ಫರಿಶ್ತಾನ ಆತ್ಮಕಥೆ: ಪ್ರಸಾದ್ ಕೆ.

prasad-naik

ಸವ್ಯಸಾಚಿ ಕಳೆದ ಮೂರು ಘಂಟೆಗಳಿಂದ ತನ್ನ ಹಸ್ತಾಕ್ಷರವನ್ನು ಒಂದರ ಹಿಂದೆ ಒಂದರಂತೆ ಪುಸ್ತಕಗಳ ಮೊದಲ ಪುಟದಲ್ಲಿ ನೀಡುತ್ತಲೇ ಇದ್ದಾನೆ. 

ಸವ್ಯಸಾಚಿ ಎಂಬುದು ಅವನ ದಾಖಲೆಗಳಲ್ಲಿರುವ ಹೆಸರು. ಅವನ ಅಭಿಮಾನಿಗಳಿಗೆ ಅವನು `ಫರಿಶ್ತಾ'. ತನ್ನ ಕಾವ್ಯನಾಮಕ್ಕೆ ತಕ್ಕಂತೆ ಎಲ್ಲರಿಗೂ ಆತ ಒಬ್ಬ ಗಂಧರ್ವ. ಮುಂಜಾನೆಯ ಒಂಭತ್ತರಿಂದ ಶುರುವಾದ ಈ ಆಟೋಗ್ರಾಫ್ ಕಾರ್ಯಕ್ರಮವು ಮುಗಿಯುವಂತೆಯೇ ಕಾಣುತ್ತಿಲ್ಲ. ಕ್ಯಾಮೆರಾದ ಮಿಂಚುಗಳು ಆಗಾಗ ಚಕ್ಕನೆ ಹೊಳೆದು ಮರೆಯಾಗುತ್ತಿವೆ. ಸವ್ಯ ಮೊದಮೊದಲು ಕೂತಲ್ಲಿಂದಲೇ ತನ್ನ ಅಭಿಮಾನಿಗಳನ್ನು ಸಂಕ್ಷಿಪ್ತವಾಗಿ ಮಾತನಾಡಿಸುತ್ತಾ, ಮುಗುಳ್ನಗುತ್ತಾ ಪುಸ್ತಕಗಳಿಗೆ ಹಸ್ತಾಕ್ಷರವನ್ನು ದಯಪಾಲಿಸುತ್ತಿದ್ದನಾದರೂ ಒಂದು ಘಂಟೆಯ ಬಳಿಕ ಸಾಕಪ್ಪಾ ಈ ಜಂಜಾಟ ಎಂದನ್ನಿಸತೊಡಗಿತ್ತು. ನಂತರ ತನ್ನ ತಲೆಯನ್ನೇ ಎತ್ತದೆ ಎದುರಿಗೆ ಬಂದ ಪುಸ್ತಕಗಳಿಗೆಲ್ಲಾ ನಿಷ್ಠೆಯಿಂದ ಆಟೋಗ್ರಾಫ್ ಕೊಡುತ್ತಾ ಹೋಗಿದ್ದ ಸವ್ಯ. ಆದರೆ ಆ ಒಂದು ದನಿಯೊಂದು ಆತನನ್ನು ತಲೆಯೆತ್ತಿ ನೋಡುವಂತೆ ಮಾಡಿತ್ತು. 

“ಓದುಗರನ್ನು ಅಷ್ಟೊಂದು ಅಳಿಸಬಾರದು. ಪುಟಗಳು ಒದ್ದೆಯಾದರೆ ಕಷ್ಟವಲ್ಲವೇ?'', ಎಂದು ಕೇಳಿತ್ತು ಒಂದು ಹೆಣ್ಣುದನಿ. ಇದ್ಯಾರಪ್ಪಾ ಎಂದು ತಲೆಯೆತ್ತಿ ನೋಡಿದರೆ ಅದೇ ಹಳೆಯ ಸುಂದರ ಮುಖ. ಮರೆಯಲು ಪ್ರಯತ್ನಿಸಿದಷ್ಟೇ ತೀವ್ರವಾಗಿ ಕಣ್ಣೆದುರು ಬರುತ್ತಿದ್ದ ಮುಖ. ಹೂತು ಹೆಣವಾಗಿ ಹೋದರೂ ಅವನನ್ನು ನರಳಿಸಬಲ್ಲಂತಹ ಆ ಒಂದು ದನಿ. ಅವಳನ್ನು ನೋಡುತ್ತಲೇ ಸವ್ಯನ ಮುಖವು ಬಣ್ಣಕೆಟ್ಟಿತ್ತು.  ಸವ್ಯನ ಪೆಚ್ಚಾದ ಮುಖವನ್ನು ಕಂಡು ಪಕ್ಕದಲ್ಲೇ ನಿಂತಿದ್ದ ಅವನ ಮ್ಯಾನೇಜರ್ ಪಾವನಾಳಿಗೆ ಚಿಂತೆಯಾಯಿತು. ಆ ಹೆಂಗಸನ್ನು ಗಮನವಿಟ್ಟು ನೋಡಿದರೂ ಈ ಮುಂಚೆ ಎಲ್ಲೂ ಭೇಟಿಯಾಗಿದ್ದೇನೆ ಎಂದೇನೂ ಪಾವನಾಳಿಗೆ ಅನಿಸಲಿಲ್ಲ. “ಪ್ಯಾಕಪ್'', ಎಂದ ಸವ್ಯಸಾಚಿ ಏಕಾಏಕಿ ಎದ್ದು ನಿಂತು ಸೀದಾ ತನ್ನ ವಾಹನದ ಕಡೆಗೆ ಎದ್ದುಹೋದ. ಆ ಹೆಂಗಸೇನೋ ಹೊರಟುಹೋದಳು. ಆದರೆ ಅವಳ ಹಿಂದೆ ಕ್ಯೂನಲ್ಲಿ ನಿಂತಿದ್ದ ಬಹಳಷ್ಟು ಅಭಿಮಾನಿಗಳು ತಮ್ಮ ತಮ್ಮ ಪುಸ್ತಕಗಳನ್ನು ಎದೆಗವಚಿಕೊಳ್ಳುತ್ತಾ ನಿರಾಶೆಯಿಂದ ನಿಲ್ಲುವಂತಾಯಿತು. “ಬೆಟರ್ ಟ್ರೈ ನೆಕ್ಸ್ಟ್ ಟೈಂ ಗಯ್ಸ್'', ಎಂದು ಪ್ರಕಾಶಕರು ಮತ್ತು ಆಯೋಜಕರು ನೆರೆದಿದ್ದ ಓದುಗ ಅಭಿಮಾನಿಗಳನ್ನು ಸಂತೈಸುತ್ತಿದ್ದಿದ್ದಷ್ಟೇ ಸವ್ಯಸಾಚಿ ಆ ಪರಿಸರದಲ್ಲಿ ಕೇಳಿದ ಕೊನೆಯ ವಾಕ್ಯ. 

ಸವ್ಯ ಮತ್ತು ಪಾವನಾ ಕಾರಿನಲ್ಲಿ ಕುಳಿತೊಡನೆಯೇ ಚಾಲಕ ರಾಮು ಗಾಡಿಯನ್ನು ಆನ್ ಮಾಡಿ ಹೋಟೇಲ್ ಕಡೆ ಡ್ರೈವ್ ಮಾಡಲಾರಂಭಿಸಿದ್ದ. “ಆರ್ ಯೂ ಓಕೆ?'', ಎಂದು ತಣ್ಣಗೆ ಕೇಳಿದಳು ಪಾವನಾ. ಅವಳೊಂದಿಗೆ ದೃಷ್ಟಿ ಮಿಲಾಯಿಸದ ಸವ್ಯ ಎತ್ತಲೋ ನೋಡುತ್ತಲೇ “ಒಂದು ಸಿಗರೇಟು ಕೊಡು'' ಅಂದ. “ನೀನು ಸಿಗರೇಟು ಬಿಟ್ಟು ನಾಲ್ಕು ವರ್ಷ ಆಯ್ತು ಗೊತ್ತಾ'', ಎಂದಳು ಪಾವನಾ. ಆದರೆ ಮೈಚಳಿ ಹುಟ್ಟಿಸುವಂತಿದ್ದ ಸವ್ಯನ ಕಣ್ಣುಗಳನ್ನು ನೋಡಿ ಅವಳಿಗೇನೋ ಆಯಿತು. ಅದೇನೂ ಕ್ರೌರ್ಯವಲ್ಲ, ಅದೆಂಥದ್ದೋ ವಿಚಿತ್ರ ನಿಭರ್ಾವುಕತೆ. ತನ್ನ ವ್ಯಾನಿಟಿ ಬ್ಯಾಗನ್ನು ತೆರೆದ ಪಾವನಾ ಸಿಗರೇಟೊಂದನ್ನು ತೆಗೆದು ಸವ್ಯನ ಕೈಗಿತ್ತಳು. ಆತ ಅದನ್ನು ತುಟಿಯ ಮಧ್ಯೆ ಇಟ್ಟಾಗ ತನ್ನ ಲೈಟರಿನಿಂದ ಕಿಡಿಯನ್ನೂ ಕೊಟ್ಟಳು. ವರ್ಷಗಳ ನಂತರ ಸೇದಿದ ಸಿಗರೇಟಿನ ಕಮಟು ಸವ್ಯನ ಮುಖವನ್ನು ಕಿವುಚಿದರೂ ಮುಂದಿನ ಉಸಿರಾಟಗಳು ದೀರ್ಘವಾದವು. ಕಾರಿನ ಕಿಟಕಿಯ ಗಾಜನ್ನು ತೆಗೆದ ಸವ್ಯ ಹೊಗೆಯನ್ನು ಉಗುಳುತ್ತಾ ಶೂನ್ಯದತ್ತ ದಿಟ್ಟಿಸತೊಡಗಿದ್ದರೆ ಪಕ್ಕದಲ್ಲೇ ಕುಳಿತಿದ್ದ ಪಾವನಾ ಸುಮ್ಮನೆ ಅವನನ್ನೇ ನೋಡುತ್ತಿದ್ದಳು. 

**************

ಆ ದಿನವು ನನಗಿನ್ನೂ ನೆನಪಿದೆ. ಜಿದ್ದಿಗೆ ಬಿದ್ದಂತೆ ನಾನು ಪುಂಖಾನುಪುಂಖವಾಗಿ ಬರೆಯುತ್ತಿದ್ದ ಪ್ಯಾಥೋ ಗೀತೆಗಳು ನನಗೇ ಉಸಿರುಗಟ್ಟಿಸತೊಡಗಿದ್ದವು. ಅಂತಜರ್ಾಲದ ಆ ಖ್ಯಾತ ತಾಣದಲ್ಲಿ ವಿಶ್ವದ ಮೂಲೆಮೂಲೆಗಳಿಂದ ಓದುಗರು ತನ್ನ ಕವಿತೆಗಳನ್ನು ಓದಿ ಮೆಚ್ಚಿಕೊಳ್ಳುತ್ತಿದ್ದರೂ ನನಗಂತೂ ನಾನು ನಿಂತ ನೀರಾದೆ ಎಂದು ಅನ್ನಿಸುತ್ತಿತ್ತು. ಲೇಖನಿ ಹಿಡಿದರೆ ಸಾಕು, ವಿರಹ, ನೋವು, ಕಣ್ಣೀರು… ಇತ್ಯಾದಿಗಳೇ ಸಾಲಾಗಿ ಬಂದು ಕಾಗದಗಳಲ್ಲಿ ಮೂಡುತ್ತಿದ್ದವು. ಹೀಗಾಗಿ ಆ ದಿನ ಒಂದು ಪ್ರತಿಜ್ಞೆಯನ್ನೇ ಮಾಡಿಬಿಟ್ಟೆ: “ಸತ್ತರೂ ಕವಿತೆಗಳನ್ನು ಬರೆಯುವುದಿಲ್ಲ'' ಎಂದು. 

