ಕವಿತಾ ಲಹರಿ: ರಾಘವೇಂದ್ರ ತೆಕ್ಕಾರ್

Raghavendra Thekkar

ಬುದ್ದಿ ಭಾವಗಳ ರೂಪಿತ ವಿಸ್ಮಯವನ್ನು ಕವಿತೆ ಎನ್ನುವದೊ? ಪದಗಳ ಜೋಡಣೆಯನ್ನು ಕವಿತೆ ಎನ್ನುವದೊ?ಪರಿಶ್ರಮ, ಕಲಾ ಕೌಶಲ್ಯ, ಪ್ರತಿಭೆಯ ಅನಾವರಣದ ರೂಪಕವನ್ನು ಕವಿತೆಯೆನ್ನುವದೊ?ಕಾಣದರ ಜೊತೆಗೆ ಕಂಡಂತೆ ಮಾತಿಗೆ ನಿಲ್ಲುವ ಕ್ರಿಯೆ ಕವಿತೆಯೊ? ನಮ್ಮೊಳಗಿನ ಭಾವಗಳ ಜೊತೆಗಿನ ಸಂವಾದವೊ? ಕವಿತೆ ಎಂದರೆ ನನ್ನೊಳಗೊ??? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಗೆ ಎಡತಾಕುವದೆ ಕವಿತೆಯೊ?ನನಗಂತು ಕವಿತೆ ಎಂದರೆ ಏನು ಎಂಭ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬಹುಶಃ ಪ್ರತಿ ಪ್ರಶ್ನೆಗಳು ಕವಿತೆ ಎಂಬುದಕ್ಕೆ ಅರ್ಥ ಕೊಡುತ್ತಿದೆ.ಎಲ್ಲವೂ ಹೌದಾಗಿದ್ದು ಇಲ್ಲದರ ಭಾವಗಳ ಕೂಡುವಿಕೆಯ ಜೊತೆಗಿನ ಸಂವಾದದಲ್ಲಿ ಜೋಡಿಸಿ ಬರೆದ ಪದಗಳ ಸಾಲನ್ನು ಇದಕ್ಕೂ ಮೀರಿದ ಅರ್ಥದಲ್ಲಿ ಕವಿತೆ ಎನ್ನಲು ಬಹುಶಃ ಅಡ್ಡಿ ಇಲ್ಲವೇನೊ?


