ನಾನು, ಅವ್ವ ಮತ್ತು ಸೀರೆ: ಸಾವಿತ್ರಿ ವಿ. ಹಟ್ಟಿ

ಓಂ ಶ್ರೀ ಗಣೇಶಾಯ ನಮಃ
ಅವ್ವನ ಹೊಟ್ಯಾಗ ನಾನು ಮೂಡು ಮೂಡುತ್ತಿದ್ದಂತೆನೇ ಆಕೀ ಕಳ್ಳಿಗೂ ನನಗೂ ಎಂಥಾ ಬಿಡಿಸಲಾರದಂಥಾ ಸಂಬಂಧ ಬೆಳೀತು ನೋಡ್ರಿ! ಅದರಂಗ ಅವ್ವನ ಸೀರಿಗೂ ನನಗೂ ಅವತ್ತಿಂದಾನಾ ಬಿಡಿಸಲಾಗದ ಬಂಧ ಬೆಳ್ಕೊಂತ ಬಂತು… 

ಅವ್ವ ನನಗ ಎಂಥಾ ಲಂಗಾ ಪೋಲಕಾ ಹೊಲಿಸಿದ್ರೂನು ಹಟ ಮಾಡದಾ ಒಮ್ಮೆಯಾದ್ರೂ ಉಟ್ಟಾಕಿನಾ ಅಲ್ಲ ನಾನು. ಅದು ಯಾಕೇನಾ ನನಗೂ ಗೊತ್ತಿಲ್ಲ. ಆಕಿ ತಂದಿದ್ದ ಹೊಸ ದಿರಿಸು ಮನಸ್ಸಿನ್ಯಾಗ ಭಾಳ ಅಂದ್ರ ಭಾಳ ಭೇಷಿ ಅನ್ಸಿರುತ್ತ. ಆದ್ರೂ ಒಂಚೂರು ರಗಳಿ ಮಾಡೀದ್ರನಾ ನನಗ ಸಮಾಧಾನ. ಅದೂ ಅವ್ವಗೂ ಗೊತ್ತಿದ್ದ ಮಾತು. ಅದಕ್ಕಾ ಆಕೀ ನನ್ನ ಹಟಕ ಕ್ಯಾರೇ ಅನ್ನದಾ ಭಾಳ ಬಿಜಿ ಅದಾಳೇನ ಅನ್ನೂವಂಗ ಏನಾದರೂ ಕೆಲಸ ಮಾಡ್ಕೊಂತ ಕುಂತು ಬಿಡಾಕಿ. ನಾನು, “ಎವ್ವಾ, ಬೇ…” ಅಂತ ರಾಗ ಹಾಡಿ ಹಾಡಿ ಬ್ಯಾಸತ್ತ ನಂತ್ರ ಸುಮ್ಮನಾಕ್ಕಿದ್ದೆ. ಆದ್ರ ಎಲ್ಲಾ ಸಲಾನೂ ಹಿಂಗ ಆಕ್ಕಿರಲಿಲ್ಲ. ಒಮ್ಮೊಮ್ಮೆ ನನ್ನ ರಗಳಿ ತನ್ನಷ್ಟಕ್ಕ ತಾನಾ ಮುಗೀತಿರಲಿಲ್ಲ. ಅಂಥಾ ವ್ಯಾಳೆದಾಗ ಅವ್ವ ಹಸಿ ತೊಗರಿ ಕಟ್ಟಿಗಿ ಇಲ್ಲಾ ಜ್ವಾಳದ ದಂಟು ಇಲ್ಲಾ ಕಸಬರಿಗಿ ಹಿಡಿ ತಗೊಂಡು ನನ್ನ ರಗಳಿ ಮುಕ್ತಾಯ ಸಮಾರಂಭಕ್ಕ ನಿಂತಬಿಡ್ತಿದ್ಲು… ನನ್ನ ಹಟ ಜಾಸ್ತಿ ಆದಾಗ ಅದರ ಪರಿಣಾಮ ಹಿಂಗಾ ಆಗ್ಬಹುದು ಅಂತ ನನಗ ಹಿಂದಿನ ಅನುಭವದಿಂದಾ ಸುಳಿವು ಸಿಗ್ತಿತ್ತು. ಆದ್ರೂ ಅವ್ವನ ಕೈ ಏಟಿಗೂ ನಾನು ಅಷ್ಟು ಹಸಿದಿರುತ್ತಿದ್ದೆನೊ ಏನಾ ಗೊತ್ತಿಲ್ಲ. ಅವ್ವ ಚೆಂದಗ ಥಳಿಸಿದ ಮ್ಯಾಲೆನೇ ಶಾಂತಾಗ್ತಿದ್ದೆ. ಆಮ್ಯಾಲೆ ಆಕಿ ನನ್ನ ಬರಸೆಳೆದು ಬಾಸುಂಡೆ ಎದ್ದ ಕೈ ಕಾಲು ಗಲ್ಲಾ ಸವರಿ, “ಹಟ ಮಾಡಬ್ಯಾಡ ನಮ್ಮವ್ವ ಅಂದ್ರ ಎಲ್ಲಿ ಕೇಳ್ತೀಬೇ ನೀನು ದೌಳಾಕೆ” ಅಂತ ತನ್ನ ಸೀರೀ ಸೆರಗಿಂದ ನನ್ನ ಕಣ್ಣು ಮೂಗು ಒರೆಸಿ ಅದಾ ಸೆರಗಿಂದ ಮೆಲ್ಲಕಾ ಗಾಳಿ ಬೀಸಿದಂಗೆಲ್ಲಾ ನಾನು ಆಕೀ ತೊಡೆ ಮ್ಯಾಲೆ ಮಕ್ಕೊಂಡು ಬಿಡ್ತಿದ್ದೆ. ಎಚ್ಚರದಾಗ ಹೊಸ ಲಂಗ ಪೆÇೀಲಕ ಹಾಕ್ಕೊಂಡು ಧಿಮಾಕು ಮಾಡೂ ಸಂಭ್ರಮ ತೆಕ್ಕಿಬಿದ್ದಿರ್ತಿತ್ತು. 
ಬೆಳ್ಕೊಂತ ಸ್ವಲ್ಪ ಸ್ವಲ್ಪ ದೊಡ್ಡಾಕಿ ಆದ್ಮ್ಯಾಲೆ ಅವ್ವ ಹೇಳೂ ತಿಳುವಳಿಕಿ ಮಾತಿಗೆ ತಲಿ ಆಡ್ಸೂದು ಕಲಿತೆ. ಆಕೀ ತನ್ನ ಎಂಟನೇ ವಯಸ್ಸಿನ್ಯಾಗ ಆಗಿನ ಪದ್ಧತಿಯಂಗ ದಟ್ಟಿ ಉಡಾಕ್ಹತ್ತೀದ್ಲಂತ. ದಟ್ಟಿ ಅಂದ್ರ ಹಿರೇರು ಉಡೂ ಸೀರಿಗಿಂತ ಸಣ್ಣ ದಡೀದು ಮತ್ತ ಸಣ್ಣ ಅಳತೀದು. ನಿಮಗ ಐಡಿಯಾ ಬರಲಿಲ್ಲಂದ್ರ ಬನ್ನಿ ಮಹಾಂಕಾಳಿ ಅಥವಾ ದ್ಯಾಮವ್ವ ದೇವತಿಗಿ ಉಡುಸಿರ್ತಾರಲ್ಲ ಸಣ್ಣ ಸೀರಿ ನೆನಪಿಸ್ಕೊರಿ. ಹಾಂ! ಅಂಥಾ ಸೀರಿ. ಅವ್ವ ಅಂಥಾ ಎರಡ್ಜೊತಿ ಸೀರಿ ಉಟ್ಟು ಹರಿಯಾ ಹೊತ್ತಿಗಿ ದೊಡ್ಡಾಕ್ಯಾದ್ಲಂತ. ಆಮ್ಯಾಲೆ ತನ್ನ ಹನ್ನೆರ್ಡನೇ ವಯಸ್ಸಿಗನಾ ಈ ದೊಡ್ಡ ದಡಿಯ ಎಂಟು ಮಳದ ಹುಬ್ಬಳ್ಳಿ ಸೀರಿ ಉಡಾಕ್ಹತ್ತೀದ್ಲಂತ. ಯಾಕಂದ್ರ ಆ ಹೊತ್ತಿಗಿ ಆಗ್ಲೆ ಅವ್ವ ಶ್ರೀಮತಿ ಸತ್ಯಮ್ಮ ವೆಂಕಪ್ಪ ಆಗಿದ್ಲು. ಹಿಂಗ ಅವ್ವ ತನ್ನ ಸೀರಿ ಪುರಾಣ ತಗದ್ಲಂದ್ರ ನಾವು ಹೆಣ್ಮಕ್ಳು ಕಣ್ರೆಪ್ಪಿ ಬಡೀದಾ ಆಕೀ ಮಾಡೂ ನಿರೂಪಣೆ ಕೇಳ್ತಿದ್ವಿ. ಅವ್ವನ ಸೀರಿಗಿ ನಮ್ಮ ಲಂಗಾ ಪೋಲಕಾಕ ಹೋಲಿಸಿ ‘ನಮ್ಮದಾ ಭೇಷಿ ಬಿಡವ್ವಾ ಅಂದ್ಕೊಂಡು’ ಮತ್ತೆ ಅವ್ವನ ಜೊತೀಗಿ ಹಟ ಮಾಡದಾ ಬಾಯಿ ಮುಚ್ಕೊಂಡು ಇದ್ದು ಬಿಡ್ತಿದ್ವಿ ಮುಂದಿನ ಸಲ ಹೊಸ ಅರಬಿ ತರೂತನಕ.!!

