ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ..

ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.  
“ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು. 

ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ ಹೆಂಡತಿ ಮಗಳನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಇವನು ಆಗಲೇ ಮಾಡಿಯಾಗಿತ್ತು.
“ಪುಟ್ಟಿ ನೀ ಇನ್ನೂ ಅಮೇರಿಕಾ ನೋಡೇ ಇಲ್ಲ! ಇವತ್ತ ನಿಮಗ ಸಾಲ್ಟ್ ಲೇಕ್ ಸಿಟಿ ಗೆ ಕರ್ಕೊಂಡ್ ಹೋಗ್ತೀನಿ!” ಏನೋ ಹೊಸ ತರಹದ ಊರಿನ ಹೆಸರು ಕೇಳಿ ಅವಳ ಕಣ್ಣುಗಳು ಅರಳಿದ್ದವು.
“ಹೇ ವಾವ್, ಆದ್ರ ಹೆಸರು ಮಜಾ ಅದ ಅಲ್ಲಾ? ಹಂಗ್ಯಾಕ ಅಂತಾರ ಅದಕ್ಕ?”   

“….. ಅಲ್ಲೇ ಹೋದ ಮ್ಯಾಲೆ ಹೇಳ್ತೀನಿ. ಅದು ಸರ್ಪ್ರೈಸ್!” ಅಂದ. ಯಾಕೆಂದರೆ ಆ ಊರಿಗೆ ಆ ಹೆಸರು ಯಾಕೆ ಬಂತು ಅಂತ ಅವನಿಗೂ ಗೊತ್ತಿರಲಿಲ್ಲ! 
“ಅಲ್ಲಿಗೆ ಹೆಂಗ್ ಹೋಗೋದು?” ಅವಳ ಪ್ರಶ್ನೆ ಸಹಜವಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿದ್ದಂತೆ ಇಲ್ಲಿ ಇವರ ಸ್ವಂತ ಕಾರ್ ಇರಲಿಲ್ಲವಲ್ಲ. ಇಲ್ಲಿ ಕಾರ್ ಇಲ್ಲದಿದ್ದರೆ ತುಂಬಾ ಕಷ್ಟ. ಬಸ್ಸು ಟ್ರೇನ್ ಗಳಿವೆಯಾದರೂ ಅವುಗಳು ಅಡ್ಡಾಡುತ್ತಿದ್ದುದು ಆಗೀಗ ಅನ್ನುವಂತಿದೆ. ಇಲ್ಲಿ ಎಲ್ಲಿ ಹೋದರು ಕಾರ್ ಬೇಕೇ ಬೇಕು. ಇವನು ಬಂದಾಗಿನಿಂದ,  ಅಮೆರಿಕಾದಲ್ಲೇ ವಾಸವಾಗಿದ್ದ ಇವನ ಸಹೋದ್ಯೋಗಿ ಇವನನ್ನು  ಪ್ರತಿ ನಿತ್ಯ ಆಫೀಸಿಗೆ ತನ್ನ ಕಾರಿನಲ್ಲೇ ಬಿಡುತ್ತಿದ್ದ. ಹೀಗಾಗಿ ಇವತ್ತಿಗೆ ಸಾಲ್ಟ್ ಲೇಕ್ ಸಿಟಿ ಗೆ ಹೋಗಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದ. 

