ಅಂತರ್ಜಾಲದಲ್ಲಿ ದೈತ್ಯ ಕಂಪನಿಗಳು ಮತ್ತು ಬಳಕೆದಾರರ ನಡುವೆ ಸಂಘರ್ಷ: ಜೈಕುಮಾರ್.ಹೆಚ್.ಎಸ್

'ಜಾಲದಲ್ಲಿ ಸಮಾನತೆ'ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು.
– ರಾಬರ್ಟ್ ಮ್ಯಾಚೆಸ್ನಿ, ಅಮೇರಿಕಾದ ಪ್ರಸಿದ್ದ ಮಾಧ್ಯಮ ಚಿಂತಕ

ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. 
…ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್ ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್ ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಾಗುವುದಿಲ್ಲ. ಸರ್ಕಾರವೇ ಗುಣಮಟ್ಟವಿರುವ ಎಲ್ಲ ಹೋಟೆಲ್ ಗಳನ್ನು ಅಂತಿಮಗೊಳಿಸಿ ಇಂತಿಂಥ ಬಸ್ಸುಗಳು ಇಂತಿಂಥ ಹೋಟೆಲ್ ಗಳ ಬಳಿ ನಿಲುಗಡೆಯಾಗಬೇಕೆಂದು ನಿರ್ಧರಿಸಿದರೆ ಎಲ್ಲಾ ಹೋಟೆಲ್ ಗಳೂ ಮತ್ತು ಪ್ರಯಾಣಿಕರಿಗೂ ಸಮಾನ ನೆಲೆ ಒದಗಿಸಿದಂತಾಗುತ್ತದೆಯಲ್ಲವೇ?…

…..ಹಲವಾರು ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಮಾತ್ರವಲ್ಲದೇ ಸಮವಸ್ತ್ರ, ಪ್ರತ್ಯೇಕ ಟ್ಯೂಷನ್, ಕ್ರೀಡಾ ತರಬೇತಿ, ಇತ್ಯಾದಿ ಗಳಿಗೆಲ್ಲ ಪ್ರತ್ಯೇಕ ಶುಲ್ಕಗಳಿವೆ. ಆ ಶುಲ್ಕವನ್ನು ಕಟ್ಟಲು ಒಪ್ಪುವವರಿಗೆ ಮಾತ್ರವೇ ಪ್ರವೇಶ ನೀಡುತ್ತವೆ. ಇಲ್ಲದಿದ್ದಲ್ಲಿ, ಪ್ರವೇಶ ನಿರಾಕರಿಸುವುದು ಸರ್ವೇ ಸಾಮಾನ್ಯವಾಗಿದೆ. ಇಂಥಹ ಪರಿಸ್ಥಿತಿ, ಜಾಲದಲ್ಲಿ ಸಮಾನತೆ ಇಲ್ಲವಾದಾಗ ನೆಟ್ ಬಳಕೆದಾರರಿಗೂ ಬರುವ ದಿನಗಳು ದೂರವಿಲ್ಲ. 

