ಅನಿಲ್ ರೇವೂರ ಅವರ ಪಂಚಾವರಂ: ನಟರಾಜು ಎಸ್. ಎಂ.

Nataraju S M

ಇಸವಿ 2014 ರಲ್ಲಿ ಮಹದೇವಣ್ಣನ ಆಹ್ವಾನ ಸ್ವೀಕರಿಸಿ ಸಂಸ ಬಯಲು ರಂಗಮಂದಿರದಲ್ಲಿ ಗೆಳೆಯ ಹನುಮಂತ ಹಾಲಗೇರಿ ವಿರಚಿತ "ಊರ ಸುಟ್ಟರೂ ಹನುಮಪ್ಪ ಹೊರಗೆ" ನಾಟಕ ನೋಡಿ ಬೆರಗಾಗಿದ್ದೆ. ಆ ದಿನ ಮಹದೇವಣ್ಣ (ಮಹಾದೇವ ಹಡಪದ) ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಅನಿಲ್ ರೇವೂರ ಅವರ ಪರಿಚಯ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಎಫ್ ಬಿ ಯಲ್ಲಿ ಅನಿಲ್ ಗೆಳೆಯರಾದರು. ಇಸವಿ ಎರಡು ಸಾವಿರದ ಹದಿನಾರರಲ್ಲಿ ಅನಿಲ್ ನಿರ್ದೇಶನದ ನಾಟಕಕ್ಕೆ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂಬ ಸುದ್ದಿ ಓದಿದಾಗ ಚಕಿತಗೊಂಡಿದ್ದೆ. ಆ ನಾಟಕವನ್ನು ನಮ್ಮದೇ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ್ದರು. ಆ ನಾಟಕದ ಹೆಸರು ಕಂಬಾಲಪಲ್ಲಿ. ಕಂಬಾಲಪಲ್ಲಿ ನಾಟಕ ಬೆಂಗಳೂರಿನಲ್ಲಿ ಮರುಪ್ರದರ್ಶನವಿದ್ದಾಗ ಸಮಯದ ಅಭಾವದಿಂದ ಹೋಗಿರಲಿಲ್ಲ. ಮೊನ್ನೆ ಮೊನ್ನೆ ಎಫ್ ಬಿ ಯಲ್ಲಿ ಅನಿಲ್ ರೇವೂರ್ ನಿರ್ದೇಶನದ ಪಂಚಾವರಂ ನಾಟಕ ಇದೆ ಎಂದಾಗ ಯಾಕೋ ಈ ನಾಟಕದ ಶೋ ಅನ್ನು ಮಿಸ್ ಮಾಡಿಕೊಳ್ಳಬಾರದು ಅನಿಸಿತ್ತು.