ಬೆಳಿಗ್ಗೆ ೯ಕ್ಕೆ ಬುಕ್ ಮಾಡಿದ್ದ ಕಾರು ೮:೫೦ ಕ್ಕೆ ಸರಿಯಾಗಿ ಬಂದು, ಡ್ರೈವರ್ ಫೋನ್ ಮಾಡಿದಾಗ, ಇವನಿನ್ನೂ ಸ್ನಾನ ಮಾಡುತ್ತಿದ್ದ! ಹಾಗೂ ಹೀಗೂ ತಯ್ಯಾರಾಗಿ ವೆಂಕಣ್ಣನ ಪರಿವಾರ ಕೆಳಗೆ ಹೋದಾಗ ಡ್ರೈವರ್ ಅರ್ಧ ಗಂಟೆ ತಡವಾಯ್ತೆಂದು ಭುಸುಗುಡುತ್ತಿದ್ದ. ಎಷ್ಟಂದ್ರೂ ಅಮೆರಿಕಾದ ಡ್ರೈವರ್ ಅಲ್ವೇ? ಬೆಂಗಳೂರಿನಲ್ಲಾದರೆ ವೆಂಕಣ್ಣ ಎಷ್ಟೊತ್ತಿಗೆ ಬಂದರೂ ಡ್ರೈವರ್ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ.  
ಹೋಗಲಿ ತನ್ನದೇ ತಪ್ಪು ಅಂತ ಅರಿವಾಗಿ ವೆಂಕಣ್ಣ ಸೌಜನ್ಯಯುತವಾಗಿ “ಕ್ಷಮಿಸಿ ನನ್ನಿಂದ ತಡಾ ಆಯಿತು” ಅಂದ. ಪರವಾಗಿಲ್ಲ ಬಿಡಿ ಅನ್ನುವ ಉತ್ತರ ನಿರೀಕ್ಷಿಸಿ ಕೇಳಿದ್ದ ಕ್ಷಮಾಪಣೆಗೆ ಡ್ರೈವರ್ 
“ಹೌದು ನೀವು ಕ್ಷಮೆ ಕೇಳಲೇಬೇಕಾದ ತಪ್ಪು ಮಾಡಿದ್ದೀರಿ” ಅನ್ನಬೇಕೆ! ಇವನಿಗೆಂಥ ಕೋಪ ಬರಬೇಡಾ! ಆದರೂ ಅವನು ತರಲೆ ಅನ್ನುವದು ಗೊತ್ತಾದಮೇಲೂ ಅವನ ಜೊತೆ ಜಗಳ ಮಾಡೋದು ಸರಿಯಲ್ಲವೆಂದು ಇವನಿಗೆ ಅರಿವಾಗಿ “ಇಲ್ಲಿ ಡ್ರೈವರ್ಗೋಳಿಗೆ ಭಾರಿ ಸೊಕ್ಕು. ಮಂಗ್ಯಾನ ಮಗಾ. ಹೆಂಗ್ ಮಾತಾಡ್ತಾನ್ ನೋಡು“ ಅಂತ ಹೆಂಡತಿ ಎದುರು ಬೈದು ಸಿಟ್ಟು ತೀರಿಸಿ ಕೊಂಡ. 
        
ಸಾಲ್ಟ್ ಲೇಕ್ ಸಿಟಿ ಯ ಸೆಂಟ್ರಲ್ ಸ್ಟೇಶನ್ ಬಳಿಗೆ ಬಂದು ಮುಟ್ಟಿ, ಕಾರಿನಿಂದ ಇಳಿದು ಬಿಲ್ ದುಡ್ಡು ಕೊಟ್ಟ. ಅಲ್ಲಿ ಬರಿ ಬಿಲ್ ಕೊಟ್ಟರೆ ಸಾಲದು, ಜೊತೆಗೆ ಟಿಪ್ಸ್ ಕೊಡಬೇಕು ಅದು ಶಿಷ್ಟಾಚಾರ! ಡ್ರೈವರ್ ಇವನ ಜೊತೆಗೆ ಅಸಂಬದ್ಧ ಮಾತಾಡಿದ್ದರಿಂದ ಅವನ ಮೇಲೆ ವೆಂಕಣ್ಣ ನಿಗೆ ಮೊದಲೇ ಸಿಟ್ಟು ಬಂದಿತ್ತಲ್ಲವೇ. ಅದಕ್ಕೆ ಬರೀ ಐದೇ ಡಾಲರ್ ಟಿಪ್ಸ್ ಕೊಟ್ಟ. ಆದರೆ ಅದೇ ತರಲೆ ಡ್ರೈವರ್ ಈಗ, ಹಳದಿ ಬಣ್ಣಕ್ಕೆ ತಿರುಗಿದ್ದ ತನ್ನ ಅಷ್ಟೂ ಹಲ್ಲುಗಳ ಝಳಪಿಸುತ್ತ ಕೇಳಿದ! 