ತನಗೆ ಚಾಲೆಂಜ್ ಎಂಬಂತೆ ಮಾಡಿಕೊಂಡಿದ್ದ ಈ ಶಪಥವನ್ನು ಮುರಿಯಲಿಲ್ಲ ಕೂಡ. ಆದರೆ ಐದು ವರ್ಷಗಳು ಯುಗದಷ್ಟು ತ್ರಾಸವಾದರೂ ನೋಡನೋಡುತ್ತಿದ್ದಂತೆ ಕಳೆದುಹೋಗಿದ್ದವು. ಮನದ ಗಾಯಗಳು ಪೂತರ್ಿಯಾಗಿ ಗುಣವಾಗಿಲ್ಲದಿದ್ದರೂ ಹೇಗೋ ಬದುಕಬಲ್ಲೆ ಎಂಬ ಸ್ಥೈರ್ಯವನ್ನು ಒದಗಿಸಿತ್ತು. ಮರಳಿ ಲೇಖನಿಯನ್ನು ಹಿಡಿಯುವ ಸಾಹಸ ಮಾಡಿದ ನಾನು ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದೆ. ಮತ್ತೊಮ್ಮೆ ಕವಿತೆಗಳನ್ನೇ ಬರೆಯಲು ಪ್ರಯತ್ನಿಸಿದೆನಾದರೂ ಯಥಾಪ್ರಕಾರ ಮೊದಲಿನದ್ದೇ ಚಾಳಿ ಈಗಲೂ ಎದ್ದುಕಾಣುತ್ತಿತ್ತು. ಬರೆದು ರಾಶಿ ಹಾಕಿದ್ದರಲ್ಲಿ ತೊಂಭತ್ತೈದು ಪ್ರತಿಶತ ವಿರಹಗೀತೆಗಳೇ. ಆದರೆ ಈ ಬಾರಿಯ ಸಾಲುಗಳು ನನ್ನೊಳಗಿನ ದುಃಖದಂತೆಯೇ ಹೆಪ್ಪುಗಟ್ಟಿದ್ದವು. ನೋವಿಗಿಂತಲೂ ಆಳವಾದ ವೈರಾಗ್ಯವು ನನ್ನ ಸಾಲುಗಳಲ್ಲಿದ್ದವು. 

ಆದದ್ದಾಗಲಿ ಎಂದು ಲೆಕ್ಕಹಾಕಿ “ಫರಿಶ್ತಾ'' ಎಂಬ ಹೆಸರಿನಲ್ಲಿ ಕವಿತೆಗಳನ್ನು ಪ್ರಕಾಶಕರೊಬ್ಬರಿಗೆ ಕಳಿಸಿದ್ದೆ. ಪುಸ್ತಕವಾಗಿ ತರೋಣ ಎಂದು ಉತ್ಸಾಹದಿಂದಲೇ ಹೇಳಿದರು ಪ್ರಕಾಶಕರು. ಯಾವ ಕಾರಣಕ್ಕೂ ನನ್ನ ನಿಜವಾದ ಪರಿಚಯವನ್ನು ಹೊರಜಗತ್ತಿಗೆ ಮಾಡುವಂತಿಲ್ಲ ಎಂದು ಕರಾರು ಮಾಡಿಸಿಕೊಂಡಿದ್ದೆ ಕೂಡ. ಅನಾಮಿಕನಂತೆ ಬರೆದು ಬರೆದೇ ಸಾಯುವುದು ನನ್ನ ಉದ್ದೇಶವಾಗಿತ್ತು. ಆದರೆ ವಿಧಿಯು ಇನ್ನೇನನ್ನೋ ಬಗೆದಿತ್ತು ನೋಡಿ. ಪದ್ಯಗಳ ಪುಸ್ತಕಗಳು ಬಿಕರಿಯಾಗೋಲ್ಲ ಎಂಬ ಗುಸುಗುಸುಗಳ ನಡುವೆಯೇ “ಫನಾ'' ಎಂಬ ಹೆಸರಿನಲ್ಲಿ ಪ್ರಕಟವಾದ ನನ್ನ ಮೊದಲ ಕವನ ಸಂಕಲನವು ಧೂಳೆಬ್ಬಿಸಿಬಿಟ್ಟಿತ್ತು. ಹಲವು ಬಾರಿ ಮುದ್ರಣಗಳಾದವು. ಐದು ಭಾಷೆಗಳಿಗೆ ಅನುವಾದಗಳೂ ಆದವು. ಚಿತ್ರಗಳಿಂದಲೂ ಸಾಹಿತ್ಯವನ್ನು ಬರೆಯಲು ಆಫರ್ ಗಳು ಬರಲು ಪ್ರಾರಂಭವಾಗಿದ್ದವು. ನಾನು ಬಹುಬೇಗನೇ “ಸ್ಟಾರ್ ಲೇಖಕ'' ಆಗಿಬಿಟ್ಟಿದ್ದೆ. 

ಆದರೆ ಖ್ಯಾತಿಯೆಂಬುದು ಸದ್ದು ಮಾಡಿಯೇ ಬರುತ್ತದೆ. “ಫರಿಶ್ತಾ''ನ ಹಿಂದಿರುವ ಸವ್ಯಸಾಚಿ ಜಗತ್ತಿಗೆ ಬಹುಬೇಗನೇ ಪರಿಚಯವಾದ. ಪತ್ರಿಕಾಗೋಷ್ಠಿ, ಲಿಟರರಿ ಫೆಸ್ಟಿವಲ್ ಗಳು, ಶೂಟಿಂಗ್, ಸಭೆಸಮಾರಂಭಗಳು ಸಾಮಾನ್ಯವಾದವು. ನಾನು ಓದುಗರಿಗೂ, ಮಾಧ್ಯಮದವರಿಗೂ “ಫರಿಶ್ತಾ'' ಆಗಿಯೇ ಉಳಿದುಕೊಂಡೆ. ನಂತರ ಬಂದ ನನ್ನ ನಾಲ್ಕು ಕಾದಂಬರಿಗಳೂ ಹಿಟ್ ಆದವು. ಐದನೇ ಕಾದಂಬರಿಯ ಬಿಡುಗಡೆಗೆಂದೇ ಇಂದು ಆಟೋಗ್ರಾಫ್ ಸ್ಪೆಶಲ್ ಡೇ ಎಂಬ ಹಳೇ ಗಿಮಿಕ್ಕನ್ನು ಎದುರಿಗಿರಿಸಿ ಕಾಸು ಮಾಡಿಸಿಕೊಳ್ಳುವುದರಲ್ಲಿ ಪ್ರಕಾಶಕರೂ ಆಯೋಜಕರೂ ನಿರತರಾಗಿದ್ದರು. ಅಭಿಮಾನಿಗಳ ದಂಡು ಬೇರೆ. ಆದರೆ ಅವಳು… ಮತ್ತೆ ಯಾಕಾದರೂ ಬಂದಳೋ! ಎಂದು ಅಂದುಕೊಂಡೆ. ಎಂದಿನಂತೆ ನನ್ನ ಮೇಲೆಯೇ ನನಗೆ ಸಿಟ್ಟು ಬರಲಾರಂಭಿಸಿತ್ತು. ಈ ವಿಷವತರ್ುಲದಿಂದ ನನಗೆ ಮುಕ್ತಿಯೇ ಇಲ್ಲ ಎಂಬಂತೆ ಎಲ್ಲೆಲ್ಲೋ ತಿರುಗಿ ಮತ್ತೆ ಅಲ್ಲೇ ತಂದಿರಿಸಿಬಿಟ್ಟಿದೆ ಈ ಹಾಳು ಜೀವನ. 

ಅವಳು ಜಾಹ್ನವಿ. ನನ್ನ ಜಾಹ್ನವಿ ಎನ್ನಲೇ? ಗೊತ್ತಿಲ್ಲ. ಸಿಗರೇಟು ಮುಗಿದಿದೆ. 

*************

“ತಗೋ ಇನ್ನೊಂದು'', ಪಾವನಾ ಇನ್ನೊಂದು ಸಿಗರೇಟನ್ನು ತೆಗೆದು ನನ್ನ ಬೆರಳುಗಳ ನಡುವೆ ನಾಜೂಕಾಗಿ ತುರುಕಿದಳು. ಅದೆಷ್ಟು ಚೆನ್ನಾಗಿ ನನ್ನ ಮನಸ್ಸನ್ನು ಓದುತ್ತಾಳೆ ಈ ಹುಡುಗಿ. ನಾನು ನನ್ನ ಎಂದಿನ ನಿಭರ್ಾವುಕ ನಗೆಯೊಂದನ್ನು ಅವಳತ್ತ ಎಸೆದೆ. ಅವಳು ಮುಗುಳ್ನಕ್ಕು ಮರಳಿ ತಾನು ಓದುತ್ತಿದ್ದ ಪುಸ್ತಕವೊಂದರ ಕಡೆ ಕಣ್ಣುನೆಟ್ಟಳು. ಅವಳು ನಿಜಕ್ಕೂ ಓದುತ್ತಿಲ್ಲ ಎಂಬುದು ನನಗೆ ಗೊತ್ತು. ಸುಮ್ಮನೆ ನನ್ನೆದುರು ನಾಟಕವಾಡುತ್ತಿದ್ದಾಳೆ ಅಷ್ಟೇ. ಕಳೆದ ಇಪ್ಪತ್ತು ನಿಮಿಷಗಳಿಂದ ಆ ಪುಟದಲ್ಲೇ ಅಡ್ಡಾಡುತ್ತಿದ್ದಾಳೆ ಈ ಹುಡುಗಿ. ಸುಮ್ಮನೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡುವುದು ಅವಳ ಸದಾ ಫಲಿಸುವ ಯೋಜನೆಗಳಲ್ಲೊಂದು. ಹೀಗಾಗಿಯೇ ಅವಳೆಂದರೆ ನನಗಿಷ್ಟ. 