ಮೊನ್ನೆ ಹದಿನೈದರ ಸಂಜೆ ಆಫೀಸ್ ಕೆಲಸ ಮುಗಿಸಿ ಮೆಜೆಸ್ಟಿಕ್ ಬಳಿ ಬಸ್ ಹತ್ತಿದಾಗ ಸಮಯ 6.51 ಆಗಿತ್ತು. ಏಳು ಗಂಟೆಗೆ ಇರುವ ಶೋಗೆ ಬಹುಶಃ ಹೋಗೋಕೆ ಆಗಲ್ಲ ಅಂದುಕೊಂಡು ಬಸ್ ನಲ್ಲಿ ಕುಳಿತವನಿಗೆ ಅಚ್ಚರಿಯೇ ಕಾದಿತ್ತು. ಮೆಜೆಸ್ಟಿಕ್ ನಿಂದ ಟೌನ್ ಹಾಲ್ ತಲುಪಲು ಬಿಎಂಟಿಸಿ ತೆಗೆದುಕೊಳ್ಳುವ ಸಮಯ ಕಡಿಮೆ ಎಂದರೂ ನಲವತ್ತೈದು ನಿಮಿಷ. ಆದರೆ ನಾನು ಕೇವಲ ಹತ್ತು ನಿಮಿಷದಲ್ಲಿ ಟೌನ್ ಹಾಲ್ ತಲುಪಿದ್ದೆ. ಅಲ್ಲಿಂದ ವಾಕ್ ಮಾಡಿಕೊಂಡು ರವೀಂದ್ರ ಕಲಾಕ್ಷೇತ್ರ ತಲುಪಿದಾಗ ಯಾರೋ ಹುಡುಗ ಕಲಾಕ್ಷೇತ್ರದ ಎದುರು ಪಂಚಾವರಂ ನಾಟಕದ ಬ್ರೋಚರ್ ಕೈಗಿತ್ತ. “ಯಾವೂರಪ್ಪ?” ಅಂದೆ. “ಬೆಂಗಳೂರು ಸರ್” ಎಂದ. “ನಾಟಕ ಶುರುವಾಗಿ ಎಷ್ಟೊತ್ತು ಆಯಿತು?” ಎಂದೆ. “ಐದು ನಿಮಿಷ ಆಗಿದೆ ಬೇಗ ಹೋಗಿ ಸರ್” ಅಂದ. ಅವನು ಕೊಟ್ಟ ಬ್ರೋಚರ್ ಹಿಡಿದು ಒಳ ಹೊಕ್ಕು ಮುಂದಿನ ಸೀಟುಗಳ ನನ್ನ ಇಷ್ಟದ ಮೂರನೇ ರೋನಲ್ಲಿ ಹೋಗಿ ಕುಳಿತೆ. ಮೂರನೇ ರೋನ ಅದೇ ಕುರ್ಚಿ ಯಾಕೆ ಇಷ್ಟ ಆಗುತ್ತೆ ಅಂತ ಇವತ್ತಿಗೂ ಗೊತ್ತಿಲ್ಲ. ಮೊನ್ನೆ ಮೊನ್ನೆ ಪ್ರೇಮಿಗಳ ದಿನದ ದಿನ ಮೊದಲ ಬಾರಿಗೆ ಆ ಕುರ್ಚಿಯಲ್ಲಿ ಕುಳಿತಿದ್ದೆ. ಅಪ್ ಕೋರ್ಸ್ ಒಬ್ಬನೇ. ಆದರೆ ನನ್ನ ಜೊತೆ ನನ್ನ ಜೀವವೂ ಕೂಡ ಕುಳಿತ ಹಾಗೆ ಭಾಸವಾಗಿದ್ದ ಆ ಭಾವಕ್ಕೋ ಏನೋ ಇವತ್ತಿಗೂ ಆ ಕುರ್ಚಿ ಅಂದರೆ ಒಂತರಾ ಇಷ್ಟ.