“ಸರ್, ನಿಮ್ಮ ಬಿಲ್ ೯೦ ಡಾಲರ್ ಆಗಿದೆ. ಆ ಮೊತ್ತದ ೧೫% ಟಿಪ್ಸ್, ಅಂದ್ರೆ ಬೊರೊಬ್ಬರಿ ೧೩.5 ಡಾಲರ್ ಆಗುತ್ತೆ.”
ಬೆಂಗಳೂರಿನಲ್ಲಾದರೆ ನಾವು ಕೊಟ್ಟಷ್ಟು ತೆಗೆದುಕೊಳ್ಳುತ್ತಾರೆ, ಇಲ್ಲಾದರೆ ಹೀಗೋ ! 

ಆದರೂ ಮೊದಲೇ ತಡವಾಗಿ ಬಂದಿದ್ದಕ್ಕೆ ತನ್ನ ಮರ್ಯಾದೆ ತೆಗೆದ ಅವನು, ಇನ್ನು ಅವನು ಕೇಳಿದಷ್ಟು ಟಿಪ್ಸ್    ಕೊಟ್ಟಿಲ್ಲ ಅಂದ್ರೆ, ಇಂಡಿಯನ್ ಗಳೇ ಹಿಂಗೆ ಅಂತ ಎಲ್ಲರೆದುರು ಹೇಳಿಬಿಟ್ಟರೆ? ಅಂತ ಇವನ ದೇಶ ಭಕ್ತಿ ಜಾಗೃತವಾಗಿ, ತಿಂದು ಸಾಯಿ ಅಂತ ಅವನು ಕೇಳಿದಷ್ಟು  ಟಿಪ್ಸ್ ಕೊಟ್ಟು ಅವನ ಬೀಳ್ಕೊಟ್ಟ.

ಇವನ ತಲೆಯಲ್ಲೊಂದು ಪ್ರಶ್ನೆಯಂತೂ ಉದ್ಭವವಾಯ್ತು. ಈ ಟಿಪ್ಸ್ ಗೂ ನಮ್ಮ ದೇಶದಲ್ಲಿ ಕೊಡುವ ಲಂಚಕ್ಕೂ ಏನು ವ್ಯತ್ಯಾಸ? ಅಂತ! ಅಲ್ಲೂ ಕೆಳಿದಷ್ಟೇ ಕೊಡಬೇಕು, ಇಲ್ಲೂ ಹಂಗೆ. ಸುಮ್ನೆ ನಮ್ಮ ದೇಶದಲ್ಲೂ ಲಂಚಾನ ಹೀಗೆ ನೂರಕ್ಕೆ ಇಷ್ಟು ಅಂತ ನಿಗದಿಸಿದರೆ ಅದನ್ನೂ ಟಿಪ್ಸ್ ಅಂತ ಹೇಳಿಕೊಂಡು ಖುಷಿಯಾಗಿ ಕೊಡಬಹುದಲ್ವೆ? ಹೀಗೊಂದು ಅದ್ಭುತವಾದ ಒಂದು ಕಲ್ಪನೆ ಬಂದು ಪುಳಕಗೊಂಡಿದ್ದಾಗಲೇ, ಮಗಳು 
“ಇದ ಏನಪ್ಪಾ ಸಾಲ್ಟ್ ಲೇಕ್ ಸಿಟಿ?” ಅಂದಳು. 
“ಹೌದು ಖುಷಿ. ಇಲ್ಲೇ ಹತ್ತರದಾಗ ಒಂದು ಡೆಡ್ ಸೀ ಅದ. ಅದರಿಂದನ ಈ ಊರಿಗೆ ಹೆಸರು ಬಂದಿದ್ದು” ಈಗಾಗಲೇ ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದರಿಂದ, ಈ ಊರಿಗೆ ಆ ಹೆಸರು ಬಂದದ್ದು ಯಾಕೆ ಅಂತ ಮತ್ತೆ ಅವಳು ಕೇಳೋದಕ್ಕಿಂತ ಮೊದಲೇ ಪಟಪಟನೆ ಉತ್ತರಿಸಿದ್ದ. 

