಂದಿನ ಸ್ವಾಮಿಗಳ ಕೂಡಾ. ಮುಂದ, ಅದೇ ಸ್ಥಾನದಲ್ಲಿ ತಾವು ಕೂತಾಗ, ಸಂಸಾರದ ವಿರಕ್ತಿ ಅಂದರೇನು ಅಂತ ಕೂಡ ತಿಳಿದಿರಲಿಲ್ಲ. ಬಹುಶಃ ಬಡವ. ಅನಾಥ, ಮಠಾ ಮೀರಿ ನಡೀಲಿಕ್ಕಿಲ್ಲ ಅಂತ ಅನಕೊಂಡಿರಬಹುದು ಹಿಂದಿನ ಸ್ವಾಮಿಗಳು. “ ಸೋ ಹಂ' ಎಂದೆನಿಸದೆ 'ದಾಸೋ ಹಂ ಎಂದೆನಿಸಯ್ಯಾ. ಲಿಂಗ ಜಂಗಮ ಪ್ರಸಾದದ ನಿಲವ ತೋರಿ ಬದುಕಿಸಯ್ಯಾ “. ಅನ್ನುವ ಬದುಕಿನ ದಾರಿ ಬದಲಾಯಿಸಿದರೂ, ಅಂತೂ ಹೆಂಗೋ ಏನೋ. ಇವರು ವಿರಕ್ತ ಮಠದ ಸ್ವಾಮಿಗಳಾಗಿ, ರುದ್ರಾಕ್ಷಿ ಹಾಕಿದರು.               

ಅವತ್ತಿನ ಅವರ ಗುರಿ ಒಂದೇ ಆಗಿತ್ತು, ಮಠದ ಆದಾಯ ಹೆಚ್ಚಿಸ ಬೇಕು. ಭಕ್ತರನ್ನು ಹೆಚ್ಚಿಸಬೇಕು ಜೊತೀಗೆ ತಾವೂ ಓದಬೇಕು ಅನ್ನೋ ಈ ಹಂಬಲದಾಗ, ವಯಸ್ಸು ಸಣ್ಣದಿದ್ದರೂ, ಕಣ್ಣು ಆತ್ಲಾಗ ಇತ್ಲಾಗ ಸುಳೀಲಿಲ್ಲ. “ ಅತ್ತ ಇತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ. ಸುತ್ತಿ ಸುಳಿದು ನೋಡದಂತೆ ಕುರುಡನ ಮಾಡಯ್ಯ ತಂದೆ “  ಅಂತ ವಚನಾ ಹೇಳಬೇಕಾದರ ಸ್ವಾಮಿಗಳು ತಮ್ಮನ್ನ ಉದಾಹರಣೆ ಮಾಡುತ್ತಿದ್ದರು. ಇದು, ಇವತ್ತಿಗೂ ಶುದ್ಧ ನೀತಿಯ ಸ್ವಾಮಿಗಳು ಅಂತ ಜನಾ ಇವರಿಗೆ ಮರ್ಯಾದಿ ಕೊಡೋದಕ್ಕೆ ಮುಖ್ಯ ಕಾರಣ. ಸ್ವಾಮಿಗಳಷ್ಟ ಅಲ್ಲ, ಎಲ್ಲಾರಿಗೂ, ಬಸವಣ್ಣನವರು ವಚನದಾಗ ಹೇಳಿದಂತೆ “ ಎಚ್ಚರವಿರಬೇಕು ನಡೆ ನುಡಿಯಲಿ ಎಚ್ಚರವಿರಬೇಕು ” ಅಂತ ಆಶೀರ್ವಚನ ನೀಡಬೇಕಾದರ, ಸ್ವಾಮಿಗಳು, ತಮ್ಮನ್ನ ತಾವ, ಕಣ್ಣ ಮುಂದ ಇಟಗೋತಿದ್ದರು. ಇದು ಅವರ ಜೀವನ ಶುದ್ಧತಾಕ್ಕೂ, ಜನರಿಗೆ ಇವರ ಮ್ಯಾಲ ನಂಬಿಕೆಗೂ ದಾರಿ ಆಗಿತ್ತು. ಅಂದ, ಬರೇ ಬಿ. ಎ. ಓದಿದವರು, ಮುಂದ ಎಂ.ಎ ಓದಿದರು. ಪಿ. ಹೆಚ್. ಡಿ. ಮಾಡಿ ಡಾಕ್ಟರ್ ಅಂತ ಪದವೀನೂ ಬಂತು. ಅದು ತಮ್ಮ ಪ್ರವಚನಕ್ಕ ಭಾಳ ಉಪಯೋಗನೂ ಆತು. ಬ್ಯಾರೆ ಬ್ಯಾರೆ ಮಠದ ಸ್ವಾಮಿಗಳು ಸೇರಿದಾಗ, ಈ ಕಾರಣಗಳಿಂದನ ತಮಗೊಂದು ವಿಶೇಷ ಅಸ್ಥಿತ್ವಾನೂ ಕೊಡ್ತು. ಅದೂ ಅಲ್ಲದ ಇವರು ನೀಡೋ ಆಶೀರ್ವಚನಕ್ಕ ಒಂದು ತೂಕ ಬರಲಿಕ್ಕೆ, ಪಿ ಹೆಚ್ ಡಿ ಗೆ ಓದಿದ ವಿಷಯಗಳು ಸಹಕಾರಿಯಾಗಿದ್ದವು. ಕಾಲೇಜದಾಗ ಓದೋವಾಗ, ಮಾಡಿದ ಭಾಷಣಗಳು, ಅವರ ಸಭಾಕಂಪವನ್ನು ತೊರೆಯಲಿಕ್ಕೆ, ಮತ್ತ ಭಾಷಣವನ್ನ, ಕೇಳುವವರ ಮಸನ್ನ ತಮ್ಮ ಹಿಡಿತದಾಗ ಇಟ್ಟು ಕೊಳ್ಳಲಿಕ್ಕೆ ಸಹಾಯ ಮಾಡಿದ್ದವು. ಅಲ್ಲದೇ ತಾವು ತಮ್ಮ ಸ್ವಂತ ಆಸಕ್ತಿಗೋಸ್ಕರ ಈ ಬಗ್ಗೆ ಇನ್ನೂ ಒಂದು ಅಧ್ಯಯನ ಮಾಡಿದ್ದು, ಅದಕ್ಕೆ ವಿಶ್ವವಿದ್ಯಾಲಯ ವಿಶೇಷ ಗೌರವದ ಪದವಿ ಕೊಟ್ಟದ್ದು  ಮಠದ ಕೀರ್ತಿ ಹೆಚ್ಚಿಸಿತ್ತು. ಖರೇನ ಅದು ಭಾಳ ವಿದ್ವತ್ಪೂರ್ಣ ಪ್ರಬಂಧ. ಇದು ಸ್ವಾಮಿಗಳು ಬೆಳೆದ ದಾರಿ. “ ಜ್ಙಾನದ ಬಲದಿಂದ ಅಜ್ಙಾನದ ಕೇಡು ನೋಡಯ್ಯ ಜ್ಯೋತೀಯ ಬಲದಿಂದ ತಮಂಧದ ಕೇಡು ನೋಡಯ್ಯಾ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು ನೋಡಯ್ಯಾ “  ಅಂತನ,  ಬೆಳದವರು ಈ ಸ್ವಾಮಿಗಳು.               