panchavaram

ನನ್ನಿಷ್ಟದ ಕುರ್ಚಿಯಲ್ಲಿ ಆಸೀನನಾದ ಮೇಲೆ ರಂಗ ಮಂಚದ ಮೇಲೆ ಅಗಲವಾದ ಕಿವಿಯ ಹೂವಿನ ಅಲಂಕಾರದ ಕಿರೀಟ ತೊಟ್ಟ ಬರೀ ಮೈಯ್ಯ ಕಚ್ಚೆದಾರಿ ವಿನಾಯಕ ಮತ್ತು ಕೆಂಪು ಪೇಟಾಧಾರಿ ಬಿಳಿ ವಸ್ತ್ರ ತೊಟ್ಟ ಸಾರಥಿ ನಡುವಿನ ಸಂಭಾಷಣೆ ನಡೆಯುತ್ತಿತ್ತು. ಹಿನ್ನೆಲೆಯಲ್ಲಿ ಅರುಣ್ ಭಟ್ಟರ ಥಾಂತಕಿಟತ ಧೀಂತಕಿಟತ ಅನ್ನೋ ಥರದ ಚಂದದ ಸಂಗೀತ ಕೇಳಿಸ್ತಾ ಇತ್ತು. ವಿನಾಯಕ ಮತ್ತು ಸಾರಥಿ ಪರಸ್ಪರ ತಮ್ಮನ್ನು ಪರಿಚಯ ಮಾಡಿಕೊಳ್ಳುವ ಹಾಸ್ಯ ಪ್ರಧಾನ ದೃಶ್ಯಗಳಿಂದ ಪ್ರಾರಂಭವಾದ ನಾಟಕ ಅಲ್ಲಿಂದ ಕರೆದೊಯ್ದಿದ್ದು ಪಂಚಾವರಂ ಎಂಬ ಕಾಡಿನಲ್ಲಿ ವಾಸಿಸುವ ಕಾಡುಜನರ ಹಾಡಿಗೆ. ಅಲ್ಲಿಯ ಜನರ ಬದುಕು ಬವಣೆಗಳ ವಿನಾಯಕನಿಗೆ ಪರಿಚಯಿಸುವ ಇರಾದೆಯಿಂದ ಸಾರಥಿ ಅಲ್ಲಿಗೆ ಕರೆದೊಯ್ದಾಗ ಮೊದಲಿಗೆ ಕಾಡಿನ ಆ ಹಾಡಿಯಲ್ಲಿ ನಮಗೆ ಕಾಣಸಿಕ್ಕ ಪಾತ್ರ ರಾಮಭಾನು ಎಂಬ ಅಜ್ಜನದು. ಈ ಅಜ್ಜನೇ ಒಂದರ್ಥದಲ್ಲಿ ಈ ನಾಟಕದ ಸ್ತ್ರೀ ಪಾತ್ರಗಳ ನೋವಿನ ಬದುಕ ಕಾರಣಕರ್ತನಾಗುತ್ತನೇನೋ ಎನ್ನುವುದು ಮೊದಲಿಗೆ ತಿಳಿಯುವುದೇ ಇಲ್ಲ.

ಮೊದಮೊದಲ ಈ ದೃಶ್ಯಗಳನ್ನು ನೋಡುತ್ತಿರುವಾಗ ಏನಿದು ಬೆಳಕನ್ನು ಇಷ್ಟೊಂದು ಬ್ರೈಟ್ ಮಾಡಿಟ್ಟಿದ್ದಾರಲ್ಲ ಎಂದುಕೊಳ್ಳುತ್ತಿರುವಾಗಲೇ ದೊಡ್ಡ ಡೊಳ್ಳು ಬಡಿಯುವ ಇಬ್ಬರ ಆಗಮನವಾಗುತ್ತದೆ. ಕೆಂಪು, ನೀಲಿ ಹಸಿರು ಬಣ್ಣ ಮಿಶ್ರಣದ ಬೆಳಕಿನ ರಂಗಿನಾಟದಲ್ಲಿ ಮೂಡುವ ಡೊಳ್ಳಿನ ಕುಣಿತ ನಂತರದ ದೇವರ ಪೂಜೆ ಆ ಹಾಡಿಯ ಅಷ್ಟೂ ಜನ ಪಾತ್ರಧಾರಿಗಳನ್ನು ತೆರೆಯ ಮೇಲೆ ತಂದು ನಿಲ್ಲಿಸುತ್ತೆ. ಈ ಜಾತ್ರೆಗೆ ಆಗಮಿಸುವ ಸಾರಥಿ ಮತ್ತು ವಿನಾಯಕ ಈ ದೃಶ್ಯದಲ್ಲಿ ಕ್ರಮವಾಗಿ ಪುಂಗಣ್ಣ ಮತ್ತು ಮಂಗಣ್ಣನಾಗಿರುತ್ತಾರೆ. ಜಾತ್ರೆ ನಡೆಯುವಾಗ ಸಾರಥಿ ಅಲಿಯಾಸ್ ಪುಂಗಣ್ಣನಿಗೆ ಮೈಮೇಲೆ ದೇವರು ಬಂದು ಆ ಹೆಣ್ಣು ಜೀವಗಳು ಅನುಭವಿಸಿದ ನೋವಿನ ಕತೆ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಕಾಡಿನ ಮಕ್ಕಳಾಗಿ ಕಾಡಿನಲ್ಲಿ ರಾಜರಂತೆ ತಮ್ಮ ಬದುಕನ್ನು ಕಟ್ಟಿಕೊಂಡು ಬದುಕುವ ಜನರಿಗೆ ಸರ್ಕಾರ ಕಾಡಿನ ಒಳಗೆ ಹೋಗಲು ಅಪ್ಪಣೆ ಕೊಡದಿದ್ದಾಗ ಹೇಗೆ ಅವರ ಆರ್ಥಿಕ ಪರಿಸ್ಥಿತಿ ಬದಲಾಗಿ ಅವರ ಬದುಕು ಬದಲಾಯಿತು ಎನ್ನುವ ಫ್ಲಾಸ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ಆ ಫ್ಲಾಸ್ ಬ್ಯಾಕ್ ಕತೆಯ ಪ್ರಮುಖ ಮನೆಹಾಳ ಎಂದರೆ ಮುಕಡ್ಯಾರಾಮ್ಯಾ.