“ಡೆಡ್ ಸೀ ಅಂದ್ರ?” ಮಗಳ ಮುಂದಿನ ಪ್ರಶ್ನೆ…
“ಅಂದ್ರ ನೀರೊಳಗ ಉಪ್ಪಿನ ಅಂಶ ಸಮುದ್ರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರ್ತದ, ಯಾವುದ ಪ್ರಾಣಿಗಳು ಬದಕಲಿಕ್ಕೆ ಸಾಧ್ಯ ಇಲ್ಲದಷ್ಟು. ಇನ್ನೊಂದ ಮಜಾ ಅಂದ್ರ, ಆ ನೀರೊಳಗ ಮುಳುಗೋದ ಸಾಧ್ಯ ಇಲ್ಲ!”
“ಏ ಹೌದಾ? ಅಲ್ಲೇ ನನ್ನ ಕರಕೊಂಡು ಹೋಗಪ್ಪ!” ಎರಡು ಸಲ ಈಜು ಕಲಿಯಲು ಹೋಗಿ ಮುಳುಗುವ ಭಯದಿಂದ ವಾಪಸ್ಸು ಓಡಿ ಬಂದಿದ್ದ ಮಗಳಿಗೆ ಮುಳುಗಲು ಸಾಧ್ಯವೇ ಇಲ್ಲದ ಸಮುದ್ರದ ಅಸ್ತಿತ್ವವೇ ಸಹಜವಾಗಿ ಬೆರಗು ಮೂಡಿಸಿತ್ತು. 

“ಆಗ್ಲಿ ಇನ್ನೊಂದ್ ಸಲ ಹೋಗೋಣಂತ” ಮಗಳು ಆನಂದದಿಂದ ತಲೆ ಅಲ್ಲಾಡಿಸಿದಳು.   

ಆ ಊರಿನಲ್ಲಿದ್ದ ಸುಪ್ರಸಿದ್ಧ ಮಾಲ್ ಒಂದಕ್ಕೆ ಹೋದರಿವರು. ಅದರ ದ್ವಾರದಲ್ಲಿ ಸ್ವಾಗತಿಸಿದ್ದು ಮೂವರು ಬಿಕ್ಷುಕರು! ನಮ್ಮಲ್ಲಿ ದೇವಸ್ಥಾನದ ಮುಂದೆ ಕೂತಂಗೆ, ಆದರೆ ಇಲ್ಲಿನವರು ಅಕ್ಷರಸ್ಥರು ಅದೇ ವ್ಯತ್ಯಾಸ. ಅವರ ಕೈಯಲ್ಲಿ, ‘ನಾನು ನಿರ್ಗತಿಕ, ನನಗೆ ಸಹಾಯ ಮಾಡಿ!’ ಎಂದು ಇಂಗ್ಲೀಶ್ ನಲ್ಲಿ ಬರೆದಿದ್ದ ಒಂದು ಫಲಕ.  ಒಬ್ಬ ಭಿಕ್ಷುಕನಂತೂ  ತನ್ನ   ಜೊತೆಗೆ ಒಂದು ನಾಯಿಯನ್ನೂ ಕೂಡಿಸಿಕೊಂಡಿದ್ದ . ಅವನ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿದ್ದ “ನನಗೆ ಹಾಗೂ ನನ್ನ ನಾಯಿ ಇಬ್ಬರಿಗೂ ಮನೆಯಿಲ್ಲ, ನಮಗೆ ಸಹಾಯ ಮಾಡಿರಿ!”
ಜಾನುಗೆ ಇದನ್ನು ನೋಡಿ ನಗು ಬಂತು “ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ. ಇಲ್ಲ್ಯೂ ಭಾಳ ಇದ್ದಾರ ಬಿಕ್ಷಾದವ್ರು. ನಾ ಒಂದ್ coin ಹಾಕ್ತೀನಿ, ಒಂದು ಫೋಟೋ ತಗೀರಿ” ಅಂದ್ಲು.