 'ಏರ್ ಟೆಲ್ ಝೀರೋ' ಎಂಬ ಯೋಜನೆಯಡಿ ಬಳಕೆದಾರರಿಗೆ ಉಚಿತವಾಗಿ ಇಂಟರ್ ನೆಟ್ ಸೌಲಭ್ಯ ಒದಗಿಸುವುದಾಗಿ ಮತ್ತು ದತ್ತಾಂಶ ಸಾಗಾಣಿಕೆಯ ವೆಚ್ಚವನ್ನು ಬಳಕೆದಾರರಿಂದ ಪಡೆಯದೆ, ಇಂಟರ್ ನೆಟ್ ಕಂಪನಿಗಳಿಂದ ಪಡೆಯುವುದಾಗಿ ಇತ್ತೀಚೆಗೆ ಏರ್ ಟೆಲ್ ಕಂಪನಿಯು ಹೆಜ್ಜೆ ಹಾಕಿತ್ತು! ಈ ಯೋಜನೆಯಲ್ಲಿ ಭಾಗೀದಾರನಾಗಿ 'ಪ್ಲಿಪ್ ಕಾರ್ಟ್' ಎಂಬ ಆನ್ಲೈನ್ ಕಂಪನಿಯು ಕೈಜೋಡಿಸಿತು. ಇದು ಮೇಲ್ನೋಟಕ್ಕೆ ಉಚಿತ ಸೇವೆಯಂತೆ ಕಾಣುವುದರಲ್ಲಿ ಸಂದೇಹವೇನು ಇಲ್ಲ. ಆದರೆ, ಏರ್ ಟೆಲ್ ನಂತಹ ಟೆಲಿಕಾಂ ಕಂಪನಿಗಳು ದೈತ್ಯ ಇಂಟರ್ ನೆಟ್ ಕಂಪನಿಗಳ ಜೊತೆ ಸೇರಿ ಲಾಭಕ್ಕಾಗಿ ಇಂಟರ್ ನೆಟ್ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳುವುದರ ವಿರುದ್ದ ಲಕ್ಷಾಂತರ ಇಂಟರ್ ನೆಟ್ ಬಳಕೆದಾರರು ಮತ್ತು ಸ್ವಾತಂತ್ರ್ಯ ಪ್ರೇಮಿಗಳು ಇದನ್ನು ಪ್ರತಿಭಟಿಸಿದರು. ಇದು ಇಂಟರ್ ನೆಟ್ ಬಳಕೆದಾರರ ಹಕ್ಕಿನ ಉಲ್ಲಂಘನೆ ಎಂದೂ, 'ಜಾಲದ ಅಲಿಪ್ತತೆ' /'ಜಾಲದಲ್ಲಿ ತಾಟಸ್ಥ್ಯ’ ಅಥವಾ ‘ಜಾಲದಲ್ಲಿ ಸಮಾನತೆ' ಅಥವಾ Net Neutrality ಯನ್ನು ಬುಡಮೇಲು ಮಾಡುವುದೆಂದೂ ಜಾಲತಾಣಗಳಲ್ಲಿ ಚರ್ಚೆಗಳು ನಡೆಯತೊಡಗಿದವು. ಇದರಿಂದ ಮುಖಭಂಗ ಅನುಭವಿಸಿದ 'ಪ್ಲಿಪ್ ಕಾರ್ಟ್' ಕಂಪನಿಯು ಮೊದಲಿಗೆ ಈ ಯೋಜನೆಯಿಂದ ಆಚೆಗೆ ಬಂದಿತು. ನಂತರ ಏರ್ ಟೆಲ್ ಕಂಪನಿಯು ನಿಧಾನವಾಗಿ ಹಿಂದೆ ಸರಿದಂತೆ ಮಾಡಿತು. 
 
ಜಾಲದಲ್ಲಿ ಸಮಾನತೆ ಎಂದರೇನು?
'ಜಾಲದಲ್ಲಿ ಸಮಾನತೆ' (Net Neutrality) ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಅಂಶವೆಂದರೆ, ಇಂಟರ್ ನೆಟ್ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ 'ಜಾಲದಲ್ಲಿ ಸಮಾನತೆ' ಎಂಬ ಪರಿಕಲ್ಪನೆ. ಅಂದರೆ, ಭೌತಿಕ ಜಾಲಗಳ (ನೆಟ್ ವರ್ಕ್) ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ಜಾಲಗಳ ಮೇಲೆ ಹರಿಯುವ ಇಂಟರ್ನೆಟ್ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು. ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ.