ನಾನು ನೋಡಿದಂಗ ಪ್ರತಿ ವರ್ಷಾನೂ ಅಲ್ಲಲ್ಲ, ದಿನಾ ದಿನಾನೂ ಜನರು ಉಡುಗಿ ತೊಡಗಿ ವಿಷಯದಾಗ ಬದಲಿ ಆಕ್ಕೊಂತ ಇರ್ತಾರ. ನಮ್ಮೂರಾಗ ಅವ್ವನ ವಾರಿಗಿ ಹೆಣ್ಣುಮಕ್ಳು ಕೆಲವರು ಹುಬ್ಬಳ್ಳಿ ಸೀರಿ ಉಟ್ರ ಮತ್ತೆ ಕೆಲವರು ಶಿಗ್ಲಿ ಸೀರಿ ಉಡುತಿದ್ರು. ಹುಬ್ಬಳ್ಳಿ ಸೀರಿ ಶಿಗ್ಲಿ ಸೀರಿಗಿಂತ ದೊಡ್ಡ ದಡೀದು, ದೊಡ್ಡ ರೊಕ್ಕದ್ದು, ಚೊಲೊ ಗುಣಮಟ್ಟದ ನೇಯ್ಗಿದು ಮತ್ತ ಭಾಳ ದಿನಾ ಬಾಳಿಕಿ ಬರೂದು. ಇನ್ನು ಕೆಲವರು ಬಾಂಡು ಅಂತ ಅದೊಂಥರದ ಸೀರಿ ಉಡುತ್ತಿದ್ರು. ಬಾಂಡು ಅಂದ್ರ ಸೀರಿ ಉಡೂ ತಲೆಮಾರಿನವರಿಗಿಂತ ಸ್ವಲ್ಪ ಕಿರಿಯ ತಲೆಮಾರಿನ ಹೆಣ್ಮಕ್ಕಳು ಉಡೂವಂಥಾ ಹೊಸ ಫ್ಯಾಶನ್. ಈ ಥರದ ಬಾಂಡೂ ಸೀರೀನ ಈಗ್ಲೂ ಉತ್ತರ ಕರ್ನಾಟಕದ ಕೆಲವೆಡೆ ಉಡ್ತಾರ. ಬಾಂಡು ಜನಪ್ರಿಯ ಆದ ಕಾಲಕ್ಕ ಅವ್ವನ ಗೆಳತ್ಯಾರು ಕೆಲವರು ಬಾಂಡು ಬೆನ್ನು ಹತ್ತಿ ಹೊಂಟ್ರು. ಆಮ್ಯಾಲೆ ಪತ್ತಲ ಜನಪ್ರಿಯ ಆದ ಕಾಲಕ್ಕ ಬಾಂಡು ಮತ್ತು ಸೀರಿ ಉಟ್ಕೊಳ್ಳೂ ಎರಡೂ ಗುಂಪಿನ ಹೆಣ್ಮಕ್ಕಳು ಪತ್ತಲ ತಗೊಂಡು ಉಡಾಕ್ಹತ್ತೀದ್ರು. ಯಾಕಂದ್ರ ಒಂದು ಹುಬ್ಬಳ್ಳಿ ದಡಿ ಸೀರಿಗೆ ಖರೀದಿ ಮಾಡೂ ಹಣದಾಗ ಮೂರು ಪತ್ತಲ ತಗೊಬಹುದು ಅಂತ ಉಳಿತಾಯ ಲೆಕ್ಕಾಚಾರ.

