ಕಿರಿ ಕಿರಿ ಕೆಟ್ಟು: ಪ್ರಶಸ್ತಿ ಪಿ.

ಓದುಗ ಮಿತ್ರರಿಗೆಲ್ಲಾ ಯುಗಾದಿ ಶುಭಾಶಯಗಳು ಎನ್ನುತ್ತಾ ಮನ್ಮಥನಾಮ ಸಂವತ್ಸರದಲ್ಲಿ ಹೊಸದೇನು ಬರೆಯೋದು ಅಂತ ಯೋಚಸ್ತಿರುವಾಗ್ಲೇ ಹೋ ಅಂತ ಪಕ್ಕದ ಪೀಜಿ ಹುಡುಗ್ರೆಲ್ಲಾ ಕೂಗಿದ ಸದ್ದು. ಓ ಇನ್ನೊಂದು ವಿಕೆಟ್ ಬಿತ್ತು ಅನ್ಸತ್ತೆ ಅಂತ ಹಾಸಿಗೆಯಿಂದ ತಟ್ಟನೆದ್ದ ರೂಂಮೇಟು ಟೀವಿ ರಿಮೇಟ್ ಹುಡುಕಹತ್ತಿದ್ದ. ನಿನ್ನೆಯಷ್ಟೇ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಡೂಪ್ಲಿಕೇಟ್ ಆಧಾರ್ ಕಾರ್ಡ್ ಹೊಂದಿರೋರ ನಡುವಿನ ಕದನ ಅಂತಲೇ ಬಿಂಬಿತವಾಗಿದ್ದ ಚೆಂಡುದಾಂಡಿನಾಟದಲ್ಲಿ ಮುಳುಗಿದ್ದ ನನಗೆ ಇವತ್ತು ಮತ್ತೊಂದು ಪಂದ್ಯವಿದೆಯೆನ್ನೋದೇ ಮರೆತು ಹೋಗಿತ್ತು. ಟೀವಿ ಹಾಕುತ್ತಲೇ ಮತ್ತೆ ವಾಸ್ತವಕ್ಕೆ ಬಂದ ನಾನು ಅತ್ತ ಕಣ್ಣು ಹಾಯಿಸಿದರೆ ಒಂದು ಪಾಳಿಯ ಆಟ ಮುಗಿದಿತ್ತು. ದಾಂಡಿಗರ ಪರಾಕ್ರಮದೆದುರು ಮತ್ತೊಂದು ತಂಡದವರು ಹೈರಾಣಾಗಿ ಹೋಗಿದ್ದರು.ಏನಪ್ಪಾ, ಬೆಳಗ್ಗೆ ಬೆಳಗ್ಗೆ ಟೀವಿ ಹಾಕ್ಬಿಡ್ತಾರೆ. ಏನು ಕಿರಿ ಕಿರಿಯಪ್ಪಾ ಈ ಕಿರಿಕೆಟ್ಟಿನದು ಅಂತ ಮತ್ತೊಬ್ಬ ರೂಮಿ ಮುಖ ಸಿಂಡಿರಿಸುವ ಹೊತ್ತಿಗೆ ಹತ್ತಾಯ್ತೋ ಘಂಟೆ. ಇದು ಬೆಳಬೆಳಗ್ಗೆನಾ ಎಂಬ ಉತ್ತರ ಸಿದ್ದವಾಗಿತ್ತು. ವಾದಿಸಿ ನಿದ್ದೆ ಹಾಳು ಮಾಡಿಕೊಳ್ಳೋ ಮನಸಿಲ್ಲದ ಅವ ಮತ್ತೆ ಮುಸುಕು ಹೊದ್ದು ಮಗ್ಗುಲು ಬದಲಿಸಿ ಮಲಗಿದ. 

ಐ.ಪಿಎಲ್ಲು, ಕೆ.ಪಿ.ಎಲ್ಲು, ಟಿಟ್ವೆಂಟಿ, ಟೆಸ್ಟು, ವಿಶ್ವಕಪ್ಪು ಅಂತ ಪುರುಸೊತ್ತೇ ಇಲ್ಲದಂತೆ ಟೀವಿಯಲ್ಲಿ ವಾರಪೂರ್ತಿ ಇದೇ ಆಟ ಅಂತ ರೋಸತ್ತಿ ಹೋದ ರೂಮಿಯಂತೋರು ಒಬ್ಬಿಬ್ಬರಲ್ಲ. ಮೌಕಾ ಮೌಕಾ ಅಂತ ಫೇಸ್ಬುಕ್ಕು, ಟ್ವಿಟ್ಟರಿನಲ್ಲಿ ಮಜಾ ಮಾಡುತ್ತಿದ್ದವರಂತೆಯೇ ಏನಿದು ದರಿದ್ರದ ಆಟ ? ಮೂರ್ಖರ ಆಟ. ಮೂರ್ಮೂರು ಗೂಟಗಳ ಎದುರು ಇಬ್ಬಿಬ್ಬರು. ಅವರ ಸುತ್ತಮುತ್ತ ಹನ್ನೊಂದು ಜನ. ಮಾಡೋಕೆ ಬೇರೆ ಕೆಲಸವಿಲ್ಲದ ಇವರಿಂದ ಮೂರು ಘಂಟೆಯ ಸಮಯ ಹಾಳು. ಇವರಷ್ಟೇ ಅಲ್ಲದೇ ಕೋಟ್ಯಾಂತರ ಜನರದೂ ಹಾಳು ಅಂತ ಬೊಬ್ಬಿಡುವವರೂ ಇದ್ದಾರೆ.  ದೇಶದ ಎಲ್ಲಾ ಕ್ರೀಡೆಗಳು ತಮ್ಮ ಮೌಲ್ಯ ಕಳೆದುಕೊಳ್ಳಲು ಕ್ರಿಕೆಟ್ಟೇ ಕಾರಣ ಅನ್ನೋದು ಇವರ ಅಂಬೋಣ. ಹಾಕಿಯಲ್ಲಿ ಸಾಲು ಸಾಲು ಬಂಗಾರದ ಪದಕ ಗೆದ್ದ ದೇಶ ಹಿಂದಿನ ವಿಶ್ವಕಪ್ಪಿನಲ್ಲಿ ಪಾಲ್ಗೊಳ್ಳಲೂ ಅನರ್ಹವಾದ ಹೀನ ಸ್ಥಿತಿ ತಲುಪಿರೋದಕ್ಕೆ ದೇಶದೆಲ್ಲಾ ಗಮನ ಒಂದು ಕ್ರೀಡೆಯ ಮೇಲೆ ಸಾಗಿದ್ದೇ ಕಾರಣ ಎಂದರಿವರು. ಕ್ರಿಕೆಟಿಗನೊಬ್ಬ ಯಾವುದೋ ನಟಿಯ ಹಿಂದೆ ಸುತ್ತಿದ್ದೂ ದಿನಪತ್ರಿಕೆಯ ಸುದ್ದಿಯಾಗುತ್ತೆ, ಆದ್ರೆ ವಿಶ್ವಕಪ್ ಹಾಕಿಯಲ್ಲಿ, ಕಬಡ್ಡಿಯಲ್ಲಿ ಗೆದ್ದ ಮಹಿಳಾ ತಂಡದವರು ದೇಶಕ್ಕೆ ಮರಳುವಾಗ ಕೇಳೋರೆ ಗತಿಯಿಲ್ಲದಂತೆ ಮರಳ್ತಾರೆ ಅಂದ್ರೆ ಅದಕ್ಕಿಂತಾ ದುರವಸ್ಥೆ ಬೇಕಾ ಅನ್ನೋ ಇವರ ಮಾತಿಗೆ ಯಾರಾದ್ರೂ ತಲೆಕೆಳಹಾಕಿ ಸುಮ್ಮನಾಗೋದೇ.

