ಶಾಂತಿ ಮಂತ್ರವೇ?: ಅಖಿಲೇಶ್ ಚಿಪ್ಪಳಿ


ಬಾಹ್ಯಾಕಾಶ ವಿಜ್ಞಾನದಲ್ಲಿ ಎಲ್ಲಾ ದೇಶಗಳೂ ಪ್ರಗತಿ ಸಾಧಿಸಿವೆ. ಹವಾಮಾನ ಮನ್ಸೂಚನೆಗಾಗಿಯೇ ಭಾರತವೂ ಅಂತರಿಕ್ಷದಲ್ಲಿ ಬಾಹ್ಯಾಕಾಶ ನೌಕೆಗಳನ್ನು ಏರಿಸಿಟ್ಟಿದೆ. ಅಲ್ಲಿಂದಲೇ ಹದ್ದುಗಣ್ಣಿನಿಂದ ಭುವಿಯ ಸಕಲ ಆಗು-ಹೋಗುಗಳನ್ನು ಈ ನೌಕೆಗಳು ಹದ್ದುಗಣ್ಣಿನಿಂದ ವೀಕ್ಷಿಸಿ ನಮಗೆ ಕರಾರುವಕ್ಕು ವರದಿ ನೀಡುತ್ತವೆ. ಲಾಗಾಯ್ತಿನಿಂದ ನಮ್ಮ ಹವಾಮಾನ ಇಲಾಖೆ ಸಾಲು-ಸಾಲು ವೈಪಲ್ಯಗಳನ್ನು ಕಾಣುತ್ತಿದೆ. ಜೂನ್ ಹತ್ತಕ್ಕೆ ಬರುವ ಮಳೆಗಾಲ ಈ ಬಾರಿ ಜೂನ್ 1ಕ್ಕೆ ಬರುತ್ತದೆ ಎಂದು ವರದಿ ಮಾಡಿತು. ಅಂತೆಯೇ ಮಳೆಯೂ ಗುಡುಗು-ಸಿಡಿಲಬ್ಬರದ ನಡುವೆ ಧೋ ಎಂದು ಸುರಿಯಿತು. ಹವಾಮಾನ ವರದಿಯನ್ನು ಅಣಕಿಸುವಂತೆ ಸುರಿದ ಮಳೆ ಹಿಂಗಾರು ಮಳೆಯಾಗಿತ್ತು. ಬೀಸಿದ ಬಿರುಗಾಳಿಯಂತಹ ಗಾಳಿಗೆ ಹಲವಾರು ಮರಗಳು ಧರೆಗುರುಳಿದವು. ವಿದ್ಯುತ್ ಕಂಬಗಳು ಮುರಿದವು, ತಂತಿಗಳು ಹರಿದವು. ಪಟ್ಟಣಗಳನ್ನು ಹೊರತು ಪಡಿಸಿ, ಎಲ್ಲಾ ಹಳ್ಳಿಗಳೂ ಕತ್ತಲಲ್ಲಿ ಮುಳುಗಿದವು. 

ಉತ್ತರಕನ್ನಡ ಜಿಲ್ಲೆಯ ಒಂದು ಹಳ್ಳಿ. ಮಗ ಓದಿದವ. ಸ್ವಲ್ಪ ಜಮೀನು ಇದೆ. ಮಳೆಗಾಲ ಶುರುವಾಗಿದೆಯೆಂದು ತಿಳಿದು ಅಡಕೆ ತೋಟಕ್ಕೆ ಔಷಧ ಸಿಂಪಡಿಸಲು ತಯಾರು ಮಾಡುತ್ತಿದ್ದ. 80 ವರ್ಷದ ಮುದುಕಿ ಹಣೆಗೆ ಅಡ್ಡ ಕೈಯಿಟ್ಟು ನಭದತ್ತ ನೋಡಿತು. ಪಕ್ಕದಲ್ಲಿದ್ದ ಮರವನ್ನು ನಿರುಕಿಸಿ ನೋಡಿತು. ನಂಜಿನ ಮರದಾಗೆ ಹೂವೇ ಬಂದಿಲ್ಲ. ಇದು ಮಳೆಗಾಲ ಅಲ್ಲ ಬಿಡು, ಔಷಧ ಹೊಡಿಯಕ್ಕೆ ಯಾಕೆ ಅರ್ಜೆಂಟ್ ಮಾಡುತ್ತಿ ಎಂದಿತು. ಅಂತರಿಕ್ಷದಲ್ಲಿ ಹದ್ದುಗಣ್ಣಿನ ಬಾಹ್ಯಾಕಾಶ ನೌಕೆಯ ಭವಿಷ್ಯ, ಎನೂ ಓದು-ಬರಹ ಇಲ್ಲದ ವಯಸ್ಸಾದ ಅಜ್ಜಿಯ ಪಾರಂಪಾರಿಕ ಜ್ಞಾನದ ಮುಂದೆ ಮಂಡಿಯೂರಿತು. ಅದು ಮುಂಗಾರು ಅಲ್ಲ, ಮುಂಗಾರು ರಾಜ್ಯ ಪ್ರವೇಶ ಮಾಡುವುದು ಇನ್ನು ತಡವಾಗುತ್ತದೆ ಎಂಬ ತಿದ್ದುಪಡಿ ಹೇಳಿಕೆ ನಂತರದಲ್ಲಿ ಹವಾಮಾನ ಇಲಾಖೆಯಿಂದ ಬಂತು!!