ಕವನ ವಾಚನಕ್ಕೊ? ಗಾಯನಕ್ಕೊ?ಅಥವಾ ನಮ್ಮೊಳಗಿನ ಪ್ರಶ್ನೋತ್ತರಗಳನ್ನು ಬರಿದೆ ಪ್ರಸ್ತುತಪಡಿಸುವಕ್ಕೊ ಎಂಬ ಪ್ರಶ್ನೆಗಳು ಕೂಡ ಕವಿತೆ ಎಂದರೆ?? ಎಂಬ ಪ್ರಶ್ನೆಯ ಮುಂದುವರಿದ ಭಾಗವೆ ಹೌದು.ಕವನಗಳ ಭಾವಗಳನ್ನು ಹೊರಗೆಡವಿ ಸ್ವರ ಮಾಧುರ್ಯದ ಸಂಗೀತಗಳನ್ನು ಒಳಗೊಂಡ ಗೀತೆಯಾಗಿಸಿ ಜನ ಮಾನಸಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ಕೆ ಎಸ್ ಅಶ್ವಥ್ ಮುಂತಾದವರು ನಮ್ಮನ್ನಗಲಿಯಾಗಿದೆ. ಕವನಗಳನ್ನು ಜನಪ್ರಿಯಗೊಳಿಸಲು ನಡೆದ ನಿರಂತರ ಯಶಸ್ವಿ ಪ್ರಯೋಗಗಳು ಇವರ ಕಾಲಕ್ಕೆ ಸೀಮಿತವಾಗಿತ್ತು ಎಂದರೆ ತಪ್ಪಿಲ್ಲ. ಬಹುಶಃ ಈಗಿನ ಹೊಸ ತಲೆಮಾರಿನ ಪ್ರಯತ್ನಗಳು ಅವರು ಕೊಡಮಾಡಿದ ಆ ಪ್ರಯೋಗಗಳ ಸುತ್ತನೆ ಗಿರಕಿ  ಹೊಡೆಯುತ್ತಿದೆ . ಆ ಫರಿಧಿಗಳನ್ನು ದಾಟಿ ಇನ್ನಷ್ಟು ಮುಂದುವರಿಯುವ ಹಾದಿ ಕಾಣಿಸುತ್ತಿಲ್ಲ.ಇದರರ್ಥ ಕವಿತೆಗಳು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆಯೊ? ಜನಪ್ರಿಯತೆ ಹಾಗೂ ಈ ಬಗ್ಗೆಯ ಆಸಕ್ತಿ ಕಡಿಮೆಯಾಗಿದೆಯೊ?ಗೊತ್ತಿಲ್ಲ. ಆದರೆ ಒಂದಂತು ಸತ್ಯ, ಈ ಕವಿತಾ ಜಗತ್ತಿಗೆ ಹಲವು ಹೊಸ ಬಗೆ ಪರಿಚಯವಾಗುತ್ತಿದೆ,ಅದರಲ್ಲಿ ಹೊಸ ಹೊಸ ಕವಿಗಳ ಜಾಡುಗಳು ಕಾಣಸಿಗುತ್ತಿವೆ. ಈ ನಿಟ್ಟಲ್ಲಿ ಯೋಚಿಸಿದಾಗ ಆಸಕ್ತಿ ಕಡಿಮೆಯಾಗಿದೆ ಎಂಭ ಮಾತಿಗೆ ಅರ್ಥ ಸಿಗುವದಿಲ್ಲ. ಓದುಗ ಮತ್ತು ಕವಿಯ ಮಧ್ಯದ ಸಂವಹನದ ಕೊರತೆಯಿಂದಾಗಿ ಕವಿತೆ ಅಥವಾ ಇದರ ಗುಚ್ಚವಾದ ಕವನ ಸಂಕಲನಗಳು ಎಂದಿನ ಚಾರ್ಮ್ ಕಳೆದುಕೊಳ್ಳುತ್ತಿದೆ ಎಂದೆನಿಸುತ್ತಿದೆ.