ಈ ಮುಕಡ್ಯಾರಾಮ್ಯಾನ ಮಾತಿಗೆ ಮರುಳಾಗಿ ರಾಮಭಾನು ಅಜ್ಜನ ಜೊತೆ, ಪುಣೆಯಲ್ಲಿ ಬದುಕು ಕಟ್ಟಿಕೊಳ್ಳಲು ಬರುವ ರಾಮಭಾನುವಿನ ಸೊಸೆಯರಾದ ತುಳಜಾಬಾಯಿ ಮತ್ತು ಜಮೀಲ ಬಂದು ಸೇರುವುದು ಲಕ್ಷ್ಮೀಬಾಯಿ ಎಂಬ ವೇಶ್ಯೆಯ ಮನೆಯನ್ನು. ಲಕ್ಷ್ಮೀಬಾಯಿಯ ಮನೆಯಲ್ಲಿ ಏನೇನು ಕೆಲಸವಿರುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಬೆಚ್ಚುವ ತುಳಜಾಬಾಯಿ ರಾಮಭಾನುವಿನ ಜೊತೆ ಊರಿಗೆ ವಾಪಸ್ಸಾಗುವ ಮನಸ್ಸು ಮಾಡಿದರೆ  ಆ ಅಜ್ಜ ಎಮೋಷನಲ್ ಬ್ಲಾಕ್ ಮಾಡಿ ಜಮೀಲ ಅಲ್ಲೇ ಉಳಿಯುವಂತೆ ಮಾಡುತ್ತಾನೆ ಜೊತೆ ಮುಕಡ್ಯಾ ಇದಕ್ಕೆ ಸಾಥ್ ನೀಡುತ್ತಾನೆ ಸಹ. ಹೀಗೆ ಮನೆಯವರನ್ನು ತನ್ನ ದುಡಿಮೆಯಿಂದ ಸಾಕುವ ದರ್ದಿಗೆ ಬಿದ್ದು ತನ್ನ ಬದುಕನ್ನೇ ಬರ್ಬಾದ್ ಮಾಡಿಕೊಳ್ಳುವ ಜಮೀಲ, ಅವಳ ಜೊತೆಗೆ ಬಾಡಿಗೆ ಗಂಡನಾಗುವ ಯಾವುದೋ ರೌಡಿ, ಅವನಿಗೆ ಅವಳ ಮೇಲಿನ ಮೋಹ ಅವನದೇ ಕಾರಣಕ್ಕೆ ಅವಳು ಊರಿಗೆ  ವಾಪಸ್ಸಾಗಬೇಕಾದ ಅನಿವಾರ್ಯತೆ ಎಲ್ಲವೂ ಎರಡು ದೃಶ್ಯದಲ್ಲಿ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ನಂತರದ ದೃಶ್ಯಗಳಲ್ಲಿ ಮುಕಡ್ಯಾನ ಮತ್ತೊಂದಷ್ಟು ಮನೆಹಾಳು ಐಡಿಯಾಗಳು ಮತ್ತು ಅದಕ್ಕೆ ಮೊದಲಿಗೆ ಒಪ್ಪದ ಮನೆ ಗಂಡಸರು ಮತ್ತು ಅಜ್ಜ, ನಂತರ ಮನೆ ಹೆಣ್ಣುಮಕ್ಕಳು ಒಪ್ಪಿದರೆ ಆಯಿತು ಎನ್ನುವ ಅಜ್ಜನ ಮಾತು ಎಲ್ಲವೂ ಮತ್ತೊಮ್ಮೆ ಆ ಹಾಡಿಯ ಹೆಣ್ಣುಮಕ್ಕಳನ್ನು ಮತ್ತೊಂದು ನರಕಕ್ಕೆ ತಳ್ಳುತ್ತದೆ. ತಾವು ಬಸಿರಾಗಿ ಹುಟ್ಟುವ ತಮ್ಮ ಮಕ್ಕಳನ್ನೇ ಇನ್ಯಾರೋ ಮನೆಹಾಳರ ಕೈಗೆ ಗೊತ್ತಿಲ್ಲದೇ ಕೊಟ್ಟುಬಿಡುವುದರೊಂದಿಗೆ ಆ ಮಕ್ಕಳು ಏನಾದವು ಎಂದು ತಿಳಿದು ಕೊರಗಿ ಮುಕಡ್ಯಾನಿಗೆ ಹಾಡಿಯ ಹೆಂಗಸರು ಹೊಡೆಯುವುದರೊಂದಿಗೆ ನಾಟಕ ಕೊನೆಯಾಗುತ್ತದೆ.