ಟೆಲಿಕಾಂ ಆಪರೇಟರ್ ಗಳು ಮತ್ತು ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳು ನಿಮಗೆ ಇಂಟರ್ನೆಟ್ ಪ್ರವೇಶಾವಕಾಶ ಒದಗಿಸುತ್ತವೆ. ಹಾಗೆಯೇ ಎಷ್ಟರಮಟ್ಟಿಗೆ ನಿಮಗೆ ಪ್ರವೇಶಾವಕಾಶ ನೀಡಬಹುದು, ನೀವು ಎಷ್ಟು ವೇಗವಾಗಿ ಪ್ರವೇಶಾವಕಾಶ ಪಡೆಯಬಹುದು ಮತ್ತು ಅಂತರ್ಜಾಲದ ವಿಷಯ (ಕಂಟೆಂಟ್) ಮತ್ತು ಸೇವೆಗಳಿಗೆ ಪ್ರವೇಶಾವಕಾಶ ಪಡೆಯಲು ನೀವೆಷ್ಟು ಪಾವತಿಸಬೇಕು ಎಂಬುದನ್ನು ಈ ಕಂಪನಿಗಳು ನಿಯಂತ್ರಿಸುತ್ತವೆ. ಆದರೆ ಜ್ಞಾನ ಎಲ್ಲೆಡೆ ಪಸರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಲು ಇಂಟರ್ ನೆಟ್ ಸೇವೆಯು ಸಮಾನತೆ ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ:
–    ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶವಿರಬೇಕು.
–    ಎಲ್ಲಾ ಜಾಲ ತಾಣ ಪ್ರವೇಶಾವಕಾಶಕ್ಕೂ ಟೆಲಿಕಾಂ/ಇಂಟರ್ ನೆಟ್ ಪೂರೈಕೆದಾರರ ಮಟ್ಟದಲ್ಲಿ ಒಂದೇ ತೆರನಾದ ವೇಗ ಇರಬೇಕು.
–    ಎಲ್ಲಾ ಜಾಲ ತಾಣ ಬಳಸುವುದಕ್ಕೂ ಒಂದೇ ದತ್ತಾಂಶ ವೆಚ್ಚ ಇರಬೇಕು. 

ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು. ಜಾಲ ಸಮಾನತೆ ಪರಿಕಲ್ಪನೆಯಂತೆ ಜಾಲ ವ್ಯವಸ್ಥೆ ಮತ್ತು ಅದರಲ್ಲಿ ಚಲಿಸುವ ದತ್ತಾಂಶಗಳೆರಡೂ ಸ್ವತಂತ್ರವಾಗಿರಬೇಕು ಎಂದು ಹೇಳುತ್ತದೆ.

ಇಂಟರ್ನೆಟ್ ಎಂದರೆ….
ಇಂಟರ್ನೆಟ್ ಎಂದರೆ ಪರಸ್ಪರ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ಜಾಲದ ಮುಖೇನಾ ಹರಿವ ದತ್ತಾಂಶ ಸಂವಹನ ವ್ಯವಸ್ಥೆ. ಕಂಪ್ಯೂಟರುಗಳ ನಡುವಿನ ಜಾಲವನ್ನು ಆಪ್ಟಿಕಲ್ ಫೈಬರ್ ನಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ತಂತುರಹಿತ ವ್ಯವಸ್ಥೆಯಲ್ಲಿ ತರಂಗಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಜಾಲ ವ್ಯವಸ್ಥೆಯ ಮೂಲಸೌಲಭ್ಯವನ್ನು ಬಿಎಸ್ಎನ್ಎಲ್, ಏರ್ ಟೆಲ್ ನಂತಹ ಟೆಲಿಕಾಂ ಕಂಪನಿಗಳು ನಿರ್ವಹಿಸಿದರೆ, ಈ ಜಾಲದಲ್ಲಿ ಹರಿದಾಡುವ ದತ್ತಾಂಶವನ್ನು ಸೃಷ್ಟಿಸಿ ನಿರ್ವಹಿಸುವವರು ಗೂಗಲ್, ಫೇಸ್ ಬುಕ್ ನಂಥಹ ದೈತ್ಯ ಕಂಪನಿಗಳು. ದತ್ತಾಂಶ ಸೃಷ್ಟಿಯಲ್ಲಿ ಜಾಲತಾಣಗಳ ಮೂಲಕ ಜನ ಸಾಮಾನ್ಯರೂ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದಾರೆ.

ಪರಸ್ಪರ ಸಂಪರ್ಕಿಸಲು, ಜ್ಞಾನವನ್ನು ಪಡೆಯಲು, ಸರಕುಗಳನ್ನು ಖರೀದಿ ಮತ್ತು ಮಾರಾಟ ಮಾಡಲು ನಮ್ಮ ಸಂವಹನ ವ್ಯವಸ್ಥೆಯಲ್ಲಿ ಇಂಟರ್ನೆಟ್ ಪ್ರಮುಖ ಸಾಧನವಾಗಿ ಮೂಡಿಬಂದಿದೆ. ಇದೊಂದು ನವ ಮಾಧ್ಯಮವಾಗಿದ್ದು, ಕೇವಲ ಸಾಮಾಜಿಕ ಮಾಧ್ಯಮವಷ್ಟೇ ಅಲ್ಲ, ಸಾಂಪ್ರದಾಯಿಕ ಮಾಧ್ಯಮವೂ ಆಗುತ್ತಿದೆ; ಮುದ್ರಣ ಮಾಧ್ಯಮ ಮತ್ತು ಟೆಲಿವಿಷನ್ ಗಳು ಇಂಟರ್ ನೆಟ್ ಕಡೆಗೆ ವಲಸೆ ಹೋಗುತ್ತಿವೆ. 