ಇಂತಹ ಪಾರಂಪಾರಿಕ ಜ್ಞಾನಗಳು ಅಳಿದು ಹೋಗುತ್ತಿವೆ. ಆಧುನಿಕ ತಂತ್ರಗಳು ನೀಡುವ ಮುನ್ಸೂಚನೆಯನ್ನು ಪರಿಗಣಿಸಿ ರೈತಾಪಿ ಕೆಲಸ ನಡೆಸಲಾಗುವುದಿಲ್ಲ. ಕಾಡಿನ ಜೀರುಂಡೆಗಳು, ಕಪ್ಪೆಗಳು, ಅದೆಲ್ಲೋ ಹುದುಗಿದ್ದ ಸಹಸ್ರಪದಿಗಳು ಮೇಲೆದ್ದು ಹರಿದಾಡತೊಡಗುತ್ತವೆ. ಮಳೆ ಬಿದ್ದು ಇಳೆ ತಂಪಾಗುತ್ತಿದ್ದಂತೆ ಮಳೆಸಸಿಗಳು ಅಂದರೆ ಮಳೆಗಾಲದಲ್ಲಿ ಜೀವತಳೆಯುವ ಪ್ರಾಣಿಗಳಿಗಾಗಿ ಅಸಂಖ್ಯಾತ ಹಾವಸೆಗಳು, ನೆಲಹುಲ್ಲುಗಳು ಇತ್ಯಾದಿಗಳು ಇಳೆಯಲ್ಲಿ ಜನ್ಮ ತಳೆಯುತ್ತವೆ. ಕರೆಂಟಿಲ್ಲದ ಕತ್ತಲ ರಾತ್ರಿ, ಎಂದೆಂದಿಗೂ ನಿಲ್ಲುವುದಿಲ್ಲವೇನೋ ಎಂಬಂತೆ ಜೀರುಂಡೆಗಳ ಜುಗಲಬಂಧಿ, ಹಾರುವ ನಕ್ಷತ್ರಗಳಂತೆ ತೋರುವ ಮಿಣುಕುಹುಳುಗಳ ಜಾತ್ರೆ, ಗಾಳಿಗೆ ಸಶಬ್ಧವಾಗಿ ತೋಯ್ದಾಡುವ ಮರಗಳು, ಬಿಟ್ಟು-ಬಿಟ್ಟು ಸುರಿಯುವ ಮುಲಸಧಾರೆ, ಕಿಟಕಿಯಿಂದ ಸುಂಯ್ ಎಂದು ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತು ವಿಕ್ಷೀಸುತ್ತಿದ್ದರೆ ಅದೊಂದು ರುದ್ರಭಯಾನಕ ಅನುಭವ. ಛಟಾರೆಂದು ಮರದ ಕೊಂಬೆ ಮುರಿದು ಬಿದ್ದ ಸದ್ದು, ಅದೇ ಕೊಂಬೆ ಮನೆಯ ಮೇಲೆ ಬಿದ್ದರೇನು ಗತಿ ಎಂಬ ಅವ್ಯಕ್ತ ಭೀತಿ. ಎಂತಹ ಗಾಳಿ ಬಂದರೂ ನಾನು ಬೀಳುವುದಿಲ್ಲವೆಂದು ಪಾತಾಳಕ್ಕೆ ಬೇರುಬಿಟ್ಟು ನಿಂತ ನಾನಾ ಜಾತಿಯ ಮರಗಳು. ಮರಗಳ ಪಡಕಿನಲ್ಲಿ ಹೊಕ್ಕಿ ಕುಳಿತಿರುವ ಅಸಂಖ್ಯ ದಿವಾಚರಿಗಳು, ಇಂತಹ ಮಳೆ-ಗಾಳಿಯಲ್ಲೂ ಬೇಟೆಗೆ ಹೊರಟ ನಿಶಾಚರಿಗಳು. ಇವೆಲ್ಲಕ್ಕೂ ಎಲ್ಲಾ ಋತುಮಾನ ಬದಲಾವಣೆಯಾಗುವ ಕುರಿತ ಅಂತರ್ಗತ ಜ್ಞಾನವಿರುತ್ತದೆ. ಪ್ರಕೃತಿಯ ಮಕ್ಕಳಾದ ಇವ್ಯಾವುದಕ್ಕೂ ಹವಾಮಾನ ಮುನ್ಸೂಚನೆ ತಿಳಿಯಲು ಆಧುನಿಕ ಸಲಕರಣೆಗಳು, ತಂತ್ರಜ್ಞಾನಗಳು ಬೇಕಾಗಿಲ್ಲ.

