ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು ಬರುತ್ತಾರೆ.
 
ಹೋಳಿ ಹಬ್ಬದ ನಾಲ್ಕು ದಿನಗಳ ಮೊದಲೆಲ್ಲಾ ಬೆಳಿಗ್ಗೆ ಹುಲಿವೇಷಧಾರಿಗಳು ನಗರದಲ್ಲೆಲ್ಲಾ ಕಾಣಿಸಿಕೊಂಡ್ರೆ ರಾತ್ರಿಯಾಗುತ್ತಿದ್ದಂತೆ ಆರಂಭವಾಗುತ್ತದೆ ಬೇಡರ ನರ್ತನದ ರೌದ್ರಾವತಾರ. ಬೇಡರ ವೇಷ ಕುಣಿಯುವ ವೇಷಧಾರಿಯ ನೋಡುವುದೇ ಒಂದು ಚಂದ. ಬೇಡರವೇಷ ತೊಡುವ ವ್ಯಕ್ತಿ ಸಾಮಾನ್ಯವಾಗಿ ಕೆಂಪು ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಮೊಣಕಾಲವರೆಗಿನ ಕೆಂಪು ಚಡ್ಡಿ ಧರಿಸಿರುತ್ತಾನೆ. ಮುಖಕ್ಕೆ ಕೆಂಪು, ಹಳದಿ ಮತ್ತು ಕಪ್ಪು ಬಣ್ಣಗಳಿಂದ ಅಲಂಕರಿಸಿರುತ್ತಾರೆ. ನೊಡಿದರೇ ಭಯ ಹುಟ್ಟುವಂತಹ ಕಿಡಿ ಕಾರುವ ಕಣ್ಣು ರೌದ್ರತೆಯನ್ನು ಹೊಮ್ಮಿಸುತ್ತದೆ. ತಲೆ ಮೇಲೆ ಪುಕ್ಕದಾಕಾರದಲ್ಲಿ ಅಥವಾ ಕೋಡಿನ ಆಕಾರದ ಒಂದು ಕಿರೀಟ ಇರುತ್ತದೆ. ಬೆನ್ನಿಗೆ ನವಿಲುಗರಿಯ ಬೃದಹಾಕಾರದ ತಟ್ಟೆ ಇರುತ್ತದೆ. ಸೊಂಟಕ್ಕೆ ಮಾವಿನ ಎಲೆಯ ಮಾಲೆ, ಕುತ್ತಿಗೆಗೆ ನೋಟಿನ ಮಾಲೆ. ಒಂದು ಕೈನಲ್ಲಿ ಲೋಹದ ಖಡ್ಗ, ಅದರ ತುದಿಗೊಂದು ನಿಂಬೆಹಣ್ಣು. ಇನ್ನೊಂದು ಕೈಯಲ್ಲಿ ಪಳಪಳನೆ ಹೊಳೆವ ಢಾಳ ಇರುತ್ತದೆ. ಚರ್ಮದ ತಮಟೆಯ ‘ಡಂಕುಣಕ ಡಣ್, ಡಂಕುಣಕ ಡಣ್’ ಎನ್ನುವ ಲಯಬದ್ಧ ಬಡಿತಕ್ಕೆ ಸೇರುವ ಪಡ್ಡೆಗಳ ಸೀಟಿಯ ಸೌಂಡು ಬೇಡರ ನರ್ತನಕ್ಕೆ ವಿಶಿಷ್ಟ ಮೆರುಗನ್ನು ನೀಡುತ್ತವೆ. ಬೇಡರ ವೇಷ ಹಾಕಿದವನ ಹಿಂದೆ ಅವನಿಗೆ ಹಗ್ಗದಲ್ಲಿ ಬಂಧಿಸಿಟ್ಟ ಇಬ್ಬರು ಚಿತ್ರವಿಚಿತ್ರ ವೇಷದಲ್ಲಿ ಕಂಗೊಳಿಸುತ್ತಿದ್ದರೆ, ಪಂಜು ಹಿಡಿದ ವ್ಯಕ್ತಿ, ಬೇಡನನ್ನು ಕೆರಳಿಸುವ ವಿಧವೆ ವೇಷಧಾರಿಯ ಕೆಲಸ ನೋಡುಗರಿಗೆ ವಿಶೇಷ ಮನರಂಜನೆ ಒದಗಿಸುತ್ತದೆ. ತಮಟೆಯ ಬಡಿತದ ಲಯಕ್ಕೆ ತಕ್ಕಂತೆ ಗಾಂಭೀರ್ಯದ ಹೆಜ್ಜೆ ಇಡುತ್ತಾ ಸಾಗುವ ಬೇಡರವೇಷಧಾರಿಯ ಗತ್ತನ್ನು ನೋಡುವುದೇ ಒಂದು ಸೊಬಗು. ಆ ನೃತ್ಯದ ಸವಿಯನ್ನು ಸವಿಯಲು ಇಲ್ಲಿನ ಜನತೆ ಬೆಳಗಿನ ಜಾವದವರೆಗೂ ಕಣ್ತುಂಬಿಕೊಳ್ಳುತ್ತಾರೆ. ಯುವಕರೆಲ್ಲಾ ಸೇರಿ ರಸ್ತೆಯಲ್ಲಿಯೇ ಹಾಕುವ ಸ್ಟೆಪ್ಪು ಯಾವ ಹಿಪ್‍ಹೋಪ್‍ಗೂ ಕಮ್ಮಿಯಿಲ್ಲ.  ಬೇಡರ ವೇಷಧಾರಿಯ ಹಿಂದೆಯೇ ಸಾಗುವ ಬಂಡಿಯಲ್ಲಿ ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿಗಳ ಅಥವಾ ಸನ್ನಿವೇಷ ಪ್ರಸ್ತುತಪಡಿಸಿರುತ್ತಾರೆ. ಇನ್ನೊಂದರಲ್ಲಿ ನೃತ್ಯ ತಂಡ ಪ್ರದರ್ಶನವಿದ್ದು ರಾತ್ರಿಯಿಡೀ ಸಂಗೀತದ ಅಬ್ಬರದಲ್ಲಿಯೇ ಜನತೆ ತೇಲಿಹೋಗುತ್ತಾರೆ.

ಬೇಡರ ವೇಷದ ಜೊತೆಗೆ ಬಂಡಿ ಪ್ರದರ್ಶನವೂ ಇದ್ದು, ನಗರದ ವಿವಿಧ ಗಲ್ಲಿಗಳ, ಬೇರೆ ಬೇರೆ ಏರಿಯಾಗಳ ಬೇಡರ ವೇಷಧಾರಿಗಳ ತಂಡವು ನಗರದ ಶಕ್ತಿ ದೇವತೆ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ರಾತ್ರಿ 10ರಿಂದ ಬೆಳಗಿನ 4ರವರೆಗೆ ಶಿರಸಿಯ ಸಿದ್ಧಪ್ರದೇಶದಲ್ಲೆಲ್ಲಾ ಸಂಚರಿಸುತ್ತಾರೆ. ಈ ರೀತಿ ಬೇಡರ ವೇಷದ ಮೂವತ್ತನಾಲ್ಕು ತಂಡಗಳು ಈ ವರ್ಷ ಸಂಚರಿಸುತ್ತವೆ. ನೊಡುವುದಕ್ಕೆ ಚಂದ ಕಾಣುವ ಈ ವೇಷ ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಂತಲೇ ಕೆಲವು ಆಚಾರ ವಿಚಾರಗಳೂ ಇವೆ. ಈ ಬೇಡರವೇಷ ಕುಣಿತ ಯಾವ ದಿನ ಯಾರು ಮಾಡುವುದೆಂದು ಮೊದಲೇ ನಿರ್ಧರಿಸಿಕೊಳ್ಳುತ್ತಾರೆ. ಯಾವ ದಿನ ಯಾವ ಭಾಗದವ ವೇಷ ಹಾಕುತ್ತಾನೆಂದು ತಿಳಿದುಕೊಂಡು ಆ ಮೊದಲೇ ಕೆಲವು ಸಂಪ್ರದಾಯಗಳನ್ನು ಆಚರಿಸುತ್ತಾರೆ. ಬಣ್ಣ ತೊಡುವ ಮೊದಲು ಬೇಢರವೇಷಧಾರಿ ದೇವರಿಗೆ ಕಾಯಿ ಇಟ್ಟು ಪೂಜೆ ಮಾಡಿಕೊಳ್ಳುತ್ತಾನೆ. ಆ ದಿನ ಅವನು ಮಾಂಸಾಹಾರ ಸೇವಿಸುವಂತಿಲ್ಲ, ಕೇವಲ ಹಾಲು ಮತ್ತು ದೇವರ ಹಣ್ಣುಗಳೇ ಆತನಿಗೆ ಅಂದಿನ ಆಹಾರ. ನಂತರ ಬೇಢನಿಗೆ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳ ನೀಡಿ ಅಲಂಕಾರ ಮಾಡಲಾಗುತ್ತದೆ. ವೇಷ ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆ ಇರುವುದರಿಂದ ಆತನಿಗೆ ವಿಶೇಷ ಗೌರವ ಕೊಡುತ್ತಾರೆ. ಅಲಂಕಾರದ ನಂತರ ಬೇಡರ ವೇಷಧಾರಿ ಕನ್ನಡಿ ನೋಡುವಂತಿಲ್ಲ. ಹೀಗೆ ಶುರುವಾಗುವ ಬೇಡರ ನೃತ್ಯ ನಗರದ ಶ್ರೀ ಮಾರಿಕಾಂಬಾ ದೇವಾಲಯದ ಎದುರು, ಶಿವಾಜಿ ಚೌಕದ ವೀರಾಂಜನೇಯ ಕಟ್ಟೆ, ದೇವಿಕೆರೆಯ ಭೂತಪ್ಪನ ಕಟ್ಟೆ, ಹೀಗೆ ಎಲ್ಲೆಲ್ಲಿ ಕಾಮಣ್ಣ ಮತ್ತು ರತಿ ದೇವಿಯರನ್ನು ಪ್ರತಿಷ್ಠಾಪಿಸಿರುತ್ತಾರೋ ಅಲ್ಲೆಲ್ಲಾ ಸುಳಿಕಾಯಿ ಒಡೆದು ನಮಿಸಿ ಕುಣಿಯುತ್ತಾರೆ. ಮೊದಲೆಲ್ಲಾ ಸಂಪ್ರದಾಯಗಲು ಮತ್ತು ಆಚರಣೆಗಳು ಬಹಳಷ್ಟಿದ್ದವೂ ಬದಲಾದ ಕಾಲಘಟ್ಟದಲ್ಲಿ ಹಲವು ಅಳಿದು ಕೆಲವು ಮಾತ್ರ ಉಳಿದಿವೆ. ಅದೇನೆ ಇದ್ದರೂ ಈ ಬೇಡರ ವೇಷವನ್ನು ನೊಡಲು ಶಿರಸಿಯ ಹಳೇ ಬಸ್ ನಿಲ್ದಾಣದ ಜಾಗದಲ್ಲಿ, ಮಾರಿಗುಡಿಯ ಎದುರು, ಶಿವಾಜಿ ಚೌಕದ ಬಳಿ, ದೇವಿಕೆರೆ ಹತ್ತಿರ ಈ ನರ್ತನ ನೊಡಲೆಂದೇ ಸಾವಿರಾರು ಜನರು ಜಾಗ ಹಿಡಿದು ಕಾಯುತ್ತಿರುತ್ತಾರೆ. ಬೇಡರ ವೇಷ ತೊಡುವ ವ್ಯಕ್ತಿಗೆ ಅಪಾರ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಬೇಕಾಗುತ್ತದೆ. ಕುಣಿಯುತ್ತಾ ಶಿರಸಿ ತುಂಬೆಲ್ಲಾ ನಡೆಯುವಷ್ಟು ತಾಕತ್ತು ಬೇಕು. ಇದಕ್ಕಾಗಿ ಸಾಕಷ್ಟು ಶ್ರಮವೂ ಬೇಕು. ಆದ್ದರಿಂದಲೇ ವೇಷ ತೊಡುವುದು ಒಂದೇ ದಿನವಾದರೂ ಅದಕ್ಕಾಗಿ 20-22 ದಿನಗಳ ನಿರಂತರ ತಾಲೀಮು ನಡೆಸಿರುತ್ತಾರೆ ವೇಷಧಾರಿಗಳು.