ಸರ್ಕಾರದ ಕಾಡಿನ ನೀತಿಯ ಕಾರಣಕ್ಕೆ ಈ ಕಥಾವಸ್ತು ಈ ಘಳಿಗೆಯಲ್ಲಿ ಎಷ್ಟು ಪ್ರಸ್ತುತ ಎಂಬುದು ಚರ್ಚಾಸ್ಪದ ವಸ್ತುವಾದರೂ ಕಾಡಿನ ಹಾಡಿಯ ಆ ಒಂದು ಹೆಣ್ಣಿನ ಸಂಪಾದನೆ ಇಡೀ ಕುಟುಂಬವನ್ನೇ ಸಾಕಿತಾ? ಆ ಇಡೀ ಕುಟುಂಬದ ಗಂಡಸರು ಯಾವ ಕೆಲಸವನ್ನೂ ಮಾಡದೆ ಊರಿನಲ್ಲಿ ಉಳಿದುಬಿಟ್ಟರಾ? ವೇಶ್ಯಾವೃತ್ತಿ, ಮಕ್ಕಳ ಮಾರಾಟ ಎಷ್ಟರ ಮಟ್ಟಿಗೆ ವರ್ತಮಾನದಲ್ಲಿ ಚಾಲ್ತಿಯಲ್ಲಿದೆ? ಎಂಬ ಪ್ರಶ್ನೆಗಳು ನಮ್ಮ ಮನಃಪಟಲದಲ್ಲಿ ಬಂದು ಹೋಗುತ್ತವೆ. ಕಾಡಿನ ಹಾಡಿ ಎನ್ನುವುದ ಮರೆತು ಒಂದು ಹಳ್ಳಿಯ ಜನರ ಬದುಕು ಇದು ಎಂದುಕೊಂಡರೂ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅನಿವಾರ್ಯತೆಗಳು ಈಗ ಬಹಳ ಅವಶ್ಯಕ. ನಾಟಕಗಳು ಸಮಸ್ಯೆಗಳಿವೆ ಎಂಬುದನ್ನಷ್ಟೇ ಬಿಂಬಿಸುತ್ತವೆಯಾ ಹೊರತು ಅವುಗಳಿಗೆ ಪರಿಹಾರ ಹೇಗೆ ಸಿಗುತ್ತದೆ ಎಂಬುದನ್ನು ರಂಗದ ಮೇಲೆ ಬಹುಶಃ ಹೆಚ್ಚು ಜನ ತರಲು ಇಚ್ಚಿಸುವುದಿಲ್ಲವೇನೋ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ, ನಿರುದ್ಯೋಗವನ್ನು ಹೋಗಲಾಡಿಸಲು ಕೆಲವು ಸಂಘ ಸಂಸ್ಥೆಗಳು ಏನೆಲ್ಲಾ ಯೋಜನೆಗಳನ್ನು ರೂಪಿಸುತ್ತವೆ. ಅಂತಹ ರೂಪುರೇಷೆಗಳು ಸದ್ಯದ ಪರಿಸ್ಥಿತಿಯಲ್ಲಿ ಬಹಳ ಅವಶ್ಯಕ.

