ಭೂಮಿಕಾ: ನಂದಾ ಹೆಗಡೆ

nanda-hegde

"ಭಟ್ರನ್ನ ಒಳಗೆ ಕರಿಲನೇ" ಎಂದು ನನ್ನವಳಿಗೆ ಕೇಳಿ ಒಪ್ಪಿಗೆ ಪಡೆದು ನಾನು ಇಬ್ಬರು ಭಟ್ಟರೊಂದಿಗೆ ದೇವರ ಮನೆ ಪ್ರವೇಶಿಸಿದೆ. ಇಂದು ನನ್ನಮ್ಮನ ಎಂಟನೇ ಶ್ರಾಧ್ದ. ಪ್ರತೀ ಶ್ರಾಧ್ದದ ದಿನವೂ ನಾನು ಒಂದು ರೀತಿಯ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಅಮ್ಮನ ನೆನಪೇ ಹಾಗೆ. ನೋವು ನಲಿವಿನ ತಂತಿ ಎದೆಯಲ್ಲಿ ಮೀಟಿದ ಹಾಗೆ. 

ನನ್ನಮ್ಮ ಹುಟ್ಟು ಹೋರಾಟಗಾರ್ತಿ. ಮದುವೆಗೆ ಮೊದಲೇ ತನ್ನ ಅಪ್ಪ, ಅಣ್ಣನ ಜೊತೆಗೆ ತೋಟ ಗದ್ದೆಗಳ ಕೆಲಸ ಮಾಡುವವಳಂತೆ. ನನ್ನಜ್ಜಿ ಯಾವಾಗಲೂ "ನಿನ್ನಮ್ಮ ಗಂಡಾಗಿ ಹುಟ್ಟಬೇಕಿತ್ತು"ಎಂದು ಹೇಳುತ್ತಿದ್ದರು. ಮದುವೆ ಆದ ಮೇಲೆ ನನ್ನಪ್ಪನವರ ಒಟ್ಟು ಕುಟುಂಬಕ್ಕೆ ಹೊಂದಿಕೊಳ್ಳಲು ತುಂಬಾನೇ ಕಷ್ಟಪಟ್ಟಳಂತೆ. ವ್ಯವಹಾರ ಜ್ಞಾನವಿಲ್ಲದೇ ಬರೀ ಕೆಲಸ ಮಾಡುವುದೊಂದೆ ಗೊತ್ತಿರುವ ನನ್ನಪ್ಪಯ್ಯ ಮನೆಯ ಯಜಮಾನರಿಂದ ತುಂಬಾನೇ ಮೋಸ ಹೋಗಿ, ಕೊನೆಯಲ್ಲಿ ಅವರು ಕೊಟ್ಟ ಒಂದೆಕರೆ ಬಂಜರು ಭೂಮಿಯೊಂದಿಗೆ ತಮ್ಮದೇ ಸೂರು ಕಂಡುಕೊಳ್ಳುವಾಗ ಸಾಕುಸಾಕಾಯಿತಂತೆ

ಆಗ ನಾನಿನ್ನೂ ಚಿಕ್ಕವನು. ನಮಗೆ ಸಿಕ್ಕಿದ ಬರಡು ಭೂಮಿಯಲ್ಲಿ ಜೀವನ ನಿರ್ವಹಣೆ ಮಾಡಲು ನನ್ನಪ್ಪ-ಅಮ್ಮ ತುಂಬಾ ಕಷ್ಟ ಪಡುತ್ತಿದ್ದರು. ಇಬ್ಬರೂ ಕೂಲಿಯವರೊಂದಿಗೆ ಕೂಲಿಗಳಂತೆ ದುಡಿಯುತ್ತಿದ್ದರು. ಅಡಕೆ ಸುಲಿಯುವುದು, ಗದ್ದೆ ನಟ್ಟಿ, ಯಾಲಕ್ಕಿ ಕುಯ್ಯುವುದು ಹೀಗೆ ಹೆಂಗಸರು ಮಾಡಬಹುದಾದ ಎಲ್ಲ ಕೆಲಸವನ್ನೂ ಅಮ್ಮ ಮಾಡುತ್ತಿದ್ದಳು. ಅಪ್ಪಯ್ಯನಂತೂ ಹೊಲ ಊಳುವುದರಿಂದ ಹಿಡಿದು ಮರದ ಕೆಲಸ, ಮಣ್ಣಿನ ಕೆಲಸ ಎಲ್ಲವನ್ನೂ ಮಾಡುತ್ತಿದ್ದರು. ಹೀಗೆ ಹಗಲೂ ಇರುಳು ಅವರ ದುಡಿಮೆಯ ಫಲವಾಗಿ ನಾನು ಹೈಸ್ಕೂಲು ಸೇರುವ ವೇಳೆಗೆ ನಾವೊಂದು ಸಮಾಧಾನಕರ ಜೀವನ ನಡೆಸುವಷ್ಟು ಅನುಕೂಲವಂತರಾದೆವು. 