ಕಾಂಕ್ರೀಟ್ ಕಾಡಿನಲ್ಲಿ ಬೆಳೆದ ಕಳೆ, ಮರ-ಗಿಡಗಳಲ್ಲೂ ಜೀವಿ ಸಂಕುಲ ಅರಳುತ್ತದೆ. ಇರುವ ಕಾಂಕ್ರೀಟ್ ಕಟ್ಟಡದ ಇಷ್ಟಗಲದ ಜಾಗದಲ್ಲೇ ಗೂಡುಕಟ್ಟಿ, ಮರಿಮಾಡುವ ಪಾರಿವಾಳಗಳು. ಅಷ್ಟೆತ್ತೆರ ತೆಂಗಿನ ಮರದ ಚಂಡೆಯಲ್ಲಿ ಕಸ-ಕಡ್ಡಿ-ತಂತಿ-ರೋಮಗಳಿಂದ ಗೂಡು ಕಟ್ಟಿ ಮರಿ ಮಾಡುವ ಕಾಕಾ ಸಂಕುಲ. ತನ್ನ ಮರಿಗಾಗಿ ಪಾರಿವಾಳದ ಮರಿಯನ್ನು ಕೊಂದು ತರುವ ಕಾಗೆ. ಹೀಗೆ ಸದ್ದಿಲ್ಲದೇ ಕಾಲಾತೀತವಾಗಿ ನಡೆಯುವ ಅಸಂಖ್ಯ ಘಟನೆಗಳಿಂದ ಅದೆಷ್ಟೋ ಪಾಠಗಳನ್ನು ನಾವು ಕಲಿಯಬಹುದು. ಉದಾಹರಣೆಯಾಗಿ, ಸಸ್ಯಹಾರಿಯಾದ ಪಾರಿವಾಳ ಹಾಗೂ ಮಿಶ್ರಾಹಾರಿಯಾದ ಕಾಗೆಯ ಘಟನೆ.

ಜಗತ್ತಿನಾದ್ಯಂತವಾಗಿ ಶಾಂತಿಯ ಸಂಕೇತವಾಗಿ ಪಾರಿವಾಳಗಳನ್ನು ಹೆಸರಿಸಲಾಗುತ್ತದೆ. ತನ್ನ ಮರಿಯನ್ನು ಅಥವಾ ಸಂತತಿಯನ್ನು ವೈರಿಗಳಿಂದ ರಕ್ಷಿಸಲು ಪ್ರಾಣಿಗಳು ಹಲವಾರು ಉಪಾಯಗಳನ್ನು ಮಾಡುತ್ತವೆ. ಬೇಟೆಯು ಕೂಡ ತನ್ನ ಅಸ್ತಿತ್ವಕ್ಕಾಗಿ ಅಪಾರವಾದ ಬುದ್ಧಿಮತ್ತೆ, ಕುಟಿಲತೆಗಳನ್ನು ಅನುಸರಿಸುತ್ತವೆ. ಬದುಕಿನ ಹೋರಾಟದಲ್ಲಿ ಬದುಕುಳಿಯಲೇ ಬೇಕು ಎಂದೂ ಬಲಿಯೂ, ಬಲಿಯನ್ನು ಪಡೆದೇ ತೀರಬೇಕು ಎಂದು ಬೇಟೆಯು ಹೋರಾಡುವುದು ನಿಸರ್ಗದ ಸಹಜ ನಿಯಮ. ಗೀಜಗನಂತಹ ಚಿಕ್ಕ ಹಕ್ಕಿಯೂ ಕೂಡಾ ತನ್ನ ಮರಿಗಳನ್ನು ತಿನ್ನ ಬರುವ ಬೇಟೆ ಪಕ್ಷಿಗಳನ್ನು ಅಸಾಧರಣ ಶೌರ್ಯದಿಂದ ಎದುರಿಸುತ್ತದೆ. ಆದರೆ ಪಾರಿವಾಳ ಮಾತ್ರ ತನ್ನ ಮರಿಯು ಕಾಗೆಗೆ ಆಹಾರವಾಗುವುದನ್ನು ನಿಸ್ಸಾಹಯಕವಾಗಿ ನೋಡುತ್ತಲಿರುತ್ತದೆ. ಮರಿಯನ್ನು ರಕ್ಷಿಸುವಲ್ಲಿ ಹೋರಾಟದ ಮನೋಭಾವವನ್ನು