ಈ ಬೇಡರವೇಷಕ್ಕೂ ಹಿನ್ನೆಲೆ ಇದೆ, ದಂತಕಥೆಗಳಿವೆ. 1569ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮಾಜ್ಯ ಪರಾಭವಗೊಂಡಿತ್ತು. ಆಗ ಅರಾಜಕತೆ ಶುರುವಾಗಿ, ದರೋಢೆಕೋರರ ಹಾವಳಿ ಮಿತಿಮೀರಿತ್ತು. ಶಿರಸಿ ಆಗಿನಿಂದಲೂ ಒಂದು ವ್ಯಾಪಾರೀ ಸ್ಥಳವಾಗಿದ್ದರಿಂದ ವರ್ತಕರಿಗೆ ದರೋಢೆಕೋರರು ತಲೆನೋವಾಗಿದ್ದರು. ಆದ್ದರಿಂದ ಅವರನ್ನು ನಿಯಂತ್ರಿಸಲು ಮಲ್ಲೇಶಿ ಎಂಬ ಕಟುಮಸ್ತಾದ ಬೇಡರ ಯುವಕನನ್ನು ನೇಮಿಸಿದರು. ಆದರೆ ಮಲ್ಲೇಶಿ ಒಬ್ಬ ಹೆಣ್ಣುಬಾಕ ಸ್ತ್ರೀಲಂಪಟನಾಗಿದ್ದ. ಅಂದಿನ ಶಿರಿಷಪುರದ ಗಣ್ಯವ್ಯಕ್ತಿಯಾದ ಮಲ್ಲಶೆಟ್ಟಿ ಎಂಬುವವನ ಮಗಳಾದ ಗಿರಿಜಾ ಎಂಬುವವಳನ್ನು ತನ್ನ ಬಳಿ ಕಳಿಸಿಕೊಡುವಂತೆ ಸುದ್ಧಿ ಕಳುಹಿಸುತ್ತಾನೆ. ಸುದ್ಧಿ ತಿಳಿದ ಮಲ್ಲಶೆಟ್ಟಿ, ಊರಿನ ರಕ್ಷಣೆಗಾಗಿ ಬಂದ ವ್ಯಕ್ತಿಯೇ ಈ ರೀತಿ ತಲೆನೋವಾಗಿ ಪರಿಣಮಿಸಿದ್ದು, ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾಗ, ಶೆಟ್ಟಿಯ ಮಗಳಾದ ಗಿರಿಜಾಳೆ ಪರಿಸ್ಥಿತಿ ಅರಿತು ಊರವರನ್ನು ಉಳಿಸಲು ತಾನೇ ಆ ಬೇಡನನ್ನು ಮದುವೆಯಾಗುತ್ತಾಳೆ. ಲಗ್ನವಾದರೂ ಆತನ ಲಂಪಟತನ ಮುಂದುವರೆದಾಗ ವ್ಯಥೆಪಟ್ಟುಕೊಳ್ಳುತ್ತಾಳೆ. ಆತನ ಕ್ರೌರ್ಯ ಅವನ ಕಣ್ಣುಗಳಲ್ಲಿ ಕಾಣುತ್ತಿರುತ್ತದೆ. ಹಾಗಿದ್ದವು ಆ ಬೇಡನ ಕಣ್ಣುಗಳು. ಊರಿನ ಹೆಣ್ಣುಮಕ್ಕಳ ಪಾಲಿಗೆ ಅಪಾಯಕಾರಿಯಾಗಿದ್ದ ಆತನನ್ನು  ಮುಗಿಸಲು ನಿರ್ಧರಿಸಿ ಸಮಯ ಸಾಧಿಸಿ ಆ ಬೇಡನ ಕಣ್ಣುಗಳಿಗೇ ಇರಿಯುತ್ತಾಳೆ. ಅಲ್ಲದೆ ಹೋಳಿ ಹುಣ್ಣಿಮೆಯ ದಿನ ಆತನನ್ನು ಹಗ್ಗದಲ್ಲಿ ಬಂಧಿಸಿ ಮೆರವಣಿಗೆಯಲ್ಲಿ ಒಯ್ದು ಸಜೀವ ದಹನ ಮಾಡುತ್ತಾರೆ ನಂತರ ಗಿರಿಜಾ ಸಹಗಮನ ಮಾಡಿಕೊಳ್ಳುತ್ತಾಳೆ ಎಂಬುದು ಕಥೆ. ಊರಿನ ಒಳಿತಿಗಾಗಿ ಗಿರಿಜಾಳ ತ್ಯಾಗ ಮತ್ತು ದುರಂತ ಅಂತ್ಯ, ಹಾಗೆಯೇ ಬೇಡ ಮಲ್ಲೇಶಿಯ ದುಷ್ಟತನಗಳು ಈ ಬೇಡರವೇಷದ ಹಿನ್ನೆಲೆಯಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಗಿರಿಜಾಳಿಗೆ ರುದ್ರಾಂಬೆ ಎಂದೂ ಹೇಳಲಾಗಿದೆ.

