ಬೆಳ್ಳಿತೆರೆಯಲ್ಲಿ `ಮೇಲುಕೋಟೆ’ಯ ದೃಶ್ಯಕಾವ್ಯ!: ದಂಡಿನಶಿವರ ಮಂಜುನಾಥ್


ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾಗ ಖಂಡಿತಾ ನೀವು ಅದರಲ್ಲಿ ಕಲ್ಯಾಣಿಯೊಂದರ ಹಿನ್ನೆಲೆ ಹೊಂದಿರುವ ಬೆಟ್ಟದ ತುದಿಯಲ್ಲಿ ದೇವಾಲಯದ ಗೋಪುರದ ದೃಶ್ಯವನ್ನು ಆಗಾಗ ನೋಡುತ್ತಿರುತ್ತೀರಿ. 

ಹೆಚ್ಚಾಗಿ ಕಾಡುಗಳ ದೃಶ್ಯಗಳಲ್ಲಿ ಈ ಸ್ಥಳದ ಪರಿಚಯ ನಿಮಗಾಗಿರುತ್ತದೆ. ಇದು ನಮ್ಮ ನಾಡಿನ ಸ್ಥಳವೇ ಆಗಿದೆ ಎಂದು ತಿಳಿದಾಗ ನಿಜಕ್ಕೂ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದುವೇ ಮೇಲುಕೋಟೆಯ ಮೋಹಕ ದೃಶ್ಯಕಾವ್ಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ಸ್ಥಳ ಹಲವು ಭಾಷೆಗಳ ಚಿತ್ರರಂಗದವರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಶೂಟಿಂಗ್ ಸ್ಪಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೇಲುಕೋಟೆಯಲ್ಲಿ ಬಾಲಿವುಡ್‍ನ ಐಶ್ವರ್ಯ ರೈ ಹೆಜ್ಜೆ ಹಾಕಿದ್ದಾರೆ. ರಜನೀಕಾಂತ್ ತಮ್ಮದೇ ಆದ ವಿಶಿಷ್ಟ ಸ್ಟೈಲ್‍ನಲ್ಲಿ ಮಾತಾಡಿದ್ದಾರೆ. ಪುನೀತ್ ಪೈಟ್ ಮಾಡಿದ್ದಾರೆ.

ಇದಷ್ಟೇ ಅಲ್ಲ, ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ಡಾ||ರಾಜ್, ವಿಷ್ಣು, ಅಂಬಿ, ಶಿವಣ್ಣ, ರವಿಚಂದ್ರನ್ ಮೊದಲಾದ ನಟರು ಹಾಗೂ ಹಲವು ನಟಿಯರು ಮೇಲುಕೋಟೆಯ ಚೆಲುವಿನ ಸ್ಥಳದಲ್ಲಿ ಅಭಿನಯಿಸಿದ್ದಾರೆ. ಇಲ್ಲಿನ ಯಾವುದೇ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದರೂ ಸಹ ಅದೊಂದು ಸುಂದರ ದೃಶ್ಯವಾಗಿ ಚಿತ್ರಿತವಾಗುವುದು ಈ ಸ್ಥಳದ ವಿಶೇಷ. ಕಲ್ಯಾಣಿಯ ಬಳಿ ಅಸಂಖ್ಯಾತ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಕಲ್ಯಾಣಿಯ ಸುತ್ತಮುತ್ತಲು ಇರುವ ಕಲ್ಲಿನ ಕಂಬಗಳು, ಹಿನ್ನೆಲೆಯಲ್ಲಿ ಬೆಟ್ಟದ ತುದಿಯ ಯೋಗನರಸಿಂಹಸ್ವಾಮಿ ದೇವಾಲಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬೆಟ್ಟದ ಮೇಲೆ ಸುಂದರ ಪ್ರಕೃತಿ ಸೊಬಗನ್ನು ಚಿತ್ರೀಕರಿಸಬಹುದು. 