ಆದರ, ಮಠಾನೂ ಅಷ್ಟ ಮುಂದ ತಂದಿದ್ರು ಸ್ವಾಮಿಗಳು. ಮದಲ, ಹೈಸ್ಕೂಲಿನ ಮಕ್ಕಳಿಗೆ ಮಧ್ಯಾನ ಮಠದಾಗ ಊಟ ಅಂದರು. ತಾವ ಭಕ್ತರ ಮನೀ ಮನೀಗೆ ಹೋಗಿ, ಆಯ ಅಂತ ಜ್ವಾಳ,  ಭತ್ತ ತಂದರು. ಮುಂದ ಇದು ಮಠಕ್ಕ ಖಾಯಂ ಭಕ್ತರನ್ನ ನೀಡಿತು. ಅದರಿಂದ, ಮಧ್ಯಾನ ಮಠಕ್ಕ ಬಂದವರಿಗೆಲ್ಲ ಅಲ್ಲೆ ಭಿನ್ನಕ್ಕ ಬರಲಿಕ್ಕೆ ಹೇಳಿದರು. ಮುಂದ ಮಠಕ್ಕ ವಿದೇಶದಾಗಿರೋ ಭಕ್ತರ ನಂಬಿಕೆ ಉಳಿಸಿಕೊಂಡು ಗಳಿಸಿಕೊಂಡು, ಅವರ ಕಾಣಿಕೆ, ಸಹಕಾರಗಳಿಂದ ಇಷ್ಟು  ದೊಡ್ಡ ಮಠದ ಕಟ್ಟಡ ಬಂತು. ಒಬ್ಬ ನಿಷ್ಟಾವಂತ ಶಿವ ಭಕ್ತ ಮಾಡಬೇಕಾಗಿದ್ದೆಲ್ಲ ಗೌರವದಿಂದ ಮಾಡಿದರು. ಅದರ ಜೊತೆ ಸರ್ಕಾರದವರೂ ಸಹಾಯ ಮಾಡಿ ಮೂರು ಮುಖ್ಯ ಕಾಲೇಜು ಸೈತ  ಬಂದವು.               

ಇದ ಕಾರ್ತೀಕ ಮಾಸದಾಗ, ಹಿಂದ ಇದ್ದಂತಹಾ ಸಣ್ಣ ಗುಡಿ ಮುಂದ, ಬುಲ್ಡಗಡಿಗೆ ಬಿಚ್ಚಿ, ಲಿಂಗ ಪೂಜಾಕ್ಕ ಕೂತಾಗ, ಅವರಿಗೆ, ಹರೇದ ವಯಸ್ಸು, “ಜ್ಯೋತಿ ಬೆಳಗುತಿದೆ. ನಿರ್ಮಲ ಪರಂ ಜ್ಯೋತಿ ಬೆಳಗುತಿದೆ…” ಅಂತ ಅವತ್ತ ಅಕ್ಕನ ಬಳಗದ ಹಾಡು ಕೇಳಿದಾಗ ಸ್ವಾಮಿಗಳಿಗೆ ಮನಸ್ಸು ಹೂವಾಗಿತ್ತು. ಇದು ಮುಕ್ತಾನದ ಧನಿ ಅನಿಸಿದರೂ ಜೊತೀಗೆ ಕೂಡಿದ್ದು ಅಕ್ಕಮ್ಮನ ಸೋ ರಾಗ ಅನಿಸಿ, ನಗು ಬಂದಿತ್ತು. ಆಗ ತಾವು ರಾತ್ರೆಲ್ಲಾ ಎಚ್ಚರಿದ್ದು ಪಿ ಹೆಚ್ ಡಿ ಪ್ರಬಂದಕ್ಕ ಓದುತಿದ್ದರು. ಕಣ್ನ ಮುಂದ ಸದಾ ಸನ್ಯಾಸತ್ವ ಎಚ್ಚರಿರತಿತ್ತು. ಆದರ ಅವತ್ಯಾಕೋ, ಮನಸು ಹರಿದಾಡತಿತ್ತು,….               