ಆದರೆ ಎಲ್ಲರೂ ಪಾವನಾ ಆಗೋದುಂಟೇ. ಜಾಹ್ನವಿಯ ಕಥೆ ಹಾಗಿರಲಿ. ನನಗೇನು ಬೇಕು ಎಂಬುದು ಒಂದು ಕಾಲದಲ್ಲಿ ನನಗೇ ತಿಳಿದಿರಲಿಲ್ಲ. ಪ್ರಾಯಶಃ ಇವತ್ತಿಗೂ ತಿಳಿದಿಲ್ಲ. ಹೀಗಾಗಿಯೇ ಒಳಗೊಳಗೇ ವರ್ಷಗಟ್ಟಲೆ ನರಳುತ್ತಾ ಬಂದಿದ್ದೇನೆ. ಜಾಹ್ನವಿ ನನ್ನ ಕಾಲೇಜು ದಿನಗಳ ಸಹಪಾಠಿ. ಆ ದಿನಗಳಲ್ಲಿ ಅವಳನ್ನು ನಾನು ಮುಖ ಕೊಟ್ಟು ಮಾತಾಡಿಸಿದ್ದೇ ಇಲ್ಲ. ಹೆಣ್ಣುಮಕ್ಕಳೆಂದರೆ ದೂರ ಓಡುತ್ತಿದ್ದ ಆ ಮಟ್ಟಿನ ನಾಚಿಕೆಯ ಮುದ್ದೆಯಾಗಿದ್ದೆ ನಾನು. ಆದರೆ ಮುಂದೆ ಕಾಲೇಜು ಬಿಟ್ಟ ನಂತರ ಅದ್ಹೇಗೋ ನಾವಿಬ್ಬರೂ ಮಾತುಮಾತಲ್ಲೇ ಮತ್ತೆ ಜೊತೆಯಾದೆವು. ಅಸಲಿಗೆ ಕಾಲೇಜು ಬಿಟ್ಟ ನಂತರ ನಾನು ಜಾಹ್ನವಿಯನ್ನು ಕಡೇಪಕ್ಷ ಒಮ್ಮೆಯೂ ಭೇಟಿಯಾಗಲಿಲ್ಲ. ಆದರೂ ಸಂದೇಶಗಳಲ್ಲೇ ನಾವು ಪ್ರಾಣಸ್ನೇಹಿತರಂತೆ ಒಬ್ಬರಿಗೊಬ್ಬರು ಹತ್ತಿರವಾದೆವು. ದಿನನಿತ್ಯವೂ ಗಂಟೆಗಟ್ಟಲೆ ನಾವು ಮಾತನಾಡುತ್ತಿದ್ದೆವು. ಒಂಭತ್ತು-ಹತ್ತು ವರ್ಷಗಳ ಹಿಂದಿನ ಮಾತಷ್ಟೇ. ಅದು ಎಸ್ಸೆಮ್ಮೆಸ್ಸುಗಳ ಯುಗ. ದಿನರಾತ್ರಿಗಳ ಪರಿವೆಯೇ ಇಲ್ಲವೆಂಬಂತೆ ನಾನು ಸಂದೇಶಗಳನ್ನು ಬರೆಯುತ್ತಿದ್ದೆ. ಅವಳೂ ಉತ್ತರಿಸುತ್ತಿದ್ದಳು. ನಾವಿಬ್ಬರೂ ದೂರದೂರದ ಊರುಗಳಲ್ಲಿದ್ದೆವಾದ್ದರಿಂದ ಭೇಟಿಯಾಗುವ ಯಾವ ಸಂದರ್ಭವೂ ಒದಗಿಬರಲಿಲ್ಲ. ಆದರೆ ವಿಚಿತ್ರವೆಂಬಂತೆ ಭೇಟಿಯಾಗಲೇಬೇಕೆಂಬ ಹಟವೂ ನನ್ನಲಿರಲಿಲ್ಲ. ಏಕಾಂಗಿ ಅಲೆಮಾರಿಯೊಬ್ಬನಿಗೆ ಸಂಗಾತಿಯೆಂಬ ಜೀವವೊಂದು ಅನುಗ್ರಹವಾಗಿ ಸಿಕ್ಕಂತೆ ನಾನು ಸುಮ್ಮನೆ ಕಾಲದೊಂದಿಗೆ ಸಾಗುತ್ತಿದ್ದೆ. ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಖುಷಿಯಾಗಿಯೂ ಇರಬಲ್ಲೆ ಎಂಬುದನ್ನು ಈ ಸಾಂಗತ್ಯವು ನನಗೆ ಮನದಟ್ಟುಮಾಡಿತ್ತು.  

ಆದರೆ ಒಂದೆರಡು ದಿನ ಜಾಹ್ನವಿ ಬ್ಯುಸಿಯಾಗಿ ಬಿಟ್ಟರೆ, ಊರಿನಿಂದ ಹೊರಟುಹೋದರೆ ಅವಳ ಸಂದೇಶಗಳಿಗೆ ಬ್ರೇಕ್ ಬೀಳುತ್ತಿತ್ತು. ಆಗಂತೂ ನಿಜಕ್ಕೂ ನಾನು ದುಃಖದಲ್ಲಿ ಕರಗಿಹೋಗುತ್ತಿದ್ದೆ. ಕತ್ತಲಲ್ಲಿ ಮೌನವಾಗಿ ಕಣ್ಣೀರು ಹಾಕುತ್ತಿದ್ದೆ. ನನಗೇನಾಗುತ್ತಿದೆ ಎಂಬ ಪರಿವೆಯೇ ಇಲ್ಲದೆ ಅದೆಷ್ಟು ಖುಷಿಯಾಗಿದ್ದೆ ನಾನು ಎಂದೆನಿಸುತ್ತದೆ ಈಗ. ನಿಜಕ್ಕೂ ಪ್ರೀತಿಯೆಂಬುದೊಂದು ಭ್ರಮೆಯೇ. ಆದರೆ ಒಂದು ವರ್ಷದಲ್ಲೇ ಬಹಳಷ್ಟು ಸಂಗತಿಗಳು ಬದಲಾಗಿದ್ದವು. ಜಾಹ್ನವಿಯ ಈ ಅನಿರೀಕ್ಷಿತ ಬ್ರೇಕುಗಳ ಸಂಖ್ಯೆಗಳೀಗ ವಿಪರೀತ ಹೆಚ್ಚಾಗಿದ್ದವು. ವಿನಿಮಯವಾಗುತ್ತಿದ್ದ ಸಂದೇಶಗಳಲ್ಲಿ ಈಗ ಜೀವಕಳೆಯಿರಲಿಲ್ಲ. ಒಂದು ಘಟ್ಟದಲ್ಲಂತೂ ಸಂಪರ್ಕವು ಬಹುತೇಕ ಕಡಿದೇಹೋಯಿತು ಎಂಬಷ್ಟರ ಮಟ್ಟಿಗೆ ಜಾಹ್ನವಿಯ ಸಂದೇಶಗಳು ನಿಂತುಹೋದವು. ನಾನು ಕುಸಿಯತೊಡಗಿದ್ದೇ ಅಲ್ಲಿ. 

ಜಾಹ್ನವಿಯ ಹಟಾತ್ ನಿರ್ಗಮನವು ನನಗೆ ನುಂಗಲಾರದ ತುಪ್ಪವಾಗಿತ್ತು. ನಾನು ಇಷ್ಟೇಕೆ ನರಳತೊಡಗಿದ್ದೇನೆ ಎಂದು ಗಂಭೀರವಾಗಿ ಚಿಂತಿಸತೊಡಗಿದ್ದೇ ಆವಾಗ. ನಾನು ನಿಜಕ್ಕೂ ಒಂದು ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೆ. ದುರಾದೃಷ್ಟವಶಾತ್ ನನ್ನ ಈ ಕನಸಿನ ಲೋಕದ ಶೋ ಮುಗಿದಿತ್ತು. ಜಾಹ್ನವಿ ಏನು, ಎತ್ತ ಎನ್ನದೆ ಸುಮ್ಮನೆ ಎದ್ದುಹೋಗಿದ್ದಳು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಕಣೇ ಎಂದು ಯಾವತ್ತೂ ಬಾಯಿಬಿಟ್ಟು ನಾನು ಹೇಳಿರಲಿಲ್ಲ. ಅವಳೂ ಕೇಳಲಿಲ್ಲ. ಸಹಜವಾಗಿಯೇ “ನೀನ್ಯಾಕೆ ನನ್ನ ಬಿಟ್ಟು ಹೋದೆ?'', ಎಂದು ಕೇಳುವ ಹಕ್ಕೂ ಬಹುಶಃ ನನಗಿರಲಿಲ್ಲ. ಅಸಲಿಗೆ ಅವಳಿಗೆ ನನ್ನ ಬಗ್ಗೆ ನಿಜಕ್ಕೂ ಅಂಥದ್ದೊಂದು ಭಾವನೆಯೂ ಇತ್ತೇ ಇಲ್ಲವೇ ಎಂಬುದರ ಕಿಂಚಿತ್ತು ಸುಳಿವೂ ನನಗಿರಲಿಲ್ಲ. ಆದರೆ ನಾನು ಕನಸುಗಳನ್ನು ಕಟ್ಟುತ್ತಾ ಹೋಗಿದ್ದೆ. ಮನದ ಮಾತನ್ನು ಹೇಳಲು ನಾಳೆ, ನಾಳೆ, ನಾಳೆ… ಎಂದು ಸುಮ್ಮನೆ ದಿನತಳ್ಳುತ್ತಿದ್ದೆ. ಮನದ ಮಾತುಗಳನ್ನು ಹೇಳಿದರೆ ಅವಳನ್ನು ಶಾಶ್ವತವಾಗಿ ಕಳೆದುಕೊಳ್ಳಲಿರುವೆನೇ ಎಂಬ ಕೆಟ್ಟ ಭಯವು ನನ್ನಲ್ಲಿ ಮನೆಮಾಡಿತ್ತು. ಮುಂದೆ ನನ್ನ ಉಳಿದೆಲ್ಲಾ ನಿರೀಕ್ಷೆಗಳು ಸುಳ್ಳಾಗಿ ಭಯವೊಂದಷ್ಟೇ ನಿಜವಾಗಿದ್ದು ಮಾತ್ರ ವಿಪಯರ್ಾಸ. ಆ ಸೋಕಾಲ್ಡ್ ಸಂಬಂಧದಲ್ಲಿ ನಾನೊಬ್ಬನೇ ಇದ್ದೆ ಎಂದು ಈಗ ನನಗನ್ನಿಸುತ್ತಿದೆ. ಹೀಗಾಗಿ ಈ ಕೋಪ, ಹತಾಶೆಗಳೆಲ್ಲಾ ನನ್ನ ಮೇಲೆಯೇ ಹೊರತು ಅವಳ ಮೇಲಲ್ಲ. 

ಈ ಮಹಾಪ್ರಳಯದ ನಂತರ ದೇಹವನ್ನೂ, ಮನಸ್ಸನ್ನೂ ನಾನು ತೀವ್ರವಾಗಿ ದಂಡಿಸಲು ಶುರುಮಾಡಿದ್ದೆ. ಇಲ್ಲದ ಚಟಗಳು ಅಂಟಿಕೊಂಡಿದ್ದವು. ಅದೆಷ್ಟು ಬಾರಿ ಬಹುಮಹಡಿ ಕಟ್ಟಡಗಳ ಎತ್ತರದಿಂದ ಕೆಳಗೆ ಇಣುಕಿದ್ದೆನೋ. ಇಷ್ಟಾದರೂ ಒಮ್ಮೆಯೂ ಜಾಹ್ನವಿಯನ್ನು ಸಂಪಕರ್ಿಸುವ ಹುಚ್ಚಿಗೆ ನಾನು ಕೈಹಾಕಿರಲಿಲ್ಲ. ಅವಳೊಡನೆ ಮಾತನಾಡಬೇಕೆಂಬ ಅದಮ್ಯ ಇಚ್ಛೆಯಿದ್ದರೂ ಹುಚ್ಚುಮನಸ್ಸಿನ ಭಾವನೆಗಳಿಗೆ ಕೊಳ್ಳಿಯಿಟ್ಟಿದ್ದೆ. ಪ್ರೀತಿ ಎಂಬುದು ನನ್ನನ್ನು ಬಲಹೀನನಾಗಿ ಮಾಡಿದೆ ಎಂದೆನಿಸುತ್ತಿತ್ತು. ಹೀಗಾಗಿ ಮತ್ತದೇ ಕೂಪದಲ್ಲಿ ಬಿದ್ದು ನರಳುವ ಯಾವ ಹುಚ್ಚೂ ನನಗಿರಲಿಲ್ಲ. ಆದರೆ ಅಚ್ಚರಿಯೆಂಬಂತೆ ಬರವಣಿಗೆಯು ಈ ವಿರಹಪರ್ವದಲ್ಲಿ ನನ್ನ ಕೈಹಿಡಿದಿತ್ತು. ಒಂದೊಂದೇ ಅಡೆತಡೆಗಳನ್ನು ಎದುರಿಸುತ್ತಾ ಬರಹದ ಮೂಲಕವೇ ನನ್ನ ಗುಪ್ತಗಾಮಿನಿ ಭಾವನೆಗಳ ಹರಿವಿಗೊಂದು ಮಾರ್ಗವನ್ನು ಮಾಡಿಕೊಂಡೆ. ಒಳಗೆ ಅದುಮಿಟ್ಟುಕೊಂಡಿರುವ ಕಿಚ್ಚು ನನ್ನನ್ನು ಇನ್ನಿಲ್ಲದಂತೆ ಸುಡುತ್ತಿದ್ದುದಲ್ಲದೆ ಈ ಬಾರಿ ಪ್ರಕಾಶಿಸುವಂತೆಯೂ ಮಾಡಿತ್ತು. ಸವ್ಯಸಾಚಿ ಎಂಬ ಅನಾಮಧೇಯ ಹುಡುಗನೊಬ್ಬ “ಫರಿಶ್ತಾ'' ಆಗಿದ್ದ. ಖ್ಯಾತಿ, ವಿಲಾಸಗಳು ಈಗ ನನ್ನ ಕಾಲ ಕೆಳಗೆ ಧೂಳಿನಂತೆ ಬಿದ್ದಿದ್ದವು.   