ಹಿಂಗ ಉಳಿತಾಯದ ನೆವದಾಗ ಒಂಚೂರು ಹೊಸ ಫ್ಯಾಶನ್ ಮಾಡೂ ಆಸೆನೂ ಮನಸ್ಸಿನ್ಯಾಗ ಇರುತ್ತ ಬಿಡ್ರಿ ಪಾಪ!! ಆದ್ರ ಈ ನಮ್ಮವ್ವ ಮಾತ್ರ ‘ಆ  ಹುಬ್ಬಳ್ಳಿ ಸೀರಿನಾ ಉಡ್ತೀನಿ ಜೀವನ ಪರ್ಯಂತ’ ಅಂತ ಬಾಂಡ್ ಬರ್ದು ಕೊಟ್ಟಾಳೇನಾ ಅನ್ನೂವಂಗ ಯಾವತ್ತೂ ದಡೀ ಸೀರಿ ಬಿಟ್ಟು ಬ್ಯಾರೆ ಥರದ ಸೀರಿ ಉಟ್ಟಾಕೆಲ್ಲ. ವಿಶೇಷ ದಿನದಾಗ ಉಡಾಕ ಒಂದ್ಯಾಡು ಚೊಲೊ ಸೀರಿನೂ ಇಟ್ಕೊಂಡಿರ್ತಾಳ. ಅವು ಕೂಡ ದಡಿ ಸೀರಿನೆ.  ಆದ್ರೂ ಆಕೀದು ಹತ್ತಿ ನೂಲಿನ ದಡೀ ಸೀರಿ ಮ್ಯಾಲೆ ಅತೀ ಅನ್ಸೂವಷ್ಟು ಪ್ರೀತಿ. 

ಅವ್ವಗ ಆ ಸೀರಿ ಮ್ಯಾಲಿರೂ ಪ್ರೀತಿ ಸುಮ್ಮನಾ ಏನಲ್ಲ. ಬರು ಬರುತ್ತ ತಿಳುವಳಿಕಿ ಬಂದಂಗೆಲ್ಲಾ ನನಗ ಗೊತ್ತಾತು ಅವ್ವನ ಸೀರಿ ಬೆಲೆ ಎಷ್ಟು ಅಂತ. ಇಲ್ಲಿ ಬೆಲೆ ಅಂದ್ರ ಖರೀದಿ ಬೆಲೆ ಅಲ್ಲ. ಅದು ಅವ್ವನ ಜೀವನಕ್ಕ ಸಂಬಂಧ ಪಟ್ಟಿದ ಎಲ್ಲಾ ಖುಷಿ, ಆರೋಗ್ಯ ಮತ್ತು ಗೌರವ ಒಳಗೊಂಡದ್ದು. ಅದಕ್ಕ ಬೆಲೆ ಕಟ್ಟಾಕಾಗೂದಿಲ್ಲ. 