“ಲೇ ಫೋಟೋ ತಗೀಲಿಕ್ಕೆ ಇನ್ನೂ ಭಾಳ ಚೊಲೋ ಚೊಲೋ ಜಗಾ ಆವ, ಸುಮ್ನ ಬಾ” ಅಂತ ಹುಸಿ ಕೋಪದಲ್ಲಿ ಎಳೆದುಕೊಂಡು ಹೋದ. ಖುಷಿ, ಮಾಲ್ ನ ಮುಂದಿದ್ದ ಕಾರಂಜಿ ನೋಡಿ ಮೈಮರೆತಿದ್ದಳು. 
    
ಮಾಲ್ ನಲ್ಲಿ ಅಡ್ಡಾಡಿ, ಹೊಟ್ಟೆ ತುಂಬದ ಬರ್ಗರ್, ಫ್ರೆಂಚ್ ಫ್ರೈಸ್ ಅಂತೇನೇನೋ ತಿಂದು ಮಾಲ್ ನ ಹೊರಗೆ ಬಿದ್ದರು. ಹಾಗೆ ಅಡ್ಡಾಡುತ್ತ ಆ ಊರಿನ ಸೊಬಗು ಸವಿಯುತ್ತಿದ್ದರು. ದಾರಿಯಲ್ಲಿ ಒಬ್ಬ ಪೂರ್ತಿ ಕುಡಿದು ಮೈ ಮರೆತು ರೋಡಿನ ಪಕ್ಕ ಮಲಗಿ ಬಿಟ್ಟಿದ್ದ. ಇನ್ನೂ ಒಂದಿಷ್ಟು ಕುಡುಕರು ಟೈಟ್ ಆಗಿ ಏನೇನೋ ಕೂಗಾಡಿಕೊಂಡಿದ್ದರು. ಎಲ್ಲಾ ಥೇಟ್ ನಮ್ಮ ಕುಡುಕರ ಥರಾನೇ! 

“ಲೇ ಇಲ್ಲಿ ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ನಮ್ಮ ಕುಡಕರ ಥರಾನ. ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ಅಂದ ವೆಂಕಣ್ಣ ನ ಜೋಕಿಗೆ ಜಾನು ಬಿದ್ದು ಬಿದ್ದು ನಗದಿದ್ದರೂ ಒಂದು ಮುಗುಳ್ನಗು ಅವಳ ಮುಖದಲ್ಲಿತ್ತು. ಅಲ್ಲಿ ಇಲ್ಲಿ ಅಡ್ಡಾಡಿ ಇನ್ನೂ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯಾಗುತ್ತಲೇ ತಮ್ಮ ನಿವಾಸಕ್ಕೆ ವಾಪಸ್ಸು ಹೊರಟರು.  

(ಮುಂದುವರಿಯುವುದು…)     

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
8 years ago

ಟಿಪ್ಸ್ ಮತ್ತು ಲಂಚ ಒಳ್ಳೆ ಹೋಲಿಕೆ. ಲಂಚನ ಕಾನೂನುಬದ್ಧ ಮಾಡಲು ಒಂದು ನೆವ ಸಿಕ್ಕಂತಾಯಿತು. ಈ ಕೆಲಸಕ್ಕೆ ಇಂತಿ‍ಷ್ಟು ಪರ್ಸೆಂಟ್ ನಿಗದಿ ಮಾಡಿದರೆ ಎಲ್ಲರಿಗೂ ಅರಾಂ. ಒಂದು ಪ್ರಪೋಸಲ್ ಕಳಿಹಿಸೋಣ ರಾಜ್ಯ-ಕೇಂದ್ರ ಸರ್ಕಾರಕ್ಕೆ. ಚೆನ್ನಾಗಿದೆ ಕುರ್ತಕೋಟಿ.

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ವೆಂಕಣ್ಣನ, ಲಂಚವನ್ನು ಕಾನೂನು ಬದ್ಧ ಮಾಡುವ ಪ್ರಸ್ತಾವನೆ ನಿಮಗಿಷ್ಟವಾದದ್ದು ಕೇಳಿ ಖುಷಿ ಆಯ್ತು 🙂

ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ! 