ನಂತರ ನನ್ನ ಪಿ.ಆರ್.ಒ ಆಗಿ ಬಂದು ನನ್ನ ಯಶಸ್ಸಿನ ಓಟಕ್ಕೂ, ಕುಸಿಯುತ್ತಿದ್ದ ಜೀವನಕ್ಕೂ ಆಸರೆಯಾಗಿ ಬಂದು ನಿಂತವಳು ಪಾವನಾ ಭಾರದ್ವಾಜ್. ಪಾವನಾ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುಳ್ಳ ಮಹಾತ್ವಾಕಾಂಕ್ಷಿ ಹೆಣ್ಣು. `ಮಾತು ಕಡಿಮೆ, ಹೆಚ್ಚು ದುಡಿಮೆ' ಅವಳ ಧ್ಯೇಯವಾಕ್ಯ. ಕಳೆದ ನಾಲ್ಕು ವರ್ಷಗಳಿಂದ ನನ್ನ ಮೌನಕ್ಕೆ, ಕನಸುಗಳು ಸತ್ತುಹೋಗಿ ಜಡವಾದ ನನ್ನ ಕಣ್ಣುಗಳಿಗೆ, ನನ್ನ ಹತಾಶೆಗೆ ಮಾತಿನ, ಸ್ಪರ್ಶದ ಅಥವಾ ಇತರೇ ಲೌಕಿಕ ಹಣೆಪಟ್ಟಿಗಳ ಹಂಗಿಲ್ಲದೆ ಆಸರೆಯಾದವಳು ಅವಳು. ಪಾವನಾ ಯಾವತ್ತೂ ನನ್ನ ಏಕಾಂಗಿತನವನ್ನಾಗಲೀ, ಖ್ಯಾತಿಯನ್ನಾಗಲೀ ತನ್ನ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ತೀರಾ ಪ್ರೊಫೆಷನಲ್ ಹೆಣ್ಣಾದ ಪಾವನಾ ತನ್ನ ಸೀಮೆಯೊಳಗಿದ್ದುಕೊಂಡೇ ನನ್ನ ವೈಯಕ್ತಿಕ ಜೀವನವನ್ನೂ ಒಂದು ಮಟ್ಟಿಗೆ ದಡಕ್ಕೆ ತಂದು ಮುಟ್ಟಿಸಿದವಳು. ಕೆಲವೊಮ್ಮೆ ಅವಳ ಮಡಿಲಿನಲ್ಲಿ ತಲೆಯನ್ನಿಟ್ಟು ಭೋರೆಂದು ಅತ್ತುಬಿಡಬೇಕೆನಿಸುತ್ತದೆ. ಹಾಗೆ ಮಾಡಿದರೂ ಅವಳೇನೂ ಅಂದುಕೊಳ್ಳಲಾರಳು ಎಂಬ ನಂಬಿಕೆ ನನಗಿದೆ. ಆದರೆ ಪಾವನಾಳನ್ನು ನಾನು ಹಚ್ಚಿಕೊಂಡು ಬಿಟ್ಟರೆ? ಇವಳೂ ಜಾಹ್ನವಿಯಂತೆ ಒಂದು ದಿನ ಏಕಾಏಕಿ ಎದ್ದು ಹೋದರೆ? ಎಂಬ ಅವ್ಯಕ್ತ ಭಯಗಳು ಈಗಲೂ ನನ್ನನ್ನು ಬಿಡದೆ ಕಾಡುತ್ತದೆ. ಸಾಂಗತ್ಯವು ಬೇಕೆಂಬ ಆಸೆ ಮತ್ತು ಕಳೆದುಕೊಳ್ಳುವ ಭಯ ಇವೆರಡರ ನಡುವಿನ ನಿರಂತರ ಸಂಘರ್ಷದಲ್ಲಿ ನನ್ನ ಯೌವನವು ಛಿದ್ರಗೊಂಡಿತ್ತು. ನನ್ನಂಥವನಿಗೆ ಜೀವನವು ಹೆದರಿಸುತ್ತದೆಯೇ ಹೊರತು ಸಾವಲ್ಲ.     

“ಮನೆ ಬಂತು ಸವ್ಯ'', ಎಂದು ಪಾವನಾ ಹೇಳುವುದರೊಂದಿಗೆ ನನ್ನ ಯೋಚನೆಗಳ ನಾಗಾಲೋಟಕ್ಕೆ ತಡೆಬಿದ್ದಿತ್ತು. ಆದರೆ ಅಚಾನಕ್ಕಾಗಿ ಮನೆಗೆ ಹೋಗುವುದೇ ಬೇಡವೆಂದೆನಿಸಿತು. ಮೊದಲು ನಿನ್ನನ್ನು ಮನೆಗೆ ಡ್ರಾಪ್ ಮಾಡುತ್ತೇನೆ ಎಂದು ತಣ್ಣಗೆ ಹೇಳಿ ಪಾವನಾಳನ್ನು ಮನೆಯವರೆಗೆ ಡ್ರಾಪ್ ಮಾಡಿದೆ. ಅಲ್ಲಿಂದ ಹೊರಟ ವಾಹನವು ತನ್ನ ಎಂದಿನ ಏಕಾಂತದ ಅಡ್ಡೆಯಾದ ಹಿಲ್ ಸ್ಟೇಷನ್ ಪಾಯಿಂಟ್ ಕಡೆಗೆ ತೆರಳಿತು. 

************

ಸಂಜೆ ನಾಲ್ಕರ ಬಳಿಕ ಮನೆಗೆ ಬಂದು ಮುಟ್ಟಿದರೆ ಗೇಟಿನ ಮುಂದೆ ಗೆಳೆಯ ರಸ್ತೋಗಿಯ ಕಾರು ನಿಂತಿದೆ. ಅಮಿತ್ ರಸ್ತೋಗಿ ನನ್ನ ಗೆಳೆಯ, ಪ್ರಕಾಶಕ ಎಲ್ಲವೂ. ಎಂಪಾಯರ್ ಪಬ್ಲಿಕೇಷನ್ ಸಂಸ್ಥೆಯ ಮಾಲೀಕ. ಈ ಹೊತ್ತಲ್ಲಿ ಇವನ್ಯಾಕೆ ಬಂದಿದ್ದಾನೆ ಎಂದು ಒಳನಡೆದರೆ ತನ್ನ ಡ್ರಿಂಕಿಂಗ್ ಕ್ಯಾಬಿನೆಟ್ ಬಳಿ ಎರಡು ಮಾನವಾಕೃತಿಗಳು ಕುಳಿತಿರುವಂತೆ ಕಾಣುತ್ತಿದೆ. ಅತಿಥಿಗಳ ಆಗಮನ ನನ್ನ ಮನೆಗೆ ಹೊಸದಲ್ಲ. ಕೈಯಲ್ಲಿದ್ದ ಚಿಕ್ಕ ಬ್ಯಾಗನ್ನು ಲಾಬಿಯ ಸೋಫಾದ ಮೇಲೆ ಬಿಟ್ಟ ನಾನು ನಿರಾಸಕ್ತನಾಗಿಯೇ ಒಳನಡೆದಿದ್ದೆ. ದಿನವಿಡೀ ಅಂಥದ್ದೇನೂ ಮಾಡದಿದ್ದರೂ ಭಾರೀ ಸುಸ್ತೆನ್ನಿಸುತ್ತಿತ್ತು. “ವೆಲ್ ಕಂ ಮಿಸ್ಟರ್ ರೈಟರ್'' ಎನ್ನುತ್ತಾ ಡ್ರಿಂಕ್ ಹಿಡಿದು ಒಳಗಿನಿಂದ ಬಂದ ರಸ್ತೋಗಿ ಎಂದಿನಂತೆ ಆಪ್ತವಾಗಿ ಆಲಂಗಿಸಿದ್ದ. ಅವನ ಹಿಂದೆಯೇ ನಡೆದುಕೊಂಡು ಬಂದಿತ್ತೊಂದು ಎತ್ತರದ ನಿಲುವಿನ ಆಕರ್ಷಕ ಹೆಂಗಸು. ಮತ್ತೊಮ್ಮೆ ಜಾಹ್ನವಿ! 

ಅದೇನು ಹೇಳಿ ರಸ್ತೋಗಿಯ ಜೊತೆಗೆ ಇಲ್ಲಿಯವರೆಗೂ ಬಂದಳೋ. ಒಂದೆರಡು ಘಂಟೆಗಳ ಏಕಾಂತದಲ್ಲಿ ಹೇಗೋ ಶಾಂತವಾಗಿದ್ದ ನನ್ನ ಸಿಟ್ಟು, ಹತಾಶೆ, ಕಣ್ಣೀರು, ಉದ್ವೇಗ, ಅಸಹಾಯಕತೆಗಳು ಮತ್ತೊಮ್ಮೆ ಉಕ್ಕಿಬರತೊಡಗಿದ್ದವು. ಕಣ್ಣಲ್ಲೇ ಸಿಗಿದು ಹಾಕುವಂತೆ ನಾನು ಜಾಹ್ನವಿಯನ್ನೇ ನೋಡತೊಡಗಿದೆ. ರಸ್ತೋಗಿ ಒಂದು ಕ್ಷಣ ಬೆಚ್ಚಿಬಿದ್ದನೋ ಗೊತ್ತಿಲ್ಲ. ಆದರೆ ತೆಪ್ಪಗೆ ಮಾತಿಲ್ಲದೆ ಜಾಗ ಖಾಲಿ ಮಾಡಿದ್ದ. ಮುಖದಲ್ಲಿ ಕೊಂಚ ಅಳುಕಿದ್ದರೂ ಏನನ್ನೋ ಯೋಚಿಸಿಯೇ ಬಂದವಳಂತೆ ವಿಚಲಿತಳಾಗದೆ ನನ್ನೆದುರು ನಿಂತಿದ್ದಳು ಜಾಹ್ನವಿ.   

“ಅದೂ… ಕಳೆದ ವಾರವಷ್ಟೇ ಸಿಂಗಾಪುರದಿಂದ ಬಂದೆ…'', ಎಂದು ಶುರುಹಚ್ಚಿಕೊಂಡ ಅವಳ ಮಾತನ್ನು ಅರ್ಧದಲ್ಲೇ ನಾನು ತುಂಡರಿಸಿದ್ದೆ. “ನಿನ್ನ ಯಾವ ಕಥೆಯೂ ನನಗೆ ಬೇಕಾಗಿಲ್ಲ'', ಎಂದು ಕಡ್ಡಿ ಮುರಿದಂತೆ ಹೇಳಿದೆ. ಸೌಜನ್ಯಕ್ಕಾದರೂ ಹೇಗಿದ್ದೀಯಾ ಎಂದು ಕೇಳಿಲ್ಲವಲ್ಲಾ ಇವಳು ಎಂದು ನಾನು ಒಳಗೊಳಗೇ ಕುದಿಯುತ್ತಿದ್ದೆ. ಇವಳೆಂದಾದರೂ ನನ್ನೆದುರು ಬಂದರೆ ಇಷ್ಟು ವರ್ಷಗಳು ನನ್ನೊಳಗೇ ಹುದುಗಿದ್ದ ಭಾವನೆಗಳೆಲ್ಲಾ ಅಗ್ನಿಪರ್ವತದಂತೆ ಭುಗಿಲೇಳಲಿದೆ, ಕಣ್ಣೀರು ಕಟ್ಟೆಯೊಡೆದು ಧಾರಾಕಾರವಾಗಿ ಹರಿಯಲಿದೆ ಎಂದೆಲ್ಲಾ ಅಂದುಕೊಂಡಿದ್ದೆ. ಕೊಂಚ ಹಾಗಾಗಿತ್ತು ಕೂಡ. ಆದರೆ ನಾನು ಎಂದಿನಂತೆ ನಿಲರ್ಿಪ್ತ. ಆಲ್ವೇಸ್ ಕಂಪೋಸ್ಡ್, ನೋ ಮ್ಯಾಟರ್ ವಾಟ್! ನನ್ನ ದುಃಖವು ನನಗಷ್ಟೇ. ಆದರೂ ಮನದ ಮೂಲೆಯ ದನಿಯೊಂದು ಅವಳನ್ನು ತಬ್ಬಿಕೊಂಡು ಜೋರಾಗಿ ಅತ್ತುಬಿಡೋಣ ಎನ್ನುವಂತೆ ಪಿಸುಗುಟ್ಟುತ್ತಿತ್ತು. ಇವಿಷ್ಟು ವರ್ಷಗಳಲ್ಲಿ ಒಂದೊಂದು ಕ್ಷಣವೂ ಜೀವ ಹಿಡಿದುಕೊಂಡು ನಿನಗೆಷ್ಟು ಕಾದೆ ಗೊತ್ತಾ ಎಂದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೇಳಬೇಕೆಂಬ ಹಂಬಲ ಕೂಡ. 

ಆದರೆ ಮಡುಗಟ್ಟಿದ್ದು ಮಾತ್ರ ಗಾಢಮೌನ. ಕೊನೆಮೊದಲಿಲ್ಲದ ಭಾವತೀವ್ರತೆಯನ್ನು ಮತ್ತೊಮ್ಮೆ ಕಟ್ಟಿಹಾಕುವುದರಲ್ಲೇ ಸಿಲುಕಿಬಿಟ್ಟಿದ್ದೆ ನಾನು. ಜೊತೆಗೇ ಮಾತಾಡಿಬಿಟ್ಟರೆ ಏನು ತಪ್ಪು ಮಾತಾಡಿ ಅವಳನ್ನು ನೋಯಿಸಿಬಿಡುವೆನೋ ಎಂಬ ಕಾಳಜಿ ಕೂಡ. ಅದೇನು ವಿರೋಧಾಭಾಸಗಳಿದ್ದರೂ ಒಂದು ವಿಷಯವಂತೂ ಸ್ಪಷ್ಟವಾಗಿತ್ತು. ಒಂಭತ್ತು ವರ್ಷಗಳ ಹಿಂದೆ ನಾನು ಅವಳನ್ನು ಎಷ್ಟು ಹಚ್ಚಿಕೊಂಡಿದ್ದೆನೋ ಈಗಲೂ ಅಷ್ಟೇ ಕಚ್ಚಿಕೊಂಡಿದ್ದೆ. ಹೀಗಾಗಿಯೇ ನನ್ನ ಮನದ ಗಾಯವು ವಾಸಿಯಾಗುವ ಹೆಸರನ್ನೇ ಎತ್ತುತ್ತಿರಲಿಲ್ಲ. ಎಲ್ಲಾ ಇದ್ದರೂ ಮನದೊಳಗೆ ವಿಲಕ್ಷಣ ಬೈರಾಗಿಯಂತೆ ನಾನು ಜೀವಿಸುತ್ತಿದ್ದೆ. ಜಾಹ್ನವಿ ನನ್ನ ಜೀವನವನ್ನು ಅಕ್ಷರಶಃ ಅಲ್ಲೋಲಕಲ್ಲೋಲ ಮಾಡಿದ್ದಳು. 

ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?'' ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ ಅಗತ್ಯತೆಯೇನೂ ಇರಲಿಲ್ಲ ಎಂಬುದು ನನಗೆ ಗೊತ್ತಿತ್ತು. ಆದರೆ ನನ್ನದೂ ಪುರುಷಾಹಂಕಾರ. “ಅದೂ… ಅದೂ…'', ಎಂದು ತಡವರಿಸಿದಳು ಅವಳು. ಕೆಂಡದ ಮೇಲೆ ನಿಂತವನಂತೆ ಕೊಸರಾಡುತ್ತಿದ್ದ ನನಗೆ ರೋಸಿಹೋಯಿತು. “ನಿನ್ನ ಉತ್ತರವು ನಿನ್ನ ಮೌನದಲ್ಲೇ ಇದೆ'', ಎನ್ನುತ್ತಾ ವೇಗವಾಗಿ ಕೋಣೆಯಿಂದ ಹೊರಬಿದ್ದೆ. ಈ ಒಂಭತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದ್ಯಾಕಾದರೂ ಇವಳು ನನ್ನ ಜೀವನದಲ್ಲಿ ಬಂದಳೋ ಎನ್ನುವಷ್ಟು ಸಂಕಟವಾಯಿತು ನನಗೆ. ನನ್ನ ಅನಿರೀಕ್ಷಿತ ನಿರ್ಗಮನದೊಂದಿಗೆ ಗೊಂದಲಕ್ಕೀಡಾಗಿದ್ದ ಜಾಹ್ನವಿ ದಂಗುಬಡಿದವಳಂತೆ ನಿಂತಲ್ಲೇ ನಿಂತಿದ್ದಳು. ಅದೇನು ಹೇಳಲು ಬಂದಿದ್ದಳೋ, ಆದರೆ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸೀದಾ ಒಳಕೋಣೆಯತ್ತ ನಡೆದ ನಾನು ಧರಿಸಿದ್ದ ಬಟ್ಟೆಯನ್ನು ಬಿಚ್ಚಿ ಹಾಕಿ ಪುಟ್ಟ ಚಡ್ಡಿಯೊಂದನ್ನು ಮಾತ್ರ ಹಾಕಿಕೊಂಡು ಬುಸುಗುಡುತ್ತಾ ಹೊರಬಂದೆ. ಮೆತ್ತನೆಯ ಟವೆಲ್ ನನ್ನ ಭುಜದ ಮೇಲೆ ಮೈಚಾಚಿ ಮಲಗಿಕೊಂಡಿತ್ತು. ಜಾಹ್ನವಿ ಇದೇನಾಗುತ್ತಿದೆ ಎನ್ನುವಂತೆ ನೋಡುತ್ತಲೇ ನಿಂತಿದ್ದಳು. ಅವಳು ಅಲ್ಲಿ ಇಲ್ಲವೇ ಇಲ್ಲ ಎಂಬಂತೆ ಹೊರಬಂದ ನಾನು ಅತ್ತಿತ್ತ ನೋಡದೆ ಈಜುಕೊಳದೊಳಕ್ಕೆ ಧುಮುಕಿಬಿಟ್ಟೆ. 

ಒತ್ತರಿಸಿ ಬರುತ್ತಿದ್ದ ನನ್ನ ಕಣ್ಣೀರು ಈಜುಕೊಳದ ನೀರಿನೊಂದಿಗೆ ಸದ್ದಿಲ್ಲದೆ ಬೆರೆತುಹೋಯಿತು. ನನ್ನೆಲ್ಲಾ ಉದ್ವೇಗವನ್ನು ರಾಕ್ಷಸಶಕ್ತಿಯಾಗಿ ಮೈಯಲ್ಲೆಲ್ಲಾ ಆವಾಹಿಸಿಕೊಂಡು ಕೈಕಾಲು ಬಡಿಯುತ್ತಾ ಸುಮಾರು ಒಂದು ತಾಸು ಈಜಾಡಿದೆ. ಅರ್ಧತಾಸು ಗ್ಯಾಲರಿಯಲ್ಲೇ ನಿಂತು ಕಾಯುತ್ತಿದ್ದ ಅವಳಿಗೆ ನಾನು ಬರಲಾರೆ ಎಂಬುದು ಖಾತ್ರಿಯಾಯಿತೋ ಏನೋ. ಜಾಹ್ನವಿ ಹೊರಟುಹೋಗಿದ್ದಳು. 

ಈ ಬಾರಿಯೂ ಬಾರೋ ಎಂದು ಅವಳು ನನ್ನನ್ನು ಕರೆಯಲಿಲ್ಲ. ನಾನಾದರೂ ಅವಳತ್ತ ಹೋಗಲಿಲ್ಲ. 

************* 

“ಮುಂದಿನ ತಿಂಗಳ ಒಂದನೇ ತಾರೀಕು ನನ್ನ ಆತ್ಮಕಥೆಯು ನಿಮ್ಮೆಲ್ಲರ ಕೈಸೇರಲಿದೆ. ಎಂದಿನಂತೆ ಎಂಪಾಯರ್ ಪಬ್ಲಿಕೇಷನ್ ಸಂಸ್ಥೆಯವರೇ ನನ್ನ ಈ ಪುಸ್ತಕವನ್ನೂ ಮುದ್ರಿಸಲಿದ್ದಾರೆ''. 

ಮಾಧ್ಯಮಗೋಷ್ಠಿಯಲ್ಲಿ ಎಂಪಾಯರ್ ಸಂಸ್ಥೆಯ ಮಾಲೀಕ ಅಮಿತ್ ರಸ್ತೋಗಿಯ ಜೊತೆ ಕುಳಿತುಕೊಂಡು ಸವ್ಯಸಾಚಿ ಮಾತನಾಡುವುದನ್ನೇ ತನ್ನ ಟೆಲಿವಿಷನ್ನಿನಲ್ಲಿ ನೋಡುತ್ತಾ ಕುಳಿತಿದ್ದಳು ಜಾಹ್ನವಿ. ಎರಡು ತಿಂಗಳ ಹಿಂದಿನ ತನ್ನ ಭೇಟಿಯನ್ನು ನೆನಪಿಸಿಕೊಳ್ಳುತ್ತಾ ಅಬ್ಬಾ, ಅದೆಷ್ಟು ಜಿಗುಟು ಇವನು ಎಂದು ಮತ್ತೆ ನಿಟ್ಟುಸಿರಾದಳು. ಕಾಲವು ಸವ್ಯಸಾಚಿಯಂತೆಯೇ ಜಾಹ್ನವಿಯನ್ನೂ ಮಾಗಿಸಿತ್ತು. ಹೊರಗಿನ ಜಗತ್ತಿನ ಕಾಣುವಂತೆ ಅವಳ ಜಗತ್ತಿನಲ್ಲೂ ಎಲ್ಲವೂ ಸರಿಯಿರಲಿಲ್ಲ. ಜಾಹ್ನವಿಯ ಸಂಸಾರವೆಂಬ ಸೌಧವು ನಿಧಾನವಾಗಿ ಕುಸಿಯತೊಡಗಿತ್ತು. ತನ್ನ ಮತ್ತು ತನ್ನ ಪತಿಯ ಮಹಾತ್ವಾಕಾಂಕ್ಷೆಗಳ ಘರ್ಷಣೆಯ ನಡುವೆ ಬಡವಾಗಿದ್ದು ಮಾತ್ರ ಮೂರು ವರ್ಷದ ಮಗಳು ವಷರ್ಾ. 

ಅದ್ಹೇಗೋ ಏನೋ! ನೇಪಥ್ಯಕ್ಕೆ ಸರಿದಿದ್ದ ಸವ್ಯಸಾಚಿ ಮತ್ತೊಮ್ಮೆ ಅವಳಿಗೆ ನೆನಪಾಗಿದ್ದ. ಅವನೊಡನೆ ದಿನರಾತ್ರಿ ನಡೆಸುತ್ತಿದ್ದ ಸಂಭಾಷಣೆಗಳು ನೆನಪಾಗುತ್ತಿದ್ದವು. ಜೊತೆಗೇ ಅವನ ಆ ಕಪಟವಿಲ್ಲದ ಮಾತುಗಳಲ್ಲಿದ್ದ ಬಿಸುಪೂ ಕೂಡ. ಆ ಹುಚ್ಚುವಯಸ್ಸಿನಲ್ಲಿಯೂ ಆತ ನನ್ನ ಜೊತೆ ತಪ್ಪಿಯೂ ಫ್ಲಟರ್್ ಮಾಡಲಿಲ್ಲ. `ನೀನಂದ್ರೆ ನನಗಿಷ್ಟ ಕಣೇ' ಎಂದು ಬಾಯಿಬಿಟ್ಟು ಹೇಳಲಿಲ್ಲ. ಆದರೆ ದನಿಯಾಗದ ಅವನ ಭಾವನೆಗಳು ಅವನ ಸಾಲುಗಳಲ್ಲಿ, ಸಂದೇಶಗಳಲ್ಲಿ, ಹೆಜ್ಜೆಗಳಲ್ಲಿ ಮಿಂಚಿ ಮರೆಯಾಗುತ್ತಿದ್ದವು. ಅದೇನು ಅಳುಕೋ, ನಾಚಿಕೆಯೋ, ಭಯವೋ, ಸಂಕೋಚವೋ… ನನಗೆ ಗೊತ್ತಿಲ್ಲ. ಆದರೆ ಕೊನೆಗೂ ಸವ್ಯ ಏನನ್ನೂ ಹೇಳಲಿಲ್ಲ. ಸುಮ್ಮನಿದ್ದುಬಿಟ್ಟ. ನಾನೂ ನೋಡನೋಡುತ್ತಿದ್ದಂತೆಯೇ ಮುಂದೆ ಹೋಗಿಬಿಟ್ಟೆ. ಸಿಂಗಾಪುರದಿಂದ ಮರಳಿ ತಾಯ್ನಾಡಿಗೆ ಬಂದು ಇವನನ್ನು ಹೇಗೆ ಹುಡುಕುವುದೋ ಎಂದು ಸುಖಾಸುಮ್ಮನೆ ತಲೆಕೆಡಿಸಿಕೊಂಡಿದ್ದೇ ಆಯಿತು. ಸವ್ಯಸಾಚಿ, ನನ್ನ ಸವ್ಯಸಾಚಿ… ಈಗ “ಫರಿಶ್ತಾ'' ಆಗಿ ಮಿಂಚಿಬಿಟ್ಟಿದ್ದ. ಈಗ ಅವನೊಬ್ಬ ಯಶಸ್ವಿ ಲೇಖಕ. ನನಗಂತೂ ಅಚ್ಚರಿ. ಬರವಣಿಗೆಯು ನಿಜಕ್ಕೂ ಅವನ ಕೈಹಿಡಿದಿತ್ತು. 

ವರ್ಷಗಳ ನಂತರ ಬಂದು ಸವ್ಯನ ಎದುರು ನಿಂತ ಅವಳಿಗೆ ಸಿಕ್ಕಿದ್ದು ನಿರಾಶೆ. ಅದು ಆಟೋಗ್ರಾಫ್ ಈವೆಂಟಿನಲ್ಲೂ, ಸವ್ಯನ ಪೆಂಟ್ ಹೌಸಿನಲ್ಲೂ. ಚಿನ್ನದ ಪಂಜರದೊಳಗಿರುವ ಸಂತನಂತಿದ್ದ ಅವನನ್ನು ನೋಡಿ ಜಾಹ್ನವಿ ಒಂದು ಕ್ಷಣ ಬೆಚ್ಚಿದ್ದಂತೂ ಹೌದು. ಅವರಿಬ್ಬರ ನಡುವಿದ್ದ ಈ ಹೆಸರು, ಬುನಾದಿಗಳಿಲ್ಲದ ಸಂಬಂಧವನ್ನು ಸವ್ಯ ಈ ಮಟ್ಟಿಗೆ ತಂದು ನಿಲ್ಲಿಸುವನೆಂಬ ಕನಿಷ್ಠ ನಿರೀಕ್ಷೆಯೂ ಅವಳಿಗಿರಲಿಲ್ಲ. ಕಾಲವು ಅವನ ಮಟ್ಟಿಗೆ ಒಂಭತ್ತು ವರ್ಷಗಳ ಹಿಂದೆಯೇ ನಿಂತುಹೋಗಿತ್ತು. ಯಶಸ್ಸು, ಕೀತರ್ಿಗಳ ಹೊರತಾಗಿಯೂ ಸವ್ಯನೊಳಗಿದ್ದ ಆ ಲವಲವಿಕೆಯ ಹುಡುಗ ಸತ್ತುಹೋಗಿದ್ದ. ಅವನ ಹತಾಶೆಯ ನೋಟವು ಜಾಹ್ನವಿಯನ್ನು ತಪ್ಪಿತಸ್ಥಳ ಸ್ಥಾನದಲ್ಲಿ ನಿಲ್ಲಿಸಿತ್ತು. ಆದರೆ ಈ ಬಾರಿಯೂ ಅವನು ಮನಬಿಚ್ಚಿ ಮಾತಾಡಲೇ ಇಲ್ಲ. ಹಿಂದಿನಂತೆಯೇ ಸುಮ್ಮನಿದ್ದುಬಿಟ್ಟ ಈಡಿಯಟ್.    

ಫರಿಶ್ತಾ ಆದ ಸವ್ಯಸಾಚಿಯ ಆತ್ಮಕಥೆಯು ಬಿಡುಗಡೆಯಾಗುತ್ತಿದೆ ಎಂಬುದು ತಿಳಿದಾಗ ಅವಳ ಬೆನ್ನುಹುರಿಯಲ್ಲೊಂದು ಸಣ್ಣ ನಡುಕ. ಅವನು ನಿಜಕ್ಕೂ ನನ್ನ ಬಗ್ಗೆ ಬರೆದಿರಬಹುದೇ ಎಂಬ ಆತಂಕ. ಕಡಲಕಿನಾರೆಯ ಬಳಿಯ ಫ್ಲ್ಯಾಟ್ ಒಂದರಲ್ಲಿ ಏಕಾಂಗಿಯಾಗಿ ಕುಳಿತುಕೊಂಡು ದೂರದ ಸಿಂಗಾಪುರದಲ್ಲಿ ಮುಂಗೋಪಿ ಗಂಡನೊಂದಿಗೆ ಉಳಿದುಕೊಂಡಿದ್ದ ಮಗುವನ್ನು ಮಿಸ್ ಮಾಡುತ್ತಾ, ಸೂಯರ್ಾಸ್ತ-ಸೂಯರ್ೋದಯಗಳನ್ನು ಸವಿಯುತ್ತಾ ತಣ್ಣಗಿದ್ದ ಜಾಹ್ನವಿಗೆ ತನ್ನ ಮನೆಯ ಮುಂದೆ ಮಾಧ್ಯಮದವರ ಅರಚಾಟಗಳು, ಕ್ಯಾಮೆರಾಗಳ ಮೆರವಣಿಗೆಗಳು ಬೇಕಿರಲಿಲ್ಲ. ಇನ್ನೇನಾಗಲಿದೆಯೋ ಎಂಬ ಆತಂಕದಲ್ಲೇ ಒಳನಡೆದ ಅವಳು ಗಂಟೆಗಟ್ಟಲೆ ಹಾಸಿಗೆಯಲ್ಲಿ ಹೊರಳಾಡುತ್ತಾ ಕೊನೆಗೂ ಕಣ್ಣುಗಳಿಗೆ ನಿದ್ದೆ ಹತ್ತಿದಾಗ ಅರ್ಧರಾತ್ರಿಯೇ ಕಳೆದಿತ್ತು. 

************

ಆದರೆ ಆ ಶಹರದಲ್ಲಿ ನಿದ್ರೆ ಸುಳಿಯದ ಆತ್ಮಗಳೂ ಸಾಕಷ್ಟಿದ್ದವು. 