ಎಕ್ಸಾಂ ಟೈಮು. ಓದ್ಕೊಳೋಣ ಅಂದ್ರೆ ಕ್ರಿಕೆಟ್ಟಿನ ಅಬ್ಬರ. ಎಕ್ಸಾಮಿಗೆ ಓದ್ಲಾ ? ಮ್ಯಾಚ್ ನೋಡ್ಲಾ ಅನ್ನೋ ಸಂದಿಗ್ದ. ಸೆಹ್ವಾಗ್ ಡಬ್ಬಲ್ ಸೆಂಚುರಿ ಹೊಡಿಲಿಲ್ಲ ಅಂದ್ರೆ ನಂಗೆ ಎಕ್ಸಾಮಲ್ಲಿ ಎಪ್ಪತ್ತರ ಬದ್ಲು ತೊಂಭತ್ತರ ಮೇಲೆ ಬರ್ತಿತ್ತು ಕಣೋ ಅಂತ ಈಗ್ಲೂ ಹೇಳೋ ಫ್ರೆಂಡಿಗೆ ಏನನ್ನೋದು ಅರ್ಥ ಆಗೋಲ್ಲ. ಇವತ್ತು ಕ್ರಿಕೆಟ್ ಬರುತ್ತೆ, ನಾಳೆ ಮತ್ತೊಂದು ಬರುತ್ತೆ. ಆದ್ರೆ ಬಂದದ್ನೆಲ್ಲಾ ನೋಡ್ಬೇಕಾ , ಬಿಡ್ಬೇಕಾ ಅನ್ನೋದು ವಿದ್ಯಾರ್ಥಿಗೆ ಬಿಟ್ಟಿದ್ದು. "ಸುಖಾರ್ಥಿನೋ ಕುತೋ ವಿದ್ಯಾ ? ವಿದ್ಯಾರ್ಥಿನಃ ಕುತಃ ಸುಖಂ"(ಸುಖಾಭಿಲಾಷಿಯಾಗಿದ್ದರೆ ವಿದ್ಯೆ ದಕ್ಕುವುದಿಲ್ಲ. ವಿದ್ಯಾಕಾಂಕ್ಷಿಯಾದವನಿಗೆ ಸುಖವಿಲ್ಲ) ಎಂಬ ಸಂಸ್ಕೃತ ಶ್ಲೋಕವೇ ಇಲ್ಲವೇ ಎಂಬ ಮತ್ತೊಂದು ಗುಂಪಿನವರ ಮಾತೂ ಅಷ್ಟೇ ಸತ್ಯ. ಜನರಿಗೆ ರೋಚಕ ಅನಿಸಿದ್ದು ನೋಡ್ತಾರೆ, ಆಸಕ್ತಿಕರ ಅನಿಸಿದ್ದನ್ನ ಪ್ರೋತ್ಸಾಹಿಸ್ತಾರೆ. ಲಕ್ಷಗಟ್ಟಲೇ ಖರ್ಚು ಮಾಡಬೇಕಾದ ಶೂಟಿಂಗು, ಬಿಲ್ವಿದ್ಯೆ, ಗಾಲ್ಫುಗಳಿಗಿಂತಲೂ ತೆಂಗಿನ ಬೊಡ್ಡೆಯ ಬ್ಯಾಟು,ಇಪ್ಪತ್ತು ರೂ ಚೆಂಡಿನ ಕ್ರಿಕೆಟ್ ನಮ್ಮುಡುಗ್ರಿಗೆ ಖುಷಿ ಕೊಟ್ರೆ ತಪ್ಪೇನು ಅನ್ನೋ ಇವರ ಮಾತು ಅಲ್ಲಿಗೇ ಮುಗಿಯೊಲ್ಲ. ಮೂರು ಜನರಿಂದ ಹಿಡಿದು ಮೂವತ್ತು ಜನರ ತನಕ ಆಡಬಹುದಾದ ಆಟ ಇದು. ಟಿಟಿ ಟೇಬಲ್ಲು, ಬ್ಯಾಂಡ್ಮಿಟನ್ ಕೋರ್ಟು ಎಲ್ಲಾ ಎಲ್ಲಾ ಕಡೆ ಕೊಡಕಾಗ್ದೇ ಇದ್ರೂ ಮನೆಯೊಳಗೆ, ಹೊರಗೆ, ಟಾರಸಿ ಮೇಲೆ ಹಿಂಗೆ ಕಂಡಲ್ಲೆಲ್ಲಾ ಟೈಂಪಾಸಿಗೆ ಆಡಿ ಖುಷಿಪಡಬಹುದಾದ ಆಟದ ಮೇಲೆ ಯಾಕ್ರಪ್ಪಾ ಅವ್ರಿಗೆ ಕೋಪ. ಓಟ, ಫುಟ್ಬಾಲು,ಷಟಲ್ಲು ಹಿಂಗೆ ಯಾವುದೇ ಆಟ ಆಡ್ಬೇಡಿ ಅಂತ ಹೇಳ್ತಿಲ್ಲವಲ್ಲ ನಾವು. ಅವ್ರಿಗಿಷ್ಟ ಬಂದ ಆಟ ಜನ ಆಡಿದ್ರೆ ಇವ್ರಿಗೇನು ಕಷ್ಟ. ಎಲ್ಲಾ ಜನ ಇಂತದ್ದೇ ಆಟ ಆಡ್ಬೇಕು ಅನ್ನೋಕೇನಿದು ಕಮ್ಯುನಿಷ್ಟ್ ದೇಶವಾ ? ವಾರವಿಡೀ ಯಾರ್ಯಾರ ಮನೆಯನ್ನು ಹೆಂಗೆಂಗೆ ಹಾಳ್ಮಾಡ್ಮೇಕು ಅಂತ ಬರೋ ಧಾರಾವಾಹಿಗಳನ್ನ, ಡಬ್ಲ್ಯು, ಡಬ್ಲ್ಯು, ಇ, ಎಫ್ಗಳನನ್ನ, ಫ್ಯಾಷನ್ ಹೆಸರಿನಲ್ಲಿ ಸೆಂಟಿಮೀಟರ್ ಬಟ್ಟೆಯಲ್ಲಿ ಮೀಟರ್ ಮೀರಿದ ಜನಗಳನ್ನ ತೋರಿಸೋ ಚಾನಲ್ಗಳ ಬಗ್ಗೆ ಇಲ್ಲದ ಕೋಪ ಕ್ರಿಕೆಟ್ ಮ್ಯಾಲ್ಯಾಕೋ ಅಂತ ಒಂದೇ ಉಸರಿನಲ್ಲಿ ಹೇಳ್ತಾ ಇದ್ರೆ.. .. ತಡೀರಪ್ಪ. ಬೇಜಾರ್ ಮಾಡ್ಕೋಬೇಡಿ ಅಂತ ಸಮಾಧಾನ ಮಾಡೋ ಹೊತ್ತಿಗೆ ಸಾಕಾಗೋಯ್ತು.

ಭಾರತೀಯ ಆಟವಾದ ಚದುರಂಗದಲ್ಲಿ ಭಾರತಕ್ಕೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ನಿಂತಿರೋ ರಷ್ಯಾ ಮತ್ತು ಮೂಲ ರಷ್ಯಾದ ಭಾಗವಾಗಿದ್ದ ಸೋವಿಯತ್ ರಾಷ್ಟ್ರಗಳು ನಿಂತಿರೋ ತರವೇ ಆಟಗಳು ಹುಟ್ಟಿದ ಕಡೆಗಿಂತಲೂ ವಿಶ್ವದ ಇನ್ನೆಲ್ಲೋ ಪ್ರಾಮುಖ್ಯತೆ ಪಡೆದಿರೋ ಪರಿಗೆ ಮ್ಯಾರಥಾನಿನಲ್ಲಿ ಮಿಂಚುತ್ತಿರೋ ಆಫ್ರಿಕಾ ದೇಶಗಳು, ಷಟಲ್, ಟಿಟಿಯಲ್ಲಿ ಮಿಂಚುತ್ತಿರುವ ಚೀನಾ, ಮಲೇಷ್ಯಾ, ಕ್ರಿಕೆಟ್ಟಿನಲ್ಲಿ ಮಿಂಚುತ್ತಿರೋ ಏಳೆಂಟು ದೇಶಗಳು ಒಂದು ನಿದರ್ಶನವಷ್ಟೆ..ಹಾಗಾಗಿ ಕ್ರಿಕೆಟ್ಟೊನ್ನೋದು ಬ್ರಿಟಿಷರು ತಂದ ಆಟ , ನಮ್ಮದಲ್ಲ ಅನ್ನೋ ಡೈಲಾಗುಗಳು ಸ್ವಲ್ಪ ಹಳೆಯದೇ ಆಯ್ತು ಅನ್ನಿಸೊಲ್ವಾ ? ಇನ್ನು ಟಿ.ವಿಗಳಲ್ಲಿ ಪ್ರಾಮುಖ್ಯತೆ ಅನ್ನೋದೂ ಉಲ್ಟಾ ಹೊಡಿತಾ ಇದೆ. ಬೆಂಗಳೂರಿನಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ಯಾವ ಕ್ರಿಕೆಟ್ ಮ್ಯಾಚಿಗೂ ಕಮ್ಮಿಯಿಲ್ಲದಂತೆ ನೋಡುಗರನ್ನ ಗಳಿಸಿತ್ತು. ಐ.ಪಿ.