Vitthal Kulkarni
Vitthal Kulkarni
8 years ago

ಆಮೆರಿಕಾದಾಗ ಬಿಕ್ಷುಕರು ಬಗ್ಗೆ ಛೊಲೊ ಹೆಳೀರಿ…. ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ? ಬಿಕ್ಷುಕ ನಾಯಿ ಸಾಕಿಲ್ಲಾ ನಾಯಿ ಅವನ್ನ ಸಾಕಲಿಕ್ಕೆ ಹತ್ಯದ… ಅಲ್ಲೆ ಮನಷ್ಯಾರಿಗೆ ಮರಿಯಾದಿಇಲ್ಲಾ ನಾಯಿಗದ ಅದಕ್ಕ ಅವನಜೊಡಿ ನಾಯಿದ್ರ ದುಡ್ಡು ಹಾಕತಾರ….
ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ಇಂಗ್ಲಿಶ್ ಮಾತಾಡೊರೆಲ್ಲಾ ಕುಡುಕರೂ ಅಂದಿಲ್ಲಾ ಪುಣ್ಯಾ… 😀 
ಛೊಲೊ ಅನಸ್ತು…

ಗುರುಪ್ರಸಾದ ಕುರ್ತಕೋಟಿ

ಗೆಳೆಯ ವಿಟ್ಠಲ, ನೀನು ಹೇಳಿದ್ದು ಸರಿ ಅದ. ಅಲ್ಲೆ ಭಿಕ್ಷಾದವ್ನ ನಾಯಿ ಸಾಕಲಿಖತ್ತದ! ನಾಯಿಗಳಿಗೆ ಇರೋ ಕಿಮ್ಮತ್ತು ಮನಶ್ಯಾರಿಗಿಲ್ಲ ಅನ್ನೋದು ಬೆಂಗಳೂರಾಗೂ ಅನ್ವಯ ಆಗ್ತದ ಅನ್ನೋದು, ಎಸಿ ಕಾರನ್ಯಾಗ ಹಿಂದಿನ ಸೀಟಿನ್ಯಾಗ ಆರಾಮಾಗಿ ಕುತಗೊಂಡ ನಾಯಿಗೋಳನ್ನ ನೋಡಿದಾಗ ಅನಸ್ತದ!! 🙂

ಪ್ರೀತಿಯಿಂದ ಓದಿ ನಿನ್ನ ಅನಿಸಿಕೆ ಹಂಚಿಕೊಂಡಿದ್ದು ನೋಡಿ ಖುಷಿ ಆತು!

 

ಶ್ರೀಧರ್. ಜಿ
ಶ್ರೀಧರ್. ಜಿ
8 years ago

"ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ರತ್ನನಪದಗಳು -ಜಿ.ಪಿ.ರಾಜರತ್ನಮ್ ರವರನ್ನು ನೆನಪಿಸುತ್ತದೆ. ತನ್ನ ಕೆಲಸ ಮಾಡಿಸಿಕೊಳ್ಳಲು ಮುಂಚಿತವಾಗಿ ಕೊಡುವ ರುಶವತ್ತು-ಲಂಚ ,ತನ್ನ ಕೆಲಸ ಆದ ನಂತರ ನೀಡುವುದು  ಟಿಪ್ಸ್ – ಎರಡೂ ಒಂದೇ ಅಲ್ಲಾ. ಲಂಚ-ಅನಿವಾರ್ಯ-ಟಿಪ್ಸ್ ಔದಾರ್ಯ . 