ಎಂಪಾಯರ್ ಸಂಸ್ಥೆಯ ದೊಡ್ಡ ತಂಡವೊಂದು ಡೆಡ್ ಲೈನುಗಳನ್ನು ಮೀರದಂತೆ ಲಗುಬಗೆಯಲ್ಲಿ ಬಂಡಲುಗಟ್ಟಲೆ ಪುಸ್ತಕವನ್ನು ಪ್ರಕಟಿಸುತ್ತಾ ಏದುಸಿರುಬಿಡುತ್ತಿತ್ತು. ಮಾಲೀಕ ರಸ್ತೋಗಿಯ ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಲ್ಲಿ ಅಮಿತ್ ರಸ್ತೋಗಿ, ಸವ್ಯಸಾಚಿ ಮತ್ತು ಸಂಸ್ಥೆಯ ಫೈನಾನ್ಸ್ ವಿಭಾಗದ ಮುಖ್ಯಸ್ಥನಾಗಿದ್ದ ಜಾಜರ್್ ಅಲ್ಮೇಡಾ ಹಣಕಾಸಿನ ವ್ಯವಹಾರಗಳನ್ನು ಗಂಭೀರವಾಗಿ ಚಚರ್ಿಸುತ್ತಿದ್ದರು. ಪುಸ್ತಕದ ಎರಡನೇ ಮತ್ತೆ ಮೂರನೇ ಮುದ್ರಣದ ಬಗ್ಗೆಯೂ ಲೆಕ್ಕಹಾಕುತ್ತಿದ್ದ ರಸ್ತೋಗಿ ಜಿದ್ದಿಗೆ ಬಿದ್ದವನಂತೆ ಸಿಗರೇಟುಗಳನ್ನು ಸುಡುತ್ತಿದ್ದ. ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಫರಿಶ್ತಾನ ಆತ್ಮಕಥೆಯನ್ನು ಚಲನಚಿತ್ರವಾಗಿ ಹೊರತರಲು ನಿದರ್ೇಶಕ ಪಂಚಮ್ ಬೋಸ್ ಆಗಲೇ ಒಂದಿಬ್ಬರು ನಿಮರ್ಾಪಕರನ್ನು ಗುಟ್ಟಾಗಿ ಎಡತಾಕಿಯೂ ಆಗಿತ್ತು. ಫರಿಶ್ತಾನ ಜೀವನದಲ್ಲಿ ಅದ್ಯಾವುದೋ ವಿಫಲ ಪ್ರೇಮಕಥೆಯಿದೆಯೆಂಬುದನ್ನು ಆತ ಅದೆಲ್ಲಿಂದಲೋ ತಿಳಿದುಕೊಂಡಿದ್ದ. ಆದರೆ ಆ ಹುಡುಗಿ ಯಾರು, ಆ ಕಥೆಯು ನಿಜಕ್ಕೂ ನಡೆದಿತ್ತೇ… ಇತ್ಯಾದಿಗಳನ್ನು ಅಧಿಕೃತವಾಗಿ ತಿಳಿಯಲು ಇನ್ನೇನು ಪುಸ್ತಕವು ಬಿಡುಗಡೆಯಾಗಬೇಕಿತ್ತಷ್ಟೇ. ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋದ ಒಪೇರಾ ಎಂಟಟರ್ೈನ್ಮೆಂಟ್ ಸಂಸ್ಥೆಯು ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಖ್ಯಾತ ಲೇಖಕನೊಬ್ಬನ ಬಯೋಪಿಕ್ ಒಂದು ಶೀಘ್ರದಲ್ಲೇ ನಮ್ಮ ಬ್ಯಾನರ್ ಅಡಿಯಲ್ಲೇ ಚಿತ್ರವಾಗಿ ಮೂಡಿಬರಲಿದೆ ಎಂಬುದಾಗಿಯೂ ಹೇಳಿಕೊಂಡಿದ್ದರು. ಓದುಗರ ಬಾಯಲ್ಲೂ, ಮಾಧ್ಯಮ ವಲಯದಲ್ಲೂ, ಒಟ್ಟಾರೆಯಾಗಿ ಎಲ್ಲೆಲ್ಲೂ ಇದ್ದಿದ್ದು ಒಂದೇ ಮಾತು. ಫರಿಶ್ತಾ ಮತ್ತು ಅವನ ಆತ್ಮಕಥೆ.        

ಕೊನೆಗೂ ಮಾಧ್ಯಮ, ಭಾಷಣ, ಗೌಜುಗದ್ದಲಗಳ ನಡುವೆಯೇ ಅದ್ದೂರಿ ಸಮಾರಂಭವೊಂದರಲ್ಲಿ ಫರಿಶ್ತಾನ ಬಹುನಿರೀಕ್ಷಿತ ಆತ್ಮಕಥೆಯು ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭಕ್ಕೇ ತೆರಳಿ ಪುಸ್ತಕವನ್ನು ಖರೀದಿಸುವ ಆಸೆಯಿದ್ದರೂ ಪುಸ್ತಕದೊಳಗೆ ತನ್ನ ಬಗ್ಗೆ ಏನಿರಬಹುದೆಂಬ ಕುತೂಹಲವು ಜಾಹ್ನವಿಯನ್ನು ಆತಂಕಕ್ಕೀಡು ಮಾಡಿತ್ತು. ಕೊನೆಗೂ ಗಟ್ಟಿಮನಸ್ಸು ಮಾಡಿಕೊಂಡು ಆ ಗೋಜಿಗೇ ಹೋಗದ ಜಾಹ್ನವಿ ಗೆಳತಿಯೊಬ್ಬಳಿಗೆ ಕರೆ ಮಾಡಿ ಪುಸ್ತಕವನ್ನು ತರಿಸಿಕೊಳ್ಳುವಷ್ಟರಲ್ಲಿ ದಿನವು ಬಹುತೇಕ ಅಂತ್ಯವಾಗಿತ್ತು. ಪಕ್ಕದಲ್ಲೇ ಇರುವ ಕಡಲಿನಲ್ಲಿ ಕಿತ್ತಳೆಸೂರ್ಯ ಮೆಲ್ಲನೆ ಮುಳುಗುತ್ತಿದ್ದ. 

************

“ನಂಬಲು ಸಾಧ್ಯವಾಗುತ್ತಲೇ ಇಲ್ಲ''

ಅಮಿತ್ ರಸ್ತೋಗಿ ಉದ್ಗರಿಸುತ್ತಿದ್ದ. ಒಂದು ತಿಂಗಳಲ್ಲೇ ಪುಸ್ತಕದ ಬಗೆಗಿನ ಹೈಪ್ ಗಳೆಲ್ಲಾ ಸುಳ್ಳಾಗಿ ಮಾರಾಟವು ಮಕಾಡೆ ಮಲಗಿಕೊಂಡಿತ್ತು. ವಿಮರ್ಶಕರು ಆತ್ಮಕಥನವು ತೀರಾ ಸಪ್ಪೆ ಎಂದು ಬರೆದು ಕೈತೊಳೆದುಕೊಂಡಿದ್ದರು. `ಫರಿಶ್ತಾನ ಈವರೆಗಿನ ಪುಸ್ತಕಗಳಲ್ಲಿ ತೀರಾ ನೀರಸವಾಗಿದ್ದೇ ಇವನ ಆತ್ಮಕಥೆ' ಎಂದು ಪತ್ರಿಕೆಗಳು ಬರೆದವು. ಫರಿಶ್ತಾನ ಕಟ್ಟರ್ ಅಭಿಮಾನಿಗಳು ಜಯಘೋಷ ಹಾಕಿದರೇ ಹೊರತು ಉಳಿದ ಓದುಗರು `ಓದಲೇಬೇಕು ಅನ್ನುವಂಥದ್ದಲ್ಲ' ಎಂದು ಹೇಳಿ ತಮ್ಮ ಎಂದಿನ ಜೀವನದಲ್ಲೇ ಬ್ಯುಸಿಯಾಗಿಬಿಟ್ಟರು. ಈ ಅನಿರೀಕ್ಷಿತ ಸೋಲಿನಲ್ಲಿ ಲಾಭ ಅಂತ ಆಗಿದ್ದು ಫರಿಶ್ತಾನ ಓರಗೆಯ ಲೇಖಕರಿಗಷ್ಟೇ. ಒಬ್ಬ “ಅದೆಷ್ಟು ಹಾರಾಡುತ್ತಿದ್ದ ಒರಟ, ಅವನ ಕಾಲುಗಳು ನೆಲದ ಮೇಲೆ ಇರುತ್ತಿರಲಿಲ್ಲ, ಒಳ್ಳೆಯದೇ ಆಯಿತು'', ಎಂದು ಕುಹಕವಾಡಿದರೆ ಮತ್ತೊಬ್ಬರು “ಇನ್ನೂ ನೆಟ್ಟಗೆ ನಲವತ್ತಾಗಲಿಲ್ಲ ಅವನಿಗೆ, ಈಗಲೇ ಮಹಾಪುರುಷ ಎಂಬಂತೆ ಆತ್ಮಕಥೆ ಬರೆಯಲು ಹೊರಟ'' ಎಂದೆಲ್ಲಾ ಮತ್ಸರದ ಮಾತಾಡಿಕೊಂಡು ಕೊಂಚ ಹಾಯಾದರು. ಪಂಚಮ್ ಬೋಸ್ ಮತ್ತು ಒಪೇರಾ ಸಂಸ್ಥೆಯವರದ್ದೂ ಇದೇ ಕಥೆ. ಚಿತ್ರವನ್ನು ಮಾಡಬೇಕಾಗಿರುವ ಕಂಟೆಂಟ್ ಏನೂ ಪುಸ್ತಕದಲ್ಲಿಲ್ಲ ಎಂದು ಪಂಚಮ್ ಕೈಚೆಲ್ಲಿ ಕುಳಿತಾಗ ಓಪೇರಾಗೆ ನಿರಾಶೆಯಾಗಿದ್ದಂತೂ ಸತ್ಯ.   

ನಾಲ್ಕನೇ ಮತ್ತು ಐದನೇ ಮುದ್ರಣದ ಬಗ್ಗೆ ಕನಸುಕಾಣುತ್ತಿದ್ದ ರಸ್ತೋಗಿಗೆ ತೀವ್ರ ನಿರಾಶೆಯಾಗಿತ್ತು. ಬಿಡುಗಡೆಯ ಸಮಯದಲ್ಲಿ ಉಂಟಾಗಿದ್ದ ಹೈಪ್ ನಿಂದಾಗಿ ಮೊದಲ ಮುದ್ರಣದ ಎಲ್ಲಾ ಪ್ರತಿಗಳು ಬಿಕರಿಯಾಗಿದ್ದೇನೋ ಹೌದು. ಆದರೆ ಎರಡನೇ ಮುದ್ರಣದ ಪ್ರತಿಗಳನ್ನು ಮುಗಿಸುವಷ್ಟರಲ್ಲಿ ಸಾಕುಸಾಕಾಗಿತ್ತು. ದಿಢೀರ್ ಕುಸಿದ ಮಾರಾಟದ ಸಂಖ್ಯೆಯನ್ನು ಕಂಡು ಹೌಹಾರಿದ ರಸ್ತೋಗಿ ಮೂರನೆಯ ಮುದ್ರಣಕ್ಕೆ ಕೈಹಾಕುವ ಸಾಹಸವನ್ನು ಮಾಡಲಿಲ್ಲ. ಹಾಗೆ ನೋಡಿದರೆ ರಸ್ತೋಗಿ ಸಾಹಿತ್ಯಪ್ರಿಯನೇನೂ ಅಲ್ಲ. ಆದರೆ ಉದ್ಯಮದ ಕೆಲ ರಹಸ್ಯಗಳೂ, ಮಾಕರ್ೆಟಿಂಗ್ ಚಾಕಚಕ್ಯತೆಯೂ ಅವನಲ್ಲಿದ್ದುದರಿಂದ ಬಹುಬೇಗನೇ ಆತ ಮೇಲಕ್ಕೇರಿದ್ದ. ಸಾಲದ್ದಕ್ಕೆ ಸವ್ಯಸಾಚಿ ಎಂಬ ಚಿನ್ನದ ಮೊಟ್ಟೆಯಿಡುವ ಕೋಳಿಯೂ ಆತನ ತೆಕ್ಕೆಗೆ ಬಂದಿತ್ತು. 

ಆದರೆ ಈ ಬಾರಿ ಲೆಕ್ಕಾಚಾರವು ತಲೆಕೆಳಗಾಗಿ ಅಮಿತ್ ರಸ್ತೋಗಿ ನಿಜಕ್ಕೂ ಗೊಂದಲದಲ್ಲಿದ್ದ. 

***********

ಜಾಹ್ನವಿ ಇನ್ನೂರೈವತ್ತು ಪುಟದ ಪುಸ್ತಕವನ್ನು ಮುಗಿಸಿ ಮೇಲಕ್ಕೆದ್ದಳು. 