ಅಂದ ಹಾಗೆ ಅನಿಲ್ ರೇವೂರ್ ಅವರು ನನ್ನ ಪರಿಚಯದ ಗೆಳೆಯ ಎಂಬ ಕಾರಣಕ್ಕೆ ನಾಟಕವನ್ನು ಸುಮ್ಮಸುಮ್ಮನೆ ಹೊಗಳಿ ಅಥವಾ ತೆಗಳಿ ಬರದರೆ ತಪ್ಪಾಗುತ್ತದೆ. ಆದರೆ ಕಲ್ಬುರಗಿಯಂತಹ ಜಿಲ್ಲೆಯಿಂದ ಹತ್ತಾರು ಕಲಾವಿದರನ್ನು ಒಂದೆಡೆ ಕಲೆ ಹಾಕಿ ಅವರಿಂದ ಅಭಿನಯವನ್ನು ತೆಗೆಯುವುದು ತುಂಬಾ ಪ್ರಯಾಸದ ಕೆಲಸ. ಅಚ್ಚರಿ ಎಂದರೆ ಈ ನಾಟಕದಲ್ಲಿ ಪಾತ್ರ ವಹಿಸಿದ ಎಲ್ಲರೂ ಚಂದವಾಗಿ ಅಭಿನಯಿಸಿದರು. ವಿನಾಯಕನ ಆಂಗಿಕ ಭಂಗಿ, ಸಾರಥಿಯ ಮಾತು, ಲಕ್ಷ್ಮೀಬಾಯಿಯು ತನ್ನ ಮನೆಯಲ್ಲಿ ಮಹಾರಾಣಿಯಂತೆ ವಿರಮಿಸುವ ಠೀವಿ ಮತ್ತು ಗತ್ತು, ರಾಮಭಾನು ಅಜ್ಜನ ಎಮೋಷನಲ್ ಬ್ಲಾಕ್ ಮೇಲ್ ದೃಶ್ಯಗಳು, ಜಮೀಲ ಮತ್ತು ತುಳಜಾಬಾಯಿಯರ ನೋವು, ನಲಿವು, ಹತಾಶೆ, ಮುಕಡ್ಯಾನ ಶಕುನಿಯಂತಹ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಉಳಿದ ಪಾತ್ರದಾರಿಗಳು ಸಹ ಅಷ್ಟೇ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ ಸಹ. ಈ ನಾಟಕವನ್ನು ತಮ್ಮ ಸಂಸ್ಥೆಯ ಮೊದಲ ಪ್ರೊಡಕ್ಷನ್ ಎನ್ನುವ ಕಲಬುರಗಿ ಆರ್ಟ್ ಥಿಯೇಟರ್ ನ ಅಧ್ಯಕ್ಷರಾದ ಸುನಿಲ್ ಮಾನಪಡೆಯವರು ತಮ್ಮ ತಂಡದವರ ಜೊತೆ ಈ ಸಂಸ್ಥೆಯನ್ನು ಇನ್ನೂ ದೂರ ಸಾಗಿಸಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ. ಅದಕ್ಕೆ ಮೊದಲ ಹೆಜ್ಜೆ ಸಾಥ್ ನೀಡುರುವವರು ಗೆಳೆಯ ಅರುಣ್ ರೇವೂರ್ ಮತ್ತು ಕಥೆಗಾಗ ಮಹಾಂತೇಶ್ ನವಲಕಲ್. ಅಂದ ಹಾಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವರಾದ ಕಲಬುರಗಿ ನಿವಾಸಿ ಮಹಾಂತೇಶ್ ನವಲಕಲ್ ರವರು ಈ ನಾಟಕದ ಕರ್ತೃ. ಈ ನಾಟಕದಲ್ಲಿ ಅರುಣ್ ಭಟ್, ಕಾರ್ತಿಕ್ ಪಾಂಡವಪುರ ಸಂಗೀತ ನಿರ್ದೇಶನದ ಒಟ್ಟು ಐದು ಹಾಡುಗಳಿದ್ದು ಈ ಹಾಡುಗಳು ಸಂಗ್ರಹಯೋಗ್ಯ. ನೆರಳು ಬೆಳಕಿನ, ಬೆಳಕಿನ ಬಣ್ಣದಾಟದ ಕಟ್ಟಾ ಅಭಿಮಾನಿಯಾದ ನಾನು ಪಂಚಾವರಂನ ಬೆಳಕು ಮತ್ತು ರಂಗಸಜ್ಜಿಕೆಗೂ ಮನಸೋತೆ.

