ಮನದಭಾವುಕತೆಗೊಂದು ದಿಕ್ಕು ತೋರಿಸಿದವಳಿಗೆ: ದೊರೇಶ


doresha-bilikere          
ಆಸೆ ಹುಡುಗನ ಪತ್ರವಿದು. ಅತಿರೇಕ ಅಂದುಕೊಳ್ಳಬೇಡ . ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ತನಗೆಎಲ್ಲವೂ ಬೇಕು. ಎಷ್ಟುಸಲ ತಿಳಿ ಹೇಳಿದರೂ ಕೇಳಲೊಲ್ಲದು. ನಾನು ವಿಹ್ವಲನಾಗಿ ಹೋಗಿದ್ದೇನೆ. ಕಣ್ಣಂಚಿನಲ್ಲಿ ನೆನಪಿನ ನೀರು. ಎಲ್ಲವನ್ನೂ ಹೇಳಬೇಕು ಅಂದುಕೊಂಡಿದ್ದೆ. ನನ್ನ ಮಾತು ನಿರುಪಯಕ್ತವೆನಿಸುವುದು ನಿನ್ನ ಕಣ್ಣುಗಳ ನವಿಲ ನರ್ತನ ಕಂಡಾಗ. ನಿನಗೆ ಗೊತ್ತು! ಸುಮ್ಮನೆ ಕಾಲಕಳೆಯಲೆಂದು ಸಮುದ್ರದ ದಡದಲ್ಲಿ ನಿಂತವ ನಾನು. ಅಂದು ಅಂಬೆಗಾಲಿಟ್ಟುಕೊಂಡು ಮಗುವಿನಂತೆ ಬಂದ ಪುಟ್ಟ ಅಲೆಯೊಂದು ದಂಡೆಯಲ್ಲಿ ನಿಂತವನ ಕಾಲು ತಾಕಿ ಅಂಗಾಲಿಗೆ ಗಿಲಿಗಲಿಯಿಕ್ಕಿದಾಗ ನೆನಪಾದವಳು ನೀನು. ನಿನಗಾಗಿ ನಿಗಾ ವಹಿಸಿ ಈ ಪತ್ರ. ಪಾದದ ಮೇಲೆ ಪಾರಿಜಾತವನ್ನಿಟ್ಟು  ನಿನ್ನ ಬಿಗಿದಪ್ಪಿ ಸಣ್ಣದೊಂದು ಕಣ್ಣಹನಿ ತುಂಬಿಕೊಂಡಾಗಲೇ,ಬದುಕಿನ ಬವಣೆಗಳ ಮಧ್ಯೆ ನೀನು ಕಳೆದುಹೋದೆಯಾ ಅಂದು ಕೊಳ್ಳುವಾಗಲೇ ಮಡುವುಗಟ್ಟಿದ ಕಣ್ಣಿನಲ್ಲಿ ಬಿಂಬವಾಗುತ್ತೀಯಲ್ಲೇ. ನೀನಂದುಕೊಂಡಿರುವುದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸಿದವನು ನಾನು. ಆಶ್ಚರ್ಯವೆಂದರೆ !  ನಾವು ಕೈಗೂಡಲಾಗದ ಭೇಟಿಗಳಲ್ಲೂ ಭೇಟಿಯಾದದ್ದು,ಆಡಲಾಗದ ಮಾತುಗಳಲ್ಲೂ ಶಬ್ಧಗಳಾದದ್ದು, ತೆಕ್ಕೆಗೆ ಬೀಳದೇನೆ ಪರಸ್ಪರ ತಬ್ಬಿಕೊಂಡದ್ದು ಮತ್ತು ಬಿಕ್ಕದಿದ್ದರೂ ನಮ್ಮ ಕಣ್ಣುಗಳು ತಂತಾನೆ ತುಂಬಿ ಬಂದದ್ದು, ಓಹ್! ನನ್ನ ಪ್ರೀತಿಯ ಮಿಡಿತವೇ ಇಷ್ಟಕ್ಕೂ ನೀನು ಯಾರೆ? ಯಾವ ಜನ್ಮದ ನೆರಳೆ? ಯಾವ ಅಪರಿಚಿತ ದಾರಿಯ ಹೊರಳು?ಯಾಕೆ ನೀನು ಬೆಳಗಿನ ಜಾವದ ಆಕಾಶದಲ್ಲಿನ ನಕ್ಷತ್ರದಂತೆ ನನ್ನ ಬೆನ್ನು ಕಾಯುತ್ತೀ?ನಿನ್ನ ಮೇಲೆ ನನಗೆ ಇಷ್ಟ್ಯಾಕೆ ಪ್ರೀತಿ?ನಿನ್ನವನಾಗದೇನೆ.     

ಸುಮ್ಮನೆ ಕಣ್ಣುಮುಚ್ಚಿಕೊಂಡು ಕುಳಿತರೆ ನೆನಪಾಗುವುದು ನಿನ್ನ ನಿಷ್ಕಳಂಕ ನಗೆ, ಆವೊತ್ತು ನಿನ್ನಾವರಿಸಿದ್ದ ಬಿಳಿಯ ಚೂಡಿ,ನರ್ತಿಸುತ್ತಿದ್ದ ಮುಂಗುರುಳು, ಅರಳಿ ಮರದ ಕೆಳಗಿನ ಆ ಭೇಟಿ,ನನ್ನ ಒರಟು ಕೈಯಲ್ಲಿದ್ದ ನಿನ್ನ ಪುಟ್ಟ ಅಂಗೈ ಎಲ್ಲವೂ ನೆನಪು. ಇನ್ನೇನು ನಿನ್ನನ್ನು ಮರೆತೇಬಿm É್ಟಅಂದುಕೊಂಡಾಗಲೆಲ್ಲಾ ನಡು ಮಧ್ಯಾಹ್ನದ  ಆ ತೋಪಿನ ತಂಪು ನನ್ನನ್ನು ನಿನ್ನ ನೆನಪಿಗೊಪ್ಪಿಸುತ್ತದೆ. ಇಷ್ಟಕ್ಕೂ ನೀನು ನನಗೇಕೆ ನೆನಪಾಗಬೇಕು? ನಾವು ನಿತ್ಯ ದೀಪಹಚ್ಚುವ ಹೊತ್ತಿಗೆ  ಭೇಟಿಯಾದವರಲ್ಲ.  ಮೈ ಒತ್ತೊತ್ತಿ ಕುಳಿತು ಸಾವಿರ ಸಾವಿರಗಂಟೆ ಸವೆಸಿದವರಲ್ಲ. ಮುಗಿಬಿದ್ದು ಮೈ ಹಚ್ಚೆ ಗುರುತು ಹುಡುಕಿಕೊಂಡವರಲ್ಲ, ಕುದಿಯುವ ಅಗ್ನಿಪರ್ವತಗಳಲ್ಲ, ಸಿಡಿಯಲುತವಕಿಸುವ ಜ್ವಾಲಾಮುಖಿಗಳಲ್ಲ, ನಮ್ಮಿಬ್ಬರ ಮದ್ಯೆ ಪ್ರವಹಿಸಿದ್ದು ನಿಶ್ಯಬ್ಧ ಮೌನ ಗುಪ್ತಗಾಮಿನಿ, ನಾವು ಒಬ್ಬರನ್ನೊಬ್ಬರು ಪ್ರೀತಿಸಿದ್ದೇವೆಂಬ ಸಂಗತಿ ನಮ್ಮಿಬ್ಬರ ಹೊರತಾಗಿ ಜಗತ್ತಿನಲ್ಲಿ ಯಾರಿಗೂ ಗೊತ್ತಾಗಲಿಲ್ಲ. ನಿನ್ನ ಕರೆಗೆ ನಾನು ಹಕ್ಕಿಯಾಗುತ್ತಿದ್ದುದು ನೆನಪು, ಒಂದಷ್ಟು ಪತ್ರ, ಒಂದಷ್ಟು ಫೋನು, ವಿನಾಕಾರಣದ ಒಂದೆರಡು ಭೇಟಿ, ನೀರೊಳಗೆ ವೀಣೆ ಮಿಡಿದಂತೆ ಆಡಿದ ಆರು ಮಾತು ಅಷ್ಟೆ ತಾನೆ ? ಇದೆಲ್ಲವೂ ಇದೀಗ ನಡೆದಂತೇ ನೆನಪಿದೆ ಎಂಬುದೇ ನಮ್ಮ ಪ್ರೀತಿಯ ತಾಕತು ್ತಕಣೇ. ನಿನ್ನ  ನಗುವಿನ ಅಲೆಯ ಬಿಸುಪು ನನ್ನ ಪೆದ್ದು ಮನಸ್ಸಿಗೆ ಅರ್ಥವಾಗಬಲ್ಲದು. ನೋಡದೆಯೂ ನೀನು ನನ್ನೊಳಗೆ ಅಳಿಯದ ಚಿತ್ರವಾಗಿ ಸ್ಥಾಪಿತವಾಗಿರಬಲ್ಲೆ. ನನ್ನ ಪ್ರೀತಿಗೆ  ಅಷ್ಟು ಕಸುವಿದೆ, ಸೊಗಸಿದೆ. ನಿನ್ನ ನೆನಪಿಗೆ  ನಿಜ ಪ್ರೀತಿಯ ಒಗರಿದೆ. ಈ ಗುಪ್ತಗಾಮಿನಿಯಂತ ಪ್ರೀತಿ ಎಂದಿಗೂ ಬತ್ತಲಾರದು. ದೇವರೆನ್ನುವವನು ಕೂಡ ತಡೆಯೊಡ್ಡು ಕಟ್ಟಲಾರ. ಸ್ವಚ್ಚಂದವಾಗಿ ಈಜಾಡಲು ನಿನ್ನ  ನೆನಪುಗಳ ಪರಿಶುದ್ಧ  ನದಿಯಿದೆ. ಮೈ  ಚೆಲ್ಲಿ ಮಲಗಲು ನನ್ನ ಕನಸುಗಳೆಂಬ ಸಕ್ಕರೆ ಮರಳು. ನಿನ್ನನ್ನು ನನ್ನ ಉಸಿರು ನಿಂತುಹೋಗುವ ಹಾಗೆ ಪ್ರೀತಿಸುತ್ತೇನೆ. ನಿನ್ನ ನುಣುಪು ಪಾದಗಳ ಮೇಲಾಣೆ. 

ಈ ಮೂರು ವರ್ಷಗಳ ಅಷ್ಟೂ ದಿನಗಳನ್ನ ಅದೆಷ್ಟು ಸಂತೋಷವಾಗಿಟ್ಟಿದ್ದೀಯೆ ನೀನು. ನಿಜ ಹೇಳ್ತೀನಿ ಕೇಳು, ಪ್ರೀತಿ ನನಗೊಂದು ಪ್ಯಾನ್ಸಿಅಲ್ಲ. ಅದು ಕಾಮವಲ್ಲ, ಹುಡುಗೀರು ಯಾವಗಲೂ ಬಯಸುವ ಭಾವನೆಗಳ ಭದ್ರತೆಯ ಕಪಾಟೂ ಅಲ್ಲ, ನನ್ನ ಪಾಲಿಗದು ಹುಚ್ಚು ಯೌವನದ ಅವಶ್ಯಕತೆ ಅಲ್ಲ, ತೋರ್ಪಡಿಕೆಗೆ ಹುಡುಕಿಕೊಳ್ಳೋ ದಾರಿ ಅಲ್ಲವೇ ಅಲ್ಲ. ಪ್ರೀತಿ ಅನ್ನೋದು ನನ್ನ ಪಾಲಿಗೆ ನಿರಂತರ ಹುಡುಕಾಟ. ಬದುಕಿನ ಸಾವಿರ ಸತ್ಯಗಳ ಆವಿಷ್ಕಾರ. ನಿನ್ನ ನಂತರ ನಾನು ಅಷ್ಟೊಂದು ತೀವ್ರವಾಗಿ, ಪ್ರಾಮಾಣಿಕವಾಗಿ ಪ್ರೀತಿಸಿದ್ದು ನಿನ್ನನ್ನು ಮಾತ್ರ. ನನಗೆ ನಿನ್ನನ್ನು ನಂಬಿಸುವ ಉಸಾಬರಿ ಇಲ್ಲ. ನೀನು ನನ್ನನ್ನು ನಂಬದಿದ್ದರೆ, ನನ್ನ ಪ್ರೀತಿಯನ್ನು ನಂಬದಿದ್ದರೆ ಜಗತ್ತಿನಲ್ಲಿ ಮತ್ತೇನನ್ನೂ ನಂಬಲಾರೆ. ನೀನು ನನ್ನನ್ನು  ಪ್ರೀತಿಸಿಯೇ  ಇಲ್ಲವೇನೋ ಎಂಬಂತಿರಬಹುದು. ಆದರೆ ನನ್ನ ಪ್ರೀತಿಸಿದ್ದು ಸುಳ್ಳು ಅಂತ ನಿನಗೆ ನೀನು ಕೂಡ ಹೇಳಿಕೊಳ್ಳಲಾರೆ. ಬಂಡೆಯ ಮೇಲೆ ಇಟ್ಟ ಪಾದ ಹೆಜ್ಜೆಗುರುತು ಮೂಡಿಸಲಾರದು ನಿಜ. ಆದರೆ ಸುನಾಮಿಯ ಸಾವಿರ ಅಲೆ ಸರಿದು ಹೋದರೂ ಬಂಡೆಯ ನೆನಪನ್ನು ಒರೆಸಿ ಹಾಕಲಾರದು. ಮಂಜು ತುಂಬಿದ ಮುಂಜಾವಿನಲಿ ಎದ್ದು ಕುಳಿತವನನ್ನು ಅಪ್ಪಿಕೊಂಡ ನಿನ್ನ ನೆನಪಿಗೆ ಅದೆಷ್ಟು ಶಕ್ತಿ ಇದೆ? ಚಳಿಯಲ್ಲೂ ಬೆವರುಕಣೇ ಹುಡುಗಿ. 

ನಿನ್ನೊಂದಿಗೆ ಬದುಕು ಕಟ್ಟಿಕೊಳ್ಳುವ ಭರದಲ್ಲಿ, ಹೊಂಗನಸು ಹೊತ್ತು ಆಡಿದ ಪ್ರತಿಯೊಂದು ಮಾತು ಪ್ರಾಮೀಸರಿ ನೋಟು ಕಣೇ. ನಿನ್ನೆಡೆಗಿನ ಪ್ರೀತಿ ನನ್ನ ಸ್ವಗತ ಗೀತೆಯೇನೋ? ಮಾತು ಬದಲಿಸುವ ವಿದ್ಯೆ ಗೊತ್ತಿಲ್ಲ. ನನ್ನಲ್ಲಿನ ಆವೇಶ,ಆರ್ದತೆ, ಅಸಹನೆ, ಚಡಪಡಿಕೆ, ಅಂಗಲಾಚುವಿಕೆ, ದೈನೇಸಿತನ ಎಲ್ಲವೂ, ಎಲ್ಲವೂ ಅದೇ ಪ್ರೀತಿಯ ಸಾವಿರ ಮುಖಗಳು. ಒಲವೆಂದರೆ ಬದುಕಲ್ಲವೇನೆ ? ನನ್ನ ನಾಭಿಯಾಳದಿಂದ ಹೊರಟ ವಾಂಛೆಗಳಿಗಿಂತ ನಿನ್ನ ಮನದಾಳದಲ್ಲಿ ಚಿಮ್ಮಿದ ಪ್ರೀತಿಯೇ ಶಾಶ್ವತ. ನಿನ್ನ ವರ್ತನೆ ಹೀಗೆ ಇರುತ್ತದೆ ಅನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೊಮ್ಮೆ ಚೆಲುವಿನ ಬೆಳದಿಂಗಳು,ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯ ನಗೆಯ ಧರೆದೀಪ, ಹುಚ್ಚು ಹೊಳೆ ಮತ್ತು ಪ್ರಶಾಂತತೆಯ ಸಂಭ್ರಮ ನೀನು. ನನ್ನ-ನಿನ್ನ ನಡುವೆ ಒಲವು ಮೂಡಿದಾಗಲೇ ನನಗನ್ನಿಸಿತು,ನೀನು ಸರಳವಾಗಿ ಅರ್ಥವಾಗಲ್ಲವೆಂದು. ನನ್ನ ಮನಸ್ಸಿನಲ್ಲಿ ಸಾವಿರ ಮಾತುಗಳಿದ್ದೊ ಆದರೆ ನೀನು ದನಿಯಾಗಲಿಲ್ಲ. ನಿನ್ನ ಮೌನದಲ್ಲೂ ಹಾಡಿನರಾಗವಿತ್ತು ಅರಿವಾಗಲಿಲ್ಲ ಕಣೇ. ನಿನ್ನ ನೆನಪು ತರುವ ಮತ್ತದೇ ಕಾರ್ಗತ್ತಲಿನ ಧೋ ಮಳೆ. ಇದು ನಿಲ್ಲುವಂತೆ  ಕಾಣುತ್ತಿಲ್ಲ. ರಾತ್ರಿಯ  ಮೂರನೇ ಜಾವದಲ್ಲೂ ಅದೇ ಆರ್ಭಟ, ಗುಡುಗು-ಸಿಡಿಲಿನ ಸಿಡಿತ, ಕೊನೆಯಲ್ಲಿ ಸಮಾಧಾನದ ಕೋಲ್ಮಿಂಚು. ದೇವರಗೂಡಿನಲ್ಲಿ ಅವ್ವ ಹಚ್ಚಿಟ್ಟ ದೀಪ ಉರಿಯುತ್ತಿದೆ. ಅದು ಉರಿಯುತ್ತಿದ್ದಷ್ಟೂ ಹೊತ್ತು ನೀನು ಸಿಗುತ್ತೀಯೆಂಬ ಆಸೆ ಬದುಕುಳಿದಿರುತ್ತದೆ. ನನ್ನ ಹೃದಯದ ಮಿಡಿತವೆಲ್ಲವೂ ಕವಿತೆಯಾಗಿ ಹರವಿಕೊಳ್ಳುತ್ತಿದೆ, ನನ್ನ ಹುಚ್ಚು ಭಾವುಕತೆಗೊಂದು ದಿಕ್ಕು ತೋರಿಸಿದವಳಲ್ಲಿ ಒಂದು ವಿನಮ್ರ ಕೋರಿಕೆ. . . . . . . . . . . . . . . . . . . . . . . . . . . 

ನನ್ನ ಮನದ ಬಯಕೆಯನ್ನು
ತಿಳಿಸುವ ಪರಿ ಬೇರೆಯೇ
ಇದೆ ಹುಡುಗಿ. 
ಅಂದದ ಗುಲಾಬಿ ಕೈಲಿಡಿದು
ಹಿಂದಿಂದೆ ಸುತ್ತಲಾರೆ
ಪುಟಗಟ್ಟಲೆ ಪತ್ರಗೀಚಲಾರೆ

ರಕ್ತದಲ್ಲಿಯಾಕೆ? ಕೇವಲ 
ಶಾಹಿಯಲ್ಲೂ ಬರೆಯಲಾರೆ
ಪಾರಿವಾಳಗಳ ದೂತಕೈಂಕರ್ಯ
ದಂಥಕತೆಯಾಗಿದೆ
ಪ್ರೇಮಪತ್ರಗಳ ಹೊರೆ ಹೊತ್ತು ಬೆನ್ನು ಬಾಗಿದ
ನಿವೃತ್ತ ಅಂಚೆಯವ ದಿನವೂ ಸಿಗುತ್ತಾನೆ

ತಣ್ಣನೆ ! ಹೃದಯದ ಬಾಗಿಲು ತೆರೆದಿದ್ದೇನೆ
ಏನೂ  ಬರೆಯದಖಾಲಿ ಹಾಳೆಯಿದು
ಇಷ್ಟವಿದ್ದರೆ!ಏನಾದರೂ ಬರೆ. 
ಇಲ್ಲಾ!ಎಲ್ಲವನ್ನೂ ಮರೆ. 
-ದೊರೇಶ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x