ಜಾಲದಲ್ಲಿ ಸಮಾನತೆಗೆ ಅಪಾಯಗಳು:
ಜಾಲದಲ್ಲಿ ಸಮಾನತೆಯನ್ನು ಕಳಕೊಂಡರೆ, ನಮ್ಮ ಇಂಟರ್ನೆಟ್ ಪ್ರವೇಶಾವಕಾಶವನ್ನು ನಿಯಂತ್ರಿಸುತ್ತಿರುವ ಟೆಲಿಕಾಂ ಕಂಪನಿಗಳು ನಾವು ಏನನ್ನು, ಎಷ್ಟನ್ನು ನೋಡಬೇಕು ಎಂದು ನಿರ್ಧರಿಸುತ್ತವೆ. ಸಣ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿಪರ ಮಾಧ್ಯಮಗಳು ತಮ್ಮ ಜಾಲತಾಣಗಳು ಎಲ್ಲೆಡೆ ಕಾಣಸಿಗುವಂತಾಗಲೆಂದು ವಿಶ್ವದ ಪ್ರತಿಯೊಂದು ಟೆಲಿಕಾಂ ಕಂಪನಿಗಳಿಗೆ ಹಣ ನೀಡಲಾರದೆ ಸಾಯುತ್ತವೆ.

ಭಾರತ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ತನ್ನ ಇತ್ತೀಚಿನ ಸಮಾಲೋಚನಾ ಟಿಪ್ಪಣಿಯಲ್ಲಿ ಟೆಲಿಕಾಂ ಜಾಲಗಳ ಮೇಲೆ ಒದಗಿಸಲಾಗುವ ಎಲ್ಲಾ ಸೇವೆಗಳನ್ನು ಹೆಚ್ಚುವರಿ (ಒವರ್-ದ-ಟಾಪ್) ಸೇವೆಗಳೆಂದು ವ್ಯಾಖ್ಯಾನಿಸಿದೆ.  ಇದರಿಂದ ಇಂಟರ್ನೆಟ್ ಕೂಡ ಹೆಚ್ಚುವರಿ ಸೇವೆಯೆಂದು ಪರಿಗಣಿಸಲಾಗುತ್ತದೆ. ಇದು ಜಾಲದಲ್ಲಿ ಸಮಾನತೆ ತತ್ವಕ್ಕೆ ವಿರುದ್ದವಾಗಿದೆ. 
ಒಂದೆಡೆ, ಟೆಲಿಕಾಂ ಕಂಪನಿಗಳು 'ಜಾಲದಲ್ಲಿ ಸಮಾನತೆ' ವ್ಯವಸ್ಥೆಯನ್ನು ತೊಡೆದುಹಾಕಲು ನಿಂತಿದ್ದರೆ, ಮತ್ತೊಂದೆಡೆ, ಅತಿ ದೊಡ್ಡ ಇಂಟರ್ನೆಟ್ ಕಂಪನಿಗಳಾದ ಗೂಗಲ್, ಫೇಸ್ ಬುಕ್, ಇತ್ಯಾದಿಗಳು ಅವುಗಳಿಗೆ ಹೆಗಲುಕೊಟ್ಟು ನಿಂತಿವೆ. ಇದರ ಜೊತೆಗೆ 'ಜಾಲದಲ್ಲಿ ಸಮಾನತೆ'ಯನ್ನು ದುರ್ಬಲಗೊಳಿಸಲು ಏರ್ ಟೆಲ್ ಕಂಪನಿಯು ಏರ್ ಟೆಲ್ ಝೀರೋ ಯೋಜನೆ ಜಾರಿಗೆ ತರಲು ಯತ್ನಿಸುತ್ತಿದ್ದರೆ, ಫೇಸ್ ಬುಕ್ ಕಂಪನಿಯು ರಿಲಯನ್ಸ್ ಕಂಪನಿಯ ಜೊತೆ ಸೇರಿ ಕಡಿಮೆ ಬೆಲೆಗೆ ಸೀಮಿತ ಇಂಟರ್ನೆಟ್ (ಇಂಟರ್ನೆಟ್.ಆರ್ಗ್) ಯೋಜನೆ ತರುತ್ತಿದೆ. 