ಬೆಳಿಗ್ಗೆದ್ದು ಜಳಕಾ ಮಾಡಿ ಚೆಂದಗ ನೆರಿಗಿ ಹೊಯ್ದು ಸೀರಿ ಉಟ್ಕೊಂಡ್ಲಂದ್ರ ಅದೂ ಬರೀ ಆಕೀ ದೇಹ ಕಾಪಾಡೂ ಅರಬಿ ಮಾತ್ರ ಅಲ್ಲ. ಹೊಲಕ್ಕ ಹೊಂಟಾಗ ಅದು ಛತ್ರಿಯಾಗುತ್ತ ಅವ್ವಗ. ನಾನೂ ಅವ್ವನ ಕೂಡ ಹೊಲಕ್ಕ ಹೋಗುವಾಗ ಆಕೀ ಸೀರಿ ಸೆರಗನ್ಯಾಗ ಹೊಕ್ಕೊಂಡೇ ಕಾಲು ತೊಡರಾಗಿ ಬಿದ್ರೂ ಅವ್ವ ಒಮ್ಮೊಮ್ಮಿ ಬೈದ್ರೂ ಮತ್ತೆ ಸೆರಗಿನ ತುದಿ ಹಿಡ್ಕೊಂಡಾ ಹೊಕ್ಕಿದ್ದೆ ಹೊಲತನಕ. ಅವ್ವ ಯಾವತ್ತೂ ತಲೆ ಮ್ಯಾಲೆ ಸೆರಗ್ಹೊದ್ಕೊಂಡಾ ಇರಾಕಿ. ಬ್ಯಾರೆ ಛತ್ರಿಯ ಅಗತ್ಯನಾ ಇಲ್ಲ. ಹೊಲಕ್ಕ ಹೋದ ನಂತ್ರ ಹೂವು ಕಾಯಿ ಕಸರು ಅಂತ ಕೊಯ್ಯುವಾಗ ಅವ್ವನ ಸೀರಿ ಉಡಿ(ಮಡಿಲು)ಯಾಗುತ್ತ. ಬ್ಯಾರೆ ಅರಬಿ ಬೇಕಾಗಿಲ್ಲ.  ಕೈ ತೊಳಕೊಂಡಾಗ ಸೆರಗು ಕೈ ವಸ್ತ್ರ ಆಗುತ್ತ. ಬೆವತಾಗ ಬೀಸಣಿಕಿ ಆಗುತ್ತ. ಸತ್ತು ಅಗಲಿ ಹೋದವ್ರ ನೆನಪಾದಾಗ ಮತ್ತು ಯಾವುದಾ ಕಾರಣಕ್ಕ ಜೀವ ಕಾಟರಿಸಿದಾಗ ಅದು ಕಂಬನಿ ಒರೆಸೂ ಕೈ ಆಗುತ್ತ. ಅದಾ ಸೆರಗಿಂದ ನಮ್ಮೆಲ್ಲರ ಕಣ್ಣು ಮೂಗು ವರೆಸಿ ಗಾಳಿ ಬೀಸಿ ಜೋಗಳ ಹಾಡಿದ್ಲಲ್ಲಾ ಅವ್ವ! ನಾವು ಓಣ್ಯಾಗಿನ ಸಣ್ಣ ಹುಡುಗರೆಲ್ಲಾರೂ ಸೇರಿ ಕಣ್ಣು ಮುಚ್ಚಾಲೆ ಆಡುವಾಗ ಅವ್ವನ ಸೆರಗಿನ್ಯಾಗ ಏನಿಲ್ಲಂದ್ರೂ ಇಬ್ಬರಾದ್ರೂ ಬಚ್ಚಿಟ್ಕೊಂಡು ಹುಡುಕಾಕ ಬರೂ ಹುಡುಗ/ಹುಡುಗಿ ಮ್ಯಾಲೆ ಮುತ್ತಿಗಿ ಹಾಕಿ ಔಟ್ ಮಾಡ್ತಿದ್ವಿ. ಈಗ ಅದಾ ಸೆರಗಿನ ನೆಳ್ಳಾಗ ಆಕೀ ಮೊಮ್ಮಕ್ಕಳು ಬೆಳೆಯಕ್ಹತ್ಯಾರ.