ಆದರೆ ನನ್ನಮ್ಮ ಎಲ್ಲರಿಗಿಂತ ತುಸು ಭಿನ್ನ ಅನ್ನಿಸುವುದೇ ಅವಳ ವಿಚಾರಧಾರೆಯಲ್ಲಿ. ಸಾಮಾನ್ಯವಾಗಿ ನಾನು ಕಂಡ ಹಾಗೆ ಎಲ್ಲ ಅಪ್ಪ ಅಮ್ಮಂದಿರೂ ಈಗೀಗ ತಮ್ಮ ಮಕ್ಕಳು ತುಂಬಾ ಓದಲಿ, ಓದಿ ಎ. ಸಿ. ರೂಮಿನಲ್ಲಿ ಕುಳಿತು ಕೆಲಸ ಮಾಡುವ ದೊಡ್ಡ ಉದ್ಯೋಗ ಮಾಡಲಿ, ಕಾರಲ್ಲಿ ನಮ್ಮನ್ನು ಕೂರಿಸಿಕೊಂಡು ಅಡ್ಡಾಡಲಿ ಎಂದು ಕನಸು ಕಾಣುತ್ತಾರೆ. ಆ ಕನಸನ್ನು ಸಾಕಾರಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ ನನ್ನಮ್ಮ ಸಣ್ಣವನಿಂದಲೂ ನನಗೆ "ಪುಟ್ಟಾ ನೀನು ಭೂಮಿ ತಾಯಿಯ ಸೇವೆ ಮಾಡಬೇಕು. ಕಷ್ಟಪಡುವ ಮನಸ್ಸಿದ್ದರೆ ಎಲ್ಲಾದರೇನು?ಪೇಟೆ-ಪಟ್ಟಣ ಸೇರಿ ಯಾರ್ಯಾರ ಕೈಕೆಳಗೋ ಕೆಲಸ ಮಾಡುವ ಬದಲು ನಮ್ಮದೇ ಭೂಮಿಯಲ್ಲಿ ದುಡಿದರೇನು?ನನ್ನ ಮಗ ಕೈಯೆತ್ತಿ ಕೊಡುವವನಾಗಬೇಕು, ಕೈಚಾಚುವವನಾಗಬಾರದು. ಇಲ್ಲೇ ಇದ್ದು ಭೂಮಿಯನ್ನು ಊರ್ಜಿತಗೊಳಿಸು. ಒಂದೆಕರೆಗೆ ನಾಲ್ಕೆಕರೆ, ಎಂಟೆಕರೆ ಸೇರಿಸು. ಹಾಗೇ ನಾಲ್ಕಾರು ಕುಟುಂಬಕ್ಕೆ ಆಧಾರವಾಗು. ಅನ್ನ ನೀಡುವ ಕೈ ನಿನ್ನದಾಗಲಿ" ಎಂದು ಹೇಳುತ್ತಿದ್ದಳು. ನಾನು ಓದುವುದರಲ್ಲಿ ಬುದ್ಧಿವಂತನೆಂದು ಶಾಲೆಯ ಉಪಾಧ್ಯಾಯರಿಂದ ಹಿಡಿದು ಎಲ್ಲರೂ ಮುಂದೆ ಓದಲು ಸಲಹೆ ನೀಡುತ್ತಿದ್ದರೆ ನನ್ನಮ್ಮ ಓದು ಮಗಾ, ಆದರೆ ಓದಿ ಓದಿ ದಾಸನಾಗುವ ಬುದ್ಧಿ ಬೇಡ ಎಂದು ಹೇಳುತ್ತಾ ನನ್ನನ್ನು ಕೃಷಿಯ ಕಡೆ ಮನಸ್ಸು ವಾಲಿಸುವ ಪ್ರಯತ್ನ ಮಾಡುತ್ತಿದ್ದಳು. ಅಂತೂ ನಾನು ಅವಳಿಚ್ಚೆಯಂತೆಯೇ ಎಗ್ರಿ ಎಮ್. ಎಸ್. ಸಿ ಮುಗಿಸಿ, ಮರಳಿ ಮನೆಗೇ ಬಂದು, ಬದುಕಿಗಾಗಿ ಕೃಷಿಯನ್ನೇ ನೆಚ್ಚಿಕೊಂಡೆ. 