ಎಷ್ಟರ ಇಂಪದ ಈ ಧನಿ. ಅಕ್ಕನ ಬಳಗದಾಗ ಹಾಡಿದರೂ ಅಷ್ಟ. ಮಠದ ಭಜನಿ ಮ್ಯಾಳದಾಗ ಹಾಡಿದರೂ ಅಷ್ಟ. ಒಂಚೂರೂ ತಾಳ ತಪ್ಪಂಗಿಲ್ಲ. ಖರೇನ, ವಯಸ್ಸಿನ ಎಲ್ಲಾ ಹುಡುಗರು ತಮ್ಮ ಜೀವನದಾಗ ಬಯಸುವಂತಹಾ ರೂಪವಂತ, ಗುಣವಂತ ಹುಡುಗಿ ಮುಕ್ತಾ.  ಅಂತಹಾ ಹೂವಿನಂತಹ ಹುಡುಗಿ ಯಾರ ಜೀವನದಾಗ ಬಂದರೂ ಅವರ ಜೀವನದ ತಾಳ ತಪ್ಪಧಂಗ ನೋಡಿಕೊಂಡು, ಅವರ ಬಾಳಿನ ಜ್ಯೋತಿ ಆಗೋದು ಖರೆ. ಅನಸಿದಾಗ, ಸ್ವಾಮಿಗಳೂ ಕನಸಿನ ಕುದುರೀ ಏರಿದ್ದರು. ನಾನೂ ಒಂದು ಸಂಸಾರ ಅಂತ ಮಾಡಿದರ ನನಗ ಇಕೀ ಅಂತಹ ಹುಡುಗೀನ ಬೇಕು. ನಾನು ನನ್ನ ಸಂಸಾರದಾಗ, ನನ್ನ ಕನಸಿನ ವಿದ್ಯಾದಾನದ ವೃತ್ತಿ ಮಾಡಬೇಕು. ನನ್ನ ಲಿಂಗ ಪೂಜಾಕ್ಕ ಆ ಹುಡುಗಿ ಎಲ್ಲಾ ತಯಾರಿ ಮಾಡಬೇಕು. ಎಡಿ ಹಿಡಿಯೋ ಹೊತ್ತಿಗೆ, ಸಣ್ಣ ಚರಿಗೀ ತುಂಬ ಕಾಸಿದ ಹಾಲು ತಂದಿಡ ಬೇಕು. ನಾನು ಪಂಚಾರತಿ ಬೆಳಗಿ ಕೆಳಗಿಡೋ ಹೊತ್ತಿಗೆ ಅಲ್ಲೇ ಕೈ ಮುಗಿದು ನಿಂತಿರಬೇಕು. ಹಣಿ ಮ್ಯಾಲೆ ವಿಭೂತಿ, ಅದರ ಮ್ಯಾಲ ಕುಂಕುಮ, ಜಡಿ ಸುತ್ತಿ ಗಂಟು ಹಾಕಿದ್ದನ್ನ ಮುಚ್ಚೋ ಹಂಗ ಹೊದ್ದಿರೋ ಸೀರೀ ಸೆರಗು, ನೋಡಿದರ ಅಕ್ಕ ಮಹಾದೇವಿ ಕಂಡಂಗಾಗಿ, ಒಂದ ಕ್ಷಣ ಮೈ ಮರತು ನಾನು ನಗಬೇಕು. ಮುಂಜಾನೆ ಕೆಲಸಕ್ಕ ಅಂತ ತಯಾರಾಗಿ ಹೋಗೋ ಹೊತ್ತಿಗೆ ಸರಿಯಾಗಿ, ಎಡಿ ಹಿಡದಿರೋ ಹಾಲಿನ ಚರಗಿ ತಂದರ, ನಾನು ಆ ಹಾಲು ಕುಡಿಯೋದಕ್ಕಿಂತ ಮದಲ, ಚರಗಿ ಹಿಡದಿರೋ ಆ ಕೈ ಹಿಡದು, ಕಣ್ಣಿಗೆ ಹಚಗೊಂಡು, ಇದು ನನ್ನ ಜೀವನಾ ಸಾರ್ಥಕ ಮಾಡಿದ ಕೈ ಅಂತ ಅನಬೇಕು. ಅದಕ್ಕ ಅಕೀ ನಕ್ಕೋತ ನಾಚಗೊಂಡು, ಅಯ್ಯ ಸಾಕ ಬಿಡರಿ, ಭಾಳ ಹೊಗಳ ಬ್ಯಾಡರಿ ನಿಮ್ಮ ಹೆಂಡತೀನ್ನ, ಆಮ್ಯಾಲ ಗರ್ವ ಬರತದ ಅಕೀಗೆ, ತಲೀ ಮ್ಯಾಲ ಕೂಡತಾಳ ನೋಡರಿ, ಅಂತ ನನ್ನ ತೋಳ ಹಿಡಕೊಂಡು, ಭುಜಕ್ಕ ಗಲ್ಲಾ ಒತ್ತಿ, ಅರಗಣ್ಣು ಮುಚ್ಚಿ ಹೇಳಿದರ,  ನನ್ನ ಜೀವನ ಸಾರ್ಥಕ ಆಧಂಗ. ಹಿಂಗ ಕನಸು ಮುಂದುವರೀತಿತ್ತೋ ಏನೋ. ಆದರ ಕನಸು ಕಾಣುವ ಬುದ್ದಿ ಎಚ್ಚರಿತ್ತು“ ನಾನೊಂದ ನೆನೆದರೆ, ತಾನೊಂದ ನೆನೆವುದು; ನಾನಿತ್ತಲೆಳೆದರೆ, ತಾನತ್ತಲೆಳೆವುದು; ತಾ ಬೇರೆ ಎನ್ನನಳಲಿಸಿ ಕಾಡಿತ್ತು; ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು; ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.”  ಅಂತ ಬಸವಣ್ಣವ ವಚನ ಮನಸನ್ನ ಎಚ್ಚರಿಸಿತ್ತು.               