ಮೇಲುಕೋಟೆಯಲ್ಲಿ ನಿಸರ್ಗವೇ ನಿರ್ಮಿಸಿದ ಸುಂದರ ದೃಶ್ಯಗಳ ಸಿನಿಮಾ ಸೆಟ್ ಇದೆ. ಇಲ್ಲಿನ ಪ್ರತಿಯೊಂದು ಸ್ಥಳಗಳೂ ಸಹ ಸಿನಿಮಾದವರ ಹಾಟ್‍ಸ್ಟಾಲ್‍ಗಳು. ಕಲ್ಯಾಣಿ (ಪುಷ್ಕರಣಿ), ಅಕ್ಕ ತಂಗಿ ಕೊಳ, ಚೆಲುವನಾರಾಯಣ ದೇವಾಲಯ, ಬೆಟ್ಟದ ತುದಿಯ ಯೋಗನರಸಿಂಹ ದೇಗುಲ, ಗೋಪಾಲರಾಯನ ಕೋಟೆ ಬಾಗಿಲು (ರಾಯಗೋಪುರ), ಭುವನೇಶ್ವರಿ ಮಂಟಪ, ಕಲ್ಲಿನ ಕಂಬಳ ಸಾಲು…. ಹೀಗೆ ಇಲ್ಲಿನ ಹಲವು ಸ್ಥಳಗಳೂ ಸಹ ಬೆಳ್ಳಪರದೆಯಲ್ಲಿ ಚಿತ್ರಿತವಾಗಿ ನೋಡುಗರ ಮನಗೆದ್ದಿದೆ. 

ರಜನಿಗೆ ಪ್ರಿಯವಾದ ಸ್ಥಳ:
ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ತುಂಬಾ ಪ್ರಿಯವಾದ ಸ್ಥಳ ಇದಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅವರಿಗೆ ಇಲ್ಲಿನ ಚೆಲುವನಾರಾಯಣಸ್ವಾಮಿ ಮೇಲೆ ಅಪಾರ ಭಕ್ತಿಯಂತೆ. ಹಾಗಾಗಿ ಅವರ ಅಭಿನಯದ ಪಡಿಯಪ್ಪ, ಶಿವಾಜಿ, ಚಂದ್ರಮುಖಿ ಮುಂತಾದ ಚಿತ್ರಗಳಲ್ಲಿ ಮೇಲುಕೋಟೆ ದೃಶ್ಯಕಾವ್ಯವನ್ನು ನೋಡಬಹುದು. ತೆಲುಗಿನ ಅಕ್ಕನೇನಿ ನಾಗಾರ್ಜುನ ಅವರಿಗೂ ಸಹ ಮೇಲುಕೋಟೆ ಇಷ್ಟವಾದ ಸ್ಥಳವಾಗಿದೆ. 