ಇನ್ನೊಂದು ಕಥೆಯ ಪ್ರಕಾರ ಜನರನ್ನು ಹೆದರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕಾಡಿನ ಬೇಡನನ್ನು ಸೊದೆಯ ಅರಸನ ಸೈನಿಕರು ಹಿಡಿಯಲು ಹರಸಾಹಸ ಪಡುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಬೇಡನು ಚಿತ್ರವಿಚಿತ್ರ ವೇಷ ತೊಟ್ಟು ಜನರನ್ನೂ, ಸೈನಿಕರನ್ನು ಹೆದರಿಸುತ್ತಾ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದರೂ ಸೈನಿಕರು ಕಷ್ಟಪಟ್ಟು ಆತನನ್ನು ಬಂಧಿಸುತ್ತಾರೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಲ್ಲಿ ಹೂಂಕರಿಸುತ್ತಾನೆ. ಆಗ ಹಗ್ಗದಿಂದ ಬಂಧಿಸಿದ ಸೈನಿಕರು ಊರಲ್ಲೆಲ್ಲಾ ಸುತ್ತಾಡಿಸಿದ್ದರಂತೆ! ಅವನ ಆ ದಿನದ ವೇಷವನ್ನೇ ಇಂದಿಗೂ ನಡೆಸಿಕೊಂಡು ಬರುತ್ತಿರಬಹುದು ಎನ್ನುವುದು ಕೆಲವರ ಅಭಿಪ್ರಾಯ. ಹಿನ್ನೆಲೆ ಇತಿಹಾಸ ಏನೇ ಇದ್ದರೂ ಇಂದಿಗೂ ಬೇಡರವೇಷ ತೊಟ್ಟು ಆಗಿನ ಬೇಡನ ದಾಷ್ಟತನವನ್ನೂ ರೌದ್ರಾವತಾರದ ಪ್ರಾತ್ಯಕ್ಷಿತೆಯನ್ನು ಈ ಮೂಲಕ ಈಗಲೂ ನೋಡಬಹುದು.

ನವಿಲುಗರಿ ಕಟ್ಟಿಕೊಂಡು ಕುಣಿದರೆ ಅದು ಬೇಡರವೇಷ ಆಗೊಲ್ಲ. ಬೇಡರವೇಷ ಶಿರಸಿಯಲ್ಲಿ ಮಾತ್ರ ಶತಮಾನಗಳಿಂದ ನಡೆದುಕೊಂಡು ಬಂದಿರುವ ವಿಸ್ಮಯ ಕಲೆ. ಸೋದೆಯ ಅರಸರ ಕಾಲದಿಮದಲೂ ಚಾಲ್ತಿಯಲ್ಲಿತ್ತು ಎಮದು ಹೇಳಲಾಗುತ್ತಿದೆ. ಇಂತಹ ಬೇಡರವೇಷವನ್ನು ನೊಡಲು ಎರಡು ವರ್ಷ ಕಾಯಬೇಕು. ಬೇಡರವೇಷ ನಮ್ಮ ಊರಿನ ಹೆಮ್ಮೆಯೂ ಹೌದು. ಈ ಮಣ್ಣಿನ ವಿಶೇಷತೆಯೂ ಹೌದು. ಈ ವಿಶಿಷ್ಟ ರಮಣೀಯ ಕಲೆಯನ್ನು ಎಲ್ಲೆಡೆ ತಿಳಿಸಿಕೊಡಬೇಕಾದದ್ದು ಶಿರಸಿಗರಾದ ನಮ್ಮ ಕರ್ತವ್ಯವೂ ಹೌದು. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x