ಆದರೂ, ಶಿವಲಿಂಗದ ಮುಂದ ಸುಳ್ಳಲ್ಲ. ಕೆಟ್ಟ ದೃಷ್ಟಿ ಇಲ್ಲಾಂದರೂ ಮಠದ ಎಲ್ಲಾ ಭಕ್ತರಿಗಿಂತ ಹೆಚ್ಚು ಗೌರವವಿತ್ತು ಮುಕ್ತಾಳ ಮ್ಯಾಲ. ಒಂದು ಸಾತ್ವಿಕ ಅಭಿಮಾನ ಇತ್ತು, ಅಕಿ ಬಗ್ಗೆ. ಅಕಿ ಅಂದರ ಹಿಡಿ ತುಂಬುವ ಹೂವು ಇದ್ಧಂಗ, ದೇವರ ಪ್ರಸಾದ ಅದು. ಆ ಹೂವು ಕಣ್ಣಿಗೊತ್ತವರ, ಗಲ್ಲಕ್ಕೊತ್ತವರಿಗೇ ಸಿಗಲಿ ಅಂತ ಒಂದು ನಿರ್ಮಲ ಆಶಾನೂ ಇತ್ತು ಮನಸ್ಸಿನಾಗ. ಕನ್ನಡ ಸಾಲಿ ಮಾಸ್ತರ ಮಗಳು ಮುಕ್ತಾ. ಮಹಾನ್ ಶಿವಶರಣೆ ಮುಕ್ತಾಯಕ್ಕನ ಹೆಸರಿಟ್ಟುಕೊಂಡಾಕಿ. ಅವರಪ್ಪ ಮಾಸ್ತರು, ದಿನಾ ಗುಡೀಗೆ ಬರೋ ಅಷ್ಟು ಭಕ್ತಿವಂತರು ಅನದಿದ್ರು, ಪ್ರತಿ ದಿನ ಮನ್ಯಾಗ ಲಿಂಗ ಪೂಜಾ ತಪ್ಪಸತಿದ್ದಿಲ್ಲ ಮಾಸ್ತರು. ಆದರ ಮಾಸ್ತರ ಶ್ರೀಮತಿಯವರು ಮಾತ್ರ, ಒಂದಿನಾನೂ ಮಠ ತಪ್ಪಸತಿದ್ದಿಲ್ಲ. ಆಗೀಗ ಅಕ್ಕನ ಬಳಗದಾಗ ವಚನಾನೂ ಹಾಡುತಿದ್ರು. ಆದರ, ಮಠದಾಗ ದಿನಾ ಭಿನ್ನಕ್ಕ ಕರದರನೂ ಒಂದು ದಿನಾನೂ ಬರತಿದ್ದಿದ್ದಿಲ್ಲ. “ಯಣ್ಣಾ ಭಾಳ ಮಂದಿ ಆಗರಿ”  ಅಂತ ನಕ್ಕೋತನ ಮನೀಗೆ ಹೋಗುತಿದ್ದರು. ‘ ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ. ’ ಅಂತ ಶರಣರ ವಚನವನ್ನ ಪೂರ್ತಿಯಾಗಿ ನಂಬಿದ ದಂಪತಿಗಳು ಅವರು. ಬಡವರಾದರೂ ತೃಪ್ತರು, ಶಿವ ಭಕ್ತರು. ಭಾಳ ದಿನದ ಮ್ಯಾಲ ಮಕ್ಕಳಾಗಿರಬೇಕು. ಮುಕ್ತಾ ಒಬ್ಬಾಕಿನ ಮಗಳು. ತಾಯಿ ರೂಪು, ಸಂಸ್ಕೃತಿಯೊಳಗ ಬೆಳದಾಕಿ.               