ಕವನ ಕವಿತೆಗಳನ್ನು ಪ್ರಚುರಪಡಿಸುವಲ್ಲಿ ಸಾಮಾಜಿಕ ಜಾಲ ತಾಣಗಳು ತನ್ನದೆ ಆದ ಕೊಡುಗೆಗಳನ್ನು ಇತ್ತೀಚಿನ ದಿನದಲ್ಲಿ ನೀಡಿದೆ. ಇಲ್ಲಿ ಅಬ್ಬರವಿದೆ ,ಅತಿರೇಕಗಳಿವೆ, ಜೊಳ್ಳಿದೆ, ಹೊಟ್ಟಿದೆ, ಕಾಳಿದೆ ಹೀಗೆ ಎಂತಿದ್ದರು ಒಂದಷ್ಟು ಕವನ ಕ್ಕಾಗೆ ಒಂದು ಓದುಗ ವರ್ಗವನ್ನ ಹಾಗೆಯೆ ಹೊಸ ಕವಿಗಳನ್ನ ಹುಟ್ಟು ಹಾಕುತ್ತಿದೆ.ಕಸುಬಿಲ್ಲದವರು ಏನೊ ಗೀಚುತ್ತಾರೆ ಅದಕ್ಕೊಂದಿಷ್ಟು ಜನ ಲೈಕ್ ಕಮೆಂಟ್ ಮಾಡ್ತಾರೆ, ಅದೇನುಂತ ಬರೀತಾರೊ ಕರ್ಮ…… ಹೀಗೆ ಹತ್ತು ಹಲವು ಬಗೆಯ ಕುಹಕವಾಡಲೆ ಎಂಬಂತೆ ಮತ್ತೊಂದು ವರ್ಗ ರೂಪಿತಗೊಂಡಿದೆ.ಹಾಗೊ ಹೀಗೊ ಒಟ್ಟಲ್ಲಿ ಕವನ ಕವಿತೆ ಕವಿಗಳ ಬಗ್ಗೆ ಒಂದಷ್ಟು ಚರ್ಚೆಗೆ ಈ ಬೆಳವಣಿಗೆಗಳು ದಾರಿ ಮಾಡಿಕೊಟ್ಟಿದೆ. ಅದೆಷ್ಟರ ಮಟ್ಟಿಗೆ ಈ ಚರ್ಚೆಗಳು ಅರೋಗ್ಯ ಪೂರ್ಣ ವಾಗಿದೆ ಎಂಬುದನ್ನು ಕಾಲವೆ ನಿರ್ಧರಿಸಬೇಕಷ್ಟೆ. ಈ ಎಲ್ಲದರ ನಡುವೆಯೂ ಕವನ ಸಂಕಲನ ಬಿಡುಗಡೆಯ ಸಣ್ಣ ಸಣ್ಣ ಕಾರ್ಯಕ್ರಮಗಳು ದೊಡ್ಡ ಮಟ್ಟಿನಲ್ಲಿ ಸುದ್ದಿಯಾಗುತ್ತಿದೆ. ಕಾರ್ಯಕ್ರಮಗಳು ವಿಭಿನ್ನವಾಗಿ ಬೇರೆ ಬೇರೆ ಶೈಲಿಯಲ್ಲಿ ಮೂಡಿಬರುತ್ತಿದೆ. ಕಾರ್ಯಕ್ರಮದ ಆಚೆಗೂ ಸುದ್ದಿಯಾಗಬಲ್ಲ ಕವನ ಸಂಕಲನಗಳು ಬಿಡುಗಡೆಯಾಗುತ್ತಿದೆ. ಇವೆಲ್ಲವನ್ನು ಪ್ರಚುರಪಡಿಸುವ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಉಪಯೋಗಿಸಲ್ಪಡುತ್ತಿದೆ. ಇಷ್ಟಿದ್ದರೂ ಕವನ ಸಂಕಲನಗಳು ಎಂದಿನ ಚಾರ್ಮ್ ಕಳೆದುಕೊಳ್ಳುತ್ತಿದೆ ಎಂಬ ಮಾತಿಗೆ ಬದ್ದನಾಗಿರಬೇಕಾದ ಅನಿವಾರ್ಯತೆಯೊಂದು ನನ್ನ ಕಾಡುತ್ತಿದೆ. ಯಾಕಿಂಗೆ???

ಪ್ರಕಾಶಕ ಕವನ ಸಂಕಲನ ದುಡ್ಡು ಮಾಡುವ ಬಾಬತ್ತಲ್ಲ ಎಂಬುದನ್ನು ಮನದಟ್ಟಿಸಿಕೊಂಡಿದ್ದಾನೆ. ಜೀವ ತುಂಬುವ ಎಷ್ಟೊ ಕವಿತೆಗಳಿರಲಿ ಅದರಾಚೆಗೂ ಕವಿತೆ ಬರೆದ ಕವಿಗೆ ಇದರಿಂದ ಹೊರತಾದ ನೇಮು ಪ್ರೇಮು ಇರಬೇಕಾದ ಅನಿವಾರ್ಯತೆಯನ್ನು ಇಂದಿನ ಕಾಲಘಟ್ಟ ಸೃಷ್ಟಿಸಿಬಿಟ್ಟಿದೆ.ಹಾಗಿದ್ದರಷ್ಟೆ ಕವಿತೆಗಳು ಬಿಕರಿಯಾಗುತ್ತದೆ.ಪ್ರಕಾಶನ ಎಂಬುದು ವ್ಯವಹಾರ ಎಂದಂದುಕೊಂಡಾಗ ಕವಿತೆಗಳು ಬಿಕರಿಯಾಗಬೇಕಾಗುತ್ತೆ.ಅದರ ಹೊರತಾಗಿ ಕವಿತೆಯೆಂಬುದು ಹೃದಯಗಳ ಸಂವಹನವಾಗಬಲ್ಲ ಸರಕೆ ಹೊರತಾಗಿ ಬಿಕರಿಯಾಗುವ ಸರಕಲ್ಲ. ಈ ಸಂದಿಗ್ದತೆಯನ್ನು ಮೀರುವ ಸಲುವಾಗಿ ಕವಿಗಳೆ ಕುದ್ದು ಪ್ರಕಾಶಕನಾಗುತ್ತಾನೆ,ಮಾರುಕಟ್ಟೆಯ ಮೋಡಿ ಅವನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆಂದರೆ ಇದರ ಸಹವಾಸವೆ ಸಾಕು ಎನ್ನುವಷ್ಟರ ಮಟ್ಟಿಗೆ…..ಹೀಗಾದರೆ ಅವನೊಳಗಿನ ಕವಿ ಏನಾಗಬೇಡ?. ಕವಿ ಎಂಬವ ಕನಸುಗಾರನೆ ಹೊರತಾಗಿ ವ್ಯಾಪಾರಿಯಲ್ಲ ಕನಸುಗಳನ್ನು ಬಿಕರಿಗಿಡುವ ಬರದಲ್ಲಿ  ತನ್ನ ಭಾವನೆಗಳ ಮೂಲಸೆಲೆಯನ್ನು ಘಾಸಿ ಗೊಳಿಸಿಕೊಳ್ಳುವದು ಎಷ್ಟರ ಮಟ್ಟಿಗೆ ಸರಿ? ಹಾಗಾದರೆ ಹೊಸಬರು ಕವಿತೆಯನ್ನು ಓದುಗರಿಗೆ ತಲುಪಿಸುವದೆಂತು?ಇದಕ್ಕುತ್ತರವನ್ನು ಸಾಮಾಜಿಕ ಜಾಲತಾಣಗಳು , ಜಾಲತಾಣದ ಪತ್ರಿಕೆಗಳು ಕೊಡುತ್ತಿವೆ. ಬರೆಯಬೇಕಷ್ಟೆ. ಇಲ್ಲಿ ಪ್ರಶಂಸೆ ಮಾತ್ರ ಸಿಗುವದಿಲ್ಲ ಬದಲಾಗಿ ಕುಹಕಗಳು , ನಿರಾಸಕ್ತಿಗಳು,ಕಟು ವಿಮರ್ಶೆಗಳು ಎಲ್ಲವು ಸಿಗುತ್ತವೆ. ಇವೆಲ್ಲವು ನನ್ನ ಕವಿತೆಗೆ ದಕ್ಕಿದವು ಎನ್ನುತ್ತ ತನ್ನ ಮನದಿಚ್ಚೆಯಂತೆ ತನಗಾಗಿ ಬರೆಯುತ್ತಾ ಪಕ್ವವಾಗಬಹುದಾದ ಎಲ್ಲ ಅವಕಾಶ ಇವತ್ತಿದೆ.ಆ ಮೂಲಕ ತನ್ನದೆ ಓದುಗ ವರ್ಗವನ್ನ ಸೃಷ್ಟಿಸಿಕೊಳ್ಳಬಹುದಾದ ಸಾಧ್ಯತೆಯನ್ನ ಸಾಮಾಜಿಕ ಜಾಲತಾಣಗಳು ಕೊಡಮಾಡಿದೆ. ಬಳಸಿಕೊಳ್ಳಬೇಕಷ್ಟೆ.