ಪಂಚಾವರಂ (ನಾಟಕ)

ರಚನೆ: ಮಹಾಂತೇಶ ನವಲಕಲ್

ವಿನ್ಯಾಸ ಮತ್ತು ನಿರ್ದೇಶನ: ಅನಿಲ್ ರೇವೂರ್

ನಿರ್ವಹಣೆ: ಸುನಿಲ್ ಕುಮಾರ ಮಾನಪಡೆ

ಪ್ರಚಾರ: ಚಂದು ಹೊನ್ನವಳ್ಳಿ

ಬೆಳಕಿನ ವಿನ್ಯಾಸ: ಸೆಲ್ವರಾಜ್

ಸಂಗೀತ: ಅರುಣ್ ಭಟ್, ಕಾರ್ತಿಕ್ ಪಾಂಡವಪುರ

ರಂಗ ಸಜ್ಜಿಕೆ: ಮಧುಸೂಧನ್ ಮೈಸೂರು

ಪರಿಕರ: ನರಸಿಂಹಯ್ಯ ಜಿ, ಸುರೇಶ್ ಖೂನಿ

ರಂಗದಮೇಲೆ

ವಿನಾಯಕ: ಅಜಿತ್ ಕುಮಾರ

ಸಾರಥಿ: ಲೋಕನಾಥ್

ರಾಮಭಾನು: ಸತೀಶ್ ಪಂಚಗೌರಿ

ಲಕ್ಷ್ಮೀಬಾಯಿ: ಜಯಶೀಲ

ಜಮೀಲಾ: ವಿದ್ಯಾ

ದಶರಥಬಾನು: ರಮೇಶ್ ಬಡಿಗೇರ್

ಅರ್ಜುನ್ ಬಾನು: ವಿಠ್ಠಲ್

ಲಕ್ಷ್ಮಣ ಬಾನು: ಅಪೂರ್ವಲಾಲ್ ನದಾಫ್

ಪಿಂಗಳಕನ್ಯ: ಆಶಾ ಬಾಗವಾಲೆ

ತುಳಜಾಬಾಯಿ: ಭಾರತಿ

ಅಹಲ್ಯಬಾಯಿ: ……….

ಮುಕಡ್ಯಾರಾಮ್ಯಾ: ಸುರೇಶ್ ಖೂನಿ

ಮೋಹನ ಸಾಳುಂಕೆ: ನರಸಿಂಹ

ಮೇಳ1: ದಿಲೀಪ್ ನಾಗೂರೆ

ಮೇಳ2: ವಿನೋದ ಹುಮನಾಬಾದಕರ್

ಮೇಳ3: ಶಿವಾನಂದ ಸಲಗರ್

ಮೇಳ4: ಚಂದು ಹೊನ್ನವಳ್ಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
5 years ago

ಧನ್ಯವಾದಗಳು ಡಾ.ನಟರಾಜ್ ಸರ್…ಮತ್ತೊಮ್ಮೆ ‘ಪಮಚಾವರಂ’ ನಾಟಕ ನೋಡಿದ ಅನುಭವ ನೀಡಿದ ಪ್ರೇಕ್ಷಕಪ್ರಭುವಿನ ರಂಗಪ್ರೀತಿಯ ಲೇಖನ… ಶುಭದಿನ

1
0
Would love your thoughts, please comment.x
()
x