ಮಠದಾಗ ಯಾವ ಕೆಲಸಕ್ಕೂ ಸೈ. ದೇವರ ಸಾಮಾನುಗಳನ್ನು ಅಕೀ ತೊಳದ ದಿನ. ಆರತಿ ತಾಟನ್ಯಾಗ ಮಂಗಳಾರತಿ ಕಾಣೋದು. ಅಷ್ಟು ಅಚ್ಚುಕಟ್ಟು ಕೆಲಸ. ಊರ ಗೌಡರ ಮಗಳ ಜೊತೆ ಇರಾಕಿ. ಎಲ್ಲಾ ಕೆಲಸದ ಹೆಸರೂ ಅಕೀಗೇ ಹೋದರೂ, ಗೌಡತಿ ಅಕ್ಕಮ್ಮನ ಕೆಲಸಾ ಛಂದ ಮಾಡತಾಳು ಅಂದರೂ, ಹೊಂದಿಕೊಂಡು ನಕ್ಕೋತನ ಇರುವಾಕಿ. ಅಷ್ಟು ಸಣ್ಣ ಹುಡುಗೀಗೆ ಇಷ್ಟು ತಾಳ್ಮೆ ಹೆಂಗಿತ್ತೊ. ಹಾಡು ಸೈತ, ಇಬ್ಬರೂ ಒಟ್ಟಿಗೇ ಹಾಡತಿದ್ದರು. ಹಾಡುವಾಕಿ ಮುಕ್ತಾ, ಆದರ ಹೆಸರು ಮಾತ್ರ ಅಕ್ಕಮ್ಮಂದು. “ ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,  ಏಡಿಸಿ ಕಾಡಿತ್ತು ಶಿವನ ಡಂಗುರ,  ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ, “  ಅನ್ನೋದನ್ನ ಅಷ್ಟ ಸಣ್ಣ ವಯಸ್ಸನ್ಯಾಗ ಕಲಿತಿದ್ದಳು ಮುಕ್ತಾ.               

ಈಗೀಗ ನನಗೂ ಗೌಡರ ಮಗಳಿಗೂ, ಮಾಸ್ತರ ಮಗಳಿಗೂ ಇರೋ ವ್ಯತ್ಯಾಸ ಕಣ್ಣು ಹಾಯಸದನ ತಿಳಿದಿರತ್ತು. “ಗೀತವ ಬಲ್ಲಾತ ಜಾಣನಲ್ಲ. ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು; ಲಿಂಗವ ನೆರೆ ನಂಬಿದಾತ ಆತ ಜಾಣನು! ಜಂಗಮಕ್ಕೆ ಸವೆಸುವಾತ ಆತ ಜಾಣನು! ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ನಮ್ಮ ಕೂಡಲಸಂಗನ ಶರಣನು.”  ಅಂತ  ಅವರು ಹಾಡಿದರ, ಹೌದು, ಹುಟ್ಟು ದೇವರು ಕೊಟ್ಟಿದ್ದು,  ಬದುಕು ನಮ್ಮ ಕೈಯ್ಯಾಗಿಂದು. ಜೀವನದ ಗುರಿ ನಗುತಾ ನಗುತಾ ಬಾಳೋದು ಅಂದಾಗ, ಹೊಂದಿಕೊಂಡು ಹೋದರನ ಜೀವನ ಪಾವನ. ಅನಸತಿತ್ತು. ಅದು ಖರೇನ ಅದ. ಆದರ, ಇಷ್ಟು ಸಣ್ಣ ವಯಸ್ಸಗೇ ಅದು ಮುಕ್ತಾಗ ತಿಳಿದಿತ್ತು. ಆದರೂ ಇಬ್ಬರೂ ಜೋಡಿ ಹಕ್ಕಿ ಹಂಗ ಮಠದಾಗ ಓಡಾಡಿದ್ದರ ಖಳೇನ ಬ್ಯಾರೆಯಿತ್ತು. ಅಂತಹಾ ಹುಡುಗೇರು ಮುಂದ ಈ ಮಠಕ್ಕ ಬಂದೇಯಿಲ್ಲ. ಅದಕ್ಕನೊ ಏನೋ ಜನಾ ಇನ್ನೂ ಅವರಿಬ್ಬರನೂ ನೆನಸತಾರ.                

ಇಬ್ಬರದೂ ಒಮ್ಮಿಗೇ ಲಗ್ನ ಆತು. ಮಠದಾಗ ಆದ ಸಾಮಾನ್ಯ ಲಗ್ನ ಮುಕ್ತಾಂದು. ಹುಡುಗ ಅಕೀ ಅಪ್ಪನಂಗ ಮಾಸ್ತರು, ಆದರ ಹೈಸ್ಕೂಲಿನ್ಯಾಗ ಮಾಸ್ತರು. ಅವತ್ತ, ತಾವು ಸ್ವಾಮಿಯಾದರೂ ಅವತ್ತ ಅವರ ಮನಸು ತುಸು ವಿಚಲಿತ ಆಗಿದ್ದು ಖರೇ. ಸಾವಿರ ಜಪ ಜಾಸ್ತಿ ಮಾಡಿ, ನೂರು ವಚನಾ ಜಾಸ್ತಿ ಓದಿ, ಮನಸು ತಿರಿಗಿ ಲಿಂಗ ಪೂಜಾದಾಗ ನೆಟ್ಟಿದ್ದೆ. ಅರಶಿನದ ನೀರು ಹಕ್ಕೊಂಡು, ಕೆಂಪು ಬನಾರಸೀ ಸೀರಿ ಉಟಗೊಂಡು, ಮಲ್ಲಿಗೀ ದಂಡಿ ಮುಡಕೊಂಡು, ತಾಳಿ ಕಟ್ಟೋಕಿಂತ ಮದಲ, ಸನಮಾಡಾಕ ಬಂದ ಮುಕ್ತಾನ ಕಣ್ಣಾಗಿನ ಬೆಳಕು ನೋಡಿದವರಿಗೆ, ಜೀವನಾ ಸಾಗಸಲಿಕ್ಕೆ ಇಂತಾ ಬೆಳಕು ಸಾಕು. ಕತ್ತಲಿನ ಜೀವಾ ಬೆಳಕಿಗೆ ಎಳೀತದ. ಸೂರ್ಯ ಚಂದ್ರರ ಹಾದೀ ಕಾಯೂದೂ ಬ್ಯಾಡ ಅನಸತಿತ್ತು.               