ಅಮರಶಿಲ್ಪಿ ಜಕಣಾಚಾರಿಯಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾದ ಅರ್ಧಕ್ಕೆ ನಿಂತ ಗೋಪಾಲರಾಯನ ಕೋಟೆ ಬಾಗಿಲು ಅಸಂಖ್ಯಾತ ಚಿತ್ರಗಳಲ್ಲಿ ಸೆರೆಯಾಗಿದೆ. ಅದೊಂದು ಅದ್ಭುತ ಕಲಾಕೃತಿಯಂತೆ ಕಂಗೊಳಿಸುತ್ತದೆ. ವಿಶ್ವಸುಂದರಿ ಐಶ್ವರ್ಯ ರೈ ಅಭಿನಯದ ಗುರು ಚಿತ್ರದ ಹಾಡಿನ ದೃಶ್ಯವೊಂದು ಇಲ್ಲಿ ಚಿತ್ರೀಕರಣಗೊಂಡಿದೆ. 
ಕನ್ನಡದ ಚಿತ್ರಗಳಾದ ಹಾಲುಜೇನು, ಓಂ, ಸಿಂಹಾದ್ರಿಸಿಂಹ, ಅಣ್ಣಾವ್ರು, ಒಡಹುಟ್ಟಿದವರು, ವೀರಬಾಹು, ರಂಗನಾಯಕಿ, ಭಾಗ್ಯದ ಬಳೆಗಾರ, ಕರ್ಪೂರದಗೊಂಬೆ, ಬಾಬಾರೋ ರಸಿಕ, ಜನ್ಮ ಜನ್ಮದ ಅನುಬಂಧ, ನಮ್ಮೂರ ಹಮ್ಮೀರ, ಮೊಮ್ಮಗ, ಹುಡುಗರು, ಡ್ರಾಮಾ, ಆಪ್ತರಕ್ಷಕ, ಗಾಳಿಪಟ, ರಾಜ್, ದೊರೆ, ಭಜರಂಗಿ…. ಹೀಗೆ ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡ ಚಿತ್ರಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಅಸಂಖ್ಯಾತ ಚಿತ್ರಗಳ ಕ್ಯಾಮೆರಾ ಕಣ್ಣುಗಳಲ್ಲಿ ಇಲ್ಲಿನ ಸೊಬಗಿನ ದೃಶ್ಯಗಳು ಸೆರೆಯಾಗಿವೆ. ಇನ್ನು ದೂರದರ್ಶನದ ಹಲವಾರು ಧಾರಾವಾಹಿಗಳ ಚಿತ್ರೀಕರಣ ಇಲ್ಲಿನ ಪರಿಸರದಲ್ಲಿ ನಡೆದಿದೆ. ಬಂಗಾರ, ಕುಸಮಾಂಜಲಿ, ಚಿಕ್ಕಮ್ಮ, ಮನೆಮಗಳು ಧಾರಾವಾಹಿಗಳ ಟೈಟಲ್ ಸಾಂಗ್‍ನಲ್ಲಿ ಮೇಲುಕೋಟೆಯ ದೃಶ್ಯವನ್ನು ನೋಡಬಹುದು.
ಬಹುಭಾಷಾ ನಟಿ ಮತ್ತು ರಾಜಕಾರಣಿ ಜಯಲಲಿತಾ ಹುಟ್ಟಿದ್ದು ಸಹ ಮೇಲುಕೋಟೆಯ ಕೋಮಲಹಳ್ಳಿಯಲ್ಲಿ ಎನ್ನುವುದು ಮತ್ತೊಂದು ವಿಶೇಷ ಸಂಗತಿ. 

ಇತ್ತೀಚೆಗೆ ಬಿಡುಗಡೆಯಾದ `ಪ್ರೇಮ್ ಅಡ್ಡ’ ಚಿತ್ರದಲ್ಲಿ ಮೇಲುಕೋಟೆ ಹುಡ್ಗಿಯೊಬ್ಳು… ಹಾಡು ಜನಪ್ರಿಯವಾಗುವುದರ ಜೊತೆಗೆ ಸ್ಥಳೀಯ ಮಹಿಳೆಯರಿಂದ ಪ್ರತಿಭಟನೆ ಎದುರಿಸಿದ್ದನ್ನು ಸ್ಮರಿಸಬಹುದು. ಇದೀಗ ಜಗ್ಗೇಶ್ ಅಭಿನಯದ ` ಮೇಲುಕೋಟೆಯ ಮಂಜ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಅದ್ದೂರಿ ಸಿನಿಮಾಗಳ ಶೂಟಿಂಗ್‍ಗಳಿಗೆ ವಿದೇಶಗಳಿಗೆ ತೆರಳುವ ಕನ್ನಡದ ಸಿನಿಮಾ ಮಂದಿಯವರ ನಡುವೆ ಬಾಲಿವುಡ್ ಚಿತ್ರರಂಗದವರನ್ನು ತನ್ನತ್ತ ಸೆಳೆಯುವ ಮೇಲುಕೋಟೆಯ ಚೆಲುವು ಖಂಡಿತಾ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಅಲ್ಲವೇ? 

