ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ

ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ. 

"ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. "  ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ  ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ  ವ್ಯಕ್ತಿಗಳ ಕೈಯಲ್ಲಿ ಈಗಷ್ಟೆ ಕಿಡಿ ಹಚ್ಚಿದ ಬಂದೂಕಿನ ನಳಿಕೆಯಲ್ಲಿನ್ನು ಹೊಗೆ ಆರಿಲ್ಲ. ಸತ್ತು ಉರುಳಿದ ಸಂಪೂರ್ಣ ಹಳ್ಳಿಯ ಅವಶೇಷವಾಗಿ ಮಕ್ಕಳು ನಿಂತಿದ್ದಾರೆ. ಸೆರೆಯಾದ ಮಕ್ಕಳ  ಕೈಯಲ್ಲಿ ಎ ಕೆ ೪೭ ಬಂದೂಕುಗಳನ್ನು ಹೊರೆಸಿಕೊಂಡು ಆಫ್ರಿಕಾದ ದಟ್ಟ ಕಾಡಿನ ಮಧ್ಯೆ ಕರೆದೊಯ್ಯಲಾಗುತ್ತಿದೆ. ಗ್ರೇಟ್ ಟೈಗರ್ ಎಂಬ ಸೇನಾನಾಯಕ ಅಧೀನದಲ್ಲಿ ಸೈನಿಕರಾಗಲು ಇವರನ್ನು ಎಳೆದೊಯ್ಯಲಾಗುತ್ತಿದೆ, ಹಿಂಸೆಯ ಸಮ್ಮೋಹನದಲ್ಲಿರುವ ಜನರಿಗೆ ಬದುಕಿನ ಸುಂದರ ಕನಸುಗಳು ಕಾಣುತ್ತಿಲ್ಲ. ಮಕ್ಕಳು ಹೊರುತ್ತಿರುವ ಬಂದೂಕಿನಲ್ಲಿ ಕೆಲವು ಈಗಷ್ಟೆ ಅವರಪ್ಪ ಅಥವಾ ಅಮ್ಮ ಅಥವಾ ಅಣ್ಣ ತಂಗಿಯರನ್ನು ಕೊಂದ ಬಂದೂಕು ಆಗಿರಲಿಕ್ಕೆ ಸಾಕು. ಯಾರಿಗೆ ಗೊತ್ತು ಹೀಗೆ ಕೊಂದವರ ಕೈಯಲ್ಲಿನ ಬಂದೂಕು ಅವರ ಕುಟುಂಬದ ಯಾರನ್ನೋ ಬಲಿ ತೆಗೆದುಕೊಂಡರಿಲಿಕ್ಕೆ ಸಾಕು. 