ಕವಿತೆ ಹೀಗೆ ಬರೆಯಬೇಕು ಎಂಬುದಕ್ಕೆ ಯಾವುದೆ ಸಿದ್ದ ಸೂತ್ರಗಳಿಲ್ಲ, ಒಂದೊಂದು ಪದವು ಕವಿಗೊಂದು ಓದುಗನಿಗೊಂದರಂತೆ ತನಗೆ ಬೇಕಾದಂತೆ ಅರ್ಥೈಸಿಕೊಂಡು ತನ್ನದಾಗಿಸಿಕೊಳ್ಳಬಹುದಾದ ಎಲ್ಲ ಅವಕಾಶಗಳು ಎಲ್ಲರೀಗೂ ಇದೆ. ಬಹುಶಃ ಇದೆ ಕವಿತೆಯ ಶಕ್ತಿ ಮತ್ತು ಇದರ ಯಶಸ್ಸಿನ ಗುಟ್ಟು.ಇದನ್ನು ಅರ್ಥೈಸಿಕೊಂಡು ಕವಿ ಕವಿತೆ ಕಟ್ಟಬೇಕಿದೆ ಅಂದರೆ ಕವಿತೆ ತನ್ನದು ಮಾತ್ರವಲ್ಲದೆ ಓದುಗನ ಸೊತ್ತು ಹೌದು ಎಂಬುದನ್ನು ಕವಿ ಒಪ್ಪಬೇಕಿದೆ. ಆಗಷ್ಟೆ ಕವಿತೆ ಸಂವಹನತೆಯನ್ನು ಕಂಡುಕೊಳ್ಳಬಹುದು. ಯಶಸ್ಸಿನ ಹಿಂದೆ ತನ್ನದೊಂದು ಕವನ ಸಂಕಲನ ಹೊರತರಬೇಕೆಂದು ಆಶಿಸುತ್ತ ಬರೆಯುವ ಬದಲು ತನಗಾಗಿ ಪದ ಕಟ್ಟುತ್ತ ತನ್ನತ್ತ  ಜನಗಳನ್ನು ಆಕರ್ಶಿಸುತ್ತ ಸಾಗಿದಾಗ ಯಶಸ್ಸೆ ತನ್ನ ಹಿಂದೆ ಬರುತ್ತದೆ ಎಂಬುದನ್ನು ಹೊಸಬರು ಅರಿತುಕೊಳ್ಳಬೇಕಿದೆ.ವಿಮರ್ಶೆಗೆ ಪ್ರತಿ ವಿಮರ್ಶೆ ಹುಟ್ಟುವ ಕಾಲವಿದು. ಅತಿ ವಿಮರ್ಶೆಗಳು ವ್ಯಂಗ್ಯಕ್ಕೆ ದಾರಿ ಕೊಡುತ್ತದೆ. ಹಾಗಿದ್ದಾಗ ಹೊಸಬ ತಾನು ಕವಿಯಾಗುವದಲ್ಲದೆ ಉತ್ತಮ ಓದುಗನಾಗಿ ಇರಬೇಕಾದ ಅನಿವಾರ್ಯತೆಯಿದೆ.  ತನ್ನನ್ನು ತಾನು ಪಕ್ವಗೊಳಿಸಿಕೊಂಡು ಮುಂದುವರಿಯಬೇಕಿದೆ. ಯಶಸ್ಸು ಅಥವಾ ಪ್ರಸಿದ್ದಿ ಎಂಬುದು ಇವತ್ತಿಂದ ನಾಳೆಗೆ ಸಿಗುವಂತದ್ದಲ್ಲ ಇದು ಪರಿಶ್ರಮವನ್ನು ಬೇಡುತ್ತದೆ. ಎಲ್ಲರು ಕವಿಗಳಾಗಲು, ಚಿತ್ರ ಸಾಹಿತಿಗಳಾಗಲು, ಕವನ ಸಂಕಲನದ ಒಡೆಯರಾಗಲು ಅವಕಾಶಗಳಿಲ್ಲ. ಅವಕಾಶಗಳು ನಮ್ಮನ್ನೆ ಹುಡುಕಿ ಬರುವಂತಾಗಬೇಕು. ತಾಳ್ಮೆ, ಸೂಕ್ಷ್ಮ ಸಂವೇದಿತನವು ನಮ್ಮಲ್ಲಿದ್ದರೆ ಪದ ಕಟ್ಟುವಿಕೆಯಲ್ಲಿ ಪಕ್ವತೆ ದೊರಕೀತು ಎಂಬ ಆಶಾವಾದ ನಮ್ಮದಾಗಿರಲಿ. ಬಹುಶಃ ಇಲ್ಲಿರುವ ಬಹು ಪ್ರಶ್ನೆಗಳೊಂದಿಗೆ ನಮ್ಮ ಯೋಚನಾ ಲಹರಿಗೆ ತಾಗುವಂತ ಉತ್ತರಗಳು ಅದರ ಜೊತೆ ಜೊತೆಗೆ ಅಡಗಿವೆ. ಬೇರೇನು ಯೋಚನೆಯಿಲ್ಲದೆ ಕವಿತೆ ಕಟ್ಟುವ ಕೆಲಸಗಳು ನಿರಂತರವಾಗಿರಲಿ  ಮತ್ತೊಂದು ದಿನ ಕವಿತೆಗಾಗಿ ಒಂದಷ್ಟರ ಜೊತೆ ಮತ್ತಷ್ಟು ಓದುಗರು ಕವಿತೆಯಾಗುತ್ತಾರೆ ಎಂಭ ನಿರೀಕ್ಷೆಗಳ ಜೊತೆ ಭಾವನೆಗಳ ಸಂಗಮಗಳು ನಡೆಯುತ್ತಿರಲಿ.ಹೊಟ್ಟು ಜೊಳ್ಳುಗಳು ಗಾಳಿ ಬಂದೆಡೆಗೆ ತೂರಲಿ, ಬರೀಯ ಕಾಳಷ್ಟೆ ನಮಗೆ ದಕ್ಕಲಿ.