ವಿಕೇಂದ್ರೀಕೃತ, ವಾಣಿಜ್ಯ-ರಹಿತ ಜಾಲದಿಂದ ಕೇಂದ್ರೀಕೃತ ಏಕಸ್ವಾಮ್ಯದೆಡೆಗೆ :
ಇಂಟರ್ನೆಟ್ ಜನ್ಮತಾಳಿದ್ದು ಅಮೇರಿಕಾ ಸರ್ಕಾರ ಸ್ಥಾಪಿಸಿದ್ದ ರಕ್ಷಣಾ ಜಾಲಬಂಧ DARPANET ನಿಂದ. ಅಮೇರಿಕಾ ಸರ್ಕಾರವು ಶೈಶಾವಸ್ಥೆಯಲ್ಲಿದ್ದ ಇಂಟರ್ ನೆಟ್ ನ್ನು ಎಟಿ&ಟಿ ಕಂಪನಿಗೆ ಮಾರಾಟ ಮಾಡಲು ಒಂದೊಮ್ಮೆ ಮುಂದಾಗಿತ್ತು. ಆದರೆ, ಆಗ ಅದರಲ್ಲಿ ವ್ಯಾಪಾರಿ ಮೌಲ್ಯ ಇಲ್ಲದ್ದರಿಂದ ಕಂಪನಿಯು ಅದನ್ನು ಕೊಳ್ಳಲು ನಿರಾಕರಿಸಿತ್ತು! ನಂತರದಲ್ಲಿ ಅಮೇರಿಕಾದ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಜಾಲಬಂಧ ಸಂಪರ್ಕವೇರ್ಪಟ್ಟು ಇತರೆ ದೇಶಗಳಲ್ಲಿಯೂ ಬೆಳೆಯತೊಡಗಿತು. ಈ ಹಂತದಲ್ಲಿ ಇಂಟರ್ನೆಟ್ ಸಂಪೂರ್ಣ ವಾಣಿಜ್ಯ-ರಹಿತ ಬಳಕೆಯಲ್ಲಿತ್ತು. 

ಪ್ರಾರಂಭದಲ್ಲಿ ಸಂಶೋಧಕರ ನಡುವೆ ಸಂವಹನ ಸಾಧನವಾಗಿ, ನಂತರ ಮಾಹಿತಿಯ ಆಕರವಾಗಿ ಇಂಟರ್ನೆಟ್ ಬಳಕೆಯಲ್ಲಿತ್ತು. ಸಂವಹನ ಜಾಲವಾಗಿ ಅದರ ಯಶಸ್ಸಿನಿಂದ ಜಾಗೃತಗೊಂಡ ಅಮೇರಿಕಾ ಸರ್ಕಾರ ಮತ್ತು ದೊಡ್ಡ ಕಂಪನಿಗಳು ಅದರ ವಾಣಿಜ್ಯ ಸಾಮರ್ಥ್ಯವನ್ನು ಮನಗಂಡವು. 1995ರ ಹೊತ್ತಿಗೆ, ಇಂಟರ್ನೆಟ್ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿತು ಮತ್ತು ದೊಡ್ಡ ಕಂಪನಿಗಳು ಬಂಡವಾಳದ ವಿಸ್ತರಣೆಗೆ ಅದನ್ನು ಸಾಧನವಾಗಿ ಬಳಸತೊಡಗಿದವು. 