ಪ್ರವಾಸಿಗರ ಅನಿಸಿಕೆ: 
“ರಜನೀಕಾಂತ್ ಮತ್ತು ಅಕ್ಕನೇನಿ ನಾಗಾರ್ಜುನ ಮುಂತಾದವರಿಗೆ ತುಂಬಾ ಇಷ್ಟವಾದ ಮೇಲುಕೋಟೆಯ ಯಾವುದೇ ಸ್ಥಳದಲ್ಲಿ ನಿಂತು ಚಿತ್ರೀಕರಿಸಿದರೂ ಸಹ ಅದೊಂದು ಅತ್ಯುತ್ತಮ ದೃಶ್ಯವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾನ್ಯರೂ ಸಹ ಇಲ್ಲಿ ನಿಂತು ಚಿತ್ರ ತೆಗೆದರೂ ಸಹ ಅದು ಅದ್ಭುತವಾಗಿ ಮೂಡಿಬರುತ್ತದೆ.’’
-ಅಮ್ಮಸಂದ್ರ ಶಿವಕುಮಾರ್

ಬಾಲಿವುಡ್ ಚಿತ್ರಛಾಯಾಗ್ರಾಹಕ, ಮುಂಬೈ
“ಮೇಲುಕೋಟೆಯ ಪ್ರತಿಯೊಂದು ಸ್ಥಳಗಳನ್ನು ಸ್ಚಚ್ಛಗೊಳಿಸಿ ಸಂರಕ್ಷಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ. ಕಲ್ಯಾಣಿಯ ನೀರು ಮತ್ತು ಕಲ್ಲಿನ ಕಂಬಗಳ ಆವರಣದ ಸ್ವಚ್ಛತೆಯ ಅಗತ್ಯವಿದೆ. ಪ್ರವಾಸಿಗರಿಗೆ ಮತ್ತು ಚಿತ್ರರಂಗದವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಸರ್ಕಾರ ಗಮನ ಹರಿಸಬೇಕು.’’
-ಡಿ.ಸಿ.ಚಂದ್ರಶೇಖರ್
ದೇವರಕನ್ನಸಂದ್ರ ಪ್ರವಾಸಿಗ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Sreenath M V
Sreenath M V
7 years ago

ಹೌದು,ದಂಡಿನಶಿವರ ಮಂಜು ಹೇಳುವ ಹಾಗೆ, ಇಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿ ಅಭಿವೃದ್ಧಿ ಆಗಬೇಕು. ಪ್ರವಾಸೋದ್ಯಮದಿಂದ ಜನ ಬಂದು ಇಲ್ಲಿನ ಸುಂದರ ಪ್ರಕೃತಿ, ಪರಿಸರ ನಾಶವಾಗದೆ ತನ್ನ ಚೆಲುವನ್ನು ಉಳಿಸಿಕೊಳ್ಳಲಿ.ಇಷ್ಟು ವರ್ಷ ಸಿನಿಮಾ ಮಂದಿ ಬಂದು ತಮ್ಮ ಕೆಲಸವಾದ ಮೇಲೆ ಇಲ್ಲಿನ ಅಭಿವೃದ್ಧಿಗೆ ಯಾವ ರೀತಿಯಲ್ಲಿಯೂ ಸಹಾಯ ಮಾಡಿರುವುದಿಲ್ಲ. ಉಪಯೋಗ ಪಡೆದುಕೊಂಡವರು ಸ್ವಲ್ಪ ಸ್ವಲ್ಪ ಊರಿನ ಅಭಿವೃದ್ಧಿಗೆ ಸಹಾಯ ಮಾಡಿದ್ದರೂ ಚೆನ್ನಿತ್ತು. ಇನ್ನು ಮುಂದಾದರು ಆ ಕೆಲಸ ಆಗಲಿ.

1
0
Would love your thoughts, please comment.x
()
x