ಹೋಳಿ ಹಬ್ಬದಲ್ಲಿ ‘ಹಾಲಕ್ಕಿ ಗೌಡರ ಸುಗ್ಗಿ ರಂಗು’: ಎಸ್. ಎಸ್. ಶರ್ಮಾ


ಉತ್ತರ ಕನ್ನಡ ಜಿಲ್ಲೆಯ ಜಾನಪದ ಮತ್ತು ಪಾರಂಪರಿಕ ವಿಶೇಷತೆ

ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣನೀಯ ಜನಸಂಖ್ಯೆಯಲ್ಲಿರುವ ಹಾಲಕ್ಕಿ ಜನಾಂಗದವರು ಆಚರಿಸುವ ಹೋಳಿಯಲ್ಲಿ ಕಲೆ, ಜಾನಪದ, ಸಂಸ್ಕೃತಿಯ ಜೊತೆಗೆ ಪರಂಪರೆಯ ಸೊಗಡು ವಿಜ್ರಂಭಿಸುವುದನ್ನು ಇಂದಿಗೂ ನೋಡಬಹುದು. ಹೋಳಿಯನ್ನು ಸುಗ್ಗಿ ಸಂಭ್ರಮವಾಗಿ ಊರಿಂದೂರಿಗೆ ಕುಣಿದು ಕುಪ್ಪಳಿಸಿ ರಂಗಾಗುವ 'ರಂಗುರಂಗಿನ' ಹಾಲಕ್ಕಿ ಗೌಡರುಗಳು ಇಲ್ಲಿನ ಬದುಕಿನಲ್ಲಿ ಅಚ್ಚೊತ್ತಿದ ಹೆಜ್ಜೆಗಳ ಕಿರು ಪರಿಚಯ ಇಲ್ಲಿದೆ. 

ಕರಾವಳಿ, ಬಯಲುಸೀಮೆ ಹಾಗೂ ಮಲೆನಾಡು ಈ ಮೂರೂ ನಿಸರ್ಗ ಸಹಜ ಲಕ್ಷಣಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಜಾನಪದ ಕಲೆಗಳು ತಾವಾಗಿಯೇ ಮೇಳೈಸಿದೆ. ಜಾತಿಗೊಂದು, ಊರಿಗೊಂದು, ಸೀಮೆಗೊಂದು, ಮರಕ್ಕೊಂದು, ಮಾರಿಗೊಂದು ವಿಶೇಷತೆಗಳ ಈ ಜಿಲ್ಲೆಯಲ್ಲಿ ತಮ್ಮ ಪರಂಪರೆಯ ಆಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಿಕೊಂಡು ಬಂದ ನಂಬಿಕಸ್ಥರು ಹಾಲಕ್ಕಿಗಳು. ಹೋಳಿ ಹಬ್ಬ ಇಲ್ಲಿ ಸುಗ್ಗಿ ಹಬ್ಬವಾಗಿ ಹಲವು ವಿಶಿಷ್ಟತೆಗಳಿಗೆ ನೆಲೆಯಾಗಿದೆ. 
ಸುಗ್ಗಿ ಇಲ್ಲಿ ಕೇವಲ ಹಬ್ಬವೊಂದೇ ಅಲ್ಲ. ಇದೊಂದು ಪ್ರಕಾರದ ಜಾನಪದ ಹಾಡು-ಕುಣಿತ ಮತ್ತು ಸಂಪ್ರದಾಯದ ಸಂಗಮ. ಹೋಳಿಯ ಕಾಮದಹನದ ಮಾದರಿಯಲ್ಲೇ ಶಿಷ್ಟತೆಯನ್ನು ಕೊಂಡಾಡಿ, ದುಷ್ಟತೆಯನ್ನು ತೊಡೆಯುವ ಸೊಗಸಿನ ಸಂದರ್ಭಗಳು ಇಲ್ಲಿವೆ. ಹಾಗಾಗಿ ಹಾಲಕ್ಕಿಗಳ ಸುಗ್ಗಿಕುಣಿತ ಇಲ್ಲಿ ತುಂಬಾ ಜನಪ್ರಿಯ.