ಜಗದೆಲ್ಲವ ನೆನಪುಗಳೂ ಪೀಕಲಾಟಗಳೂ
ನನ್ನ ತಲುಪಿ ಭಾಧಿಸುತ್ತಲಿರುತ್ತದೆ
ನನ್ನ ನೇಸರ ರಂಗಿನ ಸಂಜೆಯನ್ನ ಕಪ್ಪಾಗಿಸುತ್ತದೆ
ಆವರಿಸುವ ಕತ್ತಲನ್ನೆ ಅಪ್ಪಿಕೊಳುತ್ತೇನೆ
ಬೆಳಗನ್ನೂ ಇದಿರುಗೊಳ್ಳುವದರ ಬಗ್ಗೆ ಸಿದ್ದನಾಗುತ್ತೇನೆ 
ನಿರಾಕಾರವೆಂಬ ಮುಸುಕು ಆಕಾರ ನೀಡುತ್ತೆ
ಕತ್ತಲಲ್ಲಿ ಬೆಳಕನ್ನೂ ಕಾಣಬಹುದೆಂಬುದ ತಿಳಿದು
ನಿರಾಳನಾಗುತ್ತೇನೆ ಕಾರಣ ಕಪ್ಪು ಕತ್ತಲ ಭಯ ಮುಂದಿಲ್ಲ.

ಇಂತಿ ನಿಮ್ಮವ…


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
7 years ago

ಕವಿತಾ ವಿಚಾರವನ್ನು ಒಳ್ಳೆಯ ಓದಿನ ರೂಪದಲ್ಲಿ ಪ್ರಸ್ತುತ ಪಡಿಸುವ ಲೇಖನ.

 

1
0
Would love your thoughts, please comment.x
()
x