ಸೀರಿ ಹಳೇದಾದ ಮ್ಯಾಲೆ ಸೆರಗಿನ ಭಾಗದಾಗ ಲಗೂನ ಸವಕಳಿ ಆಗುತ್ತ. ಆಗ ಸವೆದ ಭಾಗ ಕತ್ತರಿಸಿ ತೆಗೆದು ಆಚೀಚೆಯ ಎರಡೂ ಭಾಗ ಸೇರಿಸಿ ಮತ್ತೆ ಹೊಲಿಸ್ತಾರ. ಆಗ ಅದು ಪೂರ್ಣ ಸೀರಿ ಅಲ್ಲ. ಅದಕ್ಕ ಪಟಿಗಿ ಅಂತಾರ. ಅಂಥಾ ಪಟಿಗಿ ಮ್ಯಾಲೆನೂ ಅವ್ವನ ಪ್ರೀತಿ ಕಡಿಮ್ಯಾಗೂದಿಲ್ಲ. ಹೊಸ ಸೀರಿ ಚೆಂದಗ ಮಡಚಿಟ್ಟು, ಪಟಿಗಿ ಉಟ್ಕೊಂತಿರ್ತಾಳ. “ಯಾಕಬೇ ಪಟಗಿ ಉಟ್ಕೊಂತೀ, ಸೀರಿ ಇಲ್ಲೇನು” ಅಂತ ಕೇಳೀದ್ರ, “ಸೈ ಯವ್ವಾ, ಯಾಕ ಪಟಗಿ ಎಂದೂ ಉಟ್ಟಾಕಿ ಅಲ್ಲೇನು ನಾನು” ಅಂತ ವಾಪಸ್ ಪ್ರಶ್ನೆ ಹಾಕಿ ಅವ್ವ ಗತಕಾಲದ ವೈಭವಾನ ನೆನಪಿಸ್ತಾಳ. 

ಪಟಗಿನೂ ಅಲ್ಲಲ್ಲಿ ತೂತು ಬಿದ್ದಾಗ ಅವ್ವ ಅದನ್ನ ಉಡೂದನ್ನ ನಿಲ್ಲಿಸ್ತಾಳ. ಅದನ್ನ ನಾಕು ಪದರಿನ್ಯಾಗ ಮಡಚಿ ತ್ರಿಕೋನದ ಆಕಾರದಾಗ ಚೆಂದಗ ಬಂದೋ ಬಸ್ತ್ ಆಗಿ ಹೊಲಿತಾಳ. ಅದಕ್ಕ ಮೂಲಿ ಕುಂಚಿಗಿ ಅಂತಾರ. ಆ ಮೂಲಿ ಕುಂಚಿಗಿ ಕಡಿಮಿ ಅಂದ್ರೂ ಇಪ್ಪತ್ತೈದು ಮೂವತ್ತು ಕಿಲೊ ಹೂವು ಹಿಡಿಯುತ್ತ. ಅಲ್ಲಿಂದ ಮುಂದ ಅವ್ವನ ಸೀರಿ ಮೂಲಿ ಕುಂಚಿಗಿ ಆಗಿ ಹೂವು ತುಂಬಾಕ ತನ್ನ ಜೀವ ಮುಡುಪಾಗಿಡುತ್ತ. ಮಳಿ ಬಿಸಿಲು ಇದ್ದಾಗ ಅದು ಅವ್ವನ ತಲಿ ಮ್ಯಾಲೆ ಹೆಚ್ಚುವರಿ ಛತ್ರೀನೂ ಆಗಿ ವರಿ ಆಗೂದನ್ನ ತಪ್ಸುತ್ತ. 

ಇನ್ನೇನು ಮೂಲಿ ಕುಂಚಿಗಿಯ ಅವತಾರ ಸಮಾಪ್ತಿ ಆಗೂ ಕಾಲ ಬಂತು ಅನ್ನೂದ್ರಾಗ ಅವ್ವ ಮತ್ತೊಂದು ಉಪಾಯ ಸಿದ್ಧ ಮಾಡಿರ್ತಾಳ. ಮೂಲಿ ಕುಂಚಿಗಿ ಜೊತಿಗಿ ಅಳಿದುಳಿದ ಇತರೆ ಹತ್ತಿ ನೂಲಿನ ಅರಬಿನೆಲ್ಲಾ ಸೇರಿಸಿ ಸುಟ್ಟು ಬೂದಿ ಮಾಡ್ತಾಳ. ಅದರ ಜೊತಿಗಿ ಅಗಸಿ ಬೀಜ ಸುಟ್ಟು ಕುಟ್ಟಿ ಅರಬೀ ಬೂದಿ ಜೊತಿ ಸೇರಿಸಿ ನುಣ್ಣಗೆ ಅರ್ದು ಮೇಣ ತಯಾರ ಮಾಡ್ತಾಳ. ಅದನ್ನ ಬಿದರಿನ ಮರ(ಕಾಳು ಹಸ ಮಾಡುವ ಮರ)ಕ್ಕ ಸವರಿ ನೆಳ್ಳಿನ್ಯಾಗ ಒಣಗಿಸೀದ್ಲಂದ್ರ ಎರಡ್ವರ್ಷ ಜಪ್ ಅನ್ನದಂಥಾ ಎಣ್ಣೆ ಮರ ತಯಾರಾಗ್ತಾವು. 