ನಾವು ಶಾಲೆ ಹೋಗುತ್ತಿದ್ದ ದಿನಗಳಲ್ಲಿ ಸಹಪಾಠಿಗಳಲ್ಲಿ ಮೂಡುತ್ತಿದ್ದ ಪ್ರಶ್ನೆ ಏನೆಂದರೆ ಈ ಬಾರಿ ನಿಮ್ಮೂರ ಹಾಲಕ್ಕಿ ಕೊಪ್ಪದಲ್ಲಿ ಯಾವ ಸುಗ್ಗಿ, ಕಿರಿದೋ(ಚಿಕ್ಕ)? ಹಿರಿದೋ(ದೊಡ್ಡ)?. ಹಿರಿ ಸುಗ್ಗಿಯಾದರೆ ಖುಷಿ. ಕಿರಿ ಸುಗ್ಗಿಯಾದರೆ ಸಪ್ಪೆ. ಏಕೆಂದರೆ ಹಾಲಕ್ಕಿಗಳ ಪರಂಪರೆ ಹಾಗೆಯೇ ಇತ್ತು. ಒಂದು ವರ್ಷ ಹಿರಿಸುಗ್ಗಿ ಮರುವರ್ಷ ಕಿರಿ ಸುಗ್ಗಿ. ಹಿರಿ ಸುಗ್ಗಿಯೆಂದರೆ ಒಮ್ಮೊಮ್ಮೆ 50 ಕ್ಕೂ ಹೆಚ್ಚು ಮಂದಿ ಬಣ್ಣ ಹಚ್ಚಿ ತರಾವರಿ ವೇಷಗಳಲ್ಲಿ ಕುಣಿಯುವ ಸೊಗಸು. 

ಹಿರಿ ಸುಗ್ಗಿಯಲ್ಲಿ ವರ್ಣಮಯವಾದ ಪಾರಂಪರಿಕ ಪೋಷಾಕು ತೊಟ್ಟು, ಕೈಯಲ್ಲಿ ನವಿಲುಗರಿ ಕುಂಚ ಹಿಡಿದು ತಲೆಯ ಮೇಲೆ ಬೆಂಡಿನಿಂದ ಮಾಡಿದ ಬಣ್ಣಬಣ್ಣದ 'ತುರಾಯಿ' ಗುಚ್ಛ  ಹೊತ್ತು ವಿಶಿಷ್ಟ ಪ್ರಕಾರದಲ್ಲಿ ಕುಣಿಯುವ 8 ಜನರ ಪಾರಂಪರಿಕ 'ಚೋ..ಹೋ…ಚೋ' ತಂಡ ಸುಗ್ಗಿಯ ಹಿಗ್ಗಿಗೆ ಮೂಲ. ಇದರ ಜೊತೆಯಲ್ಲಿ ಗಂಡುಮೆಟ್ಟಿನ ಕಲೆಯೆಂದೇ ಖ್ಯಾತವಾದ ಯಕ್ಷಗಾನದ ಮಾದರಿಯ ವೇಷಧಾರಿಗಳ ದೊಡ್ಡ ಪಡೆ ವೈಭವವನ್ನು ಪ್ರದರ್ಶಿಸುತ್ತದೆ. ನವರಸಭರಿತ ಸ್ತ್ರೀ-ಪುರುಷ ವೇಷದ ಭಾವಾಭಿನಯಕ್ಕೆ ಹಿನ್ನೆಲೆಯಲ್ಲಿ ಪಾಂಗು, ಜಾಗಟೆ, ತಾಸ್ಮಾರು, ತಾಳ ಹಾಗೂ ಹೊಸ-ಹಳೆಯ ಹಾಡುಗಳನ್ನು ತನ್ನದೇ 'ಮುಗ್ಧ' ಕನ್ನಡದಲ್ಲಿ ಇಂಪೆನ್ನಿಸುವಂತೆ ಸಾಥ್ ನೀಡುವ ಗೌಡನ ತಾದಾತ್ಮ್ಯತೆ ನೋಡುವಂತಿರುತ್ತದೆ. ಇದರೊಟ್ಟಿಗೆ ಹಾಲಕ್ಕಿ ಯುವ ತಂಡದ ಕೋಲಾಟದ ತಂಡದ ಝಿಗ್‍ಝಾಗ್, ಹಾವು-ಬಳ್ಳಿ ಕುಣಿತ ಸಾಧಾರಣ ದೃಷ್ಟಿ ಕಾಗುಣಿತಕ್ಕೆ ನಿಲುಕದಂತಾಗಿ ಮೈನವಿರೇಳಿಸುತ್ತದೆ. ಕೋಲಾಟದ ಕಾಲಕ್ಕೆ ಜನ  ನಾಣ್ಯಗಳನ್ನೆಸೆದು ಕುಣಿತದವನ ತಾಳ ಹಾಗೂ ಹೆಜ್ಜೆ ಗತಿಯನ್ನು ಪರೀಕ್ಷಿಸುವುದೂ ಇದೆ. ಇದೆಲ್ಲದರ ಕೊನೆಯಲ್ಲಿ 'ಕಮಿ' ಹೇಳುವ ಮೂಲಕ ಶುಭ ಹಾರೈಸುವ ಪದ್ಧತಿ ಬಯಲು ಸೀಮೆಯ ಜೋಗಪ್ಪಗಳ 'ಶುಭವಾಗತೈತೆ' ನುಡಿಗಟ್ಟಿನಂತೆ ಭಾಸವಾಗುತ್ತದೆ. ಒಟ್ಟಾರೆ ಇದೊಂದು ಪರಿಪೂರ್ಣ ಕಲಾರಾಧನೆಯೂ ಹೌದು, ಮನೋರಂಜನೆಯೂ ಹೌದು, ಪರಂಪರೆಯ ಮುಂದುವರಿಕೆಯೂ ಹೌದು. 