ಪುಸ್ತಕದ ಹಿಂಭಾಗದ ಹೊದಿಕೆಯ ಮೇಲೆ ಸವ್ಯನ ನಗುಮುಖದ ಚಿತ್ರವೂ ಬೆನ್ನುಡಿಯೂ ಮುದ್ರಿತವಾಗಿತ್ತು. ಅದೇನು ಬರೆದಿದ್ದಾನೆಯೋ, ಇನ್ನೇನು ಮಾಧ್ಯಮಗಳಿಗೆ ತಾನು ಸ್ಕೂಪ್ ಆಗಲಿರುವೆಯೇನೋ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದ ಜಾಹ್ನವಿ ನಿರಾಳಳಾಗಿದ್ದಳು. ಸವ್ಯಸಾಚಿ ತನ್ನನ್ನೊಬ್ಬಳನ್ನು ಬಿಟ್ಟು ಉಳಿದೆಲ್ಲವನ್ನೂ ತನ್ನ ಆತ್ಮಕಥೆಯಲ್ಲಿ ವಿವರವಾಗಿ ಬರೆದಿದ್ದ. ಮೂರು ಘಂಟೆಯ ಚಿತ್ರವೊಂದನ್ನು ತೆಗೆದು ತಾನು ಎಲ್ಲೆಲ್ಲಿ ಬರುವೆನೋ ಅವುಗಳಿಗೆಲ್ಲಾ ಕತ್ತರಿ ಹಾಕಿ ಒಂದೂವರೆ ಘಂಟೆಗೆ ಇಳಿಸಿದಂತೆ “ಜಾಹ್ನವಿ'' ಎಂಬ ಪಾತ್ರವು ಕಡೇಪಕ್ಷ ಬದಲಿಸಿದ ಹೆಸರಿನಲ್ಲಾದರೂ ಪುಸ್ತಕದಲ್ಲಿ ಬರಲಿಲ್ಲ. ಕಡೇಪಕ್ಷ ಜಾಹ್ನವಿಯ ದೃಷ್ಟಿಕೋನದಲ್ಲಂತೂ ಕಥೆಯು ದಿಕ್ಕುತಪ್ಪಿಹೋಗಿತ್ತು. ಕಾಟಾಚಾರಕ್ಕೆ ಬರೆದಂತೆ ನಿರೂಪಣೆಯು ಜಾಳುಜಾಳಾಗಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತ್ತು. ಕೊನೆಗೂ ಅದು ತನ್ನೆಡೆಗಿರುವ ಕೋಪವೋ, ನಿರ್ಲಕ್ಷ್ಯವೋ, ಜಾಣ ಕುರುಡೋ ಅಥವಾ ಕೆಲಸಕ್ಕೆ ಬಾರದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದಿರಲು ಸವ್ಯ ನಡೆಸಿದ ಚಾಣಾಕ್ಷ ನಡೆಯೋ… ಒಂದೂ ಆಕೆಗೆ ತಿಳಿಯಲಿಲ್ಲ.

ಜಾಹ್ನವಿಯ ಯೋಚನೆಗಳು ಮುಗಿಯುವಂತೆ ಕಾಣಲಿಲ್ಲ. ಜಾಹ್ನವಿಯೂ ಸೇರಿದಂತೆ ತನ್ನ ನಿಗೂಢ ಖಾಸಗಿ ಜಗತ್ತಿನೊಳಗೆ ಯಾರಿಗೂ ಪ್ರವೇಶವಿಲ್ಲವೆಂಬುದನ್ನು ಸವ್ಯಸಾಚಿ ಮತ್ತೊಮ್ಮೆ ಸಾಬೀತುಪಡಿಸಿದ್ದ. ಅವತ್ತಿಗೂ ಇವತ್ತಿಗೂ ಬದಲಾಗದೇ ಉಳಿದ ಸಂಗತಿಯೆಂದರೆ ಅವನ ವಿಲಕ್ಷಣ ಮೌನವೊಂದೇ. ಕೊನೆಗೂ ಪೆಂಟ್ ಹೌಸಿನ ಆ ಭೇಟಿಯಲ್ಲೂ ಅವನು ಏನನ್ನೂ ಹೇಳಲಿಲ್ಲ, ನಾನೂ ಏನನ್ನೂ ಕೇಳಲಿಲ್ಲ. ಹಾಗೊಮ್ಮೆ ಏನಾದರೂ ನಾನು ಹೇಳುವವಳಿದ್ದರೂ ಸುಮ್ಮನೆ ಒಪ್ಪಿಕೊಳ್ಳುತ್ತಿದ್ದೇನೋ ಏನೋ, ನನಗೇ ಗೊತ್ತಿಲ್ಲ. ಆದರೆ ಅವನು ಮಾತನಾಡುವ ಸ್ಥಿತಿಯಲ್ಲಾಗಲೀ ಕೇಳುವ ಸ್ಥಿತಿಯಲ್ಲಾಗಲೀ ಇರಲಿಲ್ಲ. ಸವ್ಯನ ಮೌನದ ಹಿಂದಿನ ಹಿಂದಿರುವ, ಹೇಳದೇ ಉಳಿದ ಮಾತುಗಳು ಜಾಹ್ನವಿಗೆ ಕೊನೆಗೂ ಬಿಡಿಸಲಾಗದ ಒಗಟಾಗಿಯೇ ಉಳಿದಿದ್ದವು.

***********

ಈ ಅನಿರೀಕ್ಷಿತ ಹಿನ್ನಡೆಯಿಂದಾಗಿ ಸವ್ಯಸಾಚಿಯು ಕಂಗೆಟ್ಟಿರುವಂತೇನೂ ಪಾವನಾಳಿಗೆ ಕಾಣಲಿಲ್ಲ. ಆದರೆ ಎಲ್ಲೋ “ಜಾಹ್ನವಿ'' ಫ್ಯಾಕ್ಟರ್ ಎನ್ನುವುದು ಈ ಬಹುನಿರೀಕ್ಷಿತ ಪುಸ್ತಕದ ದಿಕ್ಕುತಪ್ಪಿಸಿದೆ ಎಂಬುದನ್ನು ತಿಳಿಯದಷ್ಟು ಪೆದ್ದಿಯೂ ಅವಳಾಗಿರಲಿಲ್ಲ. ಅಷ್ಟಕ್ಕೂ ಜಾಹ್ನವಿ ಮತ್ತು ಸವ್ಯಸಾಚಿಯ ನಡುವೆ ಅಂಥದ್ದೇನಿತ್ತು ಎಂಬುದು ಅವಳಿಗೂ ತಿಳಿದಿರಲಿಲ್ಲ. ಆದರೆ ಶಾಂತಸಾಗರಕ್ಕೆ ಸಾವಿರ ವೋಲ್ಟ್ ಗಳ ಸಿಡಿಲೊಂದು ಬಡಿದಾಗ ಉಂಟಾಗುವ ಜಲಪ್ರಳಯದ ಪ್ರತಿರೂಪದಂತೆ ಆಟೋಗ್ರಾಫ್ ಈವೆಂಟಿನ ಆ ದಿನ ಸವ್ಯಸಾಚಿ ಅವಳಿಗೆ ಕಂಡಿದ್ದ. ಸಿಡಿಲು “ಜಾಹ್ನವಿ'' ಎಂಬ ಹೆಣ್ಣಿನ ರೂಪದಲ್ಲಿ ಆ ದಿನ ಆತನೆದುರು ನಿಂತಿತ್ತು ಎಂಬುದು ರಸ್ತೋಗಿಯಿಂದ ಅವಳಿಗೆ ಪರೋಕ್ಷವಾಗಿ ತಿಳಿದುಬಂದಿತ್ತು.

ಸವ್ಯಸಾಚಿ ಅಲಿಯಾಸ್ ಫರಿಶ್ತಾ ಆವತ್ತೂ ತನ್ನ ನಿಲರ್ಿಪ್ತತೆಯ ಮುಖವಾಡದ ಹಿಂದೆಯೇ ಬೆಚ್ಚಗಿದ್ದ. ಜಾಹ್ನವಿಯ ಹೆಸರಿಲ್ಲದೆ ಪುಸ್ತಕವು ಅಪೂರ್ಣ ಎಂಬ ಸತ್ಯವು ಹಸ್ತಪ್ರತಿ ಹಂತದಲ್ಲಿದ್ದಾಗಲೇ ಅವನಿಗೆ ತಿಳಿದಿತ್ತು. ಅಷ್ಟಕ್ಕೂ ಅವನ ಜೀವನದಲ್ಲಿ ಇದ್ದಿದ್ದಾದರೂ ಏನು? “ಜಾಹ್ನವಿಯ ಮುನ್ನ'' ಮತ್ತು “ಜಾಹ್ನವಿಯ ನಂತರ''ಗಳೆಂಬ ಎರಡೇ ಅಧ್ಯಾಯಗಳು. ಹೀಗೆ ಆತ್ಮಕಥನದ ಆತ್ಮವಾದ ಜಾಹ್ನವಿಯನ್ನೇ ಕೈಬಿಟ್ಟ ಪರಿಣಾಮವು ನಿರೂಪಣೆಯಲ್ಲಿ, ಕಥನಶೈಲಿಯಲ್ಲಿ ಎದ್ದುಕಾಣುತ್ತಿತ್ತು. ಇದೇ ಮೊದಲ ಬಾರಿಗೆ ಫರಿಶ್ತಾ ಕಾಲ್ಪನಿಕವಲ್ಲದ ಕಥಾಹಂದರವೊಂದನ್ನು, ಅದರಲ್ಲೂ ತನ್ನದೇ ಕಥೆಯನ್ನೇ ಓದುಗರ ಮುಂದಿರಿಸಿದ್ದ. ಆದರೆ ಪುಸ್ತಕವು ವಿಮರ್ಶಕರ ಕಣ್ಣಿನಲ್ಲೂ ರಸ್ತೋಗಿಯ ತಿಜೋರಿಯ ಲೆಕ್ಕಾಚಾರದ ಪ್ರಕಾರವೂ ಸೋತಿತ್ತು. 

ಸೋಲು ತನ್ನದೋ, ತನ್ನ ಪುಸ್ತಕದ್ದೋ, ತನ್ನ ಜೀವನದ್ದೋ… ಇತ್ಯಾದಿಗಳನ್ನು ಯೋಚಿಸುವಷ್ಟೂ ಸಾಧ್ಯವಾಗದಷ್ಟು ಮಾನಸಿಕವಾಗಿ ಸೋತುಹೋಗಿದ್ದ ಸವ್ಯಸಾಚಿ. ಆದರೆ ಒಂದು ವಿಷಯವಂತೂ ದಿಟವಾಗಿತ್ತು. ಜಾಹ್ನವಿ ಆತನ ಜೀವನದ ಒಂದು ಬಹುಮುಖ್ಯ ಜೀವಸೆಲೆಯಾಗಿ ಉಳಿದುಹೋಗಿದ್ದಳು. ಅವಳು ಬಿಟ್ಟು ಹೋದ ಖಾಲಿತನವನ್ನು ತುಂಬಿಸಲು ಯಾವ ಖ್ಯಾತಿಗೂ, ಯಶಸ್ಸಿಗೂ, ಎಲ್ಲವನ್ನೂ ಮರೆಸುವ ಕಾಲವೆಂಬ ಕಾಲಕ್ಕೂ ಸಾಧ್ಯವಿರಲಿಲ್ಲ. ಬಹುಶಃ ಈ ಹೊತ್ತಿನಲ್ಲಿ ಸ್ವತಃ ಅವಳಿಗೂ ಸಾಧ್ಯವಿಲ್ಲವೋ ಏನೋ!

ಫರಿಶ್ತಾ ತನ್ನ ಈಜುಕೊಳದಲ್ಲಿ ಕಳೆದ ಒಂದು ತಾಸಿನಿಂದ ಈಜುತ್ತಿದ್ದಾನೆ. ಆ ನೀಲಿನೀರಿನಲ್ಲಿ ತನ್ನ ಕಣ್ಣೀರನ್ನು ಮುಚ್ಚಿಡುತ್ತಿದ್ದಾನೆಯೇ ಅವನು? ನನಗಂತೂ ಗೊತ್ತಿಲ್ಲ. 

********* 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x