ವಾರ್  ವಿಚ್ –   ಸಿನಿಮಾದಲ್ಲಿ ಯಾವುದೇ ಸ್ಥಳದ ಬಗ್ಗೆ ಕರಾರುವಕ್ಕಾಗಿ ಹೇಳಿಲ್ಲದಿದ್ದರು, ಈ ಸಿನಿಮಾವನ್ನು ಕಾಂಗೋದಲ್ಲಿ ಚಿತ್ರಿಕರಿಸಲಾಗಿದೆ. ಸಿನಿಮಾದ ಕಥೆಯನ್ನು ಕಮೋನಾ ಎನ್ನುವ ಆಫ್ರಿಕಾದ  ಹೆಣ್ಣು ಮಗಳ ಧ್ವನಿಯಲ್ಲಿ ಹೇಳಲಾಗಿದೆ. ಕಥೆಯ ಶುರುವಾತಿನಲ್ಲಿ ಹನ್ನೆರಡು ವರ್ಷದವಳಾಗಿದ್ದ ಕಮೋನ ಹದಿನಾಲ್ಕು ವರ್ಷದವಳಾಗುವವರೆಗೆ ಕಥೆ ಮುಂದುವರೆಯುತ್ತದೆ. ಈ ವರುಷಗಳ ಅಂತರದಲ್ಲಿ ನಡೆದ ರಾಜಕೀಯ ಅಥವಾ ಆರ್ಥಿಕ ಸ್ಥಿತ್ಯಂತರಗಳನ್ನು ಬದಿಗಿಟ್ಟು ಕಥೆ ಹೇಳಲಾಗುತ್ತದೆ.  ಸೈನಿಕರನ್ನು ಬಂಡುಕೋರರು ಅಥವಾ ಸರ್ಕಾರದವರು ಎಂದು ಗುರುತಿಸಲಾಗಿದೆ, ಹಳ್ಳಿಗರನ್ನು ಇವರಿಬ್ಬರ ನಡುವೆ ಸಿಕ್ಕಿಸಲಾಗಿದೆ. ಕಮೋನ ತನ್ನ ಶಿಶುವಿನೊಡನೆ ಮಾತನಾಡುವ, ಮಾಂತ್ರಿಕ ವಾಸ್ತವದಲ್ಲಿಯ  ಪಿಶಾಚ ಭೂತಕಾಲದ ನೆನಪುಗಳೊಡನೆ ಮಾತನಾಡುವ ಸಂಭಾಷಣೆಯಾಗಿ  ಕಥೆ ಬಿಚ್ಚಿಕೊಳ್ಳುತ್ತದೆ. ಯಾರದೋ ಪಾಶವೀ ಅತ್ಯಾಚಾರದ ಫಲವಾಗಿ ಹುಟ್ಟಲಿರುವ ಮಗುವಿನೊಡನೆ ಕಮೋನ ಹೇಳುತ್ತಿದ್ದಾನೆ  " ಆ ದೇವರು ನಾನು ನಿನ್ನನ್ನು ಪ್ರೀತಿಸುವ ಶಕ್ತಿ ಕೊಡುತ್ತಾನೋ ಇಲ್ಲವೋ " ಚಿತ್ರದುದ್ದಕ್ಕೂ ಮಗುವಿನ ಮನಸ್ಸಿನಲ್ಲಿನ ಒಳ್ಳೆಯ ಮತ್ತು  ಕೆಟ್ಟ ಚಿಂತನೆಗಳ ನಡುವೆ ಸಂಘರ್ಷ ನಡೆದಿದೆ. ಮತ್ತೆ ಮತ್ತೆ ಅವಳು ತಾನೇ ಹೇಳುವಂತೆ " ಕೆಟ್ಟ ಕೆಲಸ " ವನ್ನು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತಿದೆ. 

ವಿಯೆಟ್ನಾಂ ಮೂಲದ ನಿರ್ದೇಶಕ ಕಿಮ್ ಗ್ಯುಎನ್ ಅವರ ಈ  ನಾಲ್ಕನೆಯ ಸಿನಿಮಾದ ಉದ್ದಕ್ಕೂ ಹಲವಾರು ಬಾರಿ ಬಂದೂಕಿನ ಮೊರೆತಗಳು ಕೇಳಿಸಿದರೂ ಎಲ್ಲಿಯೂ ಸಹ ಅವರು ರಕ್ತಪಾತವನ್ನೇ  ಅತಿಯಾಗಿ ತೋರಿಸಿಲ್ಲ.  ಯುದ್ಧ ಕಾಲದ ಕಥೆಯನ್ನು ಹೇಳಿದರು ಎಲ್ಲಿಯೂ ಸಹ ನೋಡಲು ಹಿಂಸೆ ಆಗುವಂತಹ ದೃಶ್ಯಗಳನ್ನು ತುರುಕಿಲ್ಲ.    ಶುರುವಾತಿನಲ್ಲಿ ಅವಳಿಗೆ  ಪಿಸ್ತೂಲನ್ನು ನೀಡಿ, ತಂದೆ ತಾಯಿಯನ್ನು ಕೊಲ್ಲುವ ಅಥವಾ ಅವಳ ಮುಂದೆ ಅವರು ಇನ್ನು ಹೆಚ್ಚಿನ ಹಿಂಸೆ ಅನುಭವಿಸುವದನ್ನು ನೋಡುವ ಆಯ್ಕೆ ನೀಡಲಾಗಿದೆ.  ಚಿತ್ರದಲ್ಲಿ ಕಮೋನ ಅನುಭವಿಸುವ ಭಯಾನಕ ನೋವುಗಳು, ಆಕೆಯ ವಾಸ್ತವದ ಅವಾಸ್ತವ ಎನ್ನುವ ಭಾವ. 