ಹಾಲಕ್ಕಿಗಳ ಮನೆಗಳಲ್ಲಿ ಮಾತ್ರವಲ್ಲದೇ ಊರ ಪ್ರಮುಖರು, ಒಡೆಯರ ಮನೆ, ದೇವ ಸನ್ನಿಧಾನಗಳು ಹೀಗೆ ಈ ಹಿರಿ ಸುಗ್ಗಿಗೆ ಎಲ್ಲೆಡೆ ಮನ್ನಣೆ, ಗೌರವಾತಿಥ್ಯ, ಅಕ್ಕಿ-ಕಾಯಿ, ವೀಳ್ಯದ ಜೊತೆ ನೀಲಿ- ಹಸಿರು ನೋಟುಗಳ ಸಂಭಾವನೆಯೂ ದಕ್ಕುತ್ತದೆ. ತನ್ನೂರಿಗೆ ಪರ ಊರಿನ ಹಿರಿ ಸುಗ್ಗಿ ಬರುತ್ತಿದೆಯೆಂದರೆ ಉಲ್ಲಾಸದ ರಂಗು ಊರೆಲ್ಲಾ ಹರಡುತ್ತದೆ. ಸುಗ್ಗಿವೇಷದಲ್ಲಿ ಟುರ್ರೆಂದು ಅಬ್ಬರಿಸಿ ಕಾಡುವ ಹನುಮಂತನ ಪಾತ್ರ ಚಿಕ್ಕ ಮಕ್ಕಳಿಗೆ ಒಳಗೊಳಗೆ ಭಯಮೂಡಿಸಿದರೂ ದೊಡ್ಡವರ ನೆರಳಲ್ಲಿ  ಹನುಮಂತನಿಗೆ ಕಾಸು ಕೊಟ್ಟು ಖುಷಿ ಪಡುವುದು ಇದ್ದೇ ಇದೆ. ಇತ್ತೀಚಿನ ದಿನದಲ್ಲಿ ಹಿರಿ ಸುಗ್ಗಿಯಲ್ಲಿ ಸಿನಿಮಾ ನಟರನ್ನು ಮೊದಲ್ಗೊಂಡು ಮೈಕೆಲ್ ಜಾಕ್ಸನ್‍ವರೆಗಿನ ಛದ್ಮವೇಷಗಳನ್ನು ಕಾಣಬಹುದು. ಅತಿರೇಕವೆನಿಸುವಷ್ಟು ಚಿತ್ರವಿಚಿತ್ರ ಉಡುಗೆ ತೊಡುಗೆಗಳನ್ನು ಕೂಡಾ ಕಾಣಬಹುದಾಗಿದೆ. 