ಆದರ ಗೌಡರ ಮಗಳ ಮದುವಿ ಇನ್ನೊಂದೂರು ಗೌಡರ ಮಗನ ಜೊತೀಗೆ. ಅವರು ಇವರಿಗಿಂತ ಒಂದು ಕೈ ಜಾಸ್ತೀನ ಇದ್ದವರು. ಬರೇ ಊರ ಗೌಡರಷ್ಟೇ ಅಲ್ಲ. ರಾಜಕೀಯದಾಗೂ ಹೆಸರು ಮಾಡಿದ ಮನೆತನ. ಆ ವರ್ಷ ವಿಧಾನ ಸಭಾ ಚುನಾವಣೆಯೊಳಗೂ ನಿಲ್ಲವರಿದ್ದರಂತ. ಇಡೀ ಎರಡೂರ ಜನಾ ಬಂದಿದ್ದರು ಮದವೀಗೆ. ಗೌಡರ ಮಗಳು, ಎರಡೂ ಮನೀಯವರ ಮುಯ್ಯ ಮಾಡಿದ ದಾಗೀನದಾಗ ಮುಣುಗಿ ಹೋಗಿದ್ದರು ಮದುಮಕ್ಕಳು.               

ಆದರ, ಮುಂದ ಎರಡ ವರ್ಷದಾಗ ಏನೆಲ್ಲಾ ಬದಲಾಗಿತ್ತು. ಬದಲಾವಣೆ ಜಗದ ನಿಯಮ. ಖರೆ. ಆದರ ಎಲ್ಲಾರಿಗೂ ಬರೇ ಸುಖಾನ ಇರೂದಿಲ್ಲ ಅನ್ನೋದು ಖರೆ. ಆದರೂ ಅವಶ್ಯಕತಾ ಇದ್ದವರಿಗೆ ಅವಕಾಶ ಕೊಡ ಬೇಕು ಈ ಜೀವನಾ. ಅರ್ಹರನ್ನ ಕಾಲಾಗ ಹಾಕಿ ತುಳೀ ಬಾರದು. ಮಹಾ ಭಾರತದ ಕರ್ಣನಂಗ ಬರೇ ಅಭಿಮಾನ ಬಿಟ್ಟು ಜೀವನ ಪೂರ್ತಿ ಬದುಕಲಿಕ್ಕೆ ಯಾರಿಗೂ ಆಗೂದಿಲ್ಲ. ಕಷ್ಟದ ನಂತರ ಸುಖಾ ಸುಖದ ನಂತರ ಕಷ್ಟಾ ಎಲ್ಲಾರಿಗೂ ಬರೋದ. ಆದರ ಕಷ್ಟದ ನಂತರ ಮತ್ತಷ್ಡು ಕಷ್ಟ, ಅದರ ನಂತರ ಭಾಳ ಕಷ್ಟ ಬಂದರ ಬದುಕೋದಾರೂ ಹ್ಯಾಂಗ. ಕಪ್ಪಂಚಿನ ಮೋಡದ ತುದೀಗೆ ಕಾಣೋ ಬೆಳ್ಳಿ ಗೆರೀ ಅನ್ನೂ ಆಶಾ ಆಗಲೀ, ನಂಬಿಕಿ ಆಗಲೀ ಮೂಡೋ ಅವಕಾಶವೇ ಇಲ್ಲಾಂದರ, ಯಾವ ಗುರಿ ಬೇಕು ಬದುಕಲಿಕ್ಕೆ.                 

ಕೆಲವರಿಗೆ ಮಾತ್ರ ಸುಖಾ. ಅದರ ನಂತರ ಹೆಚ್ಚು ಸುಖಾ…..  ಬರತಾವಂತ. ಹಂಗ, ಅಕ್ಕಮ್ಮ ಕಾಲಿಟ್ಟ ಮನ್ಯಾಗ, “ ಆ ವರ್ಷ ಇಲೆಕ್ಷನ್ನಕ್ಕ ಗೌಡರ ಬದಲೀಗೆ ಮಗಾ ನಿಲ್ಲತಾನಂತ ” ಅಂತ ಅಂದರು ಮಂದಿ. ಆದರ ಅದು ಮೀಸಲು ಕ್ಷೇತ್ರ. ಹೆಣ್ಣು ಮಕ್ಕಳಿಗೆ ಮೀಸಲು ಅಂತ ಸರ್ಕಾರ ನಿಗದಿ ಮಾಡಿದ್ದಕ್ಕ, ಗೌಡರ ಮನಿ ಸೊಸಿ, ಅಕ್ಕಮ್ಮನ ಇಲೆಕ್ಷನ್ನಕ್ಕ ನಿಂತು ಗೆದ್ದು ಬಂದಿದ್ದಳು. ಈಗ ಮಂತ್ರೀನು ಆದಳು ಶ್ರೀಮತಿ ಅಕ್ಕ ಮಹಾದೇವಿ ಗೌಡರ್ ಅಂತ. ಛಂದಾಗಿ, ನಾಕು ಮಾತಾಡಲಿಕ್ಕೆ ಹೆದರೋ ಅಕ್ಕಮ್ಮ ಈಗ ದಿನಾ ಪತ್ರಕರ್ತರನ್ನ ಮನೀಗೆ ಕರಿಸಿ, ಪ್ರೆಸ್ ಮೀಟ್ ಮಾಡತಾಳು. ಬಿತ್ತೋ ಬೀಜಕ್ಕ, ಒಳ್ಳೆಯ ಸಾರಯುಕ್ತ ಮಣ್ಣು, ಕೊರತೆಯಿಲ್ಲಧಂಗ ನೀರು, ಸೂರ್ಯಾನ ಬೆಳಕು ಸಿಕ್ಕರ ಬೀಜ ತನ್ನ ಶಕ್ತಿ ಮೀರಿ ಬೆಳಿತದ. ಕಣ್ಣು ತುಂಬೋ ಹಂಗ ಫಲಾ ಕೊಡತದ.                

ಹೈಸ್ಕೂಲ ಮಾಸ್ತರನ ನೂರಾ ಎಂಟು ಚಟಕ್ಕ, ರೋಗಾ ಹಚಗೊಂಡು, ಅವನ ಕುಡುಕತನಾ, ಆ ಹೊಡತಾ ತಾಳಲಾರದ ಎರಡು ದಿನ ತೌರಿಗೆ ಬಂದ ಮುಕ್ತಾನ ನೋಡಿದರ ಹೆದರಿಕೆ ಆಗೋ ಹಂಗಿತ್ತು. ರಾತ್ರಿ ಮಂಗಳಾರತಿಗೆ, “ ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದರೇನೋ,  ಶಿವ ಶಿವಾ, ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ; ಆ ಪೂಜೆಯು, ಆ ಮಾಟವು ಚಿತ್ರದ ರೂಹು ಕಾಣಿರಣ್ಣ ! ಚಿತ್ರದ ಕಬ್ಬು ಕಾಣಿರಣ್ಣ! ಅಪ್ಪಿದರೆ ಸುಖವಿಲ್ಲ, ಮೆಲಿದರೆ ಸವಿಯಿಲ್ಲ; ಕೂಡಲಸಂಗಮದೇವ, ನಿಜವಿಲ್ಲದವನ ಭಕ್ತಿಯಿಂತುಟು! ” ಹಾಡಿದ ವಚನಾನ ಕಡೇ ವಚನಾ. ಅವತ್ತ, ಮಂಗಳಾರತೀ ಮುಗಿಸಿಕೊಂಡು, ಮಠದಿಂದ ಮನೀಗೆ ಹೋಗಲಿಕ್ಕೂ ಅವಕಾಶ ಕೊಡದ, ಕುಡುದು ಬಂದು ಗದ್ದಲಾ ಮಾಡಿ, ಮುಕ್ತಾನ್ನ ಅವರೂರಿಗೆ ಕರಕೊಂಡು ಹೋದನಂತ. ಅದ ರಾತ್ರಿ ಪೂರಾ ಅನಬಾರದ್ದು ಎಲ್ಲಾ ಬೈದನಂತ. ಬೇರೆಯಾರರೆ ಏನು ಅಂದರೂ ಗಂಡನ ಮುಂದ ಹೇಳಿ ಸಮಾಧಾನ ಮಾಡಕೋಬಹುದು. ಗಂಡನ ಹಿಂಗಂದರ? ಹೆಣ್ಣು ಮಕ್ಕಳಿಗೆ ಶಿವಾ ಜೀವನದಾಗ ದೊಡ್ಡ ಶಿಕ್ಷಾ ಕೊಟ್ಟಾನ ಅಂದರ, ಕೆಟ್ಟ ಗಂಡನ ಕೊಡತಾನಂತ. ಆದರ ಈ ಹುಡುಗೀಗೆ ಸಮಾಧಾನ ಮಾಡಲಿಕ್ಕೆ ಅತ್ತ ಅತ್ತೀ ಮಾವನೂ ಇಲ್ಲ. ಇತ್ತ ಜೀವನದಾಗ ಆಶಾ ಮೂಡಲಿಕ್ಕೆ ತನ್ನದೂಂತ ಒಂದು ಕೂಸೂ ಇಲ್ಲ. ಮುಂದ ದಾರೀನ ಇಲ್ಲದವಂಗ, ಗುರಿ ಸೇರಲಿಕ್ಕೆ ಹೆಂಗ ಸಾಧ್ಯ. ರೊಕ್ಕದಿಂದ ಸುಖಾ ಪಡಕೋ ಬಹುದಾಗಿತ್ತೇನೋ? ಅಪ್ಪ, ಮಾಸ್ತರ ಹತ್ರ ರೊಕ್ಕಕ್ಕೂ, ಧಾಡಸೀತನಕ್ಕೂ, ಎರಡಕ್ಕೂ ಬರಗಾಲ. ಸಾಧು ಪ್ರಾಣಿ. ಕೊಟ್ಟ ಹೆಣ್ಣು ಕುಲಕ್ಕ ಹೊರಗ. “ ನೀನ ಹೊಂದಿಕೋ ಮಗಳ ಅಂದಿರ ಬೇಕು “ ಮಗಳಿಗೆ.                