ಇಂಟರ್ನೆಟ್ ಸಂಪೂರ್ಣ ವಾಣಿಜ್ಯೀಕರಣಗೊಂಡಿದ್ದರೂ, ಅದರ ಬೆಳವಣಿಗೆಯ ವಂಶವಾಹಿನಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯಿರಲಿಲ್ಲ, ಯಾರಾದರೂ ಸಂಪರ್ಕ ಪಡೆದುಕೊಳ್ಳಬಹುದಿತ್ತು, ಇಚ್ಛೆಪಟ್ಟ ಯಾವುದೇ ಮಾಹಿತಿಯನ್ನು ಕಳುಹಿಸುವ ಅಥವಾ ಸ್ವೀಕರಿಸಬಹುದಾಗಿತ್ತು. ಇಂಟರ್ ನೆಟ್ ನ ಜಾಲಬಂಧದ ರಚನೆ ಮತ್ತು ಸಂವಹನ ವಿಧಿಯಲ್ಲಿ ಇವುಗಳನ್ನು ಅಳವಡಿಸಲಾಯಿತು. ಇದನ್ನೇ ಕೆಲವರು 'ಜನತೆಯ ಸರ್ವಸ್ವತಂತ್ರ ಜಾಗ' ಎಂದು ಉತ್ಪ್ರೇಕ್ಷೆಯಿಂದ ಹೇಳತೊಡಗಿದರು. 

ಆದರೆ, ಪ್ರಾರಂಭದಿಂದಲೂ ಜಾಗತಿಕ ಇಂಟರ್ನೆಟ್ ಮೇಲೆ ಅಮೇರಿಕಾ ತನ್ನ ಕಾನೂನು ನಿಯಂತ್ರಣವನ್ನು ಹೇರತೊಡಗಿತ್ತು. ವಿವಿಧ ದೇಶಗಳ ಕಾನೂನಿನಡಿ ಇರುವ ದೂರಸಂವಹನ ಜಾಲಗಳನ್ನು ಇಂಟರ್ನೆಟ್ ಬಳಸಿಕೊಳ್ಳುವುದರಿಂದ ಸಹಜವಾಗಿ ಇಂಟರ್ನೆಟ್ ಮೂಲಕ ಯಾವ ಮಾಹಿತಿಯನ್ನು ನೋಡಬಹುದು ಅಥವಾ ಕಳುಹಿಸಬಹುದು ಎಂಬುದನ್ನು ತೀರ್ಮಾನಿಸಲು ಎಲ್ಲ ರಾಷ್ಟ್ರಗಳು ಕಾನೂನು ಹಕ್ಕನ್ನು ಹೊಂದಿವೆ. ವಿಕೇಂದ್ರೀಕೃತ ಮಾದರಿಯಲ್ಲಿ ಯಾರ ನಿಯಂತ್ರಣವೂ ಇಲ್ಲದೇ ಇಂಟರ್ನೆಟ್ ಜನರ ನೈಜ ಸಂವಹನ ಮಾಧ್ಯಮವಾಗುತ್ತದೆಂಬ ಭರವಸೆಗೆ ನಂತರದ ದಿನಗಳಲ್ಲಿ ಹೊಡೆತ ಬೀಳಲಾರಂಭಿಸಿತು. 

ಇಂಟರ್ ನೆಟ್ ಶಕ್ತಿ ಸಾಮರ್ಥ್ಯ:
ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್ನೆಟ್ ಅವಕಾಶ ಕಲ್ಪಿಸುತ್ತದೆ. ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್ ನೆಟ್ ನಲ್ಲಿ ಸುಮಾರು 100 ಕೋಟಿ ಜಾಲತಾಣಗಳಿದ್ದು, ಅದರಲ್ಲಿ 8.50 ಲಕ್ಷ ಕ್ರಿಯಾಶೀಲತೆಯಿಂದಿವೆ. ಆದರೂ ಕೆಲವೇ ಇಂಟರ್ನೆಟ್ ಕಂಪನಿಗಳು ದೈತ್ಯಾಕಾರವಾಗಿ ಬೆಳೆದಿವೆ. ಅಮೇರಿಕಾದಲ್ಲಿ 2010ರ ಹೊತ್ತಿಗೆ, ಒಟ್ಟಾರೆ ವೀಕ್ಷಣೆಯಾದ ಜಾಲಪುಟಗಳ ಪೈಕಿ ಶೇ. 75ರಷ್ಟು ಜಾಲಪುಟಗಳು ಟಾಪ್ 10 ಇಂಟರ್ನೆಟ್ ಕಂಪನಿಗಳಿಗೆ ಸೇರಿದ್ದವು. ಚೀನಾ ಹೊರತುಪಡಿಸಿ, ಇಡೀ ಜಾಗತಿಕ ಇಂಟರ್ ನೆಟ್ ನಲ್ಲಿ ಅಮೇರಿಕಾದ ಕಂಪನಿಗಳೂ ಯಜಮಾನಿಕೆ ಹೊಂದಿವೆ. ಚೀನಾದಲ್ಲಿ ಕೆಲವು ಸಂರಕ್ಷಣ ನೀತಿಗಳನ್ನು ಅಳವಡಿಸಿಕೊಂಡಿರುವ ಜೊತೆಗೆ ಚೀನೀ ಭಾಷೆಯ ಸಂಕೀರ್ಣತೆಯಿಂದಾಗಿ ಅಲ್ಲಿ ಅಮೇರಿಕಾದ ಕಂಪನಿಗಳು ಪ್ರಾಬಲ್ಯ ಸಾಧಿಸಲಾಗಿಲ್ಲ. ಹೆಚ್ಚಿನ ಸಂಖ್ಯೆಯ ವೆಬ್ ಸೈಟ್ ಗಳಿದ್ದರೂ ಸಹ ದೊಡ್ಡ ಪ್ರಮಾಣದ ನೆಟ್ ಬಳಕೆದಾರರು ಕೆಲವೇ ವೆಬ್ ಸೈಟ್ ಗಳನ್ನು ವೀಕ್ಷಿಸುತ್ತಾರೆ. 
ವಿವಿಧ ವಲಯಗಳಲ್ಲಿ – ಸರ್ಚ್ ಇಂಜೀನ್, ವೀಡಿಯೋ, ಇ-ರೀಟೈಲ್, ಇತ್ಯಾದಿ – ಕಂಪನಿಗಳ ಪ್ರಾಬಲ್ಯವನ್ನು ಅರಿಯುವುದಾದರೆ, ಗೂಗಲ್ ಕಂಪನಿಯು ವೆಬ್ ಸರ್ಚ್ ಗಳಲ್ಲಿ ಶೇ. 90ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಬಲ್ಯ ಹೊಂದಿವೆ. ಇಂಟರ್ ನೆಟ್ ನಲ್ಲಿ ಪ್ರಮುಖ ವೀಡಿಯೋ ಛಾನೆಲ್ ಎಂದರೆ ಗೂಗಲ್ ಕಂಪನಿಯ ಯೂಟ್ಯೂಬ್.

ಇಂಟರ್ ನೆಟ್ ನ ಪ್ರಜಾಸತ್ತಾತ್ಮಕ ಸಾಮರ್ಥ್ಯವನ್ನು ಜನತೆ ಪೂರ್ಣಪ್ರಮಾಣದಲ್ಲಿ ಪಡಕೊಳ್ಳಲು ಸಾಧ್ಯವಾಗಿಲ್ಲ ನಿಜ. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳು ತಮಗೆ 'ಇಚ್ಛಿಸದ ಸುದ್ದಿ'ಗಳನ್ನು ಬುಟ್ಟಿಗೆ ಎಸೆಯಲು ಸಾಧ್ಯವಾಗದ ಸ್ಥಿತಿಯಂತೂ ನಿರ್ಮಾಣವಾಗಿದೆ. ಈ ಕಾರಣದಿಂದಾಗಿಯೇ ಸುದ್ದಿ ಮತ್ತು ಅನಿಸಿಕೆಗಳನ್ನು ನೇರವಾಗಿ ಸೆನ್ಸಾರ್ ಶಿಪ್ ಮಾಡುವ ಬದಲಿಗೆ 'ಒಮ್ಮತದ ಉತ್ಪಾದನೆ' (Manufacturing consent) ಮಾಡುವುದು ಬಂಡವಾಳದ ಪ್ರಾಥಮಿಕ ಸಾಧನವಾಗಿದೆ. 

(ಮುಂದುವರೆಯುವುದು…)

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Chandan Sharma
Chandan Sharma
8 years ago

Uttama baraha

2
0
Would love your thoughts, please comment.x
()
x