ಆ ದಿನಗಳಲ್ಲಿ ನನ್ನಮ್ಮ ತುಂಬ ಸಂತೋಷವಾಗಿದ್ದಳು. ನಾನು ಹೊಸ ಹೊಸ ಪ್ರಯೋಗಗಳೊಂದಿಗೆ ಕೃಷಿಯಲ್ಲಿ ಸಂತೋಷ, ಸಮೃದ್ಧಿ ಕಾಣುವಾಗ, "ನನ್ನ ಮಗ ಯಾವ ಸಾಪ್ಟ್ವೇರ್ ಇಂಜಿನಿಯರಿಗೆ ಕಡಿಮೆ, ಹಳ್ಳಿಯ ಸ್ವಚ್ಛಂದ ಬದುಕು ಪೇಟೆಯವರಿಗೆಲ್ಲಿಂದ ಬರಬೇಕು ಬಿಡಿ"ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ನಾನೂ ಅಷ್ಟೆ ನಾನು ಕೈಗೊಂಡ ವೃತ್ತಿಯ ಬಗ್ಗೆ ಕೀಳರಿಮೆ ಇಟ್ಟುಕೊಂಡವನಲ್ಲ. ನಾನು, ಅಪ್ಪಯ್ಯ-ಅಮ್ಮ ಸಂಸಾರ ಸುಖವಾಗಿ ಸಾಗಿತ್ತು. 

ಆದರೆ ಮುಂದೆ ನನ್ನಮ್ಮನ ಕೊರಗಿಗೆ ಕಾರಣವಾದ ವಿಷಯ ಮಾತ್ರ ತುಂಬಾ ದಯನೀಯವಾಗಿತ್ತು. ನನಗೆ ವಯಸ್ಸು 26 ಮುಗಿಯುತ್ತಲೇ ಅಪ್ಪಯ್ಯ-ಅಮ್ಮ ನನ್ನ ಮದುವೆಯ ಯೋಚನೆ ಮಾಡತೊಡಗಿದರು. ಆದರೆ ನಾನು ಹಳ್ಳಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವವನೆಂಬ ಒಂದೇ ಕಾರಣಕ್ಕೆ ನನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಲೇ ಇರಲಿಲ್ಲ. ಈಗ ನಾನೇನೂ ಅನುಕೂಲ ಇಲ್ಲದಿರುವವನಾಗಿರಲಿಲ್ಲ. ಎಂಟೆಕರೆ ಸಮೃದ್ಧ ತೋಟ, ನಾಲ್ಕೆಕರೆ ಗದ್ದೆ, ವಿಶಾಲವಾದ ಮನೆ, ಎಲ್ಲಾ ಆಧುನಿಕ ವ್ಯವಸ್ಥೆಗಳು. ಆದರೂ ಈ ಒಂದೇ ವಿಷಯ ನನ್ನ ಅಮ್ಮನನ್ನು ಹೈರಾಣಾಗಿಸಿಬಿಟ್ಟಿತು. ಅವಳಿಗೊಂದೇ ಕೊರಗು-“ತಾನೇ ಕೈಯಾರೆ ತನ್ನ ಮಗನಿಗೆ ಈ ಸ್ಥಿತಿ ತಂದಿಟ್ಟುಬಿಟ್ಟೆ” ಎಂದು. ನಾನೆಷ್ಟೇ ಸಮಾಧಾನ ಮಾಡಿದರೂ ಅವಳ ದು:ಖ ಪರಿಹಾರವಾಗಲಿಲ್ಲ. ದಿನೇ ದಿನೇ ಅವಳ ಆರೋಗ್ಯ ಹದಗೆಡತೊಡಗಿತು. ಕೊನೆಗೊಂದು ದಿನ ಅವಳ ಹೃದಯ ದುರ್ಬಲವಾಗಿ, ಚಿಕಿತ್ಸೆಯಾದರೂ ಅವಳು ಇನ್ನು ಹೆಚ್ಚು ದಿನ ನಮ್ಮೊಂದಿಗಿರುವದಿಲ್ಲ ಎಂದು ತಿಳಿಯಿತು. ನಮ್ಮ ದು:ಖಕ್ಕೆ ಪಾರವೇ ಇಲ್ಲವಾಯಿತು. 