ನಾನು ಮನಿಗಿ ಹೋದಾಗೆಲ್ಲಾ ಅವ್ವನ ಮಗ್ಗುಲದಾಗ, ಆಕೀ ಹಳೇ ಸೀರೀಯನ್ನಾ ಹೊದ್ದುಕೊಂಡು ಮಲಗೂದು. ಅಕಸ್ಮಾತ್ ಹಳೇ ಸೀರಿ ಯಾವದಾರ ಡ್ಯೂಟಿ ಮ್ಯಾಲಿದ್ರ ಅವ್ವ ತಾನು ದಿನಾಲು ಉಡುವ ಒಳ್ಳೇ ಸೀರೆಗಳಲ್ಲೇ ಒಂದನ್ನ ನನಗ ಹೊಚ್ಚತಾಳ. ಹಂಗಾದ್ರ ಮಾತ್ರ ನನಗೆ ಒಳ್ಳೇ ನಿದ್ದಿ ಬರುತ್ತ.

ನನಗ ಯಾವಾಗರ ಉಡಾಕ ಒಂದು ರೇಸಿಮಿ ಸೀರಿ ತಂದ್ಕೊಡಬ್ಬೆ ಅಂತ ಅವ್ವಗ ಕೇಳಿದ್ದೆ. ಅವ್ವ ಹಸಿರು ಬಣ್ಣದ ತೋಪು ಸೆರಗಿನ ರೇಸಿಮಿ ಸೀರಿ ತಂದು ಇಟ್ಟಿತ್ತು ಖುಷಿಯಿಂದ. ನಾನು ಮೊನ್ನೆ ಸಲ ಊರಿಗಿ ಹೋದಾಗ, “ಸಾವಿ ಅತ್ತೆ ನಿನ್ನ ಸೀರಿ ತಗೋ ಅಜ್ಜಿ ತಂದೈತಿ” ಅಂತ ನನ್ನ ಅಳಿಯ ವಿಷ್ಣು ಎಂಥಾ ಚೆಂದಗ ತಂದು ನನಗ ಕೊಟ್ಟ. ಕೊಟ್ಟ ನಿಜ ಆದ್ರ ನನಗ ಹಟ ಬಂತು. ಸೀರಿ ಒಡಲು ಗೀರು ಗೀರಿನಿಂದ ತುಂಬಿರಬೇಕಿತ್ತು ಮತ್ತ ಅದು ನೀಲಿ ಇಲ್ಲಾ ಹಳದಿ ಬಣ್ಣದ್ದಾಗಿರಬೇಕಿತ್ತು ಅಂತ ಅವ್ವನ ಕೂಡ ಹಟ ಮಾಡಿ ಅದನ್ನ ಮನ್ಯಾಗ ಬಿಟ್ಟು ಬಂದೆ… ಆದ್ರ ಆವಾಗಿನಂಗ ಅವ್ವ ಜ್ವಾಳದ ದಂಟು ಇಲ್ಲಾ ಕಸಬರಿಗಿ ತಗೊಂಡು ನನ್ನ ರಿಪೇರಿ ಮಾಡಲಿಲ್ಲ. ಅದಕ್ಕಾ ಒಂಚೂರು ಬ್ಯಾಸರಾಗೈತಿ…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
chaithra
chaithra
8 years ago

ಅಮ್ಮ ಅಂದ್ರೆ ಹಾಗೆ ಅಲ್ವಾ.. ಬೈಸಿಕೊಳ್ಳೋದು ಒಂದು ಮಜ ಅಮ್ಮನ ಬಳಿ. ಚೆನ್ನಾಗಿದೆ….

1
0
Would love your thoughts, please comment.x
()
x