ಎಲ್ ಮಾದರಿಯಲ್ಲೇ ನಡೆಸಿದ ಹಾಕಿ ಪಂದ್ಯಾವಳಿಗಳು, ಬ್ಯಾಡ್ಮಿಂಟನ್ಗಳು ಗಳಿಸಿದ ಟಿ.ಆರ್.ಪಿಯೂ ಕಮ್ಮಿಯಲ್ಲ. ಪುಲೇಲ ಗೋಪಿ ಚಂದ್ ಫೈನಲ್ಲಿಗೆ ಬಂದಿದ್ದ ಆಲ್ ಇಂಗ್ಲೆಂಡ್ ಟ್ರೋಫಿಯ ಮ್ಯಾಚು, ಸೈನಾ ಫೈನಲ್ಲಿಗೆ ಬಂದ ಮ್ಯಾಚುಗಳು, ಭಾರತ-ಪಾಕಿಸ್ತಾನದ ಹಾಕಿ ಪಂದ್ಯಗಳು.. ಹೀಗೆ ಜನರಿಗೆ ಇನ್ನೂ ಆಸಕ್ತಿ ಹುಟ್ಟಿಸೋ ಆಟಗಳು ಅದೆಷ್ಟೋ ಇವೆ. ಆಟದಲ್ಲಿ ಸೋಲು ಗೆಲುವು ಸಮಾನವಾಗಿ ಕಾಣಬೇಕು ಅಂತ ಎಷ್ಟೇ ಹೇಳಿದ್ರೂ ಸದಾ ಸೋಲೋ ಆಟವನ್ನ ಯಾರು ನೋಡ್ತಾರೆ ನೀವೇ ಹೇಳಿ ? ಅಮೇರಿಕಾದ ಬ್ಯಾಸ್ಕೆಟ್ಬಾಲ್ ಎನ್.ಬಿ.ಎ ಯಲ್ಲಿ ಬರೋ ಘಟಾನುಗಟಿ ತಂಡಗಳಿಗಾಗಿ ಅಲ್ಲಿ ಜನ ಸೇರ್ತಾರೆ ಹೊರತು ಯಾವುದೋ ಕಾಂಜಿ ಪೀಂಜಿ ತಂಡಕ್ಕಾಗಿ ಬರ್ತಾರೆಯೇ ? 

ಇನ್ನು ಕ್ರಿಕೆಟ್ಟು, ಬೆಟ್ಟಿಂಗು ಅಂತ ಹುಡುಗರ ಭವಿಷ್ಯವೇ ಹಾಳಾಗ್ತಿದೆ ಅನ್ನೋ ತರವೇ ಹಾಳಾಗೋಕೆ ಇದೊಂದು ನೆವ ಅನ್ನೋ ಉತ್ತರವೂ ಸಿದ್ದವಾಗಿರುತ್ತೆ. ಯುಗ, ಜನ ಎಷ್ಟೇ ಮುಂದುವರೆದ್ರೂ ಈ ಆಟದೊಂದಿಗೆ ಬೆರೆತ ಒಂದಿಷ್ಟು ಮೂಢನಂಬಿಕೆಗಳೂ ಇದೆ ಅನ್ನೋದು ಕೆಲವರಿಗೆ ಮಜಾ ಅನ್ನಿಸಬಹುದು. ಉದಾಹರಣೆಗೆ ನಾನು ಬಾಗಿಲ ಹಿಂದಿನಿಂದ ನೊಡಿದ್ರೆ ಭಾರತ ಚೆನ್ನಾಗೆ ಆಡತ್ತೆ, ಮುಂದಿಂದ ನೋಡಿದ್ರೆ ವಿಕೆಟ್ ಬೀಳುತ್ತೆ ಅನ್ನೋ ನಂಬಿಕೆಯವ್ರು, ಕಾಲ್ಮೇಲೆ ಕಾಲು ಹಾಕ್ಕೊಂಡೇ ಮ್ಯಾಚ್ ನೋಡ್ಬೇಕು, ಕೆಳಗಿಳಿಸಿದ್ರೆ ಎದುರಾಳಿಗಳು ವಿಪರೀತ ರನ್ ಹೊಡೆದುಬಿಡ್ತಾರೆ ಅನ್ನೋ ನಂಬಿಕೆಯವ್ರೂ ಕಾಣಸಿಗ್ತಾರೆ. ಇನ್ನೊಬ್ಬ ಫ್ರೆಂಡಿನ ಕತೆ ಕೇಳಿ. ಭಾರತದ್ದೊಂದು ಟೆಸ್ಟ್ ಮ್ಯಾಚ್ ನಡೀತಿತ್ತಂತೆ. ಅವ್ರ ಪಕ್ಕದ್ಮನೆಯವ್ನೊಬ್ಬ ಬಂದು ರನ್ ಎಷ್ಟಾಯ್ತು ಅಂತ ಕೇಳಿದ್ನಂತೆ. ತಕ್ಷಣ ಭಾರತದ್ದೊಂದು ವಿಕೆಟ್ ಬಿತ್ತಂತೆ. ಏನಪ್ಪಾ ಇದು ಅಂತಳ್ಕೊತ್ತಾ ಇರ್ಬೇಕಿದ್ರೆ ಅವ ಹೋದ್ನಂತೆ. ಭಾರತದವ್ರು ಮತ್ತೆ ಚೆನ್ನಾಗಿ ಆಡೋಕೆ ಶುರು ಮಾಡಿದ್ರಂತೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದ ಅವ ಎಷ್ಟು ರನ್ನು ಅಂದಾಗ ಮತ್ತೊಂದು ವಿಕೆಟ್ ಬೀಳ್ಗೇಕೇ ? ಇವ ಮತ್ತೆ ಬಂದು ವಿಕೆಟ್ ಬಿದ್ದೂ, ಬಿದ್ದೂ ಭಾರತ ಸೋತೇ ಹೋಗತ್ತೆ ಅಂತ ಗೇಟಿಗೆ ಬೀಗ ಹಾಕಿದ್ನಂತೆ ಫ್ರೆಂಡು. ಊಟ ಮಾಡ್ತಿದ್ದೋರು ಮೇಲೆದ್ರೆ ಮತ್ತೇನಾಗುತ್ತೋ ಅಂತ ತಟ್ಟೆ ಒಣಗಿದ್ರೂ ಏಳದಂತೆ ಕೂರೋದು? ಒಂದು ಆಂಗಲಿನಲ್ಲಿಟ್ಟಿದ್ದ ಕಾಲು ನೋಯ್ತಾ ಇದ್ರೂ ಅದನ್ನು ಬದಲಾಯಿಸದೇ ಹಾಗೇ ನೋಡೋದು ಎಲ್ಲಾ ಇದೆ !

ಇನ್ನು ಈ ಆಟ ಅಂದ್ರೆ ನಂಬಿಕೆಗಳ ತರವೇ ಹಲವು ನೆನಪುಗಳೂ ಇವೆ. ಆಗ ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಮಾತ್ರ ಇರುತ್ತಿದ್ದ ಕ್ರಿಕೆಟ್ ಪಂದ್ಯಗಳಿಗೇ ಅಂತ್ಲೇ ಅಪ್ಪ ಕಲ್ಲಂಗಡಿ ಹಣ್ಣೋ, ಮಂಡಕ್ಕಿಯನ್ನೋ , ಆಗ ಮೂರು ರೂಗೆ ಸಿಗ್ತಾ ಇದ್ದ ಅಶ್ವಿನಿಯನ್ನೋ ತರುತ್ತಿದ್ದ ನೆನಪು ಕಣ್ಣ ಮುಂದೆ ಬಂದಾಗ ಈಗ್ಲೂ ಕಣ್ಣಾಲಿಗಳು ತೇವವಾಗುತ್ವೆ. ಹಗಲು ರಾತ್ರಿಗಳ ಪಂದ್ಯಗಳಲ್ಲಿ ಆಟ ನೋಡ್ತಾ ನೋಡ್ತಾ ಅಲ್ಲೇ ಮಲಗಿಬಿಡುತ್ತಿದ್ದ ನಮ್ಮನ್ನು ಅಪ್ಪನ ಸೀಟಿಯೋ, ಚಪ್ಪಾಳೆಯೋ ಎಬ್ಬಿಸುತ್ತಿತ್ತು. ಅದೂ ಎಬ್ಬಿಸದಷ್ಟು ಗಾಢ ನಿದ್ರೆಯಲ್ಲಿದ್ರೆ ಅಪ್ಪನೇ ಭಾರತ ಗೆತ್ತು , ನೋಡ್ಕಂಡು ಮಲ್ಕೋ ಬಾರೋ ಅಂತ ಎಬ್ಬಿಸ್ತಿದ್ರು. ಥೋ, ಇವ ಔಟಾದ, ಮತ್ತೊಂದು ವಿಕೆಟ್ ಬಿತ್ತು ಅಂತ ನಾವೇನಾದ್ರೂ ತೀರಾ ಬೇಜಾರ್ ಮಾಡ್ಕೋತಿದ್ರೆ ಅಪ್ಪನೇ, ಏ ಇಬ್ರನ್ನೂ ಒಂದೇ ತರ ನೋಡಂಗಿದ್ರೆ ನೋಡು. ಇಲ್ದಿದ್ರೆ ಮಲ್ಕ ಹೋಗು, ಭಾರತ ಗೆದ್ರೆ  ನಾನೇ ಎಬ್ಬಿಸ್ತೀನಿ ಅಂತ ಮಲಗೋಕೆ ಕಳುಸ್ತಿದ್ರು. ನಮ್ಮ ದೇಶ ಸೋಲ್ತು ಅಂದ್ರೆ ಆಗೋ ಬೇಸರವನ್ನು , ಗೆಲುವಿನ ಖುಷಿಯಷ್ಟೇ ಸಹಜವಾಗಿ ಕಾಣೋ ಪರಿ ಅವರಿಗೆ ಹೇಗೆ ಸಾಧ್ಯವಪ್ಪಾ ಅಂತ ಅನಿಸ್ತಿತ್ತು ಸಣ್ಣವರಿದ್ದಾಗ. ಬದುಕಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸಂಘರ್ಷಗಳು, ನೋವೇ ಜೀವನಮೌಲ್ಯಗಳಾಗಿ ಅವರ ನುಡಿಗಳಲ್ಲಿ ಇಣುಕಿರಬಹುದಾ ಅನಿಸುತ್ತೆ ಈಗ್ಲೂ ಒಮ್ಮೊಮ್ಮೆ. ಆಫೀಸಲ್ಲಿ ಸಾವಿರ ಜನ ದೊಡ್ಡ ಪರದೆಯ ಮೇಲೆ ಕ್ರಿಕೆಟ್ ನೋಡುವಾಗ ಭಾರತದ ಪ್ರತೀ ಬೌಂಡರಿಗೂ ಬೀಳೋ ಸಿಳ್ಳೆ, ಚಪ್ಪಾಳೆಗಳಲ್ಲಿ ಅಪ್ಪ ನೆನಪಾಗುತ್ತಾರೆ. ಪೀಜಿಯ ಕೇಕೆಗಳಲ್ಲಿ ಅಮ್ಮನ ನಗುಮೊಗ ನೆನಪಾಗುತ್ತೆ. ಇನ್ನು ಶಿವಮೊಗ್ಗೆಯಲ್ಲಿ ರಣಜಿ ಮ್ಯಾಚುಗಳು ನಡೆಯುತ್ತಿದ್ದಾಗ ಉರಿಬಿಸಿಲಿನಲ್ಲಿ ಮಕ್ಕಳನ್ನು ಕರೆದುಕೊಂಡು, ಒಂದೆರಡು ಬಾಟಲಿಗಳಲ್ಲಿ ನೀರೂ ತೆಗೆದುಕೊಂಡು ಹೋಗುತ್ತಿದ್ದರಂತೆ ನಮ್ಮಜ್ಜಿ. ಈಗ್ಲೂ ಭಾರತದ ಮ್ಯಾಚು ಬಂತಂದ್ರೆ ಟೀವಿ ಒಳಗೇ ಹೊಕ್ಕು ಬಿಡ್ತಾರೆ ನಿಮ್ಮಜ್ಜ ಅಂತ ಯಾವಾಗ್ಲೂ ಕಾಡಿಸಿಕೊಳ್ಳುವಷ್ಟರ ಮಟ್ಟಿಗೆ ನಮ್ಮಜ್ಜನೂ ಆ ಆಟದಲ್ಲಿ ತಲ್ಲೀನ ಅನ್ನೋದೂ ಅಷ್ಟೇ ಮಜದ ಸಂಗತಿ. ಆದ್ರೆ ನನ್ನ ಮಾವಂದಿರಾಗ್ಲಿ , ಅವ್ರ ಮಕ್ಕಳು ಅಥವಾ ನನ್ನ ಭಾವಯ್ಯಂದಿರಾಗ್ಲಿ ಕ್ರಿಕೆಟರುಗಳಾಗಿಲ್ಲ. ನನ್ನ ಭಾವಯ್ಯನಿಗೆ ಕ್ರಿಕೆಟ್ ಮೇಲೆ ಇದ್ದಷ್ಟೇ ಹುಚ್ಚು ಚೆಸ್ ಮತ್ತು ಕರಾಟೆಯ ಮೇಲೆ. ಅದರಲ್ಲಿ ಅವ ಬೆಲ್ಟುಗಳ ಮೇಲೆ ಬೆಲ್ಟು ಸಂಪಾದಿಸ್ತಾ ಇದ್ರೆ ಮತ್ತೊಂದು ಮಾವನ ಮಗಳ ಚಿತ್ತ ಬ್ಯಾಡ್ಮಿಂಟನ್ನಿನತ್ತ. ಚಾಂಪಿಯನ್ನಾಗದಿದ್ರೂ ೧೦ಕೆ ಅನ್ನೋ ಹತ್ತು ಕಿಲೋಮೀಟರ್ ಓಟ ನನ್ನೊಂದಿಷ್ಟು ಗೆಳೆಯರಿಗೆ ಹಚ್ಚಿಸಿದ ಹುಚ್ಚು ಕಮ್ಮಿಯೇನಲ್ಲ. ಬೆಂಗಳೂರಲ್ಲಿ ೧೦ಕೆ ಶುರುವಾಗೋಕೆ ಮುಂಚೆ ಓಟ ಅನ್ನೋದು ನಮಗಲ್ಲಪ್ಪ ಅಂತಿದ್ದ ಜನರೆಲ್ಲಾ ಈಗ ಬೆಳಬೆಳಗ್ಗೆ ಎದ್ದು ಓಡೋಕೆ ಶುರು ಮಾಡಿದ್ದಾರೆ ! ಈ ಮೂರು ಗೂಟದ ಆಟವಾಗ್ಲಿ ಮತ್ತೊಂದಾಗ್ಲಿ, ಏನಾದ್ರೂ ಬರ್ಲಿ, ಯಾವುದಕ್ಕೆ ಎಷ್ಟಾದ್ರೂ ಪ್ರಾಮುಖ್ಯತೆ ಕೊಡ್ಲಿ ಟೀವಿಯವ್ರು, ನನ್ನ ಆರೋಗ್ಯಕ್ಕೆ ಬೇಕಾದಂಗೇನೆ ನಾನಿರೋದಪ್ಪ ಅನ್ನೋ ಭಾವ ಇವರದ್ದಷ್ಟೆ. ಇಷ್ಟೆಲ್ಲಾ ಕತೆ ಬೇಕಿತ್ತಾ ಅಂದ್ರಾ  ? ಗ್ಯಾರಂಟಿ ಬೇಕಿರಲಿಲ್ಲ. ಕೈಸಿಗದ ದ್ರಾಕ್ಷಿ ಹುಳಿಯೆಂದ ನರಿಯಂತೆಯೇ ತಮಗೆ ಪ್ರಭುತ್ವ ಸಾಧಿಸಲಾಗದ ಕ್ರಿಕೆಟ್ ಮೂರ್ಖರ ಆಟ ಅಂತ ಹುಯಿಲೆಬ್ಬಿಸಿದ ದೊಡ್ಡಣ್ಣ ಅಮೇರಿಕಾದ ಮಾತನ್ನೇ ವೇದವಾಕ್ಯವೆಂಬಂತೆ ನಂಬಿಕೊಂಡು ಹೋದಲ್ಲೆಲ್ಲಾ ಸಾರೋದು ಬೇಕಾ ಅನ್ನೋ ಪ್ರಶ್ನೆಯಷ್ಟೇ ಸದ್ಯಕ್ಕೆ. ಯಾರಿಗೋ ಸಿಕ್ಕ ಪ್ರಸಿದ್ದಿಗೆ ಉರಿದುಕೊಳ್ಳೋ ಬದಲು ಬೇರ್ಯಾವುದಾದ್ರೂ ಸತ್ಕೆಲಸ ಮಾಡೋ ಬಗ್ಗೆ, ತಾವೂ ಬೆಳೆಯೋ ತರದ ಯೋಚನೆಗಳು, ಇನ್ಯಾರಿಗೋ ಸಹಕರಿಸೋ ತರಹದ ಯೋಚನೆಗಳು ಯಾಕೆ ಬರಬಾರದು ಅನ್ನೋ ಆಲೋಚನೆಯಷ್ಟೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
sudheera
sudheera
9 years ago

Well written Prashasti. Keep it up. Life itself is a game…kabhi haar toh kabhi jeet..take both with same spirit. Read the poem "IF"  BY Rudyard Kipling. All the best and keep it up.

1
0
Would love your thoughts, please comment.x
()
x