ಗುರುಪ್ರಸಾದ ಕುರ್ತಕೋಟಿ

ಶ್ರೀಧರ್ ಗುರುಗಳೆ, ನನ್ನ ಬರಹ ನಿಮಗೆ ಜಿ.ಪಿ.ರಾ ಅವರನ್ನು ನೆನಪಿಸಿದ್ದು ಕೇಳಿ ಖುಷಿಯಾಯ್ತು. ಅಂದ ಹಾಗೆ ಲಂಚವನ್ನು ಅನಿವಾರ್ಯ ಅನ್ನೋದಾದರೆ ಅದನ್ನು ಅನಿವಾರ್ಯವಾಗಿಸಿದ್ದು ನಮ್ಮಂತಹ ಜನ ಸಾಮಾನ್ಯರೇ! ಹಾಗೆಯೇ ಅಮೆರಿಕಾದಲ್ಲಿ ಟಿಪ್ಸ್ ಕೂಡ ಅನಿವಾರ್ಯವೇ ಆಗಿದೆ. ಅದಕ್ಕೆ ಆ ಹೋಲಿಕೆ 🙂

ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ! ಧನ್ಯವಾದಗಳು!    

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
8 years ago

ಗುರು,  ಒಂದೊಂದ್ಸಲಾ ಎಲ್ಲಾ ಇದ್ದೂ, ಎಲ್ಲೋ ಒಂದ್ ಕಡೆ ಹೋಗಿ ಒಬ್ರೇ ಕುಂತು ಸುತ್ಲೂ ನೋಡ್ ನೋಡ್ತಾ ಇದ್ದಂತೆ ಹಂಗೇ "ನಿರ್ಗತಿಕರು"  ಅಂತಲ್ಲದಿದ್ದರೂ ಲೋನ್ಲಿ ಅಂತಾದ್ರೂ ಅನ್ನಿಸಿರುತ್ತೆ…. ಆದ್ರೇ, ಯಾರಿಗಾದ್ರೂ ಹೇಳ್ಕ್ಯಂಡ್ರೆ ಎಲ್ಲಿ ಮರ್ಯಾದೆ ಹೋಗುತ್ತೋ ಅಂದ್ಕಂಡು ಸುಮ್ಕಿರ್ತೀವಿ…. ಅಟ್ಲೀಸ್ಟ್ ನನ್ನ ಮಟ್ಟಿಗೆ ಇದು ಹೌದು…. ಅಲ್ವಾ?

ಗುರುಪ್ರಸಾದ ಕುರ್ತಕೋಟಿ

ಅಮರ್ ಗೆಳೆಯಾ, ನಿಜ ಹೇಳ್ಬೇಕು ಅಂದ್ರೆ, ಬೇರೆಯವರ ಜೊತೆ ಇರುವಾಗಲೇ ನಾವು ನಿಜವಾಗಲೂ ಏಕಾಂಗಿಗಳು! ಯಾಕಂದ್ರೆ, ನಮ್ಮೊಳಗಿನ ಗೆಳೆಯನೊಬ್ಬನಿದ್ದಾನೆ, ಬೇರೆಯವರೊಂದಿಗಿದ್ದಾಗ ಅವನನ್ನು ನಾವು ನಿರ್ಲಕ್ಷಿಸಿಬಿಟ್ಟಿರುತ್ತೇವೆ. ಎಕಾಂತದಲ್ಲಿದ್ದಾಗಲೇ ನಾವು ಅವನೊಂದಿಗೆ ಮಾತಾಡೋದು ರೂಢಿ ಮಾಡ್ಕೊಂದರೆ ಆ ಏಕಾಂಗಿತನ ನಮ್ಮನ್ನು ಕಾಡದು. ಇದು ನಾನು ಎಲ್ಲೋ ಓದಿದ ನೆನಪು, ಆದರೆ ನನಗೆ  ಸರಿ ಅನಿಸುತ್ತದೆ… ಏನಂತೀರಿ?

Badarinath Palavalli
8 years ago

ಇಲ್ಲೂ ಅದೇ, ಪಿಜ್ಜಾ ಹಟ್ ಬಿಲ್ಲಿನಲ್ಲೇ ಟಿಪ್ಸ್ ಸೇರಿಸಿ ಜಡೀತಾರೆ! ಅಧಿಕೃತ ಲಂಚ ಸ್ವೀಕಾರ ಕಾಲ ಇದಪ್ಪಾ!

trackback

[…] ಇಲ್ಲಿಯವರೆಗೆ […]

10
0
Would love your thoughts, please comment.x
()
x