ತೋರುವುದಿಲ್ಲ. ದು:ಖದಿಂದಲೋ, ಸ್ಥಿತಪ್ರಜ್ಞಾಭಾವದಿಂದಲೋ ಸುಮ್ಮನಿರುತ್ತದೆ. ಅದೇ ವಯಸ್ಕ ಪಾರಿವಾಳಗಳು ಬೇಟೆಯಿಂದ ತಪ್ಪಿಸಿಕೊಳ್ಳುವಲ್ಲಿ ಅಪಾರವಾದ ಕೌಶಲವನ್ನು ತೋರುತ್ತವೆ. ಆದರೂ ಅದು ಹೇಗೋ ಪಾರಿವಾಳಗಳ ಸಂಖ್ಯೆ ಕಡಿಮೆಯಾಗುವುದಿಲ್ಲ, ಬದಲಿಗೆ ಹೋರಾಟ ಮನೋಭಾವ ತೋರುವ ಇತರ ಪಕ್ಷಿಗಳ ಅಥವಾ ಹಿಂಸ್ರ ಪಕ್ಷಿಗಳ ಸಂತತಿಯೇ ಕ್ಷೀಣಿಸುತ್ತದೆ. ಹೀಗೆ ಒಂದು ಸ್ತರದಲ್ಲಿ ಪ್ರಕೃತಿಯೂ ಮಾನವನಿಗೆ ಶಾಂತಿ ಮಂತ್ರವನ್ನು ಬೋಧಿಸುತ್ತಿದೆಯೇ? ಎಂಬುದನ್ನು ಪ್ರಕೃತಿಯು ರೂಪಿಸಿದ ಈ ಸೂತ್ರದ ರಹಸ್ಯವನ್ನು ಜೀವವಿಜ್ಞಾನಿಗಳು ಬಿಡಿಸಬೇಕಾಗಿದೆ.

ಹವಾಮಾನ ಇಲಾಖೆಯ ಲೆಕ್ಕಾಚಾರ ತಪ್ಪಾಗಿ, ಮುಂಗಾರು-ಹಿಂಗಾರು ಹಿಂದು-ಮುಂದಾಗಿ ಕತ್ತಲಕೂಪದಲ್ಲಿ ಮುಳುಗಿದ ಸಂತ್ರಸ್ಥ ಅನೇಕ ಹಳ್ಳಿಗಳಲ್ಲಿ ನಮ್ಮ ಹಳ್ಳಿಯೂ ಒಂದು. ತಾರಸಿಯ ನೀರಿನ ಟ್ಯಾಂಕಿಯ ಬರಿದಾಗಿಯೇ 8 ದಿನಗಳಾದವು. ಬಟ್ಟೆ-ಪಾತ್ರೆ ತೊಳೆಯಲು, ಸ್ನಾನಕ್ಕಾಗಿ ಮಳೆ ನೀರೆ ಗತಿ. ಈಗೊಂದು ಎರೆಡು ದಿನದಿಂದ ಮಳೆಯೂ ಕಡಿಮೆಯಾಗಿದೆ. ಈಗ ಬಾವಿಯಿಂದ ನೀರೆತ್ತಬೇಕು. ಒರಳಲ್ಲಿ ಬೀಸಬೇಕು. ಸಂತೋಷದ ವಿಚಾರವೆಂದರೆ, ಕಳೆದ ಹತ್ತು ದಿನದಿಂದ ವಿದ್ಯುಚ್ಛಕ್ತಿ ಇಲ್ಲದಿರುವುದರಿಂದಾಗಿ ಮಿಕ್ಸಿ-ಟಿವಿಗಳಿಗೆ ಬಲೆ ಕಟ್ಟಿದ್ದರಿಂದ, ಒರಳಲ್ಲಿ ಬೀಸಿ ಮಾಡಿದ ಅತ್ಯುತ್ತಮ ಅಡುಗೆ-ಸಾಂಬಾರು ಹಾಗೂ ಇನ್ನಿತರ ಪದಾರ್ಥಗಳನ್ನು ಸವಿದದ್ದು ಮತ್ತು ಕೆಟ್ಟು ಕೆರೆ ಹಿಡಿದು ಹೋದ ಮೂರನೇ ದರ್ಜೆಯ ಧಾರಾವಾಹಿಗಳಿಂದ ಪಾರಾದದ್ದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x