ಆಶಾನ ಇಲ್ಲದಿದ್ದರೂ ಬದುಕು ಅಂದರ ಹೆಂಗ ಸಾಧ್ಯ. ತನ್ನ ನಿರ್ಧಾರ ತಾನ ತೊಗೊಂಡಳು ಮುಕ್ತಾ. ಮುಂದ ಮರ ದಿನಾನ ಪ್ರಾಣ ಬಿಟ್ಟಳಂತ. ಜೀವನದ ಹಾದಿಯೊಳಗ, ಹೊಟ್ಟಿ ತುಂಬ ಊಟ. ಮೈ ತುಂಬ ಬಟ್ಟಿ. ಮನಸಿನ ತುಂಬ ಕನಸು. ಬಯಸಿದರಲ್ಲ ಮುಂದ ಸಾಗೋದು ಜೀವನದ ಬಂಡಿ. ಯಾವುದೂ ಇಲ್ಲಾಂದರ, ಬದುಕೋದರ ಯಾಕ? ಅನಸಿರ ಬೇಕು ಅಕೀಗೆ.               

ಗಂಡನ ಹೊಡತ ಕಿವೀಗೆ ಏಟು ಬಿದ್ದಿತ್ತು. ರಕ್ತ ಬಂದು, ಎಚ್ಚರ ತಪ್ಪಿ ಬಿದ್ದಿದ್ದ ಹುಡುಗೀನ್ನ, ಎತ್ತಿ ಡಾಕ್ಟರಿಗೆ ತೋರಸೋದು ಬಿಟ್ಟು, ಮತ್ತ ಕುಡುದು ಬಂದಿದ್ದನಂತ ಅಕೀ ಗಂಡಾ. ಆಜೂ ಬಾಜುದವರು ನೋಡಿ, ಮಾಸ್ತರಿಗೆ ಸುದ್ದಿ ಕಳಿಸಿದ್ದರಂತ. ಮುಕ್ತಾನ ಹೆಣದ ಮುಂದನೂ ಕುಡುದು ಒದರಿಕೋತನ ಕೂತಿದ್ದ ಗಂಡಾ ಅಂದರು ಊರವರು. ಊರ ಮಂದಿ ಎಲ್ಲಾ ಮಮ್ಮಲ ಮರುಗಿದರು. ತನ್ನಂತಹವರಿಗೆ ಇದು ಸರಿಯಾದ ಜಾಗಾ ಅಲ್ಲ. ಇಲ್ಲಿರೋದು ಬ್ಯಾಡ.  ಕೈಲಾಸದಾಗ ಶಿವನ ಪಾದಕ್ಕ ಸೇರೋಣ ಅಂತ ಹೊರಟಳು ಅನಸತದ.  “ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲ ಬಾರದು. ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ, ತಂದೆ ಕೂಡಲ ಸಂಗಮ ದೇವ, ನೀ ಹುಟ್ಟಿಸಿ ಜೀವನ ಭವ ದುಃಖಿಯ ಮಾಡಿದ ಬಳಿಕ. ಬಿಡಿಸುವರಾರುಂಟು?” ಅಂದಳು, ಆ ಶಿವನ ಪಾದ ಸೇರಿದಳು.   

ಮುಡಿದಿದ್ದ ಮಲ್ಲಿಗೀ ದಂಡೀನ ಜೊಪಾನ ಮಾಡದ ಹಿಂಡಿ ಕಾಲಾಗ ಹಾಕಿ ಹೊಸಕ್ಯಾಡಿತ್ತು ಜೀವನಾ.               

ಅರಳುವ ಮಲ್ಲಿಗೀ ಹೂವು ಬಿಡೋ ಗಿಡಕ್ಕ ಸರಿಯಾದ ನೀರು ಗೊಬ್ಬರದ ಪೋಷಣೆ ಸಿಕ್ಕರ ಅದು ಅಕ್ಕಮ್ಮನಂಗ ತನ್ನ ಶಕ್ತಿ ಮೀರಿ ಬೆಳೀತದ. ಕುಪೋಷಣೆಯಾದರ ಅದು ಕೈಯಾಗಿನ ಮಲ್ಲಿಗಿ ದಂಡೀ ಹಿಂಡಿದಂಗ ಮುಕ್ತಾನ ಜೀವನಾ ಆಗತದ. ಆದರ ಎರಡೂ ಫಲ ಒಂದ ದಿನ ನೋಡಲಿಕ್ಕೆ ಸಿಕ್ಕಂತಹ ನನ್ನಂತಾ ಸ್ವಾಮಿಗಳಿಗೆ ಯಾವ ಭಾವ ಮೂಡಬೇಕು? ಮನದಾಗ ಮುಕ್ತಾನ ದುಃಖ ಇದ್ದರೂ, ಮಠದ ತುಂಬಾ ಅಕ್ಕಮ್ಮನ ಸ್ವಾಗತದ ತಯಾರಿನಡೆದದ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x