ಉಗ್ರರ ಕೈಗೆ ಸಿಕ್ಕ ಕಮೋನಳಿಗೆ, ಅವಳಂಥ ಸಾವಿರಾರು ಮಕ್ಕಳಿಗೆ  ಬಿಡುಗಡೆ ಎನ್ನುವದು ಕಲ್ಪನೆಯೇ ಆಗಿದೆ. ಮಾಂತ್ರಿಕ ಹಾಲನ್ನು ಕುಡಿದ ಕಮೋನಳಿಗೆ ಪ್ರೇತಗಳನ್ನು ಕಾಣುವ ಶಕ್ತಿಯಿದೆ ಎನ್ನುವ ನಂಬಿಕೆ, ಮಾತು ಎಲ್ಲೆಡೆ ಹರಿದಾಡಿದೆ. ಯಾವಾಗ ಅವಳ ಅಲೌಕಿಕ ಶಕ್ತಿಯ ಪ್ರೇತ ನೀಡಿದ ಸುಳಿವಿನಿಂದ ಆಶ್ಚರ್ಯಕರ ರೀತಿಯಲ್ಲಿ ಅವಳು ಧಾಳಿಯೊಂದರಿಂದ ಪಾರಾದಾಗ , ಕಮೋನಳ ಶಕ್ತಿ  ಎಲ್ಲ ಉಗ್ರರಲ್ಲಿ ಹರಿದಾಡಿ, ಗ್ರೇಟ್ ಟೈಗರ್ ನ ಕಿವಿಗೂ ತಲುಪಿದೆ ಮತ್ತು ಇದರಿಂದ ಕಮೋನಳಿಗೆ ಅವನ ಆಪ್ತ ಸೇವಕಿಯಾಗುವ ಅವಕಾಶ. ಪ್ರೇತಗಳ ಕಾಣುವ ಹುಡುಗಿ ಯುದ್ಧ ಕಾಲದ ಮಾಟಗಾತಿ.. ಇವುಗಳ ಮಧ್ಯೆ ಕಮೋನಳಿಗೆ ಒಬ್ಬ ಮಾಂತ್ರಿಕ ಹುಡುಗನ ಪರಿಚಯವಾಗಿದೆ. ಸ್ವಲ್ಪ ದಿನದಲ್ಲಿ ಅವನು ಅವನು ಅವಳನ್ನು ಮದುವೆಯಾಗುವಂತೆ ಕೇಳಿದ್ದಾನೆ. 