ಆದರೆ ಕಿರಿ ಸುಗ್ಗಿಯೆಂದರೆ 'ಬಡ ಕಂಪನಿ' ಇದ್ದಹಾಗೆ!. ಬಣ್ಣವಿಲ್ಲ, ವೇಷವಿಲ್ಲ. 4-6 ಮಂದಿ ಸೇರಿ ಊರಿಂದೂರಿಗೆ ಅಲೆದು ತುಳಸಿಕಟ್ಟೆ ಇರುವ ಮನೆತನದ ಕುಟುಂಬಗಳೆದುರು 'ತಾನೇನೋ ತಾನೋ..ತಾನಂದ್ರ ನಾನಾ..' ಎಂದು (ಇದರ ಅಪಭ್ರಂಶವಾಗಿ ಕಿರಿ ಸುಗ್ಗಿಯನ್ನು ತಣ್ಣೆಣ್ಣ ಸುಗ್ಗಿ ಎಂದು ಸ್ಥಾನಿಕವಾಗಿ ಕೆಲವೆಡೆ ಕರೆಯುವ ರೂಢಿಯೂ ಇದೆ.) ಹಾಡುಗಳನ್ನು ಚಿಕ್ಕ ಚಿಕ್ಕ ಕುಣಿತದ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಕುಣಿತದ ಭಕ್ಷೀಸು ಕೂಡಾ ಚಿಲ್ಲರೆ ಕಾಸು ಮಾತ್ರ. ಆತಿಥ್ಯವೂ ಸರಿಯಾಗಿ ಸಿಗದು. ಒಂದಷ್ಟು ಕಷ್ಟ..!

ಹೀಗೆ ಸುಗ್ಗಿ ಕಟ್ಟಿ ಹಲವು ಊರು ತಿರುಗಿ ಮರಳಿ ಗ್ರಾಮ ಸೇರುವ ಹಿರಿ ಸುಗ್ಗಿಗೆ 'ಕರಿಸುಗ್ಗಿ'ಯೆಂಬ ಅತ್ಯಂತ ಅಸಹ್ಯಕರವಾಗಿ ಸಿದ್ಧರಾದ ತಮಾಷೆಯ ಕುಣಿತದ ತಂಡದೊಂದಿಗೆ ಪೈಪೋಟಿ ನಡೆಯುತ್ತದೆ. ಬೆಳಗಿನ ಜಾವದ ವರೆಗೂ ನಡೆಯುವ ಪಾರಂಪರಿಕ ಕುಣಿತ, 'ಹಗಣ'ದ ಜಾಗರಣೆ ಹಾಗೂ ಇತರ ಆಚರಣೆಗಳು… ಹೋಳಿ ಹುಣ್ಣಿಮೆಯ ಬೆಳಗಿನ ಜಾವ ಊರ ಗಡಿಯಂಚಿನ ಪುರಾತನ ಕರಿದೇವರ ಪೂಜೆ, 'ಕರಿಸ್ನಾನ'ದೊಂದಿಗೆ ಸಂಪನ್ನಗೊಳ್ಳುತ್ತದೆ.

ಮುಖ್ಯವಾಗಿ ಮೇಲಿನ ವಿವರಣೆಗಳೆಲ್ಲವೂ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿಗಳ ಸುಗ್ಗಿಯ ಸ್ಥೂಲ ಪರಿಚಯ ಮಾತ್ರ. ಸುಗ್ಗಿ ಕುಣಿತದ ಆಚರಣೆಯ ಒಳಹೊಕ್ಕರೆ ಹಾಲಕ್ಕಿಗಳು ಮಾತ್ರವಲ್ಲದೇ ಇತರ ಕೆಲ ಸಮಾಜಗಳಲ್ಲೂ ಕಂಡು ಬರುವ ಸುಗ್ಗಿಯ ವಿಶೇಷತೆಗಳು ರೈತಾಬಿ ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಜಾನಪದ ಸೊಗಡೊಂದರ ವರ್ಣಮಯ ಪುಟಗಳನ್ನು ತೆರೆಯುತ್ತಾ ಸಾಗುತ್ತದೆ. ನೇಗಿಲಯೋಗಿಯ ನಾಲ್ಕಾರು ತಿಂಗಳ ಪರಿಶ್ರಮದ ಫಸಲು ಕೈಸೇರಿದ ಸಂಭ್ರಮದ ಹಿಗ್ಗನ್ನು ಸುಗ್ಗಿ ಕುಣಿತದಲ್ಲಿ ಕಾಣಬಹುದಾಗಿದೆ.
-ಎಸ್. ಎಸ್. ಶರ್ಮಾ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x