ಆ ದು:ಖದ ದಿನಗಳಲ್ಲಿ ತಂಗಾಳಿಯಂತೆ ಬಂದವಳು ನನ್ನ ಶ್ರೀಮತಿ “ಭೂಮಿಕಾ.  ನೌಕರಿಯ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ ಅವಳಪ್ಪನಿಗೆ ತಾನು ಹಳ್ಳಿಯ ಸಮೃದ್ಧ ಜೀವನ ನಡೆಸಲು ಬಯಸುತ್ತೇನೆ, ಈ ಪಟ್ಟಣದ ಗಿಜಿ ಗಿಜಿ ಜೀವನ ಸಾಕಾಗಿದೆ ಎಂದು ನನ್ನನ್ನು ಮದುವೆಯಾಗಿ ನಮ್ಮ ಮನೆಯ ಸಂಜೀವಿನಿಯಾಗಿ ಬಂದಳು. ನನ್ನಮ್ಮನ ಸಂತೋಷ ಹೇಳತೀರದು. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಆಡಿದಳು. ಅವಳ ಕೊನೆಯ ದಿನದಲ್ಲಾದರೂ ಅಷ್ಟು ಸಂಭ್ರಮ ಪಡುವಂತಾದುದಕ್ಕೆ ನಾನು ನನ್ನವಳಿಗೆ ಆಜೀವ ಪರ್ಯಂತ ಚಿರಋಣಿ. ಅವಳಿಂದಾಗಿ ನನ್ನಮ್ಮ ನನ್ನ ಮದುವೆ ನೋಡಿ ಆನಂದಿಸಿ, ಸೊಸೆಯ ಒಳ್ಳೆಯ ಗುಣಗಳನ್ನು ನೋಡಿ ಸಂತೋಷಪಟ್ಟು, ಅವಳ ಆರೈಕೆಯಿಂದ ತೃಪ್ತಿ ಹೊಂದಿ ನಮ್ಮಿಂದ ದೂರವಾದಳು. ಒಂದಿನಿತೂ ಅಮ್ಮನಿಂದ ದೂರವಿರದ ಅಪ್ಪಯ್ಯ ಅವಳು ಹೋಗಿ ಎರಡೇ ವರ್ಷದಲ್ಲಿ ನಮ್ಮಿಂದ ದೂರವಾದರು. 

ಇಂದು ನಾನು ಈ ಸುತ್ತಿನಲ್ಲೆಲ್ಲಾ ಪ್ರಗತಿಪರ, ಸಂತೃಪ್ತ ಕೃಷಿಕ. ಪೇಟೆಯ ಚಿಕ್ಕ-ಪುಟ್ಟ ಮನೆಯಲ್ಲಿದ್ದು ಬೇಸರ ಬಂದವರೆಲ್ಲಾ ನಮ್ಮ ಮನೆಗೆ ಬಂದಿದ್ದು, ಅವರ ಒತ್ತಡ ಕಳೆದುಕೊಂಡು ಹೋಗುತ್ತಾರೆ. ನನ್ನ ನಾಲ್ಕು ವರ್ಷದ ಮಗನಿಗೆ ನನ್ನವಳು,ನನ್ನಮ್ಮ ನನಗೆ ಹೇಳಿದ ಮಾತುಗಳನ್ನೇ ಹೇಳುತ್ತಾಳೆ. ಈ ಇಂಟರ್ನೆಟ್ ಯುಗ ಜಗತ್ತಿನ ಮೂಲೆ ಮೂಲೆಯನ್ನೂ ಒಂದುಗೂಡಿಸುತ್ತಿರುವಾಗ ನಾವು ಮೂಲೆಯಲ್ಲಿದ್ದೇವೆ ಎಂಬ ಕೊರಗು ನಮ್ಮನ್ನು ಕಾಡುವುದಿಲ್ಲ. 

“ಪಿಂಡದ ನೈವೇದ್ಯಕ್ಕೆ ತಗಂಬಾರೇ ಭೂಮಿಕಾ” ಎಂದು ಭಟ್ಟರು ನನ್ನವಳಿಗೆ ಹೇಳಿದಾಗ ನಾನು ಯಾಂತ್ರಿಕವಾಗಿ ಮಾಡುತ್ತಿದ್ದ ಕೈಂಕರ್ಯದೊಂದಿಗೆ, ಹಳೆಯ ನೆನಪುಗಳ ಸರಪಳಿಯಿಂದ ಹೊರಬಂದು, ನನ್ನಮ್ಮ ತೃಪ್ತಿಯಿಂದ ತನ್ನ ಕೊನೆಯ ದಿನಗಳನ್ನು ಕಳೆಯುವಂತೆ ಮಾಡಿದ ನನ್ನ ಅದೃಷ್ಟಲಕ್ಷ್ಮಿ “ಭೂಮಿಕಾ”ಳನ್ನು ಅಭಿಮಾನದಿಂದ ನೋಡಿದೆ. 
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Jay
Jay
7 years ago

ತುಂಬಾ ಚೆನ್ನಾಗಿದೆ… ಲೇಖನದ ಶೈಲಿ ತುಂಬಾ ಇಷ್ಟ ಆಯ್ತು…. 

1
0
Would love your thoughts, please comment.x
()
x