ಕಮೋನ ಮಾಂತ್ರಿಕ ಹುಡುಗನಿಗೆ ಬಿಳಿಯ ಹುಂಜವನ್ನು ತಂದು ಕೊಟ್ಟರೆ ಮದುವೆಯಾಗುವ ವಿಚಿತ್ರ ಬೇಡಿಕೆ ಇಟ್ಟಿದ್ದಾಳೆ, ಬಿಳಿಯ ಹುಂಜವೆಂದರೆ ಅಪರೂಪ ಅಷ್ಟೇಕೆ ಅಸಾಧ್ಯ ಎನ್ನುವ ಕಲ್ಪನೆ ಆಫ್ರಿಕಾದಲ್ಲಿ.  ಬಿಳುಚಿದ ಬಿಳಿಯ ಬಣ್ಣದ ಹುಡುಗ, ಕಪ್ಪು  ಮಣ್ಣಿನ ಬಣ್ಣದ ಹುಡುಗಿಗಾಗಿ ಅಚ್ಚ ಬಿಳಿಯ  ಹುಂಜಕ್ಕಾಗಿ ಎಲ್ಲೆಡೆ ಪರದಾಡುವಾಗ ಚಿತ್ರದುದ್ದಕ್ಕೂ ಕಂಡು   ಬರುವ ನೋವಿನಿಂದ ಬಿಡುಗಡೆ ಸಿಗುವ, ನವಿರಾದ ದೃಶ್ಯವಾಗುತ್ತದೆ. ಬಿಳಿಯ ಹುಂಜವನ್ನು ತಂದ ಮಾಂತ್ರಿಕ ಹುಡುಗನ್ನು ಮದುವೆಯಾಗುವ ಹುಡುಗಿ ಗಂಡನ ಮನೆಗೆ ಓಡಿ  ಬರುತ್ತಾಳೆ. ಹುಡುಗ ಚಿಕ್ಕಪ್ಪ ಊರ ಮಾಂಸದ ವ್ಯಾಪಾರಿ, ಕೆಲವೇ ದಿನಗಳಲ್ಲಿ ಕನೋಮಾಳ ಪುಟ್ಟ ಖುಷಿಯ ದಿನಗಳು  ಉರುಳಿಬೀಳುತ್ತದೆ. ಮಾಂಸವನ್ನು ಕತ್ತರಿಸುವದಕ್ಕು ಘೋರವಾಗಿ ಅವಳ ಕುಟುಂಬವನ್ನು ಉಗ್ರರು ಕತ್ತರಿ ಹಾಕುತ್ತಾರೆ.  ತನ್ನ ಹೆತ್ತವರ ಅಂತ್ಯಕ್ರಿಯೆ ಆಗಿಲ್ಲವೆಂಬುದೇ ಇವತ್ತಿನ ಕಷ್ಟಗಳಿಗೆ ಕಾರಣ ಎನ್ನುವ ಕೊಮನಾಳ ಬಲವಾದ ನಂಬಿಕೆ. ಹೆತ್ತವರ ಅವಶೇಷಗಳಿಗೆ ಸರಿಯಾದ ರೀತಿಯಲ್ಲಿ ಮುಕ್ತಿ ಕಾಣಿಸದೇ ಇದ್ದರೆ ತನ್ನ ಮಕ್ಕಳಿಗೂ ಶಾಪ್ ತಗಲುವದು ಎನ್ನುವದು ಅವಳ ಭಯ. ಹಲವಷ್ಟು ಕಷ್ಟಗಳ ನಂತರ ಹುಟ್ಟಿದೂರಿಗೆ ಮರಳುವ ಕೊಮನಾ ಮರಳಿನಲ್ಲಿ ಮರೆಯಾಗಿದ್ದ ಅಸ್ತಿಗಳನ್ನು ತೆಗೆದು ಶಾಸ್ತ್ರೋಕ್ತವಾಗಿ ಹೂತಾಗ, ನೋಡುಗನಿಗೂ ಕೂಡ ಒಂದು ನಿರಾಳ ಭಾವ. 

ಮೂಢನಂಬಿಕೆ, ಹಿಂಸಾಚಾರ, ಕೊಲೆ, ಸುಲಿಗೆಗಳ ನರಳಾಟದ ಈ ಜಗತ್ತಿನ ಎದುರಿನಲ್ಲಿ  ಮನುಷ್ಯನೆಂಬ ಮುಂದುವರೆದ ಜೀವಿಯ ನಾಗರೀಕತೆ ಛದ್ಮವೇಷದಂತೆ ಕಾಣುತ್ತದೆ. 

ಸಿನಿಮಾ : ವಾರ್ ವಿಚ್   (war witch OR Rebelle)  
ಭಾಷೆ : ಇಂಗ್ಲೀಶ್ 
ದೇಶ : ಕೆನಡಾ 
ನಿರ್ದೇಶನ : ಕಿಮ್ ಗ್ಯುಎನ್

ಇಂತಿ